ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಅದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಯಿತೆಂದೇ ಹೇಳಬೇಕು. ಚಿಕ್ಕ ಮಕ್ಕಳಲ್ಲಿ ನಿಸರ್ಗ-ಪರಿಸರಗಳ ಬಗ್ಗೆ ಅಪಾರ ಕುತೂಹಲವಿರುತ್ತದೆ. ಆ ಕುತೂಹಲವೆಲ್ಲವನ್ನೂ ನಮ್ಮ ಶಾಲೆಗಳ ವಿದ್ಯಾಭ್ಯಾಸ ಕ್ರಮ ಕೊಂದೇಬಿಡುತ್ತದೆ. ಚಿಣ್ಣಪ್ಪನವರಲ್ಲಿ ಈ ಕುತೂಹಲ ಜೀವಂತವಾಗಿ ಉಳಿದುದರಿಂದಲೇ ಅವರ ಅರಣ್ಯ ಪರಿಜ್ಞಾನ ಬೆಳೆಯಲು ಸಾಧ್ಯವಾಯಿತು. ಚಿಣ್ಣಪ್ಪನವರು ಅರಣ್ಯ ಇಲಾಖೆಗೆ ಸೇರಿದ ಮೇಲೆ ಅವರಿಗೆ ಕಾಡೇ ಶಾಲೆಯಾಯಿತು. ಯಾವುದೇ ಒಂದು ಸನ್ನಿವೇಶದಲ್ಲಿ ಕಂಡುಬರುವ ಕುರುಹು, ಸೂಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಇದು ಹೀಗೆಯೇ ನಡೆದಿದೆ ಎಂದು ಖಚಿತವಾಗಿ ಹೇಳಬಲ್ಲ ತರ್ಕ ಪ್ರಾವೀಣ್ಯ, ಕಾಡಿನ ಅರಿವು ಚಿಣ್ಣಪ್ಪನವರಿಗೆ ಸಿದ್ಧಿಸಿತ್ತು.
ಕೆ.ಎಂ.ಚಿಣ್ಣಪ್ಪನವರ ಕುರಿತ “ಕಾಡಿನೊಳಗೊಂದು ಜೀವ” ಪುಸ್ತಕಕ್ಕೆ ಪರಿಸರವಾದಿ ಡಾ.ಉಲ್ಲಾಸ ಕಾರಂತ್ ಬರೆದ ಮುನ್ನುಡಿ.

 

1967ರಲ್ಲಿ ನಾನು ನಾಗರಹೊಳೆಗೆ ಮೊದಲ ಬಾರಿ ಬಂದಾಗ ಅಚ್ಚಯ್ಯನವರು ಅಲ್ಲಿ ರೇಂಜರ್ ಆಗಿದ್ದರು. ಆಗ ನಾಗರಹೊಳೆಗೆ ಪ್ರವಾಸಿಗರ ಕಾಟವಿರಲಿಲ್ಲ. ನನಗೆ ವನ್ಯಜೀವಿಗಳ ವಿಷಯದಲ್ಲಿ ಆಸಕ್ತಿಯಿದೆ ಎಂದು ತಿಳಿದ ಅಚ್ಚಯ್ಯನವರು ಕಾಡಿನ ಪರಿಚಯ ಮಾಡಿಕೊಳ್ಳುವುದಕ್ಕೂ, ತಿರುಗಾಡುವುದಕ್ಕೂ ನನಗೆ ತುಂಬ ಸಹಾಯ ನೀಡುತ್ತಿದ್ದರು. ಶ್ರೀ ಚಿಣ್ಣಪ್ಪನವರು 1969ರಲ್ಲಿ ವನ್ಯಜೀವಿ ವಿಭಾಗದ ಫಾರೆಸ್ಟರ್ ಆಗಿ ಬಂದ ಮೇಲೆಯೇ ನನಗೆ ಅವರ ಪರಿಚಯವಾಗಿದ್ದು. ಆದರೆ ಅವರು ಅಲ್ಲಿ ಕೆಲಸಕ್ಕೆ ಸೇರಿದ ಬಹುದಿನಗಳ ತನಕ ನನಗೂ ಅವರಿಗೂ ಭೇಟಿಯಾಗಿರಲಿಲ್ಲ. ಅಚ್ಚಯ್ಯನವರೇನೋ ಯಾವಾಗಲೂ ಹೇಳುತ್ತಿದ್ದರು “ಇನ್ನು ಈ ಕಾಡೂ, ಕಾಡು ಪ್ರಾಣಿಗಳು ಉಳಿಯಬೇಕಾದರೆ ಯಾರು ಎಷ್ಟು ಪ್ರಯತ್ನಪಟ್ಟರೂ ಸಾಲದು. ಈಗ ಚಿಣ್ಣಪ್ಪ ಎಂಬ ಯುವಕನೊಬ್ಬ ಫಾರೆಸ್ಟರ್ ಆಗಿದ್ದಾನೆ, ಅವನೇನಾದರೂ ನಾಳೆಯ ಕಾಲಕ್ಕೆ ರೇಂಜರ್ ಆಗಿ ಇಲ್ಲಿಗೆ ಬಂದರೆ ಕಾಡೇನಾದರೂ ಉಳಿದೀತು. ಇಲ್ಲವಾದರೆ ಎಲ್ಲ ಹಾಳಾಗಿ ಹೋಗುತ್ತದೆ.” ಅಚ್ಚಯ್ಯನವರ ಮಾತು ಕೇಳಿ ನನಗೆ ಚಿಣ್ಣಪ್ಪನೆಂಬ ಆ ವ್ಯಕ್ತಿಯ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿತಾದರೂ ನಾನು ನಾಗರಹೊಳೆಗೆ ಬಂದಾಗಲೆಲ್ಲಾ ಈ ಚಿಣ್ಣಪ್ಪ ಸಿಕ್ಕುತ್ತಲೇ ಇರಲಿಲ್ಲ. ಅವರು ದಿನದ 24 ಗಂಟೆಯೂ ಕಾಡು ಗಸ್ತು ತಿರುಗುತ್ತಾ ಕೆಲಸದಲ್ಲೇ ತೊಡಗಿರುತ್ತಿದ್ದರು.

1970ರಲ್ಲಿ ನಾನು ನಾಗರಹೊಳೆಗೆ ಬಂದಾಗ ಅಚ್ಚಯ್ಯನವರೇ ಚಿಣ್ಣಪ್ಪನ ಪರಿಚಯ ಮಾಡಿಸಿದರು. ನನ್ನನ್ನು ಕಾಡಿನಲ್ಲಿ ಸುತ್ತಾಡಿಸಿಕೊಂಡು ಬರುವಂತೆ ಹೇಳಿ ಕಳುಹಿಸಿದರು. ನಾನೂ ಚಿಣ್ಣಪ್ಪನವರೂ ಬೆಳಗಿನಿಂದ ಸಂಜೆಯವರೆಗೂ ಕಾಡೆಲ್ಲ ತಿರುಗಾಡಿದೆವು.

(ಕೆ.ಎಂ.ಚಿಣ್ಣಪ್ಪ)

ನನಗೆ ಪಕ್ಷಿವೀಕ್ಷಣೆ ಬಗ್ಗೆ ಅಪಾರ ಆಸಕ್ತಿ ಇತ್ತು. ಆದರೆ ಚಿಣ್ಣಪ್ಪನವರಿಗೆ ಪಕ್ಷಿಗಳ ಬಗ್ಗೆ ಆಗ ಹೆಚ್ಚೇನೂ ಗೊತ್ತಿರಲಿಲ್ಲ. ಹೀಗೆ ನನ್ನ ಆಸಕ್ತಿಯ ವಿಷಯದ ಬಗೆಗೆ ಅವರಿಗೆ ವಿವರಣೆ ಕೊಡುತ್ತಲೂ ಅವರಿಂದ ಕಾಡರಿವಿನ ಸೂಕ್ಷ್ಮಗಳನ್ನು ತಿಳಿಯುತ್ತಲೂ ವಿನಿಮಯ ಪೂರ್ವಕವಾಗಿ ನಮ್ಮ ನಡುವೆ ಆತ್ಮೀಯತೆ ಬೆಳೆಯುತ್ತಾ ಬಂದಿತ್ತು. ಚಿಣ್ಣಪ್ಪನವರೊಡನೆ ರಾತ್ರಿಯ ವೇಳೆ ಕಾಡಿನಲ್ಲಿ ತಿರುಗಾಡಲು ಹೋಗುವುದೆಂದರೆ ನನಗೆ ಅದೊಂದು ಅತಿ ವಿಶಿಷ್ಟವಾದ ಅನುಭವ. ಬೇರೆ ಯಾರಾದರೂ ಪ್ರಬಲವಾದ ಟಾರ್ಚು ಮತ್ತಿತರ ಉಪಕರಣಗಳನ್ನು ಒಯ್ದರೆ ಚಿಣ್ಣಪ್ಪನವರು ಅನೇಕ ಬಾರಿ ಕತ್ತಲೆಯಲ್ಲಿ ಅದೂ ಬಹಳ ಸರಾಗವಾಗಿ ನಡೆಯುವರು: ಕೈಯಲ್ಲಿ ಟಾರ್ಚ್ ಇದ್ದರೂ ಅದನ್ನು ಉಪಯೋಗಿಸುವವರಲ್ಲ. ಎಲ್ಲೋ ಒಂದೆಡೆ ಒಂದು ಸಣ್ಣ ಕಡ್ಡಿ ಮುರಿದ ಶಬ್ದವಾದರೆ ಕೂಡಲೆ ನಿಂತು ಅಲ್ಲಿ ಆನೆ ಇದೆ ಎನ್ನುವರು. ಅವರ ಟಾರ್ಚಿನ ಬೆಳಕಿನಲ್ಲಿ ಪ್ರಾಣಿಯನ್ನು ಕಂಡಮೇಲೆ ಮಾತ್ರವೇ ನಮಗೆ ಅದು ನಿಜವೆಂದು ಗೊತ್ತಾಗಬೇಕು. ಇಂಥ ಸೂಕ್ಷ್ಮ ಕಾಡಿನ ಅರಿವು ಉಳ್ಳವರು ಬಲು ಅಪರೂಪ.

ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಅದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಯಿತೆಂದೇ ಹೇಳಬೇಕು. ಚಿಕ್ಕ ಮಕ್ಕಳಲ್ಲಿ ನಿಸರ್ಗ-ಪರಿಸರಗಳ ಬಗ್ಗೆ ಅಪಾರ ಕುತೂಹಲವಿರುತ್ತದೆ. ಆ ಕುತೂಹಲವೆಲ್ಲವನ್ನೂ ನಮ್ಮ ಶಾಲೆಗಳ ವಿದ್ಯಾಭ್ಯಾಸ ಕ್ರಮ ಕೊಂದೇಬಿಡುತ್ತದೆ. ಚಿಣ್ಣಪ್ಪನವರಲ್ಲಿ ಈ ಕುತೂಹಲ ಜೀವಂತವಾಗಿ ಉಳಿದುದರಿಂದಲೇ ಅವರ ಅರಣ್ಯ ಪರಿಜ್ಞಾನ ಬೆಳೆಯಲು ಸಾಧ್ಯವಾಯಿತು. ಚಿಣ್ಣಪ್ಪನವರು ಅರಣ್ಯ ಇಲಾಖೆಗೆ ಸೇರಿದ ಮೇಲೆ ಅವರಿಗೆ ಕಾಡೇ ಶಾಲೆಯಾಯಿತು. ಅವರು ಅರಣ್ಯದ ಒಡನಾಟದಿಂದ ಅಪಾರ ಜ್ಞಾನವನ್ನು ಸಂಪಾದಿಸಿದರು. ಯಾವುದೇ ಒಂದು ಸನ್ನಿವೇಶದಲ್ಲಿ ಕಂಡುಬರುವ ಕುರುಹು, ಸೂಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಇದು ಹೀಗೆಯೇ ನಡೆದಿದೆ ಎಂದು ಖಚಿತವಾಗಿ ಹೇಳಬಲ್ಲ ತರ್ಕ ಪ್ರಾವೀಣ್ಯ, ಕಾಡಿನ ಅರಿವು ಚಿಣ್ಣಪ್ಪನವರಿಗೆ ಸಿದ್ಧಿಸಿತ್ತು. ಈ ದೃಷ್ಟಿಯಿಂದ ಅವರನ್ನು ಅರಣ್ಯದ “ಷರ್ಲಾಕ್ ಹೋಮ್ಸ್” ಎಂದು ಕರೆದರೆ ಅತಿಶಯೋಕ್ತಿಯಾಗಲಾರದು.

ಕ್ಷೇತ್ರ ಕಾರ್ಯದಲ್ಲಿ ಇಂಥ ಪರಿಣಾಮ ಮತ್ತು ಕಾರಣಗಳ ವಿಶ್ಲೇಷಣೆಯನ್ನು ಸಮರ್ಪಕವಾಗಿ ಕೈಗೊಳ್ಳಬಲ್ಲ ಕೌಶಲ ಕೇವಲ ಕೆಲವೇ ಪರಿಣತ ಜೀವಿವಿಜ್ಞಾನಿಗಳಿಗೆ ಮಾತ್ರ ಕೈಗೂಡಿರುತ್ತದೆ. ಜಾರ್ಜ್ ಷಾಲರ್ ಎಂಬ ಪ್ರಖ್ಯಾತ ಜೀವಿವಿಜ್ಞಾನಿಯೊಬ್ಬರು ನನಗೆ ತಿಳಿದಿರುವಂತೆ ಈ ಬಗೆಯ ಪರಿಣತಿ ಉಳ್ಳವರು. ಅವರನ್ನು ಬಿಟ್ಟರೆ ಚಿಣ್ಣಪ್ಪನವರಲ್ಲಿ ಮಾತ್ರವೇ ನಾನು ಕೌಶಲವನ್ನು ಗುರುತಿಸಿದ್ದೇನೆ. ಒಂದು ವೇಳೆ ಚಿಣ್ಣಪ್ಪನವರಿಗೂ ಚಾರ್ಜ್ ಷಾಲರ್ ರವರಿಗೆ ದೊರಕಿದ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳು ದೊರೆತಿದ್ದಲ್ಲಿ ಅವರೂ ಸಹ ಜಾರ್ಜ್ ಷಾಲರ್ ರವರಂತಹ ಖ್ಯಾತ ಜೀವವಿಜ್ಞಾನಿ ಆಗಿರುತ್ತಿದ್ದರೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ನಾನು ಅರಣ್ಯ ಇಲಾಖೆಗೆ ಹೊರಗಿನವನಾದರೂ ನನಗೂ ಇಲಾಖೆಗೂ ಮೂವತ್ತು ವರ್ಷಗಳಿಂದ ಅವಿರತ ಸಂಬಂಧವಿದೆ. ಇಲಾಖೆಗೆ ಸೇರಿದವರ ಸರ್ವೀಸ್ ಹೆಚ್ಚಿದಷ್ಟೂ ಅವರ ಅರಣ್ಯ ವಿಷಯಕ ವೈಜ್ಞಾನಿಕ ಪರಿಜ್ಞಾನ ಅಷ್ಟಷ್ಟಕ್ಕೇ ಸೀಮಿತಗೊಳ್ಳುತ್ತಾ ಹೋಗುತ್ತದೆ. ಅರಣ್ಯಶಾಸ್ತ್ರದ ಬಗೆಗೆ ಅನೇಕರು ಪರಿಣತಿ ಪಡೆದಿದ್ದರೂ ವನ್ಯಪ್ರಾಣಿಗಳ ಬಗೆಗಿನ ಅವರ ತಿಳುವಳಿಕೆ ಮಾತ್ರ “ಅವರು ಹೇಳಿದ್ದು, ಇವರು ಹೇಳಿದ್ದು” ಎಂಬಷ್ಟು ಬಿಟ್ಟರೆ ಹೆಚ್ಚಿನ ಅಧ್ಯಯನಕ್ಕಾಗಲಿ, ಕ್ಷೇತ್ರಕಾರ್ಯಕ್ಕಾಗಲಿ ವಿಸ್ತಾರಗೊಂಡಿಲ್ಲ ಎಂದೇ ನನ್ನ ಭಾವನೆ. ಆದರೆ ಚಿಣ್ಣಪ್ಪನವರು ಹೆಚ್ಚು ಓದಿದವರಲ್ಲದೆ ಇದ್ದರೂ, ಇಂಗ್ಲಿಷಿನಲ್ಲಿ ಹೆಚ್ಚಿನ ಪ್ರಭುತ್ವವಿಲ್ಲದವರಾದರೂ, ವನ್ಯಜೀವಿಗೆ ಸಂಬಂಧಪಟ್ಟ ಗ್ರಂಥಗಳನ್ನೆಲ್ಲ ಯಾರಿಂದಲಾದರೂ ಸಂಪಾದಿಸಿ ಓದಿ ಕಷ್ಟಪಟ್ಟಾದರೂ ವಿಷಯವನ್ನು ಗ್ರಹಿಸುವ ಜ್ಞಾನಾಸಕ್ತಿ ಅವರಲ್ಲಿ ಇದೆ. ಕಾಡಿನೊಳಗೆ ಹೋದಾಗ ವನ್ಯಜೀವಿಗಳ ಬಗೆಗೆ ಅವರು ತಮ್ಮ ಪ್ರತ್ಯಕ್ಷ ಪರಿಶೀಲನೆಯ ಅಂಶಗಳನ್ನು ಹೇಳುತ್ತಿದ್ದರು.

ಒಂದು ದೃಷ್ಟಾಂತ: ವನ್ಯಜೀವಿಗಳ ಬಗ್ಗೆ ಆಸಕ್ತರಾದ ಪರಿಸರ ಮಂತ್ರಾಲಯದ ಹಿರಿಯ ಅಧಿಕಾರಿ ರಂಜಿತ್ ಸಿಂಹ ನಾಗರಹೊಳೆಗೆ ಬಂದು ಹಿರಿಯ ಅಧಿಕಾರಿಗಳೊಡನೆ ಹರಟುತ್ತಾ “ನಿಮ್ಮಲ್ಲಿ ರಾಟೇಲ್ ಇದೆಯೇ” ಎಂದು ಕೇಳಿದರು. ವನ್ಯಜೀವಿ ಜ್ಞಾನಕ್ಕಿಂತ ತೋರಿಕೆಯ ಆತುರ ಹೆಚ್ಚಿದ್ದ ಹಿರಿಯ ಅಧಿಕಾರಿಯೊಬ್ಬರು ತಟ್ಟನೇ “ಹೌದು-ಹೌದು ನಾನು ಕಂಡಿದ್ದೇನೆ” ಎಂದರು. ಕಿರಿಯ ಅಧಿಕಾರಿ ಚಿಣ್ಣಪ್ಪ ಕೂಡಲೇ “ಆ ಪ್ರಾಣಿ ಇಂತಹ ಕಾಡಿನಲ್ಲಿ ಇರುವುದಿಲ್ಲ. ನಾನೆಂದೂ ಕಂಡಿಲ್ಲ” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಹಿರಿಯ ಅಧಿಕಾರಿಯ ಪೊಳ್ಳುತನ ಬಯಲು ಮಾಡಬೇಕೆ?

ನಾವು ಗ್ರಂಥಗಳಲ್ಲಿ ಓದಿದ ಸಂಗತಿಗಳನ್ನು ಹೇಳುತ್ತಿದ್ದೆವು. ತಾವು ಕ್ಷೇತ್ರದಲ್ಲಿ ಕಂಡುಕೊಂಡ ಅಂಶಗಳನ್ನು ಪುಸ್ತಕಗಳ ನಿರೂಪಣೆಯ ಹಿನ್ನೆಲೆಯಲ್ಲಿ ಒರೆಗೆ ಹಚ್ಚುವ ಆಸಕ್ತಿ ಚಿಣ್ಣಪ್ಪನವರಲ್ಲಿ ಅಗಾಧವಾಗಿದೆ. ನಾನಾಗಲಿ, ಮಿತ್ರ ಜೀವನ್ ಆಗಲಿ ತಂದುಕೊಟ್ಟ ಪುಸ್ತಕಗಳನ್ನು ನಿಧಾನವಾಗಿ ಓದಿ, ಅರ್ಥವಾಗದ ವಿಷಯಗಳನ್ನು ನಮ್ಮೊಂದಿಗೆ ಚರ್ಚಿಸಿ ತಿಳಿದುಕೊಳ್ಳುವ ಅವರ ಜ್ಞಾನಾಸಕ್ತಿ ಮೆಚ್ಚುವಂಥದ್ದು. ಹಾಗೆ ನೋಡಿದರೆ ಚಿಣ್ಣಪ್ಪನವರಿಗೆ ಈ ವಿಷಯಗಳ ಅಧ್ಯಯನಕ್ಕೆಲ್ಲಾ ಸಮಯವೇ ಇರುತ್ತಿರಲಿಲ್ಲ. ಅವರ ದಿನದ ಬಹುಭಾಗ ನಾಗರಹೊಳೆಯ ಅವ್ಯವಸ್ಥೆಯನ್ನು ಸರಿಪಡಿಸುವುದರಲ್ಲೇ ಕಳೆದುಹೋಗುತ್ತಿತ್ತು.

ಆಗೆಲ್ಲ ವನ್ಯಜೀವಿ ಸಂರಕ್ಷಣಾ ಕಾಯಿದೆಯೇನೂ ಇರಲಿಲ್ಲ. ಹಳ್ಳಿಗರಾಗಲಿ, ಪಟ್ಟಣಿಗರಾಗಲಿ ಜನರೆಲ್ಲರಿಗೆ ವಿಚಾರ ಒಂದೇ-ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುವುದು. 1960ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನು ಏನು ನೋಡಿದೆನೋ 1967ರಲ್ಲಿ ನಾಗರಹೊಳೆಯಲ್ಲಿ ನೋಡಿದ್ದೂ ಅದೇ. ಕಾಡಿನೊಳಗೆ ಎಲ್ಲಿ ನೋಡಿದರೂ ಜನಸಂಚಾರ, ಬೇಸಾಯ, ಬೇಟೆ-ಯಾವುದು ಉಂಟು, ಯಾವುದು ಇಲ್ಲ ಎಂದು ಕೇಳಬೇಕಾಗಿಯೆ ಇರಲಿಲ್ಲ. ಮೊದಲಿಗೆ ನಾನು ನಾಗರಹೊಳೆಗೆ ಬಂದ ಸಂದರ್ಭಗಳಲ್ಲಿ ಒಮ್ಮೆ ಎರಡು ಮೂರು ಜಿಂಕೆಗಳನ್ನು, ಇನ್ನೊಮ್ಮೆ ಒಂದು ಆನೆಯನ್ನು, ಮತ್ತೆ ಯಾವಾಗಲೋ ಒಂದೆರಡು ಸಲ ಕಾಟಿಗಳನ್ನು ನೋಡಿದ ನೆನಪಿದೆ ಅಷ್ಟೇ. ಬೇಟೆಯ ನಿಯಂತ್ರಣವಾದ ಹಾಗೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚತೊಡಗಿತು. ಕಾಡಿನಲ್ಲಿ ನೆಲಸಿದ್ದವರ ಬೆಳೆಗಳಿಗೆ ಪ್ರಾಣಿಗಳು ಕಾಟ ಕೊಡಲಾರಂಭಿಸಿದಂತೆ ವಿಧಿಯಿಲ್ಲದೆ ಅರಣ್ಯದಿಂದ ಎಷ್ಟೋ ಜನ ತಾವಾಗಿಯೇ ಹೊರಹೋದರು. ಇನ್ನಷ್ಟು ಜನರನ್ನು ಹೊರ ಕಳುಹಿಸಲಾಯಿತು. ಕಾಡು ಕಂಗೊಳಿಸತೊಡಗಿತು; ವನ್ಯಜೀವಿಗಳ ಆದರ್ಶನೆಲೆಯಾಯಿತು. ನಾಗರಹೊಳೆಯನ್ನು ಈ ಸ್ಥಿತಿಗೆ ತರುವಲ್ಲಿ ಚಿಣ್ಣಪ್ಪನವರ ಪಾತ್ರ ಮಹತ್ವದ್ದು.

ಒಂದೆಡೆ ಬೇಸಾಯ, ಕಳ್ಳಭಟ್ಟಿ ಮೊದಲಾದ ದಂಧೆಗಳಿಗೆ ಕಾಡನ್ನೇ ನೆಲೆಯಾಗಿ ಮಾಡಿಕೊಂಡ ಜನಸಮೂಹ, “ಕಾಡುಮಾಂಸ” ತಿನ್ನುವುದನ್ನು ಒಂದು ಶೋಕಿಯಾಗಿ ಮಾಡಿಕೊಂಡ ಹಳ್ಳಿಗರು, ಜಮೀನುದಾರರು ಮೊದಲಾದವರು; ಮತ್ತೊಂದೆಡೆ ವನ್ಯಜೀವಿಗಳ ರಕ್ಷಣೆಯಲ್ಲಿ ಯಾವುದೇ ಆಸಕ್ತಿ ಇಲ್ಲದೆ ಬೇಟೆಯಾಡುವುದನ್ನೇ ಒಂದು ಉಪವೃತ್ತಿಯಾಗಿ ಮಾಡಿಕೊಂಡ ಇಲಾಖೆಯದೇ ಸಿಬ್ಬಂದಿ-ಇವರೆಲ್ಲರ ವಿರುದ್ಧ ಚಿಣ್ಣಪ್ಪನವರು “ಒನ್ ಮ್ಯಾನ್ ಆರ್ಮಿ” ಆಗಿದ್ದರು.

ಹಾಗೆ ನೋಡಿದರೆ ನಾಗರಹೊಳೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಜನರ ಒತ್ತುವರಿ, ಅತಿಕ್ರಮ ಪ್ರವೇಶ ಮೊದಲಾದವುಗಳನ್ನು ತಡೆಯುವುದರಲ್ಲಿ ಚಿಣ್ಣಪ್ಪನವರದ್ದು ಒಬ್ಬರದೇ ಕೈವಾಡ ಎಂದೇನೂ ಇಲ್ಲ. ಆಗ ಅರಣ್ಯಾಧಿಕಾರಿಗಳಾಗಿದ್ದ ಎ.ಸಿ.ಲಕ್ಷ್ಮಣ, ಅಪ್ಪಣ್ಣ, ವೆಂಕಟೇಶಯ್ಯ ಮೊದಲಾದವರು ಸತತ ಪ್ರಯತ್ನಗಳಿಂದ ಒತ್ತುವರಿ ತೆರವು ಮಾಡಿಸಿದರು. ಚಿಣ್ಣಪ್ಪ ಮುಖ್ಯವಾಗಿ ಅಕ್ರಮಬೇಟೆಯನ್ನು ತಡೆಯುವ ಕೆಲಸ ಮಾಡಿದರು. ಅರಣ್ಯ ಇಲಾಖೆಯ ಕೆಲಸಕಾರ್ಯಗಳ ಬಗೆಗೂ ನಾನು, ಚಿಣ್ಣಪ್ಪ ಆಗಾಗ ಚರ್ಚಿಸುತ್ತಿದ್ದೆವು. ಅರಣ್ಯ ಉತ್ಪನ್ನಗಳ ಸಂಗ್ರಹವನ್ನು ತಡೆಯುವ ಬಗ್ಗೆ, ಪ್ರವಾಸಿಗರ ವೀಕ್ಷಣೆಗಾಗಿ ಕಾಡನ್ನು ತೆರವು ಮಾಡುವುದರಿಂದ ಕೆಲವು ಬಗೆಯ ಸಸ್ಯಗಳ ಬೆಳವಣಿಗೆಗೆ ಹಾನಿಯಾಗುವ ಬಗೆ-ಹೀಗೆ ಅನೇಕ ವಿಷಯಗಳ ಬಗ್ಗೆ ನಾನೂ ಚಿಣ್ಣಪ್ಪನವರೂ ಮಾತ್ರವಲ್ಲದೆ ಡಿ.ಎಫ್.ಓ ಆಗಿದ್ದ ಎ.ಸಿ.ಲಕ್ಷ್ಮಣ, ಎಂ.ಹೆಚ್.ಷೇಕ್ ಮತ್ತು ಸಿ.ಶ್ರೀನಿವಾಸನ್ ಮೊದಲಾದವರೊಡನೆಯೂ ಚರ್ಚಿಸುತ್ತಿದ್ದೆವು.

ಹೀಗೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದ್ದ ಪ್ರತ್ಯಕ್ಷ ಚರ್ಚೆಯಿಂದಾಗಿ ಅಭಯಾರಣ್ಯವನ್ನು ಕಾಪಾಡಿಕೊಳ್ಳಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗಳ್ಳುವುದೂ ಸಾಧ್ಯವಾಯಿತು. ಅರಣ್ಯ ಇಲಾಖೆಯ ಕಾರ್ಯನಿರ್ವಹಣೆಯ ವಿವಿಧ ಅಂಶಗಳ ಬಗೆಗಿನ ನಮ್ಮ ಆಳವಾದ ಚರ್ಚೆ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರುತ್ತಿದ್ದುದು ಮಾತ್ರವಲ್ಲ, ಚರ್ಚೆಯ ಫಲವಾಗಿ ಮೂಡಿದ ಅಭಿಪ್ರಾಯವನ್ನು ಕಾರ್ಯರೂಪಕ್ಕೆ ತರುವುದಕ್ಕೂ ನಾವು ಪ್ರಯತ್ನಿಸುತ್ತಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರೀ ಅಧಿಕಾರಿ ವರ್ತುಲದ ನಡುವೆ ವೈಜ್ಞಾನಿಕ ಸಂಶೋಧನೆಯ ಸಕಾರಾತ್ಮಕ ಸಲಹೆಗಳನ್ನು ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳುವುದೆಂದರೆ ಅಸಾಧ್ಯವೇ ಎನ್ನುವಂತಾಗಿದೆ. ಆದರೆ ನಾನೂ ಚಿಣ್ಣಪ್ಪನವರೂ ಆಗಿಂದಾಗ್ಗೆ ಆಗಿನ ಚೀಫ್ ವೈಲ್ಡ್ ಲೈಫ್ ವಾರ್ಡನ್ ಶ್ರೀಯುತ ಜಗನ್ನಾಥಶೆಟ್ಟಿ, ತಾರಾನಾಥ ಆಳ್ವರಂಥ ಸಮರ್ಥರೊಡನೆ ನಡೆಸಿದ ಚರ್ಚೆಗಳು ತುಂಬಾ ಉಪಯುಕ್ತವಾಗಿದ್ದುದು ಮಾತ್ರವಲ್ಲ, ಅರಣ್ಯ ನಿರ್ವಹಣೆಯಲ್ಲಿ ಕಾರ್ಯರೂಪಕ್ಕೆ ಬರಲೂ ತಡವಾಗುತ್ತಿರಲಿಲ್ಲ. ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ತಡೆಗಟ್ಟುವುದು, ಮರಮುಟ್ಟುಗಳ ಸಂಗ್ರಹಕ್ಕೆ ತಡೆ ಮೊದಲಾದವುಗಳನ್ನು ಜಾರಿಗೆ ತಂದಿದ್ದಲ್ಲದೆ ಬೆಂಕಿಯ ಗಡಿ ರೇಖೆಯ ರಚನೆ, ಪ್ರವಾಸಿಗರ ಅನುಕೂಲಕ್ಕಾಗಿ ವೀಕ್ಷಣಾ ತೆರವುಗಳನ್ನು (ವ್ಯೂ ಲೈನ್) ರಚಿಸುವುದು ಮೊದಲಾದವುಗಳ ನಿರ್ವಹಣಾ ವಿಷಯದಲ್ಲಿ ತತ್ ಕ್ಷಣಕ್ಕೆ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವುದೂ ಸಾಧ್ಯವಾಯಿತು.

ನಾಗರಹೊಳೆಯಲ್ಲಿ ಸೀಳುದಾರಿ ಗಣತಿಯಿಂದ (ಲೈನ್ ಟ್ರಾನ್ಸೆಕ್ಟ್) ಹಿಡಿದು ರೇಡಿಯೋ ಕಾಲರಿಂಗ್ ವರೆಗೆ ನನ್ನ ಎಲ್ಲ ವೈಜ್ಞಾನಿಕ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ಚಿಣ್ಣಪ್ಪನವರು ನನ್ನ ಬೆನ್ನಿಗೇ ಇದ್ದು ನೆರವಾಗಿದ್ದಾರೆ. ಈ ವೈಜ್ಞಾನಿಕ ಅಧ್ಯಯನಕ್ಕೆ ಅತ್ಯವಶ್ಯಕವಾದ ಕ್ಷೇತ್ರಕಾರ್ಯದ ಮುಂಚೂಣಿಯಲ್ಲಿದ್ದು ಸಹಕರಿಸಿದ್ದಾರೆ. ನನ್ನ ವೈಜ್ಞಾನಿಕ ಅಧ್ಯಯನದ ಪ್ರಾರಂಭದಿಂದಲೂ ಚಿಣ್ಣಪ್ಪನವರು ಅದರ ಒಂದು ಭಾಗವಾಗಿ ನಿಂತರು. ಮೊದಲು ನಾನು ಫಾರ್ಮಿಂಗ್ ಮಾಡುತ್ತಿದ್ದವನು ನನ್ನ ಜೀವನ ಮಾರ್ಗವನ್ನು ಬದಲಿಸಿ ಸಮಗ್ರವಾಗಿ ವನ್ಯಜೀವಿ ಅಧ್ಯಯನಕ್ಕೆ ನನ್ನನ್ನು ತೊಡಗಿಸಿಕೊಳ್ಳಬೇಕೆಂದು ಯೋಚಿಸಿಕೊಂಡೆ. ಫ್ಲೋರಿಡಾ ವಿಶ್ವವಿದ್ಯಾನಿಲಯದಿಂದ ಶಿಷ್ಯವೃತ್ತಿಗೆ ಆಹ್ವಾನ ಬಂದಾಗ ನನ್ನ ಉದ್ದೇಶ, ನಿರ್ಧಾರಗಳನ್ನು ಮೊದಲಿಗೆ ಚಿಣ್ಣಪ್ಪನವರೊಂದಿಗೇ ನಾನು ಚರ್ಚಿಸಿದ್ದು.

ಮುಂದಿನ ನನ್ನ ಅಧ್ಯಯನಕ್ಕೆ ನಾನು ನಾಗರಹೊಳೆಯನ್ನೇ ಆರಿಸಿಕೊಳ್ಳಲು ಹಲವಾರು ಕಾರಣಗಳಿವೆ. ಇಲ್ಲಿ ಹುಲಿ, ಚಿರತೆ, ಕೆನ್ನಾಯಿಗಳೆಂಬ ಮೂರು ಬೇಟೆಗಾರ ಪ್ರಾಣಿಗಳೂ ಜಿಂಕೆ, ಕಾಟಿ ಮೊದಲಾದ ಒಂಭತ್ತು ಬಗೆಯ ಬೇಟೆಗೆ ಆಹಾರವಾದ ಪ್ರಾಣಿಗಳ ಸಾಂದ್ರತೆಯೂ ಇದೆ. ಈ ಬಗೆಯ ಪ್ರಾಣಿಗಳ ಸಾಂದ್ರತೆ ನಾಗರಹೊಳೆಯೇ ಅಲ್ಲದೆ ಕಾನ್ಹಾ, ಖಾಜಿರಂಗ ಮೊದಲಾದ ಇನ್ನೂ ಹಲವು ಕಡೆಗಳಲ್ಲಿ ಕಾಣಸಿಗಬಹುದು. ಆದರೆ ನಾಗರಹೊಳೆಯೇ ನನ್ನ ಆಸಕ್ತಿಯ ಕೇಂದ್ರವಾಗಲು ಕಾರಣ ನಾನು ಈಗಾಗಲೇ ಹತ್ತು ಹನ್ನೆರಡು ವರ್ಷಗಳಿಂದ ಈ ಪ್ರದೇಶದ ಪರಿಚಯವನ್ನು ಬೆಳೆಸಿಕೊಂಡಿದ್ದೆ. ಎರಡನೆಯದಾಗಿ ನನ್ನ ಅಧ್ಯಯನ ವಿಷಯಕ್ಕೆ ಎಂದರೆ ಬೇಟೆಗಾರ ಪ್ರಾಣಿ ಮತ್ತು ಬೇಟೆಗೆ ಆಹಾರವಾದ ಪ್ರಾಣಿಗಳ ಸಂಬಂಧವನ್ನು ಕುರಿತಂತೆ ನಾಗರಹೊಳೆ ಅತ್ಯಂತ ಆದರ್ಶವೆನ್ನಬಹುದಾದ ನೆಲೆಯಾಗಿತ್ತು. ನಾನು ಆಗ ಮೈಸೂರಿನಲ್ಲಿ ವಾಸವಾಗಿದ್ದುದರಿಂದ ನಾಗರಹೊಳೆಗೆ ಹೋಗಿಬರಲು ಸುಲಭಸಾಧ್ಯವಾಗಿತ್ತು. ಪ್ರಾಣಿಗಳ ಸಾಂದ್ರತೆಯೂ ಸಾಕಷ್ಟು ಹೆಚ್ಚಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಒಣ ಎಲೆ ಉದುರುವ ಕಾಡು (ಡ್ರೈ ಡೆಸಿಡಿಯಸ್) ತೇವಭರಿತ ಎಲೆಯುದುರುವ (ಮಾಯಿಸ್ಟ್ ಡೆಸಿಡಿಯಸ್) ಮತ್ತು ತೇಗದ ನಡುತೋಪು ಅರಣ್ಯ ಮೊದಲಾದ ಕಡೆಗಳಲ್ಲಿ ಪ್ರಾಣಿಗಳ ಆವಾಸನೆಲೆ ಹೇಗಿರುತ್ತದೆ ಎಂಬುದನ್ನು ಹೋಲಿಸಿ ನೋಡುವುದಕ್ಕೂ ನಾಗರಹೊಳೆ ಸೂಕ್ತರಂಗವಾಗಿತ್ತು. ಅಲ್ಲದೆ ಈ ಎಲ್ಲಾ ಕಡೆಗಳಲ್ಲೂ ರಕ್ಷಣಾಕಾರ್ಯ ನಿರ್ವಹಣೆ ಒಂದೇ ಬಗೆಯಾಗಿರುವುದು ಮುಖ್ಯ. ಏಕೆಂದರೆ ಪ್ರಾಣಿಗಳ ಸಂಖ್ಯೆ ಹೆಚ್ಚು ಕಡಿಮೆ ಆಗುವುದಕ್ಕೆ ನೈಸರ್ಗಿಕ ಕಾರಣಗಳಿವೆಯೋ, ಅಥವಾ ಇಲಾಖೆಯ ರಕ್ಷಣಾ ಕಾರ್ಯ ಸಮರ್ಪಕವಾಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುವುದು ಕಷ್ಟ. ನಾಗರಹೊಳೆಯಲ್ಲಿ ಚಿಣ್ಣಪ್ಪನಂಥವರ ಸಮರ್ಥ ರಕ್ಷಣಾಕಾರ್ಯದಿಂದಾಗಿ ನನಗೆ ವಿಭಿನ್ನ ಪರಿಸರಗಳಿರುವ ಪ್ರದೇಶದಲ್ಲಿ ಪ್ರಾಣಿಗಳನ್ನು ಅಭ್ಯಸಿಸುವುದಕ್ಕೆ ನಾಗರಹೊಳೆಯೇ ಅತ್ಯಂತ ಸೂಕ್ತವಾದ ಕ್ಷೇತ್ರವಾಗಿತ್ತು.

