ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ ಅವಕಾಶ ಸಿಕ್ಕಿತು. ಅಂದು ವೀರಣ್ಣನವರು ತೋರಿದ ನಟನಾಸಾಮರ್ಥ್ಯ ಅವರ ಬಾಳನ್ನ ರೂಪಿಸಿತಂತೆ. ಅಂದಿನಿಂದ ಕಳ್ಳನ ಪಾತ್ರ ಅವರಿಗೆ ಮೀಸಲಾಯಿತು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ

 

ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕ ‘ಕುರುಕ್ಷೇತ್ರ’ದ ಬಗ್ಗೆ ಅನಕೃ ಅವರು ಬರೆದ ವಿಮರ್ಶಾ ಲೇಖನ ಓದುತ್ತಿದ್ದೆ. ಹವ್ಯಾಸಿಗಳು ನಾವು ಕೆಲವರು ನಾಟಕದ ಗೀಳು ಹತ್ತಿಸಿಕೊಂಡು, ಅದರ ಉತ್ಸಾಹದ ಪರಾಕಾಷ್ಠೆ ಎಂಬಂತೆ ತಂಡವನ್ನು ಕಟ್ಟಿ ವಿಚಿತ್ರ ಮಿಡುಕಾಟಗಳಿಗೆ ಸಿಲುಕಿಕೊಳ್ಳುತ್ತಿರುತ್ತೇವೆ. ನಮ್ಮ ಎಲ್ಲ ಹಪಹಪಿ ಮತ್ತು ಮಿಡುಕಾಟ, ಜಗಳ, ವಾಗ್ಯುದ್ಧಗಳಿಗೆ ಅನಕೃ ಅವರ ಲೇಖನ ‘ಹಿಂದಣ ಹೆಜ್ಜೆಯನರಿಯದೆ ಮುಂದಣ ಹೆಜ್ಜೆಯನರಿಯಬಾರದು’ ಎಂದು ಮನವರಿಕೆ ಮಾಡಿಸುತ್ತದೆ.

ತೀರಾ ಹಳಬರಿಗೆ ಬಿಟ್ಟರೆ ಗುಬ್ಬಿ ಕಂಪನಿಯ ನಾಟಕಗಳ ಬಗ್ಗೆ ಅದರ ಚಿತ್ರದ ಬೆಳವಣಿಗೆಯ ನಿಖರತೆಯ ಬಗ್ಗೆ ಸ್ಪಷ್ಟವಾಗಿ ತಿಳಿದಂತಿಲ್ಲ. ತರುಣರು ಅಕಸ್ಮಾತ್ ಗುಬ್ಬಿ ಕಂಪನಿಯ ಬಗ್ಗೆ ಕೇಳಿದ್ದರೆ ಅದರ ಭವ್ಯ ವೈಭವದ ರಂಗಸಜ್ಜಿಕೆ, ಹಾಡುಗಾರಿಕೆ ಬಗ್ಗೆ ಕೇಳಿರುತ್ತಾರೆ. ಗುಬ್ಬಿ ವೀರಣ್ಣನವರ ಬಗ್ಗೆ ಅವರ ಸಾಧನೆಯ ತುತ್ತತುದಿಯ ಬಗ್ಗೆ ಕೇಳಿರುತ್ತಾರೆ. ಆದರೆ ಯಾವೊಂದು ವೈಭವವೂ ಧುತ್ತನೆ ಘಟಿಸುವುದಿಲ್ಲ. ಅದರ ಹಿಂದೆ ಒಂದು ಸಾವಧಾನದ ಹೆಜ್ಜೆ ನಡಿಗೆ ಇರುತ್ತದೆ. ಪರಿಶ್ರಮ ಮತ್ತು ಪರಿಷ್ಕರಣೆ ಇರುತ್ತದೆ. ಇದು ಒಂದು ದರ್ಶನ ಕಟ್ಟಿಕೊಟ್ಟಾಗ ವೈಭವ ಕಣ್ಣಿಗೆ ಕಟ್ಟುತ್ತದೆ. ನಾವು ಹವ್ಯಾಸಿಗಳು ಕೆಲವರು ಈ ಸಾವಧಾನದ ಹೆಜ್ಜೆಗಳನ್ನ ಅರಿಯುವ ಪ್ರಯತ್ನ ಮಾಡುವುದಿಲ್ಲ. ಬಹುಶಃ ಈ ಕಾರಣಕ್ಕೋ ಏನೋ ವರ್ತಮಾನದಲ್ಲಿ ನಾವು ವಿಚಿತ್ರವಾಗಿ ಮಿಡುಕುತ್ತಿರುತ್ತೇವೆ.

ಇದಕ್ಕೆ ಉದಾಹರಣೆಯೆಂಬಂತೆ ನನಗೆ ಒಬ್ಬ ಎದುರಾದ. ಆತ ತರುಣ. ಮಹತ್ವಾಕಾಂಕ್ಷೆಯ ಹುಡುಗ. ಕಣ್ಣುಗಳಲ್ಲಿ ಭೂತಕಾಲದ ಚಿತ್ರಗಳ ಕದಲುವಿಕೆ ಇಲ್ಲ. ಕೇವಲ ವರ್ತಮಾನದ ಸೆಳಕಗಳು ಇದ್ದವು. ರಂಗಭೂಮಿಯೆಂದರೆ ಉಸಿರು ಎಂಬಂತೆ ಬದುಕುತ್ತಿದ್ದೇನೆ ಎಂಬುದು ಅವನ ಪ್ರತಿ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಇದಕ್ಕಾಗಿ ಆತ ತನ್ನ ಸಾಫ್ಟ್ ವೇರ್ ಕೆಲಸ ಬಿಟ್ಟು ಬಂದಿದ್ದ. ರಂಗದವರು ಅಂದರೆ ಗಡ್ಡ ಬೆಳಸಿ ಜುಟ್ಟು ಕಟ್ಟಿಕೊಂಡಿರುತ್ತಾರೆ ಎಂದು ಯಾರು ಹೇಳಿದರೋ- ಅವನು ಗಡ್ಡ ಬಿಟ್ಟು ಜುಟ್ಟು ಕಟ್ಟಿಕೊಂಡು ಆಗಾಗ ಗಡ್ಡ ನೀವಿಕೊಂಡು ಘನಗಂಭೀರವಾಗಿ ಮಾತಾಡುತ್ತಿದ್ದ. ನಾನು ಅವನ ಮಾತಿಗೆ ಒಳಗೊಳಗೇ ನಗುತ್ತಾ ಅವನನ್ನು ಯಾವ ಯಾವ ನೆರಳುಗಳು ಹಿಡಿದಿಟ್ಟಿವೆ ಎಂದು ನೋಡಿದೆ. ಆಗ ನನಗೆ ಸ್ಪಷ್ಟವಾಗಿ ಕಂಡದ್ದು ಎರಡು ಬಗೆಯ ನೆರಳು.

