ಮಲೀಕ ಮಾತಾಡಲಿಲ್ಲ. ಆಕೆಯನ್ನು ಸೆಳೆದುಕೊಂಡ. ತುಟಿಗೆ ತುಟಿ ಸೇರಿಸಿದ. ಇವನ ತುಟಿಗಳ ಕೊಂಕೋ, ಆಕೆಯ ಕೃತಕ ತುಟಿ ಕಳೆದುಕೊಂಡಿದ್ದ ತೇವವೋ, ಮುತ್ತಿಗೊಂದು ಸತ್ವವಿರಲಿಲ್ಲ, ಸೆಳೆತವಿರಲಿಲ್ಲ. ಸ್ಥಿತಿಸ್ಥಾಪಕತ್ವ ಕಳೆದುಕೊಂಡ ರಬ್ಬರಿನ ಬೊಂಬೆಯ ತುಟಿಯನ್ನು ಚುಂಬಿಸಿದಂತಾಯಿತು, ಮಲೀಕನಿಗೆ.  ಆಕೆ ಮುತ್ತಿನಿಂದಲೇ ಮಲೀಕನನ್ನು ದೂರಸರಿಸುವುದಕ್ಕೆ ಪ್ರಯತ್ನಿಸಿದಳು. -ದೇಹ ಸೌಂದರ್ಯದ ಜಿಜ್ಞಾಸೆಯನ್ನು ಕುರಿತು ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿ ‘ಕಾಯಾ’ ದಿಂದ ಆಯ್ದ ಒಂದು ಅಧ್ಯಾಯ ನಿಮ್ಮ ಓದಿಗಾಗಿ. 

 

ಪಕ್ಕದಲ್ಲಿ ನಲವತ್ತು ಪೌಂಡಿನ ಗುಂಡುಕಲ್ಲು ಹಾಕಿದರೂ ಹೊಟ್ಟೆಯಲ್ಲಿರುವ ವಿಸ್ಕಿಯಲ್ಲಿ ಒಂದು ತೊಟ್ಟೂ ತುಳುಕದ ಸ್ಲೀಪ್ ನಂಬರ್ ಬೆಡ್ಡಿನ ಮೇಲೆ ಬರೇ ಕಾಲ್ವಿನ್ ಕ್ಲೈನ್ ಅಂಡರ್ವೇರ್ ಹಾಕಿ, ಮಾರ್ಲ್‌ಬೋರೋ ಲೈಟ್ಸಿನ ಧೂಮವನ್ನೂದುತ್ತಾ ಮಲೀಕ ಅಡ್ಡಾಗಿದ್ದ. ಪಕ್ಕದ ಹಾಸಿಗೆಯ ಮೇಲೆ ಆ ಹಾಸಿಗೆ ತಯಾರಿಸಿದ ಕಂಪೆನಿಯವರ ಜಾಹೀರಾತಿಗೆ ಪುರಾವೆಯೊದಗಿಸುವಂತೆ ಆರು ವರ್ಷದ ಮಗು ನೆಗೆದಂತೆ ನೆಗೆದಾಡುತ್ತಿದ್ದಳು, ಸ್ಯಾಮ್ ಅಥವಾ ಸಮಾಂತಾ ಅಥವಾ ಶಮಂತಕಾ. ಅದು ಸ್ಲೀಪ್ ನಂಬರ್ 365 ಹಾಸಿಗೆ. ಮಲಗಿದ್ದ ವ್ಯಕ್ತಿಯ ಪಕ್ಕದಲ್ಲಿ ನಿಜವಾದ ಗುಂಡುಕಲ್ಲನ್ನು ಹಾಕಿದರೂ ವ್ಯಕ್ತಿಯ ಕೂದಲು ಕೂಡ ಮಿಸುಕದೇ ಸ್ವಸ್ಥ ನಿದ್ದೆ ಮಾಡುತ್ತಾನೆಂಬುದು ಕಂಪೆನಿಯವರ ಜಾಹೀರಾತು.

ಮಲೀಕ ಆಕೆಯ ತುಯ್ದಾಟವನ್ನು ನೋಡುತ್ತಿದ್ದ. ಹಾಸಿಗೆಯ ಪಕ್ಕದಲ್ಲಿ ಸಮಾಂತಾ ಒಂದು ನಿಜವಾದ ಟ್ರಾಂಪಲೀನನ್ನಿಟ್ಟುಕೊಂಡಿದ್ದಳು. ಸ್ಲೀಪ್ ನಂಬರ್ ಹಾಸಿಗೆಯ ಮೇಲಿನ ಆ ಪುಟಿದೇಳುವಿಕೆ ಸಾಕಾಗಲಿಲ್ಲವೇನೋ, ಟ್ರಾಂಪಲೀನಿಗೆ ಹಾರಿದಳು.

ಹೇಗಿದ್ದಳು, ನಾನು ಮೂರುವರ್ಷದ ಹಿಂದೆ ನೋಡಿದಾಗ, ತಾನು ಆಪರೇಷನ್‌ಗೆ ಮೊದಲು, ಆಪರೇಷನ್ ನಂತರ ಎಂದು ಚಿತ್ರಗಳನ್ನು ತೆಗೆದಿಟ್ಟುಕೊಳ್ಳಬೇಕಾಗಿತ್ತು. ಲಕ್ಷಣವಾಗಿದ್ದಳು, ನಿಜ. ಆದರೆ ಎಲ್ಲವೂ ನಾಲ್ಕು ಸುತ್ತು ಹೆಚ್ಚು. ಪ್ಲಾಸ್ಟಿಕ್ ಸರ್ಜನನ ಚಾಕುವಿಗೆ ಇಂತ ದೇಹ ಸಿಕ್ಕರೆ, ವಿಗ್ರಹ ಮಾಡುವವನ ಕೈಗೆ ಜೇಡಿಮಣ್ಣು ಸಿಕ್ಕ ಹಾಗೆ, ಬೇಕಾದ ಹಾಗೆ ಎರಕ ಹುಯ್ಯಬಹುದು. ಎಲ್ಲೆಡೆ ತುಂಬಿಕೊಂಡ ಅಂಗಾಂಗಗಳು. ಈತ ಬೇಕಾದ ಹಾಗೆ ಅಚ್ಚಿಳಿಸಿದ್ದ.

ಮೂರುವರ್ಷದ ಹಿಂದೆ ಹೀಗೆ ಟ್ರಾಂಪಲೀನಿನ ಮೇಲೆ ಹಾರಿದ್ದರೆ ಹೀಗೆ ಮೇಲೆ ಪುಟಿದೇಳಲು ಸಾಧ್ಯವಿತ್ತೇ? ಟ್ರಾಂಪಲೀನು ಮುರಕೊಂಡು ಬೀಳುತ್ತಿತ್ತು.

(ಗುರುಪ್ರಸಾದ್ ಕಾಗಿನೆಲೆ)

ಆ ಹಣೆ, ಆ ಹುಬ್ಬುಗಳು, ಕೆನ್ನೆ, ತುಟಿ, ಕತ್ತು, ಮೊಲೆಗಳು, ಹೊಟ್ಟೆ, ತೊಡೆ, ಕಾಲ್ಬೆರಳುಗಳು, ಪೃಷ್ಠದ ಗೋಲಾಕಾರ- ಎಲ್ಲ ತನ್ನ ಸೃಷ್ಟಿ. ಹೆಮ್ಮೆಯೆನಿಸಿತು. ಬ್ರಹ್ಮ ಆ ಸರಸ್ವತಿಯನ್ನು ಸೃಷ್ಟಿಸಿ ಆಕೆಯನ್ನು ಮದುವೆಯನ್ನೂ ಮಾಡಿಕೊಂಡನಂತೆ. ನಾನೂ ಹಾಗೆಯೇ ಆ ಸೃಷ್ಟಿಕರ್ತನಿಗೇ ಸಡ್ಡುಹೊಡೆಯುವ ಮರುಸೃಷ್ಟಿಯನ್ನು ಸೃಷ್ಟಿಸಿದ್ದೇನೆ. ನನಗೆ ಬೇಕಾದ ಹಾಗೇ ಎಂದು ನಕ್ಕ.

