ಆಷಾಢದ ಚಿತ್ರಗಳು
ಶೃತಿ ಹಿಡಿದು ಸುರಿಯುತ್ತಿದೆ ಆಷಾಢದ ಮಳೆ,
ಕಂಬಳಿಯ ತುದಿಯಿಂದ ತೊಟ್ಟಿಕ್ಕುವ ಹನಿಯ ಹಿಮ್ಮೇಳ,
ಹೊಡಸಲಿನ ನಿಗಿ ನಿಗಿ ಕೆಂಡದ ಮೇಲಿನ
ಬೂದಿಯ ಕೆದರುತ ಕುಳಿತ ಅವನು!
ಗೋಡೆ ಮೇಲೆ ತೆವಳುತಿದೆ ಬಸವನಹುಳು,
ಕೊನೆ ಕಾಣದ ಅಂಟು ರೇಖೆಯ ರಂಗವಲ್ಲಿ,
ಬಸವನ ಹುಳುವಿಗೆ ಸೆಡ್ಡು ಹೊಡೆದಂತೆ
ಆಷಾಢವೂ ತೆವಳುತಿದೆ.
ಹೂವಿಲ್ಲ, ಮಂಕಾಗಿದೆ,
ಬೇಲಿ ಸಾಲಿನ ದಾಸವಾಳ,
ಮೂಲೆಯಲ್ಲಿ ಮುರುಟುತಿದೆ
ಒದ್ದೆ ರೆಕ್ಕೆಯ ಒಂಟಿ ಪಾರಿವಾಳ.
ಊರಾಚೆ ಹೊಳೆಯ ತುಂಬಾ
ಕೆಂಪು ನೀರಿನ ಹರಿವು,
ದಂಡೆಯುದ್ದಕ್ಕೂ ನೆನಪುಗಳದೇ ರಾಶಿ.
ನಡುಮನೆಯ ಹಸೆ ಚಿತ್ತಾರ,
ಮುಸಿ ಮುಸಿ ನಕ್ಕಂತೆ ಭಾಸವಾಗುವುದೇಕೆ?
ಒಂದೇ ಸಮನೆ ಸುರಿಯುತಿದೆ
ಆಷಾಡದ ಮಳೆ, ರಚ್ಚೆ ಹಿಡಿದಂತೆ.
ವಿರಹದಿ ತೊಯ್ದ ಆ ಮನಸಿನ ಪ್ರಶ್ನೆ ಒಂದೇ,
ಈ ಆಷಾಢ ಮುಗಿಯುವುದೆಂದು?