(ಗುಬ್ಬಿ ವೀರಣ್ಣ)

ಒಂದು- ಬೇರೆ ರಾಜ್ಯವೊಂದರಲ್ಲಿ ನಾಟಕ ಕಲಿತು ಬಂದವರ ನಾಟಕದ ಸೈದ್ಧಾಂತಿಕ ನೆರಳು. ಮತ್ತು ಕೆಲ ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತವರು ಪ್ರಭಾವಿಸಿ ಹರಡಿಸಿದ್ದ ನೆರಳು. ಪರಿಣಾಮವಾಗಿ ಅವನಿಗೆ ನಾಟಕ ಎಂದರೆ ಅದರ ಕಂಟೆಂಟ್ ಗಿಂತ ಅದನ್ನ ಭವ್ಯವಾಗಿ ಕಟ್ಟುವ ಕಡೆಗೇ ಮನಸ್ಸಿತ್ತು. ಅಂದರೆ ಭವ್ಯವಾದ ರಂಗಸಜ್ಜಿಕೆ, ಬೆಳಕು ಇತ್ಯಾದಿ. ಆಮೇಲೆ ಒಂದು ಸೆಟ್ ಪ್ಯಾಟ್ರನ್ ಅಭಿನಯ.

ನಾಟಕ ಅಂದರೆ ನೆರಳುಗಳು ಹಬ್ಬಿಸಿದವರ ಹಾಗೇ ಮಾಡಬೇಕು ಎಂದು ಅವನ ತಲೆಯಲ್ಲಿ ಕೂತಿತ್ತು. ಅದಕ್ಕಾಗಿ ಇನ್ನಿಲ್ಲದ ಹಾಗೆ ಮಿಡುಕುತ್ತಿದ್ದ. ಆದರೆ ಅವನಿಗೆ ಒಂದು ಸತ್ಯ ಅರ್ಥವಾಗಿರಲಿಲ್ಲ. ಅದು- ನಾಟಕಗಳೆಂದರೆ ಹೀಗೇ ಇರಬೇಕು ಎಂದು ಪ್ರತಿಪಾದಿಸುವವರ ಹಿಂದೆ ಇರುವ ಆರ್ಥಿಕ ಮೂಲಗಳ ಬಗೆಗೆ ಈತ ಯೋಚಿಸಿದಂತೆ ಇರಲಿಲ್ಲ. ದುಡ್ಡು ಒಂದು ಕಡೆಯಿಂದ ಹರಿದುಬರುತ್ತದೆ ಎಂಬ ಖಚಿತತೆ ಇದ್ದಾಗ ಎಂಥ ಸೈದ್ಧಾಂತಿಕ ಪ್ರಯೋಗಕ್ಕಾದರೂ ಕೈಹಾಕಬಹುದು. ಆದರೆ ಅದು ಬರದೆ ತಾನೇ ತಂಡ ಕಟ್ಟಿ ನಾಟಕ ಮಾಡುತ್ತೇನೆ ಅಂದಾಗ ಒಂದು ಬಗೆಯ ಸಾವಧಾನ ಇಲ್ಲದಿದ್ದರೆ ಕಷ್ಟ. ಇದನ್ನು ನಾನು ಅವನಿಗೆ ಅನಕೃ ಅವರ ಲೇಖನದ ಹಿನ್ನೆಲೆಯಲ್ಲಿ ಅರ್ಥಮಾಡಿಸಲು ನೋಡಿದೆ.

‘ನೋಡು ಮಾರಾಯ ರಂಗದ ಬಗ್ಗೆ ನಿನ್ನಲ್ಲಿರುವ ಮಹತ್ವಾಕಾಂಕ್ಷೆ ನನಗೆ ಅರ್ಥವಾಗುತ್ತೆ. ಆದರೆ ಚೂರು ನಿರುಮ್ಮಳವಾಗಿರೋದು ಕಲಿತ್ಕೊ. ನಿನ್ನ ಮೇಲೆ ಕವಿದುಕೊಂಡಿರುವ ನೆರಳುಗಳ ಬಗ್ಗೆ ನಾನು ಮಾತಾಡೋದಿಲ್ಲ. ಅವರ ನಿಲುವಿನಲ್ಲಿ ಅವರ ನಾಟಕಗಳು ಚೆಂದ. ಆದರೆ ಅವರೆಲ್ಲರ ಆರ್ಥಿಕ ಮೂಲದ ಕಡೆ ಯೋಚಿಸು. ದುಡ್ಡು ಹುಟ್ಟುವಾಗ ನಾಟಕಗಳನ್ನ ಕಟ್ಟೋ ಕೆಲಸ ಸುಲಭವಾಗುತ್ತೆ. ಆದರೆ ವೃತ್ತಿನಾಟಕ ಕಂಪನಿಯೊಂದು ತನ್ನ ನಾಟಕಗಳಿಂದಲೇ ಹೇಗೆ ದುಡ್ಡನ್ನ ಕ್ರೋಡೀಕರಿಸಿಕೊಳ್ತಾ ಹೋಯ್ತು ಗೊತ್ತಾ..? ಅದರ ಹಿಂದಿನ ಸಾವಧಾನದ ಹೆಜ್ಜೆಗಳ ಕಡೆ ಗಮನಕೊಡು… ನಿನಗೆ ಅರ್ಥವಾಗುತ್ತೆ’ ಅಂದೆ.