ಆದರೆ ಆಕೆ ಜತೆಯಲ್ಲಿರುವ ಕಳೆದ ಒಂದು ವರ್ಷದಲ್ಲಿ ಈ ಟ್ರಾಂಪಲೀನಿನ ಮೇಲಿನ ಆಕೆಯ ಜಿಗಿತ ಆತನಿಗೆ ಬಹಳ ಕಾರಣಗಳಿಂದ ಆಡಲಾಗದ, ಅನುಭವಿಸಲಾಗದ ಒದ್ದಾಟ. ಕಾರಣ ಹಲವಾರು. ಆದರೆ ಕುಣಿಯುವುದನ್ನು ನೋಡದಿರಲಾದೀತೇ, ಸುಮ್ಮನೇ ಆಕೆಯನ್ನೇ ನೋಡುತ್ತಿದ್ದ.

ಲೀಸಾಳ ದೂರು ನೆನಪಿಗೆ ಬಂತು. ಆಕೆಯ ಕೃತಕ ಮೊಲೆಗಳು ತೊನೆದಾಡು ವುದಿಲ್ಲವಂತೆ, ಬ್ರಾ ಹಾಕದೇ ಜಾಗಿಂಗ್ ಹೋದರೂ ಹಾಗೇ ನಿಂತಿರುತ್ತಂತೆ. ತೊನೆದಾಡಬೇಡವೆಂದೇ ಅಷ್ಟಷ್ಟು ಪ್ಯಾಡುಕೊಟ್ಟುಕೋತಾರೆ, ವಿಧವಿಧದ ಸ್ಪೋರ್ಟ್ಸ್‌ ಬ್ರಾ ಹಾಕಿಕೋತಾರೆ ಈ ಹೆಂಗಸರು.
ಪಕ್ಕದಲ್ಲೊಮ್ಮೆ ನೋಡಿದ. ಶಮಂತಕಾ ಕೂಡ ಮೂರಡಿ ಹಾರುತ್ತಿದ್ದರೂ ತಾನು ಸೃಷ್ಟಿಸಿದ್ದ ಯಾವಂಗವೂ ತನ್ನಂತಾನೇ ಅಲ್ಲಾಡುತ್ತಿರಲಿಲ್ಲ. ಏಕಶಿಲಾ ವಿಗ್ರಹದಂತೆ, ಬಟ್ಟೆಯಂಗಡಿಯ ಬೆತ್ತಲೆ ಬೊಂಬೆಯಂತೆ ಮೇಲಿಂದ ಕೆಳಗಿನತನಕ ಒಂದೇ ತೊನೆದಾಟ, ಒಂದೇ ತುಯ್ದಾಟ. ಒಂದೇ ಕುಣಿದಾಟ. ಮೂಟೆಯೊಳಗೆ ಜೋಳ ಪೇರಿಸಿ ಒತ್ತಟ್ಟು ಮಾಡಿದಂತೆ.

ಕುಣಿದದ್ದು ಸುಸ್ತಾಯಿತೇನೋ, ಪಕ್ಕ ಬಂದಳು. ಆ ಕಡೆ ತಿರುಗಿ ಮಲಗಿದಳು.

ಮಲೀಕ ಮಾತಾಡಲಿಲ್ಲ. ಆಕೆಯನ್ನು ಸೆಳೆದುಕೊಂಡ. ತುಟಿಗೆ ತುಟಿ ಸೇರಿಸಿದ. ಇವನ ತುಟಿಗಳ ಕೊಂಕೋ, ಆಕೆಯ ಕೃತಕ ತುಟಿ ಕಳೆದುಕೊಂಡಿದ್ದ ತೇವವೋ, ಮುತ್ತಿಗೊಂದು ಸತ್ವವಿರಲಿಲ್ಲ, ಸೆಳೆತವಿರಲಿಲ್ಲ. ಸ್ಥಿತಿಸ್ಥಾಪಕತ್ವ ಕಳೆದುಕೊಂಡ ರಬ್ಬರಿನ ಬೊಂಬೆಯ ತುಟಿಯನ್ನು ಚುಂಬಿಸಿದಂತಾಯಿತು, ಮಲೀಕನಿಗೆ. ಆಕೆ ಮುತ್ತಿನಿಂದಲೇ ಮಲೀಕನನ್ನು ದೂರಸರಿಸುವುದಕ್ಕೆ ಪ್ರಯತ್ನಿಸಿದಳು. ತುಟಿಯ ಹಿಡಿತವನ್ನು ಇನ್ನೂ ಬಿಗಿಗೊಳಿಸಲು ನೋಡಿದ, ಹಿಡಿತ ತಪ್ಪಿ ಕಟವಾಯಿಯಿಂದ ಜೊಲ್ಲು ಜಾರಿತು. ಥತ್ತೇರಿಕಿ ಎಂದು ಬಾಯೊರೆಸಿಕೊಂಡು ಹಾಡಿಗಿಂತ ಶೃತಿಯನ್ನೇಕೆ ಭಾರ ಮಾಡಿಕೋಬೇಕು ಎಂದನಿಸಿ ನೇರವಾಗಿ ಆಕೆಯನ್ನು ಇನ್ನೂ ಹತ್ತಿರ ಎಳಕೊಂಡ. ಶಮಂತಕಾ `ನಾನು’ ಎಂದಳು. ಮೈಯೊಡ್ಡಿ ಒಪ್ಪಿಸಿಕೊಂಡ. ಆಕೆ ಎದ್ದೆದ್ದು ಗೆದ್ದಳು. ಮಲೀಕ ಸೋತಿದ್ದ.

ಮಲೀಕನಿಗೆ ಈಕೆ ಗೆದ್ದಾಗೆಲ್ಲ ತಾನು ಸೋಲುವುದಕ್ಕೆಂದೇ ಈಕೆಯ ಜತೆಯಲ್ಲಿದ್ದೀನೇನೋ ಅನಿಸುತ್ತಿತ್ತು. ಸೋಲುವುದಕ್ಕೂ ಸೋಲೊಪ್ಪಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ ಎಂದು ಬಹಳಬಾರಿ ಆತನಿಗೆ ಅನ್ನಿಸಿದೆ.

ಆಕೆ ಹಾಸಿಗೆಯ ಅಧಿಪತ್ಯ ಸಾಧಿಸಿದಾಗೆಲ್ಲ ಈತನಿಗೆ ಡಬಲ್ಯುಡಬಲ್ಯುಎಫ್ ಕುಸ್ತಿಪಟು ತನ್ನನ್ನು ತೆಗೆದು ತೆಗೆದು ಒಗೆದಂತೆ ಭಾಸವಾಗುತ್ತಿತ್ತು. ಶಿಷ್ಟಾಚಾರದಂತೆ ಸುರತಕ್ರಿಯೆ ತನ್ನೆಲ್ಲ ವಿಸ್ತೃತ ವಿವರಗಳೊಂದಿಗೆ ಮುಗಿದಮೇಲೂ ಈತನಿಗೆ ಮೈಕೈ ನೋವಿನಿಂದ ಸುಧಾರಿಸಿಕೊಳ್ಳಲು ಮೂರುನಾಲ್ಕು ದಿನ ಬೇಕಾಗಿರುತ್ತಿತ್ತು.

