ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.” ಎಂದು ಕೂಗುತ್ತ ಮಾರಾಟದ ಸವಾರಿ ಹೊಂಟಾಗ, ಅನೇಕ ಮಡಿವಂತ ಬ್ರಾಹ್ಮಣರು ತಕರಾರು ತೆಗೆದು ತಮ್ಮ ಗಲ್ಲಿಯಲ್ಲಿ ಮೀನು ತೆಗೆದುಕೊಂಡು ಹೋಗದಂತೆ ಎಚ್ಚರಿಕೆಯನ್ನು ನೀಡಿದ ನಂತರ ಅಮೀನಸಾಹೇಬರು ಫಜೀತಿಯಿಂದ “ತೋಬಾ ತೋಬಾ” ಎಂದು ಕ್ಷಮೆ ಕೇಳಿದ್ದ ಪ್ರಸಂಗಗಳೂ ನಡೆದು ಹೋದವು.
ವೈ.ಎಸ್. ಹರಗಿ ಬರೆದ ಹೊಸ ಕತೆ “ಜಲ ಪ್ರವಾಹ ಮತ್ತು ಮೀನು ಮಾರುವ ಅಮೀನ ಸಾಹೇಬರು” ನಿಮ್ಮ ಓದಿಗೆ

 

ಮುಖದ ಮುಂದಿನ ನಕಾಬು ಸರಿಸಿ, ನಮಾಜು ಮಾಡಲು, ಪ್ರಸನ್ನಳಾಗಿ ಕುಳಿತ ಮಮ್ತಾಜ್ ಬೇಗಂಳಂತೆ; ಮುಂಜಾನೆಯ ಮುಂಬೆಳಗು ಆಗ ತಾನೇ ಕ್ರಮೇಣ ಮಲ್ಲಿಗೆಯಂತೆ ಅರಳುತ್ತಿತ್ತು. ನಸುಕಿಲ್ಲಿ ಲಗುಬಗೆಯಿಂದ ಎದ್ದು; ಮೀನು ಹಿಡಿಯುವ ದಾವಂತದಿಂದ, ಬಿದಿರು ಬಡಿಗಿಗೆ ಎಳೆದು ಕಟ್ಟಿದ ಗಾಳವನ್ನು ಹೆಗಲ ಮೇಲಿರಿಸಿಕೊಂಡು, ಪ್ಲಾಸ್ಟಿಕ್ ಡಬ್ಬದಲ್ಲಿ ಎರೆಹುಳುಗಳನ್ನು ಸಂಗ್ರಹಿಸಿಕೊಂಡು, ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಅಮೀನಸಾಬರು ಕೃಷ್ಣಾ ನದಿಗೆ ಕೋಟೆಯಂತೆ ಕಟ್ಟಿದ ಆಲಮಟ್ಟಿ ಹಿನ್ನೀರಿನ ದಂಡೆಯ ಮೇಲೆ ತದೇಕ ಚಿತ್ತದಿಂದ ಮೀನಿನ ಹೆಜ್ಜೆಯನ್ನು ಗುರುತಿಸುವ ನಿಪುಣ ಮೀನುಗಾರನಂತೆ ಉಸಿರು ಬಿಗಿ ಹಿಡಿದು ಜಪ್ಪಿಸಿ ಕುಳಿತಿದ್ದರು. ಆದರೆ, ನಸುಕಿಂದಲೇ ಹಳೆಯ ಲಡಕಾಸು ಗಾಳಕ್ಕೆ ಮಳೆಹುಳು(ಎರೆಹುಳು) ಸಿಕ್ಕಿಸಿ ಗಾಳವನ್ನು ನೀರಿಗೆ ಬಿಟ್ಟು ಮೀನು ಹಿಡಿಯಲು ಹರ ಸಾಹಸ ಪಡುತ್ತಲೇ ಇದ್ದರೂ ಹೇಳಿಕೊಳ್ಳುವಷ್ಟು ಮೀನು ಸಿಕ್ಕಿರಲಿಲ್ಲ. ಅಮೀನ ಸಾಹೇಬರು ನೀರಿಗೆ ಬಿಟ್ಟಿದ್ದ ಗಾಳವು ಅಲೆಗಳಿಗೆ ಒಂದಿಷ್ಟು ಅತ್ತಿತ್ತ ನಲುಗಿದರೆ ಸಾಕು ಗಾಳಕ್ಕೆ ಮೀನು ಬಿದ್ದಿರಬೇಕೆಂಬ ಹಳವಂಡದಿಂದ ಬರ್ರನೇ ಗಾಳವನ್ನು ಮೇಲಕ್ಕೆತ್ತಿ ಪರಿಶೀಲನೆ ಮಾಡುತ್ತಿದ್ದರು. ಆದರೆ ಗಾಳಕ್ಕೆ ಸಿಕ್ಕಿಸಿದ ಹುಳುವನ್ನು ಮೀನುಗಳು ಬಹಳ ಚಾಣಾಕ್ಷತೆಯಿಂದ ತಿಂದು ಬರೀ ಗಾಳವನ್ನು ಬಿಟ್ಟು ಹೋಗುತ್ತಿದ್ದರಿಂದ, ನಿರಾಸೆಯಿಂದ ಕಳ್ಳ ಮೀನಿಗೆ ಮತ್ತು ನೀರ ಅಲೆಗಳ ಕುಚೇಷ್ಟೆಗೆ ಶಪಿಸುತ್ತಿದ್ದರು. “ಅರೇ.. ಅಲ್ಲಾ!!.. ನಂದಕ್ಕೂ ತಕದೀರ ಬಹುತ ಖರಾಬ ಐತಿ.. ನೀರಿನ ತೆರೆಗಳೂ ನನಗೆ ಹುಚು ಪ್ಯಾಲಿ ಮಾಡಾಕತ್ಯಾವು..” ಎಂದು ಲೊಚಗುಡುತ್ತಾ ಆಶಾವಾದಿಯಾಗಿ ಮತ್ತೆ ಗಾಳಕ್ಕೆ ಹುಳು ಸಿಗಿಸಿ ಮೀನು ಶಿಕಾರಿಗೆ ಗಾಳ ಹಾಕುತ್ತಿದ್ದರು.

ಇಲ್ಲಿಯ ತನಕ ಅನ್ನ ನೀರು ಕೊಟ್ಟು ಸಾಕಿ ಸಲುಹಿದ ಕೃಷ್ಣೆಯು ಕಳೆದ ತಿಂಗಳು ಇದ್ದಕ್ಕಿದ್ದಂತೆ ಮುನಿಸಿಕೊಂಡಿದ್ದಳು. ಮನುಷ್ಯರ ಮುಠ್ಠಾಳತನಕ್ಕೆ ರೌದ್ರಾವತಾರ ತಾಳಿದ ಕೃಷ್ಣಾ ನದಿ ತಾಯಿಯು ಮನುಷ್ಯ ಕುಲದ ಮೇಲೆ ಫತ್ವಾ ಹೊರಡಿಸಿ ಪ್ರವಾಹದಿಂದ ಉಕ್ಕಿ ಜಲಾಘಾತದಿಂದ ಜನ ಜಾನುವಾರಗಳನ್ನು ಆಪೋಶನ ತೆಗೆದುಕೊಂಡ ನಂತರ ಅಮೀನ ಸಾಹೇಬರ ಬದುಕಿನ ದಿಕ್ಕು ಸೂತ್ರ ಹರಿದ ಗಾಳಿಪಟದಂತೆ, ರಂದ್ರವಾಗಿ ಮುಳುಗಿ ಹೋಗುತ್ತಿರುವ ತೆಪ್ಪದಂತೆ ಮೂರಾಬಟ್ಟಿಯಾಗಿತ್ತು. ರಂಜಾನ್ ಹಬ್ಬ ಬಂದರೆ ಸಾಕು ಅಸಹಾಯಕರಿಗೆ ಜಕಾತ ನೀಡುವದು, ಕೈಲಾದ ಮಟ್ಟಿಗೆ ಬಡ ಬಗ್ಗರಿಗೆ ಮಾಂಸದ ದಾನ(ಗೋಷ್) ಮಾಡುವದರಲ್ಲಿ ಸಂತಸ ಪಡುತ್ತಿದ್ದ ಅಮೀನ ಸಾಹೇರ ಬಗ್ಗೆ ಜಮಾತನಲ್ಲಿ ವಕೆಲವು ಮಂದಿ ಗುಟ್ಟಾಗಿಯೇ ಹೊಗಳುತ್ತಿದ್ದರು. ಅಮೀನಸಾಹೇಬರಿಗೆ ಅವರ ಸಮಾಜದ ಜನರು ಯಾವಾಗಲೂ ಪ್ರೀತಿ, ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಆದರೆ, ಹನುಮವ್ವ ಎಂಬ ಪರಧರ್ಮದ ಯುವತಿಯನ್ನು ಮದುವೆಯಾಗಿದ್ದಕ್ಕೆ “ಕಾಫೀರ” ಎಂದು ಘೋಷಣೆ ಮಾಡಿದ್ದರಿಂದ, ಅಮೀನಸಾಹೇಬರ ಮನೆತನವನ್ನು ಜಮಾತನಿಂದ ಬಹಿಷ್ಕರಿಸಲಾಗಿತ್ತು. ಹನುಮವ್ವ ಎನ್ನುವ ಕೆಳಜಾತಿಯ ಯುವತಿಯನ್ನು ಮದುವೆಯಾಗಿ ಆಕೆಗೆ ಹುಸೇನಬೀ ಎಂದು ಹೆಸರಿನಿಂದ ಕರೆಯಲಾಗುತ್ತಿತ್ತು. ಕ್ರಮೇಣ ರೂಢಿಯಲ್ಲಿ ಹುಸೇನವ್ವಳೆಂದು ಕರೆಯಲಾಯಿತು.

ಬಾಲ್ಯದಿಂದಲೂ ತಂದೆ ಹಜರತ್ ಸಾಹೇಬರೊಂದಿಗೆ ಕೃಷ್ಣಾ ನದಿಗೆ ಇಳಿದು ಹಿಂದಿನ ರಾತ್ರಿ ಬಲೆ ಬೀಸಿ ಮಾರನೆಯ ದಿನ ನೂರಾರು ಕಿಲೋ ಮೀನು ಸಂಗ್ರಹಿಸಿ, ಕೈ ತುಂಬಾ ಕಾಂಚಾಣ ಎಣಿಸುತ್ತಿದ್ದ ಆಗಿನ ದೌಲತ್ ಅಮೀನ ಸಾಹೇಬರಿಗೆ ಇನ್ನು ನೆನಪು ಮಾತ್ರ. ಜಾಗತೀಕರಣ, ಉದಾರೀಕರಣಗಳ ಬ್ರಹ್ಮ ರಾಕ್ಷಸರು ನೆಲ ಜಲಗಳ ಮೇಲೆ ತಮ್ಮ ದಾಳಿಯನ್ನು ಮಾಡಿದ್ದರಿಂದ… ಕಾಲ ಕಾಲಕ್ಕೆ ಬಂದ ಆಯಾ ಸರಕಾರಗಳು ಮೀನುಗಾರಿಕೆಯನ್ನು ದೇಶೀ ಮತ್ತು ವಿದೇಶೀ ಬಂಡವಾಳಶಾಹಿಗಳಿಗೆ ಟೆಂಡರ್ ಕೊಟ್ಟಿದ್ದರಿಂದ, ಬಂಡವಾಳ ಶಾಹಿಗಳ ಯಾಂತ್ರೀಕೃತ ದೋಣಿಗಳು ನೀರಿಗಿಳಿದು ಮೀನಿನ ರಾಶಿಯನ್ನೇ ರಾಕ್ಷಸನಂತೆ ಹೊತ್ತು ದಡಕ್ಕೆ ತಂದು ಹಾಕಿ ಮಾರು ಕಟ್ಟೆಗೆ ಸಾಗಿಸುತ್ತಿದ್ದುದರಿಂದ ಅಮೀನಸಾಹೇಬರಂತ ಚಿಕ್ಕ ಪುಟ್ಟ ಮೀನುಗಾರರು ಆಣೆಕಟ್ಟೆಯ ಹಿನ್ನೀರಿನಲ್ಲಿ ಮೀನುಗಾರಿಕೆಯನ್ನು ನಡೆಸುವದು ಅಪರಾಧವಾಗಿತ್ತು.

ಮೀನುಗಾರಿಕೆಯು ಕೈ ತಪ್ಪಿದ ನಂತರ ಅಮೀನಸಾಹೇಬರ ಆರ್ಥಿಕ ಪರಿಸ್ಥಿತಿಯು ತೀರಾ ಖರಾಬ ಆಗಿತ್ತು. ಮದುವೆಯಾಗಬೇಕಾದ ಮಗಳು ರೆಹನಾ ಬೇಗಂ ಅಮೀನ ಸಾಬರ ಪಾಲಿಗೆ ಬಹುದೊಡ್ಡ ಸವಾಲ್ ಆಗಿದ್ದಳು. ಮನೆಯಲ್ಲಿ ಹೆಂಡತಿ ಹುಸೇನಬಿ(ಹುಸೇನವ್ವ) ಮತ್ತೆ ಮತ್ತೆ ಮಗಳ ಮದುವೆಯ ವಿಷಯದ ಬಗ್ಗೆ ತಗಾದೆ ತೆಗೆದು.. ಆರ್ಥಿಕ ಪರಿಸ್ಥಿತಿಯನ್ನು ಹಂಗಿಸಿ ಹೇಳುತ್ತಲೇ ಬೇರೆ ಬೇರೆ ವಿಷಯಗಳ ಬಗ್ಗೆಯೂ ಕೆದಕುತ್ತಲೇ; ಅಮೀನಸಾಹೇಬರ ತಲೆಯಲ್ಲಿ ಚಿಂತೆಯ ಗುಂಗೀ ಹುಳುವನ್ನು ಬಿಡುತ್ತಲೇ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದುದರಿಂದ; ಅಮೀನ ಸಾಹೇಬರು ಕೃಷ್ಣಾ ನದಿಯ ದಡದಲ್ಲಿ ಮೀನಿಗೆ ಗಾಳ ಹಾಕಿ ಕೃಷ್ಣೆಯ ನೀರಿನಲ್ಲಿ ತನ್ನ ಜಲಬಿಂಬವನ್ನು ನೋಡಿಕೊಳುತ್ತಲೇ ಕಳೆದು ಹೋದ ಬದುಕಿನ ದರ್ಬಾರವನ್ನು ಇಣುಕಿ ನೋಡುತ್ತ ತಮ್ಮ ಬೇಸರವನ್ನು ಕಳೆಯುತ್ತಿದ್ದರು. ಮೊನ್ನೆಯ ದಿನ ನದಿಯ ದಡದಲ್ಲಿಯೇ ಮೀನು ಹಿಡಿಯಲು ಗಾಳ ಹಾಕಿ ಕುಂತಿದ್ದ ಸ್ಥಳದಲ್ಲಿಯೇ ಇಚ್ಚಾಮರಣಿಯಂತೆ ಜೀವವನ್ನು ದೇಹದಿಂದ ತ್ಯಜಿಸಿಕೊಂಡು ಹೋಗಿಬಿಟ್ಟಿದ್ದರು.

ಕುಳಿತಲ್ಲಿಯೇ ಜೀವ ಬಿಟ್ಟಿದ್ದ ಅಮೀನ ಸಾಹೇಬರ ಸಾವು ಪುಣ್ಯದ ಸಾವು ಎಂದು, ಜಾತಿ ಬೇಧ ಮರೆತು ಭಜನೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಿದ್ದರು. ಅಮೀನ ಸಾಹೇಬರು ಬದುಕಿರುವವರೆಗೂ ಯಾವ ಜಾತಿ, ಧರ್ಮಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರದೇ ಕೇವಲ ಮಾನವೀಯತೆಗೆ ಬೆಲೆ ಕೊಟ್ಟು ಬಾಳಿದವರಾಗಿದ್ದರು. ಗಂಡನ ಮಾನವೀಯತೆ ಮತ್ತು ಉದಾರತೆಯನ್ನು ಸ್ಮರಿಸುತ್ತಲೇ ಬಳಬಳನೇ ಕಣ್ಣೀರು ಸುರಿಸುತ್ತ, ಅಮೀನ ಸಾಹೇಬರು ಪ್ರಾಣ ತ್ಯಜಿಸಿದ ಸ್ಥಳದಲ್ಲಿಯೇ ಕುಳಿತು, ಕೃಷ್ಣ ನದಿಯ ನೀರ ಅಲೆಗಳಲ್ಲಿ ಗಂಡನ ನೆನಪಿನ ಹೆಜ್ಜೆ ಗುರುತನ್ನು ಪತ್ತೆ ಹಚ್ಚುತ್ತ ಹುಸೇನವ್ವ ಕಣ್ಣೀರು ಸುರಿಸುತ್ತಿದ್ದಾಗ, ಗತಿಸಿಹೋದ ಗಂಡ ಅಮೀನಸಾಹೇಬರು ಆಕೆಯ ಕಣ್ಣೀರು ವರೆಸಿ ಸಾಂತ್ವನ ಹೇಳಿದಂತಾಗಿ ಹುಸೇನವ್ವ ಭಾವಪರವಶಳಾಗಿ ನಿಟ್ಟುಸಿರು ಬಿಟ್ಟು ನದಿಯ ದಡದಲ್ಲಿ ಕುಳಿತು.. ಗಂಡನೊಂದಿಗೆ ಬದುಕಿದ ಕ್ಷಣಗಳನ್ನು ನೆನೆಯುತ್ತಿದ್ದಳು..

***************

ಹುಸೇನಬಿಯ(ಹುಸೇನವ್ವ) ಕೋಳಿ ಮೈಗಳ್ಳಿಯಂತೆ ಮೂಲಿ ಹಿಡಿದು ಕಾವಿಗೆ ಕುಂತು, ಮೂರು ವಾರ ಆಗಿತ್ತು. ತತ್ತಿ ಕೂಡಿಸಿ ಅದರ ಹೊಟ್ಟಿ ಕೆಳಗೆ ಕಾವಿಗೆ ಇಟ್ಟಿದ್ದರೆ ಇಷ್ಟೊತ್ತಿಗಾಗಲೇ ಡಜನ್ ಗಟ್ಟಲೇ ಮರಿ ಮಾಡಿಸುತ್ತಿತ್ತೋ ಏನೋ, ಆದರೆ ಮರಿ ಮಾಡಿದರೆ ಮೂರು ತಿಂಗಳ ತನಕ ಮರಿಗೋಳಿ ತತ್ತಿ ಹಾಕೋದಿಲ್ಲ. ಹಿಂಗಾಗಿ ಕೈ ಖರ್ಚು ನಡೆಯೋದಿಲ್ಲಂತ ಮರಿಗೆ ಇಟ್ಟಿರಲಿಲ್ಲ. ಅಂಗಳದಲ್ಲಿ ಹಿಂಡು ಕೋಳಿಗಳೊಂದಿಗೆ ಆಡುತ್ತಿದ್ದ ಹುಂಜದ ಎದುರಿಗೆ ತನ್ನ ಕೋಳಿಯನ್ನು ತಂದು ಬಿಟ್ಟರೆ, ಅದನ್ನು ಕಂಡು ಬೆದೆಯಿಂದ ಹುಂಜ ಮೆಟ್ಟಬಹುದೆಂದು ಇಚ್ಚಿಸಿ ತನ್ನ ಮೈಕಾವಿನಲ್ಲಿ ಮೈಮರತು ಮೂಲಿಯಲ್ಲಿ ಕಾವಿಗೆ ಕುಂತ ಕೋಳಿಯನ್ನು ಎಳಕೊಂಡು ಬಂದು… ಅಂಗಳದಲ್ಲಿ ಹಿಂಡು ಕೋಳಿಗಳೊಂದಿಗೆ ಆಡುತ್ತಿದ್ದ ಹುಂಜದ ಎದುರಿಗೆ ಬಿಟ್ಟಳು. ಕೋಳಿ ತನ್ನ ಬಾಣಂತಿ ಭವಣೆಯನ್ನು ಬಿಂಬಿಸುತ್ತಿತ್ತೋ ಏನೋ… ರೆಕ್ಕೆ ಉಬ್ಬಿಸಿ ಶರಣಾಗತ ಭಂಗಿಯಿಂದ “ಕೊರ..ಕೊರ”ಎಂದು ಕೊರಗುಡುತ್ತ ಅತ್ತಿತ್ತ ಗಿರಕಿ ಹೊಡೆಯಿತು. ಹುಸೇನವ್ವಳ ಕೋಳಿಯನ್ನು ಎದೆ ಉಬ್ಬಿಸಿ ಕಣ್ಣು ಕೊಂಕಿಸಿ ಒಂದು ಸಲ ನೋಡಿ ಸುಮ್ಮನೇ ಹಿಂದೆ ಸರಿಯಿತು.. ಹುಂಜ ತನ್ನ ಕೋಳಿಯನ್ನು ಮೆಟ್ಟಲಾರದೇ(ಸುಖಿಸಲಾರದೇ) ನರಸತ್ತ ನಾಮರ್ಧನಂತೆ ಸುಮ್ಮನೇ ಹೋಗಿದ್ದಕ್ಕೆ ಹುಸೇನವ್ವ ತಲೆ ಬಡಿದುಕೊಂಡು ಲೊಚಗುಡುತ್ತ, ನಿರಾಸೆಯಿಂದ ತನ್ನ ಗಮನವನ್ನು ಮನೆ ಎದುರಿಗೆ ಕಟ್ಟಿದ್ದ ಮುದಿ ದನದ ಕಡೆ ತಿರುಗಿಸಿ ವಟ ವಟ ವಟಗುಡುತ ಯಾರನ್ನೋ ಶಪಿಸುತ್ತಿದ್ದಳು.

ಆಕೆಯ ಲೊಚಗುಡುವಿಕೆಗೆ ಕಿವಿಗೊಟ್ಟು, ಅಲ್ಲೇ ಉಚುಗೊಡ್ಡ ಹೊಡೆಯುತ್ತಿದ್ದ ಬಡಿಗೇರ ಕಾಳಪ್ಪ ಅಸಂತುಷ್ಟನಾಗಿ, ಸಿಡುಕು ಮೋರೆಯಿಂದ ಆಕೆಯ ಕಡೆ ಬಿರುಗಣ್ಣು ಬಿಟ್ಟು ನೋಡಿದ್ದು ಆಕೆಯ ಗಮನಕ್ಕೆ ಬಂತು. “ಅಯ್ಯ.. ಯಪ್ಪಾ ನಿನಗ ಬೈಲಿಲ್ಲೋ ಯಪ್ಪಾ ಮ್ಯಾಲಿನವರಿಗೆ ಬೈಯಾಕತ್ತೇನಿ. ಹೊಲಾ ಮನೀ ನೀರಾಗ ತೇಲಿ ಹೋದರೂ ಇನ್ನೂ ಪರಿಹಾರ ಸಿಗಲಿಲ್ಲ” ಎಂದು ಸಮುಜಾಯಿಸಿಕೊಟ್ಟಳು. ಮುದಿ ದನಾ ಹೊಟು ಮೇವಿಗೆ ಭಾರ ಆಗಿ ದಂದಕ್ಕಿಯಲ್ಲಿ ಮೆಲುಕು ಆಡಸ್ತಾ ನಿಂತಿತ್ತು. ತನಗೂ ಕಣ್ಣು ಮಂಜು ಮಂಜು ಆಗಿದ್ದರಿಂದ ಅದರ ಆಗ ಜೋಗು ನೋಡಿಕೊಳ್ಳೋದು ಅಗದೀ ದುಸ್ತರ ಆಗಿತ್ತು. ಹಿಂಗಾಗಿ ದಲಾಲರ ಗಿಡ್ಡೂ ಸಾಬನಿಗೆ ಬಂದಷ್ಟು ದುಡ್ಡಿಗೆ ಮಾರಾಟ ಮಾಡಿಬಿಡಬೇಕಂದ್ರ ಕಾಯ್ದೆ ಕಾನೂನ ಅಡ್ಡ ಬರತಾವಂತ ಮಂದಿ ಮಾತಾಡಕೊಳ್ಳೋದು ಕೇಳಿ ಹುಸೇನವ್ವಳಿಗೆ ದಿಗಲು ಬಡಿದಂಗಾಗಿತ್ತು.

ಗಂಡ ಅಮೀನಸಾಬ್ ತೀರಿಕೊಂಡಾಗ ಮುಲ್ಲಾಸಾಬ್ ಖಬರಸ್ಥಾನದಾಗ ದಫನ್ ಮಾಡಾಕ ಕಬೂಲಾತಿ ಕೊಟ್ಟಿರಲಿಲ್ಲ. ಹಂಗಾಗಿ ವಿಧಿಯಿಲ್ಲದೇ ಅವನ ಹೆಣಕ್ಕ ತಾನು ಹುಟ್ಟಿ ಬೆಳೆದ ಜಾತಿಯ ಪದ್ಧತಿಯಂತೆ ಸಿಂಗಾರ ಮಾಡಿ, ಇಮಾನ ಕಟ್ಟಿಸಿ ಅದರಾಗ ಹೆಣಾ ಹೊತಗೊಂಡು ಹೋಗರೀ ಅಂತಾ ತನ್ನ ಸೆರಿಗಿನ್ಯಾಗ ಕಟಗೊಂಡಿದ್ದ ನೂರರವು ಐದು ನೋಟುಗಳನಾ ಬಿಚ್ಚಿ ಕೇರಿ ಹರ್ಯಾ ಮನುಸ್ಯಾ ಬಡಿಗ್ಯಾರ ಕಾಳಪ್ಪನಿಗೆ ಕೊಟ್ಟಿದ್ದಳು. ಆದರs…“ನೀ ಅದರ ಚಿಂತೀ ಬಿಟ್ಟು ಬಿಡು ಬೇ…ನೀ ಹೇಳಿದ ಹಂಗss.. ಇಮಾನ ಕಟ್ಟಿಸಿ ಆ ಇಮಾನದಾಗ ನಿನ್ನ ಗಂಡನ ಹೆಣಾ ಕೂಡ್ರಿಸಿ ಮೆರವಣಿಗಿ ಮಾಡಿ ಸಮಾಧೀ ಮಾಡ್ತೇವಿ ಬಿಡಬೇ” ಅಂತಾ ಹೇಳಿ ಎಲ್ಲಾ ರೊಕ್ಕಾದಾಗ ಸೇರಿದ ನಾಲ್ಕಾರು ಕುಡುಕ ಮಂದಿಗೆ ಸೆರೆ ಕುಡಿಸಿ ನಿಕಾಲಿ ಮಾಡಿ, ಅಮೀನಸಾಬ್ ರ ಹೆಣಕ್ಕ ಸಿದಗಿ ಕಟ್ಟಿ ದಿಕ್ಕಿಲ್ಲದ ಪರದೇಸಿಯಂಗ ಗೋಣಿ ಚೀಲದ ತಟ್ಟಿನ್ಯಾಗ ಹೊತಗೊಂಡು ಹೋಗಿದ್ದಕss.. ಬಾಳಾ ಬ್ಯಾಸರ ಮಾಡಕೊಂಡಿದ್ದ ಹುಸೇನವ್ವ “ಯಾಕss .. ಯಪ್ಪಾ!! ನನ ಗಂಡ ಹೊಲ ಮನಿ ಇದ್ದ ರೊಕ್ಕಿಷ್ಟ ಮನುಸ್ಯಾ ಅದಾನ. ಅಂವುನ್ನ ದಿಕ್ಕಿಲ್ಲದ ಪರದೇಸಿಯಂಗ ಗೋಣಿ ಚೀಲದ ತಟ್ಟಿನ್ಯಾಗ ಸುಡುಗಾಡಕ ಹೊತಗೊಂಡು ಹೊಂಟೀರಲ್ಲ..?!!” ಅಂತಾ ಸೂತಕದಲ್ಲಿಯೂ ಸಿಡುಕುತ್ತ ಗಂಡನ ಹೆಣದ ಮುಂದ ಹಾಡ್ಯಾಡಿಕೊಂಡು ತಾರೀಪು ಮಾಡಿ ಅಳತ್ತಿದ್ದಳು. ಆವಾಗಿನಿಂದ ಕಾಳಪ್ಪನನ್ನು ಕಂಡರೆ ಆಕಿಗೇ ಆಟಕ ಆಟss… ಆಗಿತ್ತು. ಅಮೀನಸಾಬ್ ರು ತಂದೆ ಹಜರತ್ ಸಾಬರೊಂದಿಗೆ ಕೃಷ್ಣಾ ನದಿಯ ದಡದಲ್ಲಿ ವಾಸ ಮಾಡುತ್ತಿದ್ದರು. ಹುಸೇನವ್ವ ಕೆಳಜಾತಿಯ ಹಿಂದು ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಜಮಾತದಿಂದ ಹೊರಗೆ ಹಾಕಿ ಅಮೀನಸಾಹೇಬರ ಮನೆತನ ಕಾಫೀರ ಮನೆತನ ಎಂದು ಘೋಷಣೆಯಾಗಿದ್ದರಿಂದ ಹುಸೇನವ್ವ ತನ್ನ ತವರೂರು ಪಡಸಲಗಿಯಲ್ಲಿ ಬಂದು ವಾಸ ಮಾಡಿದ್ದಳು.

***************

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಊರಿನ ಕನ್ನಡ ಸಾಲಿಯೊಳಗ ಸರಕಾರದವರು ತೆರದಿದ್ದ ಗಂಜೀಕೇಂದ್ರದೊಳಗೆ ನೀಡುವ ಊಟಕ್ಕಾಗಿ ಜನರು ಸಾಲು ಸಾಲಾಗಿ ಕೈಯಲ್ಲಿ ಅಲ್ಯೂಮಿನಿಯಂ ತಾಟು ಹಿಡಿದುಕೊಂಡು ಮಂಕು ಬಡಿದಂತೆ ನಿಂತಿದ್ದರು. ಆ ಜನರ ಮನೋಸ್ಥಿತಿ ಹೇಗಿತ್ತಂದರೆ, ಜಲ ಕಾಳಿಯ ಎದುರು ನಿಂತು ಜೀವ ಭಿಕ್ಷೆ ಬೇಡಿಕೊಂಡು ಬಚಾವ್ ಆಗಿ ಓಡಿ ಬಂದ ಸಾರ್ಥಕತೆ ಒಂದು ಕಡೆಯಾದರೆ, ಜೀವಗಳ ಆಪೋಶನ ತೆಗೆದುಕೊಳ್ಳಲು ಮೋಡದ ಮರೆಯಲ್ಲಿ ಅವಿತುಕೊಂಡಿರುವ ಜಲದುರ್ಗೆ ಯಾವಾಗ ಹೂಂಕರಿಸುತ್ತಾಳೆಯೋ ಎಂದು ಕಂಗಾಲಾಗಿದ್ದರು. ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ, ಮನೆ ಮಠ ಜಾನ-ಜಾನುವಾರಗಳನ್ನು ಪ್ರವಾಹದಲ್ಲಿ ಕಳೆದುಕೊಂಡವರ ಜನರ ರೋಧನ ಮುಗಿಲು ಮುಟ್ಟಿತ್ತು.

ಕುಳಿತಲ್ಲಿಯೇ ಜೀವ ಬಿಟ್ಟಿದ್ದ ಅಮೀನ ಸಾಹೇಬರ ಸಾವು ಪುಣ್ಯದ ಸಾವು ಎಂದು, ಜಾತಿ ಬೇಧ ಮರೆತು ಭಜನೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಿದ್ದರು. ಅಮೀನ ಸಾಹೇಬರು ಬದುಕಿರುವವರೆಗೂ ಯಾವ ಜಾತಿ, ಧರ್ಮಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರದೇ ಕೇವಲ ಮಾನವೀಯತೆಗೆ ಬೆಲೆ ಕೊಟ್ಟು ಬಾಳಿದವರಾಗಿದ್ದರು.

ಕಿರಿಯ ಮಗ ಸುಲೇಮಾನ್ ಮತ್ತು ಮಗಳು ರೆಹನಾ ಬೇಗಂ ಹೊಟ್ಟೆ ಹಸಿದುಕೊಂಡು ಗಂಜೀ ಕೇಂದ್ರದಲ್ಲಿ ಸಿಲಾವರ ತಾಟು ಹಿಡಿದು, ಊಟಕ್ಕಾಗಿ ಕೈಯೊಡ್ಡಿ ನಿಂತಿರುವದನ್ನು ನೋಡಿ ತಾಯಿ ಹುಸೇನಬಿಯ ಕರಳು ಹಿಂಡಿದಂತಾಯಿತು.

ಅಮೀನಸಾಹೇಬರ ಹೆಂಡತಿ ಹುಸೇನಬೀ ತೀವ್ರ ಭಾವುಕಳಾಗಿ ಕಣ್ಣೊರಿಸಿಕೊಳ್ಳುತ್ತ ತಲೆ ತಲೆಮಾರುಗಳಿಂದ ಕೃಷ್ಣಾ ನದಿಯ ಮತ್ಸ್ಯರಾಶಿಯ ಮಡಿಲನ್ನೇ ನಂಬಿ ಬದುಕಿದ ಕುಟುಂಬ ಅಮೀನ ಸಾಹೇಬರದಾಗಿತ್ತು. ರಾತ್ರಿ ಬಲೆ ಹಾಕಿ ಬೆಳಿಗ್ಗೆ ಆ ಬಲೆಯನ್ನು ಎತ್ತಿದರೆ ಸಾಕು ರಾಶಿ ರಾಶಿ ಮೀನು ಅಮೀನ ಸಾಹೇಬರ ಕಣ್ಣೆದುರಿಗೆ ಬೆಳ್ಳಿ ನಾಣ್ಯಗಳಂತೆ ಕಂಗೊಳಿಸುತ್ತಿದ್ದವು. ಮೀನಿನ ರಾಶಿಯನ್ನು ಖರೀದಿಸಲು, ಸಾಂಗ್ಲೀ, ಹೈದ್ರಾಬಾದ್, ಬೆಂಗಳೂರು ಅಲ್ಲದೇ ಸ್ಥಳೀಯವಾಗಿ ಬೇರೆ ಬೇರೆ ಕಡೆಯಿಂದ ಸಗಟು ವ್ಯಾಪಾರಿಗಳು ಬರುತ್ತಿದ್ದರು. ತೆಪ್ಪದ ಮುಖಾಂತರ ನದಿಗೆ ಬೇರೆ ಬೇರೆ ಕಡೆ ವಿಸ್ತಾರದ ಬಲೆಗಳನ್ನು ಹಾಕಲು, ಬಲೆಗೆ ಬಿದ್ದ ಮೀನುಗಳನ್ನು ಬಲೆಯಿಂದ ವಿಂಗಡಿಸಲು, ಬಲೆಗೆ ಬಿದ್ದ ಮೀನುಗಳ ಬೇಟೆಯಾಡುತ್ತಿದ್ದ ದೆವ್ವ ಮೀನಿನ (ಮೀನಿನ ಬಲೆ ಕತ್ತರಿಸಿ ಮೀನು ತಿನ್ನುವ (ರಾಕಸಿ ಮೀನು) ದಾಳಿಯಿಂದ ಹರಿದ ಬಲೆಗಳನ್ನು ಹೊಲೆಯಲು ಇತ್ಯಾದಿ ಕೆಲಸಕ್ಕೆ ಮೂವತ್ತು ನಲವತ್ತು ಕೆಲಸಗಾರರನ್ನು ಇರಿಸಿಕೊಂಡು ಅಮೀನಸಾಹೇಬರು ಉದ್ಯೋಗದಾತರಾಗಿದ್ದರು.

ಮೀನುಗಾರರಿಗೆ ಇತ್ತೀಚಿಗೆ ವಲಸೆ ಬಂದಂತ ದೆವ್ವ ಮೀನಿನ ಕಾಟವು ಹೆಚ್ಚಾಗಿತ್ತು. ಚಿಕ್ಕ ಪುಟ್ಟ ಮೀನುಗಾರರು ಹಾಕಿದ ಬಲೆಗಳನ್ನು ಕತ್ತರಿಸಿ ಬಲೆಗೆ ಬಿದ್ದ ಮೀನುಗಳನ್ನು ಬೇಟೆಯಾಡುತ್ತಿದ್ದ ದೆವ್ವ ಮೀನಿನ ದಾಳಿಯಿಂದ ಬಸವಳಿದ ಅನೇಕ ಮೀನುಗಾರರ ಕಾಟ, ಇಲಾಖೆಯ ಅಧಿಕಾರಿಗಳ ಉಪಟಳದಿಂದ ಮೀನುಗಾರರು ಮೀನು ಹಿಡಿಯಲು ಹಿಂಜರಿಯುತ್ತಿದ್ದರು. ಕೆಲವೊಮ್ಮೆ, ಇತರೆ ಮೀನುಗಾರರು ದೆವ್ವ ಮೀನುಗಳನ್ನೂ ಹಿಡಿದು ಮಾರಾಟ ಮಾಡುತ್ತಿದ್ದದ್ದೂ ಉಂಟು. ಆದರೆ, ಮೀನುಗಾರಿಕೆ ಇಲಾಖೆಯವರು ದೆವ್ವ ಮೀನು ತಿನ್ನಲು ಯೋಗ್ಯವಲ್ಲ, ಅದರ ಮಾರಾಟವನ್ನು ಮಾಡದಂತೆ ಮೀನುಗಾರಿಕೆ ಇಲಾಖೆಯವರು ತಕರಾರು ತಗದಿದ್ದರಿಂದ ಅದರ ಮಾರಾಟಕ್ಕೆ ತಡೆಯಾಗಿತ್ತು. ಅಮೀನಸಾಹೇಬರು ಜಿಂಗೀ ಮೀನು ಹಾಗೂ ಇತರೆ ಚಿಕ್ಕಪುಟ್ಟ ಮೀನುಗಳನ್ನು ತೀರಾ ಕಡಿಮೆ ದರಕ್ಕೆ ಬಡ ಬಗ್ಗರಿಗಾಗಿಯೇ ಮಾರುತ್ತಿದ್ದರು. ಕೆಲವು ಸಾರೆ ಅಸಹಾಯಕರಿಗೆ ಪುಕ್ಕಟೆಯಾಗಿಯೂ ಕೊಡಲು ಮೀನು ಮೀಸಲಿರಿಸಿದ ಉದಾರಿಯಾಗಿದ್ದರು. “ಕೃಷ್ಣಾತಾಯಿ ಯಾವ ಫಲಾಪೇಕ್ಷೆ ಇಲ್ಲದೇ ನಮಗೆ ಪುಕ್ಕಟೆಯಾಗಿ ಮತ್ಸ್ಯ ಸಂಪತ್ತು ನೀಡಿ ಸಲುಹುತ್ತಾಳೆ, ಆ ತಾಯಿಯ ಮಕ್ಕಳು ನಾವೂ ದಾನ ಧರ್ಮ ಮಾಡಿ ಸಾರ್ಥಕ ಬದುಕು ನಡಿಸಬೇಕು…” ಎಂದು ಆಗಾಗ ಹೇಳುತ್ತಿದ್ದರು.

ರಂಜಾನ್ ಹಬ್ಬ ಬಂದರೆ ಸಾಕು ಅಮೀನಸಾಹೇಬರ ಆಳುಗಳಿಗೆ ಒಂಥರಾ ಸಂತಸ ಉಂಟಾಗುತ್ತಿತ್ತು. ಆಳುಗಳಿಗೆ ಹೊಸಬಟ್ಟೆ ದಾನ ಮಾಡುವುದಲ್ಲದೇ ಜಕಾತ ನೀಡುವದು, ಎಲ್ಲಾ ಆಳುಗಳಿಗೆ ಬಿರಿಯಾನಿ ಊಟ ಮಾಡಿಸಿ ಸಂತಸಪಡಿಸುತ್ತಿದ್ದರು. ಅಮೀನಸಾಹೇಬರ ಆಳುಗಳು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೇರಿದವರಾಗಿರದೇ ಎಲ್ಲಾ ವರ್ಗಕ್ಕೂ ಸೇರಿದವರಾಗಿದ್ದರು. ಅಮೀನಸಾಹೇಬರ ಬಲಗೈ ಬಂಟನಾಗಿ ಈಜುಗಾರಿಕೆಯಲ್ಲಿ ಮೀನುಗಳಿಗೇ ಸ್ಪರ್ಧೆ ಒಡ್ಡುತ್ತಿದ್ದ ಉಪ್ಪಾರ ಸಂಗ್ಯಾ ಮೊಸಳೆಯೊಂದಿಗೆ ದಾಳಿಗಿಳಿದು ಕಾದಾಟ ಮಾಡಿ ವೀರೋಚಿತ ಸಾವು ಕಂಡ ನಂತರ ಅಮೀನಸಾಹೇಬರು ಕಂಗಾಲಾಗಿದ್ದರು. ಅವರಿವರ ಒತ್ತಾಯಕ್ಕೆ ಮಣಿದು ಸಂಗ್ಯಾನ ಹೆಂಡತಿ ಮಕ್ಕಳು, ಸಾಹೇಬರ ನಿರ್ಲಕ್ಷ್ಯದಿಂದಲೇ ಸಂಗ್ಯಾ ಮೊಸಳೆಗೆ ಬಲಿಯಾಗಬೇಕಾಯಿತೆಂದು ಅಮೀನಸಾಹೇಬರ ಮೇಲೆ ಕೇಸ್ ಹಾಕಿಸಿದ್ದರಿಂದ ಅಮೀನಸಾಹೇಬರು ಕಂಗಾಲಾಗಿದ್ದರು.

ಆಲಮಟ್ಟಿ ಜಲಾಶಯ ಕಟ್ಟಿದ ನಂತರ ಮೀನುಗಾರಿಕೆಗೆ ತೊಡಕಾಯಿತು… ನದಿಯಲ್ಲಿ ಮತ್ತು ಹಿನ್ನೀರಿನಲ್ಲಿ ಪರವಾನಿಗೆ ಇಲ್ಲದೇ ಮೀನುಗಾರಿಕೆಯನ್ನು ನಡೆಸುವಂತಿರಲಿಲ್ಲ.. ಲಕ್ಷಾಂತರ ರೂಪಾಯಿಗಳಿಗೆ ಹರಾಜು ಹಿಡಿದು ಮೀನುಗಾರಿಕೆಯನ್ನ ನಡಿಸಬೇಕಾದ ಪರಿಸ್ಥಿತಿಯು ಬಂದಿತು. ಬಹುತೇಕ ಮೀನುಗಾರಿಕೆಯು ಬಂಡವಾಳಶಾಹಿಗಳ ಪಾಲಾಗಿದ್ದರಿಂದ ಅಮೀನಸಾಹೇಬರಂತ ಮೀನುಗಾರರಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಯಿತು. ಬಂಡವಾಳಶಾಹಿ ದೊಡ್ಡ ಮೀನುಗಾರರ ಸುಧಾರಿತ ಯಾಂತ್ರಿಕ ದೋಣಿಗಳ ಎದುರಿಗೆ ಅಮೀನಸಾಹೇಬರ ದೇಶೀಯ ದೋಣಿಗಳು ಕುಂಟುತ್ತ ಸಾಗುವ ದುರ್ಬಲ ವೃದ್ಧರಂತೆ ಅಸಹಾಯಕವಾಗಿದ್ದರಿಂದ, ಅವುಗಳು ಸ್ಪರ್ಧೆಗಿಳಿಯದೇ ಮಂಕಾದವು. ಕ್ರಮೇಣ ಗಲ್ಲಿಗೊಂದು ಮಾರಾಟ ಮಳಿಗೆಗಳು.. ಮಾಲ್ ಗಳು, ಸೂಪರ್ ಮಾರ್ಕೆಟ್ ಗಳ ಶೈತ್ಯಾಗಾರಗಳಲ್ಲಿ ಮೀನುಗಳು ಶೇಕರಣೆಯಾಗಿದ್ದರಿಂದ, ಅಮೀನಸಾಹೇಬರ ಮೀನು ವ್ಯಾಪಾರಕ್ಕೆ ಬರೆ ಬಿದ್ದಂತಾಗಿ, ಎಲ್ಲಾ ತಮ್ಮ ದೇಶೀಯ ದೋಣಿ ಮತ್ತು ತೆಪ್ಪಗಳನ್ನು ಮಾರಾಟ ಮಾಡಿ ಇದ್ದಕ್ಕಿದ್ದಂತೆ, ಅಮೀನ ಸಾಹೇಬರು ಮೀನುಗಾರಿಕೆಯನ್ನು ನಿಲ್ಲಿಸಿಬಿಟ್ಟರು. ಅಮೀನ ಸಾಹೇಬರನ್ನೇ ನಂಬಿದ ಅನೇಕ ಆಳುಗಳು ಬೀದಿಗೆ ಬಿದ್ದದನ್ನು ನೋಡಲಾರದೇ ತನ್ನಲ್ಲಿಯ ಅಳಿದುಳಿದ ಅಲ್ಪಸ್ವಲ್ಪ ಹಣವನ್ನು ನೀಡಿ ಕೃತಜ್ಞತೆಯಿಂದ ಕೈ ಜೋಡಿಸಿ ಕೆಲಸಗಾರರಿಗೆ ಪ್ರಾಮಾಣಿಕ ವಿದಾಯ ಹೇಳಿದರು.

ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಅಮೀನಸಾಹೇಬರು ಕುಟುಂಬ ನಿರ್ವಹಣೆಗಾಗಿ ಮತ್ತದೇ ಮೀನು ಮಾರಾಟಕ್ಕೆ ಶರಣಾಗಬೇಕಾಯಿತು. ಯಾಂತ್ರೀಕೃತ ದೋಣಿಯ ಮುಖಾಂತರ ಮೀನು ಹಿಡಿದು ಮಾರು ದೊಡ್ಡ ವ್ಯಾಪಾರಸ್ಥರ ಕಡೆಯಿಂದ ಮೀನು ಖರೀದಿಸಿ.. ತಮ್ಮ ಹಳೆಯದಾದ ಲಡಕಾಸಿ ಮೋಟರ್ ಬೈಕ್ ಏರಿ ಮೀನು ಮಾರಾಟಕ್ಕೆ ಅವರು ಅಣಿಯಾದರು. ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.” ಎಂದು ಕೂಗುತ್ತ ಮಾರಾಟದ ಸವಾರಿ ಹೊಂಟಾಗ, ಅನೇಕ ಮಡಿವಂತ ಬ್ರಾಹ್ಮಣರು ತಕರಾರು ತೆಗೆದು ತಮ್ಮ ಗಲ್ಲಿಯಲ್ಲಿ ಮೀನು ತೆಗೆದುಕೊಂಡು ಹೋಗದಂತೆ ಎಚ್ಚರಿಕೆಯನ್ನು ನೀಡಿದ ನಂತರ ಅಮೀನಸಾಹೇಬರು ಫಜೀತಿಯಿಂದ “ತೋಬಾ ತೋಬಾ” ಎಂದು ಕ್ಷಮೆ ಕೇಳಿದ್ದ ಪ್ರಸಂಗಗಳೂ ನಡೆದು ಹೋದವು. ನಂತರ ಮೀನು ತಿನ್ನುವವರ ವಾಸವನ್ನು ಹುಡುಕಿ ಮಾರಾಟ ಮಾಡುವದು ಬಹಳ ದುಸ್ತರ ಆಗಿದ್ದರಿಂದ ಹೆಂಡತಿ ಹುಸೇನಬಿಯ ಸಲಹೆಯಂತೆ, ಶಹರದ ಬಜಾರದಲ್ಲಿ ಸಣ್ಣದೊಂದು ಗೂಡಂಗಡಿಯನ್ನು ಇಟ್ಟು ಮೀನು ಮಾರಾಟಕ್ಕಿಳಿದರೂ.. ಹೇಳಿಕೊಳ್ಳುವಷ್ಟು ಲಾಭಾಂಶ ಬರಲಾರದೇ ಅಮೀನಸಾಹೇಬರು ಗಾಢ ಚಿಂತೆಗೊಳಗಾದರು. ಕುಟುಂಬವನ್ನು ಸಲುಹುತ್ತಲೇ ಮಗಳು ರೆಹನಾಬೇಗಂಳ ಮದುವೆ ಮಾಡುವದು ಅವರಿಗೆ ಬಹು ದೊಡ್ಡ ಸವಾಲ್ ಆಗಿತ್ತು.

೨೦೦೬ ರಲ್ಲಿ ಆಷಾಡ ಕಳೆದು ಶ್ರಾವಣ ಮಾಸದ ಹೊಸ್ತಿಲಲ್ಲಿದ್ದ ಆ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಂಭದ್ರೋಣ ಮಳೆ ಬಿದ್ದರಿಂದ, ಆಲಮಟ್ಟಿ ಆಣೆಕಟ್ಟು ತಂಬಿದ್ದರಿಂದ ಹೆಚ್ಚುವರಿ ೪ ಲಕ್ಷ ೫೦ ಸಾವಿರ ಕ್ಯುಸೆಕ್ಸ್ ನೀರನ್ನು ಹೊರ ಬಿಟ್ಟಿದ್ದರಿಂದ ಕೃಷ್ಣಾ ನದಿಯು ಉಕ್ಕಿ ಹರಿದು; ನದಿ ದಡಕ್ಕೆ ಹತ್ತಿರವಿರುವ ಅಮೀನ ಸಾಹೇಬರ ಮನೆಯನ್ನು ತನ್ನ ಜಲ ಮಡಿಲಲ್ಲಿ ಕೃಷ್ಣೆ ಬಾಚಿ ತಬ್ಬಿಕೊಂಡಳು. ಕೃಷ್ಣೆಯ ಕೋಪಕ್ಕೆ ಇನ್ನೂ ಅನೇಕ ಹಳ್ಳಿಗಳು ಜಲಾವೃತವಾಗಿದ್ದವು. ಕೃಷ್ಣೆಯು ಜಲಕಾಳಗದ ರಣ ಕೇಕೆ ಹಾಕಿ ಜನ ಜಾನುವಾರಗಳನ್ನು ತನ್ನ ಒಡಲ ತುಂಬಿಕೊಂಡು ವ್ಯಗ್ರಳಾಗಿ ಹರಿದಾಗ ಕುಟುಂಬವನ್ನು ಜಿಲ್ಲಾಡಳಿತವು ರಕ್ಷಿಸಿ ಜೀವಗಳನ್ನು ಉಳಿಸಿತು; ಆದರೆ ಅಮೀನಸಾಹೇಬರ ಮನೆ ಮತ್ತು ಸಾಕಿದ ಕುರಿ ಹಾಗೂ ದನ ಕರುಗಳು ಜಲ ದೇವತೆಯ ಕೋಪಕ್ಕೆ ಆಹುತಿ ನೀಡಲೇಬೇಕಾಯಿತು. ಆಗ ಅಮೀನಸಾಹೇಬರು ಮತ್ತಷ್ಟು ಆರ್ಥಿಕ ಸಂಕಷ್ಟದ ಸುನಾಮಿಗೆ ಸಿಕ್ಕು ನಲುಗಿದಂತಾಯಿತು. ನೆರೆಹಾವಳಿ ಕಡಿಮೆಯಾದ ನಂತರ ಬಗ್ನಾವಶೇಷಗಳಾಗಿ ನಿಂತಿದ್ದ ಅಮೀನಸಾಹೇರ ಮನೆಯು ಮತ್ತೆ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ವಲ್ಲದ ಮನಸ್ಸಿನಲ್ಲಿ ಸರಕಾರ ತೋರಿಸಿದ ಸ್ಥಳದಲ್ಲಿ ನಿರಾಶ್ರಿತರು ವಾಸವಾಗಿದ್ದರು.

***************

ಸರಕಾರವು ದೂರದ ಬೋಳು ಗುಡ್ಡದ ಎತ್ತರದ ಪ್ರದೇಶದಲ್ಲಿ ಭೂಮಿಯನ್ನು ಸಮತಟ್ಟಗೊಳಿಸಿ ನಿರಾಶ್ರಿತರಿಗೆ ಹಂಚಿಕೆ ಮಾಡಿತ್ತು. ಮುಳುಗಡೆಯಿಂದ ನಿರಾಶ್ರಿತರಾದವರಿಗೆ ಪ್ರಮಾಣ ಪತ್ರವನ್ನೂ ನೀಡಲಾಗಿತ್ತು. ಹಂಚಿಕೆ ಮಾಡಿದ ಭೂಮಿಯನ್ನು ಬಿರಾದಾರ ಬಸಪ್ಪನಿಗೆ ಮಾರಾಟ ಮಾಡಲು ಅಮೀನಸಾಹೇರು ಮುಂದಾದರು.. ಹೀಗೆ ಹಂಚಿಕೆಯಾದ ಭೂಮಿಯನ್ನು ಕನಿಷ್ಟ ೧೫ ವರ್ಷ ಮಾರಾಟ ಮಾಡುವಂತಿರಲಿಲ್ಲವೆಂದು ನಿಯಮವಿದ್ದರೂ ನಂತರ ಅನೇಕ ನಿರಾಶ್ರಿತರ ಒತ್ತಾಯದಿಂದ ಅದು ಸರಳಿಕೃತವಾಯಿತು. ಕೃಷ್ಣಾ ನದಿಯ ದಂಡೆಯ ಮೇಲೆ ವಾಸವಾಗಿ ಮನೆ ಕಟ್ಟಿಕೊಂಡು ತಲತಲಾಂತರ ವಾಸವಾಗಿದ್ದ ಅಮೀನಸಾಹೇಬರು ಮಾತ್ರ “ನಮ್ಮ ಜೀವ ಹೋದರೂ ಕೃಷ್ಣೆಯ ಮಡಿಲಲ್ಲಿ ಹೋಗಲಿ ಆದರೆ, ನಾವು ಇಲ್ಲಿಯೇ ವಾಸಿಸೋಣ” ವೆಂದು ಅಮೀನಸಾಹೇಬರು ತಮ್ಮ ಹಳೆಯ ಮನೆಯನ್ನು ಜೀರ್ಣೋದ್ಧಾರಗೊಳಿಸಿ ಬಹಳ ವರ್ಷಗಳಿಂದ ಅಲ್ಲಿಯೇ ಕುಟುಂಬ ಸಮೇತ ವಾಸಮಾಡುತ್ತಿದ್ದರು. ಆದರೆ ಇದೇ ವರ್ಷ ಆಗಸ್ಟ್ ೨೦೧೯ರಂದು ಮಹಾರಾಷ್ಟ್ರದಲ್ಲಿ ಮಹಾ ಮಳೆಯಾಗಿದ್ದರಿಂದ ಕೃಷ್ಣಾ ನದಿಗೆ ನೀರು ಬಿಟ್ಟದ್ದರಿಂದ ಮತ್ತು ಉತ್ತರ ಕರ್ನಾಟಕದಲ್ಲಿ ಮಹಾ ಮಳೆಯಾಗಿದ್ದರಿಂದ ರಾತ್ರೋರಾತ್ರಿ ನೀರು ಅನೇಕ ಗ್ರಾಮಗಳಿ ಜಲ ಬಲೆಯನ್ನು ಬೀಸಿ ಕಣ್ಣುರೆಪ್ಪೆಯನ್ನು ಪಿಳಿಕಿಸುವಷ್ಟರಲ್ಲಿ ಜಲಾಸುರ ಇಡೀ ಉತ್ತರ ಕರ್ನಾಟಕವನ್ನು ತನ್ನ ಸ್ವಾದೀನ ಪಡಿಸಿಕೊಂಡು ಶವಗಳ ಎಣಿಕೆಯನ್ನು ಮಾಡಿ ದಡಕ್ಕೆ ಎಸೆಯುತ್ತಿದ್ದ..

ನಿನ್ನೆ ಮೊನ್ನೆ ಆದ ಜಲಪ್ರವಾಹದಿಂದಾಗಿ.. ಅಮೀನಸಾಹೇಬರ ಕುಟುಂಬ ಬೀದಿಗೆ ಬಿದ್ದಿತ್ತು. ಕಳೆದ ಬಾರಿ ಆಗಿದ್ದ ಜಲಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ನೀಡಿದ ಅಮೀನಸಾಹೇಬರ ಭೂಮಿಯು ಬಿರಾದಾರ ಸಂಗಪ್ಪನ ಸ್ವತ್ತಾಗಿದ್ದರಿಂದ, ಹುಸೇನಬಿಯ ಮನಸ್ಸು ಕಳವಳ ಮತ್ತು ಕ್ರೋಧದಿಂದ ಕುದಿಯುತ್ತ ದಿನವಿಡೀ ಅಮೀನಸಾಹೇಬರ ದುಡುಕಿನ ನಿರ್ಧಾರಕ್ಕೆ ಕಿವಿ ಹಿಂಡುತ್ತಿದ್ದುದರಿಂದ, ಅಮೀನಸಾಹೇಬರು ಮನೆಯಿಂದ ಹೊರಹೋಗಿ ಸದಾ ನದೀ ದಡದಲ್ಲಿ ಖಿನ್ನತೆಯಿಂದ ಗಾಳ ಹಾಕಿ ಮೀನು ಹಿಡಿಯುವದರಲ್ಲಿ ಕಾಲಕ್ಷೇಪ ಮಾಡುತ್ತಿದ್ದಾಗ; ವಿಧಿಯು ಅವರ ಪ್ರಾಣ ಪಕ್ಷಿಗೆ ಗಾಳ ಹಾಕಿ ಅವರ ಪಾಣ ಪಕ್ಷಿಯನ್ನೇ ಕುಕ್ಕಿ ತಿಂದಿತ್ತು. ಎಲ್ಲವನ್ನು ನೆನಪಿಸುತ್ತ ಕುಳಿತಿದ್ದ ಹುಸೇನವ್ವಳ ಮನಸ್ಸು ವಾಸ್ತವಕ್ಕೆ ತಿರುಗಿದಾಗ ಮಗ ಸಲೀಮಾ “ಮಾ…!!” ಎಂದು ಕರೆದಂತಾಯಿತು.