ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ. ಸಿನೆಮಾ ನೋಡಿ ಮನೆಗೆ ಹೋದಾಗ ಅಪ್ಪನ ಕೈಲಿ ಅಣ್ಣ ಚೆನ್ನಾಗಿ ಬೈಯಿಸಿಕೊಳ್ಳುತ್ತಿದ್ದದ್ದು ನೆನಪಿದೆ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಅಧ್ಯಾಯ.
(ಗ್ರೀಕ್ ಪುರಾಣದಲ್ಲಿ Ladyrinth ಎನ್ನುವುದು ಒಂದು ಗೊಂದಲಹುಟ್ಟಿಸುವಂತಹ ವಿನ್ಯಾಸ. ಇದನ್ನು ಪ್ರಸಿದ್ಧ ವಾಸ್ತುಶಾಸ್ತ್ರಜ್ಞ ಡೇಡಾಲಸ್ ಕ್ರೀಟೆಯ ರಾಜ ಮಿನೊಸ್ ಗಾಗಿ ರೂಪಿಸಿದನು. ಧೀರ ಥೀಸಸ್ ಕೊಂದ ಮನುಷ್ಯಗೂಳಿಯಾಕಾರದ ರಾಕ್ಷಸನನ್ನು ಬಂಧಿಸುವ ಉದ್ದೇಶದಿಂದ ಇದನ್ನು ರೂಪಿಸಲಾಯಿತು. ಆದರೆ ಅದನ್ನು ರೂಪಿಸಿದ ಡೇಡಾಲಸ್ ಗೆ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ.)
1928 ನನಗಾಗ ಹದಿನೆಂಟು ವರ್ಷ.. ಆ ವರ್ಷವೇ “ಮಾರ್ಚ್ 15”ರ ಘಟನೆ ನಡೆದದ್ದು. ಆ ಘಟನೆಯಲ್ಲಿ ಕಮ್ಯುನಿಸ್ಟ್ ಪಕ್ಷದವರನ್ನು ಸಾಮೂಹಿಕವಾಗಿ ಬಂಧಿಸಲಾಯಿತು. ಜಪಾನಿ ಸೇನಾಧಿಕಾರಿಗಳು ಮಂಚೂರಿಯನ್ ಸೈನ್ಯಾಧಿಕಾರಿ ಚಾಂಗ್ ಟಸ್ಸೊ –ಲಿನ್ ನನ್ನು ಹತ್ಯೆ ಮಾಡಿದರು. ಇದಾದ ಮರುವರ್ಷದಲ್ಲಿ ಆರ್ಥಿಕ ಹಿಂಜರಿತವನ್ನು ಜಪಾನ್ ಎದರಿಸಬೇಕಾಯಿತು. ಇದು ಜಪಾನಿನ ಆರ್ಥಿಕತೆಯ ಬುಡವನ್ನೇ ಅಲುಗಾಡಿಸಿತು. ಎಲ್ಲೆಡೆ ಪ್ರಗತಿಶೀಲ ಚಳುವಳಿಯ ಕಾವು ಹೆಚ್ಚಿತು. ಲಲಿತ ಕಲೆಗಳು ಇದರಿಂದ ಹೊರತಾಗಲಿಲ್ಲ. ಕಲೆಯ ಚಳುವಳಿಯು ದುರಿತಕಾಲದ ನೋವು ತುಂಬಿದ ವಾಸ್ತವಿಕತೆಯಿಂದ ದೂರ ಸರಿಯಿತು. ಇದನ್ನು “ಲೈಂಗಿಕ ವಿಕೃತಿಯ ಮೂರ್ಖತನ”ವೆಂದೇ ಗುರುತಿಸಲಾಯಿತು.
