ವಿನ್ಸನ್ಟ್ ಮಿಲ್ಲಾಯ್ (1892-1950)
ದಿಟ್ಟ ಮತ್ತು ಅದ್ಭುತ ಕಲ್ಪನಾಶೀಲ ಅಮೆರಿಕಾದ ಕವಿ ಮತ್ತು ನಾಟಕಕಾರ್ತಿ. ಹುರುಪು ತುಂಬಿದ ಕಾಣ್ಕೆ, ಕಾವ್ಯದ ಮುಕ್ತ, ಸಿಡುಕಿನ ಧ್ವನಿ ಮತ್ತು ಅವಳ ಸಾಮಾಜಿಕ, ರಾಜಕೀಯ ನಿಲುವುಗಳಿಂದಾಗಿ ಯುವಜನತೆಯ ಆದರ್ಶವಾಗಿದ್ದಳು.

‘ಋತುಸಾರ್ವಭೌಮ’

ಅದ್ಯಾವ ದೊಡ್ಡ ಘನಂದಾರಿಗಾಗಿ
ಮತ್ತೆ ಮತ್ತೆ ಬರುವಿ ನೀ ಚೈತ್ರವೇ?
ಚೆಲುವಷ್ಟೇ ಸಾಕೆ?

ಇನ್ನೂ ಹಗೂರ
ಬಾಯ್ದೆರೆಯುವ ನಿನ್ನ
ಚಿಗುರೆಲೆಗಳ ಕೆಂಪಿನ ಕಂಪಿನಿಂದ
ನನ್ನ ಮುದಗೊಳಿಸಲಾರೆ

ಈಗ ತಿಳಿಯ
ಬೇಕಾದ್ದೆಲ್ಲವೂ ತಿಳಿದಿದೆ ನನಗೆ
ನೋಡ ನೋಡುತ್ತಲೇ
ಬಿಸಿಲು ಕುಕ್ಕುವುದು ಕೊರಳ ಇಳಿಜಾರನ್ನು

ಅದೇನೋ ಹಿತ
ಕ್ರೋಕಸ್ ಇರಿತ ಮಣ್ಣಿನ ಮೃದ್ಗಂಧ
ಸಾವೇ ಇಲ್ಲವೇನೋ ಎನಿಸುವುದು
ಇದಕ್ಕೆಲ್ಲಾ ಏನಿದೆ ಅರ್ಥ?

ಪಾತಾಳಕ್ಕಿಳಿದ ಮೆದುಳು
ಗೆದ್ದಲು ಹಿಡಿದಿರುವುದಷ್ಟೇ ಅಲ್ಲ
ಈ ಬದುಕೇ ಬಯಲಾಗದ ಶೂನ್ಯ
ಖಾಲಿ ಕಪ್ಪು
ರತ್ನಗಂಬಳಿಯಿಲ್ಲದ ಮೆಟ್ಟಿಲು!

ಓ… ಕುಸುಮಾಕರ

ವರುಷಕ್ಕೊಮ್ಮೆ ಸುಮ್ಮನೆ
ಎಬರೇಶಿಯಂಗ ಹೂವುಗಳನ್ನು ಎರಚುತ್ತಾ
ಪೆದ್ದು ಪೆದ್ದಾಗಿ ಅರಚುತ್ತಾ ಬರುವುದಲ್ಲ!

***

‘ಭವದ ಬೂದಿ’

ಪ್ರೀತಿ ಈಗ ಇಲ್ಲವಾಗಿದೆ
ಎಲ್ಲ ದಿನಮಾನಗಳೂ
ಒಂದೇ ಈಗ
ಉಣಬೇಕು ಉಣ್ಣುವೆ
ಮತ್ತೆ ಮಲಗುವೆ
ಈ ಬಿಕನಾಸಿ ಕಾರಿರುಳು ಬೇಗ ಬರಬಾರದೇ

ಒಹ್!
ನಿಧ ನಿಧಾನವಾಗಿ
ಕೈ ಸವರುವ ಗಡಿಯಾರದ
ಟಿಕ್ ಟಿಕ್ ಕೇಳುತ್ತ
ಸುಮ್ಮನೆ ಕಣ್ಣು ತೆರೆದೇ ಮಲಗಬೇಕು
ಮುಂಬೆಳಕು ಸರಿದು ಮತ್ತೆ ಬೆಳಗಾಗಬಾರದೇ

ಪ್ರೀತಿ ಈಗ ಇಲ್ಲವಾಗಿದೆ
ಅದು ಇದು ಯಾವುದೂ
ಎಲ್ಲವೂ ಈಗ ಒಂದೇ
ಶುರುವಾಗುವ ಮೊದಲೇ
ಎಲ್ಲವನ್ನೂ ಮುಗಿಸಿಬಿಡುವೆ
ಈಗೀಗ ಬದುಕಿನಲ್ಲಿ ಯಾವುದಕ್ಕೂ ಅರ್ಥವಿಲ್ಲ

ಪ್ರೀತಿ ಈಗ ಇಲ್ಲವಾಗಿದೆ
ಕಾಮಾಲೆಗಣ್ಣಿನ ನೆರೆ ಹೊರೆ
ಬಂದು ಬಂದು ಇಣುಕಿ ಹೋಗುವುದು
ಸುಮ್ಮನೆ ಕಟಕಟ ಕಟಕಟ
ಕಡಿಯುವ ಸೊಂಡಿಲಿಯ ಹಾಗೆ
ಬದುಕು ನಡಿಯುವುದು ಕಡಿಯುವುದು

ನಾಳೆ
ನಾಡಿದ್ದು
ಆಚೆ ನಾಡಿದ್ದು
ಈ ರಸ್ತೆ ಈ ಮನೆ
ಹೀಗೇ ನಿಲ್ಲುವವು ಅಲುಗದೆ

ಈಗ ಪ್ರೀತಿ ನನ್ನನ್ನು
ತೊರೆದು ಹೊರಟು ಹೋಗಿದೆ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..