ಪರಿ ಬಹಳ ನೆನಪಾದಳು. ಆಕೆಯ ಆದ್ರತೆ, ಮಾರ್ದವತೆ ಅವಳೆಲ್ಲಿ, ಸಮಾಂತಾ ಎಲ್ಲಿ? ಪರಿ ಹಾಸಿಗೆಯಲ್ಲಿ ಈತನನ್ನು ಹೂವರಳಿಸಿದ್ದಂತೆ ಅರಳಿಸುತ್ತಿದ್ದಳು. ಸಮಾಂತಾ ಈತನನ್ನು ಬುಲೆಟ್ ಓಡಿಸಿದಂತೆ ಓಡಿಸುತ್ತಿದ್ದಳು. ಪರಿ ಈತನನ್ನು ಕರಗಿಸಿ ನೀರಾಗಿಸುತ್ತಿದ್ದಳು, ಸಮಾಂತಾ ಓಡಿಸಿ ಬೆವರಿಸುತ್ತಿದ್ದಳು. ಪರಿಯ ಜತೆಯಿದ್ದಾಗ ಈತನ ಹೃದಯ ಮಿಡಿಯುತ್ತಿತ್ತು, ಸಮಾಂತಾ ಇದ್ದಾಗ ಬಡಕೊಳ್ಳುತ್ತಿತ್ತು. ದಿನ, ರಾತ್ರಿಯ ವ್ಯತ್ಯಾಸ. ಹೆಣ್ಣು, ಗಂಡಿನ ವ್ಯತ್ಯಾಸ.

ಸಮಾಂತಾ ಹಿಂದೊಮ್ಮೆ ಬುಚ್, ಲಿಪ್‍ಸ್ಟಿಕ್ ನಡುವಿನ ವ್ಯತ್ಯಾಸ ಗೊತ್ತಿದೆಯಾ ಎಂದು ಕೇಳಿದ್ದು ನೆನಪಾಯಿತು. ಈತನಿಗೆ ಗೊತ್ತಿರಲಿಲ್ಲ. ಆಗವಳು ಹೇಳಿದ್ದು ನೆನಪಾಯಿತು ‘ನಾನು ಹೆಣ್ಣಾದ ತಕ್ಷಣ ಅಥವಾ ನಿನ್ನ ಜತೆ ಇದ್ದೀನಿ ಅಂದತಕ್ಷಣ ಕೊಡುಕೊಳ್ಳುವ ವಿಷಯದಲ್ಲಿ ಎಲ್ಲ ಬದಲಾಗಿದೆ ಎಂದು ತಿಳಕೊಳ್ಳಬೇಡ. ನಾನು ಯಾವತ್ತೂ ಕೊಡುವವಳೇ. ನನ್ನ ಜತೆ ಹನಿಯಿರಲಿ, ನೀನಿರಲಿ. ಮತ್ತೆ ಕೊಡುವುದು, ಕೊಳ್ಳುವುದು ಒಂದು ಮನಸ್ಥಿತಿ ಅಷ್ಟೇ. ಹಾಸಿಗೆಯಲ್ಲಿ ನೀನೆಲ್ಲಿ ಮಲಗುತ್ತೀ ಅನ್ನುವುದಲ್ಲ.’ ಎಂದು ಹೇಳಿದ್ದಳು. ಮಲೀಕ ಅರ್ಥವಾಯಿತು ಎಂದು ತಿಳಕೊಂಡಿದ್ದ.
ಈಗ ಅರ್ಥವಾಗುತ್ತಿತ್ತು

ಎಲ್ಲ ಮುಗಿದ ಮೇಲೆ ಪಕ್ಕಕ್ಕೆಳೆದು ‘ಶಮಂತಕಾ, ಸ್ವಲ್ಪ ಲೂಸು ಲೂಸಾಗಿದ್ದೀಯ. ಕೊಂಚ ಬಿಗಿ ಮಾಡಬೇಕು. ಒಂದೇ ಒಂದು ಇಂಜಕ್ಷನ್ ಸಾಕು. ಯಾವಾಗ ಬಿಡುವಾಗುತ್ತೋ ಕ್ಲಿನಿಕ್ಕಿಗೆ ಬಾ. ಹತ್ತು ನಿಮಿಷದ ಪ್ರೊಸೀಜರು. ಹಾರ್ಮೋನುಗಳು ಹಿತಮಿತವಾಗಿದ್ದರೆ ಯಾವಾಗಲೂ ಬಿಗಿಯಾಗಿರುತ್ತೀಯ’ ಎಂದು ಕಿವಿಯಲ್ಲಿ ಉಸುರಿದ.

ಸುಮ್ಮನೇ ಮಾತಿಲ್ಲದೇ ಮಂಚದ ಮೇಲೆ ಒರಗಿದರು. ತನ್ನ ಕಡೆಯ ಹಾಸಿಗೆಯ ತಲೆಭಾಗವನ್ನು ನಲವತ್ತೈದು ಡಿಗ್ರಿಗೆ ಎತ್ತರಿಸಿ, ಸಮಾಂತಾ ಹೇಳಿದಳು ‘ನಿನ್ನ ಕೆಲಸದ ಮೇಲೆ ನಿನಗೆ ಬಹಳ ಹೆಮ್ಮೆ ಅಲ್ಲವೇ?’ ಎಂದಳು.

‘ಯಾಕೆ ಏನಾಗಿದೆ, ನಿನಗೆ? ನಿನಗೆ ಬೇಕಾದ್ದೆಲ್ಲ ಸಿಕ್ಕಿಲ್ಲವೋ, ನನ್ನ ಕೆಲಸದಿಂದ?’ ಎಂದ ಆಕೆಯ ಶರೀರವನ್ನು ನೋಡುತ್ತಾ.

‘ಮಲೀಕ, ನನಗೆ ಬೇಕಾದ ಹಾಗೋ, ನಿನಗೆ ಬೇಕಾದ ಹಾಗೋ’

‘ಆಹಾ, ನೀನೇನು ಸಣ್ಣ ಮಗುವಲ್ಲ. ನಿನಗೆ ಇವ್ಯಾವೂ ಬೇಕಿಲ್ಲದಿದ್ದರೆ ಯಾಕೆ ಆಪರೇಷನ್‌ಗಳನ್ನು ಮಾಡಿಸ್ಕೋತಿದ್ದೀ?’

‘ಯಾಕೆಂದರೆ, ಯಾಕೆಂದರೆ’ ಆಕೆಯ ಕಣ್ಣೀರು ಕೈಮೇಲೆ ಬೀಳುವ ತನಕ ಈತನಿಗೆ ಆಕೆ ಅಳುತ್ತಿದ್ದಾಳೆ ಎಂದು ಗೊತ್ತಾಗಲಿಲ್ಲ. ಹಣೆಯ ಬೋಟಾಕ್ಸು ಜಾಸ್ತಿಯಾಯಿತೇನೋ ಅನಿಸಿತು. ಅತ್ತರೂ ಅಳದಂತೆ ಕಾಣುವ ಮುಖಚರ್ಯೆಯನ್ನು ಆಕೆ ಬಯಸಿದ್ದೇ? ನಾನು ಕೊಟ್ಟದ್ದೇ?

‘ಐ ಆಮ್ ಸಾರಿ, ಸಮಾಂತಾ. ಇವೆಲ್ಲವೂ ನಿನಗೆ ಬೇಕೆಂದು ನಾನು ತಿಳಿದಿದ್ದೆ’

‘ನಾನು ನಿನಗೆ ಏನು, ಮಲೀಕ?’

