ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂದು ಬೆಂದ್ರೆ ಕೇಳಿದರು. ನಾನೂ ಒಂದು ಹಕ್ಕಿಯನ್ನು ನೋಡಿದೆ! ಅದು ಬಾನಲ್ಲಿ ಹಾರುತ್ತಾ ಹೋದ ಗರುಡ. ಆ ಗರುಡನ ನೆರಳು ನನಗೆ ಗಾಂಧಿಯಂತೆ ತೋರಿತು.
ಡಾ. ಲಕ್ಷ್ಮಣ ವಿ.ಎ. ಬರೆಯುವ ಅಂಕಣ

 

ಮನುಷ್ಯ ಸ್ವಭಾವತಃ ವಲಸೆ ಜೀವಿ. ಆಹಾರ ಅರಸುತ್ತ ಕಾಡು ಮೇಡು ಅಲೆದು ಗಡ್ಡೆ ಗೆಣಸು ತಿಂದು ಬದುಕುತ್ತಿದ್ದ ಆದಿ ಮಾನವ ಒಂದು ಹಂತಕ್ಕೆ ಈ ಅಲೆದಾಟವೆಲ್ಲ ಸಾಕೆನಿಸಿ ನದೀ ತೀರದಲ್ಲಿ ಶಾಶ್ವತವಾಗಿ ನೆಲೆಸಲು ಯೋಚಿಸಿ ಅದಕ್ಕೆ ತಕ್ಕಂತೆ ಯೋಜಿಸಿ ನದೀ ತೀರದ ನಾಗರೀಕತೆಗಳ ಸೃಷ್ಟಿಗೆ ನಾಂದಿ ಹಾಡಿದ. ಅಲ್ಲಿಂದಲೇ ಶುರುವಾದ ವಲಸೆ ಇಂದಿಗೂ ಮುಂದುವರೆದು ಹಳ್ಳಿಯಲ್ಲಿದ್ದವರೆಲ್ಲ ಉದ್ಯೋಗವನ್ನರಸಿ ಮುಂಬಯಿ ಬೆಂಗಳೂರು ಮೀರಿ ಈ ದಿನ ಅಮೇರಿಕಾ ಲಂಡನ್ ನಂತಹ ಸಪ್ತಸಾಗರದಾಚೆಗೂ ಚಾಚಿ ನಿಂತಿದೆ.

ಈ ಮಾಯಾವೀ ಮಹಾನಗರಗಳು ಹುಟ್ಟಿಸುವ ಮೋಹ ಅಷ್ಟಿಷ್ಟಲ್ಲ. ಒಮ್ಮೆ ಮಹಾನಗರದ ಬಸ್ಸು ಹತ್ತಿದವರು ಮುಂದೆ ಅವರು ಹುಟ್ಟಿ ಬೆಳೆದ ಊರಿಗೆ ಬರುವುದು ಊರ ಹಬ್ಬಕ್ಕೋ ಜಾತ್ರೆಗೋ ಅಥವ ತೀರ ಹತ್ತಿರದವರು ತೀರಿಕೊಂಡಾಗಲೋ!

ಹೀಗೆ ಒಂದು ದಿನ ಕೃಷ್ಣನೂ ನಡೆದು ಬಿಟ್ಟ ಬೃಂದಾವನ ತ್ಯಜಿಸಿ, ಕೈಯಲಿದ್ದ ಕೊಳಲು ಕೊರಳ ಪ್ರೀತಿಯಾಗಿದ್ದ ರಾಧೆಯನ್ನೂ ತನ್ನ ಪ್ರೀತಿಯ ಗೋವುಗಳನ್ನೂ ಗೋಪಿಯರನ್ನೂ ಮತ್ತೆ ತಾನೆಂದಿಗೂ ಮರಳದ ಗೋಕುಲಕೆ ಪಾಂಚಜನ್ಯವ ನುಡಿಸಿದ ತುಟಿಗಳೆಂದೂ ಕೊಳಲ ಸ್ಪರ್ಶಿಸಲಿಲ್ಲ. ಇಂತಹ ಒಂದು “ಗೋಕುಲ ನಿರ್ಗಮನ” ವೆಂಬ ಕನ್ನಡ ಸಾಹಿತ್ಯದ ಪಾಲಿಗೆ ದೊಡ್ಡ ಮೆಟಾಫರ್ ಆಗಿ ನೀಡಿದವರು ಪು.ತಿ.ನ. ತಮ್ಮ ಗೋಕುಲ ನಿರ್ಗಮನವೆಂಬ ಗೀತರೂಪಕದ ಮೂಲಕ.