ಈ ಎಲ್ಲ ಸಾಮಾಜಿಕ ಏರಿಳಿತಗಳ ನಡುವೆ ಕ್ಯಾನ್ವಾಸ್ ಮುಂದೆ ತಣ್ಣಗೆ ಕೂತು ಚಿತ್ರ ಬಿಡಿಸುವುದು ನನ್ನ ಮಟ್ಟಿಗಂತೂ ಅಸಾಧ್ಯದ ಕೆಲಸವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ವಾಸ್, ಚಿತ್ರ ಬಿಡಿಸುವ ಪರಿಕರಗಳೆಲ್ಲ ಸಾಕಷ್ಟು ದುಬಾರಿಯಾಗಿದ್ದವು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಇವನ್ನು ನನಗೆ ಕೊಡಿಸಿ ಎಂದು ಕೇಳುವುದು ಕಷ್ಟವಾಗಿತ್ತು. ಸಂಪೂರ್ಣವಾಗಿ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಸಾಹಿತ್ಯ, ನಾಟಕ, ಸಂಗೀತ ಮತ್ತು ಸಿನಿಮಾಗಳ ಅನ್ವೇಷಣೆಯಲ್ಲಿ ತೊಡಗಿದೆ.
ಸರಿಸುಮಾರು ಅದೇ ಸಮಯದಲ್ಲಿ “ಯೆನ್ ಬುಕ್ಸ್” (yen ಜಪಾನಿ ಹಣ) ಎನ್ನುವುದು ಮುದ್ರಣ ಕ್ಷೇತ್ರದಲ್ಲಿ ಬಹಳ ಹೆಸರುವಾಸಿಯಾಗಿತ್ತು. ಒಂದು ಯೆನ್ ಗೆ ಒಂದು ಪುಸ್ತಕ, ಹಾಗಾಗಿ ಅದನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಮಾರುಕಟ್ಟೆಯಲ್ಲಿ ಜಪಾನಿ ಸಾಹಿತ್ಯಕೃತಿಗಳಲ್ಲದೆ ಬೇರೆಭಾಷೆಗಳ ಅನುವಾದಿತ ಕೃತಿಗಳ ಪ್ರವಾಹವೇ ಸೃಷ್ಟಿಯಾಗಿತ್ತು. ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಲ್ಲಿ ಇದೇ ಪುಸ್ತಕಗಳು ಐವತ್ತು ಸೆನ್ ಕೆಲವೊಮ್ಮೆ ಮೂವತ್ತು ಸೆನ್ ಗೆ ಸಿಗುತ್ತಿತ್ತು. ಹಾಗಾಗಿ ನಂಗೆಷ್ಟು ಬೇಕೋ ಅಷ್ಟು ಪುಸ್ತಕಗಳನ್ನು ಕೊಳ್ಳಬಹುದಿತ್ತು. ಶಿಕ್ಷಣಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವ ಅಗತ್ಯವಿಲ್ಲದ ನನ್ನಂತಹವರಿಗೆ ಈ ರೀತಿ ಬೇಕಾದ್ದನ್ನು ಓದುವುದಕ್ಕೆ ಸಮಯ ಬೇಕಾದಷ್ಟಿತ್ತು. ಜಪಾನಿ ಮತ್ತು ವಿದೇಶಿ ಎನ್ನದೇ ಎಲ್ಲ ಬಗೆಯ ಹಳೆಯ ಹಾಗೂ ಸಮಕಾಲೀನ ಸಾಹಿತ್ಯವನ್ನು ಓದಿದೆ. ರಾತ್ರಿ ಹೊದಿಕೆಗಳಡಿಯಲ್ಲಿ ಪುಸ್ತಕ ಇಟ್ಟುಕೊಂಡು ಓದಿದೆ. ರಸ್ತೆಯಲ್ಲಿ ನಡೆಯುವಾಗ ಪುಸ್ತಕ ಓದಿದೆ.