‘ಹಾಗಂದರೆ ಏನು, ಮದುವೆಯ ಮುಂಚೆ ನಾವಿಬ್ಬರೂ ಸಹಿ ಹಾಕಿದ ಅಗ್ರೀಮೆಂಟ್ ತೋರಿಸಲಾ? ಸಾಕ್ಷಿ ಸಮೇತ ಕೋರ್ಟಿನಲ್ಲಿ ಮದುವೆಯಾಗಿದೀನಿ. ನಾನೇನಾದರೂ ಈ ಪ್ರಶ್ನೆಯನ್ನು ಕೇಳಿದ್ದರೆ ನನ್ನನ್ನು ಹುರಕೊಂಡು ತಿಂದು ಬಿಡುತ್ತಾಳೆ, ಆ ನಿಮ್ಮಮ್ಮ, ಕಸ್ತೂರಿ, ಕಾಮಕಸ್ತೂರಿ.’

‘ಶಟಪ್, ಇನ್ನೊಮ್ಮೆ ನಮ್ಮಮ್ಮನ ಬಗ್ಗೆ ಮಾತಾಡಬೇಡ. ಆಕೆ ಬಹಳ ಗೌರವಾನ್ವಿತ ವ್ಯಕ್ತಿ. ಇರಲಿ, ಸುತ್ತಿ ಬಳಸಿ ಮತ್ತೆ ಹೇಳೋದಿಲ್ಲ, ಐ ವಾಂಟ್ ಅ ಡೈವೋರ್ಸ್’

ಒಂದು ಕ್ಷಣ ಅವಾಕ್ಕಾದರೂ ಸಾವರಿಸಿಕೊಂಡು ‘ನಾಟ್ ನೌ, ಪ್ಲೀಸ್ ಸ್ಯಾಮ್.’
ಸುಮ್ಮನೆ ನಕ್ಕಳು.

ಮಲೀಕನೇ ‘ಡೈವೋರ್ಸ್ ಕೇಳೋ ಸಮಯವಾ ಇದು?’ ಎಂದು ಮತ್ತೆ ಪಕ್ಕಕ್ಕೆಳಕೊಂಡ.

ಸಮಾಂತಾ ಕೊಸರಿಕೊಂಡು ಮಗ್ಗುಲಾದಳು, ಬೆನ್ನ ಮೇಲೂ ಒಂದೇ ಒಂದು ಸುಕ್ಕೂ ಇರಲಿಲ್ಲ. ಮತ್ತೆ ತಿರುಗಿ ‘ಇದಕ್ಕಿಂತ ಬೇರೆ ಪ್ರಶಸ್ತವಾದ ಸಮಯವಿಲ್ಲ’ ಎಂದಳು. ‘ನಿನಗೆ ಬೇಡವಾ, ಡೈವೋರ್ಸ್?’ ಎಂದು ಆಶ್ಚರ್ಯದಿಂದ ಕೇಳಿದಳು.

*****

ಅದೇ ಸಮಯದಲ್ಲಿ ಮಲೀಕನ ಫೋನು ರಿಂಗಣಿಸತೊಡಗಿತು. ಸಿದ್ದಿಕಿ ಫೋನು ಮಾಡಿದ್ದ. ‘ಟೀವಿ ಆನ್ ಮಾಡು, ಈಗಲೇ’ ಎಂದು ಭಾರಿ ಅವಸರವಸರವಾಗಿ ಹೇಳಿದ. ಸಿದ್ದಿಕಿಯ ಮಾತನ್ನು ಕೇಳಿಸಿಕೊಂಡವಳಂತೆ ಸಮಾಂತಾ ಟೀವಿ ಆನ್ ಮಾಡಿದ್ದಳು. ಸ್ಥಳೀಯ ವಾರ್ತೆಯಲ್ಲಿ ಮಲೀಕನ ಬಗ್ಗೆ ವಿಷಯವಿತ್ತು. ‘ನ್ಯೂಯಾರ್ಕಿನ ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್ ಡಾ. ಭೀಮ್ ಮಲೀಕ್ ಬರೇ ಪ್ಲಾಸ್ಟಿಕ್ ಸರ್ಜರಿ ಮಾತ್ರ ಮಾಡುತ್ತಾನೆಯೇ? ನೋಡಿ, ನೀವೇ ನಿರ್ಧರಿಸಿ. ಹೆಸರು ಹೇಳಬಯಸದ ಮತ್ತು ಮುಖ ತೋರಿಸಲಿಚ್ಛಿಸದ ಇದೇ ಊರಿನ ಸಂಸಾರಸ್ಥೆ, ಮರ್ಯಾದಸ್ಥೆ, ಮೂರು ಮಕ್ಕಳ ಅಮ್ಮ ಆಪರೇಷನ್ ಮಾಡಿಸಿಕೊಳ್ಳಲಿಕ್ಕೆಂದು ಬಂದಾಗ ಈತ ಮಾಡಿದ್ದು ಏನು ನೀವೇ ನೋಡಿ.’ ಎಂದಾಗ ಮಲೀಕನ ಹಾಗೂ ಅರೆ ಅರಿವಳಿದು ಇನ್ನೂ ಕಣ್ಣು ಮುಚ್ಚಿಕೊಂಡಿರುವ ಲೀಸಾ ಇದ್ದ ಸಣ್ಣ ವಿಡಿಯೋ ಕ್ಲಿಪ್. ಆಕೆಯ ಮುಖ ಹಾಗೂ ಎದೆಯ ಭಾಗವನ್ನ ಮಸುಕುಮಾಡಲಾಗಿತ್ತು. ಆ ಮಸುಕಿನ ಹಿಂದೆ ಮಲೀಕನ ಕೈ. ಮುಖದಲ್ಲಿ ನಗೆ. ಟೀವಿಯ ಆಂಕರ್ ಹೇಳುತ್ತಾ ಹೋಗುತ್ತಿದ್ದ. ಇದು ‘ನ್ಯೂಯಾರ್ಕ್ ಬೆಲ್’ ಪತ್ರಿಕೆಗೆ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಲುಪಿಸಿರುವ ವಿಡಿಯೋದ ಒಂದು ತುಣುಕಷ್ಟೇ. ಇದನ್ನು ಮಾತ್ರ ನೋಡಿದಲ್ಲಿ ನಿಮಗೆ ಮಲೀಕನ ಮುಖದ ಭಾವ ಏನಂತ ಗೊತ್ತಾಗಬಹುದು ಅನಿಸುತ್ತದೆ. ಡಾ. ಭೀಮ್ ಮಲೀಕ್ ನ್ಯೂಯಾರ್ಕಿನ ಸೆನೆಟರ್ ಎಚ್‌ಐವಿ ಕಸ್ತೂರಿ ರಂಗನ್ ಅವರ ಹಾಲಿ ಅಳಿಯ. ಈಗಾಗಲೇ ಡಾ. ಭೀಮ ಮಲೀಕರಿಗೆ ಒಮ್ಮೆ ಡೈವೋರ್ಸಾಗಿದೆ. ಮಲೀಕ, ಪರಿ ಎಂಬ ಭಾರತೀಯ ಮೂಲದ ಹೆಂಗಸಿನ ಜತೆ ಸುಮಾರು ಇಪ್ಪತ್ತೈದು ವರ್ಷ ಸಂಸಾರ ಮಾಡಿ, ಕಳೆದ ವರ್ಷ ತಾನೇ ವಿಚ್ಛೇದನ ಪಡೆದಿದ್ದರು. ಈ ಬಗ್ಗೆ ಭೀಮ್ ಮಲೀಕರ ಕ್ಲಿನಿಕ್ಕಿಗೆ ಫೋನು ಮಾಡಿದಾಗ ನಮ್ಮ ಫೋನನ್ನು ಯಾರೂ ತೆಗೆದುಕೊಳ್ಳಲಿಲ್ಲ. ಆಗ ಮಲೀಕರ ಅತ್ತೆ ಎಚ್‌ಐವಿ ಕಸ್ತೂರಿ ರಂಗನ್ ಅವರನ್ನು ಸಂಪರ್ಕಿಸಿದೆವು.

