ಗೌರಿಯ ಎದುರು ಒಂದೂವರೆ ಕಾಲಿನಲ್ಲಿ ಕುಳಿತು, ಮುದುಕ ಜೋಯಿಸರು ಕಟ್ಟುತ್ತಿದ್ದ ಒಂಭತ್ತು ಗಂಟಿನ ಗೌರಿ ದಾರವನ್ನು ಕೈಗೆ ಕಟ್ಟಿಸಿಕೊಳ್ಳುತ್ತಾ ಇರುವಾಗ, ಪ್ರತಿಸಾರಿಯೂ ಹಿಂದಿನಿಂದ ಅಜ್ಜಿ ತಪ್ಪದೇ ಹೇಳುತ್ತಿದ್ದ ಮಾತು: ‘ಒಳ್ಳೇ ಗಂಡನ್ನ ಕೊಡು ಅಂತ ಗೌರಿ ದೇವ್ರ ಹತ್ರ ಕೇಳ್ಕಳ್ರೇ..’. ಊದುಬತ್ತಿ, ನಾನಾ ತೆರದ ಹೂವುಗಳು, ಗಂಧ – ಪಂಚಾಮೃತದ ಪರಿಮಳ, ಮಂದ ಬೆಳಕಿನ ಕಾಲುದೀಪ. ಬಳೆಬಿಚ್ಚೋಲೆಗಳೊಂದಿಗೆ, ಸೂಕ್ಷ್ಮ ಕುಸುರಿಯಂತಿರುತ್ತಿದ್ದ ಹತ್ತಿಯ ಹಾರದೊಂದಿಗೆ ಕಂಗೊಳಿಸುತ್ತಿದ್ದ ಮಣ್ಣಿನ ಮುಖದ ಗೌರಿಯ ಎದುರಲ್ಲಿ ಕೈಗೆ ದಾರ ಕಟ್ಟಿಕೊಂಡು ನಮಸ್ಕಾರ ಮಾಡುವಾಗ ಒಳ್ಳೇ ಗಂಡನ್ನ ಕೊಡು ಅಂತ ಕೇಳುವುದು ಮರೆತೇ ಹೋಗಿರುತ್ತಿತ್ತು. ಬದಲು ‘ನನ್ನ ಗಂಡ ಎಂಬವವ ಹೇಗಿರಬಹುದು? ಅವನು ಈಗ ಎಲ್ಲಿರಬಹುದು? ಎಷ್ಟನೇ ಕ್ಲಾಸು ಕಲಿಯುತ್ತಿರಬಹುದು?’ ಎಂದೆಲ್ಲ ರೋಮಾಂಚನಗೊಳಿಸುವ ಅಲೆಮಾರಿ ಚಿಂತೆಗಳೇ ಮನದಲ್ಲಿ ಸುಳಿಯುತ್ತಿರುವಾಗ… ನಾವು ಹುಡುಗಿಯರೆಲ್ಲ ಕಿಸಪಿಸ ನಗುತ್ತ, ನಮ್ಮ ಕೈಗೆ ಯಾವ ಬಣ್ಣದ ದಾರ ಬಂದೀತೆಂದು ಯೋಚಿಸುತ್ತ, ದಬಕ್ಕನೆ ಜೋಯಿಸರ ಕಾಲಿಗೆ ಬಿದ್ದು, ದಾರ ಕಟ್ಟಿದ್ದೇ ಹೊರಗೆ ಓಟ…