ಈ ಗೀತರೂಪಕವು ಎಲ್ಲ ನಿರ್ಗಮನಗಳಿಗೆ ಆದಿಮ ರೂಪಕವೆಂಬಂತೆ ಇಂದಿಗೂ ಒಂದು ಮುಖ್ಯ ಸಮಸ್ಯಾತ್ಮಕ ಪಠ್ಯವಾಗಿ ಉಳಿದುಕೊಂಡು ಬಂದಿದೆ. ಕೃಷ್ಣನು ಗೋಕುಲವೆಂಬ ಹಳ್ಳಿಯಿಂದ ನಿರ್ಗಮಿಸಿದ್ದು ಕೇವಲ ಒಂದು ಸ್ಥಳಾಂತರವಾಗಿರಲಿಲ್ಲ. ಒಂದು ಜೀವನ ಕ್ರಮದಿಂದ ಮತ್ತೊಂದು ಬೇರೆಯದೇ ಆದ ಜೀವನಕ್ರಮಕ್ಕೆ ಅವನು ಶಾಶ್ವತವಾಗಿ ತೆರಳಿಬಿಟ್ಟಿದ್ದ. ಅವನ ಕೈಯಲ್ಲಿದ್ದ ಕೊಳಲು ಗೋಕುಲದಲ್ಲಿಯೇ ಉಳಿದು ಹೋಯಿತು. ಗೋಕುಲದ ಹಾಡು ನೃತ್ಯಗಳಿಗಿಂತ ಮಥುರೆಯ ಬಿಲ್ಲುಹಬ್ಬ ಅವನನ್ನು ಹೆಚ್ಚು ಆಕರ್ಷಿಸಿತೆ? ಮುಂದೆ ಅವನ ಕೈ ಹಿಡಿದಿದ್ದು ಸುದರ್ಶನ ಚಕ್ರ. ಮೊಳಗಿಸಿದ್ದು ಪಾಂಚಜನ್ಯವನ್ನು. ಅವನು ಮತ್ತೆ ಗೋಕುಲಕ್ಕೆ ಹಿಂದಿರುಗಲಿಲ್ಲ. ಇದು ಕೃಷ್ಣ ವ್ಯಕ್ತಿತ್ವದ ಸಹಜ ವಿಕಾಸವನ್ನಷ್ಟೇ ಸೂಚಿಸುತ್ತದೆಯೆ? ಕೃಷ್ಣನಿಲ್ಲದೆಯೂ ಗೋಕುಲದ ಬದುಕು ಮುಂದುವರೆಯಿತಲ್ಲವೇ ? ( ಕಾವ್ಯ ಪ್ರೀತಿ – ಟಿ ಪಿ ಅಶೋಕ)

*****

ಎಚ್ ಎಸ್ ವೆಂಕಟೇಶಮೂರ್ತಿ ಎಂದರೆ ನನ್ನ ಪಾಲಿಗೆ ಕನ್ನಡ ಕಾವ್ಯದ ಮೂರ್ತಿ. ಒಂದೂ ಊನಗಳಿಲ್ಲದ ಗರ್ಭಗುಡಿಯ ಆಪ್ತ ಕತ್ತಲಿಗೂ ಸಲ್ಲುವ ಜಾತ್ರೆಯಲಿ ತೇರೆಳೆಯುವ ಗೌಜು ಗದ್ದಲಗೂ ಸಲ್ಲುವ ಕನ್ನಡದ ನಿಜದ ತೇರೆಳೆಯುವ ಉತ್ಸವಮೂರ್ತಿಯೂ ಹೌದು. ಅವರ ಕವಿತೆಗಳಂತೆ ಅವರ ಮಾತುಗಳೂ ಅಷ್ಟೇ ತಿಳಿ ತೂಕ. ಬಾಲಕೃಷ್ಣ ನಿಲುಮೆಯ ಮೇಲಿನ ಬೆಣ್ಣೆ ಕದಿಯುವಾಗಿನ ನಯ ನಾಜೂಕಿನಂತಹ ನುಡಿಗಳು.

