”ಇನ್ನು ಸ್ವಲ್ಪ ದಿನ ಬಿಟ್ಟರೆ ನವಜೋಡಿಗಳಂತೆ ಪ್ರೀತಿಸುತ್ತಿರುವ ಈ ದಂಪತಿಗಳ ನಗು, ಪ್ರೀತಿಯನ್ನು ಈ ಹಳೆ ಮನೆ ಕಳೆದುಕೊಳ್ಳುತ್ತದೆಯಲ್ವಾ? ಅಂತಂದುಕೊಂಡೇ ಮಾಳಿಗೆಯ ಕತ್ತಲಲ್ಲಿ ಕಳೆದು ಹೋದೆ.ಗೋರೆಯವರ ಪುಟ್ಟ ಮೊಮ್ಮಗ ಟಾರ್ಚು ಬೆಳಕಾಯಿಸಿದ. ಮಾಳಿಗೆಯ ಮೌನದಲ್ಲಿ ಸಾವಿರ ನೆನಪುಗಳಿದ್ದವು.ಮತ್ತೆ ಹಳೆಕಾಲವೇ ಕೈಗೆ ಬಂದಂತಾಯಿತು.ಮಾಳಿಗೆಯ ಕತ್ತಲಲ್ಲಿ ನಾವು ಈವರೆಗೆ ಮೂಸಿರದ ಸಾವಿರ ಪರಿಮಳಗಳಿದ್ದವು.ದೀರ್ಘ ಕತ್ತಲೆಯಲ್ಲಿಯೇ ಈ ಕೋಣೆ “ಹೀಗಿರಬಹುದು” ಅಂತ ಗ್ರಹಿಸುವುದೇ ಎಷ್ಟು ಚೆಂದ”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹನ್ನೆರಡನೆಯ ಕಂತು.

ಕಾಡಿನೊಳಗೆ ನಡೆದು ಕೊಂಚ ದೂರ ಹೋದಾಗ ನಾಡಿನಿಂದ ಹೊತ್ತುಕೊಂಡು ಬಂದ ಬೆವರ ಹನಿಗಳೆಲ್ಲವೂ ಸತ್ತೇಹೋಗಿತ್ತು. ಹಸಿರಿನ ದೊಡ್ಡ ಕೋಟೆಯಂತಹ ಕಾಡಲ್ಲಿ ಆಗ ತಾನೇ ಬೆಟ್ಟದ ಗಾಳಿಗೆ ಸೋತು ಬೀಳುತ್ತಿದ್ದ ತರಗೆಲೆಗಳ ರತ್ನಗಂಬಳಿ ದಾರಿಯುದ್ದಕ್ಕೂ ಹಾಸಿ ಅದೆಷ್ಟು ಚೆಂದ ಕಾಣುತ್ತಿತ್ತೆಂದರೆ, ಹಾಗೇ ಆ ತಣ್ಣಗಿನ ತರಗೆಲೆಗಳಲ್ಲಿ ಬಿದ್ದುಕೊಂಡು, ಮೇಲೆ ಸಂಜೆಯ ಕೆಂಪು ತುಂಬಿಕೊಂಡ ಆಕಾಶ, ಆಕಾಶದ ಆಪ್ತಸಹಾಯಕರಂತೆ ಕಾಣುತ್ತಿದ್ದ ದೊಡ್ಡ ತೇಗದ ಮರಗಳ ರಾಶಿಗಳನ್ನು ಸುಮ್ಮನೆ ನೋಡುತ್ತ ಕೂರೋಣ ಅನ್ನಿಸುತ್ತಿತ್ತು.
“ಇಲ್ಲೇ ಮುಂದೆ ನಿಮ್ಮನ್ನೊಂದು ಮನೆಗೆ ಕರೆದುಕೊಂಡು ಹೋಗ್ತೇನೆ ನೋಡಿ” ಅಂತ ನಮ್ಮನ್ನು ಪ್ರತೀ ಸಲ ಮಾಳ ಕಾಡು ಸುತ್ತಿಸುತ್ತಿದ್ದ ಜೋಶಿಯವರು ಇವತ್ತೂ ಹುಮ್ಮಸ್ಸಿನಿಂದ ನಮ್ಮನ್ನು ನಡೆಸಿಕೊಂಡು ಮುಂದಕ್ಕೆ ಹೋಗುತ್ತಿದ್ದರು. ನಡುವೆ ಹಕ್ಕಿ ಗೆಳೆಯ ಅಮಿತ್ ಹೋಗುತ್ತಿದ್ದ. ಕಟ್ಟ ಕಡೆಗೆ ಅವರಿಬ್ಬರ ಕಾಲ ಸಪ್ಪಳಗಳನ್ನು ಕೇಳುತ್ತಾ, “ಯಾಕೋ ಮುಂದೆ ಹೋಗೋದೇ ಬೇಡ ಇಲ್ಲೇ ನಿಂತುಬಿಡೋಣ” ಅಂತಂದುಕೊಂಡು ನಿಶ್ಚಲವಾಗಿ ನಿಂತುಬಿಟ್ಟ ನಾನು, ನಾನು ನಿಂತುಕೊಂಡಿದ್ದನ್ನು ನೋಡಿ ಮುಂದೆ ನಡೆಯುತ್ತಿದ್ದ ಅವರ ಕಾಲ ಸಪ್ಪಳಗಳೂ ನಿಂತವು.

ಅಷ್ಟೊತ್ತು ನಮ್ಮ ಪ್ರತೀ ಹೆಜ್ಜೆಗಳೊಂದಿಗೆ ಮಾತಾಡುತ್ತಿದ್ದ ತರಗೆಲೆಗಳ ಸದ್ದುಗಳೂ ಈಗ ನಿಂತುಹೋಗಿ, ಇಡೀ ಕಾಡೀಗ ಮೌನವಾಗಿ ಹೋಯ್ತು. ಸುಮ್ಮನೆ ಅಲ್ಲಿ ನಿಂತು ಅದೇ ದೊಡ್ಡ ಮರವೊಂದನ್ನು ನೋಡುತ್ತಿದ್ದಾಗ ಅಲ್ಲಿ ಕೂತ ಕೆಂಬೂತವೊಂದು ಪುಳಕ್ ಅಂತ ಹಾರಿಹೋಯ್ತು. ಆ ಸದ್ದಿನ ಜೊತೆಜೊತೆಗೆ ಜೀರುಂಡೆ ಕೂಗಿದ್ದು, ಅಲ್ಲೇ ಮುಂದಿರುವ ಸಣ್ಣ ಹಳ್ಳದಲ್ಲಿ ಕಪ್ಪೆಯೊಂದು ಸಣ್ಣ ಸದ್ದು ಮಾಡಿ ನೀರಲ್ಲಿ ತೇಲ್ಲಿದ್ದು, ತಂಗಾಳಿ ಬೀಸಿ ಮಾವಿನ ಗೆಲ್ಲೊಂದು ಚದುರಿದ್ದು, ಎಷ್ಟೋ ದೂರ ರೆಂಬೆಯಿಂದ ರೆಂಬೆಗೆ ಮಂಗ ಹಾರಿದ್ದು, ಆ ಮಂಗಗಳಿಗೆ ಕೂಗು ಹಾಕಿ ತೋಟದ ಮನೆಯ ಮಂದಿ ಓಡಿಸಲು ಯತ್ನಿಸಿದ್ದು ಇವೆಲ್ಲ ಸದ್ದುಗಳು ಕೇಳತೊಡಗಿ ಕಾಡು ಅನ್ನೋದು ಅದೆಷ್ಟು ಚೆಂದದ ಸದ್ದುಗಳ ತವರುಮನೆ ಅಲ್ವಾ ಅನ್ನಿಸಿತು.

