ವಿಜಯನಾರಾಯಣ ದೇಗುಲವು ಹನ್ನೆರಡನೆಯ ಶತಮಾನದಷ್ಟು ಹಳೆಯದು. ಗರ್ಭಗೃಹ, ಅದರ ಮುಂದಿನ ಅಂತರಾಳ ಹಾಗೂ ನಡುವಣ ನವರಂಗಮಂಟಪಗಳು ಹೊಯ್ಸಳಕಾಲದ ರಚನೆಗಳೇ. ಮುಂದಿನ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ವಿಜಯನಗರದ ಕಾಲದಲ್ಲಿ ಸೇರ್ಪಡೆ ಮಾಡಲಾಗಿದೆ. ಏಳು ಅಡಿಗಳಿಗೂ ಮಿಗಿಲಾದ ಎತ್ತರವಿರುವ ವಿಜಯನಾರಾಯಣನ ವಿಗ್ರಹವು ಭವ್ಯವಾಗಿದೆ. ಹೊಯ್ಸಳ ಶೈಲಿಯ ಮೂರ್ತಿ. ಮೇಲುಗೈಗಳಲ್ಲಿ ಚಕ್ರ ಶಂಖಗಳು. ಎಡಗೈ ಗದೆಯನ್ನು ಆಧರಿಸಿದ್ದರೆ ಪದ್ಮ ಹಿಡಿದ ಬಲಗೈ ಅಭಯ ನೀಡುವಂತಿದೆ. ಪ್ರಭಾವಳಿಯಲ್ಲಿ ದಶಾವತಾರಗಳನ್ನು ಬಿಡಿಸಿರುವ ವಿನ್ಯಾಸ ಅಂದವಾಗಿದೆ. ಪಾದದೆಡೆಯಲ್ಲಿ ದೇವಿಯರೂ ಪಾಣಿಪೀಠದ ಮುಂಭಾಗದಲ್ಲಿ ಗರುಡನೂ ಕಂಡುಬರುತ್ತಾರೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೇಳನೆಯ ಕಂತು

 

ಈಗ ಚಾಮರಾಜನಗರ ಜಿಲ್ಲೆಗೆ ಸೇರಿರುವ ಗುಂಡ್ಲುಪೇಟೆ ಬಹುಹಿಂದಿನಿಂದಲೂ ಒಂದು ತಾಲೂಕು ಕೇಂದ್ರವಾಗಿ ಪ್ರಮುಖ ಸ್ಥಳವೆನಿಸಿದೆ. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಊರು ತನ್ನ ಪರಿಸರದಲ್ಲಿ ಹರಿಯುವ ಗುಂಡ್ಲುಹೊಳೆಯಿಂದಾಗಿ ಗುಂಡ್ಲುಪೇಟೆಯೆಂಬ ಹೆಸರನ್ನು ಪಡೆದುಕೊಂಡಿದೆ. ಈ ಊರಿನ ಪುರಾತನ ಹೆಸರು ವಿಜಯಪುರ ಅಗ್ರಹಾರ ಎಂದು ಶಾಸನಗಳಲ್ಲಿ ಲಿಖಿತವಾಗಿದೆ. ಹೊಯ್ಸಳರ ಕಾಲದ ವಿಜಯನಾರಾಯಣನ ಗುಡಿಯೇ ವಿಜಯಪುರ ಎಂಬ ಹೆಸರಿಗೆ ಕಾರಣವಾಗಿರಬಹುದು.

ಹನ್ನೆರಡನೆಯ ಶತಮಾನದ ಹೊಯ್ಸಳರ ಕಾಲದ ಶಾಸನವೊಂದರಲ್ಲಿ ಜಿನದೇವಾಲಯಕ್ಕೆ ದತ್ತಿಕೊಟ್ಟ ಉಲ್ಲೇಖವನ್ನೂ, ಹದಿನಾರನೆಯ ಶತಮಾನದ ಇನ್ನೊಂದು ಶಾಸನದಲ್ಲಿ ಅನಂತನಾಥನ ಆಲಯಕ್ಕೆ ಭೂಮಿ ದತ್ತಿ ನೀಡಿದ ವಿವರಣೆಯನ್ನೂ ಗಮನಿಸಿದರೆ ಗುಂಡ್ಲುಪೇಟೆ ಹಿಂದೊಮ್ಮೆ ಜೈನಧಾರ್ಮಿಕ ಕ್ಷೇತ್ರವಾಗಿದ್ದುದು ತಿಳಿದುಬರುತ್ತದೆ. ಊರ ಹೊರಗೆ ಇರುವ ಹಳೆಯ ಬಸದಿಯೊಂದು ಇದಕ್ಕೆ ಸಾಕ್ಷಿಯಾಗಿ ಉಳಿದುಕೊಂಡಿದೆ.

ಗುಂಡ್ಲುಪೇಟೆಯಲ್ಲಿರುವ ಮುಖ್ಯ ದೇವಾಲಯಗಳೆಂದರೆ ಊರ ನಡುವಣ ವಿಜಯನಾರಾಯಣ ದೇವಾಲಯ ಹಾಗೂ ಊರಿನಾಚೆ ಇರುವ ರಾಮೇಶ್ವರ ಹಾಗೂ ಪರವಾಸುದೇವ ಗುಡಿಗಳು. ವಿಜಯನಾರಾಯಣ ದೇವಾಲಯವು ಹೊಯ್ಸಳ ಕಾಲಕ್ಕೂ, ರಾಮೇಶ್ವರ ದೇವಾಲಯವು ವಿಜಯನಗರದ ಅರಸರ ಕಾಲಕ್ಕೂ ಹಾಗೂ ಪರವಾಸುದೇವ ದೇಗುಲವು ಮೈಸೂರು ಅರಸರ ಕಾಲಕ್ಕೂ ಸೇರಿರುವುದು ವಿಶೇಷ. ಹೀಗೆ, ಹಲವು ಶತಮಾನಗಳುದ್ದಕ್ಕೂ ಗುಂಡ್ಲುಪೇಟೆ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿ.

ವಿಜಯನಾರಾಯಣ ದೇಗುಲವು ಹನ್ನೆರಡನೆಯ ಶತಮಾನದಷ್ಟು ಹಳೆಯದು. ಗರ್ಭಗೃಹ, ಅದರ ಮುಂದಿನ ಅಂತರಾಳ ಹಾಗೂ ನಡುವಣ ನವರಂಗಮಂಟಪಗಳು ಹೊಯ್ಸಳಕಾಲದ ರಚನೆಗಳೇ. ಮುಂದಿನ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ವಿಜಯನಗರದ ಕಾಲದಲ್ಲಿ ಸೇರ್ಪಡೆ ಮಾಡಲಾಗಿದೆ. ಏಳು ಅಡಿಗಳಿಗೂ ಮಿಗಿಲಾದ ಎತ್ತರವಿರುವ ವಿಜಯನಾರಾಯಣನ ವಿಗ್ರಹವು ಭವ್ಯವಾಗಿದೆ. ಹೊಯ್ಸಳ ಶೈಲಿಯ ಮೂರ್ತಿ. ಮೇಲುಗೈಗಳಲ್ಲಿ ಚಕ್ರ ಶಂಖಗಳು. ಎಡಗೈ ಗದೆಯನ್ನು ಆಧರಿಸಿದ್ದರೆ ಪದ್ಮ ಹಿಡಿದ ಬಲಗೈ ಅಭಯ ನೀಡುವಂತಿದೆ. ಪ್ರಭಾವಳಿಯಲ್ಲಿ ದಶಾವತಾರಗಳನ್ನು ಬಿಡಿಸಿರುವ ವಿನ್ಯಾಸ ಅಂದವಾಗಿದೆ. ಪಾದದೆಡೆಯಲ್ಲಿ ದೇವಿಯರೂ ಪಾಣಿಪೀಠದ ಮುಂಭಾಗದಲ್ಲಿ ಗರುಡನೂ ಕಂಡುಬರುತ್ತಾರೆ.

