ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು. ರಾತ್ರಿ ಮಲಗುವಾಗ ನಮ್ಮ ಜೊತೆ ಬಂದು ಮಲಗುತ್ತಿತ್ತು. ತಡವಾಗಿ ಬಂದರೆ ಬ್ಲಾಂಕೆಟ್ ಒಳಗಡೆ ನುಸುಳಿಕೊಳ್ಳುತ್ತಿತ್ತು. ಪ್ರೀತಿಯ ಮರಿಗೆ ತಂಗಿ “ಚಿಂಚು” ಎಂದು ನಾಮಕರಣವನ್ನೂ ಮಾಡಿದ್ದಳು. ಚಿಂಚು ಎಂದು ಕರೆದರೆ ಓಡಿ ಬರುವ ಮರಿ ಎಲ್ಲರ ಕೈ ನೆಕ್ಕುತ್ತಾ ಮಡಿಲಲ್ಲಿ ಮಲಗಿ ನಿದ್ರಿಸುವಂತೆ ನಾಟಕ ಮಾಡುತ್ತಿತ್ತು. ಇಂಥ ಈ ಖುಷಿ ಹೆಚ್ಚಿನ ದಿನ ಉಳಿಯಲಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ಈಗಷ್ಟೇ ಬಾನು ಶುಭ್ರವಾಗಿ ಮೋಡ ತೆಳ್ಳಗಾಗಿ ಅಳುವುದನ್ನು ನಿಲ್ಲಿಸಿದಂತಿತ್ತು. ರಭಸವಾದ ಮಳೆ ಮುಗಿದು ಸೂರ್ಯ ಮೋಡದ ಮರೆಯಿಂದ ಇಣುಕಿದ್ದ. ರಸ್ತೆ ಬದಿಯ ಝರಿಯಲ್ಲಿ ತಿಳಿ ನೀರು ಸ್ವಲ್ಪ ರಭಸವಾಗಿಯೇ ಹರಿಯುತ್ತಿತ್ತು. ತಿಳಿ ನೀರಿನ ಮೀನುಗಳನ್ನು ನೋಡುವ ಖುಷಿ ನಮಗೆ. ಮೊರಂಟೆ, ಮುಗುಡು, ಉಬರ್ ಮೀನುಗಳು ರಾಶಿ ಹರಿಯುವ ನೀರಿನಲ್ಲಿ ನಲಿಯುವ ಚಂದವೇ ಬೇರೆ. ಹಿಂದಿನ ದಿನ ರಾತ್ರಿ ಸಿಕ್ಕಾ ಪಟ್ಟೆ ಮಳೆ ಇದ್ದದ್ದರಿಂದ ಊರಿಗೆಲ್ಲಾ ಕರೆಂಟು ಕೈ ಕೊಟ್ಟಿತ್ತು. ರಸ್ತೆ ಬದಿಯ ನೀರಿನಲ್ಲಿ ಮೀನು ನೋಡುತ್ತಾ, ಕಾಲ ಕೆಸರು ತೊಳೆಯುತ್ತಾ ಕಾಗದದ ದೋಣಿ ಬಿಡುತ್ತಾ ಆಟವಾಡುವ ನಮಗೆಲ್ಲಾ ಕರೆಂಟು ಇದ್ದರೇನು, ಇಲ್ಲದಿದ್ದರೇನು. ಆ ಹೊತ್ತಿಗೆ ಲೈನ್ ಮೇನ್ ಸುರೇಶನ ಬೈಕ್ ಬಂದು ಟ್ರಾನ್ಸ್ಫಾರ್ಮರ್ ಪೆಟ್ಟಿಗೆಯ ಬದಿಯಲ್ಲಿ ನಿಂತಿತು. ಅವನು ಮಂಗನಂತೆ ಕರೆಂಟು ಕಂಬ ಹತ್ತುವ ಕೈಚಳಕ ನೋಡುತ್ತಾ ನಾವು ಹುಬ್ಬೇರಿಸುತ್ತಿದ್ದೆವು.