ನೋಡಿ, ಈ ಎಲ್ಲಾ ಸದ್ದುಗಳು ನಾವು ನಡೆಯದೇ ಸುಮ್ಮನಿದ್ದರೆ ಮಾತ್ರ ಕೇಳುತ್ತದೆ. ಇವೆಲ್ಲ ಕೇಳಬೇಕಿದ್ದರೆ ತರಗೆಲೆಗಳ ಜೊತೆ ನಡೆಯೋದನ್ನು ಬಿಟ್ಟು, ಒಂಚೂರು ಅಲ್ಲೇ ನಿಂತುಬಿಡಬೇಕು, ಹಾಗೆ ನಿಲ್ಲುತ್ತಾ ಮೇಲೆ ನೋಡಿ, ಕೆಳಗೆ ನೋಡಿ, ಆಚೆ ನೋಡಿ, ಈಚೆ ನೋಡಿ ಎಲ್ಲಿ ಬೇಕಾದರೂ ನೋಡಿ ಅಲ್ಲೆಲ್ಲಾ ನಿಗೂಢವಾದ ಯಾವುದೋ ಒಂದು ಜೀವ ಉಸಿರುಬಿಡುವಂತೆ ಕಾಣುತ್ತದೆ. ಅಲ್ಲಿನ ಮರಗಳು, ಕುರುಚಲು ಗಿಡಗಳು, ಗಾಳಿಗೆ ಮೈಯೊಡ್ಡಿಕೊಂಡ ಹುಲ್ಲುಗಳು ಇವೆಲ್ಲವೂ ನಮ್ಮ ಜೊತೆ ಮಾತಿಗಿಳಿದಂತೆ, ಅವುಗಳ ಒಳಗೆ ನಮ್ಮನ್ನೂ ಮೀರಿದ ಜೀವವಾಹಿನಿಯೊಂದು ಹರಿಯುತ್ತಿರುವಂತೆ ಕಾಣುತ್ತದೆ. ನಾವು ಒಂದಿಷ್ಟು ಹೊತ್ತು ಅಲ್ಲೇ ನಿಂತು ಮತ್ತೆ ದಾರಿ ಸಾಗಿದೆವು, ಮುಂದೆ ಹಳ್ಳವೊಂದು ಹರಿದು ಸುವರ್ಣ ನದಿಗೆ ಸೇರುವ ತವಕದಲ್ಲಿತ್ತು. ಆ ಹಳ್ಳದಲ್ಲಿ ಆ ದಿನ ಸೂರ್ಯನ ಕೊನೆಯ ಬೆಳಕು ಬಿದ್ದು ಹಳ್ಳವೆಲ್ಲವೂ ಕೆಂಪಗೆ ತಿರುಗುತ್ತಿತ್ತು. ಆ ಹಳ್ಳದಲ್ಲಿ ಅಲ್ಲಲ್ಲಿದ್ದ ಪುಟ್ಟ ಪುಟ್ಟ ಬಂಡೆಗಳನ್ನು ಬಳಿಸಿ ಹಾರುತ್ತ ಇನ್ನೊಂದು ದಡಕ್ಕೆ ಸಾಗಿದೆವು.

ಆ ಸ್ಥಳ ಅದೆಷ್ಟು ಚಂದವಾಗಿತ್ತು. ಎರಡೂ ಕಡೆ ಮೈ ಚಾಚಿದ್ದ ನಿಭಿಡ ಮರಗಳ ನಡುವೆ ಹರಿಯುತ್ತ ಹೋಗುವ ಹಳ್ಳ,ಕಾಡು ಲೋಕದ ಯಾವ ಅಶಾಂತಿಯೂ ಸೋಕದಂತೆ ರಮ್ಯವಾಗಿರುವ ಇಲ್ಲಿನ ಪ್ರಕೃತಿಯನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ಪೇಟೆಯಲ್ಲಿ ಕಣ್ಣು ಮುಚ್ಚಿ ನಾವೇನೋ ಧ್ಯಾನ ಮಾಡಿಬಿಡುತ್ತೇವೆ. ಆದರೆ ಕ್ಷಣಕ್ಷಣವೂ ಇನ್ನಷ್ಟು ಚೆಂದ ಕಾಣುತ್ತ, ಬೆಳಕು ಮತ್ತು ನೆರಳಿನಲ್ಲಿ ಹೊಳಪುಗೊಳ್ಳುತ್ತ ಮಾಯಾಲೋಕದಂತೆ ನಿಂತಿರುವ ಈ ಕಾಡಿನಲ್ಲಿ ಕಣ್ಣು ಮುಚ್ಚಿ ಧ್ಯಾನ ಮಾಡುವ ಅಗತ್ಯವೇ ಇಲ್ಲ. ಇಲ್ಲಿನ ಮರವನ್ನು ಒಂದಷ್ಟು ಹೊತ್ತು ಕಣ್ಣು ಬಿಟ್ಟು ನೋಡುತ್ತ ನಿಂತರೆ, ಹರಿಯುವ ಹಳ್ಳದ ಥಳುಕನ್ನು ಕಣ್ಣಲ್ಲಿ ತುಂಬಿಸುತ್ತ ನಿಂತರೆ, ಕೊಳಲಿನಂತೆ ಕೂಗುತ್ತಿರುವ ಹಕ್ಕಿಗಳ ಹಾಡನ್ನು ಕಿವಿಯಲ್ಲಿ ಕೇಳುತ್ತ ಹೋದರೆ, ಬೆಟ್ಟದ ತುದಿಯನ್ನೂ ನೋಡುತ್ತ ಇದ್ದುಬಿಟ್ಟರೆ ಅದೇ ಧ್ಯಾನ, ಅದೇ ದೊಡ್ಡ ಶಾಂತಿಯ ಯಾನ ಅನ್ನಿಸಿಬಿಡುತ್ತದೆ.