ರಾಮ ಕೃಷ್ಣರಂತಹ ಪುರಾಣ ಪುರುಷರು ಇವರ ಕವಿತೆಗಳಲ್ಲಿ “ಯದಾ ಯದಾ ಹೀ ಅಧರ್ಮಸ್ಯ ಗ್ಲಾನಿರ್ಭವತಿ ಭಾರತ” ಎನ್ನುವಂತೆ ಮತ್ತೆ ಮತ್ತೆ ಅವತಾರ ಪುರುಷರಾಗಿ ನಮ್ಮೆದುರಿಗೆ ಪ್ರತ್ಯಕ್ಷವಾಗುತ್ತಾರೆ. ಹೀಗಾಗಿ ಇವರ ಕವಿತೆಗಳಲ್ಲಿ ಎಲ್ಲಿಯೂ ಒಂಟಿ ರಾಮ ಪೂಜೆಗೊಳ್ಳುವುದಿಲ್ಲ. ಅವನೇನಿದ್ದರೂ ಸಂಸಾರ ಸಮೇತ ಶ್ರೀ ರಾಮಚಂದ್ರ. ಮನುಷ್ಯ ಮಾತ್ರವಲ್ಲ ಅಳಿಲಿಗೂ ಅವನ ಭುಜದ ಮೇಲೆ ಸ್ಥಾನವಿದೆ.

“ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ:
ಹೆಗಲ ಬಿಲ್ಲ ಕೆಳಗಿಳಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ”.
ಥಟ್ಟನೇ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲು ಮರಿ!
ರಾಮಧ್ಯಾನಿಸಿದ ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ”

ಹೀಗೆ ಕೋದಂಡರಾಮನ ಹೆಗಲಬಿಲ್ಲನ್ನು ಅತಿ ವಿನಯವಾಗಿ ತೆಗೆಸುವ ತಾಕತ್ತು ಒಬ್ಬ ನಿಜವಾದ ಕವಿಗೆ ಮಾತ್ರ ಸಾಧ್ಯ. ವಸುದೈವ ಕುಟುಂಬಕಮ್ ಎಂಬ ಕಲ್ಪನೆಯಲ್ಲಿ ಅಗಾಧ ನಂಬಿಕೆಯಿರಬೇಕು. ಜಾತಿ ಧರ್ಮ ಮತ ಪಂಥಗಳಲ್ಲಿ ಸಧ್ಯ ಹೊತ್ತಿ ಉರಿಯುತ್ತಿರುವ ಭಾರತದ ಬೀದಿಗಳಿಗೆ ಬೇಕಿರುವುದು ಇಂತಹ ಎಲ್ಲರನ್ನೂ ಒಳಗೊಳ್ಳುವ ಮಾತೃಪ್ರೀತಿಯ ಕಾವ್ಯದ ಭಾಷೆ.

ಇವರ ಇನ್ನೊಂದು ಮಹತ್ವದ ಕವಿತೆ “ಅಮೇರಿಕದಲ್ಲಿ ಬಿಲ್ಲು ಹಬ್ಬ” ಕೂಡ ಪ್ರಸ್ತುತದ ಅತೀ ಮಹತ್ವದ ಸಂಗತಿಯಾಗಿ ನಿಲ್ಲುತ್ತದೆ. ಈ ಕವಿತೆಯಲ್ಲಿ ಕೃಷ್ಣ ಕೇವಲ ಪವಾಡ ಪುರುಷನಾಗಿ ನಿಲ್ಲದೆ ಆಧುನಿಕ ಜಗತ್ತಿನ ಎಲ್ಲ ಯುವ ಜನಾಂಗದ ಎಲ್ಲ ತಳಮಳ ತಲ್ಲಣಗಳ ಪ್ರತಿಮೆಯಾಗಿ ನಿಲ್ಲುತ್ತಾನೆ.

