ಭದ್ರಬಾಹು ಗುಹೆಯಿಂದ ಅನತಿ ದೂರದಲ್ಲಿರುವ ಬಸದಿಗಳ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಮಾನಸ್ತಂಭವೊಂದು ಇದಿರಾಗುತ್ತದೆ. ಇದನ್ನು ಕೂಗೆ ಬ್ರಹ್ಮದೇವನ ಸ್ತಂಭ ಎಂತಲೂ ಕರೆಯುವರು. ಈ ಸ್ತಂಭವು ಗಂಗರ ಕಾಲಕ್ಕೆ ಸೇರಿದ್ದು (ಕ್ರಿ.ಶ. 976), ಗಂಗ ಅರಸ ಮಾನಸಿಂಹನ ಗೌರವಾರ್ಥ ನಿರ್ಮಿಸಲಾಗಿದೆ. ಮಾನಸಿಂಹನ ಪರಾಕ್ರಮವನ್ನು ವರ್ಣಿಸುವ ಶಾಸನವೂ ಈ ಸ್ತಂಭದ ಮೇಲೆ ಬರೆಯಲ್ಪಟ್ಟಿದೆ. ಎಡಕ್ಕೆ ಹೊರಳಿ ಮುಂದುವರೆದರೆ ಮೊದಲು ಕಾಣುವ ಬಸದಿ ಶಾಂತಿನಾಥ ತೀರ್ಥಂಕರನದು. ಹನ್ನೆರಡು ಅಡಿ ಎತ್ತರದ ಭವ್ಯಮೂರ್ತಿ ಸುಂದರವಾಗಿದೆ. ಮುಂದೆ ಹೊರಾಂಗಣದಲ್ಲಿ ಕಾಣುವ ಭಗ್ನವಿಗ್ರಹವು ಬಾಹುಬಲಿಯ ಸೋದರ ಭರತನದೆಂದು ಹೇಳಲಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ  ದೇಗುಲಗಳ ಸರಣಿಯ ಹತ್ತನೇಯ ಕಂತು

 

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲೆ ಜಗತ್ಪ್ರಸಿದ್ಧ ಗೊಮ್ಮಟೇಶ್ವರನ ಮೂರ್ತಿಯಿದೆ. ಬೆಟ್ಟದ ಬುಡದಲ್ಲಿ ದೊಡ್ಡದೊಂದು ಕೊಳ. ಸುತ್ತ ಹರಡಿಕೊಂಡ ಊರು. ಕೊಳದ ಇನ್ನೊಂದು ಬದಿಗೆ ಇರುವ ಬೆಟ್ಟವೇ ಚಂದ್ರಗಿರಿ. ಇತಿಹಾಸದಲ್ಲಿ ಕಳ್ವಪ್ಪು ಎನ್ನಿಸಿಕೊಂಡ ಈ ಬೆಟ್ಟ ವಿಂಧ್ಯಗಿರಿಗಿಂತ ಎತ್ತರದಲ್ಲಿ ಚಿಕ್ಕದು. ದೊಡ್ಡಬೆಟ್ಟದಲ್ಲಿ ಚಾವುಂಡರಾಯನು ಬಾಹುಬಲಿಯ ವಿಗ್ರಹವನ್ನು ಸ್ಥಾಪಿಸುವುದಕ್ಕೆ (ಕ್ರಿ.ಶ. 980) ಬಹು ಮುನ್ನವೇ ಚಂದ್ರಗಿರಿಯು ಜೈನಧರ್ಮದ ಪವಿತ್ರಕ್ಷೇತ್ರಗಳಲ್ಲಿ ಒಂದೆನಿಸಿತ್ತು.

ಕ್ರಿಸ್ತಪೂರ್ವ ಮೂರನೆಯ ಶತಮಾನದಿಂದಲೇ ಇಲ್ಲಿಯ ಕ್ಷೇತ್ರಮಹಿಮೆ ಬಿತ್ತರಗೊಳ್ಳತೊಡಗಿದೆ. ಶ್ರುತಕೇವಲಿಗಳೆನಿಸಿದ ಭದ್ರಬಾಹು ಮುನಿಗಳು ದಕ್ಷಿಣಕ್ಕೆ ಬಂದು ಈ ಚಂದ್ರಗಿರಿಯ ಗುಹೆಯೊಂದರಲ್ಲಿ ತಪೋನಿರತರಾಗಿ ನಿರ್ವಾಣಹೊಂದಿದರು. ಇಲ್ಲಿಗೆ ಯಾತ್ರಾರ್ಥಿಯಾಗಿ ಬಂದ ಮೌರ್ಯಚಕ್ರವರ್ತಿ ಚಂದ್ರಗುಪ್ತನು ಇಲ್ಲಿಯೇ ಉಳಿದುಕೊಂಡು ಸನ್ಯಾಸಿಯಾಗಿ ಭದ್ರಬಾಹುವಿನ ಪಾದಪೂಜೆಯನ್ನು ಕೈಗೊಂಡು ಸಲ್ಲೇಖನವ್ರತದಿಂದ ಪ್ರಾಣತ್ಯಾಗಮಾಡಿದನೆಂದೂ ನಂಬಲಾಗಿದೆ.


ಹೀಗೆ, ಎರಡೂವರೆ ಸಾವಿರ ವರುಷಗಳಿಂದ ಜೈನಯತಿಗಳ, ಸಾಧಕರ ತಪಸ್ಸಿನ ತಾಣವೆನಿಸಿದ ಚಂದ್ರಗಿರಿಯಲ್ಲಿ ಜೈನಧರ್ಮದ ಹಿರಿಮೆಯನ್ನು ಸಾರುವ ನೂರಾರು ಶಾಸನಗಳು ಕಂಡುಬರುತ್ತವೆ. ಕ್ರಿ.ಶ. ಆರನೆಯ ಶತಮಾನದಿಂದ ಮೊದಲುಗೊಂಡು ಹತ್ತೊಂಬತ್ತನೆಯ ಶತಮಾನದವರೆಗೂ ವಿಸ್ತರಿಸಿರುವ ಕಾಲಾವಧಿಯಲ್ಲಿ ಈ ಶಾಸನಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಪೂರ್ವದ ಹಳಗನ್ನಡ ಲಿಪಿಯಿರುವ ಶಾಸನಗಳೂ ಮಹಾಕವಿ ರನ್ನ ಹಾಗೂ ಚಾವುಂಡರಾಯರ ಹಸ್ತಾಕ್ಷರವಿರುವ ಶಿಲಾಲಿಖಿತಗಳೂ ಇರುವುದು ಗಮನಾರ್ಹ.

ಚಂದ್ರಗಿರಿಯ ಧಾರ್ಮಿಕಮಹತ್ವ ಹೆಚ್ಚತೊಡಗಿದಂತೆ ಅನೇಕ ಬಸದಿಗಳೂ ಇಲ್ಲಿ ನಿರ್ಮಾಣಗೊಂಡವು. ಹತ್ತನೆಯ ಶತಮಾನದ ವೇಳೆಗೆ ನಿರ್ಮಾಣಗೊಂಡಿದ್ದ ಚಂದ್ರಗುಪ್ತ ಬಸದಿ, ಚಾವುಂಡರಾಯ ಬಸದಿ, ಹನ್ನೆರಡನೆಯ ಶತಮಾನದಲ್ಲಿ ವಿಷ್ಣುವರ್ಧನನ ಪತ್ನಿ ಶಾಂತಲೆ ಕಟ್ಟಿಸಿದ ಬಸದಿಯೂ ಸೇರಿ ಇಲ್ಲಿ ಹದಿಮೂರು ಬಸದಿಗಳಿವೆ. ವಿವಿಧ ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ಇವುಗಳ ಜೀರ್ಣೋದ್ಧಾರವೂ ನಡೆದಿದೆ.

