1.

ಒಂದು ಚಿಕ್ಕ ಆಕಾಶವನ್ನು
ಎದೆಗದ್ದೆಯ ತುಂಬ ಬಿತ್ತಲಾಯಿತು

ದಿನ ಕಳೆದರೆ
ಮಳೆ ಬೊಬ್ಬೆ ಹೊಡೆಯಿತು.
ಚಿಟ್ಟೆಗೆ
ಅರಲು ಕಾಲಿನ ಹಜ ಅಚ್ಚಾಯಿತು

ಯಾವುದೋ ಅಪರಿಚಿತ
ಬಿಸಿಲಲ್ಲಿ
ಗಿಳಿಹಿಂಡು ಬಂದು
ಫಸಲಿನ ಎಜ್ಜೆಜ್ಜೆಯಲ್ಲಿ ಹೊಕ್ಕು …

ಕ್ಯಾಲೆಂಡರಿನ ಹಾಳೆಗಳು‌ ಮಡಚಿಹೋದವು

ಮೂರು ತಿಂಗಳಿಗೆ
ರಾತ್ರಿಯಿಡೀ ನಿದ್ದೆಗೆಟ್ಟು
ಒಟ್ಟು ನಾಕು ಸಲ ಚಾಕುಡಿದು
ಕುತ್ರಿ ವಕ್ಕಲಾಯಿತು.

ಇದೀಗ
ಅದೇ ಗದ್ದೆಯ
ಅನ್ನ ಉಂಡು
ನಿದ್ದೆಯ ಸೆಲ್ಪಿ ತೆಗೆದುಕೊಳ್ಳುತ್ತ
ನಾನು
ಆಕಾಶವೇ ಆಗಿಹೋಗಿದ್ದೇನೆ

ಕ್ಷಮಿಸಿಬಿಡಿ,ಇದು
ಸುಳ್ಳೂ ಆಗಿರಬಹುದು.
ಅಥವಾ…

ಟಿಪ್ಪಣಿ:
ಅರಲು ಕಾಲಿನ ಹಜ:ಮಣ್ಣು ಮೆತ್ತಿದ ಕಾಲಿನ ಹೆಜ್ಜೆಗುರುತು. ಹೆಜ್ಜೆಗೆ ನಮ್ಮೂರ ಹಿರಿಕರು ‘ ಹಜ’ ಎನ್ನುತ್ತಾರೆ.
ಫಸಲಿನ ಎಜ್ಜೆಜ್ಜೆಯಲ್ಲಿ ಹೊಕ್ಕು: ಭತ್ತದ ಫಸಲಿನ ಮೂಲೆಮೂಲೆಗೂ ಹೊಕ್ಕಿ..
ಕುತ್ರಿ ವಕ್ಕಲಾಯಿತು: ಭತ್ತ ಬೆಳೆದು, ಕೊಯ್ದು ಒಂದೆಡೆ ಗುಪ್ಪೆ ಹಾಕುವುದಕ್ಕೆ ಉತ್ತರಕನ್ನಡದಲ್ಲಿ ಕುತ್ರಿ ಎಂದು ಕರೆಯುತ್ತಾರೆ ನಿಗದಿಪಡಿಸಿದ ರಾತ್ರಿ ಗಿಡದಿಂದ ಭತ್ತವನ್ನು ಬೇರ್ಪಡಿಸುವುದಕ್ಕೆ ಸಾಮಾನ್ಯವಾಗಿ ಕುತ್ರಿ ವಕ್ಕುವುದು ಎನ್ನುವುದು ರೂಢಿ.

 

 

 

 

 

 

2.

ಓ ದೇವರೇ
ಒಮ್ಮೆ ಇಲ್ಲೊಮ್ಮೆ
ಬಂದುಹೋಗು

ನೋಡು,
ರಾತ್ರಿ ಬೀಸಿದ ಗಾಳಿಗೆ
ದೇವಸ್ಥಾನದ ಛಾವಣಿ
ಕುಸಿದು
ನಿನ್ನ ಪ್ರತಿಮೆಯ ಮೇಲೆ
ಮಳೆ
ಕಣ್ಣುಮುಚ್ಚಿ ಹೊಯ್ಯುತ್ತಿದೆ

ದಿನನಸುಕಿಗೆ
ಮೀಯಿಸಿ ಗಂಧ ಕುಂಕುಮ ಹಚ್ಚಿ
ನಂಜಾಟ್ಳೆ ದಾಸವಾಳ ಮತ್ತೆಂಥದೋ
ಹೂವಿಟ್ಟು
ಮಣಮಣ ಮಂತ್ರ ಹೇಳಿ
ಎರಡು ಪಾವಕ್ಕಿ ಅನ್ನ ನೈವೇದ್ಯ ಮಾಡಲು
ಯಾರೂ ಸಿಗುತ್ತಿಲ್ಲ ಮಾರಾಯನೇ.

ಬೇಗ ಇಲ್ಲೊಮ್ಮೆ ಬಾ
ದೇವರೆ
ಹೇಳಲು ಇನ್ನೂ ಸಾಕಷ್ಟಿದೆ
ತಡಮಾಡಬೇಡ
ಮತ್ತೆ
ಯಾರಿಗೂ ಹೇಳಬೇಡ
ನಾನು ಹೀಗೆಲ್ಲ ಹೇಳಿದ್ದ
ಆಯಿತಾ?
ಪುರುಸೊತ್ತು ಮಾಡಿಕೊಂಡು
ಒಮ್ಮೆ ಬಾರಪ್ಪಾ ( ಸ್ವಲ್ಪ ಅರ್ಜೆಂಟಿದೆ)

 

ಉತ್ತರಕನ್ನಡದ ಯಲ್ಲಾಪುರದ ಗುರುಗಣೇಶ ಭಟ್ ಡಬ್ಗುಳಿ, ಸದ್ಯ ಮೂರನೇ ವರ್ಷದ ಬಿ.ಎ ಪತ್ರಿಕೋದ್ಯಮದ ವಿದ್ಯಾರ್ಥಿ. ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿ.