ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ ನಿಷ್ಠವಾಗಿ, ಪ್ರಕೃತಿಗೆ ನಿಷ್ಠವಾಗಿ ಧ್ಯಾನಸ್ಥ ರೀತಿಯಲ್ಲಿ ಬರೆದಿರುವುದು ಪ್ರತಿಸಾಲುಗಳಲ್ಲಿ ಮನವರಿಕೆಯಾಗುತ್ತದೆ. ಯಾವತ್ತಿಗೂ ಸಹ ಹಳ್ಳಿಯ ಸೆರಿನಿಟಿ ಮತ್ತು ಟ್ರಾಂಕ್ಯುಲಿಟಿಯನ್ನು ಹಾಳು ಮಾಡುತ್ತಿರುವುದು ಮನುಷ್ಯನ ದುರಾಸೆಗಳೇ ಆಗಿವೆ. ಗ್ಲೋಬಲೈಸೇಷನ್ನಿನ ನೇರ ಎಫೆಕ್ಟ್ ಆಗುತ್ತಿರುವುದು ಹಳ್ಳಿಯ ಮೇಲೆಯೇ.
ಎಸ್. ಗಂಗಾಧರಯ್ಯ  ಕಥಾಸಂಕಲನ  “ದೇವರ ಕುದುರೆ”ಯ ಕುರಿತು ಎಚ್.ಆರ್.ರಮೇಶ ಬರೆದ ಲೇಖನ

 

ಆಧುನಿಕ ಕನ್ನಡ ಕಥಾ ಪ್ರಕಾರವು ಅನೇಕ ಜಿಗಿತಗಳನ್ನು ಕಂಡು ಹೊಸ ಅನುಭವಗಳನ್ನು ಶೋಧಿಸಿದೆ. ಈ ಶೋಧನೆಯ ಮೂಲಕ ಭಾಷೆಯ ಸಾಧ್ಯತೆಗಳನ್ನು ತೋರಿಸಿದೆ. ನವ್ಯ ಪೂರ್ವ ಕಾಲದಲ್ಲಿ ಕೆಲವೇ ಕೆಲವು ವರ್ಗದ ಕತೆಗಾರರು ಚಾಲ್ತಿಯಲ್ಲಿದ್ದು, ನವ್ಯ ಮತ್ತು ದಲಿತ ಬಂಡಾಯ ಕಾಲ ಘಟ್ಟದ ನಂತರ ವಚನ ಚಳವಳಿಯಲ್ಲಿ ಕಂಡಂತೆ ಹೊಸ ಪ್ರತಿಭೆಗಳು ಇಲ್ಲಿಯ ತನಕ ದಾಖಲಾಗದಂತಹ ಅನುಭವಗಳನ್ನು ನಿರೂಪಿಸಿ ಭಾಷೆಗೆ ಒಂದು ಹಿಗ್ಗನ್ನು ತಂದು ಕೊಡುವುದರ ಮೂಲಕ ಕನ್ನಡ ಸಾಹಿತ್ಯದ ಕ್ಯಾನ್ವಾಸನ್ನು ವಿಸ್ತರಿಸಿದರು.

ನವ್ಯ-ದಲಿತ-ಬಂಡಾಯೋತ್ತರ ಕಾಲಘಟ್ಟದಲ್ಲಿ ಅಂದರೆ ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ಹೇಳುವುದಾದರೆ ಪೋಸ್ಟ್-ಮಾಡ್ರನ್, ಪೋಸ್ಟ್-ಸ್ಟ್ರಕ್ಚರಲಿಸಮ್ ಎಂದು ಕರೆಯಿಸಿಕೊಳ್ಳುವ ಆಧುನಿಕೋತ್ತರ ಕಾಲಘಟ್ಟದ ಜಾಗತಿಕ ಕಥಾ ಸಾಹಿತ್ಯದಲ್ಲಿ ಒಂದು ತೆರನಾದ ರೆವಲುಷನ್ ಎನ್ನುವಂತೆ ಪ್ರಯೋಗ ಶೀಲತೆ, ಕಥನ ಕ್ರಮ, ನಿರೂಪಣಾ ಶೈಲಿ, ಅನುಭವಗಳ ಶೋಧನೆಗಳು ಅನೇಕ ರೀತಿಯ ಬದಲಾವಣೆಗಳನ್ನು ಕಂಡಿವೆ. ಆಧುನಿಕೋತ್ತರ ಸಂದರ್ಭದಲ್ಲಿ ‘ವಿಸ್ಮೃತಿ’, ‘ಸಾಂಸ್ಕೃತಿಕ ನಿರೂಪಣೆಗಳು’, ‘ಅಲಕ್ಷಿತ ಸಮುದಾಯದ ಅನುಭವಗಳು’ ಪ್ರಭಾವಿಸಿದ್ದರೆ, ಆಧುನಿಕೋತ್ತರ ಕಾಲದ ಮುಂದುವರೆದ ಭಾಗವಾದ ಇಂದಿನ ಪೋಸ್ಟ್ ಟ್ರುಥ್/ಸತ್ಯೋತ್ತರ ಕಾಲವು ‘ಮತೀಯವಾದ’ವನ್ನು, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸುತ್ತಿರುವ ‘ಸರ್ವಾಧಿಕಾರಿ ಧೋರಣೆಯುಳ್ಳ ಪ್ರಭುತ್ವ’ ಮತ್ತು ‘ಫ್ಯಾಸಿಸ್ಟ್ ಮನಸ್ಥಿತಿ’ಗಳನ್ನು ಕುರಿತು ತೀವ್ರಗತಿಯ ಟೀಕೆ-ವಿಮರ್ಶೆಗಳನ್ನು ಮಾಡುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಿದೆ.

ಇತ್ತೀಚೆಗೆ ಬರುತ್ತಿರುವ ಕತೆಗಳು ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಿವೆ. ನವ್ಯ ಮತ್ತು ನವ್ಯೋತ್ತರದ ದಲಿತ-ಬಂಡಾಯ ಸಾಹಿತ್ಯಕ್ಕೆ ಇದ್ದಂತಹ ಒಂದು ಖಚಿತ ಸೈದ್ಧಾಂತಿಕ ಪ್ರಭಾವ ಇಂದಿನ ಸಾಹಿತ್ಯದಲ್ಲಿ ಕಾಣದಿದ್ದರೂ ವರ್ತಮಾನದ ಸ್ಥಿತ್ಯಂತರ ಮತ್ತು ಕಾಲದಲ್ಲಾಗುತ್ತಿರುವ ಪಲ್ಲಟಗಳನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತಿವೆ. ಕೆಲವು ಬರಹಗಾರರು ನಗರ-ಕೇಂದ್ರಿತ ಜೀವನದ ಮೂಲಕ, ಕಾರ್ಪೋರೇಟ್ ಜಗತ್ತಿನ ಮೂಲಕ ಬದುಕು ಮತ್ತು ಮನುಷ್ಯ ಸಂಬಂಧಗಳನ್ನು ಹಾಗೂ ಸಮಾಜವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟರೆ, ಮತ್ತೆ ಕೆಲವರು ಗ್ರಾಮೀಣ ಬದುಕಿನ ಹಿನ್ನಲೆಯಲ್ಲಿ ನೋಡಲು ಪ್ರಯತ್ನಪಡುತ್ತಿವೆ. ಕೆಲವರು ಎರಡೂ ನೆಲೆಯಲ್ಲಿ ಹೇಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಸ್.ಗಂಗಾಧರಯ್ಯ ಅವರ ಇತ್ತೀಚಿನ ಕಥಾಸಂಕಲನ ‘ದೇವರ ಕುದುರೆ’ಯನ್ನು ನೋಡುವುದಾದರೆ, ಅವರು ತಮ್ಮ ಕತೆಗಳನ್ನು ಗ್ರಾಮೀಣ ಹಿನ್ನೆಲೆಯನ್ನು ಇಟ್ಟುಕೊಂಡು ಕತೆಗಳನ್ನು ಬರೆಯುತ್ತಿರುವುದು ಕಂಡುಬರುತ್ತದೆ. ಆರ್ ಕೆ ನಾರಾಯಣ್ ಅವರ ಕತೆಗಳು ಮಾಲ್ಗುಡಿಯಲ್ಲಿ ನಡೆಯುವಂತೆ, ದೇವರ ಕುದುರೆಯಲ್ಲಿನ ಎಲ್ಲ ಕತೆಗಳು- ಊರುಗಳು ಬೇರೆಬೇರೆಯಾಗಿದ್ದರೂ -ನಡೆಯುವುದು ಒಂದೇ ಊರಿನಲ್ಲೆಂಬಂತೆ ಇವೆ.

(ಎಸ್. ಗಂಗಾಧರಯ್ಯ)

ಎಸ್.ಗಂಗಾಧರಯ್ಯ ಅವರು ತಮ್ಮ ವಾರಗೆಯ ಕತೆಗಾರರಲ್ಲಿ ತುಸು ಭಿನ್ನವಾಗಿಯೇ ಬದುಕಿಗೆ ಮುಖಾಮುಖಿಯಾಗುತ್ತ ವಿಶಿಷ್ಟವಾದ ನಿರೂಪಣಾ ಕ್ರಮವನ್ನು ಸಾಧ್ಯವಾಗಿಸಿಕೊಂಡು ಕತೆಗಳನ್ನು ನಿರೂಪಿಸುತ್ತಿರುವುದು ಗಮನ ಸೆಳೆಯುವಂತಹದ್ದಾಗಿದೆ. ‘ಕತೆಯ ಬಲ’ದಿಂದ ಗಂಗಾಧರಯ್ಯ ಅವರು ನಿರೂಪಣೆ ಮತ್ತು ಭಾಷೆ ಈ ಎರಡನ್ನು ಹೊಸದಾಗಿ ಸಮ್ಮಿಶ್ರಗೊಳಿಸಿ ಒಂದು ಛಂದದ ಕಥನ ಕ್ರಮವನ್ನು ಕಟ್ಟುತ್ತಿರುವುದು ಕುತೂಹಲ ಮತ್ತು ಆಸಕ್ತಿದಾಯಕವಾಗಿದೆ. ಹೀಗೆ ಮಾಡುವುದರ ಮೂಲಕ ತಮ್ಮದೇ ಆದಂತಹ ಒಂದು ಶೈಲಿ ಮತ್ತು ನಿರೂಪಣಾ ಕ್ರಮವನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಇಲ್ಲಿಯ ತನಕ-ಈ ಹಿಂದೆ ಒಂದು ಕಥಾಸಂಕಲನವನ್ನು ಹೊರ ತಂದಿದ್ದರೂ-ಕೇವಲ ಅನುವಾದಕರಾಗಿಯಷ್ಟೇ ಪರಿಚಿತವಾಗಿದ್ದ ಮತ್ತು ಗಮನಸೆಳೆದಿದ್ದ ಗಂಗಾಧರಯ್ಯ ಅವರು ತಮ್ಮ ಇತ್ತೀಚಿನ ‘ದೇವರ ಕುದುರೆ’ ಸಂಕಲನದ ಮೂಲಕ ತಮ್ಮೊಳಗೂ ಒಬ್ಬ ಒರಿಜಿನಲ್ ಎನ್ನಬಹುದಾದ, ಸತ್ವಯುತವಾದ ಕತೆಗಾರ ಇದ್ದಾನೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ ನಿಷ್ಠವಾಗಿ, ಪ್ರಕೃತಿಗೆ ನಿಷ್ಠವಾಗಿ ಧ್ಯಾನಸ್ಥ ರೀತಿಯಲ್ಲಿ ಬರೆದಿರುವುದು ಪ್ರತಿಸಾಲುಗಳಲ್ಲಿ ಮನವರಿಕೆಯಾಗುತ್ತದೆ. ಯಾವತ್ತಿಗೂ ಸಹ ಹಳ್ಳಿಯ ಸೆರಿನಿಟಿ ಮತ್ತು ಟ್ರಾಂಕ್ಯುಲಿಟಿಯನ್ನು ಹಾಳು ಮಾಡುತ್ತಿರುವುದು ಮನುಷ್ಯನ ದುರಾಸೆಗಳೇ ಆಗಿವೆ. ಗ್ಲೋಬಲೈಸೇಷನ್ನಿನ ನೇರ ಎಫೆಕ್ಟ್ ಆಗುತ್ತಿರುವುದು ಹಳ್ಳಿಯ ಮೇಲೆಯೇ. ಹಾಗಾಗಿ ಹಳ್ಳಿಗಳು ಒಂದು ರೀತಿಯ ವಲ್ನರಬಲ್ ಆಗುತ್ತಿವೆಯೇನೋ ಅನ್ನಿಸುತ್ತದೆ. ಆದರೆ ಅಲ್ಲಿಯ ಸಾಮಾಜಿಕ ವಾತಾವರಣ- ಮುಖ್ಯವಾಗಿ ಜಾತಿ ವ್ಯವಸ್ಥೆ-ಸುಧಾರಿಸಿಲ್ಲ. ಭಾರತದಂತಹ ದೇಶದಲ್ಲಿ ಇದು ಕಷ್ಟಸಾಧ್ಯವೆನ್ನಿಸುತ್ತದೆ?!

ಇಲ್ಲಿಯ ಕತೆಗಳು ಸಾಮಾಜಿಕ ವಾತಾವರಣದ ಅನಾವರಣಕ್ಕಿಂತಲೂ ಮನುಷ್ಯನ ಸಣ್ಣತನಗಳನ್ನು ತೋರಿಸುವುದರಲ್ಲಿ ಮತ್ತು ಬದುಕಿನ ಪ್ರೀತಿಯನ್ನು ಎತ್ತಿಹಿಡಿಯುವುದರಲ್ಲಿ ತಮ್ಮ ಗಮನವನ್ನು ಹರಿಸುತ್ತವೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಗುತ್ತಿ ತದೇಕ ಚಿತ್ತದಿಂದ ಒಂದು ಪುಟ್ಟ ಸಗಣಿಹುಳ ಉಂಡೆಮಾಡಿಕೊಂಡು, ಅದನ್ನು ತಳ್ಳಿಕೊಂಡು ಹೋಗುವುದನ್ನು ನೋಡುತ್ತಾನಲ್ಲ ಹಾಗೆ ಇಲ್ಲಿಯ ನಿರೂಪಕ ಬದುಕು ಮತ್ತು ನಿಸರ್ಗದ ಒಳಗೆ ಬೆರೆತು ನಿರುದ್ವಿಗ್ನವಾಗಿ, ಧ್ಯಾನಸ್ಥರೀತಿಯಲ್ಲಿ ಕತೆಗಳನ್ನು ಹೇಳುತ್ತ ಹೋಗಿರುವುದು ಇಂದಿನ ಧಾವಂತದ ಯುಗದಲ್ಲಿ ಪ್ರಶಂಸಾರ್ಹ. ಇಲ್ಲಿಯ ಪಾತ್ರಗಳು ಹೇಗೆಲ್ಲ ವರ್ತಿಸುತ್ತವೆ, ಮತ್ತು ಹೇಗೆ ಬದುಕನ್ನು ಹಾಳುಮಾಡಿಕೊಳ್ಳುತ್ತವೆ, ಕಟ್ಟಿಕೊಳ್ಳುತ್ತವೆ ಎಂಬುದನ್ನು ಗಂಗಾಧರಯ್ಯ ಅವರು ವಾಸ್ತವವಾದಿ ನೆಲೆಯಲ್ಲಿ ಹೇಳಿದ್ದಾರೆ. ಬದುಕಿನ ಬಗೆಗೆ ಅದಮ್ಯವಾದಂತಹ ಕುತೂಹಲವಿದ್ದುದರಿಂದಲೇ ಅವರಿಗೆ ಇಲ್ಲಿ ಪಕ್ವಗೊಂಡಿರುವ ಭಾಷೆ ದಕ್ಕಿದೆ.

ಈಗಾಗಲೇ ಪ್ರಸ್ತಾಪಿಸಿದಂತೆ, ಯಾವ ಇಸಮ್ಮುಗಳಿಗೆ ಮತ್ತು ಐಡಿಯಾಲಾಜಿಗಳ ನೆರಳಲ್ಲಿ ಕೂರದೆ, ಇಲ್ಲಿಯ ಕತೆಗಾರ ತನ್ನ ಸುತ್ತಮುತ್ತಲ ಕಂಡ, ಅನುಭವಿಸಿದ ಬದುಕನ್ನು ತನಗೆ ದಕ್ಕಿದಷ್ಟನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿರುವುದು ಈ ಸಂಕಲನದ ವೈಶಿಷ್ಟ್ಯ. ಮನುಷ್ಯರ ಸಣ್ಣತನ, ಅವರ ಬವಣೆ, ಯಾತನೆಗಳು ಇಲ್ಲಿ ಮುಖ್ಯ ಕಥಾವಸ್ತುಗಳಾಗಿ ಬಂದಿವೆ. ಪ್ರತಿ ಕತೆಯಲ್ಲೂ ಸಹ ಆರ್ಡಿನರಿ ಎನ್ನಬಹುದಾದ ಘಟನೆಗಳು, ಅನುಭವಗಳು ಕತೆಗಾರನ ಸೃಜನಶೀಲತೆಯಲ್ಲಿ ಹೊಳೆವ ಹೂವುಗಳಂತೆ ನಳನಳಿಸುತ್ತವೆ. ಅದಮ್ಯ ಬದುಕನ್ನು ಮೆಚುರ್ಡ್ ಆದಂತಹ ಭಾಷೆಯಲ್ಲಿ ಹಿಡಿದಿಡುವ ಸಂದರ್ಭದಲ್ಲಿ, ಇಲ್ಲಿಯ ಕತೆಗಾರನಿಗೆ ‘ಈರ್ಕಾಟ’, ‘ಸಣ್ಣಾಲಿ’, ‘ಚಂದ್ರಪ್ಪ’, ‘ರಾಮಾಂಜಿ’, ‘ವೆಂಕಟಗಿರಿ’, ‘ಹೌಳಿಚಿಕ್ಕ’, ‘ನವೀನ’, ‘ಪುಡ್ಕಯ್ಯ’, ‘ಬಿಲ್ಲೂರ’, ‘ಸಣ್ಣಾಲಜ್ಜಿ’, ‘ವಿಶ್ವನಾಥ’, ‘ಗ್ಯಾರಜ್ಜ’, ‘ಕಣಿವೆ ಕಲ್ಲಪ್ಪ’, ‘ಬುಡೇನ್ ಸಾಬ್ರು’, ‘ಧರ್ಮಪ್ಪ’, ‘ಅಲ್ಕೂರಯ್ಯ’, ‘ಹೂಟ್ಗಪ್ಪ’ ನಂತಹ ಪಾತ್ರಗಳು ಸಿಗುತ್ತವೆ.

‘ಕರ್ಪಾಲು’ ಕತೆಯ ಪ್ರಾರಂಭದ ಕೆಲವೇ ಕೆಲವು ಸಾಲುಗಳಲ್ಲಿ- ‘ತಲೆಣಿಸಿದರೆ ಮುವ್ವತ್ತು ಮನೆಗಳನ್ನು ಮೀರದ ಕಾಡ್ನಳ್ಳಿಯ ಕೊನೆಕಾರ ಈರ್ಕಾಟನ ಕಪ್ಪೆಂಚಿನ ವಪ್ಪಾರು ಮನೆಯ ಮುಂದೆ ಇದ್ದಕ್ಕಿದ್ದಂತೆ ಎದ್ದ ದೊಡ್ಡ ಸದ್ದಿಗೆ ಇನ್ನೂ ನಿದ್ದೆಯ ಮಂಪರಿನಲ್ಲೇ ಮುರುಟಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಈರ್ಕಾಟನ ಮನೆಯಂಗಳಕ್ಕೆ ದೌಡಾಯಸಿದಾಗ ಮೂಡಲ ದಿಕ್ಕಿನ ದಿಬ್ಬದಲ್ಲಿ ಕುಳಿತಿದ್ದ ಗಾಮದೇವತೆ ಕರಿಯವ್ವನ ಗುಡಿಯ ಕಳಸದ ಮೇಲಿಂದ ಸೂರ್ಯ ಊರ ದಿಟ್ಟಿಸುತ್ತಿದ್ದ’ – ಊರಿನ ಚಿತ್ರಣವನ್ನು ಮತ್ತು ಸೂರ್ಯೋದಯದ ಚಿತ್ರಣವನ್ನು ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. ಈ ನಿರೂಪಣೆಯಲ್ಲಿ ಬರುವ ಪ್ರತಿ ಪದಗಳು ಕೀಟ್ಸ್ ನ ಕಾವ್ಯದಲ್ಲಿ ಕಾಣುವಂತೆ ಅಳೆದು ತೂಗಿ ಇಟ್ಟಂತೆ ಕಾಣುತ್ತವೆ. ಯಾವುದೇ ಒಂದನ್ನು ಹೊರ ತೆಗೆದರೂ ಅದು ಕೊಡುವ ಅರ್ಥಕ್ಕೆ ಮುಕ್ಕಾಗುವಂತೆ ಇದೆ. ಎಷ್ಟು ಬೇಕೋ ಅಷ್ಟನ್ನು ಒಳಗೊಂಡು ಕತೆಗೆ ವಿವರಣೆಯೂ ಸಾಥ್ ಕೊಟ್ಟಿರುವುದು ಮೋಹಕವಾಗಿದೆ. ಇಂಥಹ ಸುಮಾರು ಉದಾಹರಣೆಗಳನ್ನು ಸಂಕಲನದ ಬಹುಪಾಲು ಕತೆಗಳಲ್ಲಿ ಕಾಣಬಹುದು.

ಕುಸುಮಬಾಲೆಯಲ್ಲಿ ದಾರಂದವನ್ನು ತೆಗೆದಾಗ ಹೊರಗಿನ ಕತ್ತಲು ಒಳ ನುಗ್ಗಿಬಂದಂತೆ ಎಂಬಂತಹ ಸಾಲುಗಳು ಇದನ್ನು ಓದುವಾಗ ನೆನಪಾಗುತ್ತವೆ. ಈರ್ಕಾಟನಿಗೆ ಕರ್ಪಾಲಿಗೆಂದು ಕೊಟ್ಟ ಹಸುವನ್ನು ಅದು ಗಬ್ಬಾಗುತ್ತಿದ್ದಂತೆ ವಾಪಸ್ಸು ತೆಗೆದುಕೊಂಡು ಹೋಗುವ ಚಂದ್ರಪ್ಪನ ಗೋಸುಂಬೆತನವನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ‘ಮನೇಲಿ ಮಕ್ಳು ಮರಿ ಇದಾವೆ, ಒಂಚೂರು ಕರೇವು ಅಂತಾದ್ರೆ ಅವ್ಕೂ ಅನ್ಕೂಲ ಆಗುತ್ತೆ’ ಎಂದು ದೊಡ್ಡ ಮಾತುಗಳನ್ನು ಹೇಳಿ ಈರ್ಕಾಟನಿಗೆ ಚಂದ್ರಪ್ಪ ತನ್ನ ಹಸುವನ್ನು ಕೊಟ್ಟು, ಅದು ಗಬ್ಬಾಗುತ್ತಿದ್ದಹಾಗೆ ವಾಪಾಸ್ಸು ಹೊಡಕೊಂಡು ಹೋಗುವನು. ನಂತರ ಅದನ್ನು ಮಾರಾಟ ಮಾಡಲು ತಯಾರಿ ನಡೆಸುವನು. ಇದೇ ಹೊತ್ತಿನಲ್ಲಿ ಒಂದು ಕಡೆ ಚಂದ್ರಪ್ಪನಂತಹ ಮನುಷ್ಯನಲ್ಲಿ ಪೊಳ್ಳುತನವನ್ನು ತೋರಿಸುತ್ತ ನಿಜವಾದ ಮನುಷ್ಯ ಸಂಬಂಧವೆಂದರೆ ಏನು ಎಂದು ನಮ್ಮೊಳಗೆ ಪ್ರಶ್ನೆಗಳನ್ನು ಉಂಟುಮಾಡಿದರೆ, ಮೂಕ ಪ್ರಾಣಿ ಹಸುವಿನ ಮೂಲಕ ಸಂಬಂಧದ ಮೌಲ್ಯವನ್ನು ತೋರಿಸಲಾಗಿದೆ. ಈ ಕತೆಯಲ್ಲಿ ಬರುವ ಚಂದ್ರಪ್ಪನ ನೀಚತನವನ್ನು ತೋರಿಸುವುದರ ಮೂಲಕ ಕತೆಗಾರರು ನಿಜದ ಸ್ನೇಹ ಯಾವುದು ಮತ್ತು ತೋರಿಕೆಯ ಸ್ನೇಹ ಯಾವುದು ಎಂಬುದನ್ನು ಹೇಳಲು ಪ್ರಯತ್ನಿಸಿದ್ದಾರೆ.

