ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ ಸೋಮು ಕುದರಿಹಾಳ ತಮ್ಮ ಪಯಣವನ್ನು ಕಾಲುದಾರಿಯಲ್ಲಿ ನಡೆಸುತ್ತಿದ್ದಾರೆ. ರಾಜಮಾರ್ಗ ಇಂದಿನ ನಿಷೇಧಿತ ವಲಯ. ಸಾಮಾಜಿಕ ಸ್ತರವಿನ್ಯಾಸದ ಸೂಕ್ಷ್ಮತೆಯಿದ್ದು ಸಮುದಾಯದ ಸಾಂಸ್ಕೃತಿಕ ಲಯಗಳನ್ನು ಅರಿತ ಘಳಿಗೆಯೇ ಕಾಲುದಾರಿಯ ಪಥಿಕನಾಗುತ್ತಾನೆ ಕವಿ. 
ಸೋಮು ಕುದರಿಹಾಳ್ ಅವರ “ಜಾಡು ತಪ್ಪಿದ ನಡಿಗೆ” ಪುಸ್ತಕದ ಕುರಿತು ವಿಜಯರಾಘವನ್ ಅವರ ಲೇಖನ

 

ಸೋಮು ಕುದರೀಹಾಳ್ ಅವರ ಮೊದಲ ಕವನ ಸಂಕಲನ ಜಾಡು ತಪ್ಪಿದ ನಡಿಗೆ. ಒಬ್ಬ ಕವಿಗೆ ತಾನು ನಡೆಯುತ್ತಿರುವುದು ಜಾಡು ತಪ್ಪಿದ ನಡಿಗೆ ಎಂದು ಅನಿಸುವುದು ಯಾವಾಗ ಮತ್ತು ಯಾಕೆ? ಈ ಪ್ರಶ್ನೆ ಕುತೂಹಲಕಾರಿಯಾಗಿದೆ. ಇಲ್ಲಿನ ಸಂಭವನೀಯತೆಗಳು ಹೀಗಿವೆ:

೧. ತಾನು ನಡೆಯುತ್ತಿರುವುದು ಬೇರೆ ಕವಿಗಳು ಕ್ರಮಿಸುವ ಹಾದಿಯನ್ನಲ್ಲ.
೨. ತಾನೇ ಅರಸಿಕೊಂಡು ನಡೆಯುತ್ತಿರುವ ಮಾರ್ಗವು ಹಳೆಯ ಜಾಡನ್ನು ತಪ್ಪಿಸಿಕೊಂಡಿದೆ
೩. ತಾನು ಬೇರೆ ಜಾಡು ಹಿಡಿದಿರುವುದು ಅದರ ಗಮ್ಯದ ಬಗ್ಗೆ ನನಗಿರುವ ಬೇರೆ ದೃಷ್ಟಿಕೋನದ ಕಾರಣ
೪. ನನಗೆ ಮನವರಿಕೆಯಾದಂತೆ ನನ್ನ ಕಾವ್ಯದ ದಿಕ್ಕುಗಳು ಬದಲಾಗಿವೆ

ಪ್ರಾಯಶಃ ತನ್ನ ಬರೆಹದ ಬಗ್ಗೆ ಸದಾ ವಿಮರ್ಶಾತ್ಮಕ ಧೋರಣೆಯನ್ನು ಇರಿಸಿಕೊಂಡವರಿಗೆ ಕಾವ್ಯ ಮಾರ್ಗದ ಬಗ್ಗೆ ಸಂಶಯಗಳು ಉಂಟಾಗುವುದು ಸಹಜವೇ ಆಗಿದೆ. ಅಡಿಗ, ಕುವೆಂಪು, ಪುತಿನ, ಶರ್ಮ, ಕೆ.ಎಸ್‌.ಎನ್, ಬೇಂದ್ರೆಯವರಲ್ಲದೆ ಒಂದು ಕಾಲಘಟ್ಟದಲ್ಲಿ ಬರೆದವರ ಕಾವ್ಯ ಮಾದರಿಗಳಲ್ಲಿ ಇದ್ದ ಪ್ರಶ್ನೆಗಳನ್ನು ಇವತ್ತಿನ ತಲೆಮಾರು ಎತ್ತುತ್ತಿಲ್ಲ. ಕಾವ್ಯಕರ್ಮದ ನಿಷ್ಠೆಯನ್ನು ಕುರಿತಂತೆಯೂ ಇಂದು ಬರೆಯುತ್ತಿರುವವರ ಮನೋಭಾವದಲ್ಲಿ ಅತಿ ದೊಡ್ಡ ಪಲ್ಲಟವುಂಟಾಗಿದೆ. ಆದರೂ ಕುವೆಂಪು ಅವರ ಸಾಮಾಜಿಕ ಮನೋಧರ್ಮ ಎಂದೆಂದಿನ ಪ್ರಶ್ನೆಗಳನ್ನು ಛೇಧಿಸಿ ಉತ್ತರಕ್ಕಾಗಿ ಹುಡುಕಾಟ ಮಾಡುವವರಿಗೆ ಹೆಚ್ಚು ನೆರವಿಗೆ ಬರುವಂಥದ್ದಾಗಿದೆ. ಇಂಥ ಮನೋಧರ್ಮದ ಕವಿತೆಗಳು ಕುದರೀಹಾಳ್ ಅವರ ಜಾಡು ತಪ್ಪಿದ ನಡಿಗೆ ಸಂಕಲನದ ಕವಿತೆಗಳಲ್ಲಿ ಇವೆ. ಹಾಗಾಗಿ ಇದನ್ನು ಪರಂಪರೆಯ ಮುಂದುವರಿಕೆಯಾಗಿ ಭಾವಿಸಬಹುದಾಗಿದೆ.

ಕವಿ, ಸೋಮು ಕುದರಿಹಾಳ ನಮ್ಮ ಕಾಲದ ಸಾಮಾಜಿಕ ತಲ್ಲಣಗಳಿಗೆ ಪ್ರತಿಸ್ಪಂದಿಸುವ ಪ್ರಾಮಾಣಿಕ ಮನಸ್ಸಿನವರು. ದೇಹತಹ ಮುಗ್ಧ ಮನಸ್ಸಿನ, ವಿನಯಶೀಲರಾದ ಸೋಮು ಕನ್ನಡ ಬರಹ ವ್ಯವಸಾಯಕ್ಕೆ ಈಗಾಗಲೇ ತಮ್ಮ ಫಲವತ್ತಾದ ಬೀಜವನ್ನು ಊರಿದ್ದಾರೆ. ವೃತ್ತಿಯಿಂದ ಶಿಕ್ಷಕರಾದ ಇವರು ಮಕ್ಕಳ ಮನೋಭಿತ್ತಿಯಲ್ಲಿ ಸರಳವಾಗಿ ಅರಳುವ ಕಥೆಗಳನ್ನು ಬರೆದು ನಾಡಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅವರ ಚೊಕ್ಕಟವಾದ ಮಕ್ಕಳ ಮನಸ್ಸು ಇದಕ್ಕೆ ಸ್ಥಾಯಿಭಾವವಾಗಿದೆ. (ಡಾ. ಜಾಜಿ ದೇವೇಂದ್ರಪ್ಪ, ಮುನ್ನುಡಿ)

ಸೋಮು ಕುದರಿಹಾಳ ಓದಿನ ಬದುಕಿನ ಬಗ್ಗೆ ಸ್ವತಃ ಅವರೇ ಹೇಳುವ ಮಾತು ಇಂತಿದೆ:

ಆರು- ಏಳನೇ ತರಗತಿಯಲ್ಲಿದ್ದಾಗ ಮನೆಯಲ್ಲಿದ್ದ ರಾಮಾಯಣ ಪುಸ್ತಕದ ಹರಿದುಹೋದ ಹಾಳೆಗಳನ್ನು ಜೋಡಿಸಿ ಜೋಡಿಸಿಕೊಂಡು ಓದಿದ್ದು ಬಿಟ್ಟರೆ ಬಳಿಕ ಓದಿದ್ದು ಕೊಳ್ಳಲು ಕಾಸಿಲ್ಲದೆ ಹೋದದ್ದರಿಂದ ಕಡಿಮೆಯಾಯಿತು. ಇದರ ಜೊತೆಗೆ ವ್ಯವಸಾಯ ಮತ್ತು ಅದರ ಜೊತೆಜೊತೆಯ ಕೆಲಸಗಳಲ್ಲಿ, ಸಂಘಟನೆಗಳಲ್ಲಿ ತೊಡಗಿಕೊಂಡಿದ್ದು ಬೇರೆ. ಶಿಕ್ಷಕನಾಗಿ ದುಡಿದು ಹಣ ಸಂಪಾದಿಸುವವರೆಗೂ ಪುಸ್ತಕ ಕೊಳ್ಳಲು ಹಣದ ಅಡಚಣೆ.

(ಸೋಮು ಕುದರಿಹಾಳ್)

ಇಲ್ಲಿ ಈ ಮಾತನ್ನು ಕುರಿತು ಉಲ್ಲೇಖಿಸುವ ಕಾರಣವಿದೆ. ನಾನೂ ಸೋಮು ಅವರಂತೆಯೇ ಬದುಕಿ ಓದಿದವನು. ಓದಿನ ವಿಸ್ತಾರವಿಲ್ಲದಿದ್ದರೆ ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು, ಸ್ಥಾಪಿಸಿಕೊಳ್ಳುವುದು ಕಷ್ಟಸಾಧ್ಯ. ಈ ಅಡಚಣೆಯನ್ನು ಸೋಮು ದಾಟಿದ್ದಾರೆ. ಓದಿನ, ಹಂಬಲದ, ಆಶಯದ ಬರವಣಿಗೆಯ ಹಿಂದೆ ಈ ಕಹಿ ಅನುಭವಗಳ ಛಾಯೆಯಿದೆ. ಜೊತೆಗೆ ತನ್ನದೇ ಆದ ಹೇಳುವ ಕ್ರಮವನ್ನು ಅವರು ಅಪ್ಪಿದ್ದಾರೆ. ಹಾಗಾಗಿ ಅವರ ಕವಿತೆಗಳು ಅಗತ್ಯ ಕಾವ್ಯ ಗುಣವನ್ನು ಒಡಲಾಗಿಸಿಕೊಂಡಿವೆ. ಅಂತೆಯೇ ತನ್ನ ಕಾವ್ಯದೇಣಿಯಲ್ಲಿ ತನ್ನ ಮೆಟ್ಟಿಲನ್ನೂ ಗಮನಿಸಿರುವ ಕವಿ ಅದಕ್ಕೆ ಕಾರಣಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ.

ನಡೆದು ಬಂದ ಹೆಜ್ಜೆಗುರುತಿನ
ಮೇಲೆ ಬಿರುಗಾಳಿ..
ಬಿರುಗಾಳಿ ನಾನೇ ಸೃಷ್ಟಿಸಿದ್ದಾ?
ಆವೇಗದ ವೇಗದ್ದಾ?
ಉತ್ತರ ಯಾವುದಾದರೇನು
ಅಳಿಸಿಹೋಗಿದೆ ಇತಿಹಾಸ -ಎಂಬ ಮಾತುಗಳು ಇದಕ್ಕೆ ಸಾಕ್ಷಿ.

ಕವಿತೆ ಮುಗಿಯುವುದು

ನೆನಪುಗಳ ಗಂಟು; ಜೋತು ಬಿದ್ದಿದೆ ಹೆಗಲಿಗೆ
ಬೆಂಬಿಡದೆ ಕಾಡುವುದಕ್ಕೊ? ಗುರಿ ತೋರುವುದಕ್ಕೊ? ಎಂದು.

ಮಾನವನ ಬದುಕಿನ ದುರಂತವೆಂದರೆ ಬದುಕಿನ ಪಾಠಗಳಿಂದ ಗುರಿಯನ್ನರಸದೆ ಹೋಗುವುದರಿಂದ ಆಗುವ ಮರಳಿಸಲಾಗದ ಇತಿಹಾಸದ ತಪ್ಪುಗಳು, ದುರಂತಗಳು. ಬಿ ಆರ್ ಲಕ್ಷ್ಮಣರಾವ್ ಕ್ವಿಕ್ಸೋಟ್ ಕವಿತೆಯಲ್ಲಿ ಬರೆದಂತೆ, ಕ್ಷಮಿಸು ಇತಿಹಾಸವೇ, ಎಂದು ಅವರು ಪ್ರಾರ್ಥಿಸುವುದು ಇತಿಹಾಸದ ದುರಂತಗಳಿಂದ ಪಾಠ ಕಲಿಯದೆ ಹೋದ ಹೆಡ್ಡತನಕ್ಕಾಗಿ.

ಹಿಂಸೆ ಸೋಮು ಅವರನ್ನು ಕಾಡುವ ಮತ್ತೊಂದು ವಿಚಾರ. ಬಂದೂಕಿನ ನೆಲೆಯಿಂದ ಹಿಂಸೆ, ಕೊಲೆಗಳ ರಾಜಕಾರಣವನ್ನು ಗಮನಿಸುವ ಸೋಮು ನಿಶ್ಚಿತವಾಗಿ ಇವುಗಳಿಂದ ಮನುಕುಲವನ್ನು ಪಾರುಮಾಡುವ ಬಗ್ಗೆ ಚಿಂತಿಸುತ್ತಾರೆ:

ಯಾರದೋ ಎದೆ ಸೀಳುವ ಮೊದಲು
ಬಂದೂಕಿನೊಳಗಿನ ಕತ್ತಲೆಯಲ್ಲಿ
ನನ್ನನ್ನು ನೂಕುವ ಕಿರಾತಕರು
ಸತ್ಯ ಹೇಳುವುದಿಲ್ಲ ನನಗೆ -(ಕ್ಷಮೆ ಕೇಳಿದ ಬಂದೂಕಿನ ಗುಂಡು)

ಆದರೆ ಪ್ರತಿಹಿಂಸೆಯ ಹಿಂಸೆಯು ಅವರನ್ನು ಗಾಂಧಿಯನ್ ತಾತ್ವಿಕತೆಯಿಂದ ದೂರ ಉಳಿಸುತ್ತದೆ. ಮುಂದುವರಿದು ಇದೇ ಕವಿತೆಯಲ್ಲಿ ಅವರು ಬರೆಯುವುದು ಹೀಗೆ:

ಸತ್ಯ ಗೊತ್ತಾದರೆ
ಬಂದೂಕನ್ನೆ ಅವರ ಕಡೆಗೆ ತಿರುಗಿಸಿ
ಅವರೆದೆಯನ್ನು ಸೀಳಿ
ನಿಮ್ಮೆದುರು ನಿಲ್ಲತ್ತಿದ್ದೆ (ಕ್ಷಮೆ ಕೇಳಿದ ಬಂದೂಕಿನ ಗುಂಡು)

ಸೋಮು ಎದುರಿನಲ್ಲಿ ಇಟ್ಟುಕೊಳ್ಳುವ ಮತ್ತೊಂದು ಪ್ರಶ್ನೆ ಜಾತಿಮೂಲದ್ದು. ಸಾವಿನಲ್ಲೂ ಬಿಡದೆ ಕಾಡುವ ಜಾತಿ, ಕುಲ, ಮತದ ಪ್ರಶ್ನೆಗಳನ್ನು ಸಮಾಜ ಬಿಡಿಸಿಕೊಳ್ಳದೆ ಸಾಂದ್ರೀಕರಣಗೊಳ್ಳುವ ಜಾತಿ ಮತದ ವಿಚಾರಗಳು ನಾಗರಿಕ ಮನಸ್ಸನ್ನು ಕಂಗೆಡಿಸುತ್ತವೆ. ಈ ವಿಚಾರಗಳನ್ನು ಮಣ್ಣು ಮಾಡಬೇಕಾದ ಸನ್ನಿವೇಶವೊಂದರ ಮೂಲಕ ಸೋಮು ನಿರ್ವಹಿಸುವ ಬಗೆ ನೋಡಿ:

ಓದಿನ ವಿಸ್ತಾರವಿಲ್ಲದಿದ್ದರೆ ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು, ಸ್ಥಾಪಿಸಿಕೊಳ್ಳುವುದು ಕಷ್ಟಸಾಧ್ಯ. ಈ ಅಡಚಣೆಯನ್ನು ಸೋಮು ದಾಟಿದ್ದಾರೆ. ಓದಿನ, ಹಂಬಲದ, ಆಶಯದ ಬರವಣಿಗೆಯ ಹಿಂದೆ ಈ ಕಹಿ ಅನುಭವಗಳ ಛಾಯೆಯಿದೆ.

‘ಯಾವ ಕುಲ? ನಿನಗಿಲ್ಲ ಇಲ್ಲಿ ನೆಲ
ಹೋಗು ಪಕ್ಕದೂರಿಗೆ ಬೇಡವೆಂದರೆ
ಬಿಸುಟು ರಸ್ತೆ ಬದಿಗೆ
ಎರಡೇ ಗುಕ್ಕು ನರಭಕ್ಷಕರಿಗೆ’

ಎರಡನೇ ಚಿತ್ರ:

ಗೋರಿಯೊಳಗಿನ ಮೈಯತ್‌ ನ ಮಾರುತ್ತರ
‘ಜನಾಜ್‌ ನಲ್ಲಿ ತರುವ ಹೆಣಕ್ಕಷ್ಟೇ ಜಾಗ’

ಚಿತ್ರ ಮೂರು

ಮನವಿ
ಪುರಸ್ಕರಿಸಿದ್ದಾರೆ ‘ಮುಚ್ಚುವ ಹೆಣದೆದೆಯ
ಮೇಲೆ ಶಿಲುಬೆ ನೆಡಬೇಕಂತೆ’

ಕೊನೆಯ ಚಿತ್ರ ಇವೆಲ್ಲದರ ಸಾರಾಂಶದಂತಿದೆ.

ತನ್ನಡಿಯಲಿ ಬೆಳೆದು ಜಗದೆತ್ತರ
ತಲುಪಿದ ಬುದ್ಧನಿಗೆ ಮರದ ಪ್ರಶ್ನೆ
‘ಸಾಸಿವೆ ತರುವೆ ಜೀವ ಕೊಡುವೆಯಾ
ಶಾಂತಿ ನೆಮ್ಮದಿಗೆ?!

ಇಲ್ಲಿ ಯಾವ ಮಾರುತ್ತರವನ್ನೂ ನಿರೀಕ್ಷಿಸುವಂತಿಲ್ಲ. ಉತ್ತರ ಕೊಡಬೇಕಿರುವುದು ಮನುಷ್ಯರ ಅಂತರಾಳ. ಇದರ ಬಗ್ಗೆ ಕವಿಗೇನು ಅನ್ನಿಸಿತು? ಹುಟ್ಟಿ ಬೆಳೆಸಲು ಜಾಗವಿಟ್ಟೆ ಒಡಲಲ್ಲಿ. ಸ್ಮಶಾನ ಕೊಡಲಿಲ್ಲ ಎಂದು. ಈ ಕವಿತೆಗೆ ಇದ್ದ ಸಾಧ್ಯತೆಯನ್ನು ಯಾಕೋ ಕವಿ ಮೊಟಕಾಗಿಸಿದ್ದಾರೆ.

ಸೋಮು ಕವಿತೆಗಳಲ್ಲಿ ಹತಾಶೆಯ ಸ್ಥಾಯಿಭಾವವೊಂದರ ಪ್ರವಾಹವಿದೆ. ಕಂಡ ಕಡೆಯಲೆಲ್ಲ ಅವರಿಗೆ ಶೀತಲ ಕೋಮಲಗಳು ಕಾಣುವುದು ಕಷ್ಟವಾಗಿದೆ. ಅದರ ಜೊತೆಗೆ ಈ ಸನ್ನಿವೇಶ ನಿರ್ಮಾಣಕ್ಕೆ ತಾನೂ ಕಾರಣನೇನೋ ಎಂಬ ಸ್ವಯಂ ಆರೋಪದ ಪಾಪಪ್ರಜ್ಞೆ ಹಲವೆಡೆ ವ್ಯಕ್ತವಾಗುತ್ತದೆ. ಈ ಭಾವ ಢಾಳಾಗಿ ಸ್ವಯಂ ಶತ್ರು ಕವಿತೆಯಲ್ಲಿ ಅಭಿವ್ಯಕ್ತಿ ಪಡೆದಿದೆ:

ಮಂದಿರದ ಮೇಲೆ ಹಬ್ಬಿದ ಬಳ್ಳಿ
ಹಸಿರು ಬಣ್ಣದ್ದೆಂದು ಕುಡಿ ಚಿವುಟಿದ
ಮತಿಹೀನ ನಾನು

ಮಸೀದಿಯ ಮುಂಬಾಗಿಲಿನಲ್ಲಿ ಗೂಡು ಕಟ್ಟಿದ
ಕೆಂಜಿರುವೆ ಕೇಸರಿ ಮೈಯದೆಂದು
ರೆಕ್ಕೆ ಮುರಿದ ಧರ್ಮಾಂಧ ನಾನು

ಶಿಖರದಿ ನೆಟ್ಟ ಶಿಲುಬೆ ಕೆತ್ತಿಕೊಟ್ಟವ
ಬಡಗಿಯೆಂದು ಉಳಿ ಬಾಚಿ ಕೈಗಳಿಗೆ ಮೊಳೆ
ಹೊಡೆದ ಧರ್ಮಮೋಹಿ ನಾನು

‘ಈ ದೇಶದಲ್ಲಿ ಸ್ಮಶಾನಗಳೂ ಜಾತಿಯಾಧಾರಿತ ಕೇಡರ್‌ ನಲ್ಲಿರುವ ದುರಂತವನ್ನು ಹೇಳುತ್ತದೆ. ಈ ಅಸಮಾನ ಭಾರತದಲ್ಲಿ ಬಣ್ಣಗಳೂ ಧರ್ಮಾಧಾರಿತವಾಗಿ ಹೋಗಿವೆ’ ಎಂಬ ಮುನ್ನುಡಿಯ ಮಾತುಗಳು ಇಲ್ಲಿ ಉಲ್ಲೇಖಾರ್ಹವಾಗಿವೆ. ಈ ಅಪರಾಧೀ ಭಾವ ತನ್ನೊಳಗೇ ಅಡಗದೆ ಸಾರ್ವಜನಿಕೋಕ್ತಿಯಾಗಿ ಪರಿವರ್ತನೆಯಾಗುವುದೇ ಕವಿಯು ಮೀರುವ ಪ್ರಯತ್ನದಲ್ಲಿ ಇದ್ದರೆಂಬ ನಂಬಿಕೆಯನ್ನು ಹುಟ್ಟಿಸುತ್ತದೆ. ದಯಾಮರಣ ಕವಿತೆ ಯೂಥನೇಶಿಯಾ ಕುರಿತ ಚರ್ಚೆಯನ್ನು ಮುಂದುವರಿಸಿ ಅದಕ್ಕೊಂದು ಸಮರ್ಥನೆಯನ್ನು ಕೊಡುತ್ತದೆ. ಆದರೆ ಅದನ್ನು ವಿರೋಧಿಸುವ ಭಾರತೀಯ ಮನಸ್ಸನ್ನು ಮತ್ತದರ ಧಾರ್ಮಿಕತೆಯ ಆಧಾರದ ನಿರಾಕರಣೆಯನ್ನು ಅದು ಪ್ರಶ್ನಿಸುವುದಿಲ್ಲ. ಬದಲಿಗೆ ಅದನ್ನು ಕಾನೂನಿನ ಶಿಕ್ಷೆಯೆಂದು ಪರಿಭಾವಿಸುತ್ತದೆ.

