ನನಗೆ ಮೊದಲಿನಿಂದಲೂ ನಾಯಿಗಳ ಬಗ್ಗೆ ಅಪಾರ ಆಸಕ್ತಿ. ಮಲೆಗಳಲ್ಲಿ ಮದುಮಗಳು ಓದುತ್ತ, ನಾಯಿಯೊಂದಿಗಿನ ಗುತ್ತಿಯ ಅಸ್ತಿತ್ವ, ಗುತ್ತಿಯೊಂದಿಗಿನ ನಾಯಿಯ ಅಸ್ತಿತ್ವ ಬೆಸೆದ ಪರಿಗೆ ಅಚ್ಚರಿ ಪಡುತ್ತಿದ್ದೆ. ಯಜಮಾನನೊಂದಿಗೆ, ಅವನ ಮನೆಯೊಂದಿಗೆ ಅವನ ಸ್ವಭಾವದೊಂದಿಗೆ ಹೊಂದಿಕೊಳ್ಳುವ ಅವನ ಮನೆಯ ಸದಸ್ಯನೇ ಆಗಿಬಿಡುವ ನಾಯಿಗಳ ಬಗ್ಗೆ ಅದಮ್ಯ ಕುತೂಹಲ. ಅದರ ಪ್ರಭಾವದಿಂದಲೇ ನಮ್ಮ ಮನೆಗೆ ಚಿಂಟುವಿನ ಆಗಮನ. ಅಪ್ಪ ಅಮ್ಮಂದಿರಿಗೆ ಚಿಂಟು ಎಂದರೆ ಮನೆಯ ಮಗಳ ಸಮಾನ. ಮನೆಗೆ ಯಾರೇ ಬರಲಿ, ಮನೆಗೆ ಯಾವುದೇ ಪೋನ್ ಬರಲಿ ಚಿಂಟು ವಿಚಾರ ಮಾತಾಡ್ದೆ ಮಾತೇ ಮುಗಿಯಲ್ಲ. ನಾನೇ ಅಪ್ಪನ ಜೊತೆ ಅಷ್ಟೊಂದು ಸಲಿಗೆಯಿಂದ ಇಲ್ಲಾ, ಆದರೆ ಚಿಂಟು ಅಪ್ಪನ ಹೊಟ್ಟೆ ಮೇಲೆ ಮಲಗಿ ಜೋಗುಳ ಹಾಡು ಎಂದು ಹೇಳುವ ಅದರ ಭಾಷೆ ಅಪ್ಪ ಎಷ್ಟೇ ಕೋಪದಿಂದ ಇದ್ದರೂ ಮುಗಳ್ನಗೆ ಬೀರುವಂತೆ ಮಾಡುತ್ತದೆ. ಚಿಂಟೂ ಅಮ್ಮನ ಸೆರಗು ಹಿಡಿದು ಒಡಾಡತೊಡಗಿತು ಎಂದರೆ ತಿಂಡಿ ಕೊಡಬೇಕು ಎಂದರ್ಥ. ಅಮ್ಮ ದಿನಕ್ಕೊಂದು ತಿಂಡಿ ತಯಾರಿಸಿ ಅದಕ್ಕೆ ಪ್ರೀತಿಯಿಂದ ತುತ್ತು ಹಾಕುತ್ತಾ ನೀ ಚಂದಾನೆ ನಿನ್ನಾಟ ಚಂದಾನೇ ಎಂದು ಹಾಡುವಾಗ ಆನಂದ ಬಾಷ್ಪಗಳು ಮುತ್ತಿನಂತೆ ಉದರಿದ್ದನ್ನು ನೋಡಿ ಭಲೇ ಚಿಂಟೂ ಅಮ್ಮನಿಗೆ ನನಗಿಂತ ನಿನ್ನ ಮೇಲೇನೇ ಪ್ರೀತಿ ಹೆಚ್ಚು ಎಂದು ಕ್ಷಣ ಕಾಲ ಅಸೂಯೆ ಪಟ್ಟಿದ್ದೂ ಉಂಟು. ಚಿಂಟೂಗಿರುವ ಒಂದು ಕೆಟ್ಟ ಚಟವೆಂದರೆ ಮನೆ ಮುಂದಿನ ಗೇಟ್ ತೆಗೆದಾಗ ಆಚೆ ಹೋಗಿ ಬೇರೆ ನಾಯಿಗಳ ಜೋತೆ ಸೇರಿ ಮೈಯಲ್ಲೆಲ್ಲಾ ಚಿಗುಟ, ಹೇನು, ಉಣ್ಣೆ ಹತ್ತಿಸಿಕೊಂಡು ಬಂತು ಅಂದ್ರೆ ಅದರ ಸೇವೆ ನಾನೇ ಮಾಡಬೇಕು ಅಲ್ಲದೇ ಡಾಕ್ಟರ್ ಶಾಪ್ ಗೆ ಕರಕೊಂಡು ಹೋಗೊ ಡ್ಯೂಟಿನೂ ನಂದೇ.