ಸಣ್ಣದಾಗಿನಿಂದ ಸಾಕಿದ್ದ ಹಸು-ಅದಕ್ಕೆ ಈರ್ಕಾಟನ ಮಕ್ಕಳು ಗೌರಿಯೆಂದು ಹೆಸರಿಟ್ಟಿರುತ್ತಾರೆ-ತನ್ನ ವಾರಸುದಾರ ಚಂದ್ರಪ್ಪ ಬಂದು ಹೊಡೆದುಕೊಂಡು ಹೋದರೂ ಕೊನೆಗೆ ಅದು ತನ್ನನ್ನು ಸಾಕಿ, ಬೆಳೆಸಿ, ಪ್ರೀತಿ ಕಾಳಜಿಗಳನ್ನು ತೋರಿಸಿದ್ದ ಈರ್ಕಾಟನ ಮನೆಗೆ ವಾಪಸ್ಸು ಬರುವ ದೃಶ್ಯ ಕನ್ನಡ ಕಥಾ ಸಾಹಿತ್ಯದಲ್ಲಿ ವ್ಯಕ್ತಗೊಂಡಿರುವ ಅಪರೂಪದ ಹೃದಯಮೀಟುವ ದೃಶ್ಯಗಳಲ್ಲಿ ಒಂದು ಎಂದೇ ಹೇಳಬಹುದು. ಕರ್ಪಾಲಿಗೆಂದು ಕೊಟ್ಟ ಹಸುವಿನ ಮೂಲಕ ಮನುಷ್ಯತ್ವದ ನಿಜದರ್ಶನವನ್ನು ಕತೆಗಾರ ಮಾಡುತ್ತಾರೆ. ಈರ್ಕಾಟ ದನದ ಸಂತೆಯಲ್ಲಿ ಮತ್ತೊಂದು ಹಸುವನ್ನು ಕೊಂಡುತರಲು ಹೊರಟು ನಸುಕಿನಲ್ಲಿ ಹೊರಟಾಗ ಅವನ ಮನೆಯ ಹಿತ್ತಲಿನಲ್ಲಿ anti climax ಎನ್ನುವ ರೀತಿಯಲ್ಲಿ ಈರ್ಕಾಟ ಸಾಕು ಸಲುಹಿದ್ದ ಕರ್ಪಾಲಿನ ಹಸು ಗೌರಿ ಕಾಣಿಸಿಕೊಳ್ಳುತ್ತದೆ. ಇದನ್ನು ಓದುವಾಗ ಮಜೀದ್ ಮಜೀದಿ ಅವರ ಸಿನೆಮಾ ‘ಫಾದರ್’ ನ ಕಥಾನಾಯಕ ಹದಿನಾಲ್ಕು ವರ್ಷದ ಯುವಕ ಮಹ್ರೆಲ್ಲೋ ಮಲತಂದೆಯನ್ನು ತಂದೆಯೆಂದು ಒಪ್ಪಿಕೊಳ್ಳುವ ಮನಕಲಕುವ ದೃಶ್ಯ ನೆನಪಾಯಿತು. ಅಂದರೆ ಒಪ್ಪಿಕೊಳ್ಳಲೇಬೇಕಾದಂತಹ ಪರಿಸ್ಥಿತಿ ಅವನಿಗೆ ಬರುತ್ತದೆ.

ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಗುತ್ತಿ ತದೇಕ ಚಿತ್ತದಿಂದ ಒಂದು ಪುಟ್ಟ ಸಗಣಿಹುಳ ಉಂಡೆಮಾಡಿಕೊಂಡು, ಅದನ್ನು ತಳ್ಳಿಕೊಂಡು ಹೋಗುವುದನ್ನು ನೋಡುತ್ತಾನಲ್ಲ ಹಾಗೆ ಇಲ್ಲಿಯ ನಿರೂಪಕ ಬದುಕು ಮತ್ತು ನಿಸರ್ಗದ ಒಳಗೆ ಬೆರೆತು ನಿರುದ್ವಿಗ್ನವಾಗಿ, ಧ್ಯಾನಸ್ಥರೀತಿಯಲ್ಲಿ ಕತೆಗಳನ್ನು ಹೇಳುತ್ತ ಹೋಗಿರುವುದು ಇಂದಿನ ಧಾವಂತದ ಯುಗದಲ್ಲಿ ಪ್ರಶಂಸಾರ್ಹ.

ಈ ‘ಪಿತೃವಾತ್ಯಲ್ಯ’ ಎನ್ನುವುದು ಕೇವಲ ಹುಟ್ಟಿಸಿದ ತಂದೆಯಿಂದಲೇ ದಕ್ಕಬೇಕಾಗಿಲ್ಲ, ಅದನ್ನು ಕೊಡುವವರಿಂದಲೂ ಪಡೆಯಬಹುದು ಎನ್ನುವ ಅರ್ಥದಲ್ಲಿ ಈ ದೃಶ್ಯವಿದೆ. ಚಂದ್ರಪ್ಪನ ಮನೆಯನ್ನು ಬಿಟ್ಟು ಈರ್ಕಾಟನ ಮನೆಯನ್ನು ಹರಸಿ ಮತ್ತೆ ವಾಪಾಸ್ಸು ಬರುವ ಹಸುವಿನ ಮೂಲಕ ಸಂಬಂಧದ ಮೌಲ್ಯವನ್ನು ಎತ್ತಿಹಿಡಿಯಲಾಗಿದೆ. ಚಂದ್ರಪ್ಪನಿಗೆ ಅದೊಂದು ಕೇವಲ ಸರಕು. ಅದನ್ನು, ಈಗಾಗಲೇ ಗಬ್ಬಾಗಿರುವುದರಿಂದ ದುಪ್ಪಟ್ಟು ಬೆಲೆಗೆ ಮಾರುವ ಹುನ್ನಾರ ಮಾಡುತ್ತಾನೆ. ಆದರೆ ಅದೇ ಹಸು ಈರ್ಕಾಟನಿಗೆ ವಾತ್ಯಲ್ಯದ, ಪ್ರೀತಿಯ ದ್ಯೋತಕ. ಅದೊಂದು ಕುಟುಂಬದ ಭಾಗವೇ ಆಗಿಬಿಟ್ಟಿದೆ. ಅದನ್ನು ಚಂದ್ರಪ್ಪ ಹೊಡೆದುಕೊಂಡು ಹೋದ ಮೇಲೆ ಈರ್ಕಾಟನ ಮನೆಯಲ್ಲಿ ಆವರಿಸುವ ದುಗುಡ, ಮೌನ ಅದರ ಜೊತೆಗೆ ಈರ್ಕಾಟನ ಕುಟುಂಬ ಹೊಂದಿದ್ದ attachment ಅನ್ನು ತೋರಿಸುತ್ತದೆ.

‘ಪದುಮದೊಳಗೆ ಬಿಂದು ಸಿಲುಕಿ’ ಕತೆಯಲ್ಲಿ ದುಃಖ ಮತ್ತು ಸಂಭ್ರಮ ಮನುಷ್ಯ ಅನುಭವಿಸುವ ಎರಡು ಮುಖ್ಯ ಅನುಭವಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ಅಲೆಮಾರಿ ಸಮುದಾಯಕ್ಕೆ ಸೇರಿದ ರಾಮಾಂಜಿಯನ್ನು ಅವನ ತಾಯಿ ಶಿಕ್ಷಣವೊಂದೇ ಬದುಕಿನ ಸಂಕಷ್ಟಗಳಿಂದ ಪಾರಾಗುವ ದಾರಿ ಎಂದು ತುಂಬಾ ಕಷ್ಟಪಟ್ಟು ಸ್ಕೂಲಿನ ಕಾವಲು ಕಾಯುವ ಜವಾನ ವೆಂಕಟಗಿರಿಯ ಸಹಾಯದಿಂದ ಸ್ಕೂಲಿಗೆ ಸೇರಿಸುತ್ತಾಳೆ. ಕತೆಯು ತನ್ನ ವಸ್ತುವಿನಿಂದಾಗಿ ಗಮನಸೆಳೆಯುತ್ತದೆ. ರಾಮಾಂಜಿಯೆನ್ನುವ ಅಲೆಮಾರಿ ಹುಡುಗನ ಮೂಲಕ ಶಿಕ್ಷಣ ಎನ್ನುವುದು ವಿಮೋಚನೆಯ ದಾರಿ ಎನ್ನುವುದನ್ನು ತುಂಬಾ ಮನೋಜ್ಞವಾಗಿ ಚಿತ್ರಿಸಲಾಗಿದೆ. ಮಕ್ಕಳಿಲ್ಲದ ವೆಂಕಟಗಿರಿ ಮತ್ತವನ ಹೆಂಡತಿ ರಾಮಾಂಜಿಯಲ್ಲಿ ಮಕ್ಕಳಿಲ್ಲದ ನೋವು, ಯಾತನೆಗಳನ್ನು ಮರೆಯುತ್ತಾರೆ. ರಾಮಾಂಜಿಯ ತಬ್ಬಲಿತನ ಕತೆಯ ಜೀವಾಳ. ಇವನು ಆಲಿವರ್ ಟ್ವಿಸ್ಟ್ ಥರ. ಇದಕ್ಕೆ ಕತೆಯ ಕೊನೆಯ ಸಾಲುಗಳನ್ನು ನೆನೆಪಿಸಿಕೊಳ್ಳಬಹದು: ‘ಅವ್ವ ನಾನು ಓದಲೂ ಬೇಕು, ನಂಗೆ ನೀನೂ ಬೇಕು.’

‘ದೇವರ ಕುದುರೆ’ ಇಲ್ಲಿನ ಎಲ್ಲ ಕತೆಗಳಂತೆ ವಾಸ್ತವವಾದಿ ನಿರೂಪಣಾ ಕತೆಯಾದರೂ ಅದಕ್ಕೆ ಒಂದು ಸ್ವಲ್ಪ ಮ್ಯಾಜಿಕಲ್ ರಿಯಲಿಸಮ್ಮಿನ ಸ್ಪರ್ಶ ಸಿಕ್ಕಿದೆ. ಕತೆಯ ಮುಖ್ಯಪಾತ್ರಗಳಲ್ಲಿ ಒಂದಾದ ನವೀನನಿಗೆ ಕುದುರೆಗಳ ಮೇಲೆ ವಿಚಿತ್ರವಾದಂತಹ ವ್ಯಾಮೋಹ. ಕನಸಲ್ಲೂ ಕುದುರೆಗಳನ್ನು ಕಾಣವನು. ಕುದುರೆ ಸಾಕುವ ಇಂಗಿತವನ್ನು ತನ್ನ ಅಪ್ಪ ಪುಡ್ಕಯ್ಯನಿಗೆ ಹೇಳಿ ಬೈಯಿಸಿಕೊಳ್ಳುತ್ತಾನೆ. ಮಗನ ಕುದುರೆಯ ಹುಚ್ಚನ್ನು ಕಂಡು ಪುಡ್ಕಯ್ಯ ದಿಗಿಲುಗೊಳ್ಳುವನು. ಇದೇ ಸಂದರ್ಭದಲ್ಲಿ ಅದೇ ಊರಿನ ಕಾಬುಳ್ಳ ಮತ್ತವನ ಹೆಂಡತಿಗೆ ಸಂತಾನ ಪ್ರಾಪ್ತಿಯಾಗದೆ, ಒಬ್ಬ ಸ್ವಾಮೀಜಿಯನ್ನು ಭೇಟಿ ಮಾಡುವರು. ಅದಕ್ಕೆ ಸ್ವಾಮೀಜಿ ಅಶ್ವದೋಷದ ಪರಿಣಾಮದಿಂದ ಅವರಿಗೆ ಮಕ್ಕಳಾಗಿಲ್ಲ, ಅದಕ್ಕೆ ಒಂದು ಕುದುರೆಯನ್ನು ದೇವರಿಗೆ ಬಿಡಬೇಕೆಂದು, ಅದು ಕಾಮ ಸ್ವರೂಪಿಯಾದ್ದರಿಂದ ಹಾಗೆ ಬಿಡುವಾಗ ತಟವಟ ಚಟ್ಟುಮುಟ್ಟು ಆಗಕೂಡದೆಂದೂ, ಮತ್ತೂ, ಇಷ್ಟಾರ್ಥ ಪ್ರಾಪ್ತಿಯಾಗುವವರೆಗೂ ಕುದುರೆಯನ್ನು ಸವಾರಿಮಾಡದಂತೆ ಕಣ್ಣಿಟ್ಟಿರಬೇಕೆಂದು ಹೇಳುವರು. ಆದರೆ ಇದಕ್ಕೆ ತದ್ವಿರುದ್ದ ಎನ್ನುವ ರೀತಿಯಲ್ಲಿ ಕತೆಯ ಕೊನೆಯಲ್ಲಿ ಈ ಕುದುರೆಯನ್ನು ನವೀನ ಸವಾರಿಮಾಡಿಕೊಂಡು ಹೋಗುತ್ತಾನೆ.

ನವೀನನಿಗೆ ಇದರ ಹಿನ್ನಲೆ ಯಾವುದೂ ಗೊತ್ತಿರುವುದಿಲ್ಲ, ಬದಲಿಗೆ, ತನ್ನ ಕುದುರೆಯ ಮೇಲಿನ ವ್ಯಾಮೋಹದಿಂದಾಗಿ ಅದರ ಮೇಲೆ ಸವಾರಿ ಮಾಡುತ್ತಾನೆ. ಇದನ್ನು ಯಾರೂ ಸವಾರಿಮಾಡದಿದ್ದಲ್ಲಿ ಅವರಿಗೆ ಸಂತಾನ ಪ್ರಾಪ್ತವಾಗುತ್ತಿತ್ತು ಎನ್ನುವುದಕ್ಕಿಂತ, ಕತೆಗಾರ ಈ ವೈರುಧ್ಯವನ್ನು ವ್ಯಂಗ್ಯದಲ್ಲಿ ಹೇಳಿರುವುದು ಕತೆಯಲ್ಲಿ ತುಂಬಾ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ. ಕತೆಯಲ್ಲಿ ಬರುವ ಘಟನೆಗಳ ಮೂಲಕ ಕತೆಗಾರ ಕೆಲವು ಮಿಂಚಿನಂತಹ ಜೀವನ ದರ್ಶನಗಳನ್ನು ಮಾಡುತ್ತಾರೆ. ಕತೆಗಿಂತಲೂ ಮಿಗಿಲಾಗಿ ಘಟನೆಗಳು ಮತ್ತು ಅವುಗಳನ್ನು ಸುತ್ತುವರೆದಿರುವ ವಿವರಣೆಗಳು ಹೆಚ್ಚು ಅರ್ಥಪೂರ್ಣವಾಗಿವೆ.

‘ಕೋರು’ ಕತೆಯು ಕತೆ ಮತ್ತು ನಿರೂಪಣೆ, ಭಾಷೆ ಹಾಗೂ ಲೋಕದೃಷ್ಟಿಗಳ ನೆಲೆಯಲ್ಲಿ ಕತೆಗಾರನಿಗೆ ಸಿಕ್ಕಿರುವ ಒಂದು ಮಾದರಿ ಕತೆಯೆಂದೇ ಹೇಳಬಹದು. ಗೇಣಿಯ ಆಧಾರದ ಮೇಲೆ ಸಣ್ಣಾಲಜ್ಜಿಯ ಹೊಲವನ್ನು ಉಳುಮೆ ಮಾಡುತ್ತಿದ್ದ ಬಿಲ್ಲೂರ ಕೊನೆಗೆ ಅದನ್ನು ಅವಳಿಗೆ ಕೊಡದೆ ಉಲ್ಟಾ ಹೊಡಿಯುತ್ತಾನೆ. ಆದರೆ ಸಣ್ಣಾಲಜ್ಜಿ ಕೋರ್ಟ್ ಮೂಲಕ ಮತ್ತೆ ಅದನ್ನು ವಾಪಸ್ಸು ಪಡೆಯುತ್ತಾಳೆ. ಇದು ಕತೆಯ ಬಿತ್ತಿ. ಆದರೆ ನಿರೂಪಣೆ ಮತ್ತು ವಿವರಗಳು ಇದನ್ನೊಂದು ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರಿಸುತ್ತದೆ.

‘ಬೇರಿಲ್ಲದ ಗಿಡ’ ಕತೆಯ ಶೀರ್ಷಿಕೆಯೇ ಸೂಚಿಸುವಂತೆ ಸೂಚ್ಯಾರ್ಥವಾಗಿದೆ. ತಂದೆ-ತಾಯಿರನ್ನು ಕಳೆದುಕೊಂಡ ಒಬ್ಬ ಕಪಿನಿ ಎನ್ನುವ ತಬ್ಬಲಿ ಹುಡಗನ ಕತೆ. ಓದಬೇಕು ಎನ್ನವ ಅಚಲವಾದ ಕನಸನ್ನು ಇಟ್ಟುಕೊಂಡಿರುವಂತಹ ಹುಡುಗ. ಅಪ್ಪ ಅಮ್ಮ ಸತ್ತ ಬಳಿಕ ತನ್ನ ಅಜ್ಜಿಯ ಮನೆಗೆ ಬಂದು ಸೋದರ ಮಾವನ ಮನೆಯಲ್ಲಿ ಉಳಿಯುತ್ತಾನೆ. ತನ್ನ ಮಾಮನಿಗೆ ತನ್ನ ಓದುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಅದಕ್ಕೆ ಪ್ರೋತ್ಸಾಹ ಕೊಡುವುದಿಲ್ಲ ಅವನು. ಕೊನೆಗೆ ಮನೆಯನ್ನು ಬಿಟ್ಟು ಹೋಗುತ್ತಾನೆ. ಅದರ ಚಿತ್ರಣ ಹೀಗಿದೆ: ‘ರೂಮಿನ ಬಾಗಲು ಅರೆ ತೆರೆದಿತ್ತು. ಲೈಟು ಉರಿಯುತ್ತಿತ್ತು. ಗೋಡೆಯ ಗೂಟದಲ್ಲಿ ಕೊಟ್ಟಗೆಯ ಬಾಗಿಲ ಬೀಗದ ಕೀ ನೇತಾಡುತ್ತಿತ್ತು. ಮೂಲೆಯಲ್ಲಿದ್ದ ಕಪಿನಿಯ ಟ್ರಂಕು ನಾಪತ್ತೆಯಾಗಿತ್ತು’. ಈ ಕತೆಯ ವಸ್ತು ಈಗಾಗಲೇ ಅನೇಕ ಕತೆಗಳಲ್ಲಿ ವ್ಯಕ್ತಗೊಂಡಿದ್ದು ಮತ್ತು ಕತೆಯ ನಿರೂಪಣೆ ನಿರೀಕ್ಷಿತ ಜಾಡಿನಲ್ಲಿ ಸಾಗುವುದರಿಂದ ಹಾಗೂ ತುಸು ಮೆಲೋ ಡ್ರಮೆಟಿಕ್ ಎನ್ನ ಬಹುದಾದ ಧಾಟಿಯಲ್ಲಿ ಇರುವುದರಿಂದ ಅವರ ಈ ಸಂಕಲನದಲ್ಲಿಯೇ ಇರುವ ಇತರೆ ಉತ್ಕೃಷ್ಟ ಕತೆಗಳ ಸಾಲಿಗೆ ಸೇರುವುದಿಲ್ಲ.

‘ಮುರ್ಕಲಸಿನ ಮರ’ ಕತೆಯು ಚಿಕ್ಕದಾದರೂ ಅದು ಹೊಮ್ಮಿಸುವ ಅರ್ಥಸಾಧ್ಯತೆಗಳಿಂದಾಗಿ ಗಮನ ಸೆಳೆಯುವಂತಹ ಕತೆಯಾಗಿದೆ. ಈ ಕತೆಗೆ ವ್ಯಂಗ್ಯವೇ ಜೀವಾಳವಾಗಿದೆ. ಒಂದು ಸಣ್ಣ ಘಟನೆ ಕಥನದ ಮಾಂತ್ರಿಕತೆಯ ಸ್ಪರ್ಶದಲ್ಲಿ ಕತೆಯಾಗಿರುವುದು ಇದರ ವಿಶೇಷ. ಮುರ್ಕಲಸಿನ ಮರವನ್ನು ಧರ್ಮಪ್ಪ ತನ್ನ ಅಪ್ಪ ಬಾಳಪ್ಪನ ಅರಿವಿಗೆ ಬರದೆ ಬುಡೇನ್ ಸಾಬ್ರಿಗೆ ಮಾರಿರುತ್ತಾನೆ. ನಂತರ ಈ ವಿಷಯ ಬಾಳಪ್ಪನಿಗೆ ಗೊತ್ತಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಆದರೆ ಬುಡೇನ್ ಸಾಬರು ಅದನ್ನು ಕಡೆದು ಉರುಳಿಸಲು ಅದರ ಬಳಿ ಹೋದಾಗ ಅದರ ಬುಡದಲ್ಲಿ ಇದ್ದ ಅಸ್ಪಷ್ಟ ದೇವರ ವಿಗ್ರಹ ಮತ್ತ ಅದಕ್ಕೆ ಹಚ್ಚಿದ್ದ ಅರಿಷಿಣ, ಕುಂಕುಮವನ್ನು, ಮುಡಿಸಿದ್ದ ಹೂವುಗಳನ್ನು ನೋಡಿ, ಕಡಿಯದೆ ಧರ್ಮಪ್ಪನ ಬಳಿಹೋಗಿ ತನಗೆ ಮೋಸಮಾಡಿರುವುದಾಗಿ ಬೈಯುತ್ತಾನೆ. ಒಂದು ಪುಟ್ಟ ಘಟನೆಯಲ್ಲಿ ಧರ್ಮ ಇಣುಕಿನೋಡಿ , ಘಟನೆಯನ್ನು ಸಂಕೀರ್ಣಮಾಡುವುದನ್ನು ತುಂಬಾ ಮಾರ್ಮಿಕವಾಗಿ ಕತೆಗಾರರು ಚಿತ್ರಿಸಿದ್ದಾರೆ. ಆದರೆ ಕೊನೆಯ ಎರಡು ಸಾಲುಗಳು ಕತೆಯ ಒಳಗಡೆ ನಿರೂಪಕ ನೇರವಾಗಿ ಪ್ರವೇಶಮಾಡಿ ಕತೆಗೆ ಒಂದು ಅಭಿಪ್ರಾಯವನ್ನು ಕೊಡುವುದು-‘ನಿನ್ನೆ ಸಂಜೆ ಅಪ್ಪನ ತರಾತುರಿಯ ಹಿಂದಿನ ಮರ್ಮದ ಅರವಾಗುತ್ತಲೇ ಧರ್ಮಪ್ಪ ಬಿಳುಚಿಕೊಂಡ’- ಕತೆಯು ಪಡೆಯಬಹುದಾಗಿದ್ದ ಅರ್ಥಸಾಧ್ಯತೆಗಳನ್ನು ಮುರಿಟಿದಂತಾಗಿದೆ.

‘ಜೇನು ಬೇಲಿ’ ಕತೆಯು ಒಬ್ಬ ಮನುಷ್ಯನ ಸಾಧನೆಯ ವರದಿಯನ್ನು ಮಾಡಿದಂತಿದೆ. ಓದುತ್ತ ಇದು ತೇಜಸ್ವಿಯ ಕತೆಗಳನ್ನು ನೆನಪಿಸಿದರೂ, ಅವರ ಕತೆಗಳಲ್ಲಿನ ನಿಗೂಢತೆ, ಸಂಕೀರ್ಣತೆಗಳು ಇದಕ್ಕೆ ದಕ್ಕದೆ, ಕೇವಲ ಒಂದು ನಿರೂಪಣೆಯಾಗಿ ತೋರುತ್ತದೆ. ಕಥನವಾಗಿ ಅಷ್ಟೊಂದು ಯಶಸ್ಸು ಗಳಿಸುವುದಿಲ್ಲವೆನ್ನಬಹುದು. ಆದಾಗ್ಯೂ ಇಲ್ಲಿ ಬಳಕೆಯಾಗಿರುವ ಸಂಯಮದ ಭಾಷೆ ಓದುಗರನ್ನು ತನ್ನ ಸಮ್ಮೋಹನ ತೆಕ್ಕೆಗೆ ಎಳೆದುಕೊಳ್ಳುತ್ತದೆ. ವಿಶ್ವನಾಥನೆಂಬ ವಿದ್ಯಾವಂತ ಯುವಕ ಹಳ್ಳಿಯನ್ನು ತೊರೆಯದೇ ಅಲ್ಲಿಯೇ ಒಂದು ಸುಂದರವಾದ ಮತ್ತು ತುಸು ಭಿನ್ನವಾದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾನೆ. ತನ್ನ ಹೊಲದ ಸುತ್ತ ತಂತಿ ಬೇಲಿಯನ್ನು ತೆಗೆಸಿ, ಸುತ್ತೂರ ವಿವಿಧ ರೀತಿಯ ಹೂಗಿಡ, ಮರಗಳನ್ನು ನೆಟ್ಟು ಅಲ್ಲಿ ಸ್ವಾಭಾವಿಕ ಜೇನು ಕೃಷಿಯನ್ನು ಮಾಡಲು ಮುಂದಾಗುವುದೇ ಕತೆಯ ಮುಖ್ಯ ಅಂಶ. ಕತೆಯ ಆಶಯ ಮೆಚ್ಚವಂತಹದ್ದಾದರೂ ಕತೆಯಾಗಿ ಸಂಕೀರ್ಣತೆಯನ್ನು ಪಡೆದುಕೊಳ್ಳುವಲ್ಲಿ ಸ್ವಲ್ಪ ಮಂಕಾಗುತ್ತದೆ.

ಗುಡ್ಡದ ಕೂಸು ಕತೆಯಲ್ಲೂ ಸಹ ಕತೆಗಾರ ರಾಜಕೀಯವಾಗಬಹುದಾಗಿದ್ದ ಕತೆಯನ್ನು ತುಂಬಾ ಸೂಕ್ಷ್ಮವಾಗಿ ಕೇವಲ ಅದನ್ನು ಧ್ವನಿಸುವಂತೆ ಮಾಡಿರುವುದು ಕತೆಯ ಒಂದು ಹೆಗ್ಗಳಿಕೆ. ಆಧುನಿಕತೆ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ಆಕ್ರಮಣಗಳು ಮನುಷ್ಯನ ನಾಶದ ಆರಂಭ. ಕತೆಯ ಆಶಯವು ಪ್ರಾರಂಭದ ಪ್ಯಾರಾದಲ್ಲಿ ಚಿತ್ರಿತವಾಗಿದೆ. ಗುಡ್ಡದ ಮಲ್ಲೆದೇವರಿಗೆ ಪೂಜೆ ಮಾಡಿಕೊಂಡು ಪ್ರಕೃತಿಯ ಜೊತೆ ಸಾಮರಸ್ಯದ ಜೀವನವನ್ನು ನಡೆಸುತ್ತಿರುವ ಹೊತ್ತಲ್ಲಿ ಕಲ್ಲ ಗಣಿಗಾರಿಕೆಯು ಅವನ ಬದುಕಿನ ಪ್ರಶಾಂತತೆಯನ್ನೇ ಹಾಳು ಮಾಡುತ್ತದೆ.

ವಸ್ತು ಮತ್ತು ನಿರೂಪಣೆಯ ದೃಷ್ಟಿಯಿಂದ ಅದು ಕಾರಣ ಕತೆಯು ಸಂಕಲನದಲ್ಲಿಯೇ ಭಿನ್ನವಾಗಿ ನಿಲ್ಲುತ್ತದೆ. ಒಂದೇ ತೆಕ್ಕೆಯಲ್ಲಿ ಜಾತಿ, ಧರ್ಮ, ಈರ್ಷೆ, ಒಳರಾಜಕೀಯ, ಹುನ್ನಾರಗಳನ್ನು ಇಟ್ಟುಕೊಂಡಿದೆ. ಮತ್ತು ಕತೆಯ ನಿರೂಪಣಾ ಶೈಲಿಯೂ ಸಹ ಎಲ್ಲಿಯೂ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುವುದಿಲ್ಲ. ಕತೆಗಾರ ಇಲ್ಲಿ ನಿರುಮ್ಮಳವಾಗಿ ಕತೆಯನ್ನು ಹೇಳಿದ್ದಾರೆ. ಗಂಗಾಧರಯ್ಯ ಅವರ ಸೊಗಸಾದ ಗದ್ಯ ಇಲ್ಲಿ ತನ್ನ ಪರಕಾಷ್ಟೆಯನ್ನು ಮುಟ್ಟಿದೆ ಎಂದೇ ಹೇಳಬೇಕು. ಗದ್ಯಕ್ಕೆ ಕಾವ್ಯಾತ್ಮಕ ಗುಣವಿರುವ ಸಾಲುಗಳು ಕತೆಯ ಅಂದವನ್ನಷ್ಟೇ ಅಲ್ಲದೆ ಪಾತ್ರಗಳ ಮನೋಭೂಮಿಕೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಉದಾಹರಣೆಗೆ ಸಂಜೆಯ ವರ್ಣನೆ: ‘ಸಂಜೆ ಗತ್ತಲು ತಳವೂರುತ್ತಿತ್ತು’ ಎನ್ನುವುದು ಮತ್ತು ‘ಮಂಡಿಯುದ್ದಕ್ಕೆ ಬೆಳೆದಿದ್ದ ಹೊಲದೊಳಗಿನ ರಾಗಿ ಪೈರು ತಿಂಗಳುಗಟ್ಟಲೆ ಮಳೆಯ ಮುಖವನ್ನು ಕಾಣದೆ ಬಾಡಿ ನಿಂತಿತ್ತು. ಭೋಗವಾಗಿ ಬಿರಿದಿದ್ದ ತೆನೆಗಳೆಲ್ಲಾ ಒಡೆಬತ್ಲಾಗಿ ಗೋಣು ಬಗ್ಗಿಸಿದ್ದವು’ ಎನ್ನುವ ಸಾಲುಗಳು. ಈಗಾಗಲೇ ನಡೆದು ಹೋಗಿರುವ ಘಟನೆಗಳನ್ನು ಹಿಮ್ಮುಖ ಚಲನೆಯಲ್ಲಿ ಕತೆಯ ಕಥಾನಾಯಕ ಚನ್ವೀರ ಮತ್ತು ಅವನ ಹೆಂಡತಿ ಟೀನಾ ನೆನಪಿಸಿಕೊಳ್ಳುವುದರ ಮೂಲಕ ಸಾಗುತ್ತದೆ.

