ಎಲ್ಲರೂ ತಮ್ಮಷ್ಟಕ್ಕೆ ತಾವು ಮರೆತು ಹೋದವರಂತೆ ಗಪ್ ಚುಪ್! ಪ್ರತಿದಿನದ ಸಂತೆಯಾದ್ದರಿಂದ ಅಲ್ಲಿ ಅವರಿಗೆ ಎಲ್ಲವೂ ಯಾಂತ್ರಿಕ. ಆಕಳಿಕೆ ಬಂದರೂ ಕಸುವಾಕಿ ಬಿಗಿ ಹಿಡಿಯುತ್ತಾರೆ. ನೊಣವೊಂದು ಮೊಣಕಾಲು ತುರಿಸಿದರೂ ಹಲ್ಲುಕಚ್ಚಿ ಹಿಡಿಯುತ್ತಾರೆ. ನೆಟ್ಟ ನಿಂತ ಕಾಲು, ಸೆಟೆದು ನಿಂತ ಭಂಗಿ ಊಹೂಂ ಅಲುಗುವಂತಿತ್ರಿಕೆಯೊಂದಿಗೆ ಮಾತು ನಿಲ್ಲಿಸಿದವಳನ್ನು ಗಮನಿಸಿದ ಹಿರೇಮಣಿ ಜೋರಾಗಿ ಗದರುವಂತೆ ಸವಧನ್ ಗದರಿಸುತ್ತಾನೆ. ಕಾಲುಗಳು ಪಕ್ಕಕ್ಕೆ ಬಡಿದುಕೊಳ್ಳುತ್ತವೆ. ನೊಣ ಸೊಳ್ಳೆಗಳು ಭಯ ಬಿದ್ದು ಮಾರು ದೂರ ಓಡುತ್ತವೆ. ಅದೇ ಜೋರು ಧ್ವನಿಯಲ್ಲಿ ನಾಡಗೀತೆಗಾಗಿ ಕೂಗುತ್ತಾನೆ. ಯಥಾರಾಗದಲ್ಲಿ ನಾಡಗೀತೆ ಸಾಗುತ್ತದೆ.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

ಆ ಕಣ್ಣುಗಳಲ್ಲಿ ಮುಂಜಾನೆಯ ಸುಖ ನಿದ್ದೆಯ ಅಮಲು ಇನ್ನು ಆರಿರುವುದಿಲ್ಲ. ಆದರೆ ಕೆಲವು ಕಣ್ಣುಗಳಂತೂ ಕೂಳು ಬೇಯಿಸಿದ ಕಾರಣಕ್ಕೆ ಹೊಗೆಯೊಂದಿಗೆ ಜಗಳವಾಡಿ ಕೆಂಪು ಬಣ್ಣ ಬಳಿದುಕೊಂಡರೂ ಬಿಳಿ ಬಣ್ಣದ ನಾಟಕವಾಡಿವೆ. ಪುಸ್ತಕಗಳ ಮೂಟೆ ಹೊತ್ತು ಬಂದ ಬೆನ್ನಿನ ಹಿಂದೆ ಸಣ್ಣ ಎಳೆಯ ನರವೊಂದು ನಲುಗುತ್ತಿದೆ. ಮುಂದೆ ನಿಂತಿರುವ ಮೇಷ್ಟ್ರುಗಳ ಸಾಲಿನಲ್ಲಿ ಗಣಿತದ ಪಾಠ ಹೇಳುವವರು ಇಲ್ಲದಿರುವುದು ಖುಷಿ ನೀಡಿದೆ. ನಿನ್ನೆ ಮಳೆಯಲ್ಲಿ ನೆನೆದು ಹೋದ ಕಾರಣಕ್ಕೆ ತೊಯ್ದು ತೊಪ್ಪೆಯಾದ ಯೂನಿಫಾರಂ ಬೆಳಗ್ಗೆಯಾದರೂ ಒಣ ನಗು ಬೀರದ ಕಾರಣ ಬಣ್ಣದ ಬಟ್ಟೆ ಮೈಮೇಲಿತ್ತು. ಆಟದ ಮಾಸ್ತರು ಯಾಕೊ ಅವಳನ್ನೇ ಗಮನಿಸಿದಂತಿದೆ. ಅಮ್ಮ ಬೆಳಗ್ಗೆಯೇ ಕೂಲಿಯ ಹಾದಿ ಹಿಡಿದ ಕಾರಣಕ್ಕೆ ಹೊಟ್ಟೆಗೆ ಅನ್ನ ಬೀಳದೇ ಬಂದು ನಿಂತುಕೊಂಡ ಆತನ ತಲೆ ಒಂಚೂರು ತಿರುಗಿದೆ. ಸಾವಧನ್ ವಿಶ್ರಮ್ ಆತುರದಲ್ಲೇ ಸಾಗಿವೆ. ‘ಏಕ್’ ಅಂತ ಜೋರಾಗಿ ಅರಚಿದಾಗ ಬಂದ ಸೌಂಡ್‌ಗೆ ಮಾಸ್ತರ್ ಗುಡ್ ಅನ್ತಾರೆ. ಅರಚುವುದಕ್ಕೆ ಗುಡ್ ಸಿಗುವುದು ಇಲ್ಲಿ ಮಾತ್ರ! ಗೆರೆ ಕೊರೆದಂತೆ ಸಾಲು. ಒಂಚೂರು ಆಚೆ ಈಚೆ ನೀಡಿದರೆ, ಭುಜ ಕಾಣಿಸಿಕೊಂಡರೆ ‘ರಪ್’ ಅನ್ನುವ ಶಬ್ದ ಬಂದ ನಂತರ ಕೈ ಚುರು ಚುರು ಅನ್ನಲು ಆರಂಭಿಸುತ್ತದೆ. ತಣ್ಣನೆ ಗಾಳಿಯೂ ಇನ್ನು ನಿದ್ದೆಯಿಂದ ಪೂರ್ತಿ ಎದ್ದಿಲ್ಲ! ಇವರ ‘ಏಕ್’ ಎಂಬ ಅಬ್ಬರಕ್ಕೆ ಅಲ್ಲಿ ಎಳೆಗೂಸು ಸರ‍್ಯ ಬೆಚ್ಚಿದ್ದಾನೆ. ‘ಏಕ್’ ಅಂದ ಮರು ಕ್ಷಣ ಜನಿಸುವ ಮೌನ ಕಪ್ಪಗೆ ಹೆಪ್ಪುಗಟ್ಟಿದೆ.

ಎರೆಯ ಹೊಲದಲ್ಲಿ ಅರಳಿದ ಮಲ್ಲಿಗೆಯಂತೆ ಎತ್ತಿಕಟ್ಟಿದ ಎರಡು ಜಡೆಗಳಿಗೆ ಬೆಳ್ಳನೆಯ ಟೇಪುಗಳು ಸುರುಳಿಯಾಗಿ ಗಂಟು ಕಟ್ಟಿಕೊಂಡು ಕೂತಿವೆ. ಮೀನು ಒಂದೆಡೆ ಮುಖ ಮಾಡಿ ಹೊರಟಂತೆ ಅವರ ಕಾಲಿನ ಶೂಗಳು ಮುಂದೆ ನೋಡುತ್ತಿವೆ. ಹುಡುಗರ ಇನ್‌ಶರ್ಟ್ ತಬ್ಬಿ ಹಿಡಿದುಕೊಂಡಿರುವ ಬೆಲ್ಟ್ ಬಕಲ್ ನಗುತ್ತಿದೆ. ಕಣ್ಣು ಅಲುಗಿದಷ್ಟು ಶಿಸ್ತು! ನಿಶ್ಯಬ್ದದೊಳಗೊಂದು ನಿಶ್ಯಬ್ದ ಹುಡುಕುತ್ತಿದೆ ಸನ್ನಿವೇಶ. ಕಿವಿ ಸ್ವಲ್ಪ ದೊಡ್ಡದು ಮಾಡಿಕೊಂಡರೆ ಪ್ರತಿ ಹೈಕಳ ಉಸಿರಾಟವೂ ಕೇಳಬಹುದು.

ಮುಂದಿರುವ ಮೇಷ್ಟ್ರುಗಳ ಉಟ್ಟ ಬಟ್ಟೆಯು ಇಸ್ತ್ರಿಯ ಹಿಂಸೆಗೆ ಗೆರೆಗಳನ್ನು ನಿಮಿರಿಸಿಕೊಂಡು ನಿಂತಿದೆ. ಗೆರೆಗಳಿಂದ ಅಲ್ಲೊಂದು ಗಾಂಭೀರ್ಯತೆ ಜನಿಸಿದೆ. ಬೆಲ್ಟ್ ಹರಿದು ಹೋಗುವಂತೆ ಅದರೊಳಗೆ ಹೊಟ್ಟೆ ಒದ್ದಾಡುತ್ತಿದೆ. ಕ್ರಾಫ್ ಬಾಚಿಕೊಂಡು ಮುಂದೆ ಸಾಲಾಗಿ ನಿಂತಿದ್ದಾರೆ. ನಿಮ್ಮೆಲ್ಲರ ಧ್ವನಿ ನನ್ನ ಬಳಿಯೇ ಇದೆ ಅನ್ನುವಂತೆ ಹಿರೇಮಣಿ ‘ಕ್ಲಾಸ್ ಸವಧನ್..’ ಎಂದು ಕೂಗುತ್ತಾನೆ. ಮೌನಕ್ಕೆ ಸಿಡಲು ಬಡಿದಂತೆ ‘ಏಕ್’ ಅಬ್ಬರಿಸುತ್ತದೆ. ಮತ್ತವರನ್ನು ವಿಶ್ರಮ್ ಸ್ಥಿತಿಗೆ ತಂದು ಖರ್ಚು ಮಾಡಿದ ಉಸಿರನ್ನು ಹಿರೇಮಣಿ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾನೆ. ಎರಡು ಜಡೆಯ ಹುಡುಗಿ ಹರಳು ಹುರಿದಂತೆ ಪತ್ರಿಕೆಯಲ್ಲಿ ಅಚ್ಚಾಗಿರುವ ಅಕ್ಷರಗಳಿಗೆ ತನ್ನ ಧ್ವನಿ ಹಚ್ಚಿ ಆಚೆ ಬಿಡುತ್ತಾಳೆ. ಸರ್ಕಾರದ ನಾಟಕಗಳು, ಕಳ್ಳತನಗಳು, ಮೋಸಗಳು, ಬಿಟ್ಟಿ ಸಲಹೆಗಳು, ಆಶ್ವಾಸನೆಗಳೇ ತುಂಬಿರುವ ಪತ್ರಿಕೆ ಆಕರ್ಷಕವಾಗುತ್ತದೆ. ಕೊನೆಯಲ್ಲಿ ಬರುವ ಒಂದೊಳ್ಳೆ ಸುಭಾಷಿತ ಡಲ್ ಹೊಡೆದಂತಾಗುತ್ತದೆ!

ಎಲ್ಲರೂ ತಮ್ಮಷ್ಟಕ್ಕೆ ತಾವು ಮರೆತು ಹೋದವರಂತೆ ಗಪ್ ಚುಪ್! ಪ್ರತಿದಿನದ ಸಂತೆಯಾದ್ದರಿಂದ ಅಲ್ಲಿ ಅವರಿಗೆ ಎಲ್ಲವೂ ಯಾಂತ್ರಿಕ. ಆಕಳಿಕೆ ಬಂದರೂ ಕಸುವಾಕಿ ಬಿಗಿ ಹಿಡಿಯುತ್ತಾರೆ. ನೊಣವೊಂದು ಮೊಣಕಾಲು ತುರಿಸಿದರೂ ಹಲ್ಲುಕಚ್ಚಿ ಹಿಡಿಯುತ್ತಾರೆ. ನೆಟ್ಟ ನಿಂತ ಕಾಲು, ಸೆಟೆದು ನಿಂತ ಭಂಗಿ ಊಹೂಂ ಅಲುಗುವಂತಿತ್ರಿಕೆಯೊಂದಿಗೆ ಮಾತು ನಿಲ್ಲಿಸಿದವಳನ್ನು ಗಮನಿಸಿದ ಹಿರೇಮಣಿ ಜೋರಾಗಿ ಗದರುವಂತೆ ಸವಧನ್ ಗದರಿಸುತ್ತಾನೆ. ಕಾಲುಗಳು ಪಕ್ಕಕ್ಕೆ ಬಡಿದುಕೊಳ್ಳುತ್ತವೆ. ನೊಣ ಸೊಳ್ಳೆಗಳು ಭಯ ಬಿದ್ದು ಮಾರು ದೂರ ಓಡುತ್ತವೆ. ಅದೇ ಜೋರು ಧ್ವನಿಯಲ್ಲಿ ನಾಡಗೀತೆಗಾಗಿ ಕೂಗುತ್ತಾನೆ. ಯಥಾರಾಗದಲ್ಲಿ ನಾಡಗೀತೆ ಸಾಗುತ್ತದೆ. ಬಾಯಿ ಒಣಗುವಂತೆ ಹಾಡುವವರಿಗೆ ಬರೀ ತುಟಿ ಚಲನೆಯವರು ಜೊತೆಯಾಗುತ್ತಾರೆ. ಕೇಳುವವರಿಗೆ ಕೋರಂ ಅಂದ್ರೆ ಇದು ಅನ್ನಿಸುವಂತೆ ಭಾಸವಾಗುತ್ತದೆ.

ಗೀತೆ ತಗ್ಗಿನಡೆಗೆ ಹರಿಯುವ ನೀರಿನಂತೆ ಸಾಗುತ್ತಿದ್ದರೆ ಮನಸ್ಸು ಕೂಡ ಎಲ್ಲೋ ಹರಿಯುತ್ತಿರುತ್ತದೆ. ಮೊದಲನೇ ಅವಧಿಯಲ್ಲಿ ಕಾದಿರುವ ಏಟುಗಳು, ಬರೆಯದ ಹೊಂ ವರ್ಕ್‌ಗಳು, ಅಪ್ಪ ಕೊಟ್ಟ ಹತ್ತು ರೂಪಾಯಿಯ ಖರ್ಚು ಮಾಡುವ ಯೋಜನೆ, ಸಂಜೆ ಅಮ್ಮ ಮಾಡಬಹುದಾದ ಚಕ್ಕುಲಿಗಳು, ಬೆಳಗ್ಗೆ ಹಠವಿಡಿದು ತಂದಿದ್ದ ಬುಗುರಿ ಎಲ್ಲವೂ ಒಂದಾದ ನಂತರ ಒಂದರಂತೆ ಅಥವಾ ಒಟ್ಟಿಗೆ ಮನಸ್ಸಿನಲ್ಲಿ ಬಂದು ಬಂದು ಹಾಜರಾತಿ ತೆಗೆದುಕೊಳ್ಳುತ್ತಿದ್ದರೆ, ತುಟಿ ಯಾಂತ್ರಿಕ ಗೀತೆಗೆ ಸಹಕರಿಸಿರುತ್ತದೆ.

ಮೂವತ್ತು ಸೆಕೆಂಡ್‌ಗಳಷ್ಟು ಗ್ಯಾಪ್ ತೆಗೆದುಕೊಂಡ ತಂಡ ರಾಷ್ಟ್ರಗೀತೆಗೆ ತೊಡಗುತ್ತದೆ. ಮಾಸ್ತರ್‌ಗಳು ಚಪ್ಪರಕ್ಕೆ ನಿಲ್ಲಿಸಿದ ಕಂಬಗಳಂತೆ ನಿಂತಿದ್ದಾರೆ. ಹೆಡ್ ಮಾಸ್ತರ್ ಗತ್ತು ಹುಡುಗರ ಛೇಷ್ಟೆಗಳನ್ನು ಹುಡುಕುತ್ತದೆ. ಅಂತು ಇಂತು ಎರಡು ಕಂತುಗಳಲ್ಲಿ ಬಾಯಿ ಒಣಗಿಸಿಕೊಂಡು ನಿಲ್ಲುತ್ತಾರೆ. ಕ್ಯಾಲೆಂಡರ್ ಮೇಲೆ ಒಂದು ಕೆಲಸದ ದಿನ ಜಂಪ್ ಮಾಡುತ್ತದೆ. ಎಲ್ಲಾ ಮಕ್ಕಳು ತಮ್ಮ ಖಾತೆಯಲ್ಲಿರುವ ಇಷ್ಟು ನಿರ್ದಿಷ್ಟವೆನ್ನುವಂತಿರುವ ದಿನಗಳಲ್ಲಿ ಒಂದನ್ನು ಅಲ್ಲೇ ಕಳೆದುಕೊಳ್ಳುತ್ತಾರೆ. ಶಿಸ್ತಿನಲ್ಲಿ ಬಿಗಿದು ಹಾಡಿಸಲಾಗಿರುತ್ತದೆ.

‘ಸರ್ವಜನಾಂಗದ ಶಾಂತಿಯ ತೋಟ’ ಸಾಲಿಗೆ ಒಂದು ಪಂಚ್ ಕೊಟ್ಟು ಹಾಡಿದ್ದ ಹೈದನೊಬ್ಬ ನಾಳೆಯೋ ನಾಡಿದ್ದೋ ಒಂದು ಜಾತಿಯ ನಾಯಕನಾಗುತ್ತಾನೆ. ತಾಯಿ ಭಾರತಿಗೆ ಜೈ ಅಂದು ಅಲ್ಲೆ ಮರೆತು ದೇಶದ ಉಸಾಬರಿ ನಂಗ್ಯಾಕೆ ಅಂತ ಮುಂದೆ ಯಾವತ್ತೋ ಗತ್ತಿನಲ್ಲಿ ಮಾತಾಡುತ್ತಾನೆ.

ಇಲ್ಲಿ ಅದೇ ನೆಲ ಪ್ರತಿ ವರ್ಷ ಬರುವ ಕಂದಮ್ಮಗಳ ಪಾದಗಳನ್ನು ಮುದ್ದಿಸಿ ಮುಂಜಾವಿನ ತಂಗಾಳಿಯಲ್ಲಿ ಗೀತೆಗಳನ್ನು ಹಾಡಿಸುತ್ತದೆ. ಅದೇ ಮಾಸ್ತರ್‌ಗಳ ಅದೇ ಗಂಭೀರತೆ ಉಳಿದಿರುತ್ತದೆ. ಹಾಡಿನ ರಾಗವೂ ಬದಲಿಲ್ಲ. ಕಟ್ಟುತ್ತಿದ್ದ ಟೇಪಿನ ಬಣ್ಣ, ಹಾಕುತ್ತಿದ್ದ ಬೆಲ್ಟಿನ ಬಣ್ಣ ಹೊಸದಾಗಿರುತ್ತದೆ. ಅದೇ ಹಾಡು, ಅದೇ ದೇಶ. ಅದೇ ಜನ. ದೇಶ ನಿಂತಲ್ಲೇ ಓಡುತ್ತದೆ. ಪ್ರಾರ್ಥನೆಯೂ ಸಾಗುತ್ತದೆ. ತರಗತಿಗಳು ಮುಗಿಯುತ್ತವೆ. ಎಲ್ಲಾ ಮುಗಿದ ಮೇಲೆ ಬೀಗ ಕಾದಿರುತ್ತದೆ. ಜೇಡ ಹೊಂಚು ಹಾಕುತ್ತದೆ.