ಅಂಗಿ*

1.
ತೊಟ್ಟ ಅಂಗಿ ಚೆಂದ
ವೆಂದು ದಿನವೂ ಕನ್ನಡಿ
ಯ ಮುಂದೆ ನಿಂತು
ಬೀಗಿದರೆ ಸಾಕೆ?

ಹಗಲು ಉರಿಯುರಿವ
ಸೂರ್ಯ
ಇರುಳು ತಂಪಿನ
ಚಂದ್ರ
ರ ನಡುವೆ
ಸುಳಿದಾಡುವ ಮಳೆಗಾಳಿ
ಗೆ ಮೈಯ್ಯೊಡ್ಡುವ ಅಂಗಿ

ಮಾಸದಂತೆ
ಕಣ್ಣಿಗೆ ಧೂಳು
ಬೀಳದಂತೆ
ಕೊಳೆ ಮೆತ್ತಿಕೊಳ್ಳದಂತೆ
ಅಂಟಿದ ಬೆವರು
ಮೂಗಿಗಡರದಂತೆ
ಆಗಾಗ್ಗೆ ನೀರಲ್ಲದ್ದಿ ಒಗೆದು
ಶುಚಿಗೊಳಿಸುತ್ತಿರಬೇಕು;
ಇಸ್ತ್ರಿಪೆಟ್ಟಿಗೆಯಾಡಿಸಿ
ಮನದಾಳವನು
ಸುಕ್ಕುಗಟ್ಟದಂತೆ
ನೋಡಿಕೊಳ್ಳಬೇಕು.
ಕಾಯಬೇಕು
ಜತನದಿ
ಹರಿಯದಂತೆ
ಕಳಚಿ ಬೀಳದಂತೆ
ಅಂಗಿಯ
ಅಂತರಾತ್ಮವನು.

ಹೇಳುತ್ತಾರೆ ಕೆಲವರು:
ತೆಗೆದಿಟ್ಟು ಬಿಡು
ಹಳತಾಯಿತು ಅಂಗಿ
ಕರೆಗಟ್ಟಿದೆ, ಬಣ್ಣಗೆಟ್ಟಿದೆ
ಹರಿದಿದೆ ನೋಡು ಒಂದಿಷ್ಟು
ಬೆನ್ನ ಹಿಂದೆ
ತೆಗೆದಿಟ್ಟುಬಿಡು
ತೊಟ್ಟಿದ್ದು ಸಾಕು… ಸಾಕು.
ಬಿಟ್ಟೆನೆಂದರೂ ಬಿಡದ
ಮೋಹವನು
ನಿಧಾನ
ಮರೆಸುತ್ತದೆ ಕಾಲ!

ಅಣಕಿಸಿದ ಕನ್ನಡಿ
ನಕ್ಕು ಹೇಳುತ್ತದೆ:

ಇದೊಂದು
ತೊಟ್ಟು ಕಳಚುವ ಆಟ.
ಗಾಳಿ ಬೀಸಿದಂತೆಲ್ಲಾ
ರೂಪಾಂತರಗೊಳ್ಳುವ
ಅಂಗಿ…

ಕಾಪಿಟ್ಟುಕೊಳ್ಳಲು
ಇದ್ದಲ್ಲಿ ಒಂದಿಷ್ಟು
ತುಂಬು ನಂಬುಗೆ
ಕಾಯುತ್ತದೆ ಅಂಗಿ
ಚಳಿಗೆ ಬೆಚ್ಚನೆಯ
ಭಾವವಾಗಿ…
ಸುಡು ಬೇಸಿಗೆಯ
ಬೇಗೆಯಲ್ಲೂ ತಂಪಾಗಿ…

2.
ಮೈಮನಕೆ ಬೆಸಗೊಂಡ
ಅಂಗಿ…
ಅಷ್ಟು ಸುಲಭವೇ
ಕಳಚಿಡುವುದು?
ಮರೆತು ಸರಿಯುವುದು?

ಮರೆತರಲ್ಲವೆ
ನೆನಪು?

ಬೆಂಗಳೂರಿನ ವಾಸಿಯಾದ ಗೀತಾ ಡಿ.ಸಿ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡಹೆಜ್ಜಾಜಿ ಗ್ರಾಮದವರು.
‘ಕರ್ನಾಟಕದಲ್ಲಿ ಮಹಿಳಾ ಚಳುವಳಿಗಳು ಮತ್ತು ಸಾಹಿತ್ಯ ಪ್ರತಿಭೆ’ ಎಂಬ ವಿಷಯಕ್ಕೆ ಬೆಂಗಳೂರು ವಿವಿ ದಿಂದ ಪಿಎಚ್ ಡಿ ಪದವಿ.
ಸದ್ಯ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಉತ್ತರವಿರದ ಪ್ರಶ್ನೆಗಳು’ ಇವರ ಪ್ರಕಟಿತ ಕವನ ಸಂಕಲನ
ಇವರ ಕಥೆ, ಕವಿತೆ, ಲೇಖನ, ಪುಸ್ತಕ ಪರಿಚಯ, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.