ಸಮುದ್ರದ ಘನಗಂಭೀರ ನಿಶ್ಯಬ್ಧ ಮೌನದಲ್ಲಿ ಕಂಗೆಟ್ಟ ಕೇಳುಗನ ಕಿವಿಯ ಪಟಲದಲ್ಲಿ ಇದ್ದಕ್ಕಿದ್ದಂತೆ ಜುಳುಜುಳು ಹರಿಯುವ ತೊರೆಯ ಸದ್ದು. ಹಾಡುವ ಖಾನರೂ, ಕೇಳುವ ನಾವೂ ಬೇರೆ ಬೇರೆ ಅಲ್ಲ ಎಂದೆನಿಸುವ ಅನುಪಮ ಸಂಗೀತದ ಚತುರವಾದ ಓಟ. ಒಂದು ಕ್ಷಣ ತಬ್ಬಿಬ್ಬಾದೆ. ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ ಇವೆಲ್ಲವೂ ಇರುವ ಇವರು ಗದ್ಯದ ಕಡೆ ಹೊರಳಲು ಇಷ್ಟೊಂದು ಕಾಲ ಯಾಕೆ ತೆಗೆದುಕೊಂಡರು?!
ಜಿ.ಕೆ.ರವೀಂದ್ರಕುಮಾರ್ ಲಲಿತ ಪ್ರಬಂಧಗಳಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ

 

ಆಕಾಶವಾಣಿಯ ಹಲವು ವರ್ಷಗಳ ಹಿರಿಯ ಸಹೋದ್ಯೋಗಿಯೂ, ಕನ್ನಡದ ಹೆಸರಾಂತ ಕವಿಯೂ ಆಗಿರುವ ಜಿ.ಕೆ.ರವೀಂದ್ರಕುಮಾರರ ಈ ಲಲಿತ ಪ್ರಬಂಧಗಳನ್ನು ಓದಲು ತೊಡಗಿದ ಕೆಲ ಹೊತ್ತಿನಲ್ಲೇ ನನ್ನಲ್ಲಿ ಉಂಟಾದ ಅಚ್ಚರಿ ಮತ್ತು ಹುಟ್ಟಿದ ಮಂದಹಾಸವನ್ನು ಹೇಗೆ ವಿವರಿಸಲಿ?

ಅಚ್ಚರಿ ಏನೆಂದರೆ ಗಂಭೀರ ಸ್ವಭಾವದವರೂ, ಅಷ್ಟೇ ಗಂಭೀರ ಧ್ವನಿಯ ಕವಿತೆಗಳನ್ನೂ ಬರೆದಿರುವ ರವೀಂದ್ರಕುಮಾರರು ಇಲ್ಲಿ ಅದು ಹೇಗೆ ಸಡಿಲಾಗಿ, ಸಲೀಸಾಗಿ ಬಯಲಲ್ಲಿ ಕ್ರಿಕೆಟ್ ಚೆಂಡೊಂದರ ಹಿಂದೆ ಲಂಗುಲಗಾಮಿಲ್ಲದೆ ಓಡುವ ಬಾಲಕನ ಹಾಗೆ, ಹಿಡಿಯಬೇಕಿದ್ದ ಬಾಲನ್ನೂ ಮರೆತು ಬದುಕಿನ ಬಿಡಿಬಿಡಿ ವಿವರಗಳನ್ನು ವಿವರಿಸುತ್ತಾರಲ್ಲಾ ಅದಕ್ಕೆ. ಮಂದಹಾಸ ಯಾಕೆಂದರೆ ಆ ವಿವರಗಳಲ್ಲಿ ಕಾಣುವ ಲವಲವಿಕೆ, ತುಂಟತನ ಮತ್ತು ಓದಿ ಮುಗಿಸುವಷ್ಟೊತ್ತಿಗೆ ಆವರಿಸುವ ಸಣ್ಣ ಸಣ್ಣ ವಿಷಾದಗಳು ಮತ್ತು ಒಂಟಿತನ.

ಚಿಕ್ಕಜಾಜೂರಿನ ಬಳಿಯ ಗುಂಜಿಗನೂರಿನ ಅದಮ್ಯ ಉತ್ಸಾಹದ ಹುಡುಗನೊಬ್ಬ ದೇಶಕಾಲಗಳ ಎಲ್ಲೆಗಳನ್ನು ಮೀರಲು ಕ್ರಿಕೆಟನ್ನೂ, ಸಿನೆಮಾ ಹಾಡುಗಳನ್ನೂ, ಶಾಸ್ತ್ರೀಯ ಸಂಗೀತವನ್ನೂ, ಕನ್ನಡ ಕಾವ್ಯವನ್ನೂ, ರೇಡಿಯೋವನ್ನೂ ಮೈಗೆಲ್ಲ ಹಚ್ಚಿಕೊಂಡು ಓಟಕ್ಕೆ ಸಿದ್ಧನಾದ ಪರಿ. ಬಹುತೇಕ ಅಜ್ಞಾತವಾಗಿರುವಂತಹ ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ನಗರಗಳ ಮಾಯೆಗಳಿಗೆ ಮರುಳಾಗಿ, ಶಾಸ್ತ್ರೀಯವಾಗಿರುವುದರ ಹಿಂದೆ ಬಿದ್ದು ನೋಯಿಸಿಕೊಂಡು ಆಮೇಲೆ ಈ ಎಲ್ಲದರ ಕುರಿತು ನಮ್ಮೊಳಗೇ ಸಣ್ಣಗೆ ನಗುವುದಿದೆಯಲ್ಲ ಅದು ಇಲ್ಲಿರುವ ಬಹುತೇಕ ಪ್ರಬಂಧಗಳ ಆತ್ಮ. ಬಹುಶ: ರವೀಂದ್ರ ಕುಮಾರರು ಕಾವ್ಯ ಕನ್ನಿಕೆಯನ್ನು ಸ್ವಲ್ಪಕಾಲ ಬದಿಗೆ ತಳ್ಳಿ, ಗದ್ಯವೆಂಬ ಹುಚ್ಚು ಜೋಗಿಯ ಹಿಂದೆ ಅಲೆಯುವ ಅಲೆಮಾರಿತನಕ್ಕೆ ಮರುಳಾದರೆ ಒಳ್ಳೆಯ ಕಥನಗಾರನೊಬ್ಬ ಕನ್ನಡಕ್ಕೆ ಎಂಟ್ರಿ ಕೊಡಬಹುದು ಎಂದು ನನಗಂತೂ ಅನಿಸಿದೆ. ಕವಿಯೊಬ್ಬ ಪ್ರತಿಮೆಗಳ ಹಂಗು ತೊರೆದು ಬದುಕಿನ ಬಹು ನಿರೀಕ್ಷಿತ ಅಚ್ಚರಿಗಳ ಕುರಿತು ಎಲ್ಲೂ ಸಲ್ಲದ ಆದರೆ ಎಲ್ಲವನ್ನೂ ಕಾಣುವ ಒಬ್ಬ ಯಾತ್ರಿಕನಂತೆ ಒಂದು ಸಣ್ಣ ನಗುವಿನೊಂದಿಗೆ ವಿವರಿಸುವ ರೀತಿ ಇದೆಯಲ್ಲ ಅದು ಒಂದು ರೀತಿಯ ಬಿಡುಗಡೆ. ತಮ್ಮ ಬಾಲ್ಯದಲ್ಲೇ ಈ ರೀತಿಯ ನಿರುಮ್ಮಳ ಬಿಡುಗಡೆ ಪಡೆದಿರುವವರಂತೆ ಇಲ್ಲಿರುವ ಬರಹಗಳನ್ನು ಓದಿದರೆ ರವೀಂದ್ರಕುಮಾರ್ ಕಾಣಿಸಿಕೊಳ್ಳುತ್ತಾರೆ.

(ಜಿ.ಕೆ.ರವೀಂದ್ರಕುಮಾರ್)

ಆದರೆ ನನಗೆ ಅಚ್ಚರಿಯಾಗುವುದು ರವೀಂದ್ರಕುಮಾರರೂ ಸೇರಿದಂತೆ ನಾವೆಲ್ಲರೂ ಯಾಕೆ ಕಾವ್ಯದೇವಿಗೆ ಮೊದಲು ಮುಗಿಬೀಳುತ್ತೇವೆ ಮತ್ತು ನಂತರ ಗದ್ಯದ ಕಡೆ ಹೊರಳುತ್ತೇವೆ? ಬಹುಶ: ಇದು ಜಗತ್ತಿನ ಎಲ್ಲೆಡೆಯ ಬರಹಗಾರರ ಹಣೆಯ ಬರಹವೂ ಆಗಿರಬಹುದು. ಹೋಗಲಿ ಬಿಡಿ ಈ ಕುರಿತು ಇನ್ನಷ್ಟು ತಲೆಕೆಡಿಸಿಕೊಂಡರೆ ಪ್ರಯೋಜನವಿಲ್ಲದ ಇನ್ನಷ್ಟು ಇಂತಹದೇ ಮಸಲಾ ಮಾತುಗಳು ಹೊರಬರಬಹುದು. ನಡುವೆ ಈ ಮುನ್ನುಡಿಯನ್ನು ಸ್ವಲ್ಪ ನಿಲ್ಲಿಸಿ ಉಸ್ತಾದ್ ಅಮೀನ್ ಖಾನರು ಹಾಡಿರುವ ಬೆಳಗಿನ ಮೊದಲ ಪ್ರಹರದ ರಾಗ ‘ಆಹಿರ್ ಭೈರವಿ’ಯನ್ನು ನಡು ಇರುಳು ಕೇಳುತ್ತಾ ಕುಳಿತೆ. ಕಡೆದ ಕಲ್ಲಿನಂತೆ ಕದಲದೆ ಕುಳಿತು ಹಾಡುವ ಖಾನ್ ಸಾಹೇಬರು ಸುಮಾರು ೨೦ ನಿಮಿಷಗಳ ನಂತರ ಭಂಗಿ ಬದಲಿಸಿ, ‘ಪಿಯಾ ಪರದೀನ್ ಪರಮಸುಖ್ ಚತುರ’ ಎಂದು ಸಡಿಲಾಗುತ್ತಾರೆ.