ಅವನು ನನ್ನ ಮಾತಿನ ಕಡೆ ಅಷ್ಟು ಲಕ್ಷ್ಯ ಹರಿಸಿದಂತೆ ಕಾಣಲಿಲ್ಲ. ಕಾರಣ ನನಗೆ ಗೊತ್ತಿತ್ತು. ಯಾಕೆಂದರೆ ವೃತ್ತಿ ನಿರತ ನಾಟಕ ಕಂಪನಿಗಳೆಂದರೆ ಸಹಜವಾಗಿ ಮೂಗು ಮುರಿಯುವವರಂತೆ ಅವನೂ ಮುರಿದ. ಅದರಲ್ಲಿ ವಿಶೇಷವೇನಿರಲಿಲ್ಲ. ಆದರೆ ಪಾಸ್ಟ್ ನಲ್ಲಿ ಗುಬ್ಬಿ ಕಂಪನಿ ಹೇಗಿತ್ತು..? ಗುಬ್ಬಿ ವೀರಣ್ಣನವರು ತಮ್ಮ ಮಾತುಗಳಲ್ಲಿ ಯಾವ ಚಿತ್ರ ಕಟ್ಟಿಕೊಟ್ಟಿದ್ದಾರೆ? ಮತ್ತು ಅನಕೃ ಅವರು ಗುಬ್ಬಿ ಕಂಪನಿಯ ಕುರುಕ್ಷೇತ್ರ ನಾಟಕದ ಬಗ್ಗೆ ಬರೆದಿರುವ ಮಾತುಗಳು ನನಗಿಂತ ಹೆಚ್ಚಾಗಿ ಆ ಮಹತ್ವಾಕಾಂಕ್ಷೆಯ ಹುಡುಗನಿಗೆ ಅರ್ಥವಾಗಬೇಕಿದೆ ಅನಿಸಿತು. ಕೇಳಿಸಿಕೊಳ್ಳುವ ಕಿವಿ ಅವನಿಗಿದೆ ಎಂದು ತಿಳಿದು ನಾನು ಲಾಯರಿನಿಂತೆ ಅನಕೃ ಅವರ ಲೇಖನ ತೆರೆದು ಕೋಟ್ ಮಾಡಲು ಆರಂಭಿಸಿದೆ.

‘ನೋಡು ಗುರು – ಅನಕೃ ಅವರು ತಮ್ಮ ಲೇಖನದಲ್ಲಿ ಗುಬ್ಬಿ ವೀರಣ್ಣನವರ ಮಾತುಗಳನ್ನ ಕೋಟ್ ಮಾಡಿದ್ದಾರೆ. ಓದ್ತೀನಿ ಕೇಳಿಸ್ಕೊ. ಇವು ಗುಬ್ಬಿ ವೀರಣ್ಣನವರ ಮಾತುಗಳು- “ಆಗ ನಾಟಕ ಕಂಪನಿಗಳ ಸಲಕರಣೆಗಳೆಂದರೆ ಒಂದು ಡೇರಾ, ಐದಾರು ಪರದೆಗಳು ಇಷ್ಟು ಮಾತ್ರ. ಎಷ್ಟೇ ದೊಡ್ಡ ಕಂಪನಿಯೆಂದರೂ ಮೂವತ್ತು ಜನರಿಗೆ ಮೇಲ್ಪಟ್ಟು ಜನರಿರುತ್ತಿರಲಿಲ್ಲ. ಅವರ ವೇತನ ರಾಜಾಪಾರ್ಟಿಗೆ 15, ಉಳಿದವರಿಗೆ ಚೌತಿ ಪಂಚಮಿ ಈ ರೀತಿ. ನಮ್ಮ ಕಂಪನಿ ಸಲಕರಣೆಗಳೆಲ್ಲವೂ ಒಂಭತ್ತು ಎತ್ತಿನ ಗಾಡಿಗಳಲ್ಲಿ ತುಂಬುತ್ತಿತ್ತು. ಈ ರಾತ್ರಿ ಒಂದು ಸ್ಥಳವನ್ನು ಬಿಟ್ಟರೆ ನಾಳೆ ರಾತ್ರಿಯೇ ಇನ್ನೊಂದು ಕಡೆ ನಾಟಕವಾಡುತ್ತಿದ್ದೆವು. ಸಂಸ್ಥೆಯ ನಟರೆಲ್ಲರೂ ಹಾರೆಗಳನ್ನ ಹಿಡಿದು ಕುರ್ಚಿಗುಂಡಿಗಳನ್ನ ತೋಡಿ ಡೇರಾ ಹಾಕಬೇಕಾಗಿತ್ತು..”

ಈಗ ಪ್ಯಾಸೇಜ್ ಓದ್ತೀನಿ ಕೇಳು- “ಆಗಿನ ರಂಗಸಲಕರಣೆಗಳಾದರೋ ಇನ್ನೂ ವಿಚಿತ್ರ. ಸೀಮೆಯೆಣ್ಣೆ ಟಿನ್ನುಗಳ ಮೇಲೆ ಹಲಿಗೆ ಜೋಡಿಸಿ ಆಸ್ಪತ್ರೆ ಕೆಂಪು ಬುರ್ನೀಸನ್ನು ಹಾಸಿದರೆ ಅದೇ ಸಿಂಹಾಸನ. ಎಲ್ಲಾ ಪಾತ್ರಗಳಿಗೂ ಒಂದೇ ಬಗೆಯ ಉಡುಪು. ಮಾತಿನಿಂದ ಅವನೇನು ರಾಜನೋ ದಾಸನೋ ಎಂಬುದನ್ನು ತಿಳಿಯಬೇಕಿತ್ತು..”

ಮಹತ್ವಾಕಾಂಕ್ಷೆಯ ಹುಡುಗನ ಕಣ್ಣುಗಳು ಕೊಂಚ ಅರಳಿದವು. ‘ರಿಯಲಿ..?’ ಅಂದ. ನಾನು ಓದುತ್ತಿದ್ದ ಲೇಖನದ ಪುಟ ತೋರಿಸಿದೆ. ಮತ್ತು ‘ಮುಂದಕ್ಕೆ ಕೇಳಿಸ್ಕೊ, ಇನ್ನೂ ಇಂಟ್ರೆಸ್ಟಿಂಗ್ ಆಗಿದೆ..’ ಎಂದು ಲಾಯರ್ ಗಿರಿ ಮುಂದುವರಿಸಿದೆ.