ಗರ್ಭಗುಡಿಯ ಸುತ್ತ ಪ್ರದಕ್ಷಿಣಾಪಥವಿದ್ದು ನಡುವೆ ಮಳೆಯನೀರನ್ನೂ ಗರ್ಭಗುಡಿಯಿಂದ ಪ್ರಣಾಳದ ಮೂಲಕ ಬರುವ ಅಭಿಷೇಕದ ನೀರನ್ನೂ ಸಂಗ್ರಹಿಸುವ ಜಲಸ್ಥಳ ಅಥವಾ ಕಲ್ಲಿನ ತೋಡನ್ನು ರಚಿಸಿದೆ. ಹೀಗೆ ಪ್ರದಕ್ಷಿಣಾಪಥ ಹಾಗೂ ನಡುವೆ ಜಲಪಾತವುಳ್ಳ ಗರ್ಭಗುಡಿಯ ಸುತ್ತಲಿನ ರಚನೆಗೆ ಅಲೀಂದ್ರ ಎಂದು ಕರೆಯುತ್ತಾರೆ. ದಕ್ಷಿಣದ ಚೋಳರ ವಾಸ್ತುಶೈಲಿಯನ್ನು ಅನುಸರಿಸಿ ಹೊಯ್ಸಳರ ಕಾಲದಲ್ಲೂ ಮುಂದೆ ವಿಜಯನಗರದ ಅರಸರ ಕಾಲದಲ್ಲೂ ಹಲವು ದೇಗುಲಗಳಲ್ಲಿ ಈ ಬಗೆಯ ನಿರ್ಮಿತಿಯನ್ನು ರಚಿಸಲಾಗಿದೆ.

ವಿಜಯನಾರಾಯಣನ ದೇವಾಲಯದ ನಡುವಣ ಮಂಟಪದ ಕಂಬಗಳ ಮೇಲೆ ವಿಜಯನಗರ ಶೈಲಿಯ ಅನೇಕ ಉಬ್ಬುಶಿಲ್ಪಗಳನ್ನು ಕಾಣಬಹುದು. ನರಸಿಂಹ, ವೇಣುಗೋಪಾಲ ಮೊದಲಾದ ದೇವತಾಶಿಲ್ಪಗಳಲ್ಲದೆ, ಜಿಂಕೆಯನ್ನು ಬೇಟೆಯಾಡಲು ಹೊಂಚುಹಾಕುವ ಹುಲಿ, ಕೋಳಿ ಕಾಳಗ, ಟಗರು ಕಾಳಗದಂತಹ ಜನಪದ ರಂಜನೀಯ ದೃಶ್ಯಗಳೂ ಇಲ್ಲಿ ಸ್ಥಾನ ಪಡೆದಿವೆ. ಗೊಲ್ಲ, ನರ್ತಕಿ, ವಿದೂಷಕ ಮೊದಲಾದವರೂ ಈ ಕಂಬಗಳ ಮೇಲೆ ಕಂಡು ಬರುತ್ತಾರೆ. ಹಲವು ಭಂಗಿಗಳಲ್ಲಿ ನರ್ತಿಸುತ್ತಿರುವ ಮೂರು ನರ್ತಕಿಯರನ್ನು ಒಂದೇ ಶಿರವುಳ್ಳ ಶಿಲ್ಪದಲ್ಲಿ ರೂಪಿಸಿರುವ ಅಚ್ಚರಿಯೂ ಇಲ್ಲಿದೆ.

