ಹೆದರಬೇಡಿ ಜೇಡಗಳೇ,
ನಾನೇನು ಮನೆಯನ್ನ
ಚೊಕ್ಕವಾಗಿಡುವವನಲ್ಲ.

*

ಬುದ್ಧನನ್ನ
ಧ್ಯಾನಿಸುವಾಗಲೆಲ್ಲಾ ನಾನು
ಸೊಳ್ಳೆ ಹೊಡೆಯುತ್ತಿರುತ್ತೇನೆ.

*

ಹುಟ್ಟಿದಾಗ ಸ್ನಾನ
ಸತ್ತಾಗಲೂ ಸ್ನಾನ,
ಎಂಥ ಮೂರ್ಖತನ.

*

ವಯಸ್ಸೆಷ್ಟೆಂದು ಕೇಳಿದರೆ
ಹೊಸ ಬಟ್ಟೆ ತೊಟ್ಟ ಹುಡುಗ
ಐದೂ ಬೆರಳನ್ನು ಹೊರಚಾಚಿದ.

*

ಮಲಗಿದ್ದ ಬೆಕ್ಕು ಎದ್ದು
ಆಕಳಿಸಿ ಹೊರನಡೆಯುತ್ತದೆ
ಪ್ರೀತಿಸುವುದಕ್ಕಾಗಿ.

*
ಎಂಥ ಬೇಜಾರಿನ ಜಗತ್ತು,
ಚಂದದ ಹೂಗಳೂ
ಉದುರಿ ಹೋಗುತ್ತವೆ
ನಮ್ಮಂತೆಯೇ.

*

ಕಿವಿಯ ಬಳಿ
ಕುಯ್ಗುಡುವ ಸೊಳ್ಳೆ
ನಾನು ಕಿವುಡ ಅಂದುಕೊಂಡಿರಬಹುದೇ?

*

ಅತ್ತ ಇತ್ತ
ನೋಡುತ್ತಿರುವ ಹಕ್ಕಿಯೇ
ಏನಾದರೂ ಕಳಕೊಂಡೆಯಾ?

*

ಚೆರ್ರಿ ಹೂಗಳು
ಅರಳಿ ನಿಂತಾಗಲೂ
ನೋವು ದುಃಖ ಇದ್ದಿದ್ದೇ
ಈ ಜಗತ್ತಿನಲ್ಲಿ.

*

ಬೆಟ್ಟದಲ್ಲಿ ಹೂ ಕದಿಯುವ
ಕಳ್ಳನ ತಲೆ ಮೇಲೆ
ದೇವರಂತೆ ಹೊಳೆಯುತ್ತಾನೆ
ವಸಂತದ ಚಂದ್ರ.

*

ಮಂಡರುಗಪ್ಪೆ ಮತ್ತು ನಾನು
ಎದುರಾಬದುರಾ ಕೂತು
ಒಬ್ಬರನ್ನೊಬ್ಬರು ದಿಟ್ಟಿಸುತ್ತೇವೆ
ಮೌನವಾಗಿ.

*

ತಾಯಿಯಿಲ್ಲದ ಮಗು
ಎಲ್ಲರಿಗೂ ಗೊತ್ತು,
ಎದುರು ಬಾಗಿಲಲ್ಲಿ
ಒಂಟಿಯಾಗಿ ನಿಂತು
ಬೆರಳು ಚೀಪುತ್ತದೆ
ಕಚ್ಚಿ ತಿನ್ನುವ ಹಸಿವಿನಿಂದ.

*

ಗುಡ್ಡವನ್ನ
ಈಗಷ್ಟೇ ಕಂಡಂತೆ
ಹಕ್ಕಿ ಹಾಡುತ್ತಿದೆ.

*

ಮಂಜು ಕರಗಲೂ
ದುಡ್ಡು ಬೇಕು,
ಪೇಟೆ ಬದುಕು.

*

ಪಾತರಗಿತ್ತಿಯೊಂದಿಗೆ
ನೆರಳಲ್ಲಿ ಕೂತಿದ್ದೇನೆ,
ಹಿಂದಿನ ಜನ್ಮದ ಗೆಳೆತನ.

*

ದಿನಗಳು ಚಿಕ್ಕದಾಗಿವೆ,
ಹುಳ ಹುಪ್ಪಟೆಗಳ
ಬದುಕಿನಂತೆ.

*

ಕೈ ಮೇಲೆ
ಪಾತರಗಿತ್ತಿ ನಿದ್ದೆಹೋಗಿದೆ,
ಋಣಾನುಬಂಧ.

*

ಮಳೆಗಾಲದ ದಿನ-
ಒಂಟಿತನ ಮತ್ತು ಶ್ರದ್ಧೆ
ಭತ್ತ ಬಿತ್ತುವುದರಲ್ಲಿ.

*

ವಸಂತದ ಮಳೆಯಲ್ಲಿ
ಅವಳು ಮೈ ಕುಣಿಸುತ್ತಿದ್ದಾಳೆ…
ಹೊಸ ಹೂವು.

*

ಮಳೆ ನಿಂತಿದೆ-
ಗೂಟದ ಮೇಲೊಂದು
ಭವ್ಯವಾದ ಅಣಬೆ.

ಚಿನ್ಮಯ್ ಹೆಗಡೆ ಉತ್ತರಕನ್ನಡ ಜಿಲ್ಲೆಯ ಕುಮಟಾದವರು.
ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಸ್ಸಾ ಅವರ ಇನ್ನೂ ಕವಿತೆಗಳಿಗಾಗಿ ಇಲ್ಲಿ ಒತ್ತಿ

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)