ನಮ್ಮ ಮನೆ ಹತ್ತಿರದ ಕಾಡುಗಳಲ್ಲಿ ಅನೇಕ ಗುಮ್ಮಗಳಿದ್ದವು. ರಾತ್ರಿಯಾದೊಡನೆ ಮೈನವಿರೇಳಿಸುವ ಅವುಗಳ ಕೂಗು ಆರಂಭವಾಗುತ್ತಿತ್ತು. ಒಂದು ಗುಮ್ಮ ‘ಊಂಹೂಂ’ ಎಂದರೆ ಇನ್ನೊಂದು ಗುಮ್ಮ ‘ಊಂಹೂಂಹೂಂ’ ಎಂದು ಉತ್ತರಿಸುತ್ತಿತ್ತು. ಈಗ ಎಣಿಸಿಕೊಂಡರೆ ಅದು ಪ್ರೇಮಸಲ್ಲಾಪ ಇರಬಹುದೆನಿಸುತ್ತದೆ! ಅದೇನು ಭಾಷೆಯೋ, ಯಾರಿಗೆ ಗೊತ್ತು! ಆ ದಿನಗಳಲ್ಲಂತೂ ಹೆದರಿಕೆಯಿಂದ ತಲೆ ಹೊರಹಾಕಲೂ ಭಯ. ಹಾಗಾಗಿ ನಾನು ಹಾಲು ಕುಡಿಯಲು ಹೋಗುವುದಿಲ್ಲವೆಂದು ಹಟ ಮಾಡುತ್ತಿದ್ದೆ. ಅಜ್ಜಿ ಕೊಂಗಾಟ ಮಾಡಿ “ನಿಧಾನ ಹರೆದುಕೊಂಡು ಹೋಗು ಮಗಾ, ಗುಮ್ಮನಿಗೆ ಕಾಣುವುದಿಲ್ಲ” ಎನ್ನುತ್ತಿದ್ದರು! ಐದಾರು ವರ್ಷಗಳ ನನಗೆ ಮುದ್ದು ಮಗುವಿನಂತೆ ಹರೆದು ಹೋಗುವುದು ಆ ಕ್ಷಣಕ್ಕೆ ಇಷ್ಟವೂ ಆಗಿಬಿಡುತ್ತಿತ್ತು.
ಗೂಬೆಯ ಬಗೆಗಿನ ರೋಚಕ ಅನುಭವಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ

 

ಇವತ್ತು ನಮ್ಮ ಮಾಮೂಲಿಯ ನಡಿಗೆಗೆಂದು ಹೊರಟಾಗ ತುಸು ತಡವೇ ಆಗಿತ್ತು. ಬೆಳಗು, ಸಂಜೆಯ ಹೆಜ್ಜೆಗಳಿಗೆ ಸೂರ್ಯನ ಬೆಳಕಿನ ಬಣ್ಣವಾದರೆ, ರಾತ್ರಿ ಕತ್ತಲು ಮತ್ತು ಬೀದಿದೀಪದ ಬೆಳಕಿನ ಸಮ್ಮಿಲನ. ನಮ್ಮ ದಾರಿಯುದ್ದಕ್ಕೂ ಕಾಡಿನ ಪರಿಮಳ! ಒಳದಾರಿಯ ಕೆಲ ವಾಹನಗಳ ಘಾಟನ್ನೂ ಮೀರಿ ಹೂಗಳ, ಮರಗಳ ವಿಶಿಷ್ಟ ಘಮಲು. ಮಾರ್ಚ್ ತಿಂಗಳಿನ ಈ ದಿನಗಳಲ್ಲಿ ‘ಕುಸುಮದ ಗಿಡ’ದ ಪೊದೆಗಳು ಹೊರೆ ಹೊರೆ ಹೂ ಅರಳಿಸಿವೆ. ತೆಳು ಹಸಿರು ಬಣ್ಣದ ಇವುಗಳ ಗೊಂಚಲಿನ ಸುವಾಸನೆ, ಚದ್ರಾಳ (ಕಾಡುಮಲ್ಲಿಗೆ) ಹೂವಿನ ಗಂಧ, ಯಾವದೋ ಗಿಡಗಳು, ಹೂ, ಒಣಎಲೆ, ಹುಲ್ಲು, ಮರಗಳು, ಹುಡಿಮಣ್ಣು ಎಲ್ಲದರ ಸಮ್ಮಿಶ್ರ ಸೊಗಡು ಮನಸ್ಸನ್ನು ತುಂಬಿ ಉಸಿರನ್ನು ಹೀರಿ ಹೀರಿ ಎಳೆದುಕೊಳ್ಳುವಂತಾಗುತ್ತದೆ. ಕೀಟ, ಜೀರುಂಡೆಯ ರಾತ್ರಿಯ ಸದ್ದಂತೂ ಕಿವಿ ತುಂಬುತ್ತದೆ.

ಒಮ್ಮೊಮ್ಮೆ ಇರುಳ ಹಕ್ಕಿಯೊಂದು ನೀರಿಗೆ ಕಲ್ಲು ಹಾಕಿದಂತೆ ಕೂಗುತ್ತ ಕುಳಿತರೆ ನಮಗೆ ‘ಪಡಾವ್!’ ಹಾಗೆ, ಇವತ್ತಿನ ಪಡಾವ್ ಮಾತ್ರ ಇದೆಲ್ಲಕ್ಕೂ ಭಿನ್ನವಾದುದು. ದಿನದ ದೂರವನ್ನು ಕ್ರಮಿಸಿ ವಾಪಸ್ಸಾಗುವಾಗ ಆಗಲೇ ಎಂಟೂವರೆಯ ಸಮಯ. ಕುಸುಮದ ಹೂ ನೋಡುವ, ಕಾಡ ಕತ್ತಲೆಯನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಕವಲು ದಾರಿಯಲ್ಲಿ ತುಸು ನಡೆದು ನಿಂತಿದ್ದಾಗ ಪ್ರಜ್ಞೆಗೆ ಏನೋ ತಲುಪಿದಂತಾಯಿತು. ಅಸಡ್ಡೆಯಿಂದ ನಿಂತಿದ್ದರೂ ಮತ್ತದೇ ಮೊಳಗು. ಹಿಂದೆ ತಿರುಗಿ ಸೂಕ್ಷ್ಮವಾಗಿ ಗಮನಿಸಿದಾಗ; ಹೌದು, ದೂರದಲ್ಲಿ ಗುಮ್ಮನ ಕೂಗು! ಆ ಕ್ಷಣದ ಸಂತಸದಲ್ಲಿ ಮೈಯ್ಯ ರೋಮಗಳು ನಿಮಿರಿ ನಿಂತವು. ಸದ್ದಾಗದಂತೆ ಸ್ವಲ್ಪ ಮುಂದೆ ಸರಿದು ಕೂಗಿಗೆ ಕಿವಿಯಾಗಿ, ಮೊಬೈಲ್ನಲ್ಲೂ ರೆಕಾರ್ಡ್ ಮಾಡಿಕೊಳ್ಳುತ್ತ ಹತ್ತಿಪ್ಪತ್ತು ನಿಮಿಷ ಅಲ್ಲೇ ನಿಂತೆವು. ಆ ಕೂಗು ಬಾಲ್ಯದ ನೆನಪುಗಳಿಗೆ ಕರೆದೊಯ್ದಿತ್ತು. ಹಾಗೆ ಕಾಡಿನಲ್ಲಿ ಗುಮ್ಮನ ಧ್ವನಿ ಕೇಳದೆ ವರ್ಷಗಳೇ ಉರುಳಿಹೋಗಿವೆ. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಮನೆ ಕಡೆಗೆ ಹೊರಟೆವು.