ಕ್ವಚಿತ್ತಾಗಿ ನಮಗೆ ಕಾಗದದ ದೋಣಿಯ ಮೇಲಿದ್ದ ಆಕರ್ಷಣೆ ಕರೆಂಟ್ ವೈರಿನ ಮೇಲೆ ಹರಿಯತೊಡಗಿತು. ದೂರದಲ್ಲೊಂದು ಕಡೆ ವೈರು ಸಣ್ಣಗೆ ಬಾಗಿ ಹೋಗಿತ್ತು. ಬಾವಲಿಯೊಂದು ವಿದ್ಯುತ್ತಾಘಾತಕ್ಕೆ ಸಿಕ್ಕಿ ಕರೆಂಟು ತಂತಿಯಲ್ಲಿ ಸಿಟಿ ಬಸ್ಸಿನ ಕಂಡೆಕ್ಟರ್ ಫುಟ್ ಪಾತಿನಲ್ಲಿ ನೇತಾಡುವಂತೆ ವೈರಿಗೆ ಭಾರ ಹಾಕಿ ಪ್ರಾಣ ಬಿಟ್ಟಿತ್ತು. “ಛೇ ಅಯ್ಯೋ ಪಾಪ” ಎನ್ನುತ್ತಾ ಕಾಗದದ ದೋಣಿ ನೋಡಬೇಕಾದರೆ ನನ್ನ ದೋಣಿ ಸಾಕಷ್ಟು ದೂರಸಾಗಿ ಎರಡು ನೀರು ಸೇರುವಲ್ಲಿನ ಸುಳಿಗೆ ಸಿಲುಕಿ ಟೈಟಾನಿಕ್ ಹಡಗಿನಂತೆ ಮಗುಚಿಕೊಳ್ಳತೊಡಗಿತ್ತು. ಅದನ್ನು ಅಲ್ಲೇ ಬಿಟ್ಟು ಇನ್ನೊಂದು ಮಳೆ ಬರುವ ಮುಂಚಿತವಾಗಿ ಹುಳ ತಿಂದ ಬೆರಳಿನ ಸೆರೆಗಳನ್ನು ಕೆರೆದುಕೊಳ್ಳುತ್ತಾ ಮನೆಯ ಅಂಗಳಕ್ಕೆ ಓಡಿಬಂದೆ. ಆಕಾಶ ತಿಳಿಯಾಗಿ ಇನ್ನೊಂದು ಮಳೆಗಾಗಿ ಎದುರು ನೋಡುತ್ತಿತ್ತು.

ಅಷ್ಟರಲ್ಲೇ ಮಾವನ ಮಗ ಓಡಿ ಬರುತ್ತಾ “ತೋಡಿನ ಬಳಿ ಪೆರ್ಮಾರಿ ಉಂಟಂತೆ” ಎಂದು ದಿಗಿಲು ಹಾರಿಸುವಂತಹ ಸುದ್ದಿ ತಂದ. ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಪೆರ್ಮಾರಿ ಅಂದರೆ ಕನ್ನಡದ “ಹೆಬ್ಬಾವು”. ಇವು ನಮ್ಮ ಸುತ್ತಲಿನ ಪರಿಚಯದ ಹಾವು. ” ಹೆಬ್ಬಾವು ಕಂಡರೆ ಕೊಲ್ಲಬೇಡಿ. ಅವು ಪರಿಸರಕ್ಕೆ ಬಹಳ ಒಳ್ಳೆಯದು” ಎಂದು ಹಿರಿಯರು ಹೇಳುವ ಮಾತು ಹಿಂದಿನಿಂದಲೇ ಕೇಳಿದ್ದೆ. ಬಹುಶಃ ಕೃಷಿ ಭೂಮಿಗೆ ಕಂಟಕವಾಗುವ ದೊಡ್ಡ ಇಲಿ, ಇನ್ನಿತರ ಸಸ್ಯಹಾರಿ ಪ್ರಾಣಿಗಳನ್ನು ತಿಂದು ಕೃಷಿ ಕೊಯ್ಲನ್ನು ಕಾಪಾಡುವುದರಿಂದಲೇ ಇರಬೇಕು.

