ಮಾಯಾಕನ್ನಡಿ

ನನ್ನ ಹಡಗು ಮುಳುಗುತ್ತೆ
ಮಳೆಗಾಲದ ರಾತ್ರಿಯಂಥ
ನಿನ್ನ ಕಂಗಳಲ್ಲಿ
ಈ ನಿಲುವುಗನ್ನಡಿಗೆ
ನೆನಪುಗಳೆನ್ನುವುದೇ ಇಲ್ಲ ಈಗ
ನನ್ನ ಪದಗಳೆಲ್ಲ
ಸುಳುಸುಳು ಮಾಯವಾಗುತ್ತವೆ
ಕನ್ನಡಿ ತುಂಬಿಕೊಳ್ಳುವ ನಿನ್ನೆಲ್ಲ ಪ್ರತಿಬಿಂಬಗಳಲ್ಲಿ

ಇನ್ನೂ
ಈ ಲೋಕಕ್ಕೆ
ನಿನ್ನ ಸುಳಿವು ಎಲ್ಲಿಯೂ
ಹತ್ತುವುದಿಲ್ಲವೆಂದಿದ್ದೆ
ಮೆಲ್ಲ ಗುನುಗಿದ ಅದೇ ಪದ
ಜಳಕದ ಖೋಲಿಯ ಹಬೆಯೊಂದಿಗೆ
ಹಗೂರ ಮೇಲೇರಿ
ಮತ್ತೆ ಅದೇ ಹೊಟ್ಟೆ ಬಾಕ ಕನ್ನಡಿಯೊಳಗೆ!

ಮಾಯಾಕನ್ನಡಿ ನುಂಗಿದ ಪದಗಳು
ನನ್ನ ಕಣ್ಣ ಗೊಂಬೆಯ ಮೇಲೆ
ಮೂಡ ತೊಡಗಿದವು
ಅದೃಷ್ಟವೋ ದುರದೃಷ್ಟವೋ
ಗೊತ್ತಿಲ್ಲ ನನಗೆ
ಬುಳಬುಳನೆ ಉದುರಿದ ಹನಿಗಳು
ಅಳಿಸಿಯೇ ಹಾಕಿದವು ನೋಡು ಭಿತ್ತಿಯೊಳಗಿನ ಚಿತ್ರವ

ಇಲ್ಲ,
ಇನ್ನೂ ಇದು ಸಾಧ್ಯವಿಲ್ಲ

ಪೂಸಿಕೊಂಡ ಕಣ್ಣ ಶೀಶೆಯ ಅತ್ತರಿನ
ಘಮವನೆಲ್ಲಾ ಎಲ್ಲಿ ಅಡಗಿಸಲಿ?
ಪ್ರತಿಬಿಂಬ ನುಂಗಿದ ಪದಗಳು
ಕಣ್ಣ ಗೊಂಬಿಯ ಹೊಕ್ಕು
ಸುರಿದು ಹರಿದು ಮೈಯಗಂಧವಾಗಿ
ಲೋಕದ ತುಂಬೆಲ್ಲಾ ಈಗ
ಅಡಗಿಸಿಟ್ಟ ನಿನ್ನದೇ ಪದಗಳ ಪಾರುಪತ್ಯ!


ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.

ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.