ಸಮುದ್ರದ ಘನಗಂಭೀರ ನಿಶ್ಯಬ್ಧ ಮೌನದಲ್ಲಿ ಕಂಗೆಟ್ಟ ಕೇಳುಗನ ಕಿವಿಯ ಪಟಲದಲ್ಲಿ ಇದ್ದಕ್ಕಿದ್ದಂತೆ ಜುಳುಜುಳು ಹರಿಯುವ ತೊರೆಯ ಸದ್ದು. ಹಾಡುವ ಖಾನರೂ, ಕೇಳುವ ನಾವೂ ಬೇರೆ ಬೇರೆ ಅಲ್ಲ ಎಂದೆನಿಸುವ ಅನುಪಮ ಸಂಗೀತದ ಚತುರವಾದ ಓಟ. ಒಂದು ಕ್ಷಣ ತಬ್ಬಿಬ್ಬಾದೆ. ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ ಇವೆಲ್ಲವೂ ಇರುವ ಇವರು ಗದ್ಯದ ಕಡೆ ಹೊರಳಲು ಇಷ್ಟೊಂದು ಕಾಲ ಯಾಕೆ ತೆಗೆದುಕೊಂಡರು?!

ಇವರ ‘ಅಸ್ತವ್ಯಸ್ತ ಮೀಮಾಂಸೆ’ ಎಂಬ ಪ್ರಬಂಧದ ಸಾಲುಗಳನ್ನೇ ಓದಿ. ಮನೆಗೆ ಬಂದವರನ್ನು ಎಲ್ಲಿ ಕೂರಿಸುವುದು ಎಂಬ ಆತಂಕದಲ್ಲೂ ಸೋಫಾದ ಮೇಲೆ ಅರ್ಧ ಓದಿದ ಪೇಪರು ಆಕಾಶ ನೋಡುತ್ತಾ ಅಂಗಾತ ಮಲಗಿರುವುದು ಕಾಣಿಸುತ್ತದೆ. ಸೋಫಾ ಕೈಗಳ ಮೇಲೆ ಬೆಳಗ್ಗೆ ನೀವೇ ಕುಡಿದಿಟ್ಟ ಲೋಟ. ಸೋಫಾದ ಮೂಲೆಯಲ್ಲಿ ಮೋಹದ ಹೆಂಡತಿಯ ವೇಲ್ ನಗುತ್ತ ಕೆಣಕುತ್ತಿದೆ. ಕೇವಲ ಮೂರೇ ಸಾಲುಗಳಲ್ಲಿ ಮುಗಿದ ವರ್ತಮಾನವನ್ನೂ, ಉಳಿದಿರುವ ಐಹಿಕವನ್ನೂ, ಮೋಹದ ಚಂಚಲ ಸೌಂದರ್ಯವನ್ನೂ ಯಾವುದೇ ಪ್ರತಿಮೆಗಳ ಮುಲಾಜಿಲ್ಲದೆ ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ‘ಅಡುಗೆ ಮನೆಯ ಕ್ಯಾಲೆಂಡರಿನಲ್ಲಿ ಇನ್ನೂ ಹಾಳೆ ತಿರುಗಿಸಿಲ್ಲ. ಯಾಕೆಂದರೆ ಹಾಳೆಗಳನ್ನು ಯಾರೋ ಹೊಲಿದಿದ್ದಾರೆ. ಮತ್ತೆ ಅಲ್ಲಿ ಎರಡು ಸೂಜಿಗಳನ್ನು ಸಿಕ್ಕಿಸಿದ್ದಾರೆ…’ ಬದುಕಿನ ಅಸ್ತವ್ಯಸ್ತವಾದ ಅಸ್ಥಿತ್ವವಾದವನ್ನು ಹೀಗೆ ಕರಾರುವಾಕ್ಕಾದ ಚಿತ್ರಗಳ ಮುಖಾಂತರ ಬೇರೆ ಯಾರು ಹೇಳುತ್ತಾರೆ? ಇದನ್ನು ಕೇವಲ ಒಂದು ಲಲಿತ ಪ್ರಬಂಧವೆಂದು ಹೇಗೆ ಓದಿ ಮುಂದಕ್ಕೆ ಹೋಗುವುದು?