ನಾಗರಹೊಳೆಯೇ ಅಲ್ಲದೆ ಬೇರೆ ಎಲ್ಲಿ ನನ್ನ ಸಂಶೋಧನೆಯನ್ನು ಕೈಗೊಂಡಿದ್ದರೂ ಚಿಣ್ಣಪ್ಪನವರು ಅದಕ್ಕೆ ಖಂಡಿತವಾಗಿ ನೆರವಾಗುತ್ತಿದ್ದರೆನ್ನುವುದರಲ್ಲಿ ಸಂಶಯವಿಲ್ಲ. ವನ್ಯಜೀವಿಗಳ ಬಗೆಗೆ ಜಾರ್ಜ್ ಷಾಲರ್ ನಡೆಸುವಂತಹ ವೈಜ್ಞಾನಿಕ ಸಂಶೋಧನೆಗಳನ್ನು ಭಾರತೀಯರಾದ ನಮ್ಮಂಥವರು ಏಕೆ ಕೈಗೊಳ್ಳಬಾರದು, ನಮ್ಮ ನಾಡಿನ ಅರಣ್ಯಗಳಲ್ಲಿ ಇಂಥದೊಂದು ಸಂಶೋಧನೆ ನಡೆಸಲು ಖಂಡಿತ ಸಾಧ್ಯವಿದೆ ಎಂದು ನಾವು ಮೊದಲಿನಿಂದಲೂ ಚರ್ಚಿಸುತ್ತಲೇ ಇದ್ದೆವು. ಇಲಾಖೆಯವರು ನಡೆಸುತ್ತಿದ್ದ ಪ್ರಾಣಿ ಗಣತಿಯಂಥ ಕೆಲಸಗಳು ಅವೈಜ್ಞಾನಿಕವೆಂದು ಹಿಂದಿನಿಂದಲೂ ಹೇಳುತ್ತಿದ್ದ ಬೆರಳೆಣಿಕೆಯಷ್ಟು ಮಂದಿಯಲ್ಲಿ ಚಿಣ್ಣಪ್ಪನವರು ಒಬ್ಬರು. ಕಳೆದ 20 ವರ್ಷಗಳಲ್ಲಿ ಮೂಡುಮಲೈ ಅಭಯಾರಣ್ಯದಲ್ಲಿ ಒಂದೆಡೆ ವೈಜ್ಞಾನಿಕ ಸಂಶೋಧನೆಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಮತ್ತೊಂದೆಡೆ ಅರಣ್ಯಹನನವೂ ಅವ್ಯಾಹತವಾಗಿ ನಡೆಯುತ್ತಲೇ ಇದೆ. ವೈಜ್ಞಾನಿಕ ಸಂಶೋಧನೆಗೂ ಅರಣ್ಯ ಇಲಾಖೆಯ ಕಾರ್ಯನಿರ್ವಹಣೆಗೂ ಸಾಮರಸ್ಯವಿಲ್ಲದ ಕಾರಣ ಹೀಗಾಗಿದೆ. ಆದರೆ ಅದೃಷ್ಟವಶಾತ್ ನಾಗರಹೊಳೆಯಲ್ಲಿ ಹೀಗಾಗದೆ, ನನ್ನ ಸಂಶೋಧನೆಗಳಿಗೂ ಚಿಣ್ಣಪ್ಪನಂಥ ಅಧಿಕಾರಿಗೂ ಇದ್ದ ಹೊಂದಾಣಿಕೆಯಿಂದಾಗಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು ಸಾಧ್ಯವಾಯಿತೆಂದು ಭಾವಿಸುತ್ತೇನೆ.

ಕ್ಷೇತ್ರಕಾರ್ಯ ಕೌಶಲದ ದೃಷ್ಟಿಯಿಂದ ಚಿಣ್ಣಪ್ಪನವರನ್ನು ನನ್ನ ಗುರುಗಳೆಂದೇ ಭಾವಿಸುತ್ತೇನೆ. ಅಷ್ಟೇ ಅಲ್ಲ ಒಬ್ಬ ಮನುಷ್ಯ ನಿಯತ್ತಿನಿಂದ ಹೇಗೆ ಬದುಕಬೇಕು ಎಂಬ ತತ್ವದ ಆಧಾರದಿಂದಲೂ ಚಿಣ್ಣಪ್ಪನವರನ್ನು ನಾನು ಆದರ್ಶ ವ್ಯಕ್ತಿಯೆಂದು ತಿಳಿಯುತ್ತೇನೆ.

ಚಿಣ್ಣಪ್ಪನವರು ಅರಣ್ಯ ಇಲಾಖೆಗೆ ಸೇರಿದ ಮೇಲೆ ಅವರಿಗೆ ಕಾಡೇ ಶಾಲೆಯಾಯಿತು. ಅವರು ಅರಣ್ಯದ ಒಡನಾಟದಿಂದ ಅಪಾರ ಜ್ಞಾನವನ್ನು ಸಂಪಾದಿಸಿದರು. ಯಾವುದೇ ಒಂದು ಸನ್ನಿವೇಶದಲ್ಲಿ ಕಂಡುಬರುವ ಕುರುಹು, ಸೂಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಇದು ಹೀಗೆಯೇ ನಡೆದಿದೆ ಎಂದು ಖಚಿತವಾಗಿ ಹೇಳಬಲ್ಲ ತರ್ಕ ಪ್ರಾವೀಣ್ಯ, ಕಾಡಿನ ಅರಿವು ಚಿಣ್ಣಪ್ಪನವರಿಗೆ ಸಿದ್ಧಿಸಿತ್ತು. ಈ ದೃಷ್ಟಿಯಿಂದ ಅವರನ್ನು ಅರಣ್ಯದ “ಷರ್ಲಾಕ್ ಹೋಮ್ಸ್” ಎಂದು ಕರೆದರೆ ಅತಿಶಯೋಕ್ತಿಯಾಗಲಾರದು.

ಚಿಣ್ಣಪ್ಪನವರು ಬಹಳ ನಿಷ್ಠುರವಾದಿ. ತಮಗೆ ಸರಿ ಎಂದು ತೋರಿದುದನ್ನು ಇದ್ದದ್ದನ್ನು ಇದ್ದ ಹಾಗೆ ಹೇಳುವರು. ಅವರ ಈ ಗುಣ ಬಹಳಷ್ಟು ಜನರ ಟೀಕೆಗೆ ಕಾರಣವಾಗಿದ್ದು ಸಹಜ. ಇಲಾಖೆಯ ಮೇಲಧಿಕಾರಿಗಳು, ಅವರು ಯಾವ ಇಲಾಖೆಯವರೇ ಆಗಿರಲಿ, ತಮ್ಮ ಕೈಕೆಳಗಿನವರಿಂದ ಅತಿ ವಿನಯ ವಿಧೇಯತೆಗಳನ್ನು ಅಪೇಕ್ಷಿಸುವವರು. ಅವರಿಗೆ ಚಿಣ್ಣಪ್ಪನವರ ಈ ನೇರ ನಡವಳಿಕೆ ಸಹಿಸುತ್ತಿರಲಿಲ್ಲ. ಹೀಗಾಗಿ ಚಿಣ್ಣಪ್ಪನವರು ತಮ್ಮ ಮೇಲಿನವರಿಂದ “ಒರಟ, ಉದ್ಧಟ” ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದರು.

1988ರಲ್ಲಿ ಒಂದು ಕೊಲೆ ಪ್ರಕರಣದಲ್ಲಿ ಚಿಣ್ಣಪ್ಪನವರನ್ನು ಸಿಲುಕಿಸಿ ದಸ್ತಗಿರಿ ಆಗುವಂತೆ ಮಾಡಿ ನಾಗರಹೊಳೆಯನ್ನು ಅವರ ಮೇಲ್ವಿಚಾರಣೆಯಿಂದ ಮುಕ್ತಗೊಳಿಸುವುದರಲ್ಲೇನೋ ಕೆಲವರು ಯಶಸ್ವಿಯಾದರು. ಆದರೆ ಅನಂತರದ ಒಂದೆರಡು ವರ್ಷಗಳಲ್ಲಿ ನಾಗರಹೊಳೆಯ ಅವಸ್ಥೆ ಹೇಳತೀರದಂತಾಯಿತು. ಈ ಅವನತಿ ಯನ್ನು ಸರ್ಕಾರದ ಗಮನಕ್ಕೆ ತಂದು ಚಿಣ್ಣಪ್ಪನವರನ್ನು ಮತ್ತೆ ಅಲ್ಲಿಗೆ ತರಲು ನಾವು ಅನೇಕರು ಒತ್ತಾಯ ಮಾಡಿದೆವು.