“ಅದು ಹೇಗಿದೆ, ಎಷ್ಟುದ್ದವಿದೆ” ಎಂಬುವುದರ ವಿವರಣೆ ಕೇಳಿ ತಿಳಿದಿದ್ದರೂ ಆ ಮೊದಲು ಅದನ್ನು ನೋಡಿರಲಿಲ್ಲ. ಕುತೂಹಲ ತಾಳಲಾರದೆ ತೋಡಿನ ಬಳಿಗೆ ಚಪ್ಪಲಿ ಹಾಕುವ ಪುರ್ಸೊತ್ತು ಮಾಡಿಕೊಳ್ಳದೆ ಓಡುತ್ತಾ ಬಂದೆ. ಅಷ್ಟರಲ್ಲೇ ಅಲ್ಲೆಲ್ಲಾ ಜನ ನೆರೆದಾಗಿತ್ತು. ಮಹಿಳೆಯರೆಲ್ಲಾ ಒಂದು ಮೂಲೆಗಿದ್ದರು. ಗಂಡಸರು ಹಾವಿನ ಸುತ್ತಾ ಗುಂಪುಗೂಡಿದ್ದರು. ನಾನು ಸಾಕಷ್ಟು ಆ ಗುಂಪಿನೊಳಗೆ ತೂರಿ ಹಾವನ್ನು ನೋಡುವವನಿದ್ದೆ. “ಮಕ್ಕಳಿಗೇನು ಇಲ್ಲಿ ಕೆಲಸ ದೂರ ಹೋಗಿ” ಎಂದು ಕಟ್ಟಾಜ್ಞೆ ಮಾಡುವ ಕಟು ಹೃದಯಿ ಒಂದಿಬ್ಬರು ಎಲ್ಲಾ ಊರಿನಲ್ಲಿರುವಂತೆ ನಮ್ಮೂರಲ್ಲೂ ಇರದಿರಲಿಲ್ಲ. ಅಂತವರನ್ನೂ ನನಗೆ ಹಿಂದಿನಿಂದಲೂ ಕಂಡರಾಗದು, “ದೂರದಲ್ಲಾದರೂ ಮಕ್ಕಳಿಗೆ ತೋರಿಸುವುದಕ್ಕೇನು ದಾಡಿ” ಎಂದು ಉರಿದುಕೊಂಡಿದ್ದೆ. ಅಷ್ಟೊತ್ತಿಗೆ ಸುಮಾರು ರಾಶಿ ಶಾಪವೂ ಅವರ ಮೇಲೆ ಪ್ರಹಾರವಾಗಿಯೂ ಹೋಗಿತ್ತು. ಕೊನೆಗೂ ಆ ಸತ್ತ ಭೀಮಾಕಾರದ ಹಾವನ್ನು ನೋಡುವುದಕ್ಕಾದರೂ ಪ್ರಾಪ್ತರಾದೆವು.

ಇಲ್ಲಿ ನಡೆದ ಈ ಘಟನೆ ಬಹಳ ಸ್ವಾರಸ್ಯಕರ. ಮಳೆಗಾಲದ ದಿನಗಳಲ್ಲಿ ನಮ್ಮ ಕೆಳಗಿನ ಮನೆ( ಅಜ್ಜಿಮನೆ) ಯಲ್ಲಿ ದನ ಕರುಗಳನ್ನು ಮೇಯಲು ಹೊರಗೆ ಬಿಡುವುದಿಲ್ಲ. ಹಸಿರು ಹುಲ್ಲು ಹೆರೆದು ಕಂತೆ ತಂದು ಹಾಕುವುದು ರೂಢಿ. ಆ ದಿನ ಉಕ್ರಜ್ಜಿ ಹುಲ್ಲು ಹೆರೆಯಲು ಕುಳಿತಿದ್ದಾಗ ಹುಲ್ಲಿನ ಮಧ್ಯೆ ಏನೋ ಜರುಗಿದಂತಾಗಿತ್ತು. ಬೇರು ಇರಬೇಕೆಂದು ಭಾವಿಸಿ ಹರಿತವಾದ ಕತ್ತಿಯಿಂದ ಸೀಳಿದ್ದರು. ಸೀಳಿದ ಹೊಡೆತಕ್ಕೆ ಬೇಟೆಗೆ ಕುಳಿತಿದ್ದ ಹೆಬ್ಬಾವು ಒಮ್ಮೆಲೆ ತಲೆ ಎತ್ತಿತ್ತು. ಹಾವು ಎಂದು ತಿಳಿದಾಗ ಹೆದರಿ ಓಡಿ ಬಂದವರೇ ಕೆಳಗಿನ ಮನೆಗೆ ಬಂದು ಹೇಳಿದ್ದರು. ಎಲ್ಲರೂ ಓಡಿ ಹೋಗಿ ನೋಡುವ ಹೊತ್ತಿಗೆ ಹೊಟ್ಟೆ ಹರಿದ ಹೆಬ್ಬಾವು ನೋವಿನಿಂದ ಹೊರಳಾಡುತ್ತಾ ಅಲ್ಲೇ ಹುಲ್ಲಿನ ಮಧ್ಯೆ ಹೊರಳಾಡುತ್ತಿತ್ತು. ಗಾಯ ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ ಹೊಟ್ಟೆಯು ಸೀಳಿ ಕರುಳು ಹೊರಬರುವಷ್ಟು ಆಳವಾಗಿ ಹೋಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊರಳಿದ ಹೆಬ್ಬಾವು ಪ್ರಾಣ ಬಿಟ್ಟಿತ್ತು. ನನಗಂತೂ ಈ ಭೀಮ ಗಾತ್ರದ ಹೆಬ್ಬಾವು ಮೊದಲ ಬಾರಿಗೆ ಕಾಣುವುದು. ಅಲ್ಲಲ್ಲಿ ಕಂದು ಬಣ್ಣದ ಚಿಪ್ಪಿನಾಕೃತಿಯಂತಹ ಮೈ ಮೇಲೆ ಬಣ್ಣ ಇನ್ನಷ್ಟು ಗಂಭೀರವಾಗಿಸಿತ್ತು. ಅವು ವಿಷಕಾರಿಯಲ್ಲ. ಮೊಲ, ಆಡು, ನಾಯಿ ಮುಂತಾದ ಸಮಗಾತ್ರದ ಪ್ರಾಣಿಗಳನ್ನು ನುಂಗುತ್ತದೆ. ಕೆಲವೊಂದು ದೊಡ್ಡ ಹಾವುಗಳು ಮನುಷ್ಯನನ್ನು ತಿನ್ನುವಷ್ಟು ದೊಡ್ಡದಾಗಿರುತ್ತದೆ, ಆದರೂ ಮನುಷ್ಯನಿಗೆ ಆಕ್ರಮಣ ಮಾಡಿ ತಿಂದ ಚರಿತ್ರೆ ಎಲ್ಲೂ ವರದಿಯಾದದ್ದಿಲ್ಲ.

ನಾನು ಕೊನೆಯ ಬಾರಿಗೊಮ್ಮೆ ಜಮಲಾಬಾದ್ ಕೋಟೆಗೆ ಚಾರಣಕ್ಕೆಂದು ಹೋದಾಗ ಆ ವಿಶೇಷ ಮಾಹಿತಿ ಕೇಳಿ ಬೆಚ್ಚಿ ಬಿದ್ದಿದ್ದೆ. ಹೆಬ್ಬಾವು ಜಾತಿಗಳಲ್ಲಿ ಸೇರುವ ಮಲೆ ಹಾವು ಎಂಬ ಅತಿ ದೊಡ್ಡ ಜಾತಿಯಿದೆ. ಅತಿ ಉದ್ದ ಮತ್ತು ದಪ್ಪದ ಈ ಹಾವುಗಳು ಮನುಷ್ಯನನ್ನೂ ಮುಕ್ಕುವಷ್ಟು ಬಲಿಷ್ಟ. ಜಮಲಬಾದ್ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಟಿಪ್ಪು ಸುಲ್ತಾನನ ಕಾಲದ ಅತಿ ಎತ್ತರದ ಕೋಟೆ. ಕಡಿದಾದ ಕತ್ತಿಯಂಚಿನಲ್ಲಿ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆ. ಕರುಳಲ್ಲಿ ಚಳಿ ಹಿಡಿಸುವಷ್ಟು ದುರ್ಗಮ ದಾರಿಗಳು. ಮೂರು ಬಾರಿ ಚಾರಣ ಮಾಡಿದ ನೆನಪು ಈಗಲೂ ಹಸಿರಾಗಿದೆ. ಆ ದಿನ ಚಾರಣಿಗರಿಗೆ ಟಿಕೆಟ್ ಕೊಡುವವನ ಜೊತೆ ಮಾತಿಗೆ ನಿಂತಿದ್ದೆವು. ಮಾತನಾಡುತ್ತಾ ಈ ಕಾಡಿನಲ್ಲಿ ಹುಲಿ, ಜಿಂಕೆ, ಕಾಡೆಮ್ಮೆಗಳಿರುವುದನ್ನು ಹೇಳಿದ್ದ. ಒಂದು ದಿನ ಆತ ರಾತ್ರಿ ಸಮಯ ಹೋಗಬೇಕಾದರೆ ಆ ಅದ್ಭುತ ದೃಶ್ಯ ನೋಡಿದ್ದನಂತೆ, ಮಲೆ ಹಾವೊಂದು ಬೃಹತ್ ಗಾತ್ರದ ಕಾಡೆಮ್ಮೆಯೊಂದನ್ನು ತನ್ನ ಉರುಳಿಗೆ ಸಿಲುಕಿಸಿ ಆದಾಗಲೇ ತಲೆ ಮಾತ್ರ ಹೊರಕಾಣುವಷ್ಟು ಮುಕ್ಕಾಲು ಬಾಗ ನುಂಗಿ ಹಾಕಿತ್ತಂತೆ. ಕಾಡೆಮ್ಮೆ ಎಂದರೆ, ಊರಿನ ಗೂಳಿಯಷ್ಟು ಭೀಮಕಾಯದ ಕಾಡು ಪ್ರಾಣಿ. ಅದು ಹಾಗೆಯೇ ನುಂಗಿ ಮೂರಕ್ಕೂ ಅಧಿಕ ದಿನಗಳ ಕಾಲ ಮಲಗುತ್ತದಂತೆ. ಕೊನೆಗೆ ಅದರ ತಲೆ ಕೊಳೆತು ಬಿದ್ದು ಹೋದ ಬಳಿಕ ಜೀರ್ಣಕ್ಕಾಗಿ ಬೃಹತ್ ಮರದ ಬೇರಿನೆಡೆಗೆ ನುಸುಳುತ್ತದಂತೆ. ಈ ಅನುಭವ ಕೇಳಿ ನಾನು ಅಕ್ಷರಶಃ ಬೆಚ್ಚಿ ಹೋಗಿದ್ದೆ.

ಅಷ್ಟು ಭೀಮಕಾಯದ ಹಾವು ಹಸಿವಿಗಾಗಿ ಅಷ್ಟೊಂದು ಇತರ ಪ್ರಾಣಿಗಳನ್ನು ತಿಂದರೆ ಏನು ತಪ್ಪು. ಹೊಟ್ಟೆ ಪಾಡಿಗಾಗಿ ಮನುಷ್ಯ ಮನುಷ್ಯನನ್ನೇ ಕೊಲ್ಲುವಷ್ಟು ಕ್ರೂರನಾಗಿರಬೇಕಾದರೆ ಅವು ಊರಿಗೆ ಬಂದು ಇತರ ಪ್ರಾಣಿಗಳನ್ನು ಹಿಡಿದು ತಿನ್ನುವುದನ್ನು ನಿರ್ಭಂದ ಹೇರಲು ನಾವು ಯಾರು. ಅದೊಂದು ದಿನ ಮನೆಯ ಕಡೆಗೆ ಬಂದಿದ್ದ ಹೆಬ್ಬಾವು ಕೋಳಿಯೊಂದನ್ನು ನುಂಗಿ ಹೊಟ್ಟೆ ಎತ್ತಲಾರದೆ ಮನೆಯ ಅಂಗಳದಲ್ಲೇ ಮಲಗಿತ್ತು. ನೆರೆ ಮನೆಯವರೊಬ್ಬರು ಬಂದು ಅದನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು. ಉರುಳು ಹಾಕಿ ಮರವೊಂದಕ್ಕೆ ಬಿಗಿದು ಕಟ್ಟಿದ್ದರು. ದೂರದಲ್ಲಿ ನೋಡುತ್ತಿದ್ದರೆ ಸಮುದ್ರದ ಬದಿಯಲ್ಲಿ ಹಡಗು ಕಟ್ಟಿಹಾಕಿದಂತೆ ಭಾಸವಾಗುತ್ತಿತ್ತು. ಅದರ ಹೊಯ್ದಾಟ, ಹೊರಳಾಟ ನೋಡಿದರೆ ಡೈನೋಸಾರ್ ಸಿನಿಮಾ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತಿತ್ತು.

ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಪೆರ್ಮಾರಿ ಅಂದರೆ ಕನ್ನಡದ “ಹೆಬ್ಬಾವು”. ಇವು ನಮ್ಮ ಸುತ್ತಲಿನ ಪರಿಚಯದ ಹಾವು. ” ಹೆಬ್ಬಾವು ಕಂಡರೆ ಕೊಲ್ಲಬೇಡಿ. ಅವು ಪರಿಸರಕ್ಕೆ ಬಹಳ ಒಳ್ಳೆಯದು” ಎಂದು ಹಿರಿಯರು ಹೇಳುವ ಮಾತು ಹಿಂದಿನಿಂದಲೇ ಕೇಳಿದ್ದೆ. ಬಹುಶಃ ಕೃಷಿ ಭೂಮಿಗೆ ಕಂಟಕವಾಗುವ ದೊಡ್ಡ ಇಲಿ, ಇನ್ನಿತರ ಸಸ್ಯಹಾರಿ ಪ್ರಾಣಿಗಳನ್ನು ತಿಂದು ಕೃಷಿ ಕೊಯ್ಲನ್ನು ಕಾಪಾಡುವುದರಿಂದಲೇ ಇರಬೇಕು.