ರವೀಂದ್ರಕುಮಾರರು ಕವಿಗಳು. ಅಸಂಖ್ಯಾತ ಕವಿಗೋಷ್ಠಿಗಳಿಗೆ ಹೋಗಿ ಬೋರು ಹೊಡೆಸಿಕೊಂಡು ಬಂದವರು. ಇವರೂ ಖುಷಿಯಾಗಿಯೇ ಕವಿಗೋಷ್ಠಿಗೆ ಹೋಗಿ ಬಂದಿರುತ್ತಾರೆ ಎಂಬ ಗುಮಾನಿಯಿತ್ತು ನನಗೆ. ಆದರೆ ಇವರ ‘ಪದ್ಯವಂತರಿಗಿದು ಕಾಲವಲ್ಲ’ ಎಂಬ ಪ್ರಬಂಧವನ್ನು ಓದಿ. ದೊಡ್ಡದೊಂದು ಅಸಂಗತ ಪ್ರಹಸನದಂತೆ ಗ್ರಾಮೀಣ ಭಾಗವೊಂದರಲ್ಲಿ ನಡೆಯುತ್ತಿರುವ ಕವಿಗೋಷ್ಠಿ. ಮ್ಯಾಟನಿ ನೋಡಲು ಬಂದವರು ಇನ್ನೂ ಮಾರ್ನಿಂಗ್ ಷೋ ನೋಡುತ್ತ ಕುಳಿತಿರಬೇಕಾದ ಸಮಯ ನಿರ್ವಹಣೆ. ಸಭಿಕರಾಗಿ ಕುಳಿತುಕೊಳ್ಳಲು ಯಾವುದೋ ಶಾಲೆಯಿಂದ ಒತ್ತೆಯಾಳುಗಳಂತೆ ಕರೆದು ತಂದಿದ್ದ ಪುಟಾಣಿ ಮಕ್ಕಳು. ಅವರು ಗೋಷ್ಠಿಗಳ ಉದ್ದಕ್ಕೂ ಮಾತನಾಡುತ್ತ ಜಗಳವಾಡುತ್ತ ಕುಳಿತಿದ್ದರು. ಇದೂ ಒಂದು ಬಯಲಾಟವೆಂಬಂತೆ ದೊಡ್ಡವರು ಸುಮ್ಮನೆ ನೋಡುತ್ತಿದ್ದರು. ಮಕ್ಕಳಿಗೆ ಕವಿಗೋಷ್ಠಿಯ ನಡುವಲ್ಲಿ ಅಸಾಧ್ಯ ಬೋರು ತಾಳಲಾಗದೆ `ಜೂsssಟ್’ ಅನ್ನುತ್ತಾ ಕವಿಗಳ ಮುಂದೆಯೇ ಜೂಟಾಟ ಆಡಲು ತೊಡಗುತ್ತಾರೆ. ಊರ ಮಹನೀಯರೊಬ್ಬರು ಮಕ್ಕಳಿಗೆ ‘ಏಯ್ ಕೆಳಗಿಳೀರೋ’ ಅಂತ ಗದರಿಸಿದ್ದು ಕವಿಗಳಿಗೆ ತಮ್ಮನ್ನೇ ಗದರಿಸಿದಂತೆ ಕೇಳಿಸಿ ಅಳ್ಳೆದೆಯಲ್ಲಿ ಕುಳಿತಿದ್ದಾರೆ. ಈ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದವರು ರವೀಂದ್ರಕುಮಾರರು. ಅವರಿಗೆ ಸಿಟ್ಟು ಬರುವ ಬದಲು ಮಕ್ಕಳ ಬಗ್ಗೆ ಮೆಚ್ಚುಗೆ ಬರಲು ತೊಡಗುತ್ತದೆ. ಕವಿಗೋಷ್ಠಿಯಂತಹ ನಿರುಪಯುಕ್ತ ಕೈಂಕರ್ಯಕ್ಕಿಂತ ವೇದಿಕೆಯನ್ನು ಸೂಕ್ತವಾಗಿ ಆಡಲು ಬಳಸಿದ ಮಕ್ಕಳ ಬಗ್ಗೆ ಪ್ರೀತಿಯೂ ಬರುತ್ತದೆ.