“ಇನ್ನು ಗ್ರೀನ್ ರೂಮಿನಲ್ಲೊಂದು ಜಾಕಾಯಿ ಪೆಟ್ಟಿ, ಲ್ಯಾಂಪು, ರಾಜಾಪಾರ್ಟಿನವರಿಗೆ ಒಂದಾಣೆ ಕನ್ನಡಿ, ಉಳಿದವರಿಗೆ ಕಾಲಾಣೆ ಕನ್ನಡಿ ಹರಿದಳ, ಇಂಗಳೀಕ, ಅಭ್ರಕ ಇವೇ ಆಗಿವನರು ಉಪಯೋಗಿಸುತ್ತಿದ್ದ ಬಣ್ಣಗಳು. ಮೊದಮೊದಲು ಸೀಮೆಯೆಣ್ಣೆಯ ಲ್ಯಾಂಪುಗಳನ್ನ ಇಟ್ಟುಕೊಂಡು ಆಡುತ್ತಿದ್ದೆವು. ಆಮೇಲೆ ದೊಡ್ಡ ದೊಡ್ಡ ಲ್ಯಾಂಪುಗಳು, ಗ್ಯಾಸ್ ಲೈಟುಗಳು ಪ್ರಚಾರಕ್ಕೆ ಬಂದವು.. ಮೊದಲು ಉಪಯೋಗಿಸುತ್ತಿದ್ದ ವಾದ್ಯಗಳೆಂದರೆ ಪಿಟೀಲು, ಪುಂಗಿ, ಮುಖವೀಣೆ. ಆಮೇಲೆ ಜಾಕಾಯಿ ಪೆಟ್ಟಿಯಲ್ಲಿ ಮಾಡಿದ ಸೋಟಾ ಎಂಬ ತಂಬೂರಿ ಪ್ರಚಾರಕ್ಕೆ ಬಂತು. ಆಗ ಎಲ್ಲರಿಗೂ ಒಂದೇ ಶೃತಿ. ಈಗಿನಂತೆ ಗುಣ ಧರ್ಮಾನುಸಾರ ಶೃತಿಗಳನ್ನ ಬದಲಾಯಿಸಲಾಗುತ್ತಿರಲಿಲ್ಲ. ಬರಬರುತ್ತಾ ಹಾರ್ಮೋನಿಯಂ ತಬಲಾ ಪ್ರಚಾರಕ್ಕೆ ಬಂದವು..”

ಅವನು ಮತ್ತೆ ‘ರಿಯಲಿ..?’ ಅಂದ. ಚೂರು ಗುಬ್ಬಿ ಕಂಪನಿಯ ಹಿನ್ನೆಲೆ ತಿಳಿದುಕೊ ಅಂದೆ. ಹೇಳು ಅಂದ-

ಚಂದಣ್ಣನವರ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ 1884ರಲ್ಲಿ ಸ್ಥಾಪನೆ ಆಗಿತ್ತು. ವೀರಣ್ಣನವರ ಚಿಕ್ಕಪ್ಪನವರು ಆ ಕಂಪನಿಯಲ್ಲಿ ವ್ಯವಸ್ಥಾಪಕರಾಗಿದ್ದರಂತೆ. ಬಾಲಕ ವೀರಣ್ಣ ನಿರಾಶ್ರಿತ ಅಂತ ತಿಳಿದು ಅವರನ್ನ ಆರನೆಯ ವಯಸ್ಸಿನಲ್ಲಿ ಕಂಪನಿಗೆ ಸೇರಿಸಿದರಂತೆ. ಆಗ ವೀರಣ್ಣನಿಗೆ ಸಣ್ಣಪುಟ್ಟ ಪಾತ್ರಗಳು, ಹೆಣ್ಣು ಪಾತ್ರಗಳು ದೊರಕಿದವಂತೆ. ಆದರೆ ಕಾಲಕಳೆಯುತ್ತ ವಯೋಮಾನಕ್ಕನುಗುಣವಾಗಿ ವೀರಣ್ಣನವರ ಶಾರೀರ ಗಡಸಾಯಿತು. ಆಗ ಹೆಣ್ಣು ಪಾತ್ರಕ್ಕೆ ಸರಿಹೊಂದೋದಿಲ್ಲ ಅಂತ ಆಗಿ ಕಂಪನಿಯ ಬೇರೆ ಕೆಲಸ- ಅದರಲ್ಲೂ ಬಾಗಿಲು ಕಾಯುವ ಕೆಲಸಕ್ಕೆ ನಿಯೋಜಿತರಾದರಂತೆ…’

‘ಯಾರು ಗುಬ್ಬಿ ವೀರಣ್ಣ..?’ ಕೇಳಿದ ಅವನು. ನಂಬಲಿಕ್ಕೆ ಸಿದ್ಧನಿರಲಿಲ್ಲ. ಯಾಕೆಂದರೆ ಹಿಂದಣ ಹೆಜ್ಜೆಗಳನ್ನ ಅವನು ತಿಳಿಯುವ ಉತ್ಸುಕತೆ ತೋರಿರಲಿಲ್ಲ.

ಆದರೆ ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ ಅವಕಾಶ ಸಿಕ್ಕಿತು. ಅಂದು ವೀರಣ್ಣನವರು ತೋರಿದ ನಟನಾಸಾಮರ್ಥ್ಯ ಅವರ ಬಾಳನ್ನ ರೂಪಿಸಿತಂತೆ. ಅಂದಿನಿಂದ ಕಳ್ಳನ ಪಾತ್ರ ಅವರಿಗೆ ಮೀಸಲಾಯಿತು..

