ಅದೆಷ್ಟು ಮಾತಿನ ಮಲ್ಲ ! ಆದರೆ ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳು ತೇವವಾಗುತ್ತವೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ.
ಜಯಂತ ಕಾಯ್ಕಿಣಿ ಕಥಾ ಸಂಕಲನ “ಬಣ್ಣದ ಕಾಲು” ಕುರಿತು ಸ್ಮಿತಾ ರಾಘವೇಂದ್ರ ಬರಹ

ಕಾಯ್ಕಿಣಿ ಅವರು ಕಥೆ ಹೇಳುವ ರೀತಿಯೇ ಚಂದ. ಯಾವ ಹೆಚ್ಚುಗಾರಿಕೆಯೂ ಇಲ್ಲದೇ ಅವರ ನಿಲುವಿನಷ್ಟೇ, ವ್ಯಕ್ತಿತ್ವದಷ್ಟೇ ಸರಳವಾಗಿ ಹೇಳುತ್ತ ಹೋಗುತ್ತಾರೆ. ಈ ಕಥಾಸಂಕಲನದಲ್ಲಿ ಒಟ್ಟೂ ಹದಿಮೂರು ಕಥೆಗಳಿವೆ.

ಪುಂಡ ಮಾಣಿಯ ಸಹಿಸಲಸಾಧ್ಯವಾದ ಪುಂಡತನಗಳು ಊರಲ್ಲೆಲ್ಲ ತಲೆ ಎತ್ತದಂತೆ ಮಾಡಿದ ಕಿಡಿಗೇಡಿತನದಿಂದ ಬೇಸತ್ತ ಅಪ್ಪ, ಅಮ್ಮ, ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲೆಲ್ಲೋ ದೂರದ ಮುಂಬೈ ಗಲ್ಲಿಯ ರಿಮಾಂಡ್ ಹೋಮಿಗೆ ಕಳುಹಿಸಲು ಬಂದಿಳಿದ ರೀತಿ, ಅಲ್ಲಿನ ಗಲ್ಲಿಗಳ ಸತ್ಯ ದರ್ಶನವನ್ನು ಮಾಡಿಸುತ್ತಾರೆ ಲೇಖಕರು. ಕಾಲಿಲ್ಲದ ಕಾಕನಿಗೆ ಕಾಲು ಕೊಳ್ಳುವ ಆ ಪುಟ್ಟ ಪುಂಡ ಮಗುವಿನ ಆಸೆ ತಾನ್ಯಾಕೆ ಇಲ್ಲಿ ಬಂದೆನೆಂದು ಅರಿಯದ ಮುಗ್ಧತೆ. ಯಾರನ್ನೂ ನೆಚ್ಚಿಕೊಳ್ಳದ ಮೂಕ ಮನೆಗಳು, ತನ್ನದೇ ವಾರಿಗೆಯ ಚಾಯ್ ಕಿತ್ತಲಿ ಹಿಡಿದ ಕೈಗಳು. ಗೋಣಿಪಾಟು ಹೊತ್ತು ಅಲೆಯುವ ಪುಟ್ಟ ಬೆನ್ನುಗಳು. “ಚಂದು” ಎಂಬ ಪುಂಡನನ್ನು ದಿಗ್ಭ್ರಾಂತಿಗೊಳಿಸುತ್ತದೆ.

(ಜಯಂತ ಕಾಯ್ಕಿಣಿ)

ಅದೆಷ್ಟು ಮಾತಿನ ಮಲ್ಲ !  ಆದರೆ ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳು ತೇವವಾಗುತ್ತವೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ. ಅನಾಯಾಸವಾಗಿ ಒಂದು ತಲೆಮಾರಿನ ಜನ-ಜೀವನವನ್ನು ಬಿಚ್ಚಿಡುತ್ತಾ ಬರಪೂರ ಭಾವನೆಗಳನ್ನು ಎರಕಹೊಯ್ದು ಸುಮ್ಮನೇ ಓದುಗರೆದೆಗೆ ತಳ್ಳಿದ ಪರಿ ಅದ್ಭುತ. ಚಿಕ್ಕ ಪುಟ್ಟ ಅಂಶಗಳನ್ನೂ ಸವಿವರವಾಗಿ ಹೇಳುವ ಕಾಯ್ಕಿಣಿ ಅವರ ಕಥನ ಶೈಲಿ ಮನೋಜ್ಞ.

ಇಂದೋ ನಿನ್ನೇಯೋ ನಡೆದ ಘಟನೆಗಳಂತೆ ಪ್ರತೀ ಸನ್ನಿವೇಶಗಳೂ ತಾಜಾ ತಾಜಾ. ಓದಿನ ಪ್ರತೀ ತಿರುವಿನಲ್ಲೂ ನಮ್ಮದೊಂದು ಖಾಸಾ ಪಾತ್ರ ಸಿಕ್ಕೇ ಸಿಗುತ್ತದೆ. ಗೋಕರ್ಣದ ಬೀದಿಯಲ್ಲಿ ಬಣ್ಣ ಬಣ್ಣದ ಕನಸಿನೊಂದಿಗೆ ಕಥೆ ಹುಟ್ಟಿದರೆ ಮಿರ್ಜಾನ ಕೋಟೆಯೊಳಗೆ ಸುಮ್ಮನೇ ಭಗ್ನವಾಗುತ್ತವೆ.. ಅಘನಾಶಿನಿ ಇಕ್ಕೆಲಗಳಲ್ಲಿ ಚಿಗುರಿ ಗುಡಿಸಲಿನ ಹಿತ್ತಲ ಬಾವಿಯಲಿ ಮಿಂದೆದ್ದು ಕಪ್ಪಗೆ ಸಾರಿಸಿದ ಒಲೆಯ ಮೇಲೆ ಘಮ್ ಎನ್ನುವ ಸೊಪ್ಪಿನ ಸಾರಿನಂತೆ ಮತ್ತೆ ಮತ್ತೆ ಸವಿಯಲು ಅಣಿ ಮಾಡುತ್ತದೆ.

ಅಯ್ಯೋ ಮುಗಿದೇ ಹೋಯಿತಾ ಎನ್ನುವ ಮನಸು ರಾತ್ರಿ ಬಸ್ಸು ಬಾರದೇ ಹೋದಾಗಿನ ಬೇಸರದಷ್ಟು ಕಾಡುತ್ತದೆ. ಕಾಯ್ಕಣಿಯವರ ಕಥೆಗಳು ಹೇಳಿ ಅರ್ಥೈಸುವಂತಹದ್ದಲ್ಲ ಅದನ್ನು ಓದಿಯೇ ಅನುಭವಿಸಬೇಕು.

(ಕೃತಿ: ಬಣ್ಣದ ಕಾಲು, ಲೇಖಕರು: ಜಯಂತ್ ಕಾಯ್ಕಿಣಿ, ಪ್ರಕಾಶಕರು: ಅಂಕಿತ ಪ್ರಕಾಶನ, ಪುಸ್ತಕದ ಬೆಲೆ: 95/-)