ಮಡಿಲ‌ ತುಂಬಾ ಅಣಬೆ

ಇವಳೆ
ಎಂದೊ‌ ಉಂಡದ್ದಕ್ಕೆ ಈಗ
ನಾಲಗೆ
ನೀರಿನಿಂದೆದ್ದ ಮೀನಿನಂತೆ
ಅದರುತ್ತಿದ್ದೆ
ಈ ಅಕ್ಷರಗಳ ತಿಳಿ ನೀರಿನಲ್ಲಿ
ಆ ಮೀನುಗಳೊಂದಿಗೆ ನಾವು ಈಜೋಣ ಬಾರೆ
ನೀ ಎಲ್ಲೊ ನಾ ಎಲ್ಲೊ
ಇದ್ದರೇನಂತೆ
ಎಲ್ಲೊ ಎಲ್ಲೊ ಇದ್ದಾಗಲೇ ಅಲ್ಲವಾ
ಎಲ್ಲ ಆಗಿದ್ದು
ನಿನ್ನ ತರಲೆಯ ಒಂದೊಂದು ಮಾತಿಗೆ
ನಾ ಯುಗಾದಿಯ ಕಕ್ಕೆ ಹೂವಂತೆ ಮಿನುಗಿದ್ದು

ಆಗೆಲ್ಲ ರಸ್ತೆಗಳು ಸ್ವಾಗತಿಸುತ್ತಿದ್ದವು
ನಮ್ಮಿಬ್ಬರ ಸ್ವಾಗತಕ್ಕೆ ರಾತ್ರಿ ಪೂರ್ತಿ ಸ್ನಾನ ಮಾಡಿಕೊಂಡು
ರಸ್ತೆ ಬದಿಯ ಮರಗಳು ಅಷ್ಟೆ
ಬೀಸಣಿಕೆ ಹಿಡಿದು
ಮುಂದೊಮ್ಮೆ ಹುಟ್ಟುವ ಅನೇಕ ಪ್ರಶ್ನೆಗಳನ್ನು ಬೇರಿನಲ್ಲಿರಿಸಿಕೊಂಡಿದ್ದವು

‘ಉಯ್ಯೊ ಉಯ್ಯೊ ಮಳೆರಾಯ’
ಈ ಪದ್ಯ ನಾವು ಹಾಡದೇ ಇದ್ದರೂ
ದೋ ಸುರಿಯತಲ್ಲ ಮಳೆ
ಅದು ಯಾವ ಸತ್ಯ ತೊಳೆಯಲಿಕ್ಕೆ
ಎಷ್ಟೊ ವರ್ಷಗಳು ಲೇವಡಿ ಮಾಡಿಸಿಕೊಂಡ ಕೆರೆ
ಜಂಬ ಪಡಲಿಕ್ಕೆ
ಆ ಮಳೆಗೆ ಚಳಿ ಹೆಚ್ಚಾಗಿತ್ತು
ಮುಂದಿನದು ನಿನಗೆ ಗೊತ್ತು

ಬೆಳಗ್ಗೆ ಎದ್ದರೆ ಊರಲ್ಲೆಲ್ಲ
ಅಣಬೆಯ ಮಾತು
ಎಷ್ಟೊಂದು ಚಂದ ಆ ಕೆರೆಯ ಕಾಲು ಹಾದಿ
ಬುದ್ಧನಂತ ಹೊಂಗೆ ಮರಗಳು
ಅಲ್ಲಲ್ಲಿ ಬಿದ್ದಿರುತ್ತಿದ್ದ
ಯಾರೊ ಕುಡಿದ ಬಿಯರ್ ಬಾಟಲಿಗಳು
ಬೆಂಕಿಯಲ್ಲಿ ಬೆಂದ ಕಪ್ಪು ಕಲ್ಲಿನ ಒಲೆಗಳು
ಆದರೆ ಆವತ್ತು ಸಿಕ್ಕಿದ್ದು ಮಾತ್ರ
ಮಡಿಲ ತುಂಬಾ ಅಣಬೆ
ನಾನು ಬೇಗ ಬೇಗ ಅಗೆದೆ
ನೀನು ಇಂತವನ್ನೆಲ್ಲ ಮೊದಲ ಬಾರಿ ಕಂಡಂತೆ ನಲಿದೆ

ಮುಪ್ಪಾದರೂ ಅಪ್ಪುಗೆಯ ಶಾಖ ಎದೆಯಲ್ಲಿದೆ
ನಿನ್ನ ಮಾತಿನಲ್ಲಿ ಬಂದ
ಊರುಗಳು
ನನ್ನ ಬಾಲ್ಯದ ಆಟಿಕೆಗಳಂತೆ
ಸೆಳೆಯುತ್ತಿವೆ
ನಾಟಿ ಹಸುವಿನ ಹಾಲು
ಗಿಡದಲ್ಲೆ ಹಣ್ಣಾದ ಬಾಳೆಗೊನೆ
ದಪ್ಪ ತೊಳೆಯ ಹಲಸು
ಸ್ವಲ್ಪ ದಿನ ನಮ್ಮೊಂದಿಗೆ ಬಂದು
ಯಾವನದೊ ಕಾರಿಗೆ ಸಿಕ್ಕು ಸತ್ತ ನಾಯಿಮರಿ
ಪೊದೆಯಲ್ಲಿ ಕೈ ಹಾಕಿ ತೆಗೆದ ಜೇನು
ಚಳಿಗಾಲದಲ್ಲಿ ಕೈ ಹಿಡಿದ ತೆಂಗಿನ ಗರಿಯ ಬೆಂಕಿ
ಹೊಸ ಸ್ನೇಹಗಳು ಹೊತ್ತು ತಂದ ತಾಪತ್ರಯ
ಇನ್ನೂ ಬಾಕಿ ಉಳಿದ ಮುಂದಿನ ಪದ್ಯ

 

ಚಂದ್ರು ಎಂ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರಿನವರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ ಎ ಪತ್ರಿಕೋದ್ಯಮ ಪದವೀಧರರಾಗಿದ್ದಾರೆ‌. 
ಸಿರಿ ಸೌಂದರ್ಯ ಮಾಸಪತ್ರಿಕೆ ಮತ್ತು ವಿಶ್ವವಾಣಿ ದೈನಿಕದಲ್ಲಿ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.
2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಗೊಂಡ ಇವರ “ಎಂಟಾಣೆ ಪೆಪ್ಪರುಮೆಂಟು” ಕವನ ಸಂಕಲನ ಬಿಡುಗಡೆಯ ಹಂತದಲ್ಲಿದೆ.