ಭೈರವಿ*

ಅವರು ಹಾಡುತ್ತಲೇ ಇದ್ದರು, ಆಲಾಪ
ಮುಗಿಸಿ, ಧೃತಗತಿಗೆ ನಡೆದು, ತಾನ್ಗಳ
ತೂಗುಯ್ಯಾಲೆಯಲ್ಲಿ ತೂಗಿಕೊಳ್ಳುತ್ತ
ಹಾಡುತ್ತ ಹಾಡುತ್ತ ಮರೆತಿದ್ದರು ಎಲ್ಲ;

ಕೇಳುವವರಿದ್ದರು ಅವರ ಜೊತೆಯಲ್ಲಿಯೇ,
ಮೈದುಂಬಿ ಹಾಡುವುದು, ಮನದುಂಬಿ
ಕೇಳುವುದು, ತುಂಬಿ ತುಂಬಿ ತುಳುಕುವುದು
ಗಾಳಿಯಲಿ ತೇಲುತ್ತ, ಹಗುರ ಚಿಟ್ಟೆಯ ರೆಕ್ಕೆಗಳ
ಮೇಲೆ ಕುಳಿತು ಸಾಗುತ್ತ ಸಾಗುತ್ತ, ಚಂದ್ರನ
ಮುಟ್ಟಲು ಮತ್ತೆ ಮತ್ತೆ ಮೇಲೆ ಮೇಲೆ ಜೀಕುತ್ತ;

ಅಮಲಿನಲಿತ್ತು ಸುತ್ತಲಿನ ಲೋಕ
ಮಧುಪಾತ್ರೆಯ ಹಿಡಿದು ಇಷ್ಟಿಷ್ಟೆ
ಹಂಚುತ್ತ, ತಾನೆ ತೊನೆದಾಡುತ್ತ
ನರ್ತಿಸುವ ನೃತ್ಯಗಾತಿಯ ಹಾಗೆ
ಹಾಡುತ್ತಿದ್ದರು ಅವರು-ಲೋಕವೇ
ನರ್ತಿಸುವಂತೆ, ಹಾಡುತ್ತಿದ್ದರು
ಅವರು- ಮೂರು ಲೋಕಗಳು
ಬೆರಗಾಗಿ, ಮಾತಿಲ್ಲದೆ ಗರಬಡಿದು
ನಿಂತಂತೆ

ಭೈರವದ ಕೊನೆಯ ಮಜಲಿಗೆ ಏರಬೇಕಿತ್ತು
ಎಲ್ಲ ತೊರೆದು ನಿಂತ ಭೈರಾಗಿಯ
ಮುದ್ರೆಗಳ ಮೂಡಿಸಬೇಕಿತ್ತು ಅವರು,
ಆ ರಾಗ, ಆ ವಿರಾಗಿಯ ಮುಟ್ಟಿಮುಟ್ಟಿ
ಮಾತನಾಡಿಸುತ್ತಿತ್ತು; ಮರೆವು-ಎಚ್ಚರಗಳ
ನಡುವೆ ತೂಗುವ ಉಯ್ಯಾಲೆ ಅದು,
ಏರುವುದು ಇಳಿಯುವುದು.
ಮೈತಿಳಿಯುವುದು, ಮರೆಯುವುದು
ಎಳೆಎಳೆಯ ಜೋಡಿಸಿ ಹಾಸು-ಹೊಕ್ಕುಗಳಲಿ
ಹಾದು, ಹೊಕ್ಕುಳಬಳ್ಳಿಯ ಬೆಸೆದು ನೇಯುವ
ಆಟ
ಎದೆಯಾಳದಿಂದ ಸ್ವರಗಳ ಹೊಮ್ಮಿಸುವ
ಮಾಟ,
ಬಂತು ಬಂತು ಇನ್ನೇನು ಬಂದಿಳಿಯಿತು
ಎನ್ನುವಾಗಲೇ ಥಟ್ಟನೆ ಕಡಿದುಬಿಟ್ಟಿತು
ಎಳೆ,
ನಿಂತುಬಿಟ್ಟಿತು ಗಾನ; ನೆಲಕ್ಕೊರಗಿತು
ರಾಗ, ಬೈರಾಗಿ ಬಿದ್ದ
ಬಾನಿಂದ ಬುವಿಗೆ;
ಎಲ್ಲ ಮುಗಿದಿತ್ತು ವೈಭವ
ಭವ ಭವ

***

*ಹಾಡುತ್ತ ಹಾಡುತ್ತಲೇ ಕೊನೆಯುಸಿರು ಎಳೆದ ಮಹಾನ್ ಗಾಯಕರಿಗೆ ಈ ಕವಿತೆ.

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