ಸುಮಾರು ಸಮಯ ಹಾಗೆಯೇ ಅದೇ ಕಟ್ಟನ್ನು ಬಿಡಿಸಲಾಗದೆ ತಪ್ಪಿಸಿಕೊಳ್ಳುವ ಶತ ಪ್ರಯತ್ನದಲ್ಲಿ ತೊಡಗಿತ್ತು. ಒಂದು ಘಂಟೆಯ ತರುವಾಯ ನಾವು ಎಲ್ಲೋ ಹೋಗಿ ತಿರುಗಿ ಬಂದಿದ್ದೆವು. ನೋಡಿದರೆ ಅದು ಕಟ್ಟಿದ್ದ ಹಗ್ಗ ಮಾತ್ರ ಅನಾಥವಾಗಿ ಬಿದ್ದಿತ್ತು. ಹೇಗೋ ಮಾಡಿ ಕಟ್ಟು ತಪ್ಪಿಸಿಕೊಂಡು ಹಾವು ಪರಾರಿ ಕಿತ್ತಿತ್ತು. ಅದು ಹೇಗೆ ಅಷ್ಟು ಗಟ್ಟಿ ಉರುಳಿನಿಂದ ತಪ್ಪಿಸಿಕೊಂಡಿತು ಅನ್ನುವುದೇ ನಮಗೆ ಆಶ್ಚರ್ಯ. ಹೇಗೂ ಹೊಟ್ಟೆ ತುಂಬಿದ ಹಾವು ಅಷ್ಟು ದೂರ ಹೋಗುವುದು ಸುಲಭವಿರಲಿಲ್ಲ. ಅಲ್ಲೆಲ್ಲಾ ಹುಡುಕಾಡಿದೆವು. ಹಗ್ಗದ ಉರುಳು ತಪ್ಪಿಸಿಕೊಂಡಿದ್ದ ಹೆಬ್ಬಾವು ಮಾರು ದೂರ ಹೋಗಿ ಪೊದೆಗಳ ಮಧ್ಯೆ ಸೇರಿಕೊಂಡು ಬಿಟ್ಟಿತ್ತು. ಅವುಗಳಿಗೆ ಆಕಾರ ಕುಗ್ಗಿಸುವ ಮತ್ತು ಹಿಗ್ಗಿಸುವ ಶಕ್ತಿ ಇರುವುದು ಅರಿವಿಗೆ ಬಂದದ್ದು ಆಗಲೇ. ಅಷ್ಟಕ್ಕೇ ಹೊತ್ತು ಮೀರಿತ್ತು.ನಾಯಿಗಳಷ್ಟು ನಿಷ್ಠಾವಂತ ಅಲ್ಲ ಈ ಬೆಕ್ಕು ಜನ್ಮ. ಅವು ಹೊಟ್ಟೆಗೆ ಎಲ್ಲಿ ಹೆಚ್ಚು ಸಿಗುತ್ತೋ ಅಲ್ಲಿಗೆ ಪಲಾಯನಗೈಯ್ಯವ ಅವಕಾಶವಾದಿ ಪ್ರಾಣಿ.

ನಮ್ಮ ಮನೆಯಲ್ಲಿ ಸಣಕಲು ಬೆಕ್ಕೊಂದು ಎಲ್ಲಿಂದಲೋ ಬಂದು ಸಂಸಾರ ಹೂಡಿತ್ತು. ಬಿಳಿ ಕಂದು ಮಿಶ್ರಿತ ತುಪ್ಪಳಗಳ ಆ ಬೆಕ್ಕು ತಿಂದುಂಡು ಎರಡೇ ತಿಂಗಳಲ್ಲಿ ಮೈ ಕೈ ತುಂಬಿಕೊಂಡಿತು. ತರುವಾಯ ಮೂರು ಮರಿಗಳಿಗೆ ಜನ್ಮ ಕೊಟ್ಟಿತ್ತು. ಮೂರರಲ್ಲಿ ಒಂದು ಕಡು ಕಪ್ಪು, ಒಂದು ತಾಯಿಯನ್ನೇ ಹೋಲುವಂತದ್ದು, ಇನ್ನೊಂದು ಪೂರ್ತಿ ಬಿಳಿ ಮತ್ತು ತಲೆಯ ಭಾಗದಲ್ಲಿ ತಿಳಿ ಕೆಂಪು ಬಣ್ಣದ ಮರಿ. ಮೂರನೇ ಮರಿಯೆಂದರೆ ಎಲ್ಲರಿಗೂ ಅಚ್ಚು ಮೆಚ್ಚು.