ಕೇವಲ ಮೂರೇ ಸಾಲುಗಳಲ್ಲಿ ಮುಗಿದ ವರ್ತಮಾನವನ್ನೂ, ಉಳಿದಿರುವ ಐಹಿಕವನ್ನೂ, ಮೋಹದ ಚಂಚಲ ಸೌಂದರ್ಯವನ್ನೂ ಯಾವುದೇ ಪ್ರತಿಮೆಗಳ ಮುಲಾಜಿಲ್ಲದೆ ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ‘ಅಡುಗೆ ಮನೆಯ ಕ್ಯಾಲೆಂಡರಿನಲ್ಲಿ ಇನ್ನೂ ಹಾಳೆ ತಿರುಗಿಸಿಲ್ಲ. ಯಾಕೆಂದರೆ ಹಾಳೆಗಳನ್ನು ಯಾರೋ ಹೊಲಿದಿದ್ದಾರೆ. ಮತ್ತೆ ಅಲ್ಲಿ ಎರಡು ಸೂಜಿಗಳನ್ನು ಸಿಕ್ಕಿಸಿದ್ದಾರೆ…’

ನಮ್ಮ ಸಧ್ಯದ ಸಾಹಿತ್ಯಕ ಲೋಕದ ಜಡವಾದ ಒಣ ಕಾಷ್ಠದಂತಹ ಸ್ಥಿತಿಗೆ ಕವಿಗೋಷ್ಠಿಗಳು ಸರಿಯಾದ ಪ್ರತಿಮೆ. ಅಲ್ಲಿ ಜೂಟಾಟವಾಡುವ ಮಕ್ಕಳ ಕೇಕೆಯ ಸೌಂದರ್ಯವನ್ನು ಗ್ರಹಿಸುವುದು ಕವಿಯ ಕಣ್ಣು. ಈ ಅಸಂಗತದ ವಿನೋದವನ್ನು ಗ್ರಹಿಸುವುದು ಕಥನಕಾರನ ಗುಣ. ನನಗನಿಸುವುದು ಈ ಸಂಕಲನದ ಬಹುತೇಕ ಪ್ರಬಂಧಗಳಲ್ಲಿ ಓಡಾಡುವುದು ಈ ಮೂರು ಅಂಶಗಳು. ಅದು ಸಂಸಾರವಾಗಿರಬಹುದು, ಸಂಗೀತವಾಗಿರಬಹುದು ಅಥವಾ ಕ್ರಿಕೆಟ್ ಮೈದಾನವಾಗಿರಬಹುದು. ಗ್ರಾಮವೊಂದರ ಬೆರಗುಗಣ್ಣುಗಳ ಒಳ್ಳೆಯ ಹುಡುಗನೊಬ್ಬ ಬೆಳೆಯುತ್ತ ಬೆಳೆಯುತ್ತ ಕವಿಯೂ ಆಗಿ ತಾನು ಇದುವರೆಗೆ ಇದಮಿತ್ಥಮ್ ಎಂದುಕೊಂಡ ಸಂಗತಿಗಳು ಕಣ್ಣ ಮುಂದೆಯೇ ಕಳಚಿ ಬೀಳುವುದನ್ನ ವಿನೋದವಾಗಿ ನೋಡುತ್ತಲೇ ಈ ನಡುವೆ ಸಂಭವಿಸುವ ಮಾನವ ನಡಾವಳಿಯನ್ನು ಸಣ್ಣ ಮಕ್ಕಳ ಆಟದಂತೆ ಖುಷಿಯಿಂದ ಗಮನಿಸುವುದು.

ಇವರ ‘ಟೀಂ ಗುಂಜಿಗನೂರು’ ಎಂಬ ಪ್ರಬಂಧ ಈ ಸಂಕಲನದ ಬಹಳ ಮುಖ್ಯ ಬರಹ ಎಂದು ನನಗೆ ಅನ್ನಿಸಿದೆ. ವ್ಯಾಪ್ತಿಯಲ್ಲಿ ಮತ್ತು ವಿವರಗಳಲ್ಲಿ ದೊಡ್ಡದೊಂದು ಕಾದಂಬರಿಯ ವಿಸ್ತಾರವನ್ನು ಪಡೆದುಕೊಳ್ಳಬಹುದಾಗಿದ್ದ ಬರಹವಿದು. ಗುಂಜಿಗನೂರು ಎನ್ನುವ ಪುಟ್ಟ ಊರಿನ ಪಡ್ಡೆ ಹುಡುಗರು ಕ್ರಿಕೆಟ್ ಎಂಬ ಲೋಕಾಂತರವನ್ನು ಗೆಲ್ಲಲು ಹೊರಡುವ ಮುಖಾಂತರ ಹಳ್ಳಿಯೊಂದರ ಮುಗ್ಧ ಹಪಹಪಿಗಳನ್ನು ಜಗದ ಭೂಪಟದಲ್ಲಿ ಕಡೆದು ನಿಲ್ಲಿಸಲು ನಡೆಸುವ ಸಾಹಸ ಗಾಥೆಯ ವಿವರಗಳು ಇಲ್ಲಿವೆ.

