ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ ಸರಳ ಸುಂದರ ಲಯ, ಪ್ರಾಸಗಳಲ್ಲಿ ತಮ್ಮ ಮನಸ್ಸಿನೊಳಗಣವನ್ನು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ, ಯಾವುದೇ ಮುಚ್ಚುಮರೆ ಇಲ್ಲದೆ.
ಸರೋಜಿನಿ ಪಡಸಲಗಿ ಬರೆದ ಲೇಖನ

 

ಜಾನಪದ ಸಾಹಿತ್ಯದ ಆಳ- ಅಗಲದ ಅಂತ ಸಿಗದ್ದು. ಖಂಡಿತವಾಗಿಯೂ ನವೋದಯ ಸಾಹಿತ್ಯದ ಬೇರು ಅಲ್ಲಿಯೇ. ಬಿ.ಎಂ.ಶ್ರೀ ಯವರು ಹೇಳಿದಂತೆ – “ಜನಪದ ಸಾಹಿತ್ಯ ಬೇರು, ನವೋದಯ ಸಾಹಿತ್ಯ ಅದರ ಹೂವು”. ಜಾನಪದ ಸಾಹಿತ್ಯ ಒಬ್ಬರ ಸೃಷ್ಟಿ ಅಲ್ಲ. ಪೂರ್ತಿ ಒಂದು ಸಮುದಾಯದ, ಸಮಷ್ಟಿಯ ಸೃಷ್ಟಿ ಅದು. ತುಂಬ ವಿಸ್ತಾರ ಅದರ ಹರಿವು. ಏನಿಲ್ಲ ಹೇಳಿ ಅಲ್ಲಿ? ಪ್ರೇಮಗೀತೆಗಳು, ದಾಂಪತ್ಯ ಗೀತೆಗಳು, ಗರತಿಯ ಹಾಡುಗಳು, ಲಾಲಿಪದಗಳು, ಶಿಶು ಪ್ರಾಸಗಳು, ಲಾವಣಿ-ಗೀಗೀ ಪದಗಳು – ಸಾಮಾಜಿಕ, ಪೌರಾಣಿಕ, ರಾಜಕೀಯ ಸೇರಿದಂತೆ ನಾಟಕ, ಕೋಲಾಟ ಹೀಗೇ ಎಲ್ಲೆಡೆಯೂ ಕೈ ಚಾಚಿದೆಡೆ ಎಲ್ಲ ಜಾನಪದ ಹಾಡುಗಳು ಸಿಕ್ಕೇ ಸಿಗುತ್ತವೆ. ಮದುವೆ, ಧಾರೆ, ಬೀಗರ ಅಣಕುವಾಡುಗಳು – ಯಾವುದುಂಟು ಯಾವುದಿಲ್ಲ!

ಈ ಜಾನಪದ ಹಾಡುಗಳು ಎಲ್ಲೂ ದಾಖಲಾಗಿರಲಿಲ್ಲ. ಅವು ಹಾಗೇ ಬಾಯಿಯಿಂದ ಬಾಯಿಗೆ ಬಂದವುಗಳು.19ನೇ ಶತಮಾನದ ಆರಂಭದಲ್ಲಿ ಇವುಗಳ ದಾಖಲಾತಿ ಅಂದರೆ ಹುಡುಕಿ ಹುಡುಕಿ ಬರೆದಿಡುವ ಪ್ರಯತ್ನ ಆರಂಭ ಆದರೂ ಅದಕ್ಕೊಂದು ಓಟದ ಗತಿ ಸಿಕ್ಕಿದ್ದು 19ನೇ ಶತಮಾನದ ಕೊನೆ ಕೊನೆಗೆ, 20ನೇ ಶತಮಾನದ ಆರಂಭದಲ್ಲಿ.

ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ ಸರಳ ಸುಂದರ ಲಯ, ಪ್ರಾಸಗಳಲ್ಲಿ ತಮ್ಮ ಮನಸ್ಸಿನೊಳಗಣವನ್ನು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ, ಯಾವುದೇ ಮುಚ್ಚುಮರೆ ಇಲ್ಲದೆ. ಅದಕ್ಕೇ ಆ ಆಪ್ತತೆ ತುಂಬಿ ಹೃದಯಕ್ಕೆ ಹತ್ತಿರವಾಗುವ ಶಕ್ತಿ ಇದೆ ಅವುಗಳಲ್ಲಿ.