ಪ್ಲಾಸ್ಟಿಕ್ ಸರ್ಜನನ ಚಾಕುವಿಗೆ ಇಂತ ದೇಹ ಸಿಕ್ಕರೆ, ವಿಗ್ರಹ ಮಾಡುವವನ ಕೈಗೆ ಜೇಡಿಮಣ್ಣು ಸಿಕ್ಕ ಹಾಗೆ, ಬೇಕಾದ ಹಾಗೆ ಎರಕ ಹುಯ್ಯಬಹುದು. ಎಲ್ಲೆಡೆ ತುಂಬಿಕೊಂಡ ಅಂಗಾಂಗಗಳು. ಈತ ಬೇಕಾದ ಹಾಗೆ ಅಚ್ಚಿಳಿಸಿದ್ದ.

ಮಲೀಕನ ಅತ್ತೆ, ಸಮಾಂತಾಳ ಅಮ್ಮ ನ್ಯೂಯಾರ್ಕಿನ ಸೆನೆಟರ್ ಕಸ್ತೂರಿ ಕಸ್ಟೆಲ್ಲೋ ರಂಗನ್ ಎಚ್‌ಐವಿ ಕಸ್ತೂರಿ ಎಂತಲೇ ಹೆಸರಾಗಿದ್ದರು. ಅದೊಂದು ದೊಡ್ಡ ಕತೆ.

ಟೀವಿ ಪರದೆಯ ಒಂದು ಪಕ್ಕದಲ್ಲಿ ಕಸ್ತೂರಿ ಹೇಳುತ್ತಿದ್ದರು. ಹೇರಳವಾಗಿ ಮಾಡಿದ ಮೇಕಪ್ಪು ಮತ್ತು ನಿಯಮಿತವಾದ ಮುಖಾರೈಕೆಯಿಂದ ವಯಸ್ಸು ಕಾಣುತ್ತಿರಲಿಲ್ಲ. ಕಣ್ಣಹುಬ್ಬುಗಳಷ್ಟೂ ಉದುರಿದ್ದು ಪೆನ್ಸಿಲ್‌ನಿಂದ ತೀಡಿಕೊಂಡಿದ್ದರು. ಕೊಂಚ ದಪ್ಪ ಎನ್ನಿಸುವ ತುಟಿ, ಅದಕ್ಕೆ ಕೊಂಚ ಗಾಢವೆನಿಸುವ ತುಟಿರಂಗು. ಇನ್ನು ತಲೆಗೂದಲು ವಿಗ್ಗಾ ಅಲ್ಲವಾ ಎಂಬುದನ್ನು ಯಾರಿಗೂ ಹೇಳಲಾಗದು. ಕೆನ್ನೆಯ ಮೇಲೆ ಒಂದು ಗುಲಾಬಿಬಣ್ಣದ ಹುಟ್ಟುಕಲೆ. ನಕ್ಕಾಗ ಕೊಂಚ ಜಾಸ್ತಿಯೇ ಕಾಣುವ ನೇರಳೇ ಬಣ್ಣದ ವಸಡು ತಾನಿನ್ನೂ ಹಲ್ಲು ಕಟ್ಟಿಸಿಕೊಂಡಿಲ್ಲ ಎಂಬುದನ್ನು ಸಾರಿ ಹೇಳುವಂತಿತ್ತು. ಒಂದು ಕಾಲದಲ್ಲಿ ನಾನು ಸುಂದರವಾಗಿದ್ದೆ ಎಂದು ಒಮ್ಮೆ ನೋಡಿದರೆ ಹೇಳಬಲ್ಲ ಚಹರೆ. ಆಕೆ ಒಮ್ಮೆ ನ್ಯಾಪ್‌ಕಿನ್ನಿನಿಂದ ಮುಖ ಒತ್ತಿ ಹೇಳಿದರು ‘ನನಗೆ ನನ್ನ ಅಳಿಯನ ಬಗ್ಗೆ ನಂಬಿಕೆಯಿದೆ. ಇದು ಆಪರೇಷನ್ ರೂಮಿನೊಳಗೆ ರೋಗಿಗೆ ವೈದ್ಯ ಮಾಡುತ್ತಿರುವ ಆಪರೇಷನ್ ಮುಗಿದ ಮೇಲೆ ತೆಗೆದಿರುವ ವಿಡೀಯೊ. ಇದರಲ್ಲಿ ಯಾವ ದುರುದ್ದೇಶವೂ ನನಗೆ ಕಾಣುತ್ತಿಲ್ಲ. ಈ ವಿಡಿಯೋ ತೆಗೆದದ್ದು ರೋಗಿಯ ಖಾಸಗೀತನದ ದೃಷ್ಟಿಯಿಂದಲೂ ತಪ್ಪು. ಯಾರು ತೆಗೆದರೋ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು.’

‘ನಿಮಗೆ ಡಾ.ಮಲೀಕನ ಮುಖದ ಮೇಲಿನ ಆ ನಗೆ, ಆ ಭಾವ ಸಹಜವಾದದ್ದು ಅನ್ನಿಸುತ್ತದಾ? ಇದರ ಬಗ್ಗೆ ಮೊದಲು ನ್ಯೂಯಾರ್ಕ್ ಬೆಲ್‌ನಲ್ಲಿ ಬರೆದದ್ದನ್ನು ಒಮ್ಮೆ ಓದಿ. ಈ ವಿಡಿಯೋ ತೆಗೆದಾಗ ಮಲೀಕ ಸರ್ಜರಿ ಮುಗಿದು ಅಂತಿಮ ಹಂತದ ಡ್ರೆಸ್ಸಿಂಗ್ ಮಾಡಲು ಸಿದ್ಧಮಾಡಿಕೊಳ್ಳುತ್ತಿದ್ದನಂತೆ. ಹಾಗಿದ್ದಾಗ ಮತ್ತೆ ಮತ್ತೆ ಸ್ತನವನ್ನು ಮುಟ್ಟುವ ಅವಶ್ಯಕತೆ ಇರಲಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ, ಆ ನಗು, ಅದು ನಾನಾ ಅರ್ಥಗಳನ್ನು ಕೊಡುತ್ತದೆ. ಇದು ಚಿತ್ರಕಲಾವಿದ ಒಂದು ಕೃತಿಯನ್ನು ಪೂರ್ಣಗೊಳಿಸಿದಾಗ ಆಗುವ ಸಂತೃಪ್ತಿಯ ನಗೆಯಂತಿಲ್ಲದೆ, ಕಾಮಕೇಳಿಯ, ಫೋರ್ನ್‌ಪ್ಲೇಯ ತುಂಟತನದಿಂದ ಕೂಡಿದ್ದಾಗಿದೆ. ಆ್ಯಸ್ ಇಫ್ ಸಮ್‌ಒನ್ ಈಸ್ ಹ್ಯಾವಿಂಗ್ ಅ ಬಿಟ್ ಆಫ್ ಫನ್’ ಎಂದು ಆತನೂ ನಕ್ಕ.