ಕಾನೂನಿಗೆ ಶರಣಾಗುವ ಜೀವಕೆ
ಸಿಗಲಿ ಹಿಡಿ ಪ್ರೀತಿ –ಎಂದು ಕೇಳುವ ಅವರು ಅದರ ಮುಖ್ಯ ಘಟಕವಾದ ಸಮಾಜದ ನೆಲೆಯಲ್ಲಿ ಕಾವ್ಯವಸ್ತುವನ್ನು ಗ್ರಹಿಸಬೇಕಿತ್ತು ಎನಿಸುತ್ತದೆ.

ಪುಟ್ಟಕ್ಕನ ಹೈ ವೇ ಸಿನಿಮಾದ ಕಥೆ ಇಂದಿನ ಇನ್ಫ್ರಾಸ್ಟ್ರಕ್ಚರ್ ಯುಗದ ದುರಂತಗಳಿಗೆ ಕನ್ನಡಿ ಹಿಡಿಯುತ್ತದೆ. ಅನ್ನದ ಆತ್ಮಹತ್ಯೆ ಎಂಬ ಕವಿತೆ ಇಂಥದೇ ವಸ್ತುವಿನ ನಿರ್ವಹಣೆಯನ್ನು ಮಾಡುತ್ತದೆ.

ಅನ್ನದ ತುತ್ತಾಗಿದ್ದದ್ದು
ಗಂಗಾಳದಷ್ಟು ಹೊಲ
ರಿಂಗ್ ರೋಡ್‌ ಗೆ ತುತ್ತಾಗಿ
ಶವಸಂಸ್ಕಾರಕ್ಕೂ ಅಡಿ ಲೆಕ್ಕದ
ಮಣ್ಣು ಇರಲಿಲ್ಲ ಇವನ ಬಳಿ

ಈ ಕಾರಿಡಾರುಗಳು, ಹೈವೇಗಳು ಕೊನೆಗೆ ಮಣ್ಣನ್ನು ನಂಬಿ ಬದುಕುವವರನ್ನು ಸಾವಿನತ್ತ ದೂಡುವುದನ್ನು ಕವಿತೆ ವಿಹ್ವಲವಾಗಿ ಬಣ್ಣಿಸುತ್ತದೆ. ಆಧುನಿಕತೆಯು ಮನುಷ್ಯ ಬದುಕನ್ನು ಕಟ್ಟಿಕೊಡದಿರುವುದನ್ನು ಕುರಿತು ಕವಿತೆ ಧ್ಯಾನಿಸುತ್ತದೆ. ಹೀಗೆ ಎಲ್ಲಕ್ಕೂ ಮಿಡಿವ ಮನಸ್ಸಿನ ವಿಹ್ವಲತೆ ವಿಶ ಪಾಶ ಕವಿತೆಯಲ್ಲಿ ಮುಂದುವರಿಯುತ್ತದೆ. ಇಲ್ಲಿ ಗುಡಿಸಲಲ್ಲಿ ಮಲಗಿ ಹಾವು ಕಡಿದು ಸತ್ತ ಮಕ್ಕಳಿಬ್ಬರ ಕುರಿತು ಚಿತ್ರಣವಿದೆ.

ಬಹುಶಃ ಎಲ್ಲ ಕವಿಗಳೂ ತಾಯಿಯನ್ನು ಕುರಿತು ಬರೆಯುತ್ತಾರೆ. ಲಂಕೇಶರ ಅವ್ವ ಇಲ್ಲಿ ಸ್ಮರಣೀಯವಾದದ್ದು. ದಲಿತ ಸಾಹಿತ್ಯದಲ್ಲಂತೂ ತಾಯಿ ದೊಡ್ಡ ಮೋಟಿಫ್. ಸೋಮು ತಂದೆಯ ಬಗ್ಗೆ ಇಂತಹ ಕವಿತೆಯನ್ನು ಬರೆದಿದ್ದಾರೆ. ಎಲ್ಲವುಗಳ ಮೊತ್ತ-ಅಪ್ಪ ಎಂಬ ಕವಿತೆ ಅಪ್ಪನ ವ್ಯಕ್ತಿತ್ವವನ್ನು –

ಅಪ್ಪನೆಂದರೆ…
ಸೈನಿಕನಂತಹ ರಕ್ಷಕ, ಅಪ್ಪಟ ಸ್ನೇಹಿತ, ಸಲಹೆಗಾರ
ಮನೆಯಂಗಳದಲ್ಲಿ ಅರಳಿದ
ಮಕ್ಕಳೆಂಬ ಹೂಗಳ ಹೂದೋಟದ ಮಾಲಿ
ಚಳಿ ಮಳೆ ಗಾಳಿ ಬಿಸಿಲಿನಿಂದ ಕಾಯುವ ಮನೆ
ಅಪ್ಪನೆಂದರೆ ಹಸಿರು ತುಂಬಿದ ಕಾಡು
ಪ್ರೀತಿಯ ಪರ್ವತಗಳ ಅನಂತ ಸಾಲು... ಎಂದು ಬಣ್ಣಿಸುತ್ತದೆ. ಬಹುಶಃ ಇದಕ್ಕಿಂತ ಅಡಕವಾಗಿ ಸಂಬಂಧವೊಂದರ ವ್ಯಾಖ್ಯೆ ಕಷ್ಟವೇನೋ!

ಹೀಗೆ ತಮ್ಮ ನೋಟವನ್ನು ವ್ಯಾಖ್ಯಾನಕ್ಕೆ ಒಳಪಡಿಸುವ ಸೋಮು ಹಲವೆಡೆ ಸಾಮಾನ್ಯನ ಸಂಘಟನೆಯಲ್ಲಿ ಸಿಡಿದು ನಿಲ್ಲುವ ಪ್ರತೀಕಗಳನ್ನು ನಿರ್ಮಿಸುತ್ತಾರೆ. ಗೋಡೆ ಕವಿತೆಯಲ್ಲಿ ಇಂತಹ ಸ್ವರೂಪವನ್ನು ಗಮನಿಸಬಹುದು. ಇದರ ಮುಂದುವರಿಕೆಯೆಂಬಂತೆ ನನ್ನ ಮನೆಗೆ ನಾನೇ ಆಗಂತುಕ ಎನ್ನುವ ನನ್ನೂರು, ನನ್ನ ಮನೆ: ನನ್ನದಲ್ಲ ಕವಿತೆಯನ್ನು ನೋಡಬಹುದು. ಈ ಕವಿತೆಯಲ್ಲಿ
ನಡುಮನೆಯ ಕುರ್ಚಿಯಿಂದ ಹೊರಡುವ
ಫರ್ಮಾನಿಗೆ ಕಾಯುಬೇಕು ಇಡೀ ಊರು
ಎನ್ನುವ ಮಾತು ಒಂದು ಸಂದರ್ಭವನ್ನು ನಿರ್ಮಾಣ ಮಾಡಿದರೆ ಇನ್ನೊಂದು

ಬಾಂಬ್ ಹಕ್ಕಿ ಹಾಕಿದ ಹಿಕ್ಕೆಯಲ್ಲಿನ ಬೀಜಗಳು
ಗೋಡೆ ಬಿರುಕಿನಲ್ಲಿ ಹೆಮ್ಮರವಾಗಿ ಬೆಳೆದು
ಊರಿಗೂರೇ ಹಬ್ಬಿದ ಬೇರುಗಳಿಂದ
ಮನೆ ಮನಸ್ಸು ಛಿದ್ರ ಛಿದ್ರ; ಊರು ಅಭದ್ರ – ಎಂಬ ವಿನಾಶದ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

ಹಾಗೆಂದು ಕವಿಗೆ ತೀರಾ ಹಿರಿದಾದ ನೈರಾಶ್ಯಭಾವವಿಲ್ಲ. ಪದಕ್ಕೊಂದು ಪದವಿಟ್ಟು ಭಾವಕೆ ಜೀವಕೊಟ್ಟು ಕವಿಯಾದವರು ಸೋಮು. ಬೇವು ಬೆಲ್ಲ ಕವಿತೆ ಈ ಭಾವವನ್ನು ಮತ್ತಷ್ಟು ಹಿಗ್ಗಿಸುತ್ತದೆ.

ಎಲೆಯುದುರಿಸಿ ಬರಿದಾದ
ಬೋಳು ಮರಕ್ಕೆ
ಕಳೆದುಕೊಂಡ ನೋವಿಲ್ಲ

ಹೊಸತು ಚಿಗುರು
ಮೂಡುವ ಖುಷಿಗೆ
ಕಾಲ ಅಡ್ಡಿಯಾಗುವುದಿಲ್ಲ

ಬದುಕಿನಲ್ಲಿ ಆಶಾಭಾವವನ್ನು ವೃದ್ಧಿಸುವುದು ಈ ನಿರ್ಲಿಪ್ತ ಭಾವದ ಒಲವು ಮತ್ತು ಅರಿವು. ಕವಿತೆಯ ಕೊನೆ ಎಷ್ಟು ಚೆನ್ನಾಗಿದೆ ನೋಡಿ:

ಉಸಿರು ಅರಳುವ ಸುಖದ ಹೊತ್ತಿಗೆ
ಬೆಳಕೇ ಇರಬೇಕೆಂದೇನಿಲ್ಲ

ಹೋಯಿತೆಂಬ ನೋವು-ಬೇವು
ಹೊಸತು ಹುಟ್ಟೆಲ್ಲ-ಬೆಲ್ಲ

ಹಲವು ಕವಿತೆಗಳಲ್ಲಿ ಈ ವಿನಾಶದ ನಾಶವನ್ನು ಬಯಸುವ ಹಂಬಲವೇ ಪ್ರಾಮಾಣಿಕವಾಗಿ ಅಭಿವ್ಯಕ್ತಗೊಂಡಿದೆ.

ನರಸಿಂಹಸ್ವಾಮಿಯವರ ಬಗೆಯಲ್ಲಿ ಚಿಂತಿಸುವ ಮನಸ್ಸೂ ಸೋಮು ಅವರಿಗಿದೆ ಎಂಬುದಕ್ಕೆ ತವರು ಮನೆ ಕವಿತೆ ಉದಾಹರಣೆ. ತವರಲ್ಲಿ ಮಗಳು. ಅಪ್ಪನಿಗೋ ಆಸೆ, ಅಳಿಯ ಬರಲಿ ಎಂದು: ಅವರೇ ಕರೆದಿದ್ದಾರೆ

ಬಂದು ಬಿಡಿ ಇಲ್ಲಿಗೆ
ಉಂಡು ತಿಂದು ಆರಾಮಾಗಿರಿ ಚಂದಗೆ
ನಮಗೂ ಖುಷಿ ನೀವಿರಲು ಮಗಳೊಂದಿಗೆ

ಅವರೊಂದಿಗೆ ಒಪ್ಪುವ ಅಳಿಯನಿಗೆ ಕಾಡುವ ಮನಸ್ಸು

ಬರುವೆ ಮುಂದಿನವಾರ
ಹುಣ್ಣಿಮೆಯಲ್ಲಿರುವಂತೆ ತುಂಬು ಚಂದಿರ

ಆದ್ದರಿಂದ ಅವನು ಹೇಳುತ್ತಾನೆ:

ಹೇಳಬೇಡಿ ನಾ ಬರುವುದು ಅವಳಿಗೆ ಸಡಗರ
ನಾನೇ ಬಂದು ತೊಡಿಸುವೆ ಒಲವಿನ ಕಸವರ

ಹೆಂಡತಿಯ ಮನಸ್ಸು ಒತ್ತಾಯಿಸಿ ಕೇಳುವಳು

‘ಎಂದು ಬರುವಿರಿ ಕಾಯುತಿರುವೆ ತುದಿಗಾಲಲ್ಲಿ’
‘ಬರಲ್ಲ ಕಣೇ’ ಎಂದೆ ಹುಸಿ ಕೋಪದಲಿ
***
ಕೊನೆಗೂ ಸೋತವನು ನಾನೇ ಅವಳೊಲವಿಗೆ
ಬರುವೆನೆಂದುದ ಕೇಳಿ ಕುಣಿದಳು ನವಿಲ ಹಾಗೆ