ಇದನ್ನು ಲಾಲಿ ಹಾಡುಗಳಲ್ಲಿಯೂ ನಾವು ಕಾಣಬಹುದು. ಒಬ್ಬ ತಾಯಿಯ ವಾತ್ಸಲ್ಯ, ಮಮತೆಗಳ ಬಗ್ಗೆ ಯೋಚಿಸಿದಾಗ ಜಾನಪದ ಲಾಲಿ ಹಾಡುಗಳಲ್ಲಿ ತೊಟ್ಟಿಕ್ಕುವ ಸವಿ ಇನ್ನಾವ ಲಾಲಿ ಹಾಡುಗಳಲ್ಲಿ ಹನಿಯಲಿಕ್ಕಿಲ್ಲ ಅನ್ನಿಸುತ್ತೆ. ಆ ಸೊಗಡೇ ಬೇರೆ. ಆದರೆ ಇವೂ ಅಷ್ಟೇ- ಎಲ್ಲಿಯೂ ದಾಖಲಾಗಿಲ್ಲ. ಈಗ ಇನ್ನುಳಿದ ಪ್ರಕಾರದ ಗೀತೆಗಳು ಬರವಣಿಗೆಯ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಸಿಗುತ್ತಿದ್ದರೂ ಈ ಲಾಲಿ ಪದಗಳು ಆ ಪ್ರಮಾಣದಲ್ಲಿ ಇನ್ನೂ ದಾಖಲಾತಿ ಕಂಡಿಲ್ಲ ಅನ್ನಿಸುತ್ತೆ.

ನನಗನಿಸೋ ಹಾಗೆ ಲಾಲಿ ಪದಗಳು, ಜೋಗುಳದ ಹಾಡುಗಳು ಒಂದೇ ಆದರೂ, ನಿಘಂಟುವಿನ ಪ್ರಕಾರವೂ ಹಾಗೇ ಆದರೂ – ಒಂದು ಸಣ್ಣ ನವಿರಾದ ಗೆರೆ ಎರಡರ ನಡುವೆ ಇದೆಯೋ ಏನೋ! ಜೋಗುಳದ ಪದಗಳು ಮಗುವನ್ನು ಮಲಗಿಸುವತ್ತ ಹೆಚ್ಚು ಒತ್ತು ಕೊಟ್ಟರೆ, ಲಾಲಿ ಹಾಡುಗಳು ಮಗುವನ್ನು ರಂಜಿಸಿ, ಲಾಲಿಸಿ, ಸಮಾಧಾನಿಸಿ ನಂತರ ನಿದಿರೆಯತ್ತ ಒಯ್ತವೆ. ಕಂದನನ್ನು ಮಲಗಿಸುವಾಗಷ್ಟೇ ಹೇಳಬೇಕು ಈ ಪದಗಳನ್ನು ಅಂತಿಲ್ಲ. ಅಳುವ ಮಗುವನ್ನು ಸಮಾಧಾನ ಮಾಡಲೂ ಈ ಪದಗಳನ್ನು ಬಳಸುತ್ತೀವಿ. ನಾಲಿಗೆಯನ್ನು ತುಟಿಯ ಮಧ್ಯದಲ್ಲಿ ತಂದು ಅಲ್ಲಾಡಿಸುತ್ತ, ‘ಲೊಳಲೊಳಲಾಯಿ ಲಾಲಿ ಲಾಲಿ’ ಅಂತ ಲಯಬದ್ಧವಾಗಿ, ಸುಶ್ರಾವ್ಯವಾಗಿ ಹೇಳೋಷ್ಟ್ರಲ್ಲೇ ಅಳುವ ಮಗು ಮೋಡಿಗೋಳಗಾದಂತೆ ಅಳು ನಿಲ್ಲಿಸಿ ತಾಯ ಮೊಗ( ಹಾಡುತ್ತಿರುವವರ ಮೊಗ) ದಿಟ್ಟಿಸಿ ನಗು ಬೀರುವುದನ್ನು ನೋಡಿದರೇನೇ ಮುದ್ದು ಬರುವಂತೆ ಇರುತ್ತದೆ. ಇನ್ನು ಲಾಲಿ ಹಾಡು ಶುರು ಮಾಡಿದರಂತೂ ಹಟ ಮಾಡುತ್ತಿದ್ದ ಕೂಸು ಇದೇನಾ ಎನ್ನುವಂತಾಗುತ್ತದೆ. ರಚ್ಚೆ ಹಿಡಿದು ಅಳುವ ಮಗುವನ್ನು ಲಾಲಿಸಿ ಸಮಾಧಾನಿಸುವುದು, ಹಾಗೇ ಮಲಗಿಸುವುದು ಒಂದು ನವಿರಾದ ಭಾವನಾತ್ಮಕ ಎಳೆಯ ಕುಸುರಿ ಕೆಲಸ. ಅಂತೆಯೇ ಈ ಲಾಲಿ ಪದಗಳು ಬಲು ನಾಜೂಕು, ಲಾಲಿತ್ಯಮಯ. ಆ ತಾಯಿ ಹೇಳೋದೂ ಅದನ್ನೇ, ಈ ಕೆಳಗಿನ ಲಾಲಿ ಪದದಲ್ಲಿ-

“ಲಾಲೆವ್ವನೆಂದರ ಲಾಲಿಸಿ ಕೇಳ್ಯಾನ/ಳ
ತಾಯ ಹಂಬಲವ ಮರೆತಾನ
ಕಂದವ್ವನ ತಾಯ ಕಂಡವರು ಕೊಡಿರಮ್ಮ||”