ಮೂರು ವರ್ಷಗಳ ಹಿಂದೆ ಶಾಲೆಯ ಮಕ್ಕಳನ್ನು ಕರೆದುಕೊಂಡು ನಿಸರ್ಗಧಾಮವೊಂದಕ್ಕೆ ಹೋಗಿದ್ದೆವು. ಎಕರೆಗಟ್ಟಲೆ ವಿಸ್ತಾರವಾದ ಜಾಗವದು. ಸುತ್ತಲೂ ಬಿದಿರುಮೆಳೆ, ಕಾಡು ಆವರಿಸಿಕೊಂಡಿದೆ. ಆದರೂ ಸಣ್ಣ ಸಣ್ಣ ಆವರಣದೊಳಗಿರುವ ಪ್ರಾಣಿ ಪಕ್ಷಿಗಳನ್ನು ನೋಡುವುದೆಂದರೆ ನನಗೆ ಯಾವತ್ತೂ ದುಗುಡ. ಹಾಗಾಗಿ ಝೂಗಳು, ನಿಸರ್ಗಧಾಮಗಳಿಗೆ ನಾನು ಕಾಲಿಡುವುದು ಅಪರೂಪ. ಆವತ್ತು ಮಾತ್ರ ಮೊದಮೊದಲೇ ಕಾಣಸಿಕ್ಕಿದ ದೊಡ್ಡದೊಂದು ಮರದಲ್ಲಿ ಕುಳಿತು ಕೂಗಿದ್ದು ಒಂದು ಗೂಬೆ! ಮುಸ್ಸಂಜೆಯ ಸಮಯವದು. ಆ ಗುಮ್ಹಕ್ಕಿಯ ಸ್ವಾಗತದ ಕೂಗು ಕೇಳಿ ಎಂತಹಾ ಖುಷಿಯಾಯಿತೆಂದರೆ ಬೆಳಗಿನಿಂದ ಆದ ಆಯಾಸವೆಲ್ಲ ಮರೆತುಹೋಗಿ ಹೊಸ ಉಲ್ಲಾಸ ಮೂಡಿತು. ಮಕ್ಕಳೂ ಒಂದಷ್ಟು ಹೊತ್ತು ನಿಂತು ಮೂಕರಾಗಿ ಆಲಿಸಿದರು.

ನಮ್ಮೂರು ಮುದೂರಿಯ ಬಾಲ್ಯದ ದಿನಗಳಲ್ಲಿ ಗುಮ್ಮನದ್ದೇ ಸಂಗೀತ! ಅಂದಿನ ರಾತ್ರಿಗಳು, ಇರುಳ ಹಕ್ಕಿಗಳು, ಗುಮ್ಮನ ಕೂಗು ಎಲ್ಲವೂ ಗಾಢ. ವಿದ್ಯುತ್ತಿಲ್ಲದ ಊರಿಗೆ ತಿಂಗಳ ಹದಿನೈದು ದಿನವಂತೂ ಮಸಿ ಬಳಿದಂತೆ ಕಗ್ಗತ್ತಲು. ಮಳೆಗಾಲದಲ್ಲಿ ನಾಲ್ಕು ತಿಂಗಳೂ ಕತ್ತಲು, ಮೋಡ, ಜಿರಾಪತಿ ಮಳೆ. ಇಂತಹ ರಾತ್ರಿಗಳಲ್ಲಿ ಮನೆ ಹತ್ತಿರದ ತೋಟದಲ್ಲೇ ಗುಮ್ಮಗಳ ಕರೆ. ಆದರೆ ಒಂದು ವಿಚಿತ್ರ ಸಂಗತಿಯೆಂದರೆ ಆಗ ನನಗೆ ಗೊತ್ತಿದ್ದ ಗುಮ್ಮನ ಕೂಗು ‘ಊಂಹೂಂ’ ‘ಊಂಹೂಂಹೂಂ’ ಎಂಬಂತದ್ದು ಮಾತ್ರ. ಇತ್ತೀಚೆಗೆ ಯೂಟ್ಯೂಬಿನ ವಿಡಿಯೋಗಳಲ್ಲಿ ವಿಧವಿಧದ ಗುಮ್ಮಗಳು, ಅವುಗಳ ವಿಚಿತ್ರ ಸ್ವರವನ್ನು ಕಂಡು ಕೇಳಿ ಅಚ್ಚರಿಪಟ್ಟಿದ್ದಾಯಿತು. ಇನ್ನೊಂದು ವಿಷಯವೆಂದರೆ ಆಗ ನಮ್ಮೂರಿನ ಜನರು ‘ಊಂಹೂಂಹೂಂ’ ಎಂದು ಕೂಗುವ ಪ್ರಭೇದವನ್ನು ಮಾತ್ರ ಗುಮ್ಮ ಎನ್ನುತ್ತಿದ್ದರು. ದೀರ್ಘವಾಗಿ ಕೂಗು ಹೊರಡಿಸುವ ಇತರ ಗೂಬೆಗಳನ್ನು ‘ಜಕ್ಣಿಹಕ್ಕಿ’ ಎನ್ನುತ್ತಿದ್ದರು. ‘ಜಕ್ಲಿ’ ಎಂದರೆ ಸತ್ತ ಮನುಷ್ಯರ ಆತ್ಮ ಎಂದು. ಗತಿಸಿಹೋದ ಕುಟುಂಬದ ಹಿರಿಯರಿಗೆ ಎಡೆ ಇಡುವ, ಹೊಸಬಟ್ಟೆ, ತಿಂಡಿಗಳ ನೈವೇದ್ಯ ಅರ್ಪಿಸುವ ವಿಧಿಯೊಂದಕ್ಕೆ ನಮ್ಮಲ್ಲಿ ‘ಜಕ್ಲಿ’ ಎಂದೇ ಹೆಸರು. ಹಾಗೆ ಗಾಢ ಇರುಳಿನಲ್ಲಿ ಭಯ ಹುಟ್ಟಿಸುವ ಕೂಗಿನ ಈ ಗುಮ್ಮ ‘ಜಕ್ಣಿಹಕ್ಕಿ’ ಆಗಿರಬೇಕು. ಇದಲ್ಲದೆ ‘ಭೂತ್‌ಹಕ್ಕಿ’ ಎಂಬ ಇನ್ನೊಂದು ಹಕ್ಕಿಯನ್ನು ಹೆಸರಿಸುತ್ತಿದ್ದರು. ಇದೂ ಗೂಬೆಯ ಮತ್ತೊಂದು ಪ್ರಭೇದ ಎಂದು ಆಮೇಲೆ ತಿಳಿಯಿತು.