ಮುಂದೆ ನಾವು ಎತ್ತರ ಏರನ್ನು ಹಿಡಿದು ಸಾಗಿದೆವು. ಅಲ್ಲೊಂದು ಮಾವಿನ ಮರವಿತ್ತು. “ಇದು ತುಂಬಾ ಹಳೆಯ ಮಾವಿನ ಮರ, ಇದರ ಹಣ್ಣುಗಳ ರುಚಿಯೇ ಅದ್ಬುತ”ಎಂದರು ಜೋಶಿಯವರು. ಅದು ಬಿಸಿಲಿಗೆ ಮೈಯೊಡ್ಡುತ್ತ ನಿಂತಿತ್ತು. ಹಾಗೇ ಆ ದಾರಿಯಲ್ಲಿ ಹುಲ್ಲಿನ ತೆನೆಗಳು ನಮ್ಮನ್ನು ಸ್ವಾಗತಿಸಿದವು. ಆ ಹುಲ್ಲಿನ ಮೇಲಿರುವ ಮಿಡತೆಗಳನ್ನು ನೋಡುತ್ತ ಮುಂದಕ್ಕೆ ಸಾಗಿದ್ದೇ…. ಅಲ್ಲೊಂದು ಪುಟ್ಟ ಜಗಲಿ ಬೆಚ್ಚಗೆ ಕೂತಿತ್ತು. ಹಳೆಯ ಟಾರಿನಂತಹ ಬಣ್ಣ ಬಳಿದ ಮಣ್ಣಿನ ಗೋಡೆ, ಆ ಗೋಡೆಗೆ ತಲೆತಗ್ಗಿಸಿ ಒಳಹೋಗುವ ಆಕರ್ಷಕ ಮರದ ಬಾಗಿಲು,
“ಹೋ ಇದು ಪುಟ್ಟ ಮನೆ ಇರಬೇಕು” ಅಂದುಕೊಂಡು ಒಳಹೋದರೆ, ಏನು ನೋಡುವುದು? ಅಬ್ಬಬ್ಬ ಎಷ್ಟೊಂದು ಪ್ರಾಚೀನವಾದ ಮನೆಯದು, ದೊಡ್ಡದಾದ ನಡು ಅಂಗಳದ ಬಲ ಭಾಗದಲ್ಲಿ ಅಷ್ಟೇ ಪ್ರಾಚೀನವಾದ ತುಳಸೀ ಕಟ್ಟೆ. ಒಂದು ಮೂಲೆಯಲ್ಲಿ ಅಡಿಕೆ ರಾಶಿ, ಇನ್ನೊಂದು ಮೂಲೆಯಲ್ಲಿ ಆಸ್ಥಾನ ಕವಿಗಳಂತೆ ಕೂತಿರುವ ಹಳೆಯ ಮರದ ಸಾಮಾನುಗಳು, ಮುಂಬಾಗಿಲಿನಲ್ಲಿ ನಿಂತು ಮನೆ ನೋಡಿದರೆ, ಆ ಮಣ್ಣಿನ ಗೋಡೆಗಳಲ್ಲಿ ಕೈ ಯಿಂದ ಬರೆದ ಸಾಂಪ್ರದಾಯಿಕ ರಂಗೋಲಿಗಳು ಇಡೀ ಮನೆಯ ಬಣ್ಣವನ್ನೇ ತಮ್ಮದಾಗಿಸಿಕೊಂಡಂತೆ ಗೋಡೆ ತುಂಬಾ ಹೊಳೆಯುತ್ತಿದ್ದವು. ಕಣ್ಣಲ್ಲಿ ಈ ಜಾರಿಗೆ ಮನೆ ಅಪೂರ್ವವಾದ ಬ್ಲಾಕ್ ಆಂಡ್ ವೈಟ್ ಚಿತ್ರಗಳಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಆ ಮನೆಯ ಹಿರಿಯ ವ್ಯಕ್ತಿಯೊಬ್ಬರು ಒಳಗಿದ್ದ ಅಡಿಕೆ ರಾಶಿಯ ನಡುವಿಂದ ನಗುತ್ತಲೇ ನಮ್ಮ ಬಳಿ ಬಂದು, ಸ್ವಾಗತಿಸಿದರು. ಪಂಚೆಯಂತೆ ಕಾಣುತ್ತಿದ್ದ ಬೈರಾಸೊಂದನ್ನು ಸುತ್ತಿ, ಹಣೆಗೆ ಗೋಪಿಚಂದನದ ನಾಮ ಹಾಕಿದ ಆ ಹಿರಿಯ ವ್ಯಕ್ತಿಯೂ ಆ ಮನೆಯಷ್ಟೇ ಹಳೆಯ ವೈಭವದಿಂದ ಮಿನುಗುತ್ತಿದ್ದರು.

ನಾವು ಒಂದಿಷ್ಟು ಹೊತ್ತು ಅಲ್ಲೇ ನಿಂತು ಮತ್ತೆ ದಾರಿ ಸಾಗಿದೆವು, ಮುಂದೆ ಹಳ್ಳವೊಂದು ಹರಿದು ಸುವರ್ಣ ನದಿಗೆ ಸೇರುವ ತವಕದಲ್ಲಿತ್ತು. ಆ ಹಳ್ಳದಲ್ಲಿ ಆ ದಿನ ಸೂರ್ಯನ ಕೊನೆಯ ಬೆಳಕು ಬಿದ್ದು ಹಳ್ಳವೆಲ್ಲವೂ ಕೆಂಪಗೆ ತಿರುಗುತ್ತಿತ್ತು. ಆ ಹಳ್ಳದಲ್ಲಿ ಅಲ್ಲಲ್ಲಿದ್ದ ಪುಟ್ಟ ಪುಟ್ಟ ಬಂಡೆಗಳನ್ನು ಬಳಿಸಿ ಹಾರುತ್ತ ಇನ್ನೊಂದು ದಡಕ್ಕೆ ಸಾಗಿದೆವು.

ಇವರೇ ನೋಡಿ “ಜಾರಿಗೆ ಗಣೇಶ ಗೋರೆ” ಮಾಳದ ಹಳೆಯ ಹೆಸರು, ಮಾಳ ಕಾಡಿನ ಪಲ್ಲಟಗಳನ್ನು, ಇಲ್ಲಿನ ಬದುಕನ್ನು, ಹತ್ತಿರದಿಂದ ಕಾಣುತ್ತ, ಕೃಷಿಯಲ್ಲೇ ಬದುಕಿ, ಕೃಷಿಯಲ್ಲೇ ಖುಷಿಗೊಂಡು ತ್ರಾಸದಿಂದ ಬದುಕು ಸಾಗಿಸಿದವರು “ಎಂದು ಜೋಶಿಯವರು ಗಣೇಶ ಗೋರೆಯವರ ಪರಿಚಯ ಮಾಡಿಕೊಟ್ಟರು. ಗೋರೆಯವರ ಕಣ್ಣಿನಲ್ಲಿ ಅನುಭವದ ಮಿನುಗಿತ್ತು, ಪ್ರಾಯವಾದರೂ ಮುಖದಲ್ಲಿ ಹರೆಯದ ಹುಮ್ಮಸ್ಸಿತ್ತು, ಮರೆಯದ ಬದುಕಿನ ಕನಸುಗಳಿತ್ತು. ನಮ್ಮೆದುರೇ ನಿಂತ ಅವರ ಕುಳ್ಳಗಿನ ದೇಹ, ಹಳೆ ಮನೆಯ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತಿತ್ತು. ನಾವು ಒಮ್ಮೆ ಅವರಂತೆಯೇ ಕಾಣುತ್ತಿದ್ದ ಆ ಹಳೆ ಮನೆಯ ಗತ್ತನ್ನು, ಮತ್ತೊಮ್ಮೆ ಮನೆಯಂತೆಯೇ ಕಾಣುತ್ತಿದ್ದ ಗೋರೆಯವರನ್ನು ನೋಡುತ್ತ ನಿಂತಾಗ, ಒಳಗಿಂದ ಗೋರೆಯವರ ಸೊಸೆ, ಗೋರೆಯವರ ಹೆಂಡತಿ, ಮೊಮ್ಮಕ್ಕಳು ಜಗಲಿಗೆ ಬಂದು ನಮ್ಮೊಡನೆ ಮಾತಿಗೆ ಕೂಡಿಕೊಂಡರು.