“ಮಧುರೆಗೆ ಹೋದವನು ಮಾಧವ ಬರುವನೊ ಬಾರನೊ ಹೋದವ
ಗೋಕುಲದಲಿ ಪದ ಉಳಿದವು ರಾಗಗಳೆಲ್ಲೋ ಕಳೆದವು
ಬಾನ ನೆಲುವಿನಲಿ ನವನೀತ
ಮರುಳುವನೇ ಹೋದವನೀತ
ಅಳುತಿದೆ ಹೃದಯವು ಶ್ಯಾಮನಿಗೆ
ತಡೆಯುಂಟೇ ನಿಸ್ಸೀಮನಿಗೆ?
ಮಧುರೆಗೆ ಹೋದರು ಮೋಹನ
ಕಾದೇ ಇದೆ ಬೃಂದಾವನ “

ಕೃಷ್ಣನು ಗೋಕುಲವೆಂಬ ಹಳ್ಳಿಯಿಂದ ನಿರ್ಗಮಿಸಿದ್ದು ಕೇವಲ ಒಂದು ಸ್ಥಳಾಂತರವಾಗಿರಲಿಲ್ಲ. ಒಂದು ಜೀವನ ಕ್ರಮದಿಂದ ಮತ್ತೊಂದು ಬೇರೆಯದೇ ಆದ ಜೀವನಕ್ರಮಕ್ಕೆ ಅವನು ಶಾಶ್ವತವಾಗಿ ತೆರಳಿಬಿಟ್ಟಿದ್ದ. ಅವನ ಕೈಯಲ್ಲಿದ್ದ ಕೊಳಲು ಗೋಕುಲದಲ್ಲಿಯೇ ಉಳಿದು ಹೋಯಿತು. ಗೋಕುಲದ ಹಾಡು ನೃತ್ಯಗಳಿಗಿಂತ ಮಥುರೆಯ ಬಿಲ್ಲುಹಬ್ಬ ಅವನನ್ನು ಹೆಚ್ಚು ಆಕರ್ಷಿಸಿತೆ? ಮುಂದೆ ಅವನ ಕೈ ಹಿಡಿದಿದ್ದು ಸುದರ್ಶನ ಚಕ್ರ.

ಬೆಂಗಳೂರಿಗೆ ತೆರಳಿದ ಪ್ರತಿ ಯುವಕನಿಗೆ ಗೋಕುಲವೆಂಬ ತನ್ನೂರಿನ ಸ್ವಾಗತ ಸದಾ ಇದ್ದೇ ಇದೆ. ಹಳ್ಳಿಯ ಹಾಡು ಆ ನದೀ ತಟದ ಬಾಲ್ಯದ ಆಟ ಟೂರಿಂಗ್ ಟಾಕೀಜಿನ ಸಿನೇಮಾ ವಯಸ್ಸಾದ ತಂದೆ ತಾಯಿ ಎಲ್ಲ ಬಿಟ್ಟು ನಡೆದವನಿಗೆ ಊರ ನೆನಪು ಬಾರದೇ ಇರುತ್ತದೆಯೇ? ಆದರೂ ಅವನು ಊರಿಗೆ ಮರಳಲಾರ. ಕೈಯಲ್ಲಿ ಸುದರ್ಶನ ಚಕ್ರವಿದೆ. (ಹಳ್ಳಿಗಳಿಂದ ಬಂದ ಡ್ರೈವರುಗಳ ಕೈಯಲ್ಲಿನ ಓಲಾ ಕ್ಯಾಬು ಟಿ.ಟಿ.ಗಳ ಸ್ಟೇರಿಂಗ್ ನ್ನು ಜಯಂತ್ ಸುದರ್ಶನ ಚಕ್ರವೆಂದೇ ಹೊಸನಾಮಕರಣ ಮಾಡಿದ್ದಾರೆ) ಕೊನೆಗೆ ಎಲ್ಲ ಖಾಲಿಯಾಗಿ ಈಗ ಹಳ್ಳಿಗಳು ಕೇವಲ ವೃದ್ಧಾಶ್ರಮಗಳೆನ್ನುವುದನ್ನು ಕವಿ ಹೀಗೆ ಹೇಳುತ್ತಾರೆ.