ಬಾಲ್ಯದ ರಾತ್ರಿಗಳು ಮಳೆ, ಕಪ್ಪೆಗಳು, ಕೀಟ ಮತ್ತು ಗೂಬೆಗಳ ಸದ್ದಿನೊಂದಿಗೆ ಮಿಳಿತಗೊಂಡಿವೆ. ಕಾಡಿನ ತೋಳಿನಲ್ಲಿ ಮಲಗಿದ ಗದ್ದೆಗಳು; ತೋಟದ ನಡುವೆ ಅವಿತುಕೊಂಡ ಮನೆ ನಮ್ಮದು. ಹಗಲಿಗೆ ಸೂರ್ಯ, ಇರುಳಿಗೆ ಚಂದ್ರರ ಸಹಜ ಬೆಳಕು. ಗಾಢ ರಾತ್ರಿಗಳಲ್ಲಿ ಮಿಣಿ ಮಿಣಿ ಉರಿಯುವ ಚಿಮಣಿ ದೀಪ, ಒಲೆಯ ಬೆಳಕು ಬಿಟ್ಟರೆ ಮತ್ತೆಲ್ಲ ಕತ್ತಲೆ. ಮಳೆ ಸುರಿಯುತ್ತಿದ್ದರಂತೂ ಮನೆಯೇ ಪ್ರಪಂಚವಾದಂತೆ. ರಾತ್ರಿ ಎಂಟೂವರೆಯ ಮೊದಲು ಊಟ ಮುಗಿದುಬಿಡುತ್ತಿತ್ತು. ಆಮೇಲೆ ಅಮ್ಮನಿಗೆ ಅಡುಗೆಮನೆ ಚೊಕ್ಕಟ ಮಾಡುವುದು, ಹಾಲಿಗೆ ಹೆಪ್ಪು ಹಾಕುವುದು, ಸಣ್ಣ ಪುಟ್ಟ ಪಾತ್ರೆಗಳನ್ನು ತೊಳೆದು ಜೋಡಿಸುವುದು ಮುಂತಾದ ಕೆಲಸಗಳು. ನಾನು ಅಜ್ಜಿಯೊಂದಿಗೆ ಚಾವಡಿಯ ಹಾಸಿಗೆಯೊಳಗೆ ಸೇರುತ್ತಿದ್ದೆ. ಅವರು ಅದೂ ಇದೂ ಮುದ್ದಿನ ಮಾತಾಡುತ್ತ, ಕುಶಾಲು ಮಾಡುತ್ತಿರುವಾಗ ಅಮ್ಮ ಅಡುಗೆಮನೆಯಿಂದ “ಹಾಲು ಕುಡಿದು ಹೋಗು” ಎಂದು ಕರೆಯುತ್ತಿದ್ದರು. ನಮ್ಮದೇ ಹಟ್ಟಿಯ ವಾಣಿ, ರೇಣು, ಗೋದಾ ದನಗಳ ಪ್ರೀತಿಯ ಹಾಲದು. ಹಗಲಿಡೀ ಕಾಡು-ಗುಡ್ಡಗಳಲ್ಲಿ ಸೊಪ್ಪು, ಹುಲ್ಲು ಮೆಂದು ಬಂದ ದನಗಳು ಬೆಳಿಗ್ಗೆ ಸಂಜೆ ಒಂದೆರಡು ಸಿದ್ದೆ (ಒಂದು ಲೀಟರ್ ಆಗಬೇಕಾದರೆ ಐದು ಸಿದ್ದೆ ಹಾಕಬೇಕು) ಹಾಲು ಕೊಡುತ್ತಿದ್ದವು. ಅವು ನಾಟಿ ದನಗಳು. ‘ಮಲೆನಾಡು ಗಿಡ್ಡ’ ತಳಿಯ ಪುಟಾಣಿ ದನಗಳು. ಮೆಂದು ಬಂದ ಸೊಪ್ಪಿನ ರುಚಿ, ಪರಿಮಳ, ಶಕ್ತಿ ಅವುಗಳ ಹಾಲಿಗಿತ್ತು. ಕಾಸಾನ್ ಮರದ ಸೊಪ್ಪು ತಿಂದು ಬಂದ ದಿನ ಮಾತ್ರ ಹಾಲು ಕಹಿ ಕಹಿ. ಆ ದಿನ ಹಾಲು ಬಳಸುವಂತೆಯೇ ಇಲ್ಲ. ಆದರೆ ಹೀಗಾಗುತ್ತಿದ್ದುದು ಅಪರೂಪ. ಅಮ್ಮ ಹಾಲು ಕುಡಿಯಲು ಕರೆದಾಗ ನನಗೆ ಹೆದರಿಕೆಯಾಗುತ್ತಿತ್ತು.