ಪ್ರಬುದ್ಧಗೊಳ್ಳದ ಮರಿಗಳು ಮನೆ ತುಂಬಾ ಗಲೀಜು ಮಾಡುತ್ತದೆಂದು ಒಂದೊಂದು ಮರಿಗಳನ್ನು ಉಮ್ಮ ಒಬ್ಬೊಬ್ಬರಿಗೂ ಕೊಟ್ಟು ಕಳುಹಿಸಿದ್ದರು. ಎರಡು ಮರಿಗಳು ಅವರವರ ಮನೆಯಲ್ಲಿ ಹೋಗಿ ಕುಳಿತುಕೊಂಡು ಅಲ್ಲೇ ಹೊಂದಿಕೊಂಡರೂ, ಮೂರನೇ ಮರಿ ಮಾತ್ರ ಮನೆಯ ದಾರಿ ಸಂಜೆಯೊಳಗಡೆ ಹಿಡಿದಾಗಿತ್ತು. ಮನೆಯವರಿಗೆಲ್ಲಾ ಅಚ್ಚು ಮೆಚ್ಚು.

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು. ರಾತ್ರಿ ಮಲಗುವಾಗ ನಮ್ಮ ಜೊತೆ ಬಂದು ಮಲಗುತ್ತಿತ್ತು. ತಡವಾಗಿ ಬಂದರೆ ಬ್ಲಾಂಕೆಟ್ ಒಳಗಡೆ ನುಸುಳಿಕೊಳ್ಳುತ್ತಿತ್ತು. ಪ್ರೀತಿಯ ಮರಿಗೆ ತಂಗಿ “ಚಿಂಚು” ಎಂದು ನಾಮಕರಣವನ್ನೂ ಮಾಡಿದ್ದಳು. ಚಿಂಚು ಎಂದು ಕರೆದರೆ ಓಡಿ ಬರುವ ಮರಿ ಎಲ್ಲರ ಕೈ ನೆಕ್ಕುತ್ತಾ ಮಡಿಲಲ್ಲಿ ಮಲಗಿ ನಿದ್ರಿಸುವಂತೆ ನಾಟಕ ಮಾಡುತ್ತಿತ್ತು. ಇಂಥ ಈ ಖುಷಿ ಹೆಚ್ಚಿನ ದಿನ ಉಳಿಯಲಿಲ್ಲ.

ನಮ್ಮ ಮನೆಯ ಎಡ ಭಾಗಕ್ಕೆ ಚಿಕ್ಕಮ್ಮನ ಮನೆ. ಮನೆಯ ಕೆಳಗೆ ಸಣ್ಣಗಿನ ಇಳಿಜಾರಿದೆ. ಕ್ರಿಕೆಟ್ ಆಟ ಮುಗಿಸಿ ಆ ದಾರಿಯಲ್ಲಿ ಬರುತ್ತಿದ್ದವನಿಗೆ ತರಗೆಲೆಗಳ ಮಧ್ಯೆ ದಡಬಡಿಸುವ ಸದ್ದೊಂದು ಕೇಳಿತ್ತು. ನಾನು ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಯಾವುದೋ ಹಕ್ಕಿಯೋ, ಉಡವೋ ಪೊದೆಗಳ ಮಧ್ಯೆ ಇರಬೇಕೆಂದು ತೀರ್ಮಾನಿಸಿ ಮನೆಯ ಕಡೆಗೆ ಬಂದೆ. ಆ ಮಧ್ಯಾಹ್ನ ಆಟ ಮುಗಿದು ಸುಸ್ತಾಗಿ ಸಣ್ಣಗೆ ತೂಕಡಿಕೆ ಹತ್ತಿತ್ತು. ಮನೆಯ ಮೊಗಸಾಲೆಯಲ್ಲಿ ಕಿಟಕಿಯ ನೇರ ಮಲಗಿಕೊಂಡಿದ್ದೆ. ಕೆಲವು ನಿಮಿಷಗಳ ತರುವಾಯ ಚಿಕ್ಕಮ್ಮನ ಮಗಳು ಏದುಸಿರು ಬಿಡುತ್ತಾ ಮನೆಗೋಡಿ ಬಂದಳು. “ಅಲ್ಲಿ ದೊಡ್ಡ ಪೆರ್ಮಾರಿಯೊಂದು ನಿಮ್ಮ ಬೆಕ್ಕನ್ನು ಹಿಡಿದಿದೆ” ಅವಳ ಗಂಟಲು ಸೋಲುತ್ತಿತ್ತು. ಗಡ ಗಡ ನಡುಗುತ್ತಿದ್ದಳು. “ಎಲ್ಲಿ ಬಾ ತೋರಿಸು” ಅನ್ನುತ್ತಾ ಅವಳ ಹಿಂದೆಯೇ ನಾನೂ ಓಡಿದ್ದೆ. ಅಷ್ಟರಲ್ಲೇ ಮನೆಯವರೆಲ್ಲಾ ನಮ್ಮನ್ನು ಹಿಂಬಾಲಿಸಿದ್ದರು.