‘ಇದು ಒಂದು ಘಟ್ಟ. ಇಷ್ಟಕ್ಕೂ ಆಗ ಆಡುತ್ತಿದ್ದ ನಾಟಕಗಳು ಯಾವುವು? ಚೋರಕಥೆ, ಪ್ರಭಾವತಿ ದರ್ಬಾರ್, ಧರ್ಮಪಾಲ ಚರಿತ್ರೆ, ಪಾಂಡವ ವಿಜಯ ಇವುಗಳನ್ನ ಆಡುತ್ತಿದ್ದರಂತೆ. ಒಂದೊಂದು ನಾಟಕಗಳಲ್ಲಿಯೂ ಎಂಬತ್ತರಿಂದ ನೂರು ಹಾಡುಗಳು ಹಾಗೂ ಇಪ್ಪತ್ತರಿಂದ ಮೂವತ್ತು ಕಂದಗಳು ಇರುತ್ತಿದ್ದವಂತೆ. ಕುರ್ಚಿ ಗುಂಡಿಗಳನ್ನ ತೋಡಿದ್ದರೂ ಕುರ್ಚಿಯಲ್ಲಿ ಕೂತು ನಾಟಕ ನೋಡುವವರು ಯಾರು..? ಅಮಲ್ದಾರರು ಬರುತ್ತಾರೆ ಎಂದಾದರೆ ಅವರಿಗೆ ‘ತಾವೇ ಕುರ್ಚಿ ತರಬೇಕು..’ ಎಂದು ಬಿನ್ನವಿಸಿಕೊಳ್ಳುತ್ತಿದ್ದ ಕಾಲ ಅದು.

‘1917ರಲ್ಲಿ ಚಂದಣ್ಣನವರ ಕಂಪನಿ ವೀರಣ್ಣನವರ ಕೈಗೆ ಬಂದಾಗ ವೀರಣ್ಣನವರಿಗೆ 26ರ ಪ್ರಾಯವಂತೆ. ಹಳ್ಳಿ ಜಾತ್ರೆಗಳನ್ನ ಬಿಟ್ಟು ಹೊರಗೆ ಬರದ ನಾಟಕ ಕಂಪನಿ 1913ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಬಂದು ಸದಾರಮೆ ನಾಟಕ ಆಡಿತಂತೆ. ವೀರಣ್ಣನವರದೇ ಕಳ್ಳನ ಪಾತ್ರ. ಮೈಸೂರಿನವರೂ ವೀರಣ್ಣನವರ ಕಳ್ಳನ ಅಭಿನಯ ನೋಡಿ ಬೆರಗಾದರಂತೆ. ಆಗ ವೀರಣ್ಣನವರಲ್ಲಿ ಕೊಂಚ ವಿಶ್ವಾಸ ಹುಟ್ಟಿಕೊಂಡಿತಂತೆ. ಪರಿಣಾಮವಾಗಿ ಹಿಂದಿನ ನಾಟಕಗಳಿಗಷ್ಟೇ ವೀರಣ್ಣನವರು ತೃಪ್ತರಾಗದೆ ‘ಪ್ರಭಾಮಣಿ ವಿಜಯ’, ‘ಕೃಷ್ಣಲೀಲೆ’, ‘ಕಂಸವಧಾ..’ ‘ರುಕ್ಮಿಣಿ ಹರಣ’, ‘ಕಬೀರದಾಸ್..’ ನಾಟಕಗಳನ್ನ ಹೊಸದಾಗಿ ಬರೆಸಿ ರಂಗಕ್ಕೆ ತಂದರಂತೆ. ಇದಾದ ಮೇಲೆ ವೀರಣ್ಣನವರಿಗೆ ಜನರು ‘ವಿನೋದ ರತ್ನಾಕರ’ ಹಾಗೂ ಆಳಿದ ಮಹಾಸ್ವಾಮಿಗಳವರು ‘ವರ್ಸಟೈಲ್ ಕಮೆಡಿಯನ್’ ಬಿರುದು ಕೊಟ್ಟರು.

‘ಅಲ್ಲಿಂದ ಎಲ್ಲ ಸಲೀಸು ಅಂದುಕೊಂಡರೆ ಅದು ತಪ್ಪು. ಲೈಫು ಚಾಲೆಂಜುಗಳನ್ನ ಎದುರಿಸುತ್ತಲೇ ಮುನ್ನಡೆಯಬೇಕಾಗುತ್ತದೆ. ಗುಬ್ಬಿ ಕಂಪನಿಯ ‘ಕುರುಕ್ಷೇತ್ರ’ ನಾಟಕ ಹುಟ್ಟಿಕೊಳ್ಳಲಿಕ್ಕೂ ಒಂದು ಹಿನ್ನೆಲೆ ಇದೆ. ಮತ್ತು ಅದು ಚಾಲೆಂಜನ್ನ ಎದುರುಗೊಳ್ಳುವ ಸಲುವಾಗಿಯೇ ರೂಪುತಳೆದ ನಾಟಕ ಎನ್ನುವುದು ಸತ್ಯ.

ಗುಬ್ಬಿ ವೀರಣ್ಣನವರು ತಮ್ಮ ಮಾತುಗಳಲ್ಲಿ ಯಾವ ಚಿತ್ರ ಕಟ್ಟಿಕೊಟ್ಟಿದ್ದಾರೆ? ಮತ್ತು ಅನಕೃ ಅವರು ಗುಬ್ಬಿ ಕಂಪನಿಯ ಕುರುಕ್ಷೇತ್ರ ನಾಟಕದ ಬಗ್ಗೆ ಬರೆದಿರುವ ಮಾತುಗಳು ನನಗಿಂತ ಹೆಚ್ಚಾಗಿ ಆ ಮಹತ್ವಾಕಾಂಕ್ಷೆಯ ಹುಡುಗನಿಗೆ ಅರ್ಥವಾಗಬೇಕಿದೆ ಅನಿಸಿತು.