ಗೌರಿ ಹಬ್ಬವೆಂದರೆ ಅಜ್ಜಿಯ ಮನೆಯಲ್ಲಿ ಮಕ್ಕಳ ಸಂತೆ ನೆರೆಯಿತು ಎಂದೇ ಅರ್ಥ. ಅಜ್ಜಿಯ ಆರು ಹೆಣ್ಣು ಮಕ್ಕಳೂ, ಅವರ ಇಪ್ಪತ್ತು ಮೊಮ್ಮಕ್ಕಳೂ ಒಟ್ಟು ಕೂಡಿ ಅಲ್ಲೊಂದು ಉಪಾಧ್ಯಾಯರಿಲ್ಲದ ಶಾಲೆ ನಿರ್ಮಾಣವಾಗಿ ಮಕ್ಕಳನ್ನೆಲ್ಲ ನಿಯಂತ್ರಿಸಲು ಹಿರಿಯರು ಹರಸಾಹಸ ಪಡುತ್ತಿದ್ದ ಸಮಯ. ಬೇರೆಬೇರೆ ಊರಿನಲ್ಲಿದ್ದ ಎಲ್ಲರೂ ಒಟ್ಟು ಸೇರಲು ಅದೊಂದು ಸದವಕಾಶ. ಯಾರ‍್ಯಾರು ಎಂತೆಂಥ ಲಂಗ ಹೊಲಿಸಿಕೊಂಡುಬಂದಿದ್ದಾರೆ, ಈ ಸಲ ಯಾರ ಜಡೆ ಎಷ್ಟುದ್ದ ಆಗಿದೆ, ಯಾರು ದೊಡ್ಡವರಾದರು, ಯಾರಿಗೆ ಮೀಸೆ ಬಂದಿದೆ.. ಇತ್ಯಾದಿ ಖಾಸಾ ವಿಚಾರಗಳು ಮಕ್ಕಳಲ್ಲೇ ವಿನಿಮಯಗೊಳ್ಳುವ ಸಮಯವೂ ಹೌದು.

ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ? ನಾವೆಲ್ಲ ಹಬ್ಬದ ದಿನ ಬೆಳಿಗ್ಗೆ ಎದ್ದು ಕಣ್ಣುತಿಕ್ಕುವುದರೊಳಗೆ ಅವಳಾಗಲೇ ಎದ್ದು ಅಡಿಗೆ ಮನೆಯ ಬಾಗಿಲು ಹಾಕಿಕೊಂಡಿರುತ್ತಿದ್ದಳು. ಮತ್ತೆ ಅಜ್ಜಿ ಬಾಗಿಲು ತೆರೆದು ಹೊರಬರುತ್ತಿದ್ದಿದ್ದು ಪೂಜೆಯ ಕರೆ ಬಂದಾಗಲೇ. ಜೊತೆಗೆ ಅವಳ ಒಂದಿಬ್ಬರು ಹೆಣ್ಣುಮಕ್ಕಳೂ ಸೇರಿ, ಒದ್ದೆ ಕೂದಲ ನೀರಿಳಿಸುತ್ತ, ಮಡಿಸೀರೆಯುಟ್ಟು, ಮುಚ್ಚಿದ ಬಾಗಿಲ ಹಿಂದೆ ದಡಬಡ ಮಾಡುತ್ತ, ಅಂದಿನ ಅಡಿಗೆ ತಯಾರಿ ಮುಗಿಸಿಯೇ ಹೊರಬರುತ್ತಿದ್ದಿದ್ದು. ಒಳಗಿನಿಂದ ವಿಧವಿಧ ಭಕ್ಷ್ಯಗಳ ಸಿಹಿ ಪರಿಮಳ ಘಂ ಎಂದು ಮೂಗಿಗೆ ಬಡಿಯುತ್ತಿರುವಾಗ ತಿನ್ನಲು ಬರೀ ಒಂದು ಮುಷ್ಟಿ ಅವಲಕ್ಕಿ ಹೊರಗಿಟ್ಟರೆ ಎಷ್ಟು ನಿರಾಶೆಯಾಗಲಿಕ್ಕಿಲ್ಲ? ಚೆನ್ನಾಗಿ ಹೊಟ್ಟೆ ಹಸಿದರೆ ಆಮೇಲೆ ಹೋಳಿಗೆ ಊಟ ಚೆನ್ನಾಗಿ ಸೇರುತ್ತದೆ ಅನ್ನುವುದು ಅಜ್ಜಿಯ ನೀತಿ. ಅಥವಾ ಆ ದೊಡ್ಡ ಪಟಾಲಂಗೆ ತಿಂಡಿ ಮಾಡಿ ಹಂಚುತ್ತಾ ಕೂತರೆ ಉಳಿದ ಕೆಲಸ ಸಾಗುವುದಿಲ್ಲ ಎಂಬ ಉಪಾಯವೂ ಇರಬಹುದು. ಅಂತೂ ಮತ್ಯಾವಾಗ ಹೋಳಿಗೆ ಮಾಡಿದರೂ ಗೌರಿಹಬ್ಬದ ದಿನದ ರುಚಿ ಇರದೇ ಇದ್ದುದಕ್ಕೆ ಹೊಟ್ಟೆಖಾಲಿಇಡುವ ಉಪಾಯವೂ ಒಂದು ಕಾರಣವಿರಬಹುದು.

