ನಕ್ಷತ್ರ ಮತ್ತು ವೀಣೆ

ಆ ಸ್ವಪ್ನ
ಈ ಮುಂಜಾವು
ನಿನ್ನ ಅಧರಗಳ ಮೇಲೆ ಸುಳುವಾಗಿ
ಸುಳಿದಾಡುವ ಮಂಜು ಮುಸುಕಿನ
ತಂಬೆಲರನ್ನ ಹಗುರ
ನನ್ನ ತುಟಿಗಳಿಗೆ ಅದೆಷ್ಟು ಸಲೀಸು ದಾಟಿಸಿದೆ ನೀನು?

ನಿದ್ರೆಯ ಮಂಪರಿನ
ನಿನ್ನ ಧ್ವನಿ ಪಿಸುಗುಡುವ
ಎದೆಯ ಮಿದುವಿನ ಒಳಗೆಲ್ಲಾ
ಬೆಳ್ಳನೆಯ ಬೆಳಕ ಕೋಲ್ಮಿಂಚು

ಬೆಳಗು ನನ್ನ
ಕೊರಳ ಇಳಿಜಾರಿನ ಫಲಗಳನು
ಚುಂಬಿಸುವ ಮೊದಲೇ

ಅಸ್ಪಷ್ಟ
ನಾ ಕಂಡ ಅಷ್ಟೂ ಕನಸುಗಳು
ತೆರೆಗಳೆದ್ದ ಕೊಳದ ಬಿಂಬದಂತೆ
ಅನಾಯಾಸವಾಗಿ ಜಾರುವ ಬೆವರ ಜಲಪಾತ!

ಇನ್ನೇನು…
ಕೊಳ ಶಾಂತವಾಯಿತು
ನೆರಳು ಹಿಡಿದು
ಬೆಳಕ ಫಲಿಸಬೇಕು ಎನ್ನುವಷ್ಟರಲ್ಲಿ
ನಿರ್ದಯಿ ಗರುಡವೊಂದು ಹಾರಿ ಬಂದು
ನನ್ನನ್ನು ನಕ್ಷತ್ರ ಲೋಕಕೆ ಹೊತ್ತೊಯ್ಯಿತು

ನನ್ನ ಹೃದಯವನು ಮಾತ್ರ
ನಿನ್ನ ಮನೆಯ ದಾರಿಯಲಿ ಕೆಡವಿ
ಕೇವಲ ನಿನಗಾಗಿ ಮಿಡಿಯುವ ವೀಣೆಯಾಗಿಸಿತು!

ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಓದು, ಬರಹ, ಕಾವ್ಯ, ಕಾರ್ಯಕ್ರಮ ನಿರೂಪಣೆ ಅಚ್ಚುಮೆಚ್ಚು.
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..

 

(ಕಲಾಕೃತಿ: ವಿನ್ಸೆಂಟ್‌ ವ್ಯಾನ್‌ಗೋ)