ಆ ಹಳ್ಳಿಯ ಗರತಿ ಹೇಳುತ್ತಾಳೆ, ಲಾಲಿ ಲಾಲಿ ಅಂದರೆ ಸಾಕು ತಾಯ ಹಂಬಲವನ್ನೂ ಮರೆತು ಬಿಡುತ್ತದಂತೆ ಕೂಸು. ಎಲ್ಲಿ ಆ ಮಗೂನ ತಾಯಿ, ಹುಡುಕಿ ತಂದು ಕೊಡಿ, ಮಗುನ ಎತ್ತಿ ಹಾಲೂಡಿಸಲಿ ಅವಳು ಅನ್ನೋ ಪಾಳಿ ಬರ್ತದಂತೆ. ಅಂಥ ಮೋಹಕ ಮೋಡಿ ಆ ಲಾಲಿ ಹಾಡುಗಳಲ್ಲಿ. ಬರಿಯಲರಿಯದ, ಓದಲರಿಯದ, ಯಾವ ಪಾಂಡಿತ್ಯದ ಗೋಜಿರದ ಆ ತಾಯಿಯ ಲಾಲಿ ಹಾಡುಗಳಲ್ಲಿ ಲೋಕವೇ ಅಡಗಿದೆ ಎಂಬ ಅದ್ಭುತ ವನ್ನು ಅಲ್ಲಗಳೆಯುವಂತಿಲ್ಲ. ಈ ಲಾಲಿ ಪದ ಅದನ್ನು ಹೇಳೋ ಕೌಶಲ್ಯ ನೋಡಿ-

“ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಲಕ್ಷಣವಂತ ಗುಣವಂತ
ಗುಣವಂತ ಕಂದವ್ವನ ಲಕ್ಷಣಕ ಲಕ್ಷ್ಮಿ
ಒಲಿದಾಳ ||”

ಇದರಲ್ಲಿ ಒಂದು ಲೋಕಾರೂಢಿ ಮಾತು, ನಂಬಿಕೆ ಅಡಗಿದೆ. ಮಕ್ಕಳು ಮತ್ತೆ ಮತ್ತೆ ಹಟಮಾಡಿ ತಿನ್ನಲು ಉಣ್ಣಲು ಬೇಡುವುದು ಒಳ್ಳೇ ಲಕ್ಷಣವಲ್ಲಂತೆ. ಅದು ದಾರಿದ್ರ್ಯದ ಲಕ್ಷಣ ಅಂತ ಒಂದು ನಂಬಿಕೆ. ಮರಾಠಿಯಲ್ಲಿ ಒಂದು ಹೇಳಿಕೆ ಇದೆ – “ಖಾಯೀನ ಖಾಯೀನ ಮ್ಹಣಾಲಕಿ ಲಕ್ಷ್ಮಿ ಜಾಯಿನ ಜಾಯಿನ ಮೀ ಮ್ಹಣತೀ” ಅಂತ. ಅಂದ್ರೆ ಮಕ್ಕಳು ಬರೀ ತಿಂತೀನಿ ತಿಂತೀನಿ ಅಂತ ಹಟ ಮಾಡಿದ್ರೆ ಲಕ್ಷ್ಮೀ ನಾ ಹೋಗ್ತೀನಿ, ಹೋಗ್ತೀನಿ ಅಂತಾಳಂತೆ. ಅದಕ್ಕೇ ಆ ಗರತಿ ಸ್ಪಷ್ಟ ಮಾಡ್ತಾಳೆ – ನನ್ನ ಕಂದ ಕಾಡಿ, ಬೇಡಿ ಅಳುವವನಲ್ಲ. ಲಕ್ಷಣವಂತ ಗುಣವಂತ ಆತ. ಆತನ ಲಕ್ಷಣಕೆ ಲಕ್ಷ್ಮಿ ಒಲಿದು ಬರ್ತಾಳಂತೆ. ಆಕೆಗೆ ಬಲು ಹೆಮ್ಮೆ ತನ್ನ ಕಂದನ ಬಗ್ಗೆ. ಹೇಳ್ತಾಳವಳು –

“ಆಡುತಾಡುತ ಬಂದು ಜೋಡೆರಡು ಮನಿ ಕಟ್ಟಿ
ಮಾಡ್ಯಾನ ಗೊಂಬೀ ಮದವಿಯಾ
ಮದವೀ ಮಂಟಪದಾಗ ಬೇಡ್ಯಾನ ಬ್ಯಾಳಿ
ಬೆಲ್ಲವಾ || “

“ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು” ಅಂತ ಗಾದೆ ಮಾತಿದೆ. ಮನೆ ಕಟ್ಟೋದು, ಮದುವೆ ಮಾಡೋದು ಅಷ್ಟು ಸಣ್ಣ ಕೆಲಸಗಳಲ್ಲ ಅಂತದರ ತಾತ್ಪರ್ಯ. ಆದ್ರೆ ಇಲ್ಲಿ ಆ ತಾಯಿಯ ಪುಟ್ಟ ಕಂದ ಆಡಾಡ್ತಾ ಬಂದು ಒಂದಲ್ಲ ಜೋಡು ಮನೆ ಕಟ್ಟಿ ಗೊಂಬೆ ಮದುವೆನೂ ಮಾಡೇ ಬಿಡುತ್ತೆ. ಈಗ ಬೀಗರ ಗತ್ತಿನಲ್ಲಿ ಮದುವೆ ಮಂಟಪದಲ್ಲಿ ಬೇಳೆ ಬೆಲ್ಲ ಕೇಳ್ತಿದೆ. ಮದುವೆ ಮಂಟಪದಲ್ಲಿ ದಿಬ್ಬಣ ಬಂದಿಳಿದ ಕೂಡಲೇ ಬೀಗರಿಗೆ ಮಾಡುವ ಮರ್ಯಾದೆ ಅದು. ವರಪೂಜೆಯ ಹೊತ್ತಿಗೆ ಗಂಡಿನ ಬೀಗರಿಗೆ ಬೇಳೆ ಬೆಲ್ಲ ಕೊಡುವ ರೂಢಿ ಈಗಲೂ ಇದೆ.

ತಾಯಿ ಹೃದಯ ಮಮತೆಯ ಸಾಗರ. ಅದರಂಚು ಕಂಡವರಾರು? ಈ ಲಾಲಿ ಪದ ಅದನ್ನು ಸ್ಪಷ್ಟ ಮಾಡ್ತದೆ –
“ಅತ್ತರೆ ಅಳಲೆವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನಿಗೆಲಸಾ…..ಮನಿಗೆಲಸ
ಕಂದವ್ವನಂಥ ಮಕ್ಕಳಿರಲವ್ವ ಮನಿತುಂಬ”

ಒಂದು ಮಗು ಅಲ್ಲ, ಮನೆತುಂಬ ಇಂಥ ಮುದ್ದು ಮಕ್ಕಳಿರಲಿ ಎಂಬುದು ಆ ತಾಯಿಯ ಹಂಬಲ. ತಾಯಿ ಹೃದಯ ಅಕ್ಷಯಪಾತ್ರೆ. ಎದೆ ತುಂಬಿ ಹಂಚಿದಷ್ಟೂ ಆ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂಬ ಮಾತು ಈ ಲಾಲಿ ಪದ ನೋಡಿಯೇ ರೂಢಿಯಲ್ಲಿ ಬಂದಿದೆ ಅನಿಸುತ್ತೆ. ಕಂದನ ಮೇಲಿನ ಅವಳ ಪ್ರೀತಿಗೆ ಒಂದು ಎಲ್ಲೆಯುಂಟೇ, ಮಿತಿಯುಂಟೇ?

“ಆಡ್ಯಾಡಿ ಬಾ ಕಂದ ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು….ತಿಳಿನೀರು
ತಕ್ಕೊಂಡು ಬಂಗಾರ ಮಾರಿ ತೊಳದೇನ”

ಆಡಿ ದಣಿದು ಬಂದ ಕಂದನ ಅಂಗಾಲು, ಮುಖ ತೊಳೆಯಲು ತೆಂಗಿನಕಾಯಿ ತಿಳಿನೀರು ತಗೊಂಡು ಬರೋದಾಗಿ ಹೇಳುತ್ತಾಳೆ ಆ ಗರತಿ. ದೇವರ ಅಭಿಷೇಕಕ್ಕೆ ತೆಂಗಿನ ನೀರು ಬಳಸೋದು ಗೊತ್ತಿದ್ದದ್ದೇ. ಕಪಟವರಿಯದ ಸ್ವಚ್ಛ ಮನದ ಆ ಎಳೇ ಕಂದಮ್ಮನೂ ದೇವರೇ. ಅದು ಎಲ್ಲರೂ ಬಲ್ಲ ವಿಷಯವೇ. ಇಲ್ಲಿ ಆ ತಾಯಿ ಅದನ್ನೇ ಸೂಚಿಸುತಿದ್ದಾಳೋ ಏನೋ!

ತನ್ನ ಕಂದನ ಆಟ, ನಲಿದಾಟ ನೀಡುವ ಹಿತದ ಬಗ್ಗೆ ಆಕೆ ಹೇಳೋದು ಕೇಳುಗರ ಮನಕ್ಕೂ ಮುದದ ಸಿಂಚನ ಮಾಡ್ತದೆ.