ಭದ್ರಬಾಹು ಗುಹೆಯಿಂದ ಅನತಿ ದೂರದಲ್ಲಿರುವ ಬಸದಿಗಳ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಮಾನಸ್ತಂಭವೊಂದು ಇದಿರಾಗುತ್ತದೆ. ಇದನ್ನು ಕೂಗೆ ಬ್ರಹ್ಮದೇವನ ಸ್ತಂಭ ಎಂತಲೂ ಕರೆಯುವರು. ಈ ಸ್ತಂಭವು ಗಂಗರ ಕಾಲಕ್ಕೆ ಸೇರಿದ್ದು (ಕ್ರಿ.ಶ. 976), ಗಂಗ ಅರಸ ಮಾನಸಿಂಹನ ಗೌರವಾರ್ಥ ನಿರ್ಮಿಸಲಾಗಿದೆ. ಮಾನಸಿಂಹನ ಪರಾಕ್ರಮವನ್ನು ವರ್ಣಿಸುವ ಶಾಸನವೂ ಈ ಸ್ತಂಭದ ಮೇಲೆ ಬರೆಯಲ್ಪಟ್ಟಿದೆ. ಎಡಕ್ಕೆ ಹೊರಳಿ ಮುಂದುವರೆದರೆ ಮೊದಲು ಕಾಣುವ ಬಸದಿ ಶಾಂತಿನಾಥ ತೀರ್ಥಂಕರನದು. ಹನ್ನೆರಡು ಅಡಿ ಎತ್ತರದ ಭವ್ಯಮೂರ್ತಿ ಸುಂದರವಾಗಿದೆ. ಮುಂದೆ ಹೊರಾಂಗಣದಲ್ಲಿ ಕಾಣುವ ಭಗ್ನವಿಗ್ರಹವು ಬಾಹುಬಲಿಯ ಸೋದರ ಭರತನದೆಂದು ಹೇಳಲಾಗಿದೆ. ಹತ್ತನೆಯ ಶತಮಾನದಲ್ಲಿ ಅರಿಷ್ಠನೇಮಿ ಎಂಬ ಶಿಲ್ಪಿಯು ಬಾಹುಬಲಿಯ ವಿಗ್ರಹವನ್ನು ಕೆತ್ತುವ ಮುನ್ನ ಭರತನ ವಿಗ್ರಹವನ್ನು ಕಡೆದಿರಬೇಕೆಂದು ಒಂದು ಊಹೆ.

ಮಾನಸ್ತಂಭವನ್ನು ದಾಟಿ ಹಲವಾರು ಶಾಸನಗಳ ಬದಿಯಲ್ಲಿರುವ ದೊಡ್ಡ ಕಟ್ಟಡ ಪಾರ್ಶ್ವನಾಥ ಬಸದಿ. ಇಲ್ಲಿರುವ ಪಾರ್ಶ್ವನಾಥ ತೀರ್ಥಂಕರನ ಮೂರ್ತಿ ಹದಿನೈದು ಅಡಿಗಳಷ್ಟು ಎತ್ತರವಿದೆ. ಗರ್ಭಗುಡಿಯೂ ನವರಂಗವೂ ಕಂಬ, ಕಿರು ಗೋಪುರಗಳಿಂದ ಅಲಂಕೃತವಾಗಿವೆ. ಪಾರ್ಶ್ವನಾಥನ ಶಿಲ್ಪದ ಮೇಲುಗಡೆ ಚಿತ್ರಿಸಿರುವ ಏಳುಹೆಡೆಗಳ ಸರ್ಪ ಸಾಲಂಕೃತವಾಗಿದೆ.

