ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ ತಿಳಿಯುವ ಒರಟಾದ ಭಾಷೆಯನ್ನೆ ಕೇಳಲು ಬಯಸುತ್ತಾರೆ. ಅದಕ್ಕೆ ಆತ ಕೊಡುವ ಕಾರಣ ಅವರುಗಳು ನಾಗರಿಕತೆಯ ಜಗತ್ತಿನಲ್ಲಿಲ್ಲ.
ಚನ್ನಪ್ಪ ಕಟ್ಟಿ ಅನುವಾದಿಸಿದ ಜಾಕ್‌ ಲಂಡನ್‌ ಬರೆದ ʼದ ಸ್ಕಾರ್ಲೆಟ್‌ ಪ್ಲೇಗ್‌ʼ ಕಾದಂಬರಿ ಕುರಿತು ನಾಗರೇಖಾ ಗಾಂವಕರ ಬರೆದ ಲೇಖನ

 

ಸಮಕಾಲೀನ ಸಮಸ್ಯೆಯ ಕನ್ನಡಿಯಂತಿರುವ “ಜ್ಯಾಕ್ ಲಂಡನ್”ನ ಸ್ಕಾರ್ಲೆಟ್ ಪ್ಲೇಗ್

ಇಂದು ಜಗತ್ತು ಹೋರಾಡುತ್ತಿರುವುದು ಕೇವಲ ವೈರಸ್‍ ಗಳೊಂದಿಗೆ ಮಾತ್ರವಲ್ಲ. ನಿಜವಾದ ವೈರಸ್ ಕಂಡುಬರುವುದು ಮನುಷ್ಯನಲ್ಲಿರುವ ಲೋಲುಪತೆ ಮತ್ತು ಲೋಭದಲ್ಲಿ, ಭೂಮಿಯ ಇಂಚಿಂಚನ್ನೂ ಬಿಡದೇ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಆತನ ಹಪಾಹಪಿಯಲ್ಲಿ, ಸಾಮಾಜಿಕ ಜೀವನದಲ್ಲಿ ಮನುಷ್ಯ ಮನುಷ್ಯರ ನಡುವೆಯೇ ಆತ ಸ್ಥಾಪಿಸಿದ ಅಂತರದಲ್ಲಿ, ಅತ್ಯಾಧುನಿಕತೆಯತ್ತ ಮುಖಮಾಡಿ ಬದುಕುತ್ತಿರುವ ಜೀವನ ಶೈಲಿಯಲ್ಲಿ.

ಇವೆಲ್ಲ ಮನುಕುಲವನ್ನು ಘೋರ ವಿಪತ್ತಿನಿಂದ ಸರ್ವನಾಶದ ಕಡೆಗೆ ಕೊಂಡೊಯ್ಯುತ್ತವೆ. ತರಣಿಯ ಹುಳು ತನ್ನ ನೂಲಿಂದ ಮನೆಯ ಮಾಡಿ ತನ್ನ ನೂಲು ತನ್ನನ್ನೆ ಸುತ್ತಿ ಸಾವಂತೆ ಎಂದು ಅಕ್ಕ ಹೇಳಿದಂತೆ, ತಾನೇ ಕಟ್ಟಿದ ಮಹಲಿನಲ್ಲಿ ತಾನೇ ಬಂಧಿಯಾಗಿ, ನರಕ ಸದೃಶ ಬದುಕನ್ನು, ಸಾವನ್ನು ತಾನೆ ಸೃಷ್ಟಿಸಿಕೊಳ್ಳುತ್ತಿದ್ದಾನೆ. ಇಂತಹ ಸಂಗತಿಗಳ ಸುತ್ತ ಕಟ್ಟಿದ ಕಾದಂಬರಿಗಳು ಹಲವು.

ಇದು ನಾವೆಲ್ ಕೋರೋನಾ ವೈರಸ್ ಜಗತ್ತನ್ನು ಪೀಡಿಸುತ್ತಿರುವ ಸಂದರ್ಭದ ಮಾತಲ್ಲ. ಇಂತಹ ಹಲವು ಧಾಳಿಗಳು ಮನುಕುಲವನ್ನು ಕಂಗೆಡಿಸಿವೆ. ಕ್ರಿ.ಶ ಎರಡನೇ ಶತಮಾನ, ನಾಲ್ಕನೇಯ ಶತಮಾನ, ಹೀಗೆ ಎರಡು ಮೂರು ಶತಮಾನಗಳಿಗೆ ಒಂದಾವರ್ತಿ ಮನುಕುಲವನ್ನು ಕಾಡಿವೆ. ಆದರೆ ಇತ್ತೀಚಿನ ಸಂದರ್ಭಗಳಲ್ಲಿ ಮಾತ್ರ ಈ ವೈರಸ್ ದಾಳಿ ತೀರಾ ಗಂಭೀರ ಎನ್ನುವಷ್ಟರ ಮಟ್ಟಿಗೆ ಭಿನ್ನ ಭಿನ್ನ ರೂಪಗಳಲ್ಲಿ ವ್ಯಾಪಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತು ಎದುರಿಸಿದ ದುರ್ದಿನಗಳನ್ನು ಮಾನಸಿಕ ಕ್ಲೇಶಗಳನ್ನು ಬದುಕಿನ ವಿಪ್ಲವಗಳ ಮೇಲೆ ಬೆಳಕು ಚೆಲ್ಲುವಂತಹ ಹತ್ತಾರು ಕೃತಿಗಳು ಸಾಹಿತ್ಯ ಜಗತ್ತಿನಲ್ಲಿ ಮೂಡಿಬಂದಿವೆ.

ಅಂತಹ ಒಂದು ಕೃತಿ ಸುಮಾರು ನೂರು ವರ್ಷಗಳ ಹಿಂದೆ ಅಮೇರಿಕನ್ ಕಾದಂಬರಿಕಾರ ಜಾಕ್ ಲಂಡನ್ ಬರೆದ “ಸ್ಕಾರ್ಲೆಟ್ ಪ್ಲೇಗ್”. ಕೋವಿಡ್ 19 ಎಂಬ ಜ್ವಲಂತ ಸಮಸ್ಯೆಯೊಂದು ಜಗತ್ತನ್ನು ಕಂಗೆಡಿಸುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ ಹಿರಿಯ ಸಾಹಿತಿಗಳು, ಅನುವಾದಕರು ಆದ ಶ್ರೀ ಚನ್ನಪ್ಪ ಕಟ್ಟಿಯವರು.

(ಚನ್ನಪ್ಪ ಕಟ್ಟಿ)

ಎಸ್. ದಿವಾಕರ ಮುನ್ನುಡಿಯಲ್ಲಿ ಹೇಳಿರುವಂತೆ ಈ ಕಾದಂಬರಿಯಲ್ಲಿ ಸಾಂಕ್ರಾಮಿಕ ಪಿಡುಗಿನ ಹೃದಯವಿದ್ರಾವಿಕ ಚಿತ್ರ ದೊರೆಯುವುದು ಜಾನ್ ಹೋವರ್ಡ್ ಉರುಫ್ ಗ್ರ್ಯಾನರ್ ಎಂಬ ಏಕಮಾತ್ರ ವ್ಯಕ್ತಿಯಿಂದ.

ಅಲ್ಬರ್ಟ ಕಮೂ 1947ರಲ್ಲಿ ಬರೆದ “ದಿ ಪ್ಲೇಗ್”, ಡೇನಿಯಲ್ ಡಿಫೋ ಬರೆದ “ದಿ ಜರ್ನಲ್ ಆಫ್ ದಿ ಪ್ಲೇಗ್ ಈಯರ”, ರಿಚರ್ಡ ಪ್ರೀಸ್ಟರ್ನ ಬರೆದ ‘ದಿ ಹಾಟ್ ಸನ್ʼ ಇತ್ಯಾದಿ ಕೃತಿಗಳಿಗೆ ಸಂವಾದಿಯಾಗಿ ಈ ಕಾದಂಬರಿಯನ್ನು ನಾವು ಪರಿಗಣಿಸಬಹುದು. ಕಮೂವಾಗಲೀ, ಡಿಫೋ ಆಗಲೀ ಈ ಕಾದಂಬರಿಗಳ ಬರೆಯಲು ಕಾರಣವಾದ ಸಂದರ್ಭ ಒಂದೇ ಅಲ್ಲ. 14 ನೇ ಶತಮಾನದಲ್ಲಿ ಯುರೋಪನ್ನು ತನ್ನ ಮುಷ್ಟಿಯಲ್ಲಿ ಕಂಗೆಡಿಸಿದ ದಿ ಬ್ಲಾಕ್ ಡೆತ್, 1630ರಲ್ಲಿ ಕಾಣಿಸಿದ ಇಟಾಲಿಯನ್ ಪ್ಲೇಗ್ 1665ರಲ್ಲಿ ಪುನಃ ಲಂಡನ್ ತತ್ತರಿಸುವಂತೆ ಮಾಡಿದ “ದಿ ಗ್ರೇಟ್ ಪ್ಲೇಗ್” ಇತ್ಯಾದಿಗಳು ಕಾರಣ. ಹಾಗೇ ಕೇವಲ ಈ ಎಲ್ಲ ಕಾದಂಬರಿಗಳು ಪ್ಲೇಗ್ ರೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾಗೇ ಈ ಕಾದಂಬರಿ ಕೂಡಾ. ಇಂತಹ ಪರಿಸ್ಥಿತಿಯಲ್ಲಿ ಮನುಕುಲದ ಮಾನಸಿಕ ದ್ವಂದ್ವಗಳು, ಬದುಕಿನ ತುಮುಲಗಳು ನೂರು ವರ್ಷಗಳ ಹಿಂದೆ ಹೇಗಿತ್ತು ಮತ್ತು ಇಂದಿಗೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ವಿಶ್ಲೇಷಿಸಲು ಅನುಕೂಲವಾಗಲೆಂದೆ ಮಾಡಿದ ಅನುವಾದಕಾರರ ಪ್ರಯತ್ನವಂತೂ ಶ್ಲಾಘನೀಯ.

ಇದು ಕಿರು ಕಾದಂಬರಿ, “ನೊವೆಲ್ಲಾ” ಎಂದು ಕರೆಯಬಹುದಾದ ಕಾದಂಬರಿ ತನ್ನ ಗಾತ್ರಕ್ಕಿಂತ ಕಟ್ಟಿಕೊಟ್ಟ ವಿಷಯವಸ್ತು ಮತ್ತು ನಿರೂಪಣೆಗಳಿಂದ ವಿಶೇಷವಾಗಿದೆ.

ಕಾದಂಬರಿ 1912ರಲ್ಲಿ ಪ್ರಕಟವಾಯಿತು. ಭವಿಷ್ಯದಲ್ಲಿ ನಡೆಯುವ ಘಟನೆಯನ್ನು ಆಧರಿಸಿ ಬರೆದ “post apocalyptic” ಮಾದರಿಯ ಕಾದಂಬರಿ. ಕಾದಂಬರಿ ನಡೆಯುವುದು 2073ರ ಸಂದರ್ಭದಲ್ಲಿ. ಅದಕ್ಕೂ ಮುಂಚೆ ಅಂದರೆ 2013ರ ಸಮಯದಲ್ಲಿ ಕ್ಯಾಲಿಫೋರ್ನಿಯಾವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದ್ದ “ರೆಡ್ ಡೆತ್ ಅಥವಾ ಸ್ಕಾರ್ಲೆಟ್ ಪ್ಲೇಗ್” ಎಂಬ ಪಿಡುಗು ಇಡೀ ನಗರವನ್ನು ಹೇಗೆ ಮಾರಣಹೋಮ ಮಾಡಿತು ಎಂಬುದನ್ನು ಹೇಳುತ್ತದೆ. ಇಂತಹ ಸಾಂಕ್ರಾಮಿಕ ರೋಗದಿಂದ ಹೇಗೋ ಬದುಕುಳಿದ “ಗ್ರ್ಯಾನ್ಸರ್” ಎಂಬ ವ್ಯಕ್ತಿ ಮುಂದೆ ತನ್ನ ಮೊಮ್ಮಕ್ಕಳಿಗೆ 2013ರಲ್ಲಿ ನಡೆದ ಸಂಗತಿಯನ್ನು ವಿವರಿಸುತ್ತಾ, ಆರವತ್ತು ವರ್ಷಗಳಲ್ಲಿ ಆದ ನಾಗರಿಕತೆಯ ಏಳು ಬೀಳನ್ನು ಓದುಗರು ಮನಗಾಣುವಂತೆ ಮಾಡುತ್ತಾನೆ.

ಹಿಂದೆ ಇದ್ದ ಆಧುನಿಕತೆಯ ಜೀವನ ವಿಧಾನ ಮತ್ತು ಸಾಂಕ್ರಾಮಿಕ ರೋಗ ಧ್ವಂಸಗೊಳಿಸಿದ ಆ ಬದುಕು ಪುನಃ ಮರಳಿ ಹಿಂದಿನ ಅನಾಗರಿಕ ಜೀವನ ಶೈಲಿಗೆ ಮರಳಿದ ಬದುಕು ಇವೆರಡರ ನಡುವೆ ನಮಗೆ ವಿವೇಚನೆಗೆ ಹಚ್ಚುತ್ತದೆ ಕಾದಂಬರಿ. ಪ್ಲೇಗ್ ಉಂಟುಮಾಡಿದ ಅರಾಜಕತೆಯ ಜೊತೆ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಎಲ್ಲ ಕ್ಷೇತ್ರಗಳ ಮೇಲೆ ಅದು ನಡೆಸಿದ ಆಘಾತ, ಮತ್ತು ಬದಲಾದ ಜನರ ವರ್ತನೆ, ಸಾವಿನ ಅಟ್ಟಹಾಸದೆದುರು ನಿಸರ್ಗದ ದಾಳಿಯ ಮುಂದೆ ಮನುಷ್ಯನ ಕುಬ್ಜತೆ ಎಲ್ಲವನ್ನೂ ಒಳಗೊಂಡಿದೆ.

ಕಾದಂಬರಿಯ ಮುಖ್ಯ ಪಾತ್ರ ಗ್ರ್ಯಾನ್ಸರ್, ಪ್ಲೇಗ್ ಆವರಿಸಿಕೊಳ್ಳುವ ಮುನ್ನ ಬರ್ಕ್ಲೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಗ್ರ್ಯಾನ್ಸರ್ ಮಾತಿನ ಮೂಲಕವೇ ಐಷಾರಾಮದ ಬದುಕನ್ನು ನಡೆಸುತ್ತಿದ್ದವ. ಆದರೆ ಪ್ಲೇಗ್ ಬರುತ್ತಿದ್ದಂತೆ ಆತನ ಬದುಕೇ ಬದಲಾಗುತ್ತದೆ. ಆತನ ಕಣ್ಣ ಮುಂದೆ ಆತನ ಸಹೊದ್ಯೋಗಿಗಳು, ಸ್ನೇಹಿತರು ಸಹೋದರ ಎಲ್ಲರೂ ಮಡಿಯುತ್ತಾರೆ. ಹೇಗೋ ಬದುಕುಳಿದ ಗ್ರ್ಯಾನ್ಸರ್ ತನ್ನ ಹಾಗೇ ಬದುಕಿರಬಹುದಾದ ಜನರ ಹುಡುಕಾಟದಲ್ಲಿ ಶಾಫರ್ ಬಿಲ್‍ ನನ್ನು ಭೇಟಿಯಾಗುತ್ತಾನೆ. ಆದರೆ ಆತ ಅನಾಗರಿಕ. ಕ್ರೂರಿ. ದುಷ್ಟ. ಶ್ರೀಮಂತ ಹೆಣ್ಣು ವೇಸ್ಟಾಳನ್ನು ಅಪಹರಿಸಿಕೊಂಡು ಬಂದಿರುತ್ತಾನೆ. ಪ್ಲೇಗ್‍ ಗೂ ಮುನ್ನ ಆಕೆಯ ಮನೆಯಲ್ಲಿ ಸೇವಕನಾಗಿದ್ದ ಬಿಲ್ ಇಂದು ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡಿರುತ್ತಾನೆ. ಅವಳಿಂದ ಹೆಣ್ಣು ಮಗುವನ್ನು ಪಡೆದಿರುತ್ತಾನೆ. ಮುಂದೆ ಗ್ರ್ಯಾನ್ಸರ್ ಕೂಡಾ ಅಲ್ಲಿಯ ಬುಡಕಟ್ಟು ಹೆಣ್ಣೊಬ್ಬಳನ್ನು ವಿವಾಹವಾಗುತ್ತಾನೆ.

ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ ತಿಳಿಯುವ ಒರಟಾದ ಭಾಷೆಯನ್ನೆ ಕೇಳಲು ಬಯಸುತ್ತಾರೆ. ಅದಕ್ಕೆ ಆತ ಕೊಡುವ ಕಾರಣ ಅವರುಗಳು ನಾಗರಿಕತೆಯ ಜಗತ್ತಿನಲ್ಲಿಲ್ಲ. ಹೀಗೆ ಜ್ಯಾಕ್ ನಾಗರಿಕತೆಯ ಹಿಮ್ಮುಖ ಚಲನೆಯನ್ನು ಇಲ್ಲಿ ಪ್ರತಿಪಾದಿಸುತ್ತಾನೆ.

ಆದರೆ ಅದೇ ಹೊತ್ತಿಗೆ ನಮ್ಮಲ್ಲಿ ಮೂಡುವ ಪ್ರಶ್ನೆಯಾಗಿ ಇನ್ನೊಂದು ಗಣನೀಯ ಚಿಂತನೆಯತ್ತ ಕಾದಂಬರಿಕಾರ ಗಮನಸೆಳೆಯುತ್ತಾರೆ. ಈ ಹುಡುಗರೆಲ್ಲ ಸ್ವಾವಲಂಬಿಗಳು, ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತಾರೆ. ಆದರೆ ಗ್ರಾನ್ರ್ಸರ್ ತನ್ನ ಹಳೆಯ ದಿನಗಳ ನೆನಪಿಸಿ ತಾನು ಬಳಸುತ್ತಿದ್ದ ಆಹಾರಗಳೆಲ್ಲ ಬಡವರ ಶ್ರಮದ ಫಲಗಳಾಗಿದ್ದದ್ದನ್ನು, ಬೌದ್ಧಿಕ ವಲಯ ಹೇಗೆ ಆ ಶ್ರಮವಲಯದ ಜಗತ್ತನ್ನು ತನ್ನ ಅಡಿಯಾಳಾಗಿ ಇಟ್ಟುಕೊಂಡು ತನ್ನ ಐಶಾರಾಮದ ಬದುಕನ್ನು ನಡೆಸುತ್ತಿದ್ದ ಸಂಗತಿಯನ್ನು ಮೊಮ್ಮಕ್ಕಳಿಗೆ ವಿವರಿಸುವ ಮುಖಾಂತರ ನಾಗರಿಕತೆಯ ಇನ್ನೊಂದು ಅನಾಗರಿಕ ವರ್ತನೆಯ ಮೇಲೆ ಬೆಳಕು ಚೆಲ್ಲುತ್ತಾನೆ. The most civilised are the most barbaric” ಎಂಬ ಮಾತಿಗೆ ಇದು ಸಾಕ್ಷಿಯಾಗುತ್ತದೆ.

ಪ್ಲೇಗ್ ಉಂಟುಮಾಡಿದ ಅರಾಜಕತೆಯ ಜೊತೆ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಎಲ್ಲ ಕ್ಷೇತ್ರಗಳ ಮೇಲೆ ಅದು ನಡೆಸಿದ ಆಘಾತ, ಮತ್ತು ಬದಲಾದ ಜನರ ವರ್ತನೆ, ಸಾವಿನ ಅಟ್ಟಹಾಸದೆದುರು ನಿಸರ್ಗದ ದಾಳಿಯ ಮುಂದೆ ಮನುಷ್ಯನ ಕುಬ್ಜತೆ ಎಲ್ಲವನ್ನೂ ಒಳಗೊಂಡಿದೆ.

ನಾಗರಿಕತೆ ಎಂದರೆ ತನ್ನ ಜ್ಞಾನದ ಬಲದಿಂದ ಅನಕ್ಷರಸ್ಥ ಸಮೂಹವನ್ನು ತನ್ನ ಅಡಿಯಾಳಾಗಿ ಬಳಸಿಕೊಂಡು ಅವರಿಂದ ಉತ್ಪಾದಿತವಾದ ಆಹಾರವನ್ನು ಸೇವಿಸುತ್ತಾ ಮಾತಿನಲ್ಲೆ ಜಗತ್ತನ್ನು ಮಂಕು ಮಾಡಿದ ಆಳುವ ಜನಾಂಗವೋ? ಅಥವಾ ತನ್ನ ಆಹಾರವನ್ನು ತಾವೇ ಹುಡುಕಿಕೊಂಡು ಸ್ವಾವಲಂಬಿಯಾಗಿ ಬದುಕುವ ಜನವೋ? ಈ ಎರಡು ಇಲ್ಲಿ ಕಂಡುಬರುವ ಸಂಗತಿಗಳು. ಕಾದಂಬರಿಯ ಮುಖ್ಯ ಪಾತ್ರ ಗ್ರಾನರ್ಸ್ ಈ ಎರಡೂ ನಾಗರಿತಕೆಗಳ ಸಾಕ್ಷಿಯಾಗಿ ನಿಲ್ಲುತ್ತಾನೆ. ಕಾದಂಬರಿ ಕೆಲವು ಜಿಜ್ಞಾಸೆಗಳನ್ನು ಓದುಗನಿಗೆ ಬಿಡುತ್ತದೆ. ನಾಗರಿಕತೆ ಎಂದರೇನು? ಯಾವುದು ನಾಗರಿಕ ಜನಾಂಗ? ಯಾವುದು ಅನಾಗರಿಕ ಜನಾಂಗ?

ನಾಗರಿಕ ಸಮಾಜ ತನ್ನ ಅನುಕೂಲತೆಗೆ ಬೇಕಾದಂತೆ ಕೊಳಗೇರಿ ಮತ್ತು ಅನಾಗರಿಕ ಜನರನ್ನು, ಸಮುದಾಯವನ್ನು ಬೆಳೆಸಿದೆ. ಆದರೆ ಇಂಥಹ ಸಾಂಕ್ರಾಮಿಕ ರೋಗಗಳು ಹಬ್ಬಿದ ಸಂದರ್ಭದಲ್ಲಿ ಅಂತಹ ಅನಾಗರಿಕ ಜನರಿಂದ ಉಂಟಾಗಬಹುದಾದ ಅಪಾಯ ಮತ್ತು ವಿಧ್ವಂಸಕ ಕೃತ್ಯಗಳು ಬಗ್ಗೆ ಜ್ಯಾಕ್ ವಿವರಿಸುತ್ತಾನೆ.

ಪ್ಲೇಗ್ ಸಾಂಕ್ರಾಮಿಕವಾಗಿ ಹಬ್ಬುತ್ತಿದ್ದಂತೆ ಸುಶಿಕ್ಷಿತ ನಾಗರಿಕ ಜನ ತಮ್ಮ ಬದುಕನ್ನು ತಮ್ಮೊಂದಿಗೆ ಬದುಕುವ ಇತರ ಜನರನ್ನು ಪ್ರಾರಂಭಿಕ ಹಂತದಲ್ಲಿ ರಕ್ಷಿಸಬಯಸಿದರೆ, ನಂತರದ ಹಂತದಲ್ಲಿ ತನ್ನ ಜೀವ ಉಳಿದರೆ ಸಾಕೆಂಬ ಸ್ವರಕ್ಷಣೆಯ ಹಂಬಲದಲ್ಲಿ ಹೋರಾಡುತ್ತಾರೆ. ಆದರೆ ಕೆಳವರ್ಗ ಎಂದು ಗುರುತಿಸಿಕೊಂಡ ಜನ ಲೂಟಿಕೋರರಂತೆ ಈಗ ಸಿಕ್ಕಸಿಕ್ಕವರ ದೋಚಲಾರಂಭಿಸುತ್ತಾರೆ. ಪ್ಲೇಗ್ ಗಿಂತ ಈ ಶೋಷಣೆಗೆ ಜನಸಾಮಾನ್ಯರು ನಲಗುವಂತಾಗುತ್ತದೆ. ಸಿಕ್ಕಸಿಕ್ಕ ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಾ ಕುಡಿದು ತಿರುಗುವ ಈ ಲೂಟಿಕೋರರಿಂದ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಹೀಗೆ ವಿವರಿಸುತ್ತಾ ಕಾದಂಬರಿಕಾರ ಮೇಲ್ವರ್ಗದಿಂದ ಸತತ ಶೋಷಣೆಗೆ ಒಳಗಾದ ಈ ಸಮುದಾಯ ಇಂತಹ ಸಂದರ್ಭದಲ್ಲಿ ಹೀಗೆ ವರ್ತಿಸಲು ಕಾರಣಗಳು ಏನಿರಬಹುದು ಎಂಬುದನ್ನು ಓದುಗನ ವಿಶ್ಲೇಷಣೆಗೆ ಬಿಡುತ್ತಾರೆ.

ಇಂತಹ ಅನಾಗರಿಕ ಜಗತ್ತನ್ನು ಸೃಷ್ಟಿಸಿದ್ದು ನಾಗರಿಕ ಜಗತ್ತೇ ಎಂಬ ಸತ್ಯ ವಿಚಿತ್ರವಾದರೂ ಸತ್ಯವೇ!! ಅಂತಹ ಒಂದು ಸಶಕ್ತ ಪಾತ್ರವನ್ನು ಶಾಫರ ಬಿಲ್ ಎಂಬ ಪಾತ್ರದ ಮೂಲಕ ಕಟ್ಟಿಕೊಡುತ್ತಾರೆ. ಹಿಂದೆ ಇದೇ ಜನರಿಂದ ತನ್ನ ಮೇಲಾದ ದಬ್ಬಾಳಿಕೆಯನ್ನು ಆತ ಪ್ರಶ್ನಿಸದೇ ಇದ್ದರೂ ಪ್ರತಿಕಾರದ ಮನುಷ್ಯ ಗುಣಕ್ಕೆ ಸಾಕ್ಷಿ ಆಗುತ್ತಾನೆ.

(ಜಾಕ್‌ ಲಂಡನ್‌)