ಚಿಣ್ಣಪ್ಪ ಕಟ್ಟು ನಿಟ್ಟಿನ ಶಿಸ್ತನ್ನು ಪಾಲಿಸುವ ಅಧಿಕಾರಿಯಾಗಿದ್ದುದರಿಂದಾಗಿ ಅವರ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಲು ಕಾರಣವಾಯಿತು. ಅವರನ್ನು ಹೇಗಾದರೂ ಮಾಡಿ ನಾಗರಹೊಳೆಯಿಂದ ಎತ್ತಂಗಡಿ ಮಾಡಬೇಕೆಂಬುದೇ ಹಲವರ ಧ್ಯೇಯವಾಗಿತ್ತು. ಸಾಮಾನ್ಯವಾಗಿ ನಾನು ಚಿಣ್ಣಪ್ಪನವರ ಪರ ವಹಿಸುತ್ತೇನೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೀಗಾಗಿ ಚಿಣ್ಣಪ್ಪನ ಕಾಟವನ್ನು ಕಳೆಯಬೇಕಾದರೆ ಅವರೊಡನೆ ನನ್ನನ್ನೂ ನಾಗರಹೊಳೆಗೆ ಕಾಲಿರಿಸದಂತೆ ಮಾಡಬೇಕಾಗುತ್ತದೆ ಎಂದು ಹಲವರು ಉಪಾಯ ಹೂಡಿದರು.

ಹುಲಿಯ ರೇಡಿಯೊ ಕಾಲರಿಂಗ್ ಬಗೆಗೆ ನಡೆದ ವಿವಾದ ಕೇವಲ ಇದೇ ಹಿನ್ನೆಲೆ ಹೊಂದಿತ್ತು. ಹುಲಿಯ ಸಾವು ಅಥವಾ ರೇಡಿಯೋ ಕಾಲರ್ ನ ಪ್ರಯೋಜನ ಇಲ್ಲವೇ ವೈಜ್ಞಾನಿಕ ಸಂಶೋಧನೆಯ ಅಗತ್ಯತೆ ಇದೆಲ್ಲಕಿಂತ “ಉಲ್ಲಾಸ್ ಕಾರಂತ್ ನಾಗರಹೊಳೆಯಲ್ಲಿ ಸಂಶೋಧನೆ ನಡೆಸಬಾರದು. ಅವರ ಬೆಂಬಲಕ್ಕಿರುವ ಚಿಣ್ಣಪ್ಪ ಅಲ್ಲಿರಬಾರದು” ಎಂಬುದೇ ಅನೇಕರ `ಜೀವನದ ಗುರಿ’ಯಾಗಿರುವಂತೆ ಕಂಡಿತು. ಅದರ ಫಲವಾಗಿ ಚಿಣ್ಣಪ್ಪನವರನ್ನು ನಾಗರಹೊಳೆಯಿಂದ ಎತ್ತಂಗಡಿ ಮಾಡಿ ಬಳ್ಳಾರಿ ಜಿಲ್ಲೆಯ ಯಾವುದೋ ಊರಿಗೆ ವರ್ಗಾಯಿಸಲಾಯಿತು. ನನ್ನ ಸಂಶೋಧನಾ ಚಟುವಟಿಕೆಗಳನ್ನು ತಡೆಯಲಾಯಿತು. ನಾನು ನ್ಯಾಯಾಲಯದ ಮೊರೆಹೊಕ್ಕು ಮರಳಿ ನನ್ನ ಸಂಶೋಧನಾ ಕಾರ್ಯವನ್ನು ಆರಂಭಿಸಿದೆ. ಸರ್ಕಾರ ಬದಲಾಗುತ್ತಿದ್ದಂತೆಯೇ ಚಿಣ್ಣಪ್ಪ ಮರಳಿ ನಾಗರಹೊಳೆಗೇ ಬಂದರು.

ಮುಂದೆ 1992ರಲ್ಲಿ ಚಿಪ್ಪನ ಕೊಲೆ ಪ್ರಕರಣದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಯಿತು. ಚಿಣ್ಣಪ್ಪನವರನ್ನು ಮೊದಲಿನ ಕೊಲೆ ಪ್ರಕರಣದಲ್ಲಿ ಸಿಲುಕಿಸಿದಾಗಲೂ, ರೇಡಿಯೋ ಕಾಲರಿಂಗ್ ವಿವಾದದಲ್ಲಿ ಅವರನ್ನು ಬಲಿಪಶು ಮಾಡಲು ಯತ್ನಿಸಿದಾಗಲೂ, ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಯಲ್ಲಿದ್ದ ಅನೇಕ ಸದಸ್ಯರು ಚಿಣ್ಣಪ್ಪನವರನ್ನು ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡುವ ವಿಷಯದಲ್ಲಿ ಬೆಂಬಲಕ್ಕೆ ನಿಂತು ಸಹಕರಿಸಿದರು. ಚಿಪ್ಪನ ಕೊಲೆ ಪ್ರಕರಣದನಂತರ ನಡೆದ ದೊಂಬಿಯಲ್ಲಿ ಚಿಣ್ಣಪ್ಪನವರ ರಕ್ಷಣೆ ಮಾತ್ರವಲ್ಲದೆ, ಉದ್ರಿಕ್ತ ಜನರ ಆಕ್ರೋಶಕ್ಕೆ ತುತ್ತಾಗಿ ಬೆಂದುಹೋದ ಕಾಡಿನ ರಕ್ಷಣೆಯೂ ನಮಗೆ ಮಹತ್ವದ್ದಾಗಿತ್ತು. ಇಡೀ ಸಂದರ್ಭವನ್ನು ಪತ್ರಿಕಾ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚಾರಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ನಾಗರಹೊಳೆಯ ದಹನಕಾಂಡದ ವಿರುದ್ಧ ಸಾರ್ವಜನಿಕರ ಬೆಂಬಲ ಪಡೆಯುವಲ್ಲಿ ನಮ್ಮ ಗೆಳೆಯರ ಬಳಗ ಯಶಸ್ವಿಯಾಯಿತು. ಅಲ್ಲದೆ ರಾಜಕೀಯ ವಲಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲೂ ಒತ್ತಡ ತಂದು ಇಂಥ ಅರಾಜಕ ಪರಿಸ್ಥಿತಿ ಮತ್ತೆ ಬಾರದಂತೆ ನಿಗಾ ವಹಿಸಬೇಕೆಂದು ಒತ್ತಾಯಮಾಡಿದೆವು. ಎರಡೂ ಸರ್ಕಾರಗಳೂ ಕೂಡಲೇ ಕಾರ್ಯಪ್ರವೃತ್ತವಾಗಿ ಎಸ್.ಪಿ., ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಸಿ.ಓ.ಡಿ. ತನಿಖೆಗೆ ಆಜ್ಞಾಪಿಸುವವರೆಗೂ ಕ್ರಮ ಕೈಗೊಳ್ಳುವಂತಾಯಿತು. ಇದಲ್ಲದೆ ವನ್ಯಜೀವಿ ಸಂರಕ್ಷಣಾ ಸಂಘಟನೆಗಳ ವಲಯದಲ್ಲೂ ನಮ್ಮ ಪ್ರಭಾವವನ್ನು ಉಪಯೋಗಿಸಿ ನಾಗರಹೊಳೆಯ ಉಳಿವಿನ ವಿಷಯದತ್ತ ಎಲ್ಲರ ಲಕ್ಷ್ಯ ಹರಿಯುವಂತೆ ಮಾಡುವಲ್ಲಿಯೂ ಯಶಸ್ವಿಯಾದೆವು.

ಈ ಘಟನೆ ನಡೆಯುವ ಮೊದಲೇ ಇಲಾಖೆಯಲ್ಲಿ ಚಿಣ್ಣಪ್ಪನವರ ಕಾರ್ಯನಿರ್ವಹಣೆ, ಕ್ಷೇತ್ರಕಾರ್ಯ ಪರಿಣತಿಗಳ ಉಪಯೋಗವನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳಲು ಅನುವಾಗುವಂತೆ `ರೀಸರ್ಚ್ ರೇಂಜರ್’ ಎಂಬ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ಚಿಣ್ಣಪ್ಪನವರನ್ನು ನೇಮಿಸಬೇಕೆಂದೂ, ಅವರು ತಮ್ಮ ಪರಿಣತಿಯ ನೆರವಿನಿಂದ ಇತರ ಅಧಿಕಾರಿಗಳಿಗೆ ತರಬೇತಿ ಕೊಡಬಹುದೆಂದೂ ನಾವು ಯೋಚಿಸಿಕೊಂಡಿದ್ದೆವು. ಅಷ್ಟರಲ್ಲಿ ಉಂಟಾದ ಗಲಭೆಯಿಂದಾಗಿ ನಮ್ಮ ಯೋಜನೆಯ ದಿಕ್ಕೇ ಬದಲಾಯಿತು. ಇನ್ನು ಚಿಣ್ಣಪ್ಪನವರು ನಾಗರಹೊಳೆಯಿಂದ ವರ್ಗವಾಗಿ ಬೇರೆ ವಲಯದಲ್ಲಿ ದುಡಿಯಲು ಸಾಧ್ಯವೇ ಎಂದು ಚರ್ಚಿಸುವಾಗ ಚಿಣ್ಣಪ್ಪನವರು “ನನ್ನ ಜೀವಮಾನದ ಬಹುಭಾಗ ಇಲ್ಲೇ ಕಳೆದಿದ್ದೇನೆ. ಇನ್ನು ಹೊರಗೆ ಹೋಗಿ ದುಡಿದು ನಾನು ಸಾಧಿಸುವುದೇನೂ ಇಲ್ಲ” ಎಂದುಬಿಟ್ಟರು. ಇನ್ನು ಸದ್ಯದ ಸ್ಥಿತಿಯಲ್ಲಿ ಚಿಣ್ಣಪ್ಪನವರು ಸ್ವಯಂ ನಿವೃತ್ತಿ ಪಡೆಯುವುದೇ ಮೇಲೆಂದೂ, ಶೈಕ್ಷಣಿಕ ಕಾರ್ಯಕ್ರಮ, ಜನಜಾಗೃತಿ ಮೊದಲಾದವುಗಳ ಮೂಲಕ ವನ್ಯಜೀವಿ ಸಂರಕ್ಷಣೆಗಾಗಿ ಹೊರಗಿನಿಂದ ದುಡಿಯುವದೇ ಮೇಲೆಂದೂ ತೀರ್ಮಾನಿಸಬೇಕಾಯಿತು.