ಶಿಂಕೋಕುಗೆಕಿ ನಾಟಕ ನೋಡಲು ಥಿಯೇಟರ್ ಗೆ ಹೋಗಿದ್ದೆ. ಮೆಜಿ಼ ಕಾಲದ ಜಾಗವನ್ನು ಆಕ್ರಮಿಸಿದ್ದ “ಹೊಸ ರಾಷ್ಟ್ರೀಯ ನಾಟಕ”. ನಾಟಕ ರಚನಕಾರ – ನಿರ್ದೇಶಕ ಓಸಾನೈ ಕಾರು ಅವರ “ದಿ ಲಿಟಲ್ ಥಿಯೇಟರ್”ನಲ್ಲಿ ನೋಡಿದ ನಾಟಕಗಳು ಅದ್ಭುತ. ಇಂದಿಗೂ ಆ ನಾಟಕಗಳು ನನ್ನ ಕಣ್ಣಿಗೆ ಕಟ್ಟಿದಂತಿದೆ. ಆಗ ಅದು ರಂಗಭೂಮಿಯ ಕ್ರಾಂತಿಗೆ ಕೇಂದ್ರವಾಗಿತ್ತು.
ಸಂಗೀತವನ್ನು ಇಷ್ಟಪಡುತ್ತಿದ್ದ ಸ್ನೇಹಿತನ ಹತ್ತಿರ ಗ್ರಾಮಾಫೋನ್ ಮತ್ತು ರೆಕಾರ್ಡುಗಳಿದ್ದವು. ಅವನ ಮನೆಯಲ್ಲಿ ಹೆಚ್ಚಾಗಿ ಶಾಸ್ತ್ರೀಯ ಸಂಗೀತದ ರೆಕಾರ್ಡುಗಳನ್ನು ಕೇಳಿದ್ದೆ. ಆಗಾಗ ಕಂಡಕ್ಟರ್ ಹಾಗೂ ಸಂಯೋಜನಕಾರನಾಗಿದ್ದ ಕೊನೊ ಹಿಡ್ಡೆಮೊರೊನ ನ್ಯೂ ಸಿಂಫೋನಿ ಆರ್ಕೆಸ್ಟ್ರಾಗಳ ರಿಹರ್ಸಲ್ ಗಳನ್ನು ಕೇಳಲು ಹೋಗುತ್ತಿದ್ದೆ.
ಚಿತ್ರಕಾರನಾಗಿ ಸಹಜವಾಗಿ ಜಪಾನಿಸ್ ಮತ್ತು ಪಾಶ್ಚಾತ್ಯ ಎರಡೂ ಬಗೆಯ ಚಿತ್ರಪ್ರದರ್ಶನಗಳಿಗೆ ಹೋಗುತ್ತಿದ್ದೆ. ಆಗಿನ ಕಾಲದಲ್ಲಿ ಕಲಾವಿದರ ಕುರಿತಾಗಲಿ ಅಥವ ಕಲೆಯ ಕುರಿತಾಗಲಿ ಪುಸ್ತಕಗಳು ಅಷ್ಟಾಗಿ ಇರಲಿಲ್ಲ. ಆದರೆ ಇದ್ದದ್ದುರಲ್ಲೇ ಸಿಕ್ಕಷ್ಟು ಪುಸ್ತಕಗಳನ್ನು ಕೊಂಡಿದ್ದೆ. ಕೊಳ್ಳಲು ಸಾಧ್ಯವಾಗದ ಪುಸ್ತಕಗಳನ್ನು ಮತ್ತೆ ಮತ್ತೆ ಪುಸ್ತಕದಂಗಡಿಗಳಿಗೆ ಹೋಗಿ ಅವುಗಳನ್ನು ತಿರುವಿ ಹಾಕುವ ಮೂಲಕ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿದ್ದೆ. ಆಗ ನಾನು ಕೊಂಡಿದ್ದ ಬಹುತೇಕ ಪುಸ್ತಕಗಳು ನನ್ನ ಅಣ್ಣನ ಪುಸ್ತಕಗಳೊಂದಿಗೆ ಪೆಸಿಫಿಕ್ ಯುದ್ಧದ ಸಮಯದಲ್ಲಿ ಟೊಕಿಯೊ ಮೇಲಾದ ವಾಯುದಾಳಿಯಲ್ಲಿ ನಾಶವಾದವು. ಆಗ ಉಳಿದ ಕೆಲವು ಈಗಲೂ ನನ್ನ ಸಂಗ್ರಹದಲ್ಲಿದೆ. ಆ ಪುಸ್ತಕಗಳ ಮುಖಪುಟಗಳು ಕಿತ್ತುಹೋಗಿ ಅಂಚುಗಳು ಹರಿದು ಹಾಳೆಗಳೆಲ್ಲ ಏರುಪೇರಾಗಿವೆ. ಆ ಹಾಳೆಗಳ ಮೇಲೆಲ್ಲ ಬಣ್ಣ ಮೆತ್ತಿದ ಬೆರಳುಗಳ ಗುರುತುಗಳು. ಅವುಗಳನ್ನು ಮೊದಲ ಸಲ ಓದಿದಾಗ ಯಾವ ಭಾವನೆಗಳು ಮನಸಲ್ಲಿ ಹಾದುಹೋಗಿದ್ದವೋ ಈಗಲೂ ಅದೇ ಭಾವನೆಗಳು ಕಾಡುತ್ತವೆ.