“ಕಂದಮ್ಮನಾಟಾವ ಮಲ್ಲಿಗೀ ತೋಟಾವ
ಅಲ್ಲೆ ತಾವುರೀ ಕಮಲಾವ….ಕಮಲ
ಬೆಳದಿಂಗಳು ನಮ್ಮ ಮನೀಯಂಗಳಕ
ಹೊಳದಾವ ||”

ಕಂದಮ್ಮ ಆಡುತ್ತಿದ್ದರೆ ಅದು ಮಲ್ಲಿಗೆಯ ತೋಟದಷ್ಟು ಕಂಪಂತೆ, ತಂಪಂತೆ. ಇದಕ್ಯಾವ ಸರಿಸಾಟಿ ಶಬ್ದ ಇದ್ದೀತು? ಆ ಮಲ್ಲಿಗೆ ತೋಟದಲ್ಲಿ ತಾವರೆ, ಕಮಲಗಳೂ ಅರಳಿ ನಿಲ್ತಾವಂತೆ. ಮಕ್ಕಳಿರುವ ಮನೆ ಹೂದೋಟವಲ್ಲದೇ ಇನ್ನೇನು. ಕಂದನ ಮುಖ ಹೋಲುವ ಕಮಲ ಅಲ್ಲಿ ಆಕೆಗೆ ಕಾಣುವುದು ಸುಂದರ ಪ್ರತಿಮೆ. ಆದರೆ ಅಲ್ಲಿ ಸೂರ್ಯನ ಬಿಸಿಲಿನ ಝಳ ಇಲ್ಲ. ಅಲ್ಲಿ ಹಾಯಿ ಮೂಡಿಸುವ ಬೆಳದಿಂಗಳಿನಂಥ ಬೆಳಕು ಇದೆ. ಅದು ತನ್ನ ಮನೆಯಂಗಳದ ತುಂಬ ಹರಡಿದೆ ಅಂತ ಹೇಳ್ತಾಳೆ ಆ ತಾಯಿ.

ಈ ಲಾಲಿ ಪದಗಳ ಸಂಭ್ರಮದಲ್ಲಿ ತನ್ನ ತವರನ್ನು ಮರೀತಾಳೆಯೇ ಆಕೆ? ಖಂಡಿತಾ ಇಲ್ಲ. ತೌರಿನ ಅಖಂಡ ಪ್ರೇಮದ ಜೊತೆಗೆ ವಾಸ್ತವಿಕತೆಯನ್ನೂ ಈ ಕೆಳಗಿನ ಲಾಲಿ ಪದದಲ್ಲಿ ಸೊಗಸಾಗಿ ಹೀಗೆ ಹೇಳ್ತಾಳೆ –

“ತಂದಿದ್ರ ಬಳಗ್ಹೆಚ್ಚು ತಾಯಿದ್ರ ತವರ್ಹೆಚ್ಚು
ಸಾವಿರಕ ಹೆಚ್ಚು ಪತಿ ಪುರುಷ…. ಪತಿ ಪುರುಷ
ಹೊಟ್ಟೀಯ ಮಾಣಿಕದ್ಹರಳು ಮಗ ಹೆಚ್ಚು”||

ಲಾಲಿ ಹಾಡು ಶುರು ಮಾಡಿದರಂತೂ ಹಟ ಮಾಡುತ್ತಿದ್ದ ಕೂಸು ಇದೇನಾ ಎನ್ನುವಂತಾಗುತ್ತದೆ. ರಚ್ಚೆ ಹಿಡಿದು ಅಳುವ ಮಗುವನ್ನು ಲಾಲಿಸಿ ಸಮಾಧಾನಿಸುವುದು, ಹಾಗೇ ಮಲಗಿಸುವುದು ಒಂದು ನವಿರಾದ ಭಾವನಾತ್ಮಕ ಎಳೆಯ ಕುಸುರಿ ಕೆಲಸ.

ತಂದೆ- ತಾಯಿಯ ಅಮಿತ ವಾತ್ಸಲ್ಯದ ನೆರಳಿನಲ್ಲಿಯ ಸತ್ಯವನ್ನು ನುಡಿಯುತ್ತಾ, ತಾ ಬಂದು ತುಂಬಿದ ಮನೆಯ, ತನ್ನ ಪತಿಯ ಮೇಲ್ಮೆಯನ್ನೂ ಮರೆಯುವಂತಿಲ್ಲವಲ್ಲ! ಆದರೆ ತಾಯ ಕರುಳಿನ ನಂಟು ಅದಕ್ಕೂ ಮಿಕ್ಕಿದ್ದು. ಅಂತಲೇ ಆಕೆ ಹೇಳೋದು- ಹೊಟ್ಟೀಯ ಕಂದ ಮಾಣಿಕ, ಅದು ಇವೆಲ್ಲ ಬಂಧಕ್ಕಿಂತಲೂ ಮಿಗಿಲು ಅಂತ.