ಜೀವನದ ಸಣ್ಣ ಸಂತೋಷಗಳನ್ನು ಅಷ್ಟೇ ಅನುರಕ್ತಿಯಿಂದ ಪರಿಭಾವಿಸಿ ಅನುಭವಿಸುವುದು ಬದುಕಿನ ಸಾರ್ಥಕ್ಯದ ಹಾದಿ. ಇದು ಕವಿಯನ್ನು ಸಾಮಾಜಿಕ ಬದ್ಧತೆಯಿಂದ ದೂರಮಾಡುವುದಲ್ಲ. ಕಳಸಾ ಬಂಡೂರಿ ಹೋರಾಟದ ಸಮಯದಲ್ಲಿ ರೈತರನ್ನು ಥಳಿಸಿದ ಪೋಲೀಸರ ವರ್ತನೆಯಿಂದ ಬೇಸತ್ತು ಕವಿತೆ ಬರೆಯುವ ಕವಿ ಮಾನವೀಯತೆಯ ದೃಷ್ಟಿಯಿಂದಲೂ ಸೂಕ್ಷ್ಮಗಳನ್ನು ನಿರ್ವಚಿಸಬಲ್ಲರು. ಅವರ ಹಸಿವು ಕವಿತೆಯ ಕೊನೆ ಗಮನಿಸಿ:

ನೆದರ ನೋಟ ಅಧರ ದಾಟದು
ಉದರ ತುಂಬದು ಕರುಣೆ ಸಾಲದು
ತುತ್ತೊಂದು ಬೇಕು
ಬೇಕು ಅಷ್ಟೇ..!

ಈ ಕಾರಿಡಾರುಗಳು, ಹೈವೇಗಳು ಕೊನೆಗೆ ಮಣ್ಣನ್ನು ನಂಬಿ ಬದುಕುವವರನ್ನು ಸಾವಿನತ್ತ ದೂಡುವುದನ್ನು ಕವಿತೆ ವಿಹ್ವಲವಾಗಿ ಬಣ್ಣಿಸುತ್ತದೆ. ಆಧುನಿಕತೆಯು ಮನುಷ್ಯ ಬದುಕನ್ನು ಕಟ್ಟಿಕೊಡದಿರುವುದನ್ನು ಕುರಿತು ಕವಿತೆ ಧ್ಯಾನಿಸುತ್ತದೆ. ಹೀಗೆ ಎಲ್ಲಕ್ಕೂ ಮಿಡಿವ ಮನಸ್ಸಿನ ವಿಹ್ವಲತೆ ವಿಶ ಪಾಶ ಕವಿತೆಯಲ್ಲಿ ಮುಂದುವರಿಯುತ್ತದೆ.

ಈ ಎಚ್ಚರದಲ್ಲಿ ವಾಸ್ತವವನ್ನು ಗ್ರಹಿಸುವ ಬಗೆ ಹೀಗೆ:

ಒಳಜಗತ್ತನ್ನು ಬೆಳಗುವ
ಕಣ್ಣುಗಳ ಬಿಂಬಗಳಲಿ
ದೀಪದ ಬೆಳಕಿನ ಬದಲಾಗಿ
ಕಾರಿಕೊಂಡಿದೆ ಬೆಂಕಿ
ಇದಕ್ಕೆ ಕೊನೆ ಮೊದಲಿಲ್ಲ -(ಕೊನೆ ಮೊದಲಿಲ್ಲ)

-ಇವು ಕೊನೆಯ ಕವಿತೆಯ ಕೊನೆಯ ಸಾಲುಗಳು. ಯಾರೋ ಕಡಿದ ಕಾಡಿಗೆ ಮಳೆ ಇಲ್ಲದಾಗಿ ಇನ್ನಾರೋ ಕಟ್ಟಿಕೊಂಡ ಬೆಚ್ಚನೆ ಮನೆಗೆ ಮರಳಾಗಿ ಹೊಳೆಯೊಡಲು ಖಾಲಿಯಾಗಿ ಬೇಸಿಗೆಯಲ್ಲಿ ಹೊಳೆಯ ಕರುಳು ಬತ್ತಿ ಹೋಗುತ್ತದೆ ಎನ್ನುವ ಸೋಮು ’ಆದರೆ ನನ್ನೊಳಗಿರುವ ಪ್ರವಾಹಕ್ಕೆ ಬರವಿಲ್ಲ’ ಎಂದೂ ಬರೆಯುತ್ತಾರೆ.

‘ಈ ಸಂಕಲನದ ಪದ್ಯಗಳೆಲ್ಲ ಈ ಲೋಕದ ದಂದುಗಗಳಿಗೆ ಮಿಡಿದ, ಬಂಡಾಯ ಹೂಡಿದ, ಸಾಂತ್ವನ ನೀಡಲು ಬೆರಳು ಚಾಚಿದ, ಸಖ್ಯದ ದಾರಿಗೆ ಅಹ್ವಾನಿಸುವ ಇರಾದೆಯನ್ನು ಹೊಂದಿವೆ’ ಎಂಬ ಮುನ್ನುಡಿಕಾರರ ಮಾತು ಒಪ್ಪತಕ್ಕದ್ದು. ಆದರೆ ಅವರು ಹೇಳುವ ಕ್ರಿಯಾಶೀಲತೆಯೆಂಬುದು ಸೃಜನಶೀಲ ಸಂವೇದನೆಯ ರೂಪವಾಗಿರುತ್ತದೆ. ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ ಸೋಮು ಕುದರಿಹಾಳ ತಮ್ಮ ಪಯಣವನ್ನು ಕಾಲುದಾರಿಯಲ್ಲಿ ನಡೆಸುತ್ತಿದ್ದಾರೆ. ರಾಜಮಾರ್ಗ ಇಂದಿನ ನಿಷೇಧಿತ ವಲಯ. ಸಾಮಾಜಿಕ ಸ್ತರವಿನ್ಯಾಸದ ಸೂಕ್ಷ್ಮತೆಯಿದ್ದು ಸಮುದಾಯದ ಸಾಂಸ್ಕೃತಿಕ ಲಯಗಳನ್ನು ಅರಿತ ಘಳಿಗೆಯೇ ಕಾಲುದಾರಿಯ ಪಥಿಕನಾಗುತ್ತಾನೆ ಕವಿ. ಎನ್ನುವ ಮತುಗಳು ವಿಸ್ತೃತವಾದ ಚರ್ಚೆಯನ್ನು ಬೇಡುತ್ತವೆ.

ಒಟ್ಟಾರೆ ಸೋಮು ಕುದರಿಹಾಳ ಅವರ ಕವಿತೆಗಳು ಈ ನೆಲದ, ಈ ಬದುಕಿನ ಉಸಿರಾಡುತ್ತ ಸಾಮಾಜಿಕ ದೋಷಗಳಿಗೆ ಕನ್ನಡಿ ಹಿಡಿಯುತ್ತ ಸಾಗುತ್ತವೆ. ವಚನ ಕವಿತೆಯ ಬಗೆಯಲ್ಲಿ ಕೆಲವು ಸಾಗಿದರೂ ಚಿತ್ರಗಳನ್ನು ಸಮರ್ಥವಾಗಿ ಹಿಡಿದಿಡುವ ಸುಮಾರು ಕವಿತೆಗಳು ಕಾವ್ಯಧ್ವನಿಯ ಸಾಧ್ಯತೆಗಳನ್ನು ತಮ್ಮ ಸ್ವರೂಪದಲ್ಲಿ ಇಟ್ಟುಕೊಂಡಿವೆ. ಕವಿತೆಗೆ ಕೊಂಚ ಗೇಯತೆಯೂ ಅಗತ್ಯ ಅಥವಾ ಅಂತರ್ಲಯವಾದರೂ ಸಾಧಿತವಾದರೆ ಚೆನ್ನ. ಈ ಅಂತರ್ಲಯವೇ ಕನ್ನಡ ಕಾವ್ಯದ ಒಡಲಿನಂತಿದೆ.

ಇಂದಿಗೂ ಹಲವರು ಹಾಡುವ ಕವಿತೆಗಳನ್ನು ಬರೆಯುತ್ತಿದ್ದಾರೆ. ಬೇರೆ ಬೇರೆ ಕವಿಗಳು ತಮ್ಮ ಕವಿತೆಗಳಲ್ಲಿ ಖಚಿತ ನಡೆಯ ಲಯಗಳನ್ನು ಸ್ವಾಭಾವಿಕವಾಗಿಯೇ ತರುತ್ತಿದ್ದಾರೆ. ಇದನ್ನು ಸೋಮು ಗಮನಿಸಬೇಕು. ಜೊತೆಗೆ ಮಾತಿನಲ್ಲಿ ಖಚಿತತೆಯ ಬಗೆಗೂ ಚಿಂತಿಸಬೇಕು. ಉದಾಹರಣೆಗೆ ಪಾಳು ಬಿದ್ದ ಬರಡು ಮನ, ನೀರಾರಿದ ಒಣಕಲು ಒಡಲು ಇಂಥ ಪ್ರಯೋಗಗಳು ಅಂಥ ಪ್ರಯೋಜನವನ್ನು ತರಲಾರವು.

ಈ ಕಟ್ಟಿನಲ್ಲಿ ಮಕ್ಕಳಿಗಾಗಿ ಬರೆದ ಕವಿತೆಗಳೂ ಇವೆ, ಕೆಲವು. ಕಥೆಯನ್ನು ಮಕ್ಕಳ ಮನಮುಟ್ಟುವಂತೆ ಹೇಳಬಲ್ಲ ಕಲೆ ಇವರಿಗೆ ದಕ್ಕಿದೆ. ಮಕ್ಕಳ ನಡುವೆಯೇ ಇರುವ ಕವಿ ಆ ದಿಕ್ಕಿನಲ್ಲೂ ಹೆಚ್ಚಿನ ಪರಿಶ್ರಮ ಮಾಡಬಹುದು: ಉದಾಹರಣೆಗೊಂದು ಕವಿತೆ

ಸಮಯ

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಿರುವೆ
ಇಲಿಗೆ ಬೋನನೂ ಇಟ್ಟಿರುವೆ

ಹಾಳಾದ್ದು ಇಲಿ ಕಾಟ
ಹಾಲು ಕದಿವ ಬೆಕ್ಕಿನದೂ

ಆಯಕಟ್ಟಿನ ಜಾಗದಲಿ ಕುಳಿತಿರುವೆ
ಆಯತಪ್ಪಿದರೆ ಅಪಾಯ ನನಗೂ

ಬೆಕ್ಕು ಬರುವ ಸದ್ದು ಗೊತ್ತಾಗಿ
ಇಲಿ ಕಚಕ್ ಪಚಕ್ ಕೀಚ್ ಕೀಚ್
ಇಲಿಯಾಸೆಗೆ ಬೆಕ್ಕು ನೆಗೆದು
ಢಣ್ ಢಣಣಣಣ್

ಹಾಲಿನ ನೆಲುವಿನ ಬಳಿ ಕಾವಲಿದ್ದ
ನಾನೂ ಸದ್ದನು ಬೆನ್ನತ್ತಿ

ಬೀಸಿದ ಕೋಲು ಬೋನಿಗೆ ಬಿದ್ದು
ಇಲಿ ಹೊರಗೋಡಿತು, ಬೆಕ್ಕು ಹಾಲಿನಡೆಗೆ

ಕಾಲನೆತ್ತಲಾಗುತ್ತಿಲ್ಲ ಆಗ ಬಿದ್ದದ್ದು
ಈಗ ನೋವು; ಕುಂಟುತ್ತಿದೆ ಬೆಕ್ಕು

ಕೋಲು ಬಿದ್ದಿದೆ ಅಷ್ಟು ದೂರ
ಮೀಸೆ ನಿಮಿರಿಸಿದೆ ಇಲಿ ಕೈ ಅಳತೆಯಲಿ