ಇಂತಹುದ್ದೊಂದು ಪ್ರತಿಕವನ ಹುಟ್ಟುವಾಗಿನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಶಬ್ಧದ ಎಳೆಗಳು ಎಲ್ಲಿಯೂ ತುಂಡಾಗಿದೆ ಎಂದು ಓದುಗರಿಗೆ ಅನ್ನಿಸಬಾರದು. ಕವಿತೆ ಬರೆವಾಗ ತುಸು ಎಡವಿದರೂ ಎರಡೂ ಕವಿತೆಗಳು ಓದುಗರ ಕಣ್ಣಲ್ಲಿ ಬಿದ್ದುಹೋಗಿಬಿಡಬಹುದಾದ ಅಪಾಯವಿದೆ. ಹೀಗಾಗಿ ಎರಡೂ ಕವಿತೆಗಳು ಚಲಿಸುವ ಪಾದದ ಗತಿ ಒಂದೇ ಇರಬೇಕಾದದ್ದು ಇಲ್ಲಿ ಅತಿ ಮುಖ್ಯ. ಹಾಗೆ ತುರುಸಿನ ಹೆಜ್ಜೆಯಿಡಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸಿರುವ ಹಲವಾರು ಉದಾಹರಣೆಗಳನ್ನು ಇಬ್ಬರೂ ಒದಗಿಸಿದ್ದಾರೆ.
ಪಿ. ಚಂದ್ರಿಕಾ ಮತ್ತು ಶರಣು ಹುಲ್ಲೂರು ಅವರ  ‘ಜುಗಲ್‌ಬಂದಿ ಕವಿತೆಗಳು’ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

 

ಒಬ್ಬರು ಕವಿತೆಯನ್ನು ಬರೆಯುವುದಕ್ಕೇ ಅದೆಷ್ಟೋ ತಿಣುಕಾಡಬೇಕಾಗಿರುವಾಗ ಇಬ್ಬರು ಸೇರಿ ಬರೆಯುತ್ತೇವೆ ಎಂದು ಹೊರಡುವುದು ಅದೆಷ್ಟು ಕಷ್ಟ ಎನ್ನುವುದು ನನಗೆ ಅನುಭವದಿಂದ ಗೊತ್ತಿದೆ. ಆದರೆ ಸುಮಾರು ಹದಿನಾಲ್ಕು ವರ್ಷಗಳ ಹಿಂದೆಯೇ ಇಂತಹುದ್ದೊಂದು ಜುಗಲ್ಬಂದಿ ಕವಿತೆಗಳನ್ನು ಪಿ ಚಂದ್ರಿಕಾ ಮತ್ತು ಶರಣು ಹುಲ್ಲೂರು ಪ್ರಕಟಿಸಿದ್ದಾರೆ. ಇಬ್ಬರು ಒಟ್ಟಿಗೆ ಕವಿತೆಗಳನ್ನು ಬರೆಯುವುದು ಅಷ್ಟು ಸುಲಭವಲ್ಲ. