`ಇಂಡೊನೇಶಿಯ’ ಅಂದ ಕೂಡಲೇ ಥಟ್ ಅಂತ ನೆನಪಾದ ‘ಸೀ ಫುಡ್’ ಹಾವಳಿಯಿಂದ ಜಕಾರ್ತದ ನಮ್ಮ ಪ್ರಯಾಣದಲ್ಲಿ ಮನೆಯವರೆಲ್ಲರೂ ಮೂಟೆ ಮೂಟೆಯ ಕಲ್ಪನೆ ತರಿಸುವಷ್ಟು `ರೆಡಿ ಟು ಈಟ್’ಗಳನ್ನು ರೆಡಿ ಮಾಡಿ ಕಳುಹಿಸಿದ್ದರು. ವಿದೇಶಕ್ಕೆ ಹೋದಾಗ ಸದಾಶಿವನ ಧ್ಯಾನದಂತೆ ನಮ್ಮ ಮನೆಯ ಊಟವೋ, ಅದಲ್ಲದಿದ್ದರೂ ದೇಶೀಯ ತಿನಿಸುಗಳಿಗಾಗಿ ಮನ ಹಪಹಪಿಸುತ್ತದೆ. ಜಕಾರ್ತದಲ್ಲಿ ಇಂಡಿಯನ್ ರೆಸ್ಟೋರೆಂಟ್ ನ ದೂರದಾಸೆಯಿಂದ ನಗರ ಸಂಚಾರವನ್ನು ಕೈಗೊಂಡು, ಯಾವುದೇ ರೂಲ್ಸ್ ಗಳಿಲ್ಲದ ಜಕಾರ್ತದ ದಟ್ಟ ಟ್ರಾಫಿಕ್ ನ ನಡುವೆ (ಸಿಗ್ನಲ್ ಗಳು ವಿರಳವಾಗಿದ್ದ ಕಾರಣ) ನುಗ್ಗಿ, ನುಸುಳಿ ಅತ್ತಿತ್ತ ಕಣ್ಣು ಹಾಯಿಸುತ್ತಿರುವಾಗ ಸಾಕ್ಷಾತ್ ಗಣೇಶನ ದರ್ಶನವಾಬೇಕೇ!.. ಅದೂ ಪ್ರಸಾದದ ಜೊತೆಗೆ!.. ಅಂತು ಪುಷ್ಕಳ ಭೋಜನದ ಸವಿಯಿಂದ ಪುಳಕಿತರಾಗಿ ಹತ್ತಿರ ಬಂದಾಗ ಹೋಟೆಲ್ ಗಣೇಶ- ಎ ಕಲ್ಚರ್ ಎಂಬ ಶಿರೋನಾಮೆ ಅಷ್ಟೇ ಹಿತಕರವಾಗಿತ್ತು. ಬೆಂಗಳೂರಿನ ಹೋಟೆಲ್ ಗಳ `ಸಾಗರ’ವನ್ನೋ ಅಲ್ಲೊಂದು ಇಲ್ಲೊಂದರಂತೆ ಭವಿಸುತ್ತಲೇ ಇರುವ ‘ಭವನ’ಗಳನ್ನೋ, ನೋಡಿ ಬೇಸತ್ತಿರುವಾಗ ಇಂಡೊನೇಶಿಯಾದ ಜಕಾರ್ತದಲ್ಲಿರುವ ಹೋಟೆಲ್ `ಗಣೇಶ- ಒಂದು ಸಂಸ್ಕೃತಿ’ ಮನಸೆಳೆಯದಿರಲು ಸಾಧ್ಯವೇ? ಗಣೇಶ ಒಂದು ಸಂಸ್ಕೃತಿಯಾಗಬಹುದೆಂಬ ಕಲ್ಪನೆ ಇದುವರೆಗೂ ಹೊಳೆದಿರಲಿಲ್ಲ.

ನಾನಾ ಬಗೆಯ ಗಣೇಶನ ಚಿತ್ರಗಳನ್ನು ನೋಡುತ್ತಾ, ಒಳಗೆ ಹೋದಾಗ ಭಾರತೀಯರಿರಬಹುದೆಂಬ ನಮ್ಮ ಊಹೆ ಸುಳ್ಳಾದರೂ, `ನಮಸ್ತೇ’ ಎಂಬ ತಾಯ್ನುಡಿಯೊಂದಿಗೆ ಆಪ್ತವಾಗಿ ಬರಮಾಡಿಕೊಂಡಾಗ ಮನತುಂಬಿ ಬಂತು. ಹೋಟೆಲ್ ಪಂಜಾಬಿ ಶೈಲಿಯದಾಗಿದ್ದು ಹಳೆಯ ಚಿತ್ರಕಲೆಗಳು, ಹಳೆಯ ಮಧುರ ಹಾಡು ಹಿತವಾಗಿತ್ತು. ಎಮ್.ಟಿ.ಆರ್ ನ ಸಾಂಬಾರ್ ರೈಸ್, ರಸಂ ರೈಸ್, ಮಸಾಲ ರೈಸ್ ತಿಂದೂ ತಿಂದೂ ಕೊನೆಗೆ ಎಲ್ಲಾ ಒಂದೇ ರೈಸ್ ಎಂದೆನಿಸಿ ಬೇಸರ ಬಂದರೂ ರೋಟಿಯ ಜೊತೆಗೆ ಬಿರಿಯಾನಿ ರೈಸನ್ನು ಬಿಡಲಾಗಲಿಲ್ಲ. ಎಷ್ಟೆಂದರೂ ದಕ್ಷಿಣ ಭಾರತೀಯರಿಗೆ ಅನ್ನದ ಮೋಹ ಸ್ವಲ್ಪ ಹೆಚ್ಚೇ ಅಲ್ಲವೇ? ಅಂತೂ ಕರಿಕಡುಬು, ಮೋದಕ, ಕಜ್ಜಾಯಗಳಿಲ್ಲದೆ ರೋಟಿ ಬಿರಿಯಾನಿಗಳೇ ನಾಲಗೆಯನ್ನು ಜೀವಂತಗೊಳಿಸಿದವು. ಜೊತೆಗೆ ಒಂದೆರಡು ಭಾರತೀಯರ ಆಗಮನದಿಂದ ನಿಕಟ ಬಂಧುಗಳನ್ನೇ ನೋಡಿದ ಆನಂದವೂ ಸೇರಿಕೊಂಡಿತು.

ಇತ್ತೀಚೆಗೆ ಅನೇಕ ಧಾರಾವಾಹಿ ಸಿನೆಮಾಗಳ ಶೀರ್ಷಿಕೆಯ ಶೈಲಿಯಲ್ಲಿ, ಕೆಳಗೆ ಸಣ್ಣ ಅಕ್ಷರಗಳಲ್ಲಿ ಬರೆದ ಪುಟ್ಟ ಸಾಲುಗಳೋ ಅಥವ ಒಂದೆರಡು ಪದಪುಂಜಗಳಿರುವುದನ್ನೋ ಕಾಣಬಹುದು. ಅದು ಧಾರಾವಾಹಿಯ ಸಂದೇಶವನ್ನು ಪುಷ್ಟೀಕರಿಸಿದರೂ ಕೊನೆಗೆ ನದಿ ಮೂಲ ಋಷಿ ಮೂಲದಂತೆ ಇದರ ಮೂಲವನ್ನೂ ನೀವು ಹುಡುಕಬಾರದು!.. ಇದೇ ಶೈಲಿಯಲ್ಲಿ ಹೋಟೇಲ್ ಗಣೇಶದ ಎದುರುಗಡೆ ‘ಎ ಕಲ್ಚರ್’ ಎಂಬ ಪದಪುಂಜದಿಂದ ಹೊಟ್ಟೆಯ ಜೊತೆಗೆ ಚಿಂತನೆಗೂ ಸ್ವಾಧಿಷ್ಟ ಭೋಜನ ಲಭ್ಯವಾಗಿ ಸಂಸ್ಕೃತಿಗೂ ಗಣೇಶನಿಗೂ ಯಾವ ಋಣಾನುಬಂಧ ಇರಬಹುದೆಂಬ ಅನೇಕ ಕಲ್ಪನೆಗಳು ಮನಸ್ಸಿಗೆ ಬಂದು ಎಲ್ಲಾ ದೇವಾನುದೇವತೆಗಳ ಹೆಸರಿನ ಮುಂದೆ `ಒಂದು ಸಂಸ್ಕೃತಿ’ ಎಂಬ ಪದಪುಂಜವನ್ನು ಸೇರಿಸುತ್ತಾ ಹೋದೆ. ಯಾಕೋ ನಮ್ಮ ಗಣೇಶನಿಗೇ ಸರಿಯಾಗಿ ಒಪ್ಪಬಹುದಾದದ್ದು ಎಂದೆನಿಸಿತು. ಆದರೆ ಮುಂದೆ ಅಲ್ಲಿನ ಶೈಲಿಯಲ್ಲಾಗಲೀ, ತಿನಿಸುಗಳಲ್ಲಾಗಲೀ, ಗಣೇಶನಿಗೂ ಸಂಸ್ಕೃತಿಗೂ ಯಾವ ಕೊಂಡಿಯೂ ಸಿಗಲಿಲ್ಲ.

ನಮ್ಮ ಸರ್ವ ವಿಘ್ನ ವಿನಾಶಕ ಆದಿವಂದಿತ ಇತ್ಯಾದಿ ನಾಮಗಳಿಂದ ಕರೆಯಿಸಿಕೊಳ್ಳುವ ಗಣೇಶ ಶುಭ ಕಾರ್ಯಗಳಿಗೆ ಬಂದೊದಗುವ ವಿಘ್ನಗಳ ಆತಂಕವನ್ನೋಡಿಸಿ, ಮಾನಸಿಕ ಬಲವನ್ನು ನೀಡಿ ಸಲಹುತ್ತಾನೆ. ಪ್ರಕೃತಿ ಪುರುಷರ ಸಮನ್ವಯತೆಯನ್ನು ಸಾರುವ ಅವನ ರೂಪ, ಆನೆ ಇಲಿ ಹಾವುಗಳೊಡನೆ ಒಡನಾಡಿಗಳಂತಿರುವ ಉದಾರ ಮನೋಭಾವ, ಪ್ರಕೃತಿಯ ಎಲ್ಲಾ ಜೀವಿಗಳಿಗೂ ಆತ್ಮ ಗೌರವ, ಸಮಾನ ಹಕ್ಕು. ಇದೆಯೆಂಬವನ ನೈತಿಕತೆ ಪ್ರಶಂಸನೀಯವಾದದ್ದು. ಆನೆಯನ್ನು ವಾಹನವನ್ನಾಗಿಸದೆ ಇಲಿಯನ್ನು ಆಯ್ಕೆ ಮಾಡಿಕೊಂಡು ದೇಹಬಲಕ್ಕಿಂತ ಮನೋಬಲದ ಪ್ರಾಮುಖ್ಯ ಮೂಡಿಸಿ ಅನಂತ ವಿಶ್ವದಲ್ಲಿ ಹುಲುಮಾನವನಾದಿ ಎಲ್ಲವೂ ಶ್ರೇಷ್ಠ ಎಂಬ ನಿಲುವಿನಲ್ಲಿ ಎಂತಹ ಸಾಮರಸ್ಯ!..

ಇನ್ನು ತಿನ್ನುವ ವಿಷಯಕ್ಕೆ ಬಂದರೆ, `ತಿನ್ನುವುದಕ್ಕಾಗಿಯೇ ಬದುಕುತ್ತಾನೆ’ ಎಂದು ಅನ್ನಿಸಿದರೂ, ಅನ್ನಮಯಕೋಶ ತೃಪ್ತಿಯಾದರೇ ಮಾತ್ರ ವಿಜ್ಞಾನಮಯಕೋಶದ ಅನುಭವ ಸಾಧ್ಯವಲ್ಲವೇ? ಹೊಟ್ಟೆ ತುಂಬಿದುದರ ಪರಿಣಾಮವೇ ದರ್ಶನವಲ್ಲದೆ ಇನ್ನೇನು? ನಮ್ಮ ವೇದ ಉಪನಿಷತ್ ಗಳಲ್ಲೂ ಇಂತಹ ಭೋಗಗಳಿಗೆ ಪ್ರಾಮುಖ್ಯತೆ ಇರುವುದು ನಮಗೆ ತಿಳಿದಿದೆ. ಅಷ್ಟಕ್ಕೂ ಇಂದಿನ ಮನುಷ್ಯನ ವ್ಯಾಪಾರಗಳು, ಯುದ್ಧಗಳು, ಎಲ್ಲಾ ಬೆಳವಣಿಗೆಗೆ ಆದಿ ಮಾನವನ ಆಹಾರಾನ್ವೇಷಣೆಯೂ ಒಂದು ಮೂಲ ಕಾರಣ. ಹೊಟ್ಟೆಹೊರೆಯುವ ಸಮಸ್ಯೆಯ ಅಗತ್ಯ ಅನಿವಾರ್ಯತೆಗಳಿಂದ ದೇಹ ಮನಸ್ಸು ಬುದ್ಧಿ ವಿಕಸಿತಗೊಂಡಿತು. ಆದ್ದರಿಂದ ಆದಿಮಾನವನಿಗೆ ಅಲೆಮಾರಿಯಾಗಿ ಒಂದು ಕಡೆ ನೆಲೆಯೂರಿ ಸಂಸ್ಕೃತಿ ನಾಗರಿಕತೆಯನ್ನು ಬೆಳೆಸುವಲ್ಲಿ ತೀರ ಸಹಜವಾದ ಆಹಾರಾನ್ವೇಷಣೆಯೂ ಒಂದು ಮುಖ್ಯ ಅಂಶವಾಯಿತು. ಹಾಗೆಯೇ ಅಮೇರಿಕಾದ ಖ್ಯಾತ ಮನಶ್ಶಾಸ್ತ್ರಜ್ಞ ಅಬ್ರಾಹಂ ಮ್ಯಾಸ್ಲೋ, ಪಿರಮಿಡ್ ಸಂರಚನೆಯ ಮೂಲಕ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಮನದಟ್ಟಾಗುವಂತೆ ವಿವರಿಸಿ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿರುವ ಆಹಾರಪೂರೈಕೆಯು ಮುಂದಿನ ಎಲ್ಲಾ ಬೆಳವಣಿಗೆಗೆ ಮೂಲ ಎಂದಿದ್ದಾನೆ. ಆದ್ದರಿಂದ ನಮ್ಮ ಗಣೇಶನ ಕರಿಕಡುಬು ಮೋದಕಗಳೆಲ್ಲಾ ಯಾವ ಮಹಾ ಸಂಗತಿಗಳಲ್ಲ. ಆ ಹೊಟ್ಟೆಯೂ ತುಂಬಿ ತುಳುಕುವ ಧಾನ್ಯ ಸಿರಿಯ ಸಂಕೇತ. ನಿಧಾನವೇ ಪ್ರಧಾನ ಎಂಬ ಗಣೇಶನ ನಡಿಗೆ, ಇಲಿಯ ಮೇಲೆ ಕುಳಿತು ಸಂಚರಿಸುವ ಸಂಯಮ, ಇವುಗಳೆಲ್ಲಾ ಅನುಕರಣೀಯ.

ಇಂಡೋನೇಶಿಯಾದಲ್ಲಿ ಹಿಂದೂ, ಬೌದ್ಧ ಧರ್ಮಗಳ ಆಳ್ವಿಕೆಯ ಪ್ರಭಾವದಿಂದ ಅದರ ಬೇರುಗಳಲ್ಲೇ ನಮ್ಮ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದು. ಅನೇಕ ಕಡೆಗಳಲ್ಲಿ ಗಣೇಶನೂ ಸೇರಿದಂತೆ ಕೃಷ್ಣ ಪಾಂಡವರ, ಭಗವದ್ಗೀತೆಯೆ ಕೆತ್ತನೆಗಳೂ ಇವೆ. ಇನ್ನು ಇಲ್ಲಿನ ‘ಆತ್ಮಜಯ’ ‘ತ್ರಿಶಕ್ತಿ’ ‘ಇಂದ್ರಪ್ರಸ್ಥ’ ‘ಸನಾತಧರ್ಮ’ ಎಂಬ ವಿಶ್ವವಿದ್ಯಾಲಯಗಳ ಹೆಸರುಗಳು ನಮಗೆ ಸನಾತನ ಧರ್ಮೇತಿಹಾಸದ, ಗುರುಕುಲಗಳ ನೆನಪನ್ನು ತರಿಸಿ ಪುಳಕಗೊಳಿಸುವುದರಲ್ಲಿ ಸಂದೇಹವಿಲ್ಲ. ಇವರ ‘ಗರುಡ ಏರ್ ಲೈನ್ಸ್’ ಸ್ವಚ್ಚಂದ ಹಕ್ಕಿಯಂತೆ ಹಾರಾಡುವಾಗ ವಿಷ್ಣುವಿನ ವಾಹನ ಗರುಡನನ್ನು ನೋಡಿದಷ್ಟೇ ಆನಂದವಾಗುತ್ತದೆ.

ಇಂತಿಪ್ಪ ಸಮಯದೊಳು ಒಂದು ಬೇಸರದ ಘಟನೆಯೂ ನಡೆದು ಹೋಯಿತು. ಇಂಡೊನೇಶಿಯಾದ ಬೀದಿ ಬೀದಿಗಳಲ್ಲಿ ನೀವು ಪಾಸ್ ಪೋರ್ಟ್ ನ ಅಗತ್ಯವಿಲ್ಲದೆ ಸಿಮ್ ಕಾರ್ಡನ್ನು ಪಡೆಯಬಹುದು!.. ಸುರಕ್ಷತೆಯ ದೃಷ್ಟಿಯಿಂದ ಈ ಕುರಿತು ಇಲ್ಲಿಯವರನ್ನು ಪ್ರಶ್ನಿಸಿದರೆ ಒಮ್ಮೆಲೆ ನಮ್ಮ ಸಂಸ್ಕೃತಿಯ ಕುರಿತೇ ಹರಿಹಾಯಬೇಕೇ!… ‘ಸ್ಲಂ ಡಾಗ್ ಮಿಲಿಯನೇರ್’ ಸಿನೆಮಾದಲ್ಲಿನ ಭಾರತದ ಚಿತ್ರಣವೇ ನಿಜವೆಂದು ನಂಬಿದ್ದ ಅವರಿಗೆ, ನಿಜಸ್ಥಿತಿಯ ಬಗ್ಗೆ ಎಷ್ಟು ಹೇಳಿದರೂ ಒಪ್ಪುವ ಮನಸ್ಥಿತಿಯಲ್ಲಿ ಅವರಿರಲಿಲ್ಲ. ಅಂತಹ ಕೊಳಚೆಗಳು ಇಲ್ಲಿದ್ದರೂ ಭಾರತ ದಟ್ಟ ದರಿದ್ರ ದೇಶವೆಂಬುದೇ ಅವರ ಭಾವನೆ. ಕೇವಲ ಒಂದು ದೃಷ್ಟಿಕೋನದಿಂದ ಸ್ವಲ್ಪ ಹೆಚ್ಚೆನಿಸುವಷ್ಟೇ ಸಮರ್ಥಿಸಿಕೊಂಡು ನಮ್ಮ ದೇಶದ ವ್ಯಕ್ತಿತ್ವಕ್ಕೆ ಧಕ್ಕೆಯನ್ನು ತಂದ ಆ  ಸಿನೆಮಾವನ್ನು ಶಪಿಸುತ್ತಾ ಹೋದೆವು. ಭಾರತೀಯರ ಉದಾರ ಮನೋಭಾವ ಸಹಿಷ್ಣುತೆಗಳ ಅರಿವಿರುವವರು ಈ ತೆರನಾದ ಅಭಿಪ್ರಾಯವನ್ನು ಹೊಂದಲು ಸಾದ್ಯವಿಲ್ಲ ಎಂದೆನಿಸಿತು.

ಗಣೇಶ ಹಾಗೂ ಸಂಸ್ಕತಿಯ ವಿಷಯಗಳು ಅನೇಕ ಯೋಚನೆಗಳ ಹರಿವಿಗೆ ಕಾರಣವಾಯಿತು. ಹೋಟೆಲ್ ಯಜಮಾನರ, ಗಣೇಶ ಹಾಗೂ ಸಂಸ್ಕೃತಿಯ ಪರಿಕಲ್ಪನೆ ಇನ್ನೇನೋ ಇರಬಹುದು. ನಿಮ್ಮೆಲ್ಲರ ಅಭಿಪ್ರಾಯವೂ ಭಿನ್ನವಿರಬಹುದು. ಅವರವರ ಭಾವಕ್ಕೆ ಎನ್ನೋಣವೇ? ಕೆಲವು ಸಲ ಇಂತಹ ಸಣ್ಣ ಸಂಗತಿಗಳು ಚಿಂತನೆಗೆ ಹಚ್ಚಿ ಈ ಲಹರಿಗಳು ರಸಸ್ವಾದವನ್ನು ನೀಡುವುದು ಸುಳ್ಳಲ್ಲ. ನಿಸರ್ಗದೊಂದಿಗೆ ಐಕ್ಯವಾಗಿ ಒಂದಾಗಿ ಬದುಕುವ ಕಲೆಯನ್ನು, ಬದುಕಿಗೆ ಸಿಹಿ ಮೋದಕ ಕಡುಬುಗಳ ಸವಿಯನ್ನು, ಸಂಯಮ ಸಹಿಷ್ಣುತೆಗಳ ಪರಿಯನ್ನು ನೀಡುವ ಗಣೇಶ ಸಂಸ್ಕೃತಿಯ ರೂವಾರಿ ಎನ್ನಬಹುದು.