ಕಾದಂಬರಿ ಕಟ್ಟಿಕೊಡುವ ಚಿತ್ರಣಗಳು ಹಲವು. ಜಗತ್ತು ಅಥವಾ ಈ ಭೂಮಿ ತನ್ನದೇ ಆದ ತನ್ನ ವಿಶಿಷ್ಟ ಸಾಮರ್ಥ್ಯಗಳ ಮೂಲಕ ತನ್ನತನ ಕಾಯ್ದುಕೊಂಡೇ ತನ್ನೊಡಲಿನಲ್ಲಿ ಜೀವ ಸಂಕುಲಗಳನ್ನು ಅವುಗಳ ಬದುಕನ್ನು ಪೋಷಿಸುವ ಕರ್ತವ್ಯ ಮಾಡುತ್ತದೆ. ಭೂಮಿಗೆ ಇರುವಂತಹ ಕೇರಿಂಗ್ ಕೆಪೆಸಿಟಿ ಮತ್ತು ಬೇರಿಂಗ್ ಕೆಪೆಸಿಟಿ ಇವು ಆಕೆಯ ಪ್ರಬಲ ಸಾಧ್ಯತೆಗಳು. ಆ ಮೂಲಕ ಅತಿಯಾದ ಎಲ್ಲವನ್ನು ಆಕೆ ಕಳೆದುಕೊಳ್ಳಬಹುದಾದ ರಕ್ಷಣಾ ವ್ಯವಸ್ಥೆಯನ್ನು ಸಂರಚಿಸಿಕೊಳ್ಳುವುದು. ಅಂದರೆ ಪ್ರತಿ ಇರುವಿಕೆಯಲ್ಲೂ, ಬೆಳವಣಿಗೆಯಲ್ಲೂ ಒಂದು ಮಿತಿಯನ್ನ, ಗತಿಯನ್ನ ಇಟ್ಟುಕೊಂಡೇ ಜಗತ್ತು ಇಂದಿನ ಹಂತಕ್ಕೆ ಬಂದು ತಲುಪಿದೆ. ನಾಗರಿಕತೆಯ ಮೆಟ್ಟಿಲುಗಳನ್ನು ಏರುತ್ತಾ ಮನುಷ್ಯ ಕಂಡುಕೊಂಡ ಆಧುನಿಕತೆಯ ಅಸ್ತ್ರಗಳ ಮುಖೇನ ಆತ ನಿಸರ್ಗವನ್ನು ಗೆಲ್ಲುವ ಪ್ರಯತ್ನ‌ ಮಾಡುತ್ತಿದ್ದಾನೆ. ಆದರೆ ಆತನ ಎಲ್ಲ ಪ್ರಯತ್ನಗಳ ಬುಡಮೇಲು ಮಾಡುವಂತಹ ಪ್ರಬಲ ಸಾಮರ್ಥ್ಯ ಈ ಭುವಿಗಿದೆ. ಅಂತಹ ಹಲವು ಸಾಮರ್ಥ್ಯಗಳಲ್ಲಿ ಈ ಜೈವಿಕ ಅಸ್ತ್ರವೂ ಒಂದಾಗಿರಬಹುದು.

ಇನ್ನು ಕಾದಂಬರಿ ಸಾಂಕ್ರಾಮಿಕ ರೋಗವೊಂದು ಹೇಗೆ ಸಾಂಪ್ರದಾಯಿಕ ನಂಬಿಕೆಗಳ ಬದಲಾಯಿಸುವುದು, ವೈದ್ಯ ವಿಜ್ಞಾನದ ಪ್ರಗತಿಯನ್ನು ನಂಬದಂತೆ ಮಾಡಬಲ್ಲದು ಎಂಬುದನ್ನು ನಿರೂಪಿಸಿದೆ. ಹಾಗೇ ನಾಗರಿಕತೆಗಳ ಪರಿಕಲ್ಪನೆಯನ್ನೆ ಬುಡಮೇಲು ಮಾಡಬಹುದಾದಂತಹ ಮಹಾ ವಿನಾಶದ ಜೊತೆಗೆ ನವ ನಾಗರಿಕತೆಯ ವಿನ್ಯಾಸದ ಚಿತ್ರಣ ಕೊಡುತ್ತದೆ. ಅಂದರೆ ಕೊನೆಯಲ್ಲಿ ಗ್ರ್ಯಾನ್ಸರ್ ಅಕ್ಷರ ಕೀಲಿಕೈ ಹುಡುಕುವ, ಗ್ರಂಥಗಳ ಕಾಪಾಡುವ ಇರಾದೆ ತೋರುವ, ಕುದುರೆಗಳನ್ನು ಪಳಗಿಸುವ ಪ್ರಯತ್ನದಲ್ಲಿ, ಹೊಸ ನಿರೀಕ್ಷೆಯೊಂದಿಗೆ ಮತ್ತೆ ನಾಗರಿಕತೆಯ ಹೊಸ ಕನಸು, ಪುನರ್ ಅಸ್ತಿತ್ವದ ಚಿಂತನೆ ಮೂಡುವಂತೆ ಕೊನೆಗೊಳ್ಳುತ್ತದೆ.

ಗ್ರ್ಯಾನ್ಸರ್‍ ನ ಈ ಪ್ರಯತ್ನ ಅಸಂಗತ ಎನಿಸುತ್ತದೆ. ಆದರೂ ಈ ಅಸಂಗತತೆಯೇ ಅಸ್ತಿತ್ವವಾದದ ಮೂಲಸ್ತರ. ಮನುಕುಲದ ಮೂಲ ಹುಡುಕಾಟ ಇರುವುದೇ ಈ ಹಿನ್ನೆಲೆಯಲ್ಲಿ. ಹಾಗಾಗಿ ಆಶಾವಾದ ವ್ಯಕ್ತಗೊಳ್ಳುತ್ತದೆ.