‘ಪೂಜಿಸಿದಳು ಗೌರಿಯ, ಧರಣಿಜ ಸೀತೆ..

ಪಂಕಜ ವದನೆಯು ಶಂಕರ ರಾಣಿಗೆ
ಕುಂಕುಮ ಅರಿಶಿನ ಕುಸುಮಗಳಿಂದಲಿ..

ಮಿಥಿಲಾ ನಗರದ ಜನಕನ ಮನೆಯೊಳು
ದಶರಥರಾಮನ ವಶ ಮಾಡೆನ್ನುತ…’

ಆರತಿ ಮಾಡುತ್ತಾ ಅಜ್ಜಿಯ ಈ ಹಾಡು ಕೇಳಿತೆಂದರೆ ವ್ರತದಪೂಜೆ ಮುಗಿಯಿತೆಂದು ಲೆಕ್ಕ. ಓಹೋ, ಹಾಗಾದರೆ ಸೀತಾಮಾತೆ ಕೂಡ ರಾಮನಂತಹ ಗಂಡ ಸಿಗಲೆಂದು ಗೌರಿಪೂಜೆ ಮಾಡಿದ್ದಳೆ?

ಆ ಗೌರಮ್ಮನಾದರೂ ಎಷ್ಟು ಒಳ್ಳೆಯವಳು! ವ್ರತದ ಕತೆ ಕೇಳಿ ನಮಗೆ ಆಗೆಲ್ಲ ಅಚ್ಚರಿ. ಬೇಡಿಕೊಂಡವರಿಗೆಲ್ಲ ಒಳ್ಳೆಯ ಗಂಡ ಸಿಗುವ ಹಾಗೆ ಮಾಡುತ್ತಾಳೆ. ಮದುವೆಯಾದವರು ಬೇಡಿಕೊಂಡರೆ ಅವರ ಗಂಡನ ಆಯಸ್ಸು ಹೆಚ್ಚಿಸುತ್ತಾಳೆ ಈ ಪುಣ್ಯದೇವತೆ! ಹಾಗಾದರೆ ನನ್ನ ಗೆಳತಿ ಮುಮ್ತಾಜ್ ಗೌರಿಪೂಜೆ ಮಾಡುವುದಿಲ್ಲ, ಅವಳಿಗೆ ಕೆಟ್ಟ ಗಂಡನೇ ಗತಿಯೆ? ಮನೆ ಕೆಲಸದ ಕೆಂಚಮ್ಮನೂ ಅಷ್ಟೇ, ಪೂಜೆ ಮಾಡುವುದಿಲ್ಲವಂತೆ. ಅದಕ್ಕೇ ಅವಳ ಗಂಡನಿಗೆ ಆಕ್ಸಿಡೆಂಟಾಗಿ ತೀರಿಕೊಂಡನೆ? ಅಜ್ಜಿ ಮನೆಯಲ್ಲಿರುತ್ತಿದ್ದ ಕೆಂಪುಸೀರೆಯ ಶ್ಯಾಮತ್ತೆ ಮೇಲೆ ಗೌರಿಗೆ ಸಿಟ್ಟು ಬಂದಿದ್ದು ಏಕೆ? ಅವರ ಮದುವೆಯಾಗಿ ಒಂದೇ ವರ್ಷಕ್ಕೆ ಗಂಡ ಸತ್ತುಹೋದನಂತಲ್ಲ? ಅಜ್ಜಿ ಗೌರಿಪೂಜೆ ಮಾಡಿದಂತೆ ಗಣಪತಿ ಪೂಜೆ ಏಕೆ ಮಾಡುವುದಿಲ್ಲ? ನಮ್ಮ ಇಂತಹ ತಲೆಹರಟೆ ಅಡ್ಡಾದಿಡ್ಡಿ ಪ್ರಶ್ನೆಗಳಿಗೆ ಪೂಜೆಗೆ ಮೊದಲು ಅಜ್ಜನ ಕಾಲಿಗೆ ನಮಸ್ಕಾರ ಮಾಡುತ್ತಿದ್ದ ಅಜ್ಜಿಯ ಬಳಿಯಾಗಲೀ, ಎಷ್ಟು ಓದಿದರೂ ಗಳಿಸಿದರೂ ಮಕ್ಕಳುಮರಿ ಮನೆಕೆಲಸ ಎಲ್ಲ ಹೆಂಗಸರಿಗೇ ಗಂಟುಬಿದ್ದ ಕರ್ಮಗಳೆಂದು ಆಗಾಗ ಗೊಣಗುಡುತ್ತಿದ್ದ ಅಮ್ಮನ ಬಳಿಯಾಗಲೀ ಉತ್ತರವಿರುತ್ತಿರಲಿಲ್ಲ.