‘ನಿಮ್ಮ ಈ ವಾದವನ್ನು ನಾನು ಧಿಕ್ಕರಿಸುತ್ತೇನೆ. ಆಕೆ ಮಾಡಿಸಿಕೊಂಡಿದ್ದು ಸ್ತನ ಹಿಗ್ಗಿಸುವ ಆಪರೇಷನ್. ಆಪರೇಷನ್ ಯಶಸ್ವಿ ಆಗಿದೆ ಎಂದು ಹೇಗೆ ಹೇಳುತ್ತೀರಿ? ಸ್ತನ ಹಿಗ್ಗಿದಾಗ ಹೌದೋ ಅಲ್ಲವೋ? ಅದು ಹಿಗ್ಗಿದೆಯೋ ಇಲ್ಲವೋ ನೋಡುವುದು ಹೇಗೆ? ಬೇಕಿದ್ದರೆ ನನ್ನನ್ನು ಹಳೇಕಾಲದವಳು ಅಂತ ಕರೀರಿ. ನಾನು ಈ ವಯಸ್ಸಿನಲ್ಲೂ ದಿನಾ ಬೆಳಿಗ್ಗೆ ಪರೀಕ್ಷೆ ಮಾಡಿಕೊಳ್ಳುತ್ತೇನೆ. ದೇಹದಲ್ಲಿ ಇದೊಂದು ಅಂಗ ಮಾತ್ರ ಕಣ್ಣಳತೆಗೆ ಸಿಗೊಲ್ಲ. ಮುಟ್ಟಿಯೇ ನೋಡಿ ನಿರ್ಧರಿಸಬೇಕು’

‘ಓಕೆ ಸೆನೆಟರ್. ಒಬ್ಬ ಹೆಣ್ಣಾಗಿ ನೀವು ಇಂಥಾ ಮಾತನ್ನು ಆಡುವುದು ತಪ್ಪು. ಮತ್ತೆ ಇಂಥಾ ಅಭಿಪ್ರಾಯವನ್ನು ಕೊಡುವುದಕ್ಕೆ ನೀವು ಡಾಕ್ಟರೂ ಅಲ್ಲ.’

‘ನನ್ನ ಮನೆಗೆ ಕ್ಯಾಮೆರಾದವನನ್ನು ಕಳಿಸಿ ನನ್ನನ್ನು ಸಂದರ್ಶಿಸುವ ಅಗತ್ಯವೇನಿತ್ತು? ನನ್ನಳಿಯನ ಎಲ್ಲ ಕೆಲಸಕ್ಕೂ ನಾನು ಜವಾಬ್ದಾರಳೇ?’
‘ಅಲ್ಲವೇ? ಸೆನೆಟರ್?’ ಮತ್ತೊಮ್ಮೆ ಕೊಂಕುಮಾಡಿದ್ದ, ಆ ಟೀವಿಯ ರಿಪೋರ್ಟರ್.

‘ನಾನು ಇಂಥಾ ಪ್ರಶ್ನೆಗೆ ಉತ್ತರಿಸೊಲ್ಲ. ಡಿಸ್ಕನೆಕ್ಟ್ ಮಾಡು’ ಎಂದರು, ಕಸ್ತೂರಿ.

‘ಇಂಥ ಲೈಂಗಿಕ ದೌರ್ಜನ್ಯವನ್ನು ತಡಕೊಳ್ಳಬಾರದು. ನಾಳೆ ಈಕೆ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳಲ್ಲ. ಇದು ಮಿಟೂ ಯುಗ. ಎಂಥೆಂತವರೆಲ್ಲ ಜೈಲಿಗೆ ಹೋಗಿದ್ದಾರೆ, ನೀವೇ ನೋಡಿದ್ದೀರ.’

‘ಲೈಂಗಿಕ ಶೋಷಣೆಯ ಬಗ್ಗೆ ನನಗೆ ಹೇಳಿಕೊಡಬೇಡ. ನಾನು ಇದರ ಬಗ್ಗೆ ಪುಸ್ತಕಗಳನ್ನೇ ಬರೆದಿದ್ದೇನೆ.’

‘ಅದು ಜಗತ್ತಿಗೆ ಗೊತ್ತು, ಸೆನೆಟರ್. ನೀವು ಮರ್ಯಾದಸ್ಥರು. ಆದರೆ, ನಿಮ್ಮ ಅಳಿಯ ಹಾಗೆ ಇರಬೇಕೆಂದೇನಿಲ್ಲವಲ್ಲ?’
ಮೈಕ್ರೋಫೋನನ್ನು ಕಿತ್ತು ಕ್ಯಾಮೆರಾ ಫ್ರೇಮಿನಿಂದ ಹೊರಹೋಗಿದ್ದಳು, ಕಸ್ತೂರಿ ರಂಗನ್ ಕಸ್ಟೆಲ್ಲೋ.

*****

ತನ್ನ ಕಣ್ಣ ಮುಂದಿನ ಟೀವಿಯ ಈ ಸುದ್ದಿಯನ್ನು ನೋಡಿ ನಂಬಲಾಗಲಿಲ್ಲ, ಮಲೀಕನಿಗೆ. ತಾನು ಮಾಡಿದ ಸರ್ಜರಿ ಸರಿಯಾಗಿದೆಯೇ ಇಲ್ಲವೇ ಎಂದು ನನ್ನತ್ತೆಯನ್ನು ಕೇಳಲು ಹೋಗಿದ್ದಾರಲ್ಲ, ಈ ಟೀವಿಯವರು. ಮಾಧ್ಯಮದವರಿಗೆ ಸ್ವಲ್ಪವಾದರೂ ಘನತೆ ಅಥವಾ ನೀತಿಸಂಹಿತೆ ಅನ್ನುವುದೇನಾದರೂ ಇದೆಯೇ? ನನ್ನ ಕ್ಲಿನಿಕ್ಕಿಗೆ ಫೋನು ಮಾಡಿದ್ದರಂತೆ. ರೋಗಿಗಳ ಅತ್ಯಂತ ಖಾಸಗೀ ದಾಖಲೆಗಳನ್ನು ಈ ರೀತಿ ಸಾರಾಸಗಟಾಗಿ ಟೀವಿಯಲ್ಲಿ ಹರಾಜು ಮಾಡುವುದೆಂದರೆ ಹೇಗೆ? ನನ್ನನ್ನು ಸಂಪರ್ಕಿಸುವುದನ್ನು ಬಿಟ್ಟು ಈ ರೀತಿ ಅತ್ತೆಯನ್ನು ಯಾಕೆ ಸಂಪರ್ಕಿಸಿದ್ದಾರೆ. ಆ ಮಿಂಡ್ರಿ ನರ್ಸ್ ಮೆಲಿಸ್ಸಾಳೆ ಈ ವಿಡಿಯೋ ಅನ್ನು ಲೀಕ್ ಮಾಡಿದ್ದು. ನನ್ನ ಕಣ್ಣ ಮುಂದೆಯೇ ಡಿಲೀಟ್ ಮಾಡಿದಳಲ್ಲ, ಆಕೆ?

ಇದು ಸಮಾಂತಾಳಿಗೆ ಗೊತ್ತಿತ್ತೇ? ಅದಕ್ಕೇ ಇಂದು ಮಂಕಾಗಿದ್ದಾಳೆ.

ಮಲೀಕನಿಗೆ ಸಮಾಂತಾಳ ಜತೆಗಿನ ತನ್ನ ಸಂಬಂಧ ಸರಿಯಿಲ್ಲ ಎಂದು ಗೊತ್ತಿತ್ತು. ಇದು ಹೆಚ್ಚುದಿನ ನಿಲ್ಲುವ ಸಂಸಾರವಲ್ಲ ಎಂದು ಮದುವೆಯಾದ ತಕ್ಷಣವೇ ಅನಿಸಿತ್ತು. ಆದರೆ ಪರಿಯನ್ನು ಡೈವೋರ್ಸು ಮಾಡಿ ಇನ್ನೂ ವರ್ಷಕೂಡ ಆಗಿಲ್ಲ. ಒಂದೇ ವರ್ಷದಲ್ಲಿ ಎರಡೆರಡು ಡೈವೋರ್ಸು ಮಾಡಿಕೊಂಡ ಅಪಕೀರ್ತಿ ಬೇಡ ಎಂದು ಸರಿಯಾದ ಸಮಯಕ್ಕೆ ಕಾಯುತ್ತಿದ್ದ. ಆದರೆ ಈಗ ಸಮಾಂತಾಳೇ ಡೈವೋರ್ಸು ಕೇಳುತ್ತಿರುವುದಕ್ಕೂ ಅತ್ತೆ ಕಸ್ತೂರಿ, ಟೀವಿಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಂಬಂಧವಿರಬಹುದೇ? ಈ ಲೀಸಾ ಸಾಲಿಂಜರಳ ಕೇಸಿಗೂ ಇದಕ್ಕೂ ಯಾವ ರೀತಿಯ ಸಂಬಂಧ ಎಂದು ಯೋಚಿಸುತ್ತಿದ್ದ.