‘ವೀರಣ್ಣನವರು ಹೇಳುವಂತೆ- “1932 ರಲ್ಲಿ ವಾಕ್ ಚಿತ್ರಗಳು ಪ್ರಚಾರಕ್ಕೆ ಬಂದ ಮೇಲೆ ನಾಟಕ ಸಂಸ್ಥೆಗಳ ಪರಿಸ್ಥಿತಿ ಸ್ವಲ್ಪ ಕಷ್ಟವಾಯಿತು. ಜನರ ಮನಸ್ಸು ಟಾಕಿಗಳ ಕಡೆಗೆ ತಿರುಗಿತು. ಆ ಎರಡು ವರ್ಷಗಳಲ್ಲಿ ನಮ್ಮ ಸಂಸ್ಥೆಗೆ ಸುಮಾರು ಮೂವತ್ತು ಸಹಸ್ರ ರೂಪಾಯಿಗಳು ನಷ್ಟವಾಯಿತು. ಸಂಸ್ಥೆ ಉಳಿಯುವುದು ಹೇಗೆ ಎಂದು ಯೋಚಿಸತೊಡಗಿದೆ. ಒಂದೊಂದು ವಾಕ್ಚಿತ್ರಕ್ಕೆ ಐವತ್ತರಿಂದ ಅರವತ್ತು ಸಹಸ್ರ ಖರ್ಚಾಗುವಾಗ ನಾವು ಹಿಂದಿನಂತೆ ನಾಟಕವಾಡುವುದು ಸಾಧ್ಯವಿಲ್ಲವೆಂದು ತೋರಿತು. ಅಧಿಕ ಧನವ್ಯಯದಿಂದ ರಂಗೋಪಕರಣಗಳನ್ನ ಸಿದ್ಧಪಡಿಸಿ ಪ್ರಸಿದ್ಧ ನಾಟಕವೊಂದನ್ನ ಅಭಿನಯಿಸುವುದರಿಂದ ಜನರನ್ನ ಮೆಚ್ಚಿಸಬಹುದೇ ಎಂದು ತೋರಿತು. ಅದರಂತೆ ಅರವತ್ತು ಸಹಸ್ರ ರೂಪಾಯಿಗಳನ್ನ ವೆಚ್ಚಮಾಡಿ ರಂಗೋಪಕರಣಗಳನ್ನ ರಚಿಸಿ, ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕುರುಕ್ಷೇತ್ರ ನಾಟಕವನ್ನ ಪ್ರಾರಂಭಿಸಿದೆವು. ಬೆಂಗಳೂರು ನಗರದಲ್ಲಿ ಅವಿಚ್ಛಿನ್ನವಾಗಿ ನಲವತ್ತು ನಾಟಕಗಳು ನಡೆದು ವೆಚ್ಚ ಮಾಡಿದ್ದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಹಣ ಉತ್ಪನ್ನವಾಯಿತು..’

(ಅನಕೃ)

‘ರಿಯಲಿ..?’ ಅಂದ ಮತ್ತೆ. ಒಳ್ಳೆ ರಿಯಲಿ ರೋಗ ಹತ್ತಿಕೊಂಡಿದೆ ಇವನಿಗೆ ಎಂದು ನಗುತ್ತ ‘ಮುಂದಿನ ಸಂಗತಿ ಕೇಳು. ಅದು ಮಜವಾಗಿದೆ. ಕುರುಕ್ಷೇತ್ರ ನಾಟಕವನ್ನ ಆಂಧ್ರಕ್ಕೆ ತೆಗೆದುಕೊಂಡು ಹೋಗಿ ತೆಲುಗಿನಲ್ಲಿ ಪ್ರದರ್ಶಿಸಿದರಂತೆ. ಜನ ಫುಲ್ ಖುಷ್. ಸೀ ಇಯರ್… ವೀರಣ್ಣನವರು ಹೇಳಿದ್ದಾರೆ- ‘ಅನೇಕ ಕಡೆಗಳಲ್ಲಿ ನಾವು ಕುರುಕ್ಷೇತ್ರವನ್ನ ಅಭಿನಯಿಸಿದಾಗ ಸಿನಿಮಾ ಮಂದಿರಗಳನ್ನ ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿತ್ತು. ಗುಬ್ಬಿ ಕಂಪನಿಯವರ ‘ಕುರುಕ್ಷೇತ್ರ’ ಬಂದಿದೆ. ಸಿನಿಮಾಗೆ ಯಾರೂ ಬರೋದಿಲ್ಲ. ಒಳ್ಳೆಯ ಚಿತ್ರಗಳನ್ನ ಕಳುಹಿಸಬೇಡಿ’ ಎಂದು ಥಿಯೇಟರ್ ನವರು ಬರೆಯುತ್ತಿದ್ದರಂತೆ’

‘ಆಗ ಕುರುಕ್ಷೇತ್ರ ನಾಟಕ ನೋಡಿದ ಆಳಿದ ಮಹಾಸ್ವಾಮಿಗಳವರು ನಾಟಕಕ್ಕೆ ಅಂತಲೇ ಆನೆ, ಕುದುರೆ, ಖಿಲ್ಲತ್ತುಗಳನ್ನ ದಯಪಾಲಿಸಿದರಂತೆ. ಆಗ ಇವೆಲ್ಲವೂ ರಂಗದ ಮೇಲೆ ಬರಲಿಕ್ಕೆ ಆರಂಭಿಸಿದವಂತೆ.’

‘ಹೇಗಿದೆ ಜರ್ನಿ..?ʼ ಎಂದು ಕೇಳಿದೆ. ಅವನು ಕಣ್ಣರಳಿಸಿದ. ಸದ್ಯ ಮತ್ತೆ ರಿಯಲಿ ಎಂದು ಕೇಳಲಿಲ್ಲವಲ್ಲ ಎಂದು ಸಮಾಧಾನವಾಯಿತು.
ಆದರೆ ತಿಳಿಯಬೇಕಿದ್ದ ಮತ್ತೂ ಒಂದು ಮುಖ್ಯ ಸಂಗತಿ ಇತ್ತು. ಕುರುಕ್ಷೇತ್ರ ನಾಟಕ ಏಕಾಏಕಿ ಪರ್ಫೆಕ್ಟ್ ಆಗಿ ರೂಪುತಳೆದದ್ದಲ್ಲ. ನಾಟಕದ ವಸ್ತು, ಉಡುಪುಗಳು ಮತ್ತು ನಟನಾ ಬಳದ ನಟನೆ ಬಗ್ಗೆ ಮತ್ತೆ ಅನಕೃ ಅವರ ಮಾತುಗಳಿಗೆ ಕಿವಿಗೊಡಲೇಬೇಕು..