ತನ್ನ ಮುದ್ದು ಕಂದ ಆಡುವಲ್ಲಿ ಕಡಲುಕ್ಕಿ, ಮುತ್ತುಗಳು ಉದುರತ್ತಾವಂತೆ-
“ಕಂದೆಲ್ಲಿ ಆಡ್ಯಾನ ಕಡಲೆಲ್ಲಿ ಉಕ್ಯಾವ
ಕಡಲ ಮುತ್ತೆಲ್ಲಿ ಉದುರ್ಯಾವ
ಕಂದವ್ವನ ಕಡಗ ಕಂಡವರು ಕೊಡಿರಮ್ಮ”||

ಆಕೆಯ ಕಂದ ಪೂರ್ಣಚಂದ್ರನೇ ಆ ತಾಯಿಗೆ. ಅದಕ್ಕೇ ಆಕೆಯ ಮಗು ಆಡುವಲ್ಲಿ, ಹುಣ್ಣಿಮೆ ಚಂದಿರನ ಕಂಡು ಕಡಲು ಉಕ್ಕುವಂತೆ ಇಲ್ಲಿಯೂ ಉಕ್ಕಿ ಬರುತ್ತದಂತೆ. ಅದರ ಜೊತೆಗೆ ಮುತ್ತೂ ಹರಿದು ಬಂದು ಅಲ್ಲೆಲ್ಲಾ ಚಲ್ಲುವರೆದು ಸುರೀಯುತ್ತಾವಂತೆ. ಅದ್ಯಾವ ಲೆಕ್ಕ ಆಕೆಗೆ? ತನ್ನ ಕಂದನ ಕಡಗದ್ದೇ ಚಿಂತೆ. ಅಲ್ಲೆಲ್ಲೋ ಬಿದ್ದು ಹೋಯ್ತದು, ಸಿಕ್ರೆ ಕೊಡಿ ಅಂತ ಕೇಳುತ್ತಾಳೆ. ಕಡಲ ಮುತ್ತಿನ ರಾಶಿಗಿಂತಲೂ ಕಂದನ ಕಡಗ ಅಮೂಲ್ಯ ಆಕೆಗೆ. ಈ ಅಸೀಮ ವಾತ್ಸಲ್ಯಕ್ಕೆ ಯಾವ ಹೆಸರು ಕೊಡಲಾದೀತು? ಯಾವ ಪಾಂಡಿತ್ಯವೂ ಉತ್ತರಿಸಲಾಗದ ಒಗಟು ಇದು.

ಮನೆತುಂಬ ಸುಳಿದಾಡುತ್ತ, ಆಡುವ ತನ್ನ ಕೂಸು ಮನಸ್ಸಿಗೆ ನೀಡುವ ತಂಪಾದ ಸುಖದಲ್ಲಿ ತೇಲಿ ಬಲು ಛಂದದ ಮಾತೊಂದು ಹೇಳ್ತಾಳೆ ಆಕೆ ಇಲ್ಲಿ –

“ಕೂಸಾಡೋ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ ಹೊರಗ ….
ಒಳಹೊರಗ ಆಡಿದರ ಬೀಸಣಿಕೆ ಗಾಳಿ
ಸುಳಿದಾವ ||”

ತನ್ನ ಕಂದ ಆಡೋ ಮನೇಲಿ ಅದು ಹೇಗೆ ಬಿಸಿಲಿನ ಝಳ ತಾಕೀತು? ಕೂಸು ಒಳ ಹೊರಗ ಸುಳಿದಾಡಿದ್ರನೇ ತಂಗಾಳಿ ಸುಳೀತದಂತೆ ಅಲ್ಲಿ. ಇನ್ನು ಬೀಸಣಿಕೆಗೆ ಅಲ್ಲೇನು ಕೆಲಸ?

ಹೀಗೇ ಈ ಹಿತವೆನಿಸುವ ಲಾಲಿ ಹಾಡಿನ ಆರಂಭದ ‘ಲೊಳ್ ಲೊಳ್ ಲಾಯಿ ಲಾಲಿ ಲಾಲಿ’ ಯ ಮಧುರ ಲಯಬದ್ಧ ನಾದಕ್ಕೆ, ಆ ಹಾಡುಗಳ ಮಾಯೆಗೆ ಮಗು ತನ್ನ ಹಟ ನಿಲ್ಲಿಸಿ ಆಟಕ್ಕೆ ಇಳಿದರೆ ಕಣ್ಣಿಗೆ ಹಬ್ಬ. ಹಾಗೆಯೇ ಮೋಡಿಗೊಳಗಾಗಿ ನಿದ್ದೆಗೆ ಜಾರಿದರೆ, ಕಿರುನಗು ತುಟಿಯ ಮೇಲಾಡುವ, ಹಾಯಾಗಿ ಮಲಗಿದ ಕಂದನನ್ನ ನೋಡುವುದೇ ಒಂದು ರಮ್ಯ ನೋಟ!