ಸರಬರಗುಡುತ್ತಿದ್ದ ಹೊಸಲಂಗಕ್ಕೆ ಆಗಷ್ಟೇ ಕಟ್ಟಿಕೊಂಡ ಗೌರಿದಾರದ ರಂಗುಬಣ್ಣ ತಾಗದಂತೆ ಎಚ್ಚರಿಕೆ ವಹಿಸುತ್ತ ಮೇಲೆದ್ದ ನಂತರ ನಮ್ಮ ಮುಂದಿನ ನಿರೀಕ್ಷೆ ಹೋಳಿಗೆಯದ್ದು. ಆದರೆ ಅಷ್ಟು ಬೇಗ ಅಲ್ಲಿಯ ಕಾರ್ಯಕ್ರಮ ಮುಗಿಯಬೇಕಲ್ಲ? ‘ಬನ್ರೇ’ ಎಂದು ತಮ್ಮ ಕೈಯಲ್ಲಿ ಮೊರದ ಮೇಲೆ ಮೊರದ ಬಾಗಿನ ಹಿಡಿದು, ನಮ್ಮ ಕೈಲಿ ಅರಿಶಿನ ಕುಂಕುಮದ ಬಟ್ಟಲೋ, ವೀಳ್ಯದೆಲೆ ಕೋಸಂಬರಿಯನ್ನೋ, ಮಳೆ ಬಂದರೆ ಇರಲೆಂದು ಛತ್ರಿಯನ್ನೋ ಕೊಟ್ಟು ಹೊರಡಿಸುತ್ತಿದ್ದ ಅಮ್ಮ ದೊಡ್ಡಮ್ಮಂದಿರು ಕೇರಿಯಲ್ಲಿ ಮೆರವಣಿಗೆ ತರಹ ಸಾಗಿ ಒಬ್ಬೊಬ್ಬರಿಗೆ ಬಾಗಿನ ಕೊಟ್ಟು ಬರುತ್ತಿದ್ದರು. ನಮ್ಮಮ್ಮ ಮಾತ್ರ ಒಂದೆರೆಡು ಮೊರದ ಬಾಗಿನ ಅವಳ ನೆಚ್ಚಿನವರಿಗೇ ಕೊಡಲೆಂದು ಕಾದಿಡುತ್ತಿದ್ದಳು. ಅವರು ಮರುದಿನ ಗಣಪತಿ ನೋಡಲು ಬಂದಾಗ ಕೊಟ್ಟರೂ ಸರಿಯೆ, ಅದು ಅವರಿಗೇ ತಲುಪಬೇಕು. ಹೋದಲ್ಲೆಲ್ಲ ಕೊಟ್ಟ ಕೋಸಂಬರಿ ಬಾಳೆಹಣ್ಣು ತಿಂದು, ತಿರುಗಾಡಿ ದಣಿದು ಮನೆಗೆ ಬಂದ ಮೇಲೆ ಊಟ. ಇಷ್ಟೊತ್ತೂ ಉಪವಾಸ ಮಾಡಿದ್ದು ಸಾರ್ಥಕವೆಂಬ ಹಾಗೆ ತಯಾರಿರುತ್ತಿದ್ದ ಅಂಬೊಡೆ, ಪಾಯಸ, ಹೋಳಿಗೆ, ಚಿತ್ರಾನ್ನದ ಊಟ…