ಅನಕೃ ಹೀಗೆ ವಿಮರ್ಶಿಸಿದ್ದಾರೆ- “ಕುರುಕ್ಷೇತ್ರ ನಾಟಕದಲ್ಲಿ ಕೃಷ್ಣ, ಶಕುನಿ, ಭೀಮ ಇವರುಗಳಿಗೆ ಪ್ರಾಶಸ್ತ್ಯ ಹೆಚ್ಚು. ಶಕುನಿಯ ಕೈಯಲ್ಲಿ ಸಿಕ್ಕಿದ ದುರ್ಯೋಧನ ಕೇವಲ ಒಂದು ಗೊಂಬೆಯಾಗಿದ್ದಾನೆ. ಈ ನಾಟಕದಲ್ಲಿ ನಾವು ಕಾಣುವುದು ಅಭಿಮಾನಧನನಾದ ಅಜೇಯನಾದ ಅಚಲ ನಿರ್ಧಾರಕ್ಕೆ ತಾಳಿ ಕಟ್ಟಿದ ವೀರ ಕೌರವನನ್ನಲ್ಲ. ಕೇವಲ ಒಬ್ಬ ಸಹಾಯಶೂನ್ಯ ವಿನೋದಪ್ರಿಯ ಪ್ರಹಸನಗಾರರನ್ನು. ಈ ಅಭಿಪ್ರಾಯವನ್ನು ಹುಟ್ಟಿಸುವುದು ಕೌರವ ಪಾತ್ರಾಭಿನಯಗಾರರ ಅಸಂಸ್ಕೃತ ಅಭಿನಯವೆಂಬುದನ್ನು ನಾನು ಮರೆಯಲಾರೆನಾದರೂ ದುರ್ಯೋಧನನಿಗೆ ಕುರುಕ್ಷೇತ್ರ ನಾಟಕಕರ್ತರು ಸರಿಯಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆಂದು ಒಪ್ಪಲಾರೆ..”

ರಿಯಲಿ? ಅಂದ ಮತ್ತೆ. ‘ಅದು ವಸ್ತುವಿಗೆ ಸಂಬಂಧಿಸಿದಂತೆ ಆಯಿತು. ಈಗ ವೇಷಭೂಷಣಗಳ ಬಗ್ಗೆ ಕೇಳು’ ಎಂದು ಕೋಟ್ ಮಾಡುವುದುನ್ನು ಮುಂದುವರೆಸಿದೆ.

“ನಟರ ವೇಷಭೂಷಣಗಳು ಯಾವ ನಿಯಮವನ್ನೂ ಅನುಸರಿಸಿದಂತಿರಲಿಲ್ಲ. ಪೌರಾಣಿಕ ನಾಟಕಗಳಲ್ಲಿ ಈ ಬಗ್ಗೆ ಕ್ರಾಂತಿಯೇ ಆಗಬೇಕು. ಅಜಂತಾ, ಎಲ್ಲೋರಾ ಬಾಗ್ ಮೊದಲಾದ ಸ್ಥಳಗಳಲ್ಲಿರುವ ಗುಹಾಂತರ ದೇವಾಲಯಗಳಲ್ಲಿರುವ ಚಿತ್ರಗಳ ವೇಷ ಭೂಷಣಗಳನ್ನ ಅನುಸರಿಬಹುದು. ಇದು ಕಾವ್ಯವಸ್ತುಗಳಿಗೆ ಒಂದು ಬಗೆಯ ಪ್ರಾಚೀನ ವಾತಾವರಣವನ್ನ ಕಲ್ಪಿಸಿಕೊಡುತ್ತದೆ. ಈ ಮಂಡಳಿಯವರು ಸ್ವಲ್ಪ ಅಭಿರುಚಿಯನ್ನ ವ್ಯಕ್ತಪಡಿಸಿ ಕೃಷ್ಣ, ಅರ್ಜುನ, ಕರ್ಣ, ಸುಭದ್ರೆಯನ್ನಲಂಕರಿಸಿದ್ದರು. ಆದರೆ ಒಟ್ಟಿನಲ್ಲಿ ಯಾವ ವ್ಯವಸ್ಥೆಯೂ ಕಾಣಬರುತ್ತಿರಲಿಲ್ಲ. ಸೈಂಧವನ ವೇಷ ಗ್ರೀಕ್ ವೀರನಂತೆ, ಶಕುನಿಯ ವೇಷ ರಜಪೂತ ಸರದಾರನಂತೆ, ದುರ್ಯೋಧನನ ವೇಷ ಮುಸಲ್ಮಾನ ನವಾಬನಂತೆ, ಭೀಮನ ವೇಷ ಭೂತೋಚ್ಛಾಟನ ಮಾಡುವ ಗಾರುಡಿಗನಂತೆ ಇದ್ದುದು ರಸಪೋಷಣೆಗೆ ಸಹಕಾರಿಯಾಗಿರಲಿಲ್ಲ. ಶ್ರೀಮಾನ್ ವೀರಣ್ಣನವರಂತಹ ಸಾಹಸಿಗರು, ಈ ವಿಚಾರದಲ್ಲಿ ತಿಳಿದವರ ಸಲಹೆಯನ್ನ ತೆಗೆದುಕೊಂಡು ವೇಷಭೂಷಣಗಳನ್ನ ಅಳವಡಿಸುವುದು ಉತ್ತಮ..”

‘ಮೈಗುಡ್ನೆಸ್… ರಿಯಲಿ?’ ಅಂದ..