ಒಂದರ ಹಿಂದಿನ್ನೊಬ್ಬರಹಿಂದಿನ್ನೊಬ್ಬರು
ಅಮೆರಿಕದೆಡೆಗೆ
ಕೈ ಕಾಲಿದ್ದವರಷ್ಟೇ ಉಳಿದರು
ಬೃಂದಾವನದಲಿ ಕಡೆಗೆ
ಇರುಳು ಬಿಕ್ಕಳಿಕೆ: ಒಂದೇ ರಾಗ
ದೂರದಲ್ಲಿ ಶಹನಾಯಿ
ಅಮ್ಮಾ ನಿಮ್ಮಾ ಮನೆಗಳಲ್ಲಿ ನಮ್ಮಾ ಕೃಷ್ಣನ ಕಂಡಿರಾ ತಾಯಿ.”

ಎಂದು ಹಲಬುವ ವೃದ್ಧ ತಂದೆ ತಾಯಿಯರು ಮಾಶಾಸನದ ಅರ್ಜಿ ಫಾರ್ಮು ತುಂಬಲು ಊರಿನಲ್ಲೊಬ್ಬನೇ ಉಳಿದ ಕನ್ನಡ ಶಾಲೆಯ ಮಾಸ್ತರರ ಎದಿರು ಗೋಗರೆಯುತ್ತಿದ್ದಾರೆ.

*****

ಬರಹದ ಆರಂಭದಲ್ಲಿ ಪ್ರಸ್ತಾಪಿಸಿದ ಪು ತಿ ನ ರವರ ಗೋಕುಲ ನಿರ್ಗಮನವೆಂಬ ಗೀತರೂಪಕವೂ ಎಚ್ಚೆಸ್ವಿಯವರ ಅಮೇರಿಕದಲ್ಲಿ ಬಿಲ್ಲು ಹಬ್ಬವೆಂಬ ಕವಿತೆಯೂ ಕನ್ನಡ ಕಾವ್ಯ ಪರಂಪರೆಯ ಮುಂದುವರೆದ ಭಾಗದ ಕೊಂಡಿಯಂತೆ ಪರಸ್ಪರ ಅಂತರಾಳದಲ್ಲಿ ಜೋಡಿಸಲ್ಪಟ್ಟಿವೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗೆ ಕಾವ್ಯ ಮಾತ್ರವಲ್ಲ ಇವರ ಕಾಲದ ಒಡನಾಟವೂ ತಲೆ – ತಲೆಮಾರಿನ ಒಂದು ಕೊಂಡಿಯಂತಹ ಒಂದು ಘಟನೆ ಹೇಳುತ್ತೇನೆ.