ಹರಿದ ಬಟ್ಟೆಯ ಚೂರುಗಳನ್ನು ಸುತ್ತಿ ಚೆಂಡನ್ನಾಗಿ ಮಾಡಿಕೊಂಡು ಆಡುವ ಲೋಕೋತ್ತರ ಆಟ. ಚರಂಡಿಯ ಕೆಸರು ನೀರಲ್ಲಿ ಬಿದ್ದ ಬಟ್ಟೆಯ ಚೆಂಡಿನಿಂದ ಹನಿಗಳೋಪಾದಿಯಲ್ಲಿ ಚಿಮ್ಮುವ ಕೊಳೆನೀರಿನ ಸೌಂದರ್ಯ! ಹೊಡೆದ ಬೌಂಡರಿಗಳು ಪಕ್ಕದ ರಾಗಿ, ಉದ್ದು, ಜೋಳದ ಪೈರಿನೊಳಕ್ಕೆ ಹೊಕ್ಕು ಹಳ್ಳಿಗರ ಬಾಯಿಂದ ಅಶ್ಲೀಲವಾಗಿ ಬಯ್ಯಿಸಿಕೊಳ್ಳಬೇಕಾದ ದೈನೇಶಿ ಸ್ಥಿತಿ. ಹೊಟ್ಟೆಗೆ ಅನ್ನವಿಲ್ಲದೆ ‘ಟೀಂ ಗುಂಜಿಗನೂರು’ ಕಟ್ಟುವ ಈ ಪಡ್ಡೆ ಹುಡುಗರು ಕೊನೆಗೂ ಕಂಡುಕೊಳ್ಳುವ ಸತ್ಯ ಈ ಕ್ರಿಕೆಟ್ ಎಂಬುದು ಸಿಟಿಯವರಿಗೆ ಮಾತ್ರ ಅವಕಾಶ ನೀಡುವ ಆಟ ಎಂಬುದು.

‘ಟೀಂ ಗುಂಜಿಗನೂರು ಎಂಬುದು ರಾಜ್ಯದ ಎಲ್ಲೆಡೆ ಹರಿದು ಹಂಚಿಹೋಗಿ, ಗುಡಿಯ ಮೇಲಿದ್ದ ಕ್ರಿಕೆಟ್ ಕಾಮೆಂಟರಿಯ ರೇಡಿಯೋ ಮಾಯವಾಗಿ ಇತಿಹಾಸ ಎಂದರೆ ಇಷ್ಟೇ ಅಲ್ಲವೇ’ ಎಂಬ ಅನುಭೂತಿಯೊಂದಿಗೆ ಪ್ರಬಂಧವೂ ಮುಗಿಯುತ್ತದೆ. ಆದರೆ ಈ ಬರಹದಲ್ಲಿ ರವೀಂದ್ರಕುಮಾರರು ಕೊಡುವ ವಿವರಗಳು ಹಾಗೂ ಆ ವಿವರಗಳಲ್ಲಿ ಅವರು ತೋರುವ ಉತ್ಸಾಹ ಮತ್ತು ವಿಷಾದಗಳು ಬಹಳ ಒಳ್ಳೆಯ ಕಥನವೊಂದರಂತೆ ಓದಿಸಿಕೊಂಡು ಹೋಗುತ್ತದೆ. ‘ಇನ್ನು ನಾನೂ ಒಂದು ಲಗಾನ್ ಸಿನೆಮಾ ತೆಗೆಯುವುದು ಬಾಕಿ ಇದೆ’ ಎಂದು ಅವರು ಪ್ರಬಂಧದ ಕೊನೆಯಲ್ಲಿ ಅನ್ನುತ್ತಾರೆ. ನನಗೂ ಹೀಗೆಯೇ ಅನ್ನಿಸಿದೆ. ಎಷ್ಟು ಒಳ್ಳೆಯ ಕಥನಗಾರಿಕೆ ಅವರ ಕೈಯಲ್ಲಿ ಅಡಗಿಕೊಂಡು ಕುಳಿತಿದೆ. ಅವರು ಮಾಡಬೇಕಿರುವುದು ಮುಷ್ಟಿಯನ್ನು ಸಡಿಲಿಸಬೇಕಿರುವುದು ಅಷ್ಟೇ!