ಅಷ್ಟರಲ್ಲಿ ಈತನ ಫೋನು ಮತ್ತೆ ರಿಂಗಾಯಿತು. ಅತ್ತೆ ಫೋನು ಮಾಡಿದ್ದರು. ‘ಮಲೀಕ, ನೀನೂ ಸಮಾಂತಾ ಖುಷಿಯಾಗಿರುವ ತನಕ ನೀವಿಬ್ಬರೂ ಯಾಕೆ ಖುಷಿಯಾಗಿದ್ದೀರಾ ಅನ್ನುವ ಕಾರಣವನ್ನು ನನಗೆ ಹೇಳುವುದು ಬೇಡ. ಆದರೆ ಈ ಲೀಸಾ ಸಾಲಿಂಜರಳ ಕೇಸು ಸಮಾಂತಾಳ ಕಣ್ಣಲ್ಲಿ ನೀರು ತರಿಸಬಾರದು, ನೋಡು. ನಾನೀಗ ನೇರವಾಗಿ ಕೇಳುತ್ತೇನೆ. ನಿನಗೇನು ಕಡಿಮೆ ಮಾಡಿದ್ದಾಳೆ, ನನ್ನ ಮಗಳು?’ ಎಂದರು.

ಇದು ಪ್ರಶ್ನೆಯಾ? ಆದರೆ ಈಗ ತನ್ನ ಮುಂದಿರುವುದು ಲೀಸಾ ಸಾಲಿಂಜರಳ ಕೇಸು. ಅದರಿಂದ ತಾನು ಹೊರಬರುವುದು ಹೇಗೆ?
ಅತ್ತೆಗೆ ಲೀಸಾಳ ಹೆಸರು ಹೇಗೆ ಗೊತ್ತಾಯಿತು ಎಂದು ತಲೆಕೆಟ್ಟಿತು, ಮಲೀಕನಿಗೆ. ಟೀವಿಯಲ್ಲಿ ಯಾರೂ ಆಕೆಯ ಹೆಸರು ಹೇಳಿರಲಿಲ್ಲ. ‘ಅತ್ತೆ, ನನ್ನನ್ನು ನಾನು ನಿಭಾಯಿಸಿಕೊಳ್ಳಬಲ್ಲೆ. ನಿಮಗ್ಯಾಕೆ ಇದರ ಗೊಡವೆ? ಎಲ್ಲ ಬಿಟ್ಟು ಟೀವಿಯವರು ನಿಮ್ಮನ್ನು ಯಾಕೆ ಸಂಪರ್ಕಿಸಿದ್ದಾರೆ? ಅಷ್ಟಕ್ಕೂ ಇದು ಕೋರ್ಟುಕೇಸೇನಾದರೂ ಆದರೆ ನನ್ನ ಆಪರೇಷನ್ ಸಫಲವಾಯಿತೋ ಇಲ್ಲವೋ ಅನ್ನುವುದು ಮಾತ್ರ ಇಲ್ಲಿ ಶಿಕ್ಷೆಯನ್ನು ನಿರ್ಧರಿಸುತ್ತದೆಯೇ ಹೊರತು ಮಿಟೂ ಮಟ್ಟಕ್ಕೆ ಖಂಡಿತಾ ಹೋಗುವುದಿಲ್ಲ’

‘ಅಪ್ಪಾ ಜಕಣಾಚಾರಿ, ನಿನ್ನ ಕೆಲಸದ ಬಗ್ಗೆ ಇಡೀ ಪ್ರಪಂಚಕ್ಕೇ ಗೊತ್ತಿದೆ, ನಿನ್ನ ಕೆಲಸವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಎಲ್ಲ ಮುಗಿದ ಮೇಲೆ ನಿನ್ನ ಮುಖಭಾವ ಮತ್ತು ನೀನು ಆಕೆಯನ್ನು ಮುಟ್ಟಿದ್ದು- ಅಸಭ್ಯ ಅನ್ನುವ ಮಟ್ಟದಲ್ಲಿದೆ. ನೀನು ನಿನ್ನ ಕೆಲಸವನ್ನು ಸರಿಯಾಗಿ ಮಾಡದೇ ಇದ್ದಿದ್ದರೆ ಅದಕ್ಕೆ ಏನೋ ಒಂದಿಷ್ಟು ಪರಿಹಾರ ಅಂತ ಕೊಟ್ಟು ಎಲ್ಲ ಸರಿಪಡಿಸಿಕೊಳ್ಳಬಹುದು. ಆದರೆ ಈ ನೈತಿಕ ಕಾವಲುಪಡೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಮತ್ತೆ ಆ ಲೀಸಾ ಸಾಲಿಂಜರ್ ನೀನು ತಿಳಕೊಂಡ ಹಾಗೆ ಯಾರೋ ಲಾಂಗ್ ಐಲಂಡಿನ ಮೂರುಮಕ್ಕಳ ಅಮ್ಮ ಮಾತ್ರ ಅಲ್ಲ. ಆಕೆ ಹೈ ಪ್ರೊಫೈಲ್ ಎಸ್ಕಾರ್ಟ್. ನಿನ್ನ ಅದೃಷ್ಟ ಚೆನ್ನಾಗಿದೆ. ನ್ಯೂಯಾರ್ಕ್ ಬೆಲ್‌ನವರು ಆಕೆಯ ಮುಖವನ್ನು ಮಸುಕು ಮಾಡಿದ್ದಾರೆ. ಲೀಸಾ ಸಾಲಿಂಜರ್ ಆಕೆಯ ನಿಜವಾದ ಹೆಸರಲ್ಲ. ಆಕೆಗೆ ಇನ್ನೂ ಬೇಕಾದಷ್ಟು ಏಲಿಯಾಸ್‌ಗಳಿದ್ದಾವೆ. ಆಕೆಯ ಮುಖವನ್ನು ಲೋಕಕ್ಕೆ ತೋರಿಸಿದರೆ, ಏನೇನು ಗಲಾಟೆಯಾಗುತ್ತೋ, ಯಾವ ಯಾವ ದೊಡ್ಡತಲೆಗಳು ಉರುಳಿಹೋಗ್ತಾವೋ? ಆಕೆಯಿಂದ ನಿನಗೆ ಏನಾದರೂ ಕರೆ ಬಂದಿದೆಯಾ?’