ಆಗ ಪು .ತಿ.ನ. ಕೂಡ ಬೆಂಗಳೂರಿನಲ್ಲಿದ್ದರು ವಯೋಸಹಜ ಕಾಯಿಲೆಗಳು, ಕಿವಿ ಕೇಳುತ್ತಿರಲಿಲ್ಲ, ಕಣ್ಣು ಕಾಣುತ್ತಿರಲಿಲ್ಲ. ಇಂತಹ ಸಂದರ್ಭದ ಒಂದು ದಿನ ವೆಂಕಟೇಶ ಮೂರ್ತಿಯವರು ಹಿರಿಯಕವಿಯನ್ನು ಭೇಟಿ ಮಾಡಲು ಹೋಗುತ್ತಾರೆ. ಇವರು ಹೋದಾಗ ಇಳಿಸಂಜೆ, ಇನ್ನೇನು ಸೂರ್ಯ ಮುಳುಗುವ ಹೊತ್ತು. ಆಗ ಗೋಡೆಯೆಡೆಗೆ ಮುಖಮಾಡಿ ಕುಳಿತ ಪು ತಿ ನ ಅವರ ಸ್ಥಿತಿಯನ್ನು ಕಂಡು ಮೂರ್ತಿಯವರಿಗೆ ಕರಳು ಕತ್ತರಿಸಿದಂತಾಗುತ್ತದೆ. ವೃದ್ಧಾಪ್ಯದ ಕಷ್ಟ ಕಾರ್ಪಣ್ಯಗಳು ಅವರೆದುರಿಗೆ ಬಂದು ಅವರಿಗೆ ಅಯ್ಯೋ ಎನಿಸುತ್ತದೆ.

ಸರ್ ನೀವು ಗೋಡೆಗೆ ಮುಖ ಮಾಡಿ ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದೀರಿ. ಬಾಗಿಲು ವಿರುದ್ಧ ದಿಕ್ಕಿನಲ್ಲಿದೆ ಏಳಿ! ಕುರ್ಚಿಯನ್ನು ಸರಿಯಾಗಿ ಹಾಕುತ್ತೇನೆ.

“ಏನಪ್ಪಾ ಮೂರ್ತಿ ಅಲ್ವ? ಬನ್ನಿ ಬನ್ನಿ…”
“ಮೊದಲು ನಿಮ್ಮ ಕುರ್ಚಿಯನ್ನು ಸರಿಯಾದ ದಿಕ್ಕಿಗೆ ಹಾಕುತ್ತೇನೆ ಏಳಿ ”
“ನನ್ನ ಕುರ್ಚಿ ಸರಿಯಾದ ದಿಕ್ಕಿನಲ್ಲೇ ಇದೆಯಲ್ಲಯ್ಯ …..”

“ಸಾರ್! ನೀವು ಗೋಡೆಗೆ ಮುಖಮಾಡಿ ಕೂತಿದ್ದೀರಿ ”

“ಈಗ ಎಷ್ಟು ಸಮಯ ”

“ಸಂಜೆ ಆರು ”

“ಅಂದರೆ ಸೂರ್ಯ ಮುಳುಗುವ ಹೊತ್ತು .. ನಮ್ಮ ಮನೆಯ ಮುಂಬಾಗಿಲು ಪೂರ್ವಕ್ಕಿದೆ… ಸೂರ್ಯ ಮುಳುಗುತ್ತಿರುವುದು ಪಶ್ಚಿಮದಲ್ಲಿ… ನಾನು ಪಶ್ಚಿಮಕ್ಕೆ ತಿರುಗಿ ಕೂತು ಸೂರ್ಯ ಭಗವಾನನ ದರ್ಶನ ಮಾಡುತ್ತಿದ್ದೇನೆ…. ನಾನು ಸರಿಯಾಗಿಯೇ ಕೂತಿದ್ದೇನೆ… ದಿಕ್ಕು ತಪ್ಪಿಲ್ಲವಯ್ಯಾ ನಾನು!”

ಇವರ ಮಾತಿಗೆ ಮೂರ್ತಿಯವರು ತಬ್ಬಿಬ್ಬಾಗಿ, ಅವರಿಗೆ ಕಣ್ಣು ಕಾಣುತ್ತಿಲ್ಲ – ಎಂದು ಭಾವಿಸಿ ಎಂಥಾ ದಡ್ಡನಾದೆನಲ್ಲ ಎಂದು ಪರಿತಪಿಸುತ್ತಾರೆ.