“ಇವರಿನ್ನು ಈ ಮನೆಯಲ್ಲಿ ಕೊನೆಯ ತಿಂಗಳು, ಈ ಮನೆಯನ್ನೂ ಅಡಿಕೆ ತೋಟವನ್ನೂ ಮಠಕ್ಕೆ ಮಾರಲಾಗಿದೆ”ಎಂದರು ಜೋಶಿಯವರು. ನಾನು ಆಶ್ಚರ್ಯಚಕಿತನಾಗಿ “ಅಯ್ಯೋ ಹೌದಾ.ಇಷ್ಟು ಚೆಂದ ಮನೆಯನ್ನಾ? ಯಾಕೆ ಮಾರಿದ್ದು?”ಎಂದೆ. ನನ್ನ ಪ್ರಶ್ನೆಗೆ ಗೋರೆಯವರ ಮುಖದಲ್ಲಿ ಸಣ್ಣಗಿನ ನಗು ಮೂಡಿ “ಮನೆ ಏನೋ ಚೆಂದವೇ, ಈ ಮನೆಯಲ್ಲಿಯೇ ಬೆಳೆದದ್ದು ನಾನು. ಇಲ್ಲಿಯೇ ನನ್ನ ಬಾಲ್ಯ, ಯೌವ್ವನ, ಸಂಸಾರಿಕ ಜೀವನ ಶುರುವಾಗಿದ್ದು, ಅತ್ತದ್ದೂ ಇಲ್ಲಿಯೇ, ನಕ್ಕಿದ್ದೂ ಇಲ್ಲಿಯೇ, ಯಾರಿಗೂ ಗೊತ್ತಾಗದೇ ಒಳಗೊಳಗೇ ಕಷ್ಟ ನುಂಗಿದ್ದೂ ಇಲ್ಲಿಯೇ, ತೋಟದಲ್ಲಿ ಒಳ್ಳೆ ಬೆಳೆ ಬಂದಾಗ ಸಾರ್ಥಕ ಪಟ್ಟಿದ್ದು ಇಲ್ಲಿಯೇ, ಹಬ್ಬಕ್ಕೆ ಎಲ್ಲರೂ ಕೂಡಿ ಗಟ್ಟಿಯಾಗಿ ಪಾಯಸ ಹೊಡೆದದ್ದೂ ಈ ಕಾಡಿನ ಮನೆಯಲ್ಲಿಯೇ, ಆದರೆ ನೋಡಿ, ಅಲ್ಲಿ ನನ್ನ ಮೊಮ್ಮಕ್ಕಳು ಒಬ್ಬಳು ಕಾಲೇಜಿಗೆ ಹೋಗ್ತಾಳೆ, ಮತ್ತೊಬ್ಬ ಶಾಲೆಗೆ ಹೋಗ್ತಾನೆ. ಈ ಮನೆಗೆ ಬರುವ ದಾರಿ ನೋಡಿದಿರಲ್ಲ. ಎಷ್ಟೊಂದು ದುರ್ಗಮವಾಗಿದೆ, ಆ ದಾರಿಯಲ್ಲಿ ಜೀವ ಕೈಯಲ್ಲಿ ಹಿಡಕೊಂಡು ಹೋಗ್ಬೇಕು, ರಾತ್ರಿಯಾದರೆ ದಾರಿಯೇ ಭಯಾನಕ. ಮಳೆಗಾಲದಲ್ಲಿ ಸುವರ್ಣ ನದಿಗೆ ಕೂಡುವ ಆ ಹಳ್ಳ ಭರ್ತಿಯಾಗಿ, ಅದನ್ನು ದಾಟಲು ಸಾಧ್ಯವೇ ಇಲ್ಲ. ನಾವಾದರೂ ಇಲ್ಲಿಯೇ ಇದ್ದುಬಿಡಬಹುದು. ಆದರೆ ಆ ಮಕ್ಕಳು ಶಾಲೆಗೆ ಹೋಗ್ಬೆಕಲ್ವಾ? ದೂರದ ಊರಿನ ಶಾಲೆಗೆ ಇಲ್ಲಿಂದ ಹೋಗಲು ತುಂಬಾ ಕಷ್ಟ. ನಮಗೂ ಏನಾದರೂ ಆಯಿತೆಂದುಕೊಳ್ಳಿ, ಆಗ ಆಸ್ಪತ್ರೆಗೆ ಹೋಗಬೇಕು ಎಂದರೆ ಈ ದಾರಿಯಲ್ಲಿ ಸಾಗಿ ಆಸ್ಪತ್ರೆಗೆ ಹೋದಹಾಗೇ. ಅರ್ಧ ಜೀವ ಹೋಗಿಬಿಡುತ್ತದೆ ಆ ದಾರೀಲಿ. ಅದಕ್ಕೋಸ್ಕರ ಈಗ ಈ ಮನೆಯನ್ನು ಮಠದವರೊಬ್ಬರಿಗೆ ಕೊಟ್ಟು ನಾವು ಇಲ್ಲೇ ಪಕ್ಕದ ಬಜಗೋಳಿಗೆ ಹೋಗುವ ಯೋಚನೆ ಮಾಡಿದ್ದೇವೆ” ಎನ್ನುತ್ತಾ ಗೋರೆಯವರು ಮನೆಯನ್ನೊಮ್ಮೆ ನೋಡಿದರು.

ಅವರ ಮುದಿಗಣ್ಣುಗಳಲ್ಲಿ ಅವರಿಗಷ್ಟೇ ಅರ್ಥವಾಗುವ ಯಾವುದೋ ವೇದನೆ ಇದ್ದಂತಿತ್ತು. ನಾವಾದರೂ “ಅಬ್ಬಾ ಈ ಮನೆ ಎಷ್ಟು ಹಳತಾಗಿ ಚೆಂದಾಗಿದೆಯಲ್ವಾ” ಅಂತ, ಆ ಮನೆಯ ಚಿತ್ರ ಹೊಡೆದು ಹೋಗಿಬಿಡುತ್ತೇವೆ, ಆದರೆ ಅವರು ಈ ನಿಭಿಡ ಕಾಡುಗಳ ನಡುವೆಯೇ ಬದುಕುವವರು, ಈ ಕಾಡುಗಳು, ಇಲ್ಲಿನ ಜೀವನ ಅವರಿಗೆ ಏನೇ ಖುಷಿಕೊಟ್ಟರೂ ಪ್ರಾಯವಾಗುತ್ತ ಒಳಗೊಂದು ಭಯ ಹುಟ್ಟಿಕೊಂಡುಬಿಡುತ್ತದೆ. ಹಾಗಂತ ಈ ಕಾಡು ಬಿಟ್ಟು ಮಹಾನಗರಕ್ಕೆ ಹೋಗಿಬಿಡೋಣ ಎಂದರೂ ಭಯವೇ ಅವರಿಗೆ, ದೊಡ್ಡ ನಗರಕ್ಕೆ ಹೋಗಲೂ ಆಗದ, ಕಾಡಿನಲ್ಲಿ ಇರಲೂ ಆಗದಂತಹ ಆ ಹಿರಿಯ ಮನಸ್ಸುಗಳ ಒಳಗೆ ಏನೆಲ್ಲಾ ಭಾವನೆಗಳು, ಗೊಂದಲಗಳು ಉತ್ಪತ್ತಿಯಾಗುತ್ತದೆ ಎನ್ನುವುದನ್ನು ಅಂದಾಜಿಸಲು ಸಾಧ್ಯವೇ ಇಲ್ಲ. ಗೋರೆಯವರೂ ಆ ಗೊಂದಲದಲ್ಲಿ ಇದ್ದರಾ? ಸರಿಯಾಗಿ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ಅವರ ಸೊಸೆ ನಿಂಬೆ ಶರಬತ್ತು ಹಿಡಕೊಂಡು ಬಂದರು. ಬಾಯಾರಿದ ಗಂಟಲಿಗೆ ಅದು ಮಧುಪಾನವಾಯಿತು. ಶರಬತ್ತು ಹೀರುತ್ತಾ ಆಚೀಚೆ ನೋಡಿದೆವು.

ಅಡಿಕೆ ತೋಟದ ಹಿನ್ನೆಲೆಯಲ್ಲಿ ದೊಡ್ಡದಾಗಿ ಕಾಣುತ್ತಿದ್ದ ಈ ಮನೆಯ ಅಂಗಳವೇ ಎಷ್ಟು ಚೆಂದ. ಅಲ್ಲಿ ಹೋಗಿ ನಿಂತರೆ ಮುಂಬಾಗಿಲಿನ ಪಕ್ಕದಲ್ಲಿರುವ ಮರದ ಜೋಕಾಲಿ ಗಾಳಿಗೆ ಹಾಯಾಗಿ ತೂಗುತ್ತಿರುವುದು, ಹಂಚಿನ ಮೇಲೆ ತರಗೆಲೆಗಳು ಸಣ್ಣಗೇ ಬೀಳುತ್ತಿರುವುದು, ಸಾಯಂಕಾಲದ ಸೂರ್ಯನ ಬಿಸಿಲಿಗೆ ಮಣ್ಣಿಗೆ ಗೋಡೆ ಬರಬರುತ್ತ ಕಿತ್ತಳೆ ಬಣ್ಣಕೆ ತಿರುಗುತ್ತಿರುವುದು ಇವೆಲ್ಲ ಎಷ್ಟು ಆಕರ್ಷಕವಾಗಿ ಕಾಣುತ್ತದೆ ಎಂದರೆ ಇವನ್ನೆಲ್ಲಾ ನಮ್ಮ ತುಂಬುಗಣ್ಣಲ್ಲೇ ನೋಡಿ ಅನುಭವಿಸಿಬಿಡಬೇಕು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಮನೆಯ ನಡು ಅಂಗಳದಲ್ಲಿ ಹೋಗಿ ನಿಂತಾಗ ಅಲ್ಲೇ ರಾಶಿ ಬಿದ್ದ ಅಡಿಕೆಯ ಚೂರು ಚೂರು ಪರಿಮಳ ಮೂಗಿಗೆ ಹಬ್ಬಿಬಿಟ್ಟಿತು. ಎಡಕ್ಕೆ ಹೊರಳಿದರೆ ವಿಶಾಲವಾದ ಬಾಗಿಲು, ಆ ಬಾಗಿಲ ತೆರೆದರೆ ಬಾಗಿಲಿಗೇ ಹಬ್ಬಿನಿಂತ ಅಡಿಕೆ ತೋಟದ ಹಚ್ಚಗಿನ ಹಸಿರು, ಮತ್ತೆ ಒಳ ಬಂದು ಜಗಲಿ ದಂಡೆ ಮೇಲೆ ನೋಡಿದರೆ, ಅಲ್ಲಿ ಹಳೆ ಕನಸು ಕಾಣುತ್ತ ಮಲಗಿರುವ ಮರದ ಸಣ್ಣ ಸಣ್ಣ ಸಾಮಾನುಗಳು, ಅದನ್ನೆಲ್ಲಾ ನೋಡುತ್ತ ನಿಂತಾಗ ಅಲ್ಲಿ ಬಂದ ಗೋರೆಯವರ ಸೊಸೆ “ನೋಡಿ, ಇದು ಇಲಿ ಹಿಡಿಯುವ ಬೋನು, ತುಂಬಾ ಹಳೆಯದ್ದು” ಅಂತ ಅಲ್ಲೇ ಇರುವ ಮರದ ಇಲಿಯ ಬೋನೊಂದನ್ನು ತೋರಿಸಿದರು.

ಆಕರ್ಷಕವಾಗಿ ಕಾಣುತ್ತಿದ್ದ ಆ ಇಲಿಯ ಬೋನಿನಲ್ಲಿ ಇಲಿಯೇನು, ದೊಡ್ಡ ಬೆಕ್ಕೇ ಬೀಳುವಷ್ಟು ಜಾಗವಿತ್ತು. ಆ ಬೋನಿನಲ್ಲಿ ಇಲಿ ಹೇಗೆ ಮರಳಾಗಿ ಬೀಳುತ್ತದೆ? ಆ ಬೋನಿನ ವಿಶೇಷತೆ ಏನು? ಅಂತೆಲ್ಲ ಅವರು ಖುಷಿಯಿಂದ ವರ್ಣಿಸುತ್ತಿದ್ದರು. ಆಗ ದೂರದಿಂದಲೇ ಒಂಥರಾ ಹೊಳೆಯುತ್ತಿದ್ದ ಗೋಡೆ ಮೇಲಿನ ಆಕರ್ಷಕ ರಂಗೋಲಿ, ಈಗ ಹತ್ತಿರದಿಂದ ಇನ್ನೊಂಥರಾ ಮುದ್ದಾಗಿ ಕಂಡಿತು. “ಗೋಡೆ ಮೇಲಿನ ಡಿಸೈನ್ ತುಂಬಾ ಚೆಂದ ಇದೆ. ಎಷ್ಟೊಂದು ಸಾಂಪ್ರದಾಯಿಕವಾಗಿದೆ, ಈಗಿನ ಯಾವ ಮನೆಗಳಲ್ಲಿಯೂ ಇದು ನೋಡಲು ಸಿಗಲ್ಲ”ಎಂದೆ ನಾನು. “ಅದು ಅವಳೇ ಮಾಡಿದ್ದು”ಎಂದರು ಗೋರೆಯವರು ತಮ್ಮ ಸೊಸೆಯನ್ನು ತೋರಿಸುತ್ತ. ಹೌದಾ ಎಂದು ಮತ್ತೆ ಖುಷಿಯಾಗಿ ಅವರ ಸೊಸೆಯತ್ತ ನೋಡಿ ಮೆಚ್ಚುಗೆ ಸೂಚಿಸಿದರೆ ಅವರಾಗಲೇ ಖುಷಿಗೊಂಡು ಸಣ್ಣಗೇ ನಗುತ್ತಿದ್ದರು. ಮುಂದೆ ಮನೆ ತೋರಿಸುವ ಕಾರ್ಯಕ್ರಮ ಶುರುವಾಯಿತು. ಮೊದಲು ಹೋಗಿದ್ದು ಬಲ ಭಾಗದಲ್ಲಿದ್ದ ಕೊಟ್ಟಿಗೆಗೆ. ಕಾಡಂಚಿನ ಮನೆಗಳಲ್ಲಿರುವ ಕೊಟ್ಟಿಗೆಯ ಪರಿಮಳವೇ ಬೇರೆ, ಹುಲ್ಲು, ಗೋಮೂತ್ರ, ಅಂಬಾ ಎನ್ನುವ ಗೋವುಗಳ ತುಂಬು ಧ್ವನಿ ಇವೆಲ್ಲಾ ಒಟ್ಟಾಗಿ ಬೇರೆಯದ್ದೇ ಆದ ಲೋಕದ ಪರಿಮಳವೊಂದು ಕೊಟ್ಟಿಗೆಯಲ್ಲಿರುತ್ತದೆ. ನಮ್ಮ ಜೊತೆಗೆ ಮನೆಯ ಸದಸ್ಯರೆಲ್ಲಾ ಕೊಟ್ಟಿಗೆ ತೋರಿಸಲು ಕೊಟ್ಟಿಗೆಯೊಳಗೆ ಬಂದರು. ಇನ್ನೇನು ಇವರು ಈ ಹಳೆ ಮನೆ ಬಿಡುವ ಹೊತ್ತಿಗೆ ತಾವೂ ಈ ಮನೆ ಬಿಟ್ಟು ಮತ್ಯಾರದ್ದೋ ಕೊಟ್ಟಿಗೆ ಸೇರಲಿರುವ ಆ ದನಗಳು ನಮ್ಮನ್ನೇ ನೋಡುತ್ತಿದ್ದವು. “ಗೋರೆಯವರು ಮನೆ ಮಾರಿದ ಸೂಚನೆ ಈ ದನಗಳಿಗೂ ಸಿಕ್ಕಿರಬಹುದಾ” ಅಂತ ಸುಮ್ಮನೇ ಯೋಚಿಸುತ್ತಿದ್ದೆ. ಅಷ್ಟೊತ್ತಿಗೆ “ಬನ್ನಿ ಮಾಳಿಗೆ ನೋಡೋಣ” ಅಂತ ಮನೆ ಮಂದಿ ಮಾಳಿಗೆ ಹೊಕ್ಕರು.

ನಾನು ಇನ್ನೇನು ಮಾಳಿಗೆ ಏರಿ ಬಿಡಬೇಕು ಎನ್ನುವಷ್ಟರಲ್ಲಿ ಕೊಟ್ಟಿಗೆಯ ಮಬ್ಬುಬೆಳಕಲ್ಲಿ ನಗುತ್ತ ನಿಂತ ಗೋರೆ ದಂಪತಿಗಳು ನಂಗೆ ಅದೆಷ್ಟು ಚಂದ ಕಂಡರೆಂದರೆ ಶಿವರಾಮ ಕಾರಂತರ ಬೆಟ್ಟದ ಜೀವದಲ್ಲಿ ಬರುವ ಗೋಪಾಲಯ್ಯ ಮತ್ತು ಶಂಕರಿ ಇವರೇ ಇರಬೇಕು ಅನ್ನಿಸುವಷ್ಟು ಮೋಹಕವಾಗಿತ್ತು ಅವರಿಬ್ಬರ ಚಂದ. ದೊಡ್ಡದಾದ ಹಳೆ ಮನೆ, ಹೊರಗೆ ಅದಕ್ಕಿಂತಲೂ ದೊಡ್ಡದಾದ ಕಾಡು, ಅಲ್ಲೇ ವಿಲಕ್ಷಣ ಸದ್ದಿನಿಂದ ಸುವರ್ಣ ನದಿಗೆ ಸೇರುವ ಆಸೆಯಲ್ಲಿ ಹರಿಯುತ್ತಿರುವ ಹಳ್ಳ, ಅದರ ನಡುವೆ ಹಚ್ಚಗಾಗಿರುವ ಇವರ ಅಡಿಕೆ ತೋಟ, ಈ ಎಲ್ಲಾ ಸೊಗಸುಗಳ ನಡುವೆ ಈ ದಂಪತಿಗಳು ಅದೆಷ್ಟು ತುಂಬು ಜೀವನ ನಡೆಸಿರಬಹುದು ಅಂತ ಅವರನ್ನೇ ಆ ಮಬ್ಬು ಬೆಳಕಿನಲ್ಲಿ ನೋಡತೊಡಗಿದೆ. ಇಬ್ಬರ ಮುಖದಲ್ಲಿಯೂ ಸಂತೃಪ್ತಿಯ, ಒಲವಿನ ಬೆಳ್ನಗೆ ಸೂಸುತ್ತಿತ್ತು. ಅವರ ಫೋಟೋ ತೆಗೆಯಲು ಕ್ಯಾಮರಾ ಮುಂದೆ ಮಾಡಿದಾಗ ಅವರಿಬ್ಬರೂ ಒಂಥರಾ ನಾಚಿ ಹೋದರು. ಗೋರೆಯವರ ಹೆಂಡತಿಯ ಮೃದುವಾದ ಕೈ ಗೋರೆಯವರನ್ನು ಹಿಡಿದಾಗ ಆ ಇಡೀ ಮನೆ ಇವರಿಬ್ಬರ ಬಿಗಿಯಾದ ಬಂಧನದಲ್ಲಿ ಹೊಸ ಜೀವ ಪಡೆದಂತೆ ಒಂದು ಕ್ಷಣ ಆ ಮಬ್ಬಿನಲ್ಲಿಯೂ ಜಿಗ್ ಅಂತ ಹೊಳೆದಾಡಿತು.

ಅವರ ಮುದಿಗಣ್ಣುಗಳಲ್ಲಿ ಅವರಿಗಷ್ಟೇ ಅರ್ಥವಾಗುವ ಯಾವುದೋ ವೇದನೆ ಇದ್ದಂತಿತ್ತು. ನಾವಾದರೂ “ಅಬ್ಬಾ ಈ ಮನೆ ಎಷ್ಟು ಹಳತಾಗಿ ಚೆಂದಾಗಿದೆಯಲ್ವಾ” ಅಂತ, ಆ ಮನೆಯ ಚಿತ್ರ ಹೊಡೆದು ಹೋಗಿಬಿಡುತ್ತೇವೆ, ಆದರೆ ಅವರು ಈ ನಿಭಿಡ ಕಾಡುಗಳ ನಡುವೆಯೇ ಬದುಕುವವರು, ಈ ಕಾಡುಗಳು, ಇಲ್ಲಿನ ಜೀವನ ಅವರಿಗೆ ಏನೇ ಖುಷಿಕೊಟ್ಟರೂ ಪ್ರಾಯವಾಗುತ್ತ ಒಳಗೊಂದು ಭಯ ಹುಟ್ಟಿಕೊಂಡುಬಿಡುತ್ತದೆ.

ಇನ್ನು ಸ್ವಲ್ಪ ದಿನ ಬಿಟ್ಟರೆ ನವಜೋಡಿಗಳಂತೆ ಪ್ರೀತಿಸುತ್ತಿರುವ ಈ ದಂಪತಿಗಳ ನಗು, ಪ್ರೀತಿಯನ್ನು ಈ ಹಳೆ ಮನೆ ಕಳೆದುಕೊಳ್ಳುತ್ತದೆಯಲ್ವಾ? ಅಂತಂದುಕೊಂಡೇ ಮಾಳಿಗೆಯ ಕತ್ತಲಲ್ಲಿ ಕಳೆದು ಹೋದೆ. ಗೋರೆಯವರ ಪುಟ್ಟ ಮೊಮ್ಮಗ ಟಾರ್ಚು ಬೆಳಕಾಯಿಸಿದ. ಮಾಳಿಗೆಯ ಮೌನದಲ್ಲಿ ಸಾವಿರ ನೆನಪುಗಳಿದ್ದವು. ಮತ್ತೆ ಹಳೆಕಾಲವೇ ಕೈಗೆ ಬಂದಂತಾಯಿತು. ಮಾಳಿಗೆಯ ಕತ್ತಲಲ್ಲಿ ನಾವು ಈವರೆಗೆ ಮೂಸಿರದ ಸಾವಿರ ಪರಿಮಳಗಳಿದ್ದವು. ದೀರ್ಘ ಕತ್ತಲೆಯಲ್ಲಿಯೇ ಈ ಕೋಣೆ “ಹೀಗಿರಬಹುದು” ಅಂತ ಗ್ರಹಿಸುವುದೇ ಎಷ್ಟು ಚೆಂದ.

ಕೆಲವೊಮ್ಮೆ ಮಬ್ಬಿನಲಿ ಕಾಣಿಸಿದ ಚೆಂದ, ಇಡೀ ಬೆಳಕಲ್ಲಿ ಕಾಣಿಸುವುದಿಲ್ಲ, ಈ ಮಾಳಿಗೆ ಕೋಣೆಯ ಮಬ್ಬಿನಲ್ಲಿಯೂ ಅಂತದ್ದೇ ಅನುಭವವಾಯಿತು. ಮತ್ತೆ ನಾವೆಲ್ಲ ಮಬ್ಬಿನಲ್ಲಿ ಮಾಳಿಗೆ ಮೆಟ್ಟಲಿಳಿದು ಅಡುಗೆ ಕೋಣೆ ಕಡೆಗೆ ಸಾಗಿದೆವು. ಅಲ್ಲಿ ಒಲೆಯ ಬೆಂಕಿ ಹಾಯಾಗಿ ಉರಿಯುತ್ತಿತ್ತು. ಗೊಂಡೆಬಾಲದ ಬೆಕ್ಕೊಂದು ಆ ಬಿಸಿಯ ಕಾವಿಗೆ ಮೈ ಚಾಚಿ ಒಲೆ ಮುಂದೆ ಬಿದ್ದುಕೊಂಡಿತ್ತು. ಅದಕ್ಕೂ ಗೊತ್ತಿರಲಿಲ್ಲ ಅನ್ನಿಸುತ್ತೆ, “ಇನ್ನು ಕೆಲವೇ ದಿನಗಳಲ್ಲಿ ನಾನು ಈ ಮನೆ ಬಿಡಬೇಕಾಗುತ್ತದೆ, ಮುಂದೆ ಇಂತಹ ಒಲೆಯ ಸುಖ ನನಗೆ ಸಿಗುವುದಿಲ್ಲವೆಂದು. ಆ ಬೆಕ್ಕು ಒಮ್ಮೆ ಬಾಲ ಬಿಚ್ಚಿ ಮಿಯಾವ್ ಅಂದು ಮತ್ತೆ ಮಲಗಿತು.

ಹೊರಗೆ ಇರುಳು ಕವಿಯುತ್ತಿತ್ತು. ನಡು ಜಗಲಿಯ ನಡುವಿಂದ ಕೆಂಪಗಾಗಿ, ತುಸು ನೀಲಿಯಾಗಿ ಕಾಣುತ್ತಿರುವ ಬಾನಲ್ಲಿ ವಿಮಾನವೊಂದು ಯಾವುದೋ ದೇಶಕ್ಕೆ ಹೋಗುತ್ತಿತ್ತು. ಕೊನೆಗೆ ಬಾನೆಲ್ಲಾ ತಿಳಿಯಾಗಿ ಬಾನಿನಿಂದ ತಣ್ಣಗೇ ಬೀಸುವ ಗಾಳಿಯ ಸದ್ದು ಕೇಳತೊಡಗಿತು. ಅರೆಕ್ಷಣದಲ್ಲಿಯೇ ಹಳ್ಳದ ಜುಳು ಜುಳು ಸದ್ದು ಆ ಗಾಳಿಯಲಿ ಒಂದಾಗಿ ಗವ್ವೆಂದಿತು. ಅಷ್ಟೊತ್ತಿಗೆ ನಾವೆಲ್ಲ ಮಾತಾಡುವುದನ್ನು ನಿಲ್ಲಿಸಿದ್ದರಿಂದ ಗಾಳಿ, ಹಳ್ಳದ ಜೊತೆ ಮಾತನಾಡುವುದು, ಹಳ್ಳ, ಗಾಳಿ ಮಾತಿಗೆ ಓಗೊಡೋದು, ಅಡಿಕೆ ಮರದ ನಡುವಿಂದ ನಾಯಿ ಬೊಬ್ಬಿಡುತ್ತ ಏನನ್ನೋ ಓಡಿಸಿಕೊಂಡು ಹೋಗುವುದು ಕೇಳಿಸಿತು.

“ಇಲ್ಲಿ ನಮ್ಮದೇ ಕೊನೆ ಮನೆ, ಅಕ್ಕಪಕ್ಕ ಯಾರೂ ಇಲ್ಲ, ಏನು ಆದರೂ ಯಾರಿಗೂ ಗೊತ್ತಾಗುವುದಿಲ್ಲ, ನಮಗಿದು ಅಂತಹ ಕಷ್ಟವಲ್ಲದಿದ್ದರೂ, ಈ ಕಾಲದ ಮಕ್ಕಳಿಗೆ ತೀರಾ ಕಷ್ಟ, ಹಾಗಾಗಿ ನಮಗೆ ಈ ಮನೆ, ತೋಟ ಮಾರುವುದು ಅನಿವಾರ್ಯ, ಆದರೆ ಯಾರ್ಯಾರಿಗೂ ಪ್ರಕೃತಿ ಪ್ರೀತಿ ಇಲ್ಲದವರಿಗೆ ನಾವು ಮಾರಿದ್ದಲ್ಲ. ಅಭಿರುಚಿ ಇರುವವರಿಗೇ ಮಾರಿದ್ದೇವೆ ಅನ್ನುವುದೇ ಸಮಾಧಾನ. ಹಾಗಾಗಿ ಮನೆ ಬಿಡುವಾಗ ಅಷ್ಟೇನೂ ಬೇಜಾರಾಗುವುದಿಲ್ಲ. ಕೆಲವೊಮ್ಮೆ ಅನಿವಾರ್ಯತೆಯೆದುರು ಭಾವನಾತ್ಮಕತೆ ಸೋಲುತ್ತದೆ” ಬಾಯಿಗೆ ಕವಳ ಹಾಕುತ್ತ ನಮ್ಮನ್ನೇ ನೋಡುತ್ತ ಹೇಳಿದರು ಗೋರೆಯವರು. ಅವರೀಗ ನಮ್ಮೆದುರು ಮನೆ ಬಿಡುವಾಗ ಬೇಜಾರಾಗುವುದಿಲ್ಲವೆಂದರೂ, ನಾವು ಬೆಳೆದ, ಬದುಕಿದ, ಕನಸು ಕಂಡ, ನಮಗೆ ಪ್ರೀತಿಕೊಟ್ಟ, ನಮ್ಮೆಲ್ಲಾ ನಗುವನ್ನೂ, ಅಳುವನ್ನೂ ಹಿಡಿದಿಟ್ಟ ಮನೆಯನ್ನು ಬಿಟ್ಟುಹೋಗುವಾಗ ಅವರ ಕಣ್ಣು ಒಂದಷ್ಟು ಹನಿಯಾಗದೇ ಇರಲು ಸಾಧ್ಯವೇ ಇಲ್ಲ ಅನ್ನಿಸಿತು. ಮತ್ತೆ ಈ ಮನೆ ಬಿಟ್ಟು ಪೇಟೆಯಲ್ಲಿ ಹ್ಯಾಗ್ಯಾಗೋ ಇರುವಾಗ, ಒಂದಲ್ಲ ಒಂದು ರಾತ್ರಿಯ ಕನಸಲ್ಲಿ, ಮಧ್ಯಾಹ್ನದ ಅರೆಜೊಂಪು ನಿದಿರೆಯಲ್ಲಿ ನಾವು ಬಾಳಿದ ಈ ಹಳೆ ಮನೆ ಒಂದೇ ಬರುತ್ತದೆ ಅನ್ನಿಸಿತು ನನಗೆ.

“ಇನ್ನು ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಇರುಳಾದರೆ ಈ ದಾರಿಯಲ್ಲಿ ನಡೆಯೋದು ಕಷ್ಟ ಹೊರಡೋಣ” ಎಂದರು ರಾಧಾಕೃಷ್ಣ ಜೋಶಿಯವರು. ನಾವು ಅಷ್ಟೊತ್ತು ಖುಷಿಕೊಟ್ಟ ಜಾರಿಗೆಯ ಮನೆ ಮಂದಿಗೆ ಬೀಳ್ಕೊಡುತ್ತ, ಜಾರಿಗೆ ಗಣೇಶ ಗೋರೆಯವರಿಗೂ ನಮಸ್ಕಾರ ಹೇಳುತ್ತ ಅಲ್ಲಿಂದ ಹೊರಟೆವು. ಸಂಜೆಯಲ್ಲಿ ಕೆಂಪಾಗಿದ್ದ ಆ ಹಸಿರಿನ ದಾರಿಯಲ್ಲಿ ಈಗ ಕತ್ತಲೆ ತುಂಬಿ ಇಡೀ ಕಾನು ರಾತ್ರಿಯ ನಿಗೂಢ ಮೌನದಲ್ಲಿ ಕಳೆದೇಹೋಯಿತು.

ಮತ್ತೆ ತರಗಲೆಗಳ ಮೇಲೆ ನಾವು ಕಾಲಿಟ್ಟ ಸದ್ದು, ಸಿಳ್ಳೆ ಹಕ್ಕಿಯೊಂದು ಸಿಳ್ಳೆ ಹಾಕಿದ ಸದ್ದು, ಯಾವುದೋ ಎಲೆಯಲ್ಲಿ ಇಬ್ಬನಿ ಹನಿದ ಸದ್ದು, ಎಲ್ಲವೂ ಕೇಳುತ್ತಿರುವಾಗ ಇಡೀ ಕಾನಿನಲ್ಲಿ ಆವರೆಗೂ ಇರದಿದ್ದ ಗಾಢ ಚಳಿ ತುಂಬಿತು. ಜೋಶಿಯವರು ಹಾಯಿಸುತ್ತಿದ್ದ ಟಾರ್ಚು ಬೆಳಕಿಗೆ ಕಾಡಿನಲ್ಲಿ ಇಬ್ಬನಿಗಟ್ಟಿದ್ದು ಕಾಣಿಸಿತು. ಮತ್ತೆ ಹಳ್ಳ ದಾಟಿ ಮುಂದಕ್ಕೆ ಹೊರಟಾಗ ಅರಳಿಮರವೊಂದರ ಹಿನ್ನೆಲೆಯಲ್ಲಿ ನಕ್ಷತ್ರಗಳು ಫಳಪಳ ಅಂದವು. ಪರಶುರಾಮ ದೇವಸ್ಥಾನದ ಹತ್ತಿರ ಬರುವಾಗ ದೇವಸ್ಥಾನದಿಂದ “ಸ ರಿ ಮ ಗ ರಿ, ಸ ರಿ ಗ ರಿ ಸ… ಅನ್ನುವ ಸುಶ್ರಾವ್ಯ ಸಂಗೀತ ಕಲಿಸುವ ಹೆಣ್ಣು ಧ್ವನಿ ಹೇಳುತ್ತಿತ್ತು. ಆ ಧ್ವನಿಯನ್ನೇ ಮತ್ತೆ ಅನುಕರಿಸುವ ಪುಟ್ಟ ಹುಡಗನ ಧ್ವನಿಗಳ ನಡುವೆ ಕಾಡು, ರಾತ್ರಿಯ ಚಳಿಯಲ್ಲಿ ಮತ್ತಷ್ಟು ತಣ್ಣಗಾಯಿತು.