ಮನೆಗೆ ತಕ್ಕ ನಾಯಿಯನ್ನು ತರುವುದೆಂದರೆ ಮನೆಗೆ ಮಗುವೊಂದನ್ನು ದತ್ತು ಸ್ವೀಕರಿಸಲು ಹುಡುಕಿದಷ್ಟೇ ಕಷ್ಟದ ಕೆಲಸ. ಏಕೆಂದರೆ ಜಗತ್ತಿನಲ್ಲಿ ೪೦೦ಕ್ಕೂ ಹೆಚ್ಚು ನಾಯಿಯ ತಳಿಗಳಿವೆ. ಅದರಲ್ಲಿ ಮುಖ್ಯವಾಗಿ ಆಟದ ತಳಿಗಳೂ, ಆಟವಾಡದ ತಳಿಗಳು ಎಂದು ಎರಡು ವಿಧ, ಲ್ಯಾಬ್ರೋಡಾರ್, ಸ್ಪ್ಯಾನಿಯಲ್, ಗ್ರೇಹೌಂಡ್, ಬ್ಲಡ್‌ಹೌಂಡ್, ಬೀಗಲ್, ಟೆರಿಯರ್ ಮುಂತಾದವು ಮುಖ್ಯವಾದ ಆಟದ ತಳಿಗಳಾದರೆ, ಆಟವಾಡದ ತಳಿಗಳಲ್ಲಿ ಮೂರು ಗುಂಪುಗಳಿವೆ. ಮೊದಲನೆಯದು ಉಪಯುಕ್ತ ಗುಂಪು- ಬುಲ್‌ಡಾಗ್, ಡಾಲ್ಮೇಷಿಯನ್, ಚೌಚೌ ಮುಂತಾದವು ಈ ಗುಂಪಿಗೆ ಸೇರುತ್ತವೆ. ಎರಡನೆಯದು ಕೆಲಸಗಾರ ಗುಂಪು- ಜೆರ್ಮನ್ ಶೆಪರ್ಡ್, ಬಾಕ್ಸರ್, ಮ್ಯಾಸ್ಟಿಪ್, ಡಾಬರ್‌ಮನ್ ಮುಂತಾದವು ಉತ್ತಮ ಕೆಲಸಗಾರ ಜಾತಿಗೆ ಸೇರಿದವು. ಇನ್ನು ಶೋಕೇಸಿನಲ್ಲಿಡುವಂಥ ಪುಟಾಣಿ ಗೊಂಬೆಗಳಂತಿರುವ ಪಮೇರಿಯನ್, ಹಚ್ ಮೊಬೈಲ್ ಖ್ಯಾತಿಯ ಪಗ್, ಪಿಕಿಂಗೀಸ್, ಸಿಲ್ಕಿ ಟೆರಿಯಲ್ ಮುಂತಾದವುಗಳದ್ದು ಆಟವಾಡುವ ಗುಂಪು. ಇವುಗಳಲ್ಲಿ ನಮ್ಮ ಮನೆಗೆ, ನಮ್ಮ ಅಭಿರುಚಿಗೆ, ನಮ್ಮ ಅವಶ್ಯಕತೆಗೆ ಯಾವುದು ಸೂಕ್ತ ಎಂದು ಗುರುತಿಸಿ ಅಂಥಾ ನಾಯಿಯನ್ನೇ ಆರಿಸಬೇಕು. ಮನೆ ಕಾಯಲು ಡಾಬರಮನ್, ಜರ್ಮನಶೆಪರ್ಡ, ಬಾಕ್ಸರ್, ಬುಲಡಾಗ್ ಸೂಕ್ತ ತಳಿಗಳಾದರೆ ನೋಡಲು ಅತ್ಯಂತ ಸುಂದರವಾಗಿದ್ದು ಮುದ್ದು ಮಾಡಬೇಕೆನ್ನಿಸುವರು ಪಗ್, ಸ್ಪಿಟ್ಜ, ಸ್ಪೇನಿಯಲ್, ಗೊಲ್ಡನ್ ರಿಟ್ರೈವರ್, ಲಾಸಾ ಆಪ್ಸೋ ನಾಯಿಗಳನ್ನು