ಆಗ ಪು ತಿ ನ ಹೇಳುತ್ತಾರೆ – ‘ಕವಿಯಾದವನು ಕಾಣುವುದರ ಆಚೆ ಇರುವ ಕಾಣ್ಕೆಯನ್ನು ಪಡೆಯಬೇಕಯ್ಯ! ಕಂಡದ್ದು ನೋಟ. ಕಂಡದ್ದರ ಆಚೆ ಕಾಣುವಂಥದ್ದು ಕಾಣ್ಕೆ: ದರ್ಶನ. ಹಾಗೆ ಕಾಣಬಲ್ಲನಾಗದವನು ಕವಿಯಾಗಲಾರ. ಕಂಡವರಿಗಷ್ಟೇ ಕಾಣುವುದು ಇದರ ನೆಲೆಯು ಅಂತ ಬೆಂದ್ರೆ ತಮ್ಮ ಕವಿತೆಯಲ್ಲಿ ಹೇಳಿಲ್ಲವೇ?

ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂದು ಬೆಂದ್ರೆ ಕೇಳಿದರು. ನಾನೂ ಒಂದು ಹಕ್ಕಿಯನ್ನು ನೋಡಿದೆ! ಅದು ಬಾನಲ್ಲಿ ಹಾರುತ್ತಾ ಹೋದ ಗರುಡ. ಆ ಗರುಡನ ನೆರಳು ನನಗೆ ಗಾಂಧಿಯಂತೆ ತೋರಿತು. ಹಾಗೆ ತೋರಿದ್ದಕ್ಕೇ ಅದು ಕವಿತೆ ಆಯಿತು. ನೀನು ಒಳ್ಳೆಯ ಕವಿಯಾಗಬೇಕೋ ಕಂಡದ್ದರ ಆಚೆ ನೋಡುವುದನ್ನು ಅಭ್ಯಾಸ ಮಾಡು” ಎಂದು ಮೂರ್ತಿಯವರಿಗೆ ಹೇಳುತ್ತಾರೆ.

ಇದು ಪು .ತಿ.ನ ಕೇವಲ ವೆಂಕಟೇಶ ಮೂರ್ತಿವರಿಗಷ್ಟೇ ಹೇಳದೆ ಕವಿಯಾಗಬೇಕೆಂದು ಬರೆಯುತ್ತಿರುವ ಈಗಿನ ಎಲ್ಲರಿಗೂ ಹೇಳಿದ ಕಿವಿಮಾತಿನಂತಿಲ್ಲವೇ?
ಕತ್ತಲಲ್ಲಿ ಗೀರಿದ ಬೆಳಕಿನ ಕಡ್ಡಿಯಂತೆ ಮೂರ್ತಿಯವರ ಮನೋಗರ್ಭದಲ್ಲಿ ಒಮ್ಮೆ ಬೆಳಗಿ ಅಂಧಕಾರಕ್ಕೆ ಒಂದು ಆಕಾರ ಬರೆದಿತ್ತು.

ಈಗ ಕತ್ತಲೆಯ ಕಡ್ಡಿ ಗೀರುವ ಸರದಿ ಎಚ್ ಎಸ್ ವೆಂಕಟೇಶಮೂರ್ತಿಯವರದ್ದು. ಸಮ್ಮೇಳದ ಜ್ಯೋತಿ ನಮ್ಮಂತಹ ಕವಿಗಳ ಮನಸಿನ ಕತ್ತಲಿಗೂ ಒಂದು ಆಕಾರ ಕೊಡಲಿ… ಅಷ್ಟಕ್ಕೂ ಕಾವ್ಯ ಪರಂಪರೆಯೆಂಬುದು ಒಂದು ರಿಲೇ ಓಟದಂತೆ. ಅಥವ ಓಲಂಪಿಕ್ ಜ್ಯೋತಿಯಂತೆ ಪಡೆದವರು ಕೊಡುತ್ತಾ ಹೋಗುತ್ತಾರೆ….. ಶುಭಾಶಯ ಸರ್

*ಗ್ರಂಥ ಋಣ – ಬೆಳಗಾಗಿ ನಾನೆದ್ದು ಲೇ- ಎಚ್ ಎಸ್ ವೆಂಕಟೇಶ ಮೂರ್ತಿ ಬಹುರೂಪಿ ಪ್ರಕಾಶನ ಬೆಂಗಳೂರು.