ಕತೆಯಲ್ಲಿ ಜರುಗುವ ಘಟನಾವಳಿಗಳು ಕ್ಷಣ ತೇಜಸ್ವಿಯ ‘ಚಿದಂಬರ ರಹಸ್ಯ’ವನ್ನು ನೆನಪಿಸುತ್ತವೆ. ಇವೆರಡರ ಕಥಾಭಿತ್ತಿ ಅಂತರ್ ಧರ್ಮೀಯ ವಿವಾಹವಾಗಿದ್ದರೂ ಅವುಗಳು ಪಡೆದಿರುವ ಆಯಾಮಗಳು ಬೇರೆಯದೇ ಆಗಿವೆ. ಚಿದಂಬರ ರಹಸ್ಯಕ್ಕೆ ಅನೇಕ ಜ್ಞಾನ ಶಾಖೆಗಳ ಅಧ್ಯಯನದ ಅವಶ್ಯಕತೆ ಇದ್ದಹಾಗೆ ಈ ಕತೆಗೆ ಇಲ್ಲದಿದ್ದರೂ, ಸಮಾಜಶಾಸ್ತ್ರೀಯ ನೆಲೆಯಲ್ಲಿಯೇ ಸಾಗುವ ಕತೆ ಚನ್ವೀರನ ಹಳ್ಳಿಯಲ್ಲಿ ಜರುಗುವ ಮತ್ತು ತನಗೆ ಸುತ್ತಿಕೊಂಡು ನಡೆಯುವ ಘಟನೆಗಳು ಮತ್ತು ಅನುಭವಗಳು ತುಂಬಾ ಸಾಂದ್ರವಾಗಿ ಮೂಡಿಬಂದಿವೆ.

ಭಾರತದ ಸಂದರ್ಭದಲ್ಲಿ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ವಿವಾಹವಾಗುವುದೆಂದರೆ ಅದೊಂದು ಕ್ರಾಂತಿಕಾರಕ ಹೆಜ್ಜೆಯೇ ಸರಿ. ಅಂತಹ ಒಂದು ಪ್ರಯತ್ನವನ್ನು ಇಲ್ಲಿಯ ಕಥಾನಾಯಕ ಚನ್ನ್ವೀರ ಮಾಡುತ್ತಾನೆ. ಮೊದಲಿಗೆ ತನ್ನ ತಾಯಿಯ ವಿರೋಧವನ್ನು ಎದುರಿಸಬೇಕಾದರೂ ಅದನ್ನು ಹೇಗೋ ನಿಭಾಯಿಸುತ್ತಾನೆ. ಆದರೆ ಮುಂದೆ ತನ್ನ ಹಳ್ಳಿಯ ಪಟ್ಟಭದ್ರಹಿತಾಸಕ್ತಿಗಳು ಮತ್ತು ಮತೀಯ ಭಾವನೆಯ ಮನಸ್ಸುಗಳು ಅವನನ್ನು ವಿನಾಕಾರಣ ಜಾತಿ ಮತ್ತು ಧರ್ಮದ ವಿಷಯಕ್ಕೆ ಎಳೆದು ತಂದು ಅವನು ಕಟ್ಟಿಕೊಂಡಿರುವ ಸುಂದರ ಬದುಕನ್ನು ನಾಶಮಾಡುವ ಹುನ್ನಾರ ಮತ್ತು ಮನುಷ್ಯನ ಒಳಗೆ ಅಡಗಿರುವ ಕೇಡನ್ನು ತುಂಬಾ ನಿರುಮ್ಮಳವಾಗಿ ಚಿತ್ರಿಸಲಾಗಿದೆ. ಕೊನೆಗೆ ಅವನು ಊರನ್ನೇ ಬಿಡುವ ಪ್ರಸಂಗ ಬರುತ್ತದೆ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅವರು ಊರು ಬಿಟ್ಟು ಹೋಗುವ ಪ್ರಸಂಗ ಕತೆಯಲ್ಲಿ ಒಂದು ಧ್ವನಿಪೂರ್ಣವಾದ ಅರ್ಥವನ್ನು ಕೊಡುವುದರ ಮೂಲಕ ಮುಕ್ತಾಯವಾಗುತ್ತದೆ: ಚನ್ವೀರನ ಬೆನ್ನಲ್ಲಿ ಮುಖ ಹುದುಗಿಸಿದ ಟೀನಾ ಬಿಕ್ಕಿದಳು. ಅದು ಚನ್ವೀರನನ್ನೂ ಅಳುವಿನ ದಾರಿಗೆಳೆಯಿತು. ಅವರಿಬ್ಬರ ಅಳು ಆ ಕಾಡು ದಾರಿಯಲ್ಲಿ ಅನಾಥವಾಗಿ ಅಸುನೀಗುತ್ತಿತ್ತು.

‘ಅಜ್ಜಿಯ ಕೋಲು’ ಕತೆಯು ವಾಸ್ತವವಾದಿ ನಿರೂಪಣೆಯಾದರೂ ಅದಕ್ಕೆ ಮಾಂತ್ರಿಕ ವಾಸ್ತವತೆ ಸೇರಿಕೊಂಡು ವಿಶಿಷ್ಟಕತೆಯಾಗಿ ಮೂಡಿಬಂದಿದೆ. ಅಜ್ಜಿಯ ಕೋಲು ಕಾಲವನ್ನು ಅರಿಯಲು, ನೆನಪುಗಳನ್ನು ಮೊಗೆಯಲು ಸಂಕೇತವಾಗಿದೆ. ಅಜ್ಜಿಯ ಕೋಲು ಮೊಮ್ಮಗಳಿಗೆ ಅನೂಹ್ಯ ಕುತೂಹಲ ಮತ್ತು ಕಾಲ್ಪನಿಕ ಜಗತ್ತಿಗೆ ಹಾರಿಹೋಗುವ ಸಾಧನವಾದರೆ, ಅವಳ ಪೋಷಕರಿಗೆ ಅದು ಅವಳ ಹುಚ್ಚುತನದ ಪರಮಾವಧಿಯಾಗಿ ತೋರುವುದು ವಿಪರ್ಯಾಸ. ಇದೆ ಥರದ ಇನ್ನೊಂದು ಕತೆ ‘ಚಿಕ್ಕನ ನವಿಲ ಮರಿಗಳು’. ಚಿತ್ತದ ಗೊತ್ತ ಮುಟ್ಟದೆ ಕತೆಯು ಅಲೌಕಿಕ ಬದುಕನ್ನು ಹಿಡಿಯುವ ಒಂದು ಪ್ರಯತ್ನಮಾಡುತ್ತದೆ.

ಹೀಗೆ ಗಂಗಾಧರಯ್ಯ ತಮ್ಮ ಕತೆಗಳಲ್ಲಿ ಡಿಕೆನ್ಸ್ ಥರ ಪಾತ್ರಗಳನ್ನು ಮತ್ತು ಹಾರ್ಡಿ ಥರ ನಿಸರ್ಗ, ಬದುಕಿನ ಛಿದ್ರ ಮುಖಗಳನ್ನು, ಮನುಷ್ಯಲೋಕದ ಸಣ್ಣತನ, ತಲ್ಲಣಗಳನ್ನು ತಮ್ಮದೇ ಆದಂತಹ ಭಾಷೆಯನ್ನು ದಕ್ಕಿಸಿಕೊಂಡು ಚಿತ್ರಿಸಿ, ಕನ್ನಡದ ಕಥಾ ಸಾಹಿತ್ಯದಲ್ಲಿ ಒಂದು ಗಟ್ಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.