ಈ ಎಲ್ಲ ಸಾಮಾಜಿಕ ಏರಿಳಿತಗಳ ನಡುವೆ ಕ್ಯಾನ್ವಾಸ್ ಮುಂದೆ ತಣ್ಣಗೆ ಕೂತು ಚಿತ್ರ ಬಿಡಿಸುವುದು ನನ್ನ ಮಟ್ಟಿಗಂತೂ ಅಸಾಧ್ಯದ ಕೆಲಸವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ವಾಸ್, ಚಿತ್ರ ಬಿಡಿಸುವ ಪರಿಕರಗಳೆಲ್ಲ ಸಾಕಷ್ಟು ದುಬಾರಿಯಾಗಿದ್ದವು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಇವನ್ನು ನನಗೆ ಕೊಡಿಸಿ ಎಂದು ಕೇಳುವುದು ಕಷ್ಟವಾಗಿತ್ತು.
ನನಗೆ ಸಿನಿಮಾಗಳು ಕೂಡ ಇಷ್ಟವಾದವು. ನನ್ನ ದೊಡ್ಡಣ್ಣ ಬಹಳ ಹಿಂದೆಯೇ ಮನೆಬಿಟ್ಟು ಹೊರಹೋಗಿದ್ದವನು ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡುತ್ತಲೇ ಇದ್ದ. ಅವನಿಗೆ ರಷ್ಯನ್ ಸಾಹಿತ್ಯದ ಗೀಳು ಹತ್ತಿತ್ತು. ಬೇರೆ ಬೇರೆ ಹೆಸರುಗಳಲ್ಲಿ ಸಿನಿಮಾಗಳ ಕಾರ್ಯಕ್ರಮಗಳಿಗಾಗಿ ಬರೆಯುತ್ತಿದ್ದ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪ್ರಚಾರ ಪಡೆಯುತ್ತಿದ್ದ ವಿದೇಶಿ ಸಿನಿಮಾ ಕುರಿತು ಬರೆಯುತ್ತಿದ್ದ.
ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ. ಸಿನೆಮಾ ನೋಡಿ ಮನೆಗೆ ಹೋದಾಗ ಅಪ್ಪನ ಕೈಲಿ ಅಣ್ಣ ಚೆನ್ನಾಗಿ ಬೈಯಿಸಿಕೊಳ್ಳುತ್ತಿದ್ದದ್ದು ನೆನಪಿದೆ.