ಹಾವಿನ ಉರುಳಿನೆಡೆಯಿಂದ ಬೆಕ್ಕು ಇನ್ನು ಮಿಸುಕಾಡುತ್ತಿರುವಂತೆ ಕಾಣುತ್ತಿತ್ತು. “ಇನ್ನು ಜೀವ ಉಳಿದಿರಬಹುದೇನೋ” ಎಂಬ ಸಂಶಯ ಮಾತ್ರ ನಮಗುಳಿದಿತ್ತು. ಮುದ್ದಿನ ಬೆಕ್ಕಿನ ಅವಸ್ಥೆ ಕಂಡು ಮನೆಯವರೆಲ್ಲಾ ಹನಿಗಣ್ಣಾಗಿದ್ದರು. ನಾನು ಓಡಿ ಹೋಗಿ ಒಂದಿಬ್ಬರು ಊರಿನ ಧೈರ್ಯದವರನ್ನು ಕರೆದುಕೊಂಡು ಬಂದೆ. ಅವರೂ ಬಂದರು. ಕೋಲುಗಳಿಂದ ಹೊಡೆದು ಹಾವಿನ ಹಿಡಿತದಿಂದ ತಪ್ಪಿಸಲು ಶತ ಪ್ರಯತ್ನ ಮಾಡಿದರು. ಹಾವು ಜಪ್ಪಯ್ಯ ಅನ್ನಲಿಲ್ಲ. ಕಣ್ಣಿನ ಬಳಿ ಸೀಮೆ ಎಣ್ಣೆ ಸುರಿದ ಬಳಿಕ ಹಾವು ತನ್ನ ಉರುಳು ಸಡಿಲಿಸಲಾರಂಭಿಸಿತು. ಕೊನೆಗೆ ತನ್ನ ಬೇಟೆಯನ್ನು ಸಂಪೂರ್ಣ ಬಿಡಿಸಿದಂತೆ, ಬಿಳಿಯ ಹತ್ತಿ ಮುದ್ದೆಯಂತಾಗಿದ್ದ ಬೆಕ್ಕು ನಿಶ್ಚಲವಾಗಿ ನೆಲಕ್ಕೆ ಬಿತ್ತು. ಎಲ್ಲರಿಗೂ ಚಿಂಚು ಬದುಕಿರುವ ಆಶಾ ಭಾವವೂ ಕಮರಿತು. ಸತ್ತು ಬಿದ್ದ ಬೆಕ್ಕಿನ ಮರಿಯನ್ನು ಕಂಡು ಎಲ್ಲರೂ ಮರುಗಿದರು. ಅದನ್ನು ಮಣ್ಣು ಮಾಡುತ್ತಿದ್ದಂತೆ ತಂಗಿಯ ರೋಧನ ಮುಗಿಲು ಮುಟ್ಟುವಂತಿತ್ತು. ಅದೇ ನೋವಿನಲ್ಲಿ ಅವಳೆರಡು ದಿನ ಉಪವಾಸ ಸತ್ಯಾಗ್ರಹಕ್ಕೂ ಮೊರೆ ಹೋಗಿದ್ದಳು.