ಯಾಕೆಂದರೆ ನಮ್ಮ ಮನೆ ಹತ್ತಿರದ ಕಾಡುಗಳಲ್ಲಿ ಅನೇಕ ಗುಮ್ಮಗಳಿದ್ದವು. ರಾತ್ರಿಯಾದೊಡನೆ ಮೈನವಿರೇಳಿಸುವ ಅವುಗಳ ಕೂಗು ಆರಂಭವಾಗುತ್ತಿತ್ತು. ಒಂದು ಗುಮ್ಮ ‘ಊಂಹೂಂ’ ಎಂದರೆ ಇನ್ನೊಂದು ಗುಮ್ಮ ‘ಊಂಹೂಂಹೂಂ’ ಎಂದು ಉತ್ತರಿಸುತ್ತಿತ್ತು. ಈಗ ಎಣಿಸಿಕೊಂಡರೆ ಅದು ಪ್ರೇಮಸಲ್ಲಾಪ ಇರಬಹುದೆನಿಸುತ್ತದೆ! ಅದೇನು ಭಾಷೆಯೋ, ಯಾರಿಗೆ ಗೊತ್ತು! ಆ ದಿನಗಳಲ್ಲಂತೂ ಹೆದರಿಕೆಯಿಂದ ತಲೆ ಹೊರಹಾಕಲೂ ಭಯ. ಹಾಗಾಗಿ ನಾನು ಹಾಲು ಕುಡಿಯಲು ಹೋಗುವುದಿಲ್ಲವೆಂದು ಹಟ ಮಾಡುತ್ತಿದ್ದೆ. ಅಜ್ಜಿ ಕೊಂಗಾಟ ಮಾಡಿ “ನಿಧಾನ ಹರೆದುಕೊಂಡು ಹೋಗು ಮಗಾ, ಗುಮ್ಮನಿಗೆ ಕಾಣುವುದಿಲ್ಲ” ಎನ್ನುತ್ತಿದ್ದರು! ಐದಾರು ವರ್ಷಗಳ ನನಗೆ ಮುದ್ದು ಮಗುವಿನಂತೆ ಹರೆದು ಹೋಗುವುದು ಆ ಕ್ಷಣಕ್ಕೆ ಇಷ್ಟವೂ ಆಗಿಬಿಡುತ್ತಿತ್ತು. ಮನೆಯಲ್ಲಿ ಸಣ್ಣವಳಾದ ನನಗೆ ಮತ್ತಷ್ಟು ಸಣ್ಣವಳಾಗಿಯೇ ಇರುವ ಆಸೆಯೂ ಇತ್ತು! ಅದೂ ಅಲ್ಲದೆ ಹರೆದು ಹೋದರೆ ಗುಮ್ಮನಿಗೆ ಗೊತ್ತಾಗುವುದೇ ಇಲ್ಲವಲ್ಲ! ಹಾಗಾಗಿ ಚಾವಡಿ, ಜಗಲಿ, ಹೊಸ್ತಿಲು ದಾಟಿ, ಪಡಸಾಲೆ ತಲುಪಿ ಅಡುಗೆಮನೆಗೆ ನಸುಕತ್ತಲಿನಲ್ಲೇ ನಾಲ್ಕು ಕಾಲಿನಲ್ಲಿ ಪಯಣಿಸುತ್ತಿದ್ದೆ. ಅಲ್ಲಿ ಅಮ್ಮ ಕೊಟ್ಟ ಕಾಯಿಸಿದ ಹಾಲನ್ನು ಹೊಟ್ಟೆಗಿಳಿಸಿ ಮತ್ತೆ ಮರುಪಯಣ! ಮಧ್ಯೆ ಕೇಳುವ ಗುಮ್ಮನ ಕೂಗು ಬೇಗನೇ ಹಾಸಿಗೆ ಸೇರುವಂತೆ ಮಾಡುತ್ತಿತ್ತು! ನಿಜವಾಗಿಯೂ ಅಂದಿನ ಹಾಲಿನ ರುಚಿ ಇಂದೂ ನಾಲಿಗೆಯಲ್ಲಿದೆ; ಗುಮ್ಮಗಳ ಕೂಗಿನ ಹಿನ್ನೆಲೆ ಅದಕ್ಕೊಂದು ನಿಗೂಢತೆಯ ಆಯಾಮವನ್ನು ಒದಗಿಸಿದೆ!

ದೀರ್ಘವಾಗಿ ಕೂಗು ಹೊರಡಿಸುವ ಇತರ ಗೂಬೆಗಳನ್ನು ‘ಜಕ್ಣಿಹಕ್ಕಿ’ ಎನ್ನುತ್ತಿದ್ದರು. ‘ಜಕ್ಲಿ’ ಎಂದರೆ ಸತ್ತ ಮನುಷ್ಯರ ಆತ್ಮ ಎಂದು. ಗತಿಸಿಹೋದ ಕುಟುಂಬದ ಹಿರಿಯರಿಗೆ ಎಡೆ ಇಡುವ, ಹೊಸಬಟ್ಟೆ, ತಿಂಡಿಗಳ ನೈವೇದ್ಯ ಅರ್ಪಿಸುವ ವಿಧಿಯೊಂದಕ್ಕೆ ನಮ್ಮಲ್ಲಿ ‘ಜಕ್ಲಿ’ ಎಂದೇ ಹೆಸರು.