ಊಟವೆಲ್ಲ ಆದಮೇಲೆ ಎಲೆಅಡಿಕೆ ಹಾಕಿಕೊಳ್ಳುತ್ತ, ಮಲಗಿದ್ದ ಗಂಡಸರಿಗೆ ಎಚ್ಚರವಾಗದ ಹಾಗೆ ಗುಸುಗುಸು ಮಾಡುತ್ತ ಕೂತಿರುತ್ತಿದ್ದ ಹೆಂಗಸರು ಅವರ ಮಾತಿನೊಳಗೆ ನಮ್ಮನ್ನು ಸೇರಿಸುತ್ತಲೇ ಇರಲಿಲ್ಲ, ‘ಆಟ ಆಡ್ಕೊಳ್ರಿ’ ಎಂದು ಹೊರಕಳಿಸುತ್ತಿದ್ದರು. ಕಂಡೂಕಾಣದಂತೆ ಅಜ್ಜಿ ಮುಸುಮುಸು ಅಳುತ್ತಿದ್ದದ್ದು ಒಗಟಾಗಿತ್ತು. ಗೌರಿಹಬ್ಬದಂದೇ ಲಿವರಿನ ಕಾಯಿಲೆಯಾಗಿ ಸತ್ತುಹೋಗಿದ್ದ ಹತ್ತು ವರ್ಷದ ಕಿರಿಮಗಳನ್ನು ನೆನಪಿಸಿಕೊಂಡು ಬೇಸರಿಸುತ್ತಿದ್ದದ್ದು ಅಂತ ಅಮ್ಮ ಆಮೇಲ್ಯಾವಾಗಲೋ ಹೇಳಿದ್ದಳು.

ಹಬ್ಬದ ಊಟವೆಂದರೆ ನೆನಪಾಗುವ ಮುಮ್ತಾಜ್… ಬಾಲ್ಯದ ನನ್ನ ಆಪ್ತ ಗೆಳತಿ. ಎಂತಹ ಮುಗ್ಧ ದಿನಗಳವು. ಹಬ್ಬದ ದಿನಗಳಲ್ಲಿ ನಮ್ಮನೆಯಲ್ಲೇ ಊಟ ಮಾಡುತ್ತಿದ್ದ ಅವಳಿಗೆ ಗಣಪತಿ ಹಬ್ಬವೆಂದರೆ ತುಂಬ ಇಷ್ಟ. ತನ್ನಮ್ಮನ ಬಳಿಯೂ ಹೇಳಿ ಹಠ ಮಾಡಿ ಪ್ರತಿಸಾರಿ ಚಕ್ಕುಲಿ ಕರಿಗಡುಬು ಮಾಡಿಸುತ್ತಿದ್ದಳು. ಅಜ್ಜಿಮನೆಗೆ ಹೋಗಿರುತ್ತಿದ್ದ ನಾವು ಊರಿಗೆ ವಾಪಸಾದ ಮೇಲೆ ಅಮ್ಮ ನಮ್ಮನೆಯ ಚಕ್ಕುಲಿ ಕೊಟ್ಟು ಕಳಿಸುತ್ತಿದ್ದರು. ‘ಏನಂದ್ರೂ ನಂಗೆ ನಿಮ್ತರ ಮಾಡ್ಲಿಕ್ಕೆ ಬರೂದಿಲ್ಲ’ ಎನ್ನುತ್ತ ಅವಳಮ್ಮ ನಮ್ಮ ಚಕ್ಕುಲಿಗೆ ಪ್ರಶಸ್ತಿಪತ್ರ ಕೊಡುತ್ತಿದ್ದರು. ನಾವೆಲ್ಲ ಚೌತಿಹಬ್ಬದ ಮರುದಿನ ಹೊಸಲಂಗ ಹಾಕಿಕೊಂಡು ಶಾಲೆಗೆ ಹೋಗುವಾಗ, ತನಗೂ ಹಾಕಿಕೊಳ್ಳಲು ಬೇಕೇಬೇಕೆಂದು ಹಠ ಮಾಡಿ, ಪ್ರತಿ ಗಣಪತಿ ಹಬ್ಬಕ್ಕೊಂದು ಹೊಸಲಂಗ ಹೊಲಿಸಿಕೊಳ್ಳುತ್ತಿದ್ದಳು. ನಾನೆಲ್ಲಾದರೂ ಕದ್ದು ಕೊಡುತ್ತಿದ್ದ ಪಂಚಾಮೃತ ಎಂದರೆ ಅಷ್ಟು ಇಷ್ಟ ಅವಳಿಗೆ… ನಮ್ಮಮ್ಮನ ತಿಳಿಸಾರೆಂದರೆ ಅವಳಿಗೆ, ಅವಳಮ್ಮನ ಬೆಳ್ಳುಳ್ಳಿ ಒಗ್ಗರಣೆಯ ದಾಲ್ ನನಗೆ ಇಷ್ಟವಾಗಿ ನಾವಿಬ್ಬರೂ ಶಾಲೆಯಲ್ಲಿ ಊಟದ ಡಬ್ಬಿ ಹಂಚಿಕೊಳ್ಳದ ದಿನಗಳು ಕಡಿಮೆ. ಚಪ್ಪಲಿ ಅಂಗಡಿ ಇಟ್ಟಿದ್ದ ಅವಳ ಅಪ್ಪ ತಮಾಷೆ ಮಾಡುತ್ತಿದ್ದರು: ಯಾವದಾದರೂ ಒಳ್ಳೇ ಅಡಿಗೆ ಗೊತ್ತಿರೋ ಹುಡುಗನ್ನ ನೀವೇ ನೋಡ್ಬಿಡಿ, ಅಂವಂಗೇ ಮದುವೆ ಮಾಡಿಬಿಡ್ತೇನೆ ಎಂದು…