ನನಗೆ ಇಷ್ಟವಾದ ಚಿತ್ರಗಳ ಪಟ್ಟಿಯನ್ನು* ಮಾಡಲು ಪ್ರಯತ್ನಿಸಿದೆ. ಅದು ಸುಮಾರು ನೂರರಷ್ಟಿದೆ. ಬಹಳ ಹಿಂದೆ ನೋಡಿದ ಚಿತ್ರಗಳು. ಹಾಗಾಗಿ ಅವುಗಳ ದಿನಾಂಕವನ್ನು ನಿಖರವಾಗಿ ಹೇಳಲಾರೆ. ವಿದೇಶಿ ಚಿತ್ರಗಳು ಅವುಗಳ ತವರು ನೆಲದಲ್ಲಿ ಬಿಡುಗಡೆಯಾದ ದಿನಾಂಕ ಅವುಗಳ ನಿರ್ಮಾಣ ಸಂಸ್ಥೆಗಳನ್ನು ನೋಡಿ ಬರೆದಿದ್ದೇನೆ. ಕೆಲವು ಚಿತ್ರಗಳು ಬಿಡುಗಡೆಯಾದ ಎರಡುಮೂರು ವರ್ಷಗಳ ನಂತರ ಜಪಾನಿನಲ್ಲಿ ಬಿಡುಗಡೆಯಾಗಿವೆ.
ನಾನಾಗ ನೋಡಿದ ಚಿತ್ರಗಳ ಸಂಖ್ಯೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಅವೆಲ್ಲವೂ ಸಿನಿಮೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿದ ಚಿತ್ರಗಳು. ಈ ಶ್ರೇಯವೆಲ್ಲ ನನ್ನ ದೊಡ್ಡಣ್ಣನಿಗೆ ಸೇರಿದ್ದು.
1929 ನನಗಾಗ ವಯಸ್ಸು ಹತ್ತೊಂಬತ್ತು. ನನ್ನ ಸುತ್ತಲ ಪ್ರಪಂಚದಲ್ಲಿ ಎಷ್ಟೊಂದೆಲ್ಲ ನಡೆಯುತ್ತಿರುವಾಗ ಪ್ರಕೃತಿ ಚಿತ್ರಗಳನ್ನು, ರೇಖಾ ಚಿತ್ರಗಳನ್ನು ಬರೆಯುತ್ತ ಕೂರುವುದು ನನ್ನಿಂದ ಆಗುತ್ತಿರಲಿಲ್ಲ. ನಾನು ಕೂಡ ಪ್ರಗತಿಶೀಲ ಕಲಾವಿದರ ಗುಂಪನ್ನು ಸೇರಲು ನಿರ್ಧರಿಸಿದೆ. ನನ್ನಣ್ಣನಿಗೆ ಈ ವಿಷಯ ತಿಳಿಸಿದಾಗ “ಅದೇನೋ ಸರಿ. ಆದರೆ ಈ ಚಳುವಳಿ ಇನ್ಫ್ಲೂಯೆಂಜಾ ಜ್ವರದ ಹಾಗಿದೆ. ಬಲುಬೇಗ ಈ ಜ್ವರವಿಳಿದು ಚಳುವಳಿ ಸಾಯುತ್ತದೆ” ಎಂದ. ಅವನ ಈ ಮಾತಿನಿಂದ ಸ್ವಲ್ಪ ಇರಿಸುಮುರಿಸಾಯಿತು. ಆ ಸಮಯದಲ್ಲಿ ನನ್ನಣ್ಣ ಬಲುದೊಡ್ಡ ಹೆಜ್ಜೆಯನ್ನಿಟ್ಟಿದ್ದ. ಆತ ಸಿನಿಮಾ ಕಾರ್ಯಕ್ರಮಗಳ ಬಗ್ಗೆ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದ. ಸಿನಿಮಾ ಪ್ರೇಮಿಯಾಗಿ ಮೂಕಿ ಚಿತ್ರಗಳ ವೃತ್ತಿಪರ ನಿರೂಪಕನಾಗಿದ್ದ. ನಿರೂಪಕರು ಕೇವಲ ಕತೆಯ ಎಳೆಯನ್ನಷ್ಟೇ ಪ್ರಸ್ತುತ ಪಡಿಸುತ್ತಿರಲಿಲ್ಲ. ಪರದೆಯ ಮೇಲಿನ ಚಿತ್ರಗಳು ಘಟನೆಗಳಿಗೆ ಪೂರಕವಾಗಿ ಅಗತ್ಯವಿದ್ದ ಕಡೆ ಅದಕ್ಕೆ ತಕ್ಕ ಹಾಗೆ ಹಿನ್ನಲೆ ಧ್ವನಿ ನೀಡುತ್ತಾ, ಧ್ವನಿ ವಿನ್ಯಾಸ ಮಾಡುತ್ತಿದ್ದರು.
