ಹುಲಿಗೆ ಹಾರ

ಬಲೆಯಿಂದ ಹೊರಬರಲು
ನೋಡಿತು ಹುಲಿ, ಅದಕೊ
ಅಪಾರ ಹಸಿವು, ಬೇಟೆಯ
ಬೆನ್ನಟ್ಟಿಯೇ ಬಂದಿತ್ತು, ಬಲೆಗೆ
ಬಿದ್ದಿತ್ತು, ಈಗ ಹೊರಬರುವುದು
ತಿಳಿಯದೆ ಒದ್ದಾಡುತ್ತಿತ್ತು;

ಒಂದು ಇಲಿಯನ್ನಾದರೂ
ಕರೆಯೋಣವೆಂದರೆ
ಅದು ಕತೆ-ಪುಸ್ತಕದ ಬದನೇಕಾಯಿ
ಹೊಟ್ಟೆ ತುಂಬಿದಾಗ ಅಂಥ ಕತೆ ಚಂದ;

ಕಿತ್ತು ತಿನ್ನುವ ಹಸಿವು, ಬಲೆಯನ್ನು
ಒದ್ದು ಹೊರಬೀಳಬೇಕು, ಮತ್ತೆ ಮತ್ತೆ
ಸೆಣಸಿತು ಹುಲಿ, ಸಿಕ್ಕುಸಿಕ್ಕಾಯಿತು ಬಲೆ
ಹೊರದಾರಿಗಳೇ ಇಲ್ಲ, ಮನುಷ್ಯರಾದರೆ
ಎಲ್ಲಿಯಾದರೂ ಹೇಗಾದರೂ ತೂರಬಲ್ಲರು
ರಂಗೋಲಿ ಕೆಳಗೆ ನುಸುಳುವ ಕಲೆ ಅರಿತವರು;

ಹುಲಿಜನ್ಮ ಯಾರಿಗೂ ಬೇಡ, ಕಾಡಿಗೆ
ಕಾಡೂ ಇಲ್ಲ, ತಿನ್ನಲು ಪ್ರಾಣಿಗಳೂ ಇಲ್ಲ,
ಜಿಂಕೆ ಸಂತತಿ ಹೆಚ್ಚಿದೆ ಎನ್ನುತ್ತಾರೆ ಮಾನವರು
ಅದು ಅವರ ಅಂಕಿಅಂಶಗಳಲ್ಲಿ ಮಾತ್ರ,
ಒಂದು ಜಿಂಕೆಗಾಗಿ ಕಾಡಿಗೆ ಕಾಡನ್ನೆ
ಸುತ್ತಬೇಕು, ಮಳೆ ಗಾಳಿ ಬಿಸಿಲು ದಣಿವು
ದಾಪತ್ತುಗಳನ್ನು ಮರೆತು ಓಡಿಯೇ
ಓಡಬೇಕು, ಓಡಿದರೂ ಸಿಕ್ಕುವುದಿಲ್ಲ
ಒಂದೇ ಒಂದು ಜಿಂಕೆ, ಇತರೆ ಪ್ರಾಣಿಗಳು
ಎಲ್ಲಿವೆಯೊ ಯಾರು ಬಲ್ಲರು?

ಬಳಲಿ ಬೆಂಡಾದ ಹುಲಿ ಕೊನೆಗೂ
ತನ್ನ ಚೂಪು ಹಲ್ಲುಗಳನ್ನು ನಂಬಿ
ಕಚ್ಚಿ ಕಚ್ಚಿ ಬಲೆಯ ಚಿಂದಿ ಚೂರು
ಮಾಡಲು ನೋಡಿತು; ಬಲೆ ಇನ್ನಷ್ಟು
ಸಿಕ್ಕು ಸಿಕ್ಕಾಗಿ ಹುಲಿ ಬೆಪ್ಪಾಯಿತು;

ಹುಲಿಯುಗರು ಒಳ್ಳೆಯ ರೂಪಕವೆಂದು
ಹುಲಿ ಬೀಗಿತು, ಹಸಿವು ಒಳಗಿಂದ ಕೂಗಿತು
ಬೇರೆದಾರಿ ಇಲ್ಲದೆ ಹುಲಿ ಕಣ್ಮುಚ್ಚಿ ಸಮ್ಮನೆ
ಬಿದ್ದುಕೊಂಡಿತು-ಸತ್ತ ಹಾಗೆ

ದಾರಿತಪ್ಪಿ ಜಿಂಕೆಮರಿಯೊಂದು
ಇತ್ತ ಸುಳಿದು, ವಾಸನೆ ಸಿಕ್ಕಿದ್ದೇ
ಮಿಂಚಿನಂತೆ ಮಾಯವಾಯಿತು

ಮನೆಯ ದಾರಿ ಬಂತು ಹಸು
ದೂರದಲ್ಲೇ ಅದಕ್ಕೆ ಹುಲಿಯ
ಗಮಲು, ಅದೂ ಬಿದ್ದೋಡಿತು

ಕೊನೆಗೆ ಬಂದವರು ಬಾಲಕರು
ಆಡುತ್ತ ಆಡುತ್ತ ಮೈಮರೆತವರು,
ಹುಲಿ ಕಂಡು ಹಾರಿಬಿದ್ದರು, ಕುತೂಹಲ
ಕೆಟ್ಟದ್ದು, ಹತ್ತಿರ ಹತ್ತಿರ ಹೋದರು, ಹುಲಿ
ಸದ್ದಿಲ್ಲದೆ ಬಿದ್ದಿದೆ; ಮತ್ತೆ ಮತ್ತೆ ನೋಡಿದರು

‘ಹುಲಿ ಸತ್ತಿದೆ’ಎಂದನೊಬ್ಬ; ತಕ್ಷಣ
ಹುಲಿಯ ಬಾಲ ನನಗೆ ಎಂದ ಇನ್ನೊಬ್ಬ
ಉಗುರು, ಕಣ್ಣು, ಚರ್ಮ ಹಂಚಿಕೆಯಾದವು;

ಹುಲಿಬಾಲ ಕೊಯ್ಯುವ ಮೊದಲು
ಬಲೆಯ ಕೊಯ್ದರು, ಮತ್ತೆ ಬಾಲಕ್ಕೆ
ಕೈಯಿಟ್ಟರು,
ಒಂದೆ ಕ್ಷಣ,
ಎರಗಿತು ಸಿಡಿಲು,
ಮಿಂಚಿನಲಿ ಹುಲಿ
ಮುಗಿಸಿತ್ತು ಎಲ್ಲರನು

ಒಬ್ಬನೂ ಉಳಿದಿರಲಿಲ್ಲ
ಈ ಕತೆಯ ಹೇಳಲು ಅಲ್ಲಿ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