ಸಾಕಬಹುದು, ಇನ್ನು ದೈತ್ಯ ನಾಯಿಗಳ ಸಹವಾಸ ಬಯಸುವವರು ಸೇಂಟ್ ಬರ್ನಾಡ್, ಗ್ರೇಟ್ ಡೇನ್, ಮ್ಯಾಸ್ಟಿಪ್ ಜಾತಿಯ ನಾಯಿಗಳನ್ನು ಹೊಂದುವುದು ಒಳ್ಳೆಯದು. ಆದರೆ ಇವುಗಳನ್ನು ಸಾಕಲು ಸಾಕಷ್ಟು ಜಾಗ ಹಾಗೂ ಜೇಬು ತುಂಬಾ ಕಾಸು ಮಾತ್ರ ಇರಲೇಬೇಕು.

ಪುಟ್ಟ ಮರಿಯನ್ನು ಮನೆಗೆ ತರುವುದಾದರೆ, ಹುಟ್ಟಿದ ನಾಲ್ಕು ವಾರಗಳ ನಂತರವಷ್ಟೇ ತರಬೇಕು. ಏಕೆಂದರೆ ಮರಿಗಳಿಗೆ ನಾಲ್ಕು ವಾರಗಳವರೆಗೆ ತಾಯಿಯ ಹಾಲು ಅತಿ ಅವಶ್ಯಕ. ಆನಂತರ ಅದನ್ನು ತಾಯಿಯಿಂದ ಬೇರ್ಪಡಿಸಿ, ಹಸುವಿನ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಕೊಡಬೇಕು. ಕೆಲವರು ಮಕ್ಕಳಿಗೆ ತಿನ್ನಿಸುವ ಸಿರಲ್ಯಾಕ್, ಫೆರಕ್ಸನ್ನೋ ಅಥವಾ ನಾಯಿಮರಿಗಳಿಗೆಂದೇ ಮಾರುಕಟ್ಟೆಯಲ್ಲಿ ಸಿಗುವ ಸೆಮೊಲ್ಯಾಕ್ನ್ನೋ ಹಾಲಿನೊಂದಿಗೆ ಬೆರೆಸಿ, ನಾಯಿಗೆ ಕೊಡುತ್ತಾರೆ. ನಾನು ಚಿಂಟುವನ್ನು ಅದಕ್ಕೆ ಒಂದು ವರ್ಷವಾಗಿದ್ದಾಗ ತಂದಿದ್ದೆನಾದ್ದರಿಂದ ನಮ್ಮ ಮನೆಯಲ್ಲಿ ನಾವೇನು ತಿನ್ನುತ್ತೇವೆಯೋ ಅದಕ್ಕೂ ಅದನ್ನೇ ಹಾಕುತ್ತಿದ್ದೆ. ನಾಯಿಯಾದರೇನು ಅದಕ್ಕೂ ಅನ್ನ, ಹಾಲು, ರೊಟ್ಟಿ, ಮುದ್ದೆ, ಮೊಟ್ಟೆ ಬೇಕೇ ಬೇಕು. ನಾಯಿಗಳ ವೈಶಿಷ್ಟ ಎಂದರೆ ಅವು ಮೂಲತಃ ಮಾಂಸಾಹಾರಿಗಳಾದರೂ ಜೀವನವಿಡೀ ಶಾಕಾಹಾರಿಗಳಾಗಿಯೂ ಬದುಕಬಲ್ಲವು. ಊಟದ ವಿಷಯದಲ್ಲಿ ನಮ್ಮ ಚಿಂಟು ಬಹಳ ಕಟ್ಟುನಿಟ್ಟು. ಶಾಕಾಹಾರಿ, ಉಪ್ಪಿಲ್ಲದ, ರುಚಿಯಿಲ್ಲದ ಹಾಳಾದ ತಿಂಡಿಗಳನ್ನು ತಿನ್ನುವುದೇ ಇಲ್ಲ.

ಅಂದು ನಗರದಲ್ಲಿ ಶ್ವಾನ ಪ್ರದರ್ಶನವಿದ್ದುದರಿಂದ ಚಿಂಟುವನ್ನು ಸ್ವಲ್ಪ ಟ್ರಿಮ್ ಮಾಡೋಣವೆಂದು ಸ್ನಾನ ಮಾಡಿಸಿದ್ದೆ. ಸಾಮಾನ್ಯವಾಗಿ ನಾನು ಚಿಂಟುಗೆ ಪದೇ ಪದೇ ಸ್ನಾನ ಮಾಡಿಸುವುದಿಲ್ಲ. ನಾಯಿಗಳ ದೇಹದಲ್ಲಿ ಸ್ವಾಭಾವಿಕವಾಗಿಯೇ ಎಣ್ಣೆ ಅಂಶ ಇರುವುದರಿಂದ ಕೂದಲಿನಲ್ಲಿ ಹೊಳಪು ಮೃದುತ್ವ ಇರುತ್ತದೆ. ಪದೇ ಪದೇ ಸ್ನಾನ ಮಾಡಿಸುವುದರಿಂದ ಎಣ್ಣೆ ಅಂಶ ಮಾಯವಾಗಿ ಕೂದಲು ಒರಟಾಗುವುದಲ್ಲದೇ ಚರ್ಮದ ಕಾಯಿಲೆಗಳು ಬರುತ್ತವೆ. ಆದರೆ ಅಂದು ಸ್ನಾನ ಮಾಡಿ ಬಿಸಿಲಲ್ಲಿ ನಿಂತಿದ್ದ ಚಿಂಟು ಒಳ್ಳೆ ರಾಜಕುಮಾರಿಯಂತೆ ಕಾಣುತ್ತಿತ್ತು.

ಮೊದಲಿನಿಂದಲೂ ಕಾಲಕಾಲಕ್ಕೆ ಜಂತುಹುಳಗಳಿಗೆ ಔಷಧಿ ಹಾಕಿಸುವುದು, ಚರ್ಮದ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸಿದ್ದರಿಂದ ಚಿಂಟು ಮೈ, ಮುಖ ರೇಶ್ಮೆಯಂತೆ ಹೊಳೆಯುತ್ತಿತ್ತು. ಶ್ವಾನ ಪ್ರದರ್ಶನದಲ್ಲಿ ಕಂತ್ರಿ ನಾಯಿಗಳಿಂದ ಹಿಡಿದು ಹೈಟೆಕ್ ನಾಯಿಗಳವರೆಗೂ ಎಲ್ಲ ಜಾತಿಯ ನಾಯಿಗಳೂ ಫ್ಯಾಷನ್ ಶೋನಲ್ಲಿ ಭಾಗವಹಿಸುವ ಬೆಡಗಿಯರ ಹಾಗೆ ಸಡಗರದಿಂದ ಓಡಾಡುತ್ತಿದ್ದವು. ನಾನಂತೂ ಜೆರ್ಮನ್ ಶೆಫರ್ಡ್, ಡಾಲ್‌ಮೇಷಿಯನ್, ಡಾಬರ್‌ಮನ್, ಗ್ರೇಟ್‌ಡೇನ್, ಡ್ಯಾಶ್‌ಹೌಂಡ್, ಬಾಕ್ರರ್ ಬುಲ್‌ಡಾಗ್, ಜಿಹುವ್ಹಾ ಎಂದೆಲ್ಲ ಗುರುತಿಸುತ್ತ, ನನ್ನ ಶ್ವಾನ ಜ್ಞಾನವನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ. ಗೆಳೆಯ ಸಚಿನ್ ಬರುತ್ತಿರುವುದನ್ನು ನೋಡಿ ಆ ಕಡೆ ದಾವಿಸಿದೆ. ಸಚಿನ್ ತಂದಿದ್ದ ನಾಯಿ ನನ್ನನ್ನು ಕಂಡು ಮೋಟುಬಾಲವನ್ನೇ ಅಲ್ಲಾಡಿಸಿ ಪ್ರೀತಿ ತೋರಿಸಿತು ಪಾ..ಪ, ನಾಯಿ ಬಾಲವನ್ನು ಕತ್ತರಿಸಿ ಹಿಂಸೆ ಯಾಕೆ ಕೊಡ್ತಾರೋ ಗೊತ್ತಿಲ್ಲ. ಅಲ್ಲಿದ್ದ ನನ್ನಂಥ ಹಲವಾರು ಜನರು ತಮ್ಮ ತಮ್ಮ ನಾಯಿಯ ಅಂದಚೆಂದವನ್ನು ಗುಣ ವಿಶೇಷಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದರು. ನಾಯಿ ಪಾಡು, ನಾಯಿಗಿಂತ ಕಡೆ, ಎಂದೆಲ್ಲಾ ಹೀನಾಯವಾಗಿ ಮಾತನಾಡುವವರು ಇಲ್ಲಿ ಬಂದು ನೋಡಬೇಕು ಶ್ವಾನದಂತೆ ಶ್ರೇಷ್ಠ ಎಂದು ಅವರೇ ಹೇಳುತ್ತಾರೆ. ನಾಯಿ ಸಾಕುವುದರ ಸುಖವನ್ನು ಅದನ್ನು ಪ್ರದರ್ಶಿಸುವ ಒಡೆಯರ ಹೆಮ್ಮೆಯ ಮುಖವೇ ಸಾರಿ ಹೇಳುತ್ತದೆ. ಬಹಳಷ್ಟು ಜನ ನಾಯಿಗೆ ಬರುವ ರೇಬಿಸ್ ಅಥವಾ ಹುಚ್ಚುನಾಯಿ ರೋಗಕ್ಕೆ ಹೆದರಿಯೇ ನಾಯಿಯನ್ನು ಸಾಕಲು ಮುಂದಾಗುವುದಿಲ್ಲ. ನಿಜ. ಆ ರೋಗ ಬಹಳ ಭಯಾನಕವಾದುದು. ಅಲ್ಲದೆ ಈ ರೋಗ ಬಂದಿರುವ ನಾಯಿಯು ಇತರ ಪ್ರಾಣಿ ಹಾಗು ಮನುಷ್ಯರಿಗೆ ಕಚ್ಚಿದರೆ, ಅದು ಅವರಿಗೂ ಹರಡುತ್ತದೆ. ಆ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೇನಂತೆ ರೋಗ ಬರದಂತೆ ತಡೆಯಲು ಒಳ್ಳೆಯ ಲಸಿಕೆ ಇದೆ. ನಾಯಿ ಮರಿಗೆ ಮೂರು ತಿಂಗಳಾದಾಗ ಆ ಲಸಿಕೆ ಹಾಕಿಸಿ ಅದನ್ನು ಪ್ರತಿವರ್ಷವೂ ಮುಂದುವರೆಸಿದರೆ, ರೇಬಿಸ್ ಬರುವ ಭಯವೇ ಇಲ್ಲ. ರೇಬಿಸ್ ಮಾತ್ರವಲ್ಲ, ನಾಯಿಗಳಿಗೆ ಬರುವ ಇತರ ಸಾಂಕ್ರಾಮಿಕ ರೋಗಗಳಾದ ಡಿಸ್ಟೆಂಪರ್, ಪಾರ್ವೋ, ಕರೋನಾ, ಆಡಿನೋ, ಪ್ಯಾರಾ ಇನ್‌ಫ್ಲುಯೆಂಜಾ ಮುಂತಾದವು ಬಂದರೆ, ನಾಯಿಯನ್ನು ಉಳಿಸಿಕೊಳ್ಳುವುದೇ ಕಷ್ಟ. ಇವುಗಳ ವಿರುದ್ಧ ಲಸಿಕೆ ಹಾಕಿಸುವುದೇ ಇದಕ್ಕಿರುವ ಒಳ್ಳೆ ಉಪಾಯ.  ಕೇವಲ ಒಂದೇ ಒಂದು ಲಸಿಕೆ ಈ ಎಲ್ಲಾ ಕಾಯಿಲೆಗಳನ್ನು ತಡೆಗಟ್ಟಿ ನಮ್ಮ ಮುದ್ದಿನ ನಾಯಿಯನ್ನು ಉಳಿಸುತ್ತದೆ.

ಜಗತ್ತನ್ನೇ ತಲ್ಲಣಗೊಳಿಸಿದ ವಿಶ್ವ ವ್ಯಾಪಾರ ಕೇಂದ್ರ ಹಾಗು ಬೆಂಗಳೂರಿನ ವಿಜ್ಞಾನ ಭವನದ ಮೇಲಿನ ಆಕ್ರಮಣದ ಘಟನೆಗಳ ಸ್ಫೋಟಕ ವಸ್ತುಗಳ ಪತ್ತೆಗೆ ಪ್ರಯತ್ನಿಸುತ್ತಿದ್ದ ಪೊಲೀಸ್ ನಾಯಿಯನ್ನು ನೀವು ಟಿ.ವಿ.ಯಲ್ಲಿ ನೋಡಿರಬಹುದು. ಹಿಂದೊಂದು ಕಾಲದಲ್ಲಿ ನಾಯಿ ಮತ್ತು ಮಾನವ ಒಂದೇ ಬೇಟೆಗಾಗಿ ಪೈಪೋಟಿ ಮಾಡುತ್ತಿದ್ದರು. ಆದರೆ ಮನುಷ್ಯ ತನ್ನ ಬುದ್ಧಿವಂತಿಕೆ ಹಾಗೂ ಶಸ್ತ್ರಾಸ್ತ್ರಗಳ ಬಳಕೆಯಿಂದ ಬೇಟೆಯಲ್ಲಿ ನಾಯಿಯನ್ನು ಮೀರಿಸಿದ. ಸಾಲದೆಂಬಂತೆ ನಾಯಿಯ ವಾಸನಾಗ್ರಹಣ ಮತ್ತು ಶಬ್ದಗ್ರಹಣ ಶಕ್ತಿ ಮನುಷ್ಯನಿಗಿಂತ ಹೆಚ್ಚಿದ್ದರಿಂದ ತನ್ನ ಅನುಕೂಲಕ್ಕೆ ಹಾಗು ಉಪಯೋಗಕ್ಕೆ ತಕ್ಕಂತೆ ನಾಯಿಯನ್ನೇ ಪಳಗಿಸಲಾಯಿತು.

ಇಂದು ನಾಯಿ ಮನೆ ಕಾಯುವ ರಕ್ಷಕ, ವೃದ್ಧರ ಹಾಗೂ ಕುರುಡರ ಸಹಾಯಕ, ಕುರಿ-ಆಡುಗಳನ್ನು ಕಾಯುವ ಜತೆಗಾರ, ಪೊಲೀಸ್ ಮತ್ತು ಸಶಸ್ತ್ರ ಪಡೆಗಳಲ್ಲಿ ಶಸ್ತ್ರಾಗಾರರ ಕಾವಲುಗಾರ, ಕಳ್ಳರನ್ನು ಹಿಡಿಯುವ ಮಾದಕ ಮತ್ತು ಸ್ಪೋಟಕ ವಸ್ತುಗಳ ನಿಪುಣ ಪತ್ತೆಗಾರ, ವಿಶೇಷ ತರಬೇತಿ ಪಡೆದರೆ ಭೂಕಂಪ, ಜ್ವಾಲಾಮುಖಿ, ಸುನಾಮಿಯಂಥ ಆತಂಕಗಳ ಮುನ್ಸೂಚನೆ ಕೊಡುವ ಜ್ಯೋತಿಷಿ. ನಾಯಿಗಳ ಬಗೆಗಿನ  ವಿಚಾರಗಳನ್ನು ಅಲ್ಲಿ-ಇಲ್ಲಿ ಓದಿ, ನೋಡಿ, ಕೇಳಿ ತಿಳಿದಿದ್ದೇನೆ. ನಾಯಿಗಳ ಮೇಲಿನ ಅತೀವ ಪ್ರೀತಿಯಿಂದಾಗಿ ನನಗೆ ಗೊತ್ತಿದ್ದ ಶ್ವಾನ ಮಾಹಿತಿಯನ್ನು ಬಿಚ್ಚಿಟ್ಟಿದ್ದೇನೆ. ಈಗ ಚಿಂಟೂ ವಿಷಯಕ್ಕೆ ಬರೋಣ….

ನಮ್ಮ ಮನೆಯ ಸದಸ್ಯನಾಗಿಯೇ ಬೆಳೆದು ಎಲ್ಲರಿಗೂ ಬೇಷರತ್ತಿನ ಪ್ರೀತಿ ನೀಡಿ ಬದುಕಿಗೆ ಅರ್ಥ ಕಲ್ಪಿಸಿದ್ದ ಚಿಂಟೂ ಜೀವಕ್ಕೆ ಬೆಟ್ಟದಂತ ಕಷ್ಟ ಬಂದೆರಗಿತು. ಬಹಳ ಸಮಯದ ನಂತರ ಮನೆಗೆ ಬಂದಿದ್ದ ನೆಂಟರೊಬ್ಬರು ಮನೆಯಿಂದ ಹೊರಡುವಾಗ ಮನೆಯಂಗಳದ ಗೇಟ್ ಹಾಕದೇ ಹೋಗಿದ್ದರು. ಚಿಂಟು ಸಂಗಾತಿಗಳನ್ನರಸಿ ತೆರೆದಿಟ್ಟ ಬಾಗಿಲ ಮೂಲಕ ಹೊರಗಡೆ ಹೋಗಿ ರಹದಾರಿ ದಾಟುವಾಗ ಆಘಾತಕಾರಿ ಘಟನೆ ನಡೆಯಿತು, ಅದುವೇ ಭೀಕರ ರಸ್ತೆ ಅಪಘಾತ! ವಿಷಯ ತಿಳಿದ ತಕ್ಷಣ ನಾವೆಲ್ಲಾ ಕಣ್ಣೀರಿಡುತ್ತಾ ಸ್ಥಳಕ್ಕೆ ಧಾವಿಸಿದಾಗ ಚಿಂಟೂ ಬಿದ್ದ ಜಾಗವೆಲ್ಲಾ ರಕ್ತಮಯವಾಗಿತ್ತು, ಅಮ್ಮನಿಗೆ ಈ ದೃಶ್ಯ ಕಂಡು ಪ್ರಜ್ಞೆ ತಪ್ಪಿತು. ಅಮ್ಮನನ್ನು ಸಂತೈಯಿಸುವ ಕೆಲಸವನ್ನು ಅಪ್ಪನಿಗೆ ಒಪ್ಪಿಸಿ ಪ್ರಜ್ಞೆತಪ್ಪಿದ ಚಿಂಟೂವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದೆ. ಚಿಂಟೂನೇ ನಮಗೆ ಸರ್ವಸ್ವ, ದಯವಿಟ್ಟು ಉಳಿಸಿಕೊಡಿ ಎಂದು ವೈದ್ಯರನ್ನು ಅಂಗಲಾಚಿ ಬೇಡಿಕೊಂಡೆ. ಅತೀವ ರಕ್ತಸ್ರಾವದಿಂದ ನರಳುತ್ತಿದ್ದ ಚಿಂಟೂ ಜೀವ ಉಳಿಸಲು ವೈದ್ಯರು ಮಾಡಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಚಿಂಟೂ ಇಹಲೋಕ ತ್ಯಜಿಸಿದ್ದನ್ನು ವೈದ್ಯರು ಕ್ಷಮೆ ಕೋರಿ ನೋವಿನಿಂದ ದೃಢಪಡಿಸಿದರು. ದುಃಖ ತಡೆಯಲಾಗಲಿಲ್ಲ, ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ, ಏನು ಮಾಡಬೇಕೆಂದು ತೋಚಲಿಲ್ಲ; ಕೊನೆಗೆ ಗೆಳೆಯರ ಸಹಾಯದಿಂದ ಚಿಂಟೂವಿನ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ಘಟನೆಯಿಂದ ಮನೆಯಲ್ಲಿ ಹಲವು ದಿನಗಳವರೆಗೆ ನೀರವ ಮೌನ ಆವರಿಸಿತು.

ನಮ್ಮ ಒಡನಾಡಿಯಾಗಿ ಹತ್ತಾರು ವರುಷ ಬಾಳಿ ಬದುಕಿ ಕಾಣದ ಲೋಕಕ್ಕೆ ತೆರಳಿದ ಚಿಂಟೂ ನಮ್ಮನ್ನಗಲಿ ವರುಷಗಳೇ ಕಳೆದಿವೆ. ಆದರೆ ನಮ್ಮ ಮನೆಯ ಶೋಕೇಸ್‌ನಲ್ಲಿರುವ ಅದರ ಫೋಟೊದಂತೆ ಚಿಂಟೂ ನೆನಪು ಮನದಾಳದಲ್ಲಿ ಅಚ್ಚಳಿಯದೇ ಮನೆಮಾಡಿದೆ.

ಇತಿಹಾಸ ಮತ್ತು ಶ್ವಾನ
ಧರ್ಮರಾಯನು ಸ್ವರ್ಗಕ್ಕೆ ಹೋಗುವಾಗ ಕಡೆಯವರೆಗೂ ಅವನನ್ನು ಹಿಂಬಾಲಿಸಿದ್ದು ಒಂದು ನಾಯಿ.
ಮಹರ್ಷಿ ವಿಶ್ವಾಮಿತ್ರ ಕ್ಷಾಮ ಕಾಲದಲ್ಲಿ ಹಸಿವನ್ನು ತಾಳಲಾಗದೇ ನಾಯಿ ಮಾಂಸವನ್ನು ತಿಂದ ಬಗ್ಗೆ ಉಲ್ಲೇಖವಿದೆ.
ಇಜಿಪ್ತಿನ ಪುರಾಣಗಳಲ್ಲಿನ ಅನೂಬಿಸ್ ಎಂಬ ಸಮಾಧಿ ರಕ್ಷಕ ದೇವತೆ ನಾಯಿ ಆಕಾರದಲ್ಲಿದೆ.
ಎರಡನೇ ಮಹಾಯದ್ದದಲ್ಲಿ ಮಿತ್ರ ರಾಷ್ಟ್ರಗಳ ಸೇನೆಯು ಸುಮಾರು ೨,೫೦,೦೦೦ ನಾಯಿಗಳನ್ನು ಯುದ್ದಕಾರ್ಯಕ್ಕಾಗಿ ಬಳಸಿಕೊಂಡಿತ್ತು.
ಛತ್ರಪತಿ ಸಾವು ಮಹಾರಾಜರ ನಾಯಿ ಕಂಡ್ಯಾ ಅವರನ್ನು ಬೇಟೆಯಲ್ಲಿ ಹುಲಿಯ ಆಕ್ರಮಣದಿಂದ ರಕ್ಷಿಸಿತ್ತು; ಆತ ಸತ್ತಾಗ ತಾನೂ ಜೊತೆಯಲ್ಲಿ ಚಿತೆಗೆ ಹಾರಿ ಪ್ರಾಣ ಬಿಟ್ಟಿತ್ತು.
ಸರಮ, ಶ್ಯಾಮ ಹಾಗೂ ಶಬಲ ಇವು ದೇವತೆಗಳಿಗೆ ಇಷ್ಟವಾದ ನಾಯಿಗಳೆಂದು ಋಗ್ವೇದದಲ್ಲಿ ಉಲ್ಲೇಖವಿದೆ.