ಮನೆಯೆದುರಿನ ಗದ್ದೆಗಳಲ್ಲಿ ಒಮ್ಮೊಮ್ಮೆ ಬೆಳ್ಳಂಬೆಳಗ್ಗೆ ಗುಮ್ಮನನ್ನು ನೋಡಿದ ನೆನಪಿದೆ. ಗದ್ದೆಯಲ್ಲಿ ಯಾವುದಾದರೂ ಜೀವಾದಿ ಹಿಡಿಯಲು ಬರುತ್ತಿತ್ತೋ ಏನೋ! ನಮ್ಮೂರಿನ ಜನರಿಗೆ ಒಂದು ಭಯವಿತ್ತು. ಅದೆಂದರೆ ಬೆಕ್ಕಿನ ಮರಿಗಳನ್ನು ಗುಮ್ಮ ಕಚ್ಚಿಕೊಂಡು ಹೋಗಿ ತಿಂದುಹಾಕುತ್ತದೆ ಎನ್ನುವುದು. ಆಗೆಲ್ಲ ಬೆಕ್ಕು ಸಾಕುವುದೂ ಕಷ್ಟವಿತ್ತು. ಹಳ್ಳಿಯ ಮನೆಗಳಲ್ಲಿ ಬೆಕ್ಕು ನಾಯಿಗಳು ಅಗತ್ಯ ಇಲಿ, ಗುಡ್ಡೆಹೆಗ್ಗಣಗಳನ್ನು ಹಿಡಿಯಲು ಬೆಕ್ಕು ಬೇಕೇ ಬೇಕು. ವರ್ಷಪೂರ್ತಿಗೆ ಬೆಳೆದಿಟ್ಟುಕೊಂಡ ಉದ್ದು, ಹೆಸರುಕಾಳು, ಬತ್ತ, ಹುರುಳಿ, ಅಕ್ಕಿ ಮುಂತಾದುವನ್ನೆಲ್ಲ ಇಲಿಗಳಿಂದ ರಕ್ಷಿಸಿ ಇಡಬೇಕಾದದ್ದು ಅನಿವಾರ್ಯ…… ತೋಟ, ಕಾಡುಗಳಿಂದ ಮನೆಗಳಿಗೆ ಇಲಿಗಳು ರಹದಾರಿಯನ್ನೇ ಕೊರೆದುಕೊಂಡಿರುತ್ತವೆ. ಒಂದು ಬಿಲವನ್ನು ಮುಚ್ಚಿದರೆ, ಇನ್ನೊಂದು ಕಡೆ ಬಿಲ ತೋಡಿಕೊಂಡು ಹೊರಬಂದು ಕಿಲಾಡಿತನ ತೋರಿಸುತ್ತವೆ. ಅಂಗಳದ ಹುಲ್ಲುಕುತ್ರೆಯ ಅಡಿಯಲ್ಲಂತೂ ಸುಮಾರು ಇಲಿ, ಹೆಗ್ಗಣಗಳ ಮ್ವಾಳಗಳಿರುತ್ತಿದ್ದವು. ಅದಲ್ಲದೆ ಮನೆಯ ಹಿಂದೆ, ಸುತ್ತಮುತ್ತ ಚೂರು ಅವಕಾಶ ಸಿಕ್ಕಿದರೂ ಬಿಲಗಳನ್ನು ಕೊರೆದು ಸುರಂಗವನ್ನೇ ನಿರ್ಮಾಣ ಮಾಡುತ್ತಿದ್ದವು! ಆಗಿನ ಜನರು ಕಟ್ಟಿಕೊಳ್ಳುತ್ತಿದ್ದುದೂ ಮಣ್ಣಿನ ಮನೆಗಳೇ; ಅಂದರೆ ‘ಇಲಿಸ್ನೇಹಿ’ ಪರಿಸರ! ಇನ್ನು ಗುಡ್ಡೆಹೆಗ್ಗಣಗಳ ಕೊರೆಯುವ ಶಕ್ತಿಯಂತೂ ಅದ್ಭುತ. ಅವು ಮಾಡಿರುವ ಮ್ವಾಳಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅವುಗಳಲ್ಲಿ ಕೊಡಪಾನಗಟ್ಟಲೆ ನೀರನ್ನು ತುಂಬಬಹುದು. ಆದರೆ ಹಲವು ಬಿಲಗಳಿಗೆ ಕನೆಕ್ಷನ್ ಇರುವುದರಿಂದ ಈ ಮ್ವಾಳಗಳನ್ನು ತೂತು ಕೊಪ್ಪರಿಗೆ ಅಥವಾ ಕಾಲುವೆ ಎನ್ನಬಹುದು! ಒಂದು ಬಿಲಕ್ಕೆ ಕಲ್ಲುಗಳನ್ನು ಜಡಿದು ಮುಚ್ಚಿದರೆ, ಮೊದಲೇ ಊಹಿಸಿ ಮಾಡಿಕೊಂಡ ವ್ಯವಸ್ಥೆಯಂತೆ ಮತ್ತೊಂದು ಬಾಗಿಲಲ್ಲಿ ಹೊರಹೋಗುತ್ತವೆ! ಹಿಂದಿನ ಜನ್ಮದಲ್ಲಿ ಇವು ಸುರಂಗ ಅಥವಾ ಇಂಗುಗುಂಡಿಗಳ ತಜ್ಞರಾಗಿದ್ದಿರಬಹುದು! ಗುಡ್ಡೆ ಹೆಗ್ಗಣಗಳ ಉಪದ್ರವವೂ ಸಾಮಾನ್ಯವಲ್ಲ. ಮನೆಯೆದುರಿನ ಸ್ಟೋರ್ ರೂಮಿನಲ್ಲಿ ಸಂಗ್ರಹಿಸಿಟ್ಟ ಬತ್ತವನ್ನೆಲ್ಲ ಉಜುಬಿ ರಾಶಿ ರಾಶಿ ಜೂಳಿಯ ಜೊತೆಗೆ ಹಿಕ್ಕೆಯ ಗುಡ್ಡಗಳನ್ನೂ ಬಿಟ್ಟುಹೋಗುತ್ತಿದ್ದವು!

