ಮಾಲತಿ ಯಶವಂತ ಚಿತ್ತಾಲ ( 8.2.1934- 15.2.2018)

ಕನ್ನಡ ಮನಸ್ಸನ್ನು ಹಸನುಗೊಳಿಸಿದ ಮಮತೆಯ ಮೇಧಾವಿ ಸಾಹಿತಿ ದಿವಂಗತ ಯಶವಂತ ಚಿತ್ತಾಲರ ಬಾಳ ಸಂಗಾತಿ ಮಾಲತಿ ಯಶವಂತ ಚಿತ್ತಾಲ ಅವರು ಇಂದು ಮುಂಜಾನೆ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹೊರನಾಡಿನಲ್ಲಿದ್ದುಕೊಂಡೇ ಕನ್ನಡದ ಮಹತ್ವದ ಸಾಹಿತಿಯಾಗಿ ಬೆಳೆದು ತಮ್ಮದೇ ಆದ ವಿಚಾರಧಾರೆಯೊಂದನ್ನು ರೂಪಿಸಿದ ಯಶವಂತರ ಪಯಣದ ಸ್ಥೈರ್ಯವಾಗಿದ್ದ ಮಾಲತಿ, ಮುಂಬಯಿಯ ತಮ್ಮ ಮನೆಗೆ ಬಂದ ಎಲ್ಲ ಕನ್ನಡಾಭಿಮಾನಿಗಳನ್ನು, ಸಾಹಿತಿಗಳನ್ನು ಅತ್ಯಂತ ವಾತ್ಯಲ್ಯದಿಂದ ಬರಮಾಡಿಕೊಳ್ಳುತ್ತಿದ್ದರು. ಕಾರವಾರದ ಬಡ? ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿದ್ದ ಯಶವಂತರು ವಿದ್ಯಾರ್ಥಿನಿಯಾಗಿದ್ದ ಮಾಲತಿಯವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮುಂಬಯಿಯ ತಮ್ಮ ಬ್ಯಾಂಡ್ ಸ್ಯ್ಟಾಂಡ್ ಮನೆಯಲ್ಲಿ ಮಗ ಡಾ. ರವೀಂದ್ರ ಚಿತ್ತಾಲರೊಂದಿಗೆ ವಾಸಿಸುತ್ತಿದ್ದ ಮಾಲತಿ ಬಂಧು ಬಳಗದವರಿಂದ “ಅಕ್ಕ” ಎಂದೇ ಕರೆಯಲ್ಪಡುತ್ತಿದ್ದರು. ಚಿತ್ತಾಲರ ಬರವಣಿಗೆಯ ಹುಮ್ಮಸ್ಸನ್ನು ಕುಗ್ಗದಂತೆ ನೋಡಿಕೊಳ್ಳುತ್ತಿದ್ದ ಮಾಲತಿ, ಯಶವಂತರ ದೇಹಾಂತದ ನಂತರ, ಅವರ ಕೃತಿಗಳ ಮರುಮುದ್ರಣದ ಕುರಿತು ಕಾಳಜಿ ವಹಿಸುತ್ತಿದ್ದರು. ಮುಂಬಯಿಯ ಬ್ಯಾಂಡ್ ಸ್ಯ್ಟಾಂಡ್ ವಿಳಾಸವನ್ನು ಕನ್ನಡದ ಸ್ಪಂದನಶೀಲ ಮಮತೆಯ ಕಾರಣವಾಗಿಸಿದ ಈ ಸೌಮ್ಯ ಮಹಿಳೆಯ ನಿರ್ಗಮನ ಚಿತ್ತಾಲರ ಓದುಗರಲ್ಲಿ ಮುಂಬಯಿ ಕನ್ನಡ ಲೋಕದಲ್ಲಿ ಆಳವಾದ ಮೌನವೊಂದನ್ನು ಮೂಡಿಸಿದೆ.

ಜಯಂತ ಕಾಯ್ಕಿಣಿ
15-2-2018
ಗೋಕರ್ಣ


1
0