ಹತ್ತೊಂಬತ್ತನೇ ಶತಮಾನದ ಸಮಾಜವಾದಿ ನಿಲುವಿನ ಪ್ರಗತಿಶೀಲ ಶಾಹಿತಿಗಳಲ್ಲಿ ಒಬ್ಬನಾದ ಅಮೇರಿಕಾದ ಜ್ಯಾಕ್ ಲಂಡನ್ ತನ್ನ ಅತ್ಯಲ್ಪ ಜೀವಿತಾವಧಿಯಲ್ಲೇ ಅತ್ಯಧಿಕ ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿ, ಅಸಾದ್ಯ ಎನ್ನುವಷ್ಟರ ಮಟ್ಟಿಗೆ ಬರೆದು, ನಲವತ್ತನೇ ವಯಸ್ಸಿಗೆ ಜಗತ್ತನ್ನೇ ತೊರೆದು ಹೋದರೂ ಆತ ಬರೆದ ಸಮಾಜವಾದಿ ನಿಲುವಿನ ಕಥೆ ಕಾದಂಬರಿಗಳು ಇಂದಿಗೂ ಪ್ರಸ್ತುತ ಮತ್ತು ಪ್ರಚಲಿತ ಓದಿಗೆ ತೆರೆದುಕೊಳ್ಳುವಷ್ಟು ಸತ್ವಭರಿತವಾಗಿವೆ.

ಕೆಲವು ದಿನಗಳ ಹಿಂದೆ ಅನುವಾದದ ಕುರಿತು ಮಾತನಾಡುತ್ತಾ ಹಿರಿಯ ಸಾಹಿತಿಗಳು ಅನುವಾದಕರೂ ಆಗಿರುವ ಶ್ರೀ ವಿಜಯರಾಘವನ್ ಸರ್ ಹೇಳಿದ ಮಾತೊಂದು ನೆನಪಿಸಿಕೊಳ್ಳಲೇಬೇಕಾದ ತುರ್ತು ನನಗಿದೆ. “ನಾವು ಬರೆಯಬೇಕಾಗಿರುವುದು, ಅನುವಾದ ಮಾಡಿ ಇಡಬೇಕಾಗಿರುವುದು ಇಂದಿನ ಪೀಳಿಗೆಗೆ ಅಲ್ಲ, ನಮ್ಮ ಮುಂದಿನ ಪೀಳಿಗೆಗೆ” ಅಂದರೆ ನಮ್ಮ ಬರವಣಿಗೆಗಳು ಮುಂದಿನ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆದವುಗಳಾಗಿರುವದು ಅಗತ್ಯವಿದೆ ಎಂಬುದು. ಹಾಗಾಗೇ ನೂರು ವರ್ಷಗಳ ಹಿಂದೆ ಬರೆದ ಈ ಕೃತಿ ಇಂದಿಗೆ ಅನುವಾದಿಸಲ್ಪಡುವಂತಹ ಜರೂರತ್ತನ್ನು ಗಮನಿಸಿದಾಗ ನಮಗೆ ಈ ಮಾತಿನ ಅರಿವಾಗುತ್ತದೆ.

ಇನ್ನು ಈಗಾಗಲೇ ಸಾಹಿತ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಚನ್ನಪ್ಪ ಕಟ್ಟಿಯವರ ಅನುವಾದ ಕಾರ್ಯ ಕನ್ನಡದ ಅಂಗಿಯನ್ನೆ ತೊಟ್ಟು ಬಂದಿದ್ದು, ಸುಲಭದಲ್ಲಿ ದಕ್ಕುವಂತೆ ಅನುವಾದಿಸಲ್ಪಟ್ಟಿದೆ. ಮೂಲಕೃತಿಯ ಹೆಸರನ್ನೆ ಬಳಸಿರುವುದು ಪರಿಣಾಮಕಾರಿಯಾಗಿದೆ. “ದಿ ಸ್ಕಾರ್ಲೆಟ್ ಪ್ಲೇಗ್” ಅಂತಹ ಕಾರಣದಿಂದ ಸದ್ಯದ ಸಂದರ್ಭದಲ್ಲಿ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ.

(ಕೃತಿ:  ಸ್ಕಾರ್ಲೆಟ್ಪ್ಲೇಗ್‌ (ಕಾದಂಬರಿ) ಲೇಖಕರು: ಜಾಕ್ಲಂಡನ್‌, ಅನುವಾದಕರು: ಚನ್ನಪ್ಪ ಕಟ್ಟಿ, ಪ್ರಕಾಶಕರು: ಪಲ್ಲವ ಪ್ರಕಾಶನ ಬೆಲೆ: 120  ಪುಟಗಳು: 138)