ಬುನ್ರಾಕು ಗೊಂಬೆಯಾಟದವರು ಮಾಡುತ್ತಿದ್ದಂತೆ ಈ ನಿರೂಪಕರು ಸಹ ಮಾಡುತ್ತಿದ್ದರು. ಜನಪ್ರಿಯ ನಿರೂಪಕರೇ ತಮ್ಮ ತಂಡದ ಬೆನ್ನೆಲುಬಾಗಿರುತ್ತಿದ್ದರು. ಜನಪ್ರಿಯ ನಿರೂಪಕ ಟೊಕುಗಾವ ಮ್ಯೂಸಿಯವರು ನಾಯಕತ್ವದಲ್ಲಿ ಹೊಸತೊಂದು ಚಳುವಳಿಯೇ ರೂಪುಗೊಳ್ಳುವ ಹಾದಿಯಲ್ಲಿತ್ತು. ಆತ ಮತ್ತು ಆತನಂತಹ ಸಮಾನ ಮನಸ್ಕರ ತಂಡವು ಅತ್ಯುತ್ತಮ ವಿದೇಶಿ ಸಿನಿಮಾಗಳ ನಿರೂಪಣೆಗೆ ಒತ್ತು ನೀಡುತ್ತಿದ್ದರು. ನನ್ನಣ್ಣ ಅವರ ಜೊತೆ ಸೇರಿದ. ನಕಾನೋದಲ್ಲಿನ ಮೂವಿ ಹೌಸ್ ಒಂದರಲ್ಲಿ ಮುಖ್ಯ ನಿರೂಪಕನಾಗಿ ಕೆಲಸಕ್ಕೆ ಸೇರಿಕೊಂಡ.
ನನ್ನಣ್ಣ ಜೀವನದಲ್ಲಿ ಯಶಸ್ಸು ಗಳಿಸಿದ ಅಹಂಕಾರದಲ್ಲಿ ತನಗೆ ಎಲ್ಲ ಗೊತ್ತು ಎನ್ನುವ ರೀತಿಯಲ್ಲಿ ರಾಜಕೀಯದ ಬಗ್ಗೆಯೂ ಉಡಾಫೆಯಿಂದ ಮಾತಾಡುತ್ತಿದ್ದ. ನಾನು ಯಾವುದನ್ನು ಗಂಭೀರವಾಗಿ ಪರಿಗಣಿಸಿದ್ದೇನೋ ಅದನ್ನು ಕುರಿತು ಹಗುರವಾಗಿ ಮಾತಾಡುತ್ತಿದ್ದ. ಅವನು ಹೇಳಿದಂತೆ ನನ್ನ ಪ್ರಗತಿಶೀಲ ಭಾವನೆಗಳು ಕರಗಿಹೋದವು. ಆದರೂ ಅವನು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆ ಚಳುವಳಿಗೆ ಮತ್ತೆ ಕೆಲವು ವರ್ಷಗಳವರೆಗೆ ಜೋತುಬಿದ್ದಿದ್ದೆ. ಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ, ಸಿನೆಮಾ ಜ್ಞಾನ ಎಲ್ಲವನ್ನೂ ತಲೆಯೊಳಗೆ ತುಂಬಿಕೊಂಡು ಇವೆಲ್ಲವನ್ನೂ ಬಳಸಬಹುದಾದ ಎಡೆಯೊಂದನ್ನು ಹುಡುಕುತ್ತಾ ಅಲೆಯುತ್ತಿದ್ದೆ.