ನಮ್ಮ ನಾಯಿ ಕಾಳನಿಗಂತೂ ಇವುಗಳನ್ನು ಕಂಡರೆ ಅಸಾಧ್ಯ ಸಿಟ್ಟು. ವಾಸನೆ ಹಿಡಿದು ಹುಡುಹುಡುಕಿ ಓಡಿಸಲು ನೋಡುತ್ತಿತ್ತು. ಆದರೆ ನಾಯಿಯ ಕಣ್ಣಿಗೇ ಮೆಣ್ಣೆರಚಿ ಬಿಲದೊಳಗೆ ಅಥವಾ ಅಟ್ಟಕ್ಕೆ ನುಗ್ಗಿ ತಪ್ಪಿಸಿಕೊಳ್ಳುತ್ತಿದ್ದವು. ಇಂತಹ ಗುಡ್ಡೆ ಹೆಗ್ಗಣಗಳನ್ನು ಬೆಕ್ಕು ಹಿಡಿಯುವುದು ಕಷ್ಟ. ಅದಕ್ಕಿಂತ, ಮನಸ್ಸು ಮಾಡಿದರೆ ಇವೇ ಬೆಕ್ಕುಗಳನ್ನು ಸುಲಭದಲ್ಲಿ ಹಿಡಿದು ಹಾಕಬಹುದು. ಹಲವು ಗುಡ್ಡೆ ಹೆಗ್ಗಣಗಳು ಬೆಕ್ಕಿಗಿಂತಲೂ ದೊಡ್ಡ ಗಾತ್ರದಲ್ಲಿರುತ್ತವೆ. ಚುರುಕಿನ ನಾಯಿಗಳು ಇಂತಹ ಹೆಗ್ಗಣಗಳನ್ನು ಉಪಾಯ ಮಾಡಿ ಅಟ್ಟಿಸಿಕೊಂಡು ಹೋಗಿ ತಿನ್ನುವುದೂ ಇದೆ. ಆದರೆ ಮನೆಯೊಳಗಿನ ಇಲಿಗಳನ್ನು ಹಿಡಿಯಲು ಮಾತ್ರ ಬೆಕ್ಕುಗಳೇ ಬೇಕು. ಹಲವು ಹೆದರುಪುಕ್ಕಲ ಇಲಿಗಳಿಗೆ ಬೆಕ್ಕುಗಳನ್ನು ನೋಡಿಯೇ ಆಗಬೇಕೆಂದಿಲ್ಲ; ‘ಮಿಯಾಂವ್’ ಎಂಬ ದನಿ ಕೇಳಿ, ಬೆಕ್ಕಿನ ವಾಸನೆ ಹೊಡೆದರೂ ಸಾಕು; ಅಟ್ಟದಿಂದ ಕೆಳಗಿಳಿಯುವುದಿಲ್ಲ! ಇನ್ನೊಂದು ಸಂಗತಿಯೆಂದರೆ ಅಟ್ಟದಲ್ಲಿ ಹೆಗ್ಗಣಗಳು, ಇಲಿಗಳು ಇದ್ದರೆ ಕೇರೆಹಾವು, ಅಪರೂಪಕ್ಕೆ ದೇವರಹಾವು (ಸರ್ಪ) ಕೂಡಾ ಮನೆಯೊಳಗೆ ಬರುವುದಿದೆ. ಕೇರೆಹಾವಿಗಂತೂ ಕ್ಯಾರೇ ಇಲ್ಲ! ಹಾಡುಹಗಲಲ್ಲೇ ಗೋಂಕ್ರಕಪ್ಪೆಯನ್ನು ಓಡಿಸಿಕೊಂಡು ತೆರೆದ ಬಾಗಿಲಿನಿಂದ ಮನೆಯೊಳಗೆ ನುಗ್ಗುತ್ತಿತ್ತು. ಕಪ್ಪೆ ಕುಪ್ಪಳಿಸಿ ಹಾರಿದಲ್ಲಿಗೆಲ್ಲಾ ಇದರ ಸವಾರಿ! ಜಗಲಿ, ಚಾವಡಿ, ಅಡುಗೆಮನೆ, ಬಚ್ಚಲು… ಅಬ್ಬಾ! ಆಗ ನಮಗೆ ಮಕ್ಕಳಿಗಂತೂ ಭಯದಿಂದ ಜೀವ ನಡುಗುತ್ತಿತ್ತು. ಅಜ್ಜಿ ದೊಡ್ಡದೊಂದು ಬಡಿಗೆ ಹಿಡಿದು ಹಂಯ್ಸಾರ(ಕೇರೆ)ವನ್ನು ಹೆದರಿಸಿ ಓಡಿಸುತ್ತಿದ್ದರು. ಓಡುವುದೂ ಹಾಗೇ; ‘ಸುಂಯ್’ ಎಂದು ಮಾರುದ್ದದ ದೇಹವನ್ನು ಹೊತ್ತುಕೊಂಡು ಕ್ಷಣಮಾತ್ರದೊಳಗೆ ಜಾಗ ಖಾಲಿ ಮಾಡುತ್ತಿತ್ತು. ತಪ್ಪಿಸಿಕೊಂಡ ಗೋಂಕ್ರಕಪ್ಪೆ ಮಾತ್ರ ಮತ್ತಷ್ಟು ತಣ್ಣಗಾಗಿ ಹೆದರಿಕೆಯಿಂದ ಬೆಂಚಿನಡಿಯೋ, ಮೇಜಿನಡಿಯೋ ಕುಳಿತಿರುತ್ತಿತ್ತು. ಇದಲ್ಲದೆ ಚಪ್ಪರಕ್ಕೆ ಹತ್ತಿ, ಅಲ್ಲಿಂದ ಕಿಟಕಿಯ ಮೂಲಕ ಅಥವಾ ಮಾಡಿನ ದಾರಿಯಾಗಿ ಅಟ್ಟವನ್ನು ಸೇರಿ ಇಲಿಗಳಿಗಾಗಿ ಅಲೆಯುವುದೂ ಇತ್ತು ಈ ಠೊಣೆಯ ಹಂಯ್ಯಾರ. ನಾವು ಉಪ್ಪರಿಗೆಯಲ್ಲಿ ಮಲಗಿದ್ದಾಗ ಒಮ್ಮೊಮ್ಮೆ ಮಾಡಿನಲ್ಲಿ ಅದು ಬಿಟ್ಟುಹೋದ ಪೊರೆಯನ್ನು ಕಂಡು ಗಾಬರಿ ಬೀಳುತ್ತಿದ್ದೆವು. ಆಗ ಅಜ್ಜಿ ಸಮಾಧಾನಿಸುತ್ತಾ “ಅದ್ ಹಂಯ್ಸಾರ್ ಹಾವಿನ್ ಪೊರಿ ಮಕ್ಳೇ. ಎಂತದೂ ಆತಿಲ್ಲೆ, ಹಂಯ್ಸಾರ ಕಚ್ಚುದಿಲ್ಲೆ, ಮನಿಕಣಿ ಕಾಂಬ” ಎನ್ನುತ್ತಿದ್ದರು. ಅರೆಹೆದರಿಕೆಯಿಂದ ಮುಸುಕು ಹಾಕಿ ಮಲಗಿ ಹಾಗೆ ನಿದ್ದೆ ಮಾಡಿಬಿಡುತ್ತಿದ್ದೆವು. ವಿಷದ ಹಾವುಗಳು, ಚೇಳುಗಳು ಮುಂತಾದವು ಬೆಕ್ಕಿನ ವಾಸನೆಗೆ ಮನೆಯೊಳಗೆ ಬರುವುದಿಲ್ಲ ಎಂದು ಕೂಡಾ ಅಜ್ಜಿ ಹೇಳುತ್ತಿದ್ದರು. ಈ ಎಲ್ಲ ಕಾರಣಗಳಿಗಾಗಿ ಹಳ್ಳಿಯ ಮನೆಗಳಲ್ಲಿ ಬೆಕ್ಕು ಅಗತ್ಯ. ಆದರೆ ಒಂದೊಂದು ಸಮಯ, ಎಷ್ಟೇ ಮರಿಗಳನ್ನು ತಂದು ಸಾಕಿದರೂ ಏನಾದರೊಂದು ಕಾಯಿಲೆಯಾಗಿ ಸಾಯುತ್ತಿದ್ದವು. ತುಂಬಾ ಮುತುವರ್ಜಿವಹಿಸಿ ಅವುಗಳನ್ನು ರಕ್ಷಿಸಿಕೊಳ್ಳಬೇಕಿತ್ತು. ಹಾತೆ, ಮಿಡತೆಗಳನ್ನು ಅತಿಯಾಗಿ ತಿಂದರೂ ಬೆಕ್ಕಿನ ಮರಿಗಳು ಸಾಯುತ್ತವೆನ್ನುವುದು ನಂಬಿಕೆಯಾಗಿತ್ತು. ಅದಲ್ಲದೆ ಗುಮ್ಮಗಳು ಕೂಡಾ ಬೆಕ್ಕಿನ ಮರಿಗಳನ್ನು ಹೊತ್ತೊಯ್ಯುತ್ತಿದ್ದವು. ಈ ಮರಿಗಳು ಕತ್ತಲಲ್ಲಿ ತೋಟದ ಕಡೆ ಹೋದಾಗ ಅವುಗಳ ಕಣ್ಣು ಕುಕ್ಕಿ ಸಾಯಿಸಿ ಎತ್ತಿಕೊಂಡು ಹೋಗುತ್ತವೆ ಎನ್ನುತ್ತಿದ್ದರು. ಹಾಗೆ ಗುಮ್ಮ ಕಣ್ಣು ಕುಕ್ಕಿದಾಗ ತಪ್ಪಿಸಿಕೊಂಡು ಬಂದ ಕುರುಡು ಮರಿಗಳೂ ಆಗ ಕಾಣಲು ಸಿಗುತ್ತಿದ್ದವು! ಇಂತಹಾ ಗುಮ್ಹಕ್ಕಿಯ ಕುರಿತು ಜನರಿಗೆ ಆದರವೇನೂ ಇರಲಿಲ್ಲ. ಭಯ ಮತ್ತು ತಿರಸ್ಕಾರವಂತೂ ಬೇಕಷ್ಟಿತ್ತು. ಅಳುವ ಮಕ್ಕಳನ್ನು ಹೆದರಿಸಲು ಮಾತ್ರ ಗುಮ್ಮನ ಸಹಾಯವನ್ನು ಧಾರಾಳವಾಗಿ ತೆಗೆದುಕೊಳ್ಳುತ್ತಿದ್ದರು!