(ಅಬ್ದುಲ್ ರಶೀದ್)

ಕುನ್ನಕ್ಕುಡಿ ವೈದ್ಯನಾಥನ್ ಅವರ ವಯೋಲಿನ್ ವಾದನದ ಕುರಿತಾದ ಬರಹವೂ ಹೀಗೆಯೇ. ರೇಡಿಯೋದಲ್ಲಿ ಪ್ರಸಾರವಾಗಬೇಕಾಗಿದ್ದ ಅವರ ವಾದನವನ್ನು ಕೇಳಲು ತರುಣನಾಗಿದ್ದ ಲೇಖಕರು ರೈಲ್ವೇ ಸ್ಟೇಷನ್ ನಿಂದ ಒಂದೂವರೆ ಮೈಲು ದೂರದ ಹಳ್ಳಿಯ ಮನೆಗೆ ಗಂವ್ ಎನ್ನುವ ಕತ್ತಲಲ್ಲಿ ನಡೆದ ವಿವರಗಳು ಚೇತೋಹಾರಿಯಾಗಿದೆ. ಅಷ್ಟು ಹಂಬಲಿಸಿದ್ದ ಕುನ್ನಕ್ಕುಡಿಯವರ ವಯಲಿನ್ ವಾದನವನ್ನು ಪ್ರತ್ಯಕ್ಷವಾಗಿ ಕೇಳಿದ ಮೇಲೆ ಉಂಟಾದ ಭ್ರಮನಿರಸನವನ್ನೂ ಹಾಗೆಯೇ ವಿವರಿಸುತ್ತಾರೆ. ‘ಕುನ್ನಕ್ಕುಡಿ ಎಂಬ ಸೌಧದ ಮಹಡಿಯ ಕಲ್ಲೊಂದು ಅಲುಗಾಡಿದಂತೆ ಭಾಸವಾಯಿತು’ ಅನ್ನುತ್ತಾರೆ. ‘ಅವರ ಪ್ರಯೋಗಶೀಲತೆಯ ಉತ್ಸಾಹ ಅವರ ವಾದನದ ಅಲೌಕಿಕತೆಯನ್ನು ನುಂಗಿ ಹಾಕಿತೇ’ ಎಂದೂ ಕೇಳುತ್ತಾರೆ. ‘ಪ್ರತಿಭೆಯ ಮೇಲೆ ಮನೋಧರ್ಮ ಸವಾರಿ ಮಾಡಿದರೆ, ಮನೋಧರ್ಮದ ಮೇಲೆ ಸಲೀಸುಭಾವ ಸವಾರಿ ಮಾಡಿದರೆ ಹೀಗಾಗುವುದೇ’ ಎಂದೂ ಕೇಳುತ್ತಾರೆ.

‘ಚುಕ್ಕೀ ಚುಕ್ಕೀ’ ಎನ್ನುವ ಪ್ರಬಂಧದಲ್ಲೂ ಲೇಖಕರು ಒಂದು ಪ್ರಶ್ನೆ ಎತ್ತುತ್ತಾರೆ. ‘ಯಾರೋ ಇಟ್ಟ ಒಂದು ಚುಕ್ಕಿಗೆ ಇಷ್ಟೆಲ್ಲ ತಲೆಕೆಡಿಸಿಕೊಳ್ಳುವ ನಾನು ನನ್ನೊಳಗಿನ ಚುಕ್ಕಿಗೆ ಹೇಗಪ್ಪಾ ಸಮರ್ಥನೆ ಕೊಡುವುದು’ ಎಂದು ಕೇಳುತ್ತಾರೆ. ‘ಒಂದು ಅಸಂಗತ ಲಹರಿ’ ಎನ್ನುವ ಇನ್ನೊಂದು ಪ್ರಬಂಧದ ಕೊನೆಯ ಸಾಲಲ್ಲಿ ‘ಈ ಪ್ರಬಂಧ ಈಗ ಶುರುವಾಗಿದೆಯೇನೋ ಅನಿಸುತ್ತದೆ ’ ಎನ್ನುತ್ತಾರೆ. ‘ಅಲ್ಲಾ ಇದು ಪ್ರಬಂಧವಾ’ ಎಂದೂ ಕೇಳುತ್ತಾರೆ. ತನ್ನನ್ನು ತಾನೇ ನಿಕಷಕ್ಕೆ ಒಡ್ಡಿಕೊಳ್ಳುವ ಲೇಖಕನಿಗೆ ಮಾತ್ರ ಇನ್ನೂ ಒಳ್ಳೆಯದನ್ನ ಬರೆಯುವ ತಾಕತ್ತಿರುತ್ತದೆ. ರವೀಂದ್ರಕುಮಾರರಿಗೆ ಈ ತಾಕತ್ತು ಬಾಲ್ಯದಿಂದಲೇ ಬಂದಿದೆ ಎಂದು ನನಗೆ ಇಲ್ಲಿನ ಬರಹಗಳನ್ನು ಓದಿದಾಗ ಅನ್ನಿಸಿದೆ.

ಗದ್ಯ, ಪದ್ಯ, ಪ್ರಬಂಧ, ಸಣ್ಣಕಥೆ ಇತ್ಯಾದಿ ಪ್ರಾಕಾರಗಳ ಖಚಿತವಾದ ಅರಿವೂ, ಮುಲಾಜೂ ಇಲ್ಲದೆ ಅಷ್ಟಿಷ್ಟು ಬರೆದುಕೊಂಡು ಓಡಾಡಿಕೊಂಡಿರುವ ನನ್ನಂಥವನಿಂದ ಮುನ್ನುಡಿ ಬರೆಸಿಕೊಂಡ ರವೀಂದ್ರಕುಮಾರರ ಔದಾರ್ಯ ದೊಡ್ಡದು. ಬಹುಶ: ಆಕಾಶವಾಣಿ ಎಂಬ ಜನತೆಯ ವಿಶ್ವವಿದ್ಯಾನಿಲಯದ ನೀರು ಕುಡಿದು ಬದುಕುತ್ತಿರುವ ನಮಗಿಬ್ಬರಿಗೂ ಲಾಗಾಯ್ತಿನ ಸಾಹಿತ್ಯಿಕ ಪರಿಕರಗಳ ಬಗ್ಗೆ ಇರುವ ಸಮಾನವಾದ ವಿನೋದ ದೃಷ್ಟಿಯೂ ಇದಕ್ಕೆ ಕಾರಣವಾಗಿರಬಹುದು. ಮಡಿಕೇರಿಯ ತಾರಾಮಾರ ಮಳೆಯಲ್ಲಿ ಒಂಟಿಯಾಗಿ ನೆನೆಯುತ್ತ ಬೇರೆಬೇರೆ ದಾರಿಯಲ್ಲಿ ನಡೆಯುತ್ತ ಒಂದೇ ಗಮ್ಯವನ್ನು ಸೇರುತ್ತಿದ್ದವರು ನಾವು. ಹಾಗೆಯೇ ಮೈಸೂರೆಂಬ ಸಾಂಸ್ಕೃತಿಕ ನಗರಿಯ ಸಾಹಿತ್ಯಿಕ ಆಷಾಢ ವರ್ಷಧಾರೆಯಲ್ಲೂ ಒಬ್ಬರ ಮುಖವನ್ನೊಬ್ಬರು ನೋಡಿ ನಸು ನಕ್ಕವರು. ಬಹುಶ: ಲಲಿತ ಪ್ರಬಂಧಗಳ ಗುಣವೇ ಇದು ಅನಿಸುತ್ತದೆ. ಬದುಕನ್ನು ಇನ್ನಷ್ಟು ಪ್ರೀತಿಯಿಂದ ನೋಡಲು ಕಲಿಸಿದ ಈ ಸಂಕಲನದ ಪ್ರಬಂಧಗಳಿಗೆ ನಾನಂತೂ ಆಭಾರಿಯಾಗಿದ್ದೇನೆ. ಕನ್ನಡಕ್ಕೊಂದು ‘ಟೀಂ ಗುಂಜಿಗನೂರ್’ ಎಂಬ ಚೇತೋಹಾರಿ ಕಾದಂಬರಿಯನ್ನು ಅವರು ಬರೆಯಬೇಕು ಅನ್ನುವುದು ಅವರಲ್ಲಿ ನನ್ನ ಒತ್ತಾಸೆ.

(ಪುಸ್ತಕ: ತಾರಸಿ ಮಲ್ಹಾರ್, ಲೇಖಕರು: ಜಿ.ಕೆ. ರವೀಂದ್ರ ಕುಮಾರ್, ಪ್ರಕಾಶಕರು: ಅನನ್ಯ ಪ್ರಕಾಶನ, ಮೈಸೂರು, ಪುಟಗಳು: 120, ಬೆಲೆ:110/-)