ಈ ಲಾಲಿ ಪದಗಳಿಗೆ ಯಾವುದೇ ಕಟ್ಟುಪಾಡಿನ ಗೋಜಿಲ್ಲದೇ ಮುದ ನೀಡುವಂತೆ ಹಿಗ್ಗಿಸಲೂ ಬಹುದು – ಕುಗ್ಗಿಸಲೂಬಹುದು. ಆ ಜಾಣ್ಮೆ, ಹಿಡಿತ ಉಳ್ಳ ಆ ತಾಯಿ ಯಾವ ಪಂಡಿತರಿಗೆ ಕಡಿಮೆ? ಮಗು ಗಂಡಾದರೆ ಅವನು, ಹೆಣ್ಣಾದರೆ ಅವಳು ಅಂತ ಸರಾಗವಾಗಿ ಸೇರಿಸಿ, ರಾಜ, ರಾಣಿಯರನ್ನಾಗಿಸಿ ಹಾಡುವ ಗತ್ತು ಬಲ್ಲಳಾಕೆ. ಒಬ್ಬ ಸರಳ, ಸಹಜ ಕವಿ ಅಲ್ಲವೇ ಆಕೆ?

ಅಂತೆಯೇ ಮಗು ಒಂದು ಎರಡೂವರೆ- ಮೂರು ತಿಂಗಳಿನದಾದರೆ ಈ ಲಾಲಿ ಪದಗಳ ರೂಪ ಸ್ವಲ್ಪವೇ ಬದಲಿಸಿ ಹೊಸ ಥರದ, ಹೊಸ ಪ್ರಾಸಗಳ ಪ್ರಯೋಗ ಮಾಡಿ ಮಗುವನ್ನು ರಂಜಿಸುತ್ತಾಳೆ.(ಆದರೆ ಲಾಲಿ ಪದಗಳ ಹಾಡುವಿಕೆ ಅನವರತ.)ಅಲ್ಲಿ ಒಂದು ವೈಜ್ಞಾನಿಕ ಹಿನ್ನೆಲೆಯೂ ಇರುತ್ತೆ ಎಂಬುದನ್ನು ಮರೆಯುವಂತಿಲ್ಲ.

ಮಗೂನ ಹಾಸಿಗೆ ಮೇಲೆ ಅಥವಾ ತನ್ನ ಕಾಲುಗಳ ಮೇಲೆ ಮಲಗಿಸಿ, ಅದರ ಎರಡೂ ಕಾಲು ಜೋಡಿಸಿ ನೆಟ್ಟಗೆ ಮಾಡಿ, ಮಗುವಿನ ಜೋಡಿ ಕಾಲುಗಳ ಮೇಲೆ ಅಡ್ಡಡ್ಡಲಾಗಿ ಕೈ ಹಿಂದೆ ಮುಂದೆ ಆಡಿಸುತ್ತಾ ಈ ಪ್ರಾಸವನ್ನು ಹೇಳ್ತಾಳೆ-

“ಸಾಡೇಮಾಡೇ ಬಾಪುರೇ ಬಾಪುರೇ
ಬಾಪುರಾಯಾ ಬಂದಿದ್ದಾ ಬಂದಿದ್ದಾ
ಹವಳದ ಸರಾ ತಂದಿದ್ದಾ ತಂದಿದ್ದಾ
ಮಾಡದಾಗ ಇಟ್ಟಿದ್ದಾ ಇಟ್ಟಿದ್ದಾ
ನಾಯಿ ಬಂದ ಒಯ್ತೋ ಒಯ್ತೋ
ಕಂದಮ್ಮ ಎದ್ದು ಹಿಂದ ಓಡ್ತೋ||”

ಮಗು ಆ ಲಯಕ್ಕೆ ಮರುಳಾಗಿ ಕೇಕೆ ಹಾಕಿ ನಗುತ್ತ, ಕಾಲು ನೆಟ್ಟಗೆ ಚಾಚುತ್ತೆ. ಅಮ್ಮನ ಕೈಯಂತೂ ಕಾಲುಗಳನ್ನು ಹಿಡದೇ ಇರುತ್ತೆ. ಇದರಿಂದ ಎಳೆ ಕಾಲು ಸೊಟ್ಟಗಾಗದೇ ನೆಟ್ಟಗಾಗ್ತದೆ ಅಂತ ಅವಳ ಎಣಿಕೆ. ಅದು ನಿಜವೇ. ಮಗುವಿಗೆ ಸ್ನಾನ ಮಾಡಿಸುವಾಗಲೂ ಕೂಸಿನ ಕಾಲುಗಳನ್ನು ಜೋಡಿಸಿ ನೆಟ್ಟಗೆ ಮಾಡಿ ಮಸಾಜ್ ಮಾಡೋದು ಇದಕ್ಕೇ.

ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಗುವನ್ನು ಮೆಲ್ಲಗೆ ತನ್ನ ತೊಡೆಯ ಮೇಲೆ ಅಥವಾ ತನ್ನ ಚಾಚಿದ ಕಾಲುಗಳ ಮೇಲೆ ಕೂಡಿಸಿಕೊಂಡು ಅದರ ಬೆನ್ನು ಅಥವಾ ಕತ್ತಿನ ಹಿಂದೆ ಒಂದು ಕೈ ಇಟ್ಟು ಮುಂದೆ ಒಂದು ಕೈ ಆಸರೆ ಕೊಟ್ಟು ಹಿಂದೆ ಮುಂದೆ ತೂಗಾಡಿಸುತ್ತ ರಾಗವಾಗಿ ಈ ಪ್ರಾಸ ಹೇಳುತ್ತಾಳೆ –

“ಆನಿ ಬಂತೊಂದಾನಿ
ಇದ್ಯಾವೂರ ಆನಿ
ವಿಜಾಪುರ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದ ದುಡ್ಡು
ಬೀದಿಗೊಂದ ದುಡ್ಡು
ಅದs ದುಡ್ಡು ತಗೊಂಡು
ಸೇರ ಖೊಬ್ರಿ ತಂದು
ಲಟಾ ಲಟಾ ಮುರದು
ಎಲ್ಲಾರಿಗೂ ಕೊಟ್ಟು
ಕಂದಮ್ಮನ ಬಾಯಾಗ ಬಟ್ಟು”
ಅಂತ ಮುಗಿಸುತ್ತಾಳೆ.

ಇಲ್ಲೊಂದು ಗಮನಿಸಬೇಕಾದ ಸಂಗತಿ ಇದೆ. ಮಗೂನ ಹಿಂದೆ ಮುಂದೆ ತೂಗಾಡಿಸುವಾಗ ಕಾಲು ನೆಲಕ್ಕೆ ತಾಗಿದರೆ ಮಗು ನೆಟ್ಟಗೆ ನಿಲ್ಲಲು ಪ್ರಯತ್ನಿಸುತ್ತದೆ ಅಂತ ಲೆಕ್ಕ. ಮತ್ತು ಕೂಸು ಹಾಗೇ ಮಾಡುತ್ತದೆ. ಹೀಗೆಯೇ ಮಕ್ಕಳ ಅನುಕರಣ, ಗ್ರಹಣ ಶಕ್ತಿ ಹೆಚ್ಚಿಸಲು ಅನೇಕ ಪ್ರಾಸಗಳಿವೆ. ಇವೂ ಒಂಥರದ ಶಿಶು ಪ್ರಾಸಗಳೇ, ಆದರೆ ತಾಯಿ ಮಾಡಿದ್ದು.

ಹೀಗೆ ಈ ಜಾನಪದ ಸಾಹಿತ್ಯದಲ್ಲಿ ಲಾಲಿ ಹಾಡುಗಳ, ಶಿಶು ಪ್ರಾಸಗಳ ಖಜಾನೆ ಮುಗಿಯಲಾರದಷ್ಟು ಶ್ರೀಮಂತ. ಇವೆಲ್ಲಾ ಮಹಿಳೆಯರ ರಚನೆಗಳೇ. ಅದಕ್ಕೆ ದ.ರಾ.ಬೇಂದ್ರೆಯವರು ಹೇಳಿದ್ದಾರೆ – ಜಾನಪದ ಗರತಿಯರೇ ನಿಜವಾದ ಅರ್ಥದಲ್ಲಿ ಕವಿಗಳು. ಋಷಿಗಳು ಅವರು” ಅಂತ.

ನಿಮ್ಮ ಓದಿಗೆ ಇನ್ನೊಂದೆರೆಡು ಜೋಗುಳ ಪದಗಳು

“ಆ ಊರು ಈ ಊರು ಜೋಗಿ
ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದ ದೇಸಾಯಿ ಹಾಲಿಲೇ ಮೋರೆ
ತೊಳೆದಾನ ||”

“ಅಳುವ ಕಂದನ ತುಟಿಯು
ಹವಳದ ಕುಡಿ ಹಾಂಗೆ
ಕುಡಿ ಹುಬ್ಬು ಬೇವಿನೆಸಳಾಂಗ
ಎಸಳಾಂಗ ಕಣ್ಣೋಟ ಶಿವನ ಕೈಯಲಗು
ಹೊಳೆಧಾಂಗ”||

“ಬಾಳೆಲ್ಲಿ ಆಡ್ಯಾನ ಬ್ಯಾಳೆಲ್ಲಿ ಛಲ್ಯಾವ
ಭಾಳ ಮುತ್ತೆಲ್ಲಿ ಉದುರ್ಯಾವ
ಬಾಳಯ್ಯನ ಭಾಳ ಕಂಡವರು ಕೊಡಿರಮ್ಮ||”

ನಿದ್ದಿ ಬಂದದ ನನ್ನ ಬುದ್ಧ್ಯುಳ್ಳ ಕೂಸಿಗೆ
ಮುದ್ದು ರಂಗಯ್ಯ ಬಾರಯ್ಯ
ಬಾರಯ್ಯ ಕೂಸಿಗೆ ಭಂಗಾರ ನಿದ್ದೆ ತಾರಯ್ಯ||