(ನತ್ತಿಂಗ)

ಅಜ್ಜಿ ಒಂದು ಘಟನೆಯನ್ನು ಆಗಾಗ ಹೇಳುತ್ತಿದ್ದರು. ಒಂದು ಸಲ ಅವರೊಬ್ಬರೇ ಮನೆಯಲ್ಲಿದ್ದ ಅಮಾವಾಸ್ಯೆ ರಾತ್ರಿಯಲ್ಲಿ ಗುಮ್ಮವೊಂದು ಮನೆಗೆ ತಾಗಿಕೊಂಡೇ ಇದ್ದ ತೆಂಗಿನಮರದಲ್ಲಿ ಕುಳಿತು ಕೂಗಿತ್ತಂತೆ! ಅದರ ನಿಗೂಢ ದನಿಯಿಂದಾದ ಕಸಿವಿಸಿ ಒಂದು ಕಡೆ, ಮನೆಯ ಮೇಲೇ ಬಂದು ಕುಳಿತರೆ ಏನು ಮಾಡುವುದು ಎಂಬ ಚಿಂತೆ ಇನ್ನೊಂದೆಡೆ. ಒಂದು ಕ್ಷಣ ದಿಕ್ಕೇ ತೋಚದಂತಾಗಿತ್ತು. ಗುಮ್ಹಕ್ಕಿ ಮನೆ ಮೇಲೆ ಕುಳಿತು ಕೂಗಿದರೆ ಅಪಶಕುನ, ಆ ಮನೆಯನ್ನೇ ಬಿಟ್ಟುಹೋಗಬೇಕೆಂಬ ನಂಬಿಕೆ ಆಗ ಚಾಲ್ತಿಯಲ್ಲಿತ್ತು. ಹಾಗೆಯೇ ಆದರೆ, ಮನೆ ಬಿಟ್ಟು ಹೋಗುವುದಾದರೂ ಎಲ್ಲಿಗೆ ಎಂಬುದು ಅಜ್ಜಿಯ ಸಂಕಟ. ಕಡೆಗೆ ಎಂತಾದರೂ ಆಗಲಿ, ಯಾವುದಕ್ಕೂ ಹೆದರುವುದಿಲ್ಲ. ಮನೆಯನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಿ ರಾತ್ರಿಯನ್ನು ಕಳೆದರಂತೆ! ಈ ಕತೆ ಕೇಳುವಾಗ ಗಟ್ಟಿ ಗುಂಡಿಗೆಯ ಅಜ್ಜಿಯನ್ನೂ ಒಂದು ಗಳಿಗೆ ಹೆದರಿಸಿದ ಗುಮ್ಮನ ಬಗ್ಗೆ ಏನೋ ಅಭಿಮಾನ, ಕೌತುಕ ಒಳಗಿನಿಂದ ಉಕ್ಕುತ್ತಿತ್ತು! ಇಂತಹಾ ನಾನು, ಮೊದಮೊದಲು ‘ಗುಮ್ಮನ ಚಿತ್ರ ಬಿಡಿಸುʼ ಎಂದೊಡನೆ ದ್ವಾಳ್ ಕಣ್ಣಿನ ಮುಸುಕುಧಾರಿ ಮನುಷ್ಯನ ಆಕೃತಿ ಬರೆಯುತ್ತಿದ್ದೆ. ಅದೊಂದು ಹಕ್ಕಿಯಷ್ಟೇ ಎಂದು ತಿಳಿದುಕೊಳ್ಳಲು ತುಸು ಸಮಯವೇ ಹಿಡಿಯಿತು! ಆಮೇಲೆ ಗೂಬೆಯೆಂದರೆ ಭಯದ ಜಾಗದಲ್ಲಿ ಕುತೂಹಲ ಬಂತು ಕುಳಿತಿತು.

ಅಮ್ಮನ ಹದಿಹರೆಯ ಕಳೆದದ್ದು ‘ಅಬ್ಲಿಕಟ್ಟೆ’ ಎಂಬ ಊರಿನಲ್ಲಿ. ಮುದೂರಿಗೆ ಏಳೆಂಟು ಮೈಲಿಗಳಷ್ಟೇ ದೂರವಿರುವ ಆ ಊರಲ್ಲೂ ಕಾಡು-ಗುಡ್ಡಗಳು. ಅಬ್ಲಿಕಟ್ಟೆಯ ಸಮೀಪ ‘ಗುಮ್ಹೊಲ’ ಎಂಬ ದಟ್ಟಕಾಡು ಇತ್ತು ಎಂದು ನನ್ನ ಬಾಲ್ಯದಲ್ಲಿ ಅಜ್ಜಿ, ಅಮ್ಮ ಮತ್ತು ಮನೆಗೆ ಬಂದ ನೆಂಟರಿಷ್ಟರೆಲ್ಲ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿರುವೆ. ಗುಮ್ಹೊಲ; ದೊಡ್ಡ ಗಾತ್ರದ ಮರಗಳು, ಬಿಳಲು-ಬಲ್ಲೆಗಳು, ಸಣ್ಣ ಸಣ್ಣ ಝರಿಗಳಿಂದ ಕೂಡಿದ ಕತ್ತಲೆ ಕಾಡಂತೆ. ಅನೇಕ ದೊಡ್ಡ ಪ್ರಾಣಿಗಳೂ, ಚಿತ್ರಿವಿಚಿತ್ರ ಪಕ್ಷಿಗಳೂ ಇದ್ದುವಂತೆ. ಅಲ್ಲಿ ಹಗಲು ಹೊತ್ತಿಗೇ ಗುಮ್ಮಗಳು ಕೂಗುತ್ತವೆ ಎಂಬ ಮಾತುಗಳನ್ನು ಅಜ್ಜಿ, ಅಮ್ಮ ಹೇಳುತ್ತಿದ್ದರು. ಹಾಗಾಗಿಯೇ ಅದಕ್ಕೆ ‘ಗುಮ್ಹೊಲ’ ಎಂಬ ಹೆಸರು ಬಂದಿರಬೇಕು. ಈ ಕಾಡಿನಿಂದ ತುಸು ದೂರದಲ್ಲೇ ಜೋಮ್ಲಿ ಜಲಪಾತ. ‘ಜೋಂಬೇರಿ’ ಅಂತ ಮೊದಲಿದ್ದ ಹೆಸರು ಕ್ರಮೇಣ ಜೋಮ್ಲಿ ಆಯಿತಂತೆ. ಎಳ್ಳಮವಾಸ್ಯೆ ದಿನ ಸುತ್ತಮುತ್ತಲಿನ ಜನರು ಅಲ್ಲಿಗೆ ತೀರ್ಥಸ್ನಾನಕ್ಕೆ ಹೋಗುತ್ತಿದ್ದರು. ಅಮ್ಮ ತನ್ನ ಚಿಕ್ಕಮ್ಮನೊಂದಿಗೆ ಪ್ರತಿ ವರ್ಷವೂ ಜೋಮ್ಲಿಗೆ ಹೋಗುತ್ತಿದ್ದರಂತೆ. ಸ್ನಾನ, ವನಭೋಜನ ಮಾಡಿ ಗುಮ್ಹೊಲವನ್ನು ನೋಡಲು ಧಾವಿಸುತ್ತಿದ್ದರಂತೆ. ಅಂತಹ ದಟ್ಟ ಕಾಡು ಸುತ್ತೆಲ್ಲೂ ಇರಲಿಲ್ಲ… ಹಾಗೇ ಅಲ್ಲಿಂದ ಮುಂದೆ ಹೋದರೆ ತೆಂಕ್ಹೊಲ ಎಂಬ ಇನ್ನೊಂದು ಕಾಡಿತ್ತು. ಅದೇ ದಾರಿಯಲ್ಲಿ ಹತ್ತು ಹನ್ನೆರಡು ಮೈಲಿ ನಡೆದರೆ ‘ಕಬ್ಬಿನಾಲೆ’ ಎಂದ ದಟ್ಟ ಮಲೆನಾಡಿನ ಊರು ಸಿಗುತ್ತದೆ. ಆಗೆಲ್ಲ ಕಾಡಿನ ನೆರಳಲ್ಲಿ ನಡೆದೇ ನೆಂಟರ ಮನೆಗೆ ಹೋಗುತ್ತಿದ್ದೆವು ಎಂದು ಹೇಳುವ ಅಮ್ಮ ‘ಗುಮ್ಹೊಲ’ ಎಂಬ ಆ ದೊಡ್ಡ ‘ಹೊಲ’ ಅರ್ಥಾತ್ ಕಾಡು ನಾಶಗೊಂಡ ಬಗೆಯನ್ನು ಹೇಳುತ್ತಾರೆ. ಐವತ್ತರ ದಶಕದ ಕೊನೆಯ ಭಾಗದಲ್ಲಿ ಶಾಲೆ, ಆಸ್ಪತ್ರೆ, ಅನಾಥಾಲಯ ಮುಂತಾದವುಗಳನ್ನು ಕಟ್ಟುವ ಸಲುವಾಗಿ ಆ ಅರಣ್ಯವನ್ನು ಕಡಿದು ಹಾಕಲಾಯಿತಂತೆ! ಅಂಥಹಾ ಗುಮ್ಹೊಲವನ್ನು ಕಡಿಯುತ್ತಿರುವ ಸುದ್ದಿ ತಿಳಿದ ಅಕ್ಕಪಕ್ಕದ ಊರಿನ ಗ್ರಾಮಸ್ಥರು ಹೋಗಿ ನೋಡಿ ಬಂದು ನಿಡುಸುಯ್ದು ವರ್ಣಿಸುತ್ತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿನ ಜೀವಾದಿಗಳಲ್ಲಿ ಕೆಲವು ತಪ್ಪಿಸಿಕೊಂಡಿರಬಹುದು. ಇನ್ನು ಅನೇಕ ಪ್ರಾಣಿ, ಪಕ್ಷಿಗಳು, ಸರೀಸೃಪಗಳು ನರಳಿ ಜೀವ ಬಿಟ್ಟಿರಬೇಕು. ಅಲ್ಲಿನ ಗುಮ್ಮಗಳು ಮೊಟ್ಟೆ ಮರಿಗಳನ್ನು ಕಳೆದುಕೊಂಡು, ಜೀವ ಉಳಿಸಿಕೊಳ್ಳುವ ಸಲುವಾಗಿ ಸಮೀಪದ ತೆಂಕ್ಹೊಲಕ್ಕೆ ಹಾರಿ ಹೋದವೋ ಏನೋ! ಹೀಗೆ ಹಗಲು ಹೊತ್ತಿನಲ್ಲೂ ಗುಮ್ಮಗಳು ಕೂಗುತ್ತಿದ್ದ ಕತ್ತಲೆ ಕಾಡೊಂದರ ಅಂತ್ಯ ಮತ್ತು ‘ಗುಮ್ಹೊಲ’ ಎಂಬ ಆ ಹೆಸರು ಕಾಡುತ್ತಿರುತ್ತದೆ.

ಗುಮ್ಹಕ್ಕಿಯಂತೆಯೇ ನನ್ನನ್ನು ಬಹಳ ಕಾಡುವ ಇನ್ನೊಂದು ಇರುಳ ಹಕ್ಕಿಯಿದೆ. ಮುದೂರಿಯ ನಮ್ಮ ಮನೆಯ ಶಾಂತ ರಾತ್ರಿಯ ಮೊದಲ ಪಾದದಲ್ಲಿಯೇ ಇದರ ಕೂಗು ಆರಂಭವಾಗುತ್ತದೆ. ಕೊಳದ ನೀರಿಗೆ ಕಲ್ಲು ಹಾಕಿದಂತೆ ಕೇಳುವ ಆ ಕೂಗು ನನ್ನನ್ನು ಯಾವುದೋ ವಿಚಿತ್ರ ನೆಮ್ಮದಿಗೆ ಒಯ್ಯುತ್ತದೆ. ಇಲ್ಲಿ ನಾವಿರುವಲ್ಲಿ ಕೂಡಾ ಸಂಜೆಯಿಳಿದ ನಂತರದ ನಡಿಗೆಯಲ್ಲಿ ಈ ಹಕ್ಕಿಯ ಮೊಳಗು ಕೇಳಿ ರೋಮಾಂಚನಗೊಂಡಿದ್ದಿದೆ. ಅಪರೂಪಕ್ಕೆ ಒಮ್ಮೊಮ್ಮೆ ಬೆಳಿಗ್ಗೆ ಒಂಬತ್ತು, ಹತ್ತು ಗಂಟೆಯ ಹೊತ್ತಿಗೂ ಕೂಗುತ್ತಿರುತ್ತದೆ! ಇದೇ ‘ನತ್ತಿಂಗ’ ಅಥವಾ ‘ಕುರುಡುಗುಪ್ಪಟೆʼ, ‘ನೈಟ್‍ಜಾರ್ʼ ಎಂದು ತಿಳಿದಾಗ ವಿಸ್ಮಯವೆನಿಸಿತು. ಮುಂಜಾನೆ ಮತ್ತು ಮುಸ್ಸಂಜೆಗಳಲ್ಲಿ ಗಂಟೆಗಟ್ಟಲೆ ಲಯಬದ್ಧವಾಗಿ ಕೂಗುವ ಈ ಹಕ್ಕಿಯ ನಾದ ಬಹಳ ಚಂದ. ನೆಲಕ್ಕೆ ಹತ್ತಿರದ ಪುಟ್ಟ ಪೊದೆಗಳಲ್ಲಿ ಓಡಾಡುವ ಕೆಂಪುಕಣ್ಣಿನ ಹಕ್ಕಿಯಿದು. ಹಳ್ಳಿ ಅಥವಾ ಸಣ್ಣ ಊರುಗಳಲ್ಲಿ ವಾಸಿಸುವ ಬಹುತೇಕರು ಇದರ ಗಾನವನ್ನು ಕೇಳಿರುತ್ತಾರಾದರೂ ಹೆಸರು ತಿಳಿದಿರುವುದಿಲ್ಲ.

ಬಾಲ್ಯದಿಂದಲೂ ಧ್ಯಾನ ಸ್ಥಿತಿಗೆ ಒಯ್ದ ಈ ಹಕ್ಕಿಯ ಹೆಸರು ನನಗೆ ಗೊತ್ತಾದದ್ದೂ ಇತ್ತೀಚೆಗೆ. ಹಾಗಾಗಿ ನತ್ತಿಂಗ ನನ್ನ ಪಾಲಿಗೆ ಅನಾಮಿಕ ಬಂಧು!