ಮುಂದೆ ಚಂದ್ರಗುಪ್ತನ ಬಸದಿ. ಚಂದ್ರಗುಪ್ತನ ಕಾಲಾನಂತರ ಅವನ ಶಿಷ್ಯರು ಕಟ್ಟಿಸಿದರೆನ್ನಲಾದ ಈ ಬಸದಿಯ ಶಿಖರ, ಒಳಗುಡಿಯಲ್ಲಿರುವ ಯಕ್ಷ-ಯಕ್ಷಿಯರ ಶಿಲ್ಪಗಳು ಆಕರ್ಷಕವಾಗಿವೆ. ಮೊದಲ ತೀರ್ಥಂಕರ ಆದಿನಾಥನ ಬಸದಿಯನ್ನು ಕತ್ತಲೆ ಬಸದಿ ಎಂದೂ ಕರೆಯುವರು. ಚಂದ್ರಪ್ರಭ ಬಸದಿಯಲ್ಲಿರುವ ಅಂಬಿಕಾ ಯಕ್ಷಿ ಹಾಗೂ ಸರ್ವಾಹ್ಣ ಯಕ್ಷರ ಪ್ರತಿಮೆಗಳು ಗಂಗರ ಕಾಲದ ಉತ್ತಮ ಶಿಲ್ಪಕಲೆಗೆ ಮಾದರಿಗಳಾಗಿವೆ. ಗಂಗರ ಕಾಲದ ಇನ್ನಷ್ಟು ಸೊಗಸಾದ ಶಿಲ್ಪಗಳನ್ನು ಸನಿಹದ ಪಾರ್ಶ್ವನಾಥ ಬಸದಿಯಲ್ಲೂ ಕಾಣಬಹುದು. ಇಲ್ಲಿ ಧ್ಯಾನಸ್ಥನಾಗಿ ಕುಳಿತ ಪಾರ್ಶ್ವನಾಥ, ಆತನ ತಲೆಯ ಮೇಲೆ ಏಳು ಹೆಡೆಯ ಸರ್ಪ, ಅಕ್ಕಪಕ್ಕಗಳಲ್ಲಿರುವ ಚಾಮರಧಾರಿಗಳ ಮೂರ್ತಿಗಳು ಎಲ್ಲವೂ ಅತ್ಯಾಕರ್ಷಕ ಶಿಲ್ಪಗಳು.

ಚಿಕ್ಕಬೆಟ್ಟದ ಮೇಲಿರುವ ಬಸದಿಗಳಲ್ಲಿ ಪ್ರಮುಖವಾದುದು ಚಾವುಂಡರಾಯ ಬಸದಿ. ಇದನ್ನು ಚಾವುಂಡರಾಯನೇ ಕಟ್ಟಿಸಿರಬಹುದೆಂದು ಹೇಳಲಾಗಿದೆ. ಹತ್ತನೆಯ ಶತಮಾನದ ಗಂಗರಾಜರ ಕಾಲದ ಈ ಕಟ್ಟಡವೂ ವಾಸ್ತುವಿನ್ಯಾಸ, ಶಿಲ್ಪಗಳೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. ಒಳಗುಡಿಯಲ್ಲಿರುವ ನೇಮಿನಾಥನ ಶಿಲ್ಪವನ್ನು ಹೊಯ್ಸಳರ ಪ್ರಸಿದ್ಧ ಶಿಲ್ಪಿ ಗಂಗಾಚಾರಿಯೆಂಬುವವನು ನಿರ್ಮಿಸಿದನು. ಬಸದಿಯ ಶಿಖರವೂ ಸುತ್ತಲಿನ ಗೋಡೆಯಂಚಿನ ಕಿರುಗೋಪುರಗಳೂ ಅವುಗಳಲ್ಲಿ ಚಿತ್ರಿಸಿರುವ ಜಿನಬಿಂಬಗಳೂ ಕೀರ್ತಿಮುಖಗಳೂ ಕಣ್ಸೆಳೆಯುತ್ತವೆ.

ಚಂದ್ರಗಿರಿಯಲ್ಲಿರುವ ಬಸದಿಗಳಲ್ಲಿ ಸವತಿಗಂಧವಾರಣ ಬಸದಿಯನ್ನು ಮರೆಯದೆ ನೋಡಬೇಕು. ಹೊಯ್ಸಳ ವಿಷ್ಣುವರ್ಧನನ ಪತ್ನಿ ಶಾಂತಲೆಯು ಕಟ್ಟಿಸಿದ ಈ ಬಸದಿಗೆ ಅವಳ ಬಿರುದುಗಳಲ್ಲಿ ಒಂದನ್ನೇ ಹೆಸರಾಗಿ ಕೊಟ್ಟಿದೆ. 1123ರಲ್ಲಿ ಶಾಂತಲೆಯೇ ಬರೆಯಿಸಿದ ಶಾಸನವನ್ನು ಬಸದಿಯ ಹೊರಭಾಗದಲ್ಲಿ ಕಾಣಬಹುದು.