ಮಲೀಕನಿಗೆ ಅರ್ಥವಾಗಲಿಲ್ಲ. ಈ ಲೀಸಾ ಅನ್ನುವವಳು ಒಬ್ಬ ಎಸ್ಕಾರ್ಟು, ಗಣಿಕೆ. ಅದು ನನಗೆ ಬೇಕಿರದ ವಿಷಯ. ನನಗೆ ಗೊತ್ತಿರುವ ಲೀಸಾ ಲಾಂಗ್ ಐಲಂಡಿನಲ್ಲಿ ವಾಸಿಸುವ ಮೂರು ಮಕ್ಕಳ ತಾಯಿ. ನಾನು ಹೇಗೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಲ್ಲೆ? ಈಕೆ ನನ್ನ ಮೇಲೆ ಅನುಚಿತ ವರ್ತನೆ, ಅಸಭ್ಯ ಸ್ಪರ್ಶ ಎಂದು ಕೇಸು ಹಾಕಿದರೆ ಅದು ಒಂದೇ ನಿಮಿಷದಲ್ಲಿ ಬಿದ್ದು ಹೋಗುತ್ತದೆ. ಯಾಕೆಂದರೆ ಸ್ತನ ಹಿಗ್ಗಿಸುವ ಆಪರೇಷನ್‌ಗೆ ಅಂತ ಬಂದವಳು ಸ್ತನ ಮುಟ್ಟಿದ ಎಂದು ಕೇಸು ಹಾಕೋಕಾಗಲ್ಲ. ಅಕಸ್ಮಾತ್ ಹಾಕಿದರೆ ಲೀಸಾ ಕೋರ್ಟಿಗೆ ಬರಲೇಬೇಕು. ಆಗ ಜಗತ್ತಿಗೆ ಆಕೆಯ ಇನ್ನೊಂದು ಲೋಕದ ಪರಿಚಯವಾಗಬಹುದು. ಅದರಿಂದ ಅನಾವರಣ ವಾಗಲಿರುವ ದೊಡ್ಡದೊಡ್ಡವರ ಗುಪ್ತಲೋಕ, ಆಕೆಯ ಜತೆ ದೊಡ್ಡದೊಡ್ಡವರನ್ನೂ ಕೂಡ ತೊಂದರೆಗೆ ಸಿಕ್ಕಿಸಬಲ್ಲದು. ಆದ್ದರಿಂದ ಲೀಸಾಳ ಲಾಯರ್ ಕೇಸ್ ಹಾಕಿದರೂ ಆಕೆಯ ಮುಖ, ಮಾಧ್ಯಮಗಳಿಗೆ ಸಿಗದಂತೆ ನೋಡಿಕೊಳ್ಳುತ್ತಾನೆ, ಅಲ್ಲವೇ?

ಈಗ ಆಕೆಯ ಮುಖವನ್ನು ಮಾಧ್ಯಮದಲ್ಲಿ ತೋರಿಸದಿರುವುದು ಹೇಗೆ? ಇಂದಲ್ಲ ನಾಳೆ ಅದು ಗೊತ್ತಾಗೇ ಆಗುತ್ತದೆ. ಈಗ ಅದನ್ನು ಯಾಕೆ ಮುಚ್ಚಿಟ್ಟಿದ್ದಾರೆ, ಈ ಮಾಧ್ಯಮದವರು?

ಆದರೆ ಇಂಥ ರಸಭರಿತವಾದ ಸುದ್ದಿ ಯಾವುದೇ ಸೆನ್ಸಾರಿಲ್ಲದ ಇಂಟರ್ನೆಟ್‌ನಲ್ಲಿ ಯಾವ ರೂಪ ಪಡೆದುಕೊಂಡಿರಬಹುದು?
ಯೂಟ್ಯೂಬಿನಲ್ಲಿ ತನ್ನ ಹೆಸರು ಟೈಪಿಸಿದಾಗ ನೆಟ್‍ವರ್ಕ್ ಟೀವಿಗಳಲ್ಲಿ ಕಾಣಿಸಿದ್ದ ತುಣುಕುಗಳೇ ಕಂಡುಬಂದವು. ಬೇರೆ ಏನೂ ಇರಲಿಲ್ಲ. ಲೀಸಾ ಸಾಲಿಂಜರ್ ಎಂದು ಟೈಪಿಸಿದಾಗ ಬೇರೆ ಯಾರ್ಯಾರದೋ ಚಿತ್ರಗಳು ಬಂತೇ ವಿನಾ ತಾನು ಆಪರೇಷನ್ ಮಾಡಿದ ಲೀಸಾಳ ಸುಳುಹು ಕೂಡ ಇರಲಿಲ್ಲ.

ಒಟ್ಟು ತನ್ನ ಸರ್ಜರಿ ಕೂಡ ಎಕ್ಸ್‌ರೇಟೆಡ್ಡು. ಯೂಟ್ಯೂಬಿನ ಮೇಲ್ಮಟ್ಟದ ಸರ್ಚಿನಲ್ಲಿ ಸಿಗಲಾರದಂತದ್ದು. ಈ ಲೀಸಾ ಸಾಲಿಂಜರಳಂತೂ ಈ ಅಂತರ್ಜಾಲದಲ್ಲಿ ಕೂಡ ಅಪರಿಚಿತಳು. ಈಕೆಗೆ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಯಾವುದೂ ಅಕೌಂಟಿಲ್ಲ.

ಇದು ಒಳ್ಳೆಯದೋ ಕೆಟ್ಟದ್ದೋ? ಸದ್ಯಕ್ಕೆ ಒಳ್ಳೆಯದೇ ಇರಬಹುದೇನೋ ಅನ್ನಿಸಿತು.

ತನ್ನ ಯೋಚನಾಲಹರಿ ಸಿದ್ದಿಕಿಯ ಪರಿಚಯದಿಂದಾದುದು. ಅಬ್ಬಾ! ಎಂಥ ಒಳ್ಳೆಯ ಗೆಳೆಯ ಅನ್ನಿಸಿತು.

‘ಆಕೆ ಕಾಲ್ ಮಾಡಿದ್ದಾಳಾ?’ ಎಂದರು, ಕಸ್ತೂರಿ.

‘ಇಲ್ಲ’ ಎಂದ, ಮಲೀಕ್

ಇದುವರೆಗೂ ಸುಮ್ಮನೇ ಇದ್ದ ಸಮಾಂತಾ ಈತನ ಫೋನು ಕಿತ್ತುಕೊಂಡು ‘ಅಮ್ಮ ನಾನು ಮಲೀಕನನ್ನು ಡೈವೋರ್ಸ್ ಮಾಡುತ್ತಿದ್ದೇನೆ’ ಎಂದು ಕೂಗಿದಳು.

‘ಏನಂದೆ?’ ಎಂದು ಅವಳಿಗಿಂತ ಜೋರಾಗಿ ಕೂಗಿದರು, ಕಸ್ತೂರಿ.

‘ಯಾಕೆ, ಕೇಳಿಸಲಿಲ್ಲವಾ? ಅಯಾಮ್ ಡನ್. ನಾನು ಡೈವೋರ್ಸ್ ಮಾಡುತ್ತಿದ್ದೀನಿ.’

‘ನೋ, ನಾಟ್ ನೌ. ಖಂಡಿತಾ ಈಗಲ್ಲ. ನಾನು ನಿನಗೆ ಫೋನು ಮಾಡುತ್ತೀನಿ. ಏನೇನೋ ಮಾಡಿಕೊಳ್ಳಲಿಕ್ಕೆ ಹೋಗಬೇಡ’ ಎಂದು ಫೋನು ಇಟ್ಟರು, ಕಸ್ತೂರಿ.‌

ಕಸ್ತೂರಿಯವರಿಗೆ ತಲೆಕೆಡಲು ಇನ್ನೇನೂ ಬೇಕಿಲ್ಲ ಎಂದುಕೊಂಡ. ಈ ಡೈವೋರ್ಸಿಗೆ ಸರಿಯಾದ ಕಾರಣಗಳಿದ್ದರೂ ಈ ಲೀಸಾ ಸಾಲಿಂಜರಳ ಪ್ರಕರಣದಿಂದ ತಾನು ಕೋರ್ಟಿಗೆ ಹೋದಲ್ಲಿ ಇದು ಅತಿ ದುಬಾರಿ ಡೈವೋರ್ಸಾಗಿ ತಾನು ದಿವಾಳಿಯಾಗುತ್ತೇನೆ ಎನಿಸಿತು.

(ಕೃತಿ: ಕಾಯಾ (ಕಾದಂಬರಿ), ಲೇಖಕರು: ಗುರುಪ್ರಸಾದ್‌ ಕಾಗಿನೆಲೆ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ- 350/-)