******

ಎಷ್ಟೆಲ್ಲ ಈಗ ಕಾಲನ ವಶ?

ಅಕಾಲಮರಣಕ್ಕೀಡಾದ ಮುಮ್ತಾಜ್ ಈಗ ನೆನಪು… ಅವಳ ಮನೆಗೂ ನಮ್ಮಮ್ಮನ ಮನೆಗೂ ನಡುವೆ ದೊಡ್ಡ ಗಟಾರವೊಂದು ಹರಿಯುತ್ತಾ ಆಚೆ ದಾಟುವುದೇ ಕಷ್ಟವಾಗಿದೆ.

ಅಜ್ಜಿ ಅದೆಷ್ಟು ವರ್ಷ ಗೌರಿಪೂಜೆ ಮಾಡಿದ್ದರೇನು? ಮುತ್ತೈದೆಯಾಗಿ ಸಾಯಬೇಕೆನ್ನುವ ಅವಳ ಪ್ರಾರ್ಥನೆಯನ್ನು ಮನ್ನಿಸದ ದೇವರು ಇಪ್ಪತ್ತು ವರ್ಷದ ಕೆಳಗೇ ಅಜ್ಜನನ್ನು ಕರೆದುಕೊಂಡು ಹೋಗಿಬಿಟ್ಟಿದ್ದಾನೆ. ಇವಳನ್ನು ಅರುಳುಮರುಳಿನ ಶತಾಯುಷಿಯನ್ನಾಗಿ ಮಾಡಲು ಹೊರಟಿದ್ದಾನೆ…

‘ಎಷ್ಟ್ ಪೂಜೆ ಮಾಡಿದ್ರೂ ಅಷ್ಟೇಯ ಕಣೆ. ಒಳ್ಳೇ ಗಂಡ ಸಿಗೋದಾದ್ರೆ ಸಿಗ್ತಾನೆ, ಇಲ್ದಿದ್ರೆ ಇಲ್ಲ. ನಾನಂತೂ ಇನ್ಮೇಲೆ ವ್ರತ, ಕತೆ ಏನೂ ಮಾಡಲ್ಲ’ ಎಂದು ಏಕಾಏಕಿ ಘೋಷಿಸಿ, ಗೌರಿಹಬ್ಬದ ಬಾಬ್ತೆಂದು ತರಕಾರಿಯ ರಂಗಮ್ಮನಿಗೆ ಹಣ ಕೊಟ್ಟು ಬಾಗಿನ ಕೊಟ್ಟ ತೃಪ್ತಿ ಕಾಣುವ ಅಮ್ಮ..

ಬಿಟ್ಟರೆ ಪರಂಪರೆ ಅಳಿಯುವುದೋ, ಹಿಡಿದರೆ ಕಂದಾಚಾರ ಪೋಷಿಸಿಕೊಂಡುಬಂದಂತಾಗುವುದೋ ಎಂಬ ಗೋಜಲಿನಲ್ಲಿ ಹೊಸ್ತಿಲ ಮೇಲೆ ನಿಂತ ನಾನು…

‘ಅಮ್ಮ, ಸ್ವರ್ಣಗೌರೀವ್ರತ ಅಂದ್ರೇನು? ಅದರ ಬಗ್ಗೆ ಜನರಲ್‌ನಾಲೆಜ್ ಪೀರಿಯಡ್ಡಿನಲ್ಲಿ ಮಿಸ್ ಕೇಳಿದರೆ ನಂಗೆ ಗೊತ್ತೇ ಇರಲಿಲ್ಲ..’ ಎಂದು ವಿಷಣ್ಣಳಾಗುವ ಮಗಳು..

ಗಂಡಸಿಗೆ ತಿಳಿಯಬಹುದೇ ಗೌರಿಯರ ದುಃಖಗಳು?!

[ಚಿತ್ರ-ರಾಥೋಡ್]