ಒಡೆಯರ ಕಾಲದ ಗುಡಿಯಲ್ಲಿದ್ದ ಪರವಾಸುದೇವ ಮೂರ್ತಿಯನ್ನು ವಿಜಯನಾರಾಯಣ ದೇಗುಲದಲ್ಲೇ ಇರಿಸಿದೆ. ಆದಿಶೇಷನ ಮೇಲೆ ಕುಳಿತ ಭಂಗಿಯಲ್ಲಿರುವ ಪರವಾಸುದೇವನ ವಿಗ್ರಹವು ಶ್ರೀದೇವಿ ಭೂದೇವಿಯರ ಸಮೇತ ಕಂಡುಬರುವುದು ಇಲ್ಲಿನ ವಿಶೇಷ.

ಊರ ಹೊರಗೆ ಇರುವ ಮೈಸೂರು ಒಡೆಯರ ಆಳ್ವಿಕೆಯ ಕಾಲದ ಪರವಾಸುದೇವ ದೇವಾಲಯವನ್ನು ಪುರಾತತ್ವ ಇಲಾಖೆ ಇದೀಗ ದುರಸ್ತಿಗೊಳಿಸಿದೆ. ಆದರೆ, ಅಲ್ಲಿ ವಿಗ್ರಹಗಳಿಲ್ಲ. ಇಲ್ಲಿಯ ಕಂಬಗಳ ಮೇಲೂ ತೀರಾ ಶಿಥಿಲಾವಸ್ಥೆಯಲ್ಲಿರುವ ರಾಮೇಶ್ವರ ಗುಡಿಯ ಕಂಬಗಳ ಮೇಲೂ ವಿಜಯನಗರದ ಶೈಲಿಯ ಉಬ್ಬುಶಿಲ್ಪಗಳಿವೆ. ಹಂಪೆಯ ಗುಡಿಗಳಲ್ಲಿ ಕಾಣುವಂತೆಯೇ ಪ್ರತಿ ಕಂಬದ ಮೇಲೂ ಮೂರು ಹಂತಗಳಲ್ಲಿ ಈ ಉಬ್ಬುಶಿಲ್ಪಗಳನ್ನು ಕಾಣಬಹುದು.

(ಚಿತ್ರಗಳು: ಲೇಖಕರವು)

ಇವುಗಳಲ್ಲಿ ದೇವತಾಶಿಲ್ಪಗಳೂ , ನರ್ತಕಿಯರೂ, ಪ್ರಾಣಿಪಕ್ಷಿಗಳೂ ಸೇರಿವೆ. ಈ ಗುಡಿಗಳಿಂದ ಮುಂದಕ್ಕೆ ಸಾಗಿದರೆ ಅಲ್ಲೇ ಸಮೀಪದಲ್ಲಿ ಬಸದಿಯೊಂದಿದೆ. ಶಿಥಿಲವಾಗಿರುವ ಈ ಕಟ್ಟಡ ಒಂದು ವಿಶಿಷ್ಟವಾದ ರಚನೆಯೇ. ಕಲ್ಲುಮಂಟಪವೊಂದರ ಮೇಲೆ ಕಟ್ಟಿದ ಚಿಕ್ಕ ಬಸದಿಯನ್ನು ನೋಡಲು ಹತ್ತಿಪ್ಪತ್ತು ಮೆಟ್ಟಲು ಹತ್ತಿ ಹೋಗಬೇಕು.

ಗುಂಡ್ಲುಪೇಟೆಗೆ ಬರುವವರು ಹತ್ತಿರದ ರಾಘವಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತ್ರಯಂಬಕಪುರ, ತೆರಕಣಾಂಬಿ ಮೊದಲಾದ ಸ್ಥಳಗಳಲ್ಲಿರುವ ಪುರಾತನ ದೇಗುಲಗಳನ್ನೂ ನೋಡಿ ಬರಲು ಅವಕಾಶವಿದ್ದು ಒಂದು ದಿನ ಬಿಡುವು ಮಾಡಿಕೊಂಡು ಬನ್ನಿ.