‘ಲಾಸ್ಟ್ ಬಟ್ ನಾಟ್ ದ ಲೀಸ್ಟ್ ಈ ಮಾತುಗಳನ್ನ ಓದ್ತೇನೆ ಕೇಳಿಸ್ಕೊ ಮಾರಾಯ..’ ಎಂದು ಅನಕೃ ಅವರ ವಿಮರ್ಶೆಯ ಮತ್ತೊಂದು ಪ್ಯಾಸೇಜ್ ಓದಿದೆ – “ಈ ನಾಟಕದ ನಟಬಳಗ ತೀರಾ ಅಸಮರ್ಪಕವಾಗಿದ್ದಿತೆಂದು ವಿಷಾದದಿಂದ ಹೇಳಬೇಕಾಗಿದೆ. ಭೀಮ, ದುರ್ಯೋಧನ, ದ್ರೌಪದಿ ಇವರುಗಳನ್ನ ಬದಲಾಯಿಸಲೇಬೇಕು. ಭೀಮನ ಪಾತ್ರಕ್ಕೆ ಈ ನಟರು ದೊಡ್ಡ ಅಪವಾದ. ‘ಮಿತಿ’ ಯೆಂಬ ವಸ್ತುವೊಂದಿದೆಯೆಂಬುದನ್ನು ಕಲಾಪ್ರೇಮಿ ಅರಿಯುವವರೆಗೆ ಅವನಿಗೆ ರಂಗದ ಮೇಲೆ ಎಡೆಯಿಲ್ಲ. ಭೀಮನ ಪಾತ್ರಾಭಿನಯಗಾರರು ಇನ್ನೂ ‘ಬಯಲಾಟ- ಭಾಗವತರಾಟ’ದ ದರ್ಜೆಯಲ್ಲಿಯೇ ಇದ್ದಾರೆ. ದುರ್ಯೋಧನನ ಪಾತ್ರಾಭಿನಯಗಾರರು ಹಾಸ್ಯಾಭಿನಯಗಾರರು ಮತ್ತು ಸಂಘದ ಒಡೆಯರು. ಪಾತ್ರಕ್ಕೆ ತಕ್ಕ ಗಾಂಭೀರ್ಯ, ಮಾತುಗಾರಿಕೆ, ರೂಪ ಒಂದೂ ಇವರಲ್ಲಿ ಇಲ್ಲ. ನಟರು ತಮ್ಮ ಯೋಗ್ಯತೆಯ ಮಿತಿಯನ್ನರಿತು ಅದಕ್ಕನುಗುಣವಾದ ಪಾತ್ರವನ್ನೇ ವಹಿಸಬೇಕು.

ದ್ರೌಪದಿ ಪಾತ್ರಾಭಿನಯ ಮಾಡಿದವರು ಮೊದಲು ‘ಬಾಲಬೋಧೆ’ ಅಭ್ಯಾಸಕ್ಕೆ ಆರಂಭಿಸಬೇಕು. ಇವರ ಬಾಯಲ್ಲಿ ಮಾತುಗಳು ಮುರಿದು ಬೀಳುತ್ತವೆ. ಅಲ್ಲದೆ ತಾನು ನಿಂತಿರುವುದು ರಂಗದ ಮೇಲೆ ಸಾವಿರಾರು ಪ್ರೇಕ್ಷಕರ ಎದುರಿನಲ್ಲಿ ಎಂಬುದನ್ನು ಮರೆತು ಸಹ ನಟರೊಂದಿಗೆ ‘ದ್ರೌಪದಿ’ ಕುಚೇಷ್ಟೆಗೆ ಆರಂಭಿಸಿಬಿಡುತ್ತಾಳೆ. ಈ ನಾಟಕದಲ್ಲಿ ಬರುವ ಸೇನಾನಿ- ಅವನ ಹೆಂಡತಿಯ ಹಾಸ್ಯ ಕೇವಲ ಅನವಶ್ಯಕ, ಅಲ್ಲದೆ ಶುದ್ಧ ಕೀಳು ದರ್ಜೆಗೆ ಸೇರಿದುದು. ಸೇನಾನಿ ಮಾಡಿದ ನಟನಿಗೆ ಅಂಕೆ ಆತಂಕಗಳೆರಡೂ ಇದ್ದಹಾಗೆ ಕಾಣಬರುವುದಿಲ್ಲ…”

ನಾನು ಅನಕೃ ಅವರ ಪುಸ್ತಕ ಮುಚ್ಚಿಟ್ಟೆ. ಹುಡುಗನ ಕಣ್ಣುಗಳಲ್ಲಿ ಬಹಳಷ್ಟು ಪ್ರಶ್ನೆಗಳು ಕದಲುತ್ತಿರುವುದು ಗಮನಕ್ಕೆ ಬಂತು. ಯಾವುದೇ ಕಾಲದ ಒಂದು ಬೆರಗು ಮತ್ತು ಅದ್ಭುತ ನಮ್ಮ ಕಿವಿ ಹೊಕ್ಕುವಾಗ ಅದರ ಎಂಡ್ ಪಾಯಿಂಟ್ ಮಾತ್ರ ತಲುಪುತ್ತಿರುತ್ತದೆ. ಆದರೆ ಆ ಬೆರಗಿನ ಹಿಂದೆ ಸಾಕಷ್ಟು ಹಂತಗಳಿರುತ್ತವೆ. ಪರಿಶ್ರಮ, ಕಾಯುವಿಕೆ, ದರ್ಶನ ಎಲ್ಲದರ ಅನುಭೂತಿ ಇರುತ್ತದೆ. ಇದು ನಮಗೆ ತಿಳಿದಿರುವುದಿಲ್ಲ. ನಾವು ತುತ್ತತುದಿಯ ಬಗ್ಗೆ ಮಾತಾಡುತ್ತ ನಮ್ಮ ಬದುಕಿನಲ್ಲಿ ಘಟಿಸಬಹುದಾದ ಸಾವಧಾನದ ಕ್ರಿಯೆಗಳಿಗೆ ಡಿಸ್ಟರ್ಬ್ ಮಾಡುತ್ತಾ ನಮ್ಮನ್ನೂ ಡಿಸ್ಟರ್ಬ್ ಮಾಡಿಕೊಳ್ಳುತ್ತಿರುತ್ತೇವೆ. ಇಂಥ ಸಂರ್ಭಗಳಲ್ಲೇ ನಮ್ಮನ್ನ ಅನ್ಯ ನೆರಳುಗಳು ಆಕ್ರಮಿಸಿಕೊಂಡು ಕುರುಕ್ಷೇತ್ರ ಹುಟ್ಟುಹಾಕುತ್ತಿರುತ್ತದೆ.


ಇಷ್ಟನ್ನ ಅವನಿಗೆ ಅರ್ಥ ಮಾಡಿಸುವುದು ಹೇಗೆ ಎಂದು ಯೋಚಿಸುತ್ತ ಕೂತೆ.