(ಟಿ.ಎಸ್. ಗೋಪಾಲ್)

ಈಗ ಅವರ ನೇತೃತ್ವದಲ್ಲಿ ನಡೆಯುತ್ತಿರುವ `ನಾವಿಕೋಯೆಡ್’ ಮತ್ತು `ವೈಲ್ಡ್ ಲೈಫ್ ಫಸ್ಟ್’ ಸಂಘಟನೆಗಳು ಯಶಸ್ಸಿನ ದಾರಿ ಕಂಡಿವೆ. ಚಿಣ್ಣಪ್ಪ ಕೆಲವೊಮ್ಮೆ ದುಡುಕಿ ಮಾತನಾಡಿಬಿಡುವುದುಂಟು. ಅವರ ಮಾತೆಂದರೆ ಹೃದಯದಾಳದಿಂದ ಬರುವಂಥದು. ಹಾಗೆಲ್ಲ ಯಾವಾಗಲೂ `ಹೃದಯಪೂರ್ವಕ’ವಾಗಿಯೇ ಮಾತನಾಡುವ ಅವಶ್ಯಕತೆ ಇರಬೇಕೆಂದಿಲ್ಲ. ಆದರೆ ಚದುರಂಗ ಆಡಿದ ಹಾಗೆ ಒಮ್ಮೆ ಹಿಂದಕ್ಕೆ ಒಮ್ಮೆ ಮುಂದಕ್ಕೆ ಇನ್ನೊಮ್ಮೆ ಅತ್ತಿತ್ತ ಸರಿದು ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಿದರೆ ಒಳ್ಳೆಯದೆಂದು ಯೋಚಿಸಿ ಮಾತನಾಡುವ ಜಾಯಮಾನವೇನೂ ಚಿಣ್ಣಪ್ಪನವರದಲ್ಲ. ಪ್ರಾಮಾಣಿಕವಾಗಿ ತೋಚಿದ್ದನ್ನು ತಟ್ಟನೆ ಹೇಳಿಬಿಡುವರು. ಇದೊಂದು ದೋಷವೆನ್ನುವುದಕ್ಕಿಂತ ದೌರ್ಬಲ್ಯವೆನ್ನುವುದೇ ಸರಿ.

ಚಿಣ್ಣಪ್ಪನವರ ಇನ್ನೊಂದು ದೌರ್ಬಲ್ಯವೆಂದರೆ ಹಲವರನ್ನು ಸುಲಭವಾಗಿ ನಂಬಿಬಿಡುವುದು. ಒಬ್ಬೊಬ್ಬರ ಅವಗುಣಗಳನ್ನು ನಾವು ಸ್ಪಷ್ಟವಾಗಿ ತೋರಿ ಹೇಳಿದರೂ “ನೀವು ಸುಮ್ಮನಿರಿ, ನಿಮಗೆ ಗೊತ್ತಿಲ್ಲ ಅವರು ಒಳ್ಳೆಯವರು” ಎಂದೇ ಸಾಧಿಸಿಕೊಳ್ಳುವರು. ಇನ್ನಾರೋ ಅಪ್ರಾಮಾಣಿಕನೆಂದು ಕಂಡುಬಂದರೂ ವನ್ಯಜೀವಿ ಸಂರಕ್ಷಣೆಯಂತಹ ಮಹತ್ವದ ಕಾರ್ಯಕ್ಕೆ ಆತನಿಂದ ಪ್ರಯೋಜನವಾಗುವುದಾದರೆ ಇರಲೆಂದು ಅಂಥವನನ್ನು ಪ್ರೀತಿವಿಶ್ವಾಸಗಳಿಂದಲೇ ಕಾಣುವರು. ಆದರೆ ತಮ್ಮ ವ್ಯಕ್ತಿತ್ವ, ನಡತೆಗಳಲ್ಲಿ ಮಾತ್ರ ಚಿಣ್ಣಪ್ಪ ಯಾವುದೇ ಕಾಲಕ್ಕೆ ಯಾವುದೇ ತೋರಿಕೆಯ ಮಾರ್ಪಾಡನ್ನು ಸಹ ಮಾಡಿಕೊಳ್ಳದ ನಿಷ್ಠುರ ವ್ಯಕ್ತಿ. ನನ್ನ ತಂದೆ ಶಿವರಾಮ ಕಾರಂತರಿಗಿಂತ ಮಿಗಿಲಾದ ನಿಷ್ಠುರತೆಯನ್ನು ಚಿಣ್ಣಪ್ಪನವರಲ್ಲಿ ನಾನು ಕಂಡಿದ್ದೇನೆ. ಅವರ ಇನ್ನೊಂದು ಗುಣ: ಅವರ ಅಸಾಮಾನ್ಯ ಧೈರ್ಯ. ಕಾಡಾನೆಯೇ ಆಗಲಿ, ಕತ್ತಿ ಹಿಡಿದ ಹಳ್ಳಿಗರ ಗುಂಪೇ ಇರಲಿ, ಪಾನಮತ್ತ ಪಡ್ಡೆ ಹುಡುಗರ ತಂಡವೇ ಇರಲಿ ಇಲ್ಲಾ ಬಂದೂಕುಧಾರಿ ಕಳ್ಳಬೇಟೆಗಾರರೇ ಸಿಗಲಿ ಚಿಣ್ಣಪ್ಪ ಎಂದೂ ಹೆದರಿ ಹಿಮ್ಮೆಟ್ಟಿದವರಲ್ಲ.

ಎಂಥ ಪರಿಸ್ಥಿತಿಯನ್ನೂ ಎದುರಿಸುವ ಅವರ ಧೈರ್ಯ ಕೇವಲ ಹುಂಬು ಧೈರ್ಯ ಅಲ್ಲ; ತನ್ನ ಶಕ್ತಿ, ಸಾಮರ್ಥ್ಯ ಮತ್ತು ಚಾಣಾಕ್ಷತೆಗಳ ಬಗ್ಗೆ ಅವರಿಗಿದ್ದ ವಿಶ್ವಾಸದ ದ್ಯೋತಕವಾಗಿತ್ತು. ಅನೇಕ ಸಲ ಯಾವ ಗಡಿಬಿಡಿ ಹೆದರಿಕೆಗಳಿಲ್ಲದೆ ಅವರು ಇಂತಹ ಕಷ್ಟದ ಸನ್ನಿವೇಶಗಳನ್ನು ಎದುರಿಸಿದ್ದನ್ನು ನಾನೇ ಕಂಡಿದ್ದೇನೆ.

ನಾನು ಕಂಡಿರುವ ಅಸಾಧಾರಣ ವ್ಯಕ್ತಿಗಳಲ್ಲಿ ಚಿಣ್ಣಪ್ಪನವರು ಒಬ್ಬರೆಂಬುದು ನಿಸ್ಸಂಶಯ. ಹಾಗೆಯೇ ನನ್ನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳಲ್ಲೂ ಚಿಣ್ಣಪ್ಪನವರನ್ನು ಮುಖ್ಯವಾಗಿ ಹೆಸರಿಸಬೇಕು. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮ ಸ್ನೇಹ ಬಲು ಆತ್ಮೀಯವಾಗಿದೆ. ನಮ್ಮ ನಮ್ಮಲ್ಲಿ ಕೆಲವು ಸಂದರ್ಭಗಳಿಗೆ ಸೀಮಿತವಾದಂತೆ “ಹಾಗಲ್ಲ ಹೀಗೆ” ಎಂಬ ವಾದ ವಿವಾದಗಳು ನಡೆದಿರಬಹುದು. ಆದರೆ ತೀವ್ರತರವಾದ ಭಿನ್ನಾಭಿಪ್ರಾಯ, ಜಗಳಗಳೇನೂ ಉಂಟಾಗಿಲ್ಲ. ನಮ್ಮಿಬ್ಬರಲ್ಲೂ ಮುಂಗೋಪದಂಥ ಕೆಲವು ದೌರ್ಬಲ್ಯಗಳಿರಬಹುದು, ನಮ್ಮ ನಮ್ಮ ವ್ಯಕ್ತಿತ್ವ, ಜೀವನವಿಧಾನ ವಿಭಿನ್ನವಾಗಿರಬಹುದು. ಆದರೆ ನಾವು ಪರಸ್ಪರ ತೀರಾ ಸರಳವಾಗಿರುವುದೇ ನಮ್ಮ ಮೈತ್ರಿಯ ಯಶಸ್ಸಿಗೆ ಕಾರಣವೆನ್ನಬಹುದು. ನಾನು ಅವರನ್ನು ಮೆಚ್ಚಿಸುವುದಕ್ಕಾಗಲೀ ಅವರು ನನ್ನನ್ನು ಒಪ್ಪಿಸುವುದಕ್ಕಾಗಲೀ ಎಂದೂ ಮಾತುಗಳನ್ನು ಆಡಿದವರಲ್ಲ, ಭಿನ್ನಾಭಿಪ್ರಾಯಗಳನ್ನು ಮುಚ್ಚಿದವರಲ್ಲ.

ಚಿಣ್ಣಪ್ಪನವರನ್ನು ಅಸಾಧಾರಣ ವ್ಯಕ್ತಿಯಂದು ಹೇಳಿದೆ. ಅವರಿಗಿರುವ ಯೋಗ್ಯತೆಯನ್ನು ಪಡೆದವರೆಲ್ಲರಿಗೂ ಅಸಾಧಾರಣ ಮಟ್ಟವನ್ನು ತಲುಪಲು ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಅಂಥ ಜನರೆಲ್ಲರೂ ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ಅಗತ್ಯಗಳ ಒತ್ತಡದಿಂದಾಗಿ ಬಳಲುತ್ತಿರುತ್ತಾರೆ. ಆದರೆ ಚಿಣ್ಣಪ್ಪನವರ ವಿಷಯದಲ್ಲಿ ಒಂದು ಗಮನಾರ್ಹ ಸಂಗತಿಯೆಂದರೆ ಅವರು ಶ್ರೀಮತಿ ರಾಧಾರವರಂಥ ಜೀವನ ಸಂಗಾತಿಯನ್ನು ಪಡೆದಿರುವುದಾಗಿದೆ. ಚಿಣ್ಣಪ್ಪನವರ ಜೀವಮಾನದುದ್ದಕ್ಕೂ ಚಿಣ್ಣಪ್ಪನವರಿಗೆ ತಾವು ಸಾಧಿಸಬಹುದಾದುದನ್ನು ಸಾಧ್ಯವಾಗಿಸಲು ಆಗಿದೆಯೆಂದು ನಾನು ತಿಳಿದಿದ್ದೇನೆ.

(ಡಾ. ಕೆ. ಉಲ್ಲಾಸ ಕಾರಂತ)

ಕಾಡಿನೊಳಗೆಲ್ಲೋ ಮನೆ ಮಾಡಿಕೊಂಡಿದ್ದು, ಅಲ್ಪಸೌಕರ್ಯಗಳಿಗೇ ತೃಪ್ತಿ ಪಟ್ಟುಕೊಂಡು, ಅವಿದ್ಯಾವಂತ ಆದಿವಾಸಿಗಳ ನೆರೆಹೊರೆಯಲ್ಲಿ ಇದ್ದುಕೊಂಡು, ಬೇಟೆಗಾರರೂ ವಿರೋಧಿಗಳೂ ತನ್ನ ಗಂಡನತ್ತ ಸದಾ ಗುರಿಯಿಟ್ಟುಕೊಂಡೇ ಇರುವ ನಿರಂತರ ಆತಂಕಗಳ ನಡುವೆ ಚಿಣ್ಣಪ್ಪನ ಬೆಂಬಲಕ್ಕೆ ನಿಂತ ರಾಧಾರವರ ವ್ಯಕ್ತಿತ್ವ ಅನುಪಮವಾದುದು. ಈ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೊಬ್ಬಳು ಬದುಕಲು ಅನುವಾಗುವಂತೆ ಮದುವೆಯ ಹೊಸತರಲ್ಲೇ ಚಿಣ್ಣಪ್ಪನವರು ರಾಧಾಗೆ ಬಂದೂಕಿನಿಂದ ಗುಂಡು ಹೊಡೆಯಲು `ಶಸ್ತ್ರಾಭ್ಯಾಸ’ ಹೇಳಿಕೊಟ್ಟಿದ್ದರು. ಮನೆಯಲ್ಲಿ ಚಿಣ್ಣಪ್ಪ ಇಲ್ಲದಿದ್ದರೂ ಮೂರು ಗುಂಡು ತುಂಬಿರಿಸಿದ ಕೋವಿಗಳನ್ನು ಗುರಿಗಾರ್ತಿ ರಾಧಾ ಇರಿಸಿಕೊಂಡ ವಿಚಾರ ಸಾರ್ವತ್ರಿಕವಾಗಿ ಗುಸು ಗುಸು ಮಾತಿನಿಂದ ಹಬ್ಬಿ ಯಾವ ಕೇಡಿಗನೂ ಅವರತ್ತ ಬರುವ ಧೈರ್ಯಮಾಡಲಿಲ್ಲ-ಮೂವತ್ತು ವರ್ಷ!

ಐದು ಎಕರೆಗಳಷ್ಟು ಅಲ್ಪವಾದ ತಮ್ಮ ತೋಟಗದ್ದೆಗಳತ್ತ ಕಣ್ಣು ಹಾಯಿಸಲೂ ಬಿಡುವಿಲ್ಲದೆ ಚಿಣ್ಣಪ್ಪ ಕರ್ತವ್ಯನಿರತರಾಗಿದ್ದಾಗ, ಆಸ್ತಿಯನ್ನು ಉಳಿಸಲೂ ಬೆಳೆಸಲೂ ರಾಧಾರವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಯಾವ ಲಂಚ ವಸೂಲಾತಿಗೂ ಕೈ ಹಾಕದ ಅಪರೂಪದ ಅರಣ್ಯಾಧಿಕಾರಿ ಚಿಣ್ಣಪ್ಪ ನಿವೃತ್ತಿಯಲ್ಲಿ ಇಂದು ಆರ್ಥಿಕವಾಗಿ ತೊಂದರೆ ಇಲ್ಲದೆ ಬದುಕುತ್ತಿದ್ದರೆ ಈ ಐದು ಎಕರೆ ತೋಟವನ್ನು 30 ವರ್ಷಕಾಲ ರಾಧಾ ಬೆವರು ಸುರಿಸಿ ಹಸನಾಗಿ ಮಾಡಿದ್ದೇ ಕಾರಣ.

ಚಿಣ್ಣಪ್ಪನವರಲ್ಲಿ ಕಾಣುವ ಎಲ್ಲ ಒಳ್ಳೆಯ ಗುಣಗಳನ್ನು ರಾಧಾರವರಲ್ಲೂ ಕಾಣಬಹುದು. ಜೊತೆಗೆ ಚಿಣ್ಣಪ್ಪನವರ ದುಡುಕುತನವನ್ನು ನಿಯಂತ್ರಿಸಿ ಸಮಾಧಾನ ಸ್ಥಿತಿಯಲ್ಲಿ ಸಾಗುವ ಪೂರಕ ಶಕ್ತಿಯೂ ಅವರಲ್ಲಿದೆ. ರಾಧಾರವರ ದೃಢತೆ, ಸಂಕಲ್ಪಶಕ್ತಿಗಳು ಚಿಣ್ಣಪ್ಪನವರ ವೃತ್ತಿ ಜೀವನಕ್ಕೆ ಶ್ರೀರಕ್ಷೆಯಾಗಿತ್ತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಹಿರಿಯರ ಒಪ್ಪಿಗೆಯಲ್ಲಿ ನಡೆದ ವಿವಾಹವೊಂದರಲ್ಲಿ ಜೊತೆಯಾದ ಈ ಜೋಡಿ ಜೀವನದ ವೈರುಧ್ಯಗಳ ನಡುವೆ ಅಪೂರ್ವವಾದ ಯಶಸ್ಸನ್ನು ಸಾಧಿಸಿದೆಯೆನ್ನುವುದೇ ಒಂದು ಅಚ್ಚರಿಯ ಸಂಗತಿ.

ಯೋಗಿಯ ಶುದ್ಧಶೀಲ, ನಿರ್ಲಿಪ್ತತೆಗಳನ್ನೂ, ಕಮ್ಯುನಿಸ್ಟ್ `ಕಾಮಿಸಾರ್’ ಒಬ್ಬನ ನಿಷ್ಠುರ ಕಾರ್ಯದಕ್ಷತೆಯನ್ನೂ, ಕೀಟಲೆ ಹುಡುಗನ ವಿನೋದ ಪ್ರಜ್ಞೆಯನ್ನೂ, ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ. ಚಿಣ್ಣಪ್ಪ, ನಮ್ಮ ಸುತ್ತಲ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ. ನಾಗರಹೊಳೆಯಲ್ಲಿ ಅವರ ಕಾಲು ಶತಮಾನದ ಕಾರುಬಾರು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳನ್ನೂ ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವನ್ನೂ ನಿರೂಪಕ ಟಿ.ಎಸ್.ಗೋಪಾಲ್ ಅತ್ಯಂತ ಸಮರ್ಥವಾಗಿ ಈ ಪುಸ್ತಕದ ರೂಪದಲ್ಲಿ ಕನ್ನಡಿಗರ ಮುಂದೆ ಇಟ್ಟಿದ್ದಾರೆ. `ಕಾಡಿನೊಳಗೊಂದು ಜೀವ’, ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತ ಕಾರ್ಯಶೀಲರಿಗೆಲ್ಲಾ ಮುಂದಿನ ದಾರಿ ತೋರುವ ದೀವಟಿಗೆಯಾಗಿ ಬೆಳಗುವು ದೆಂದು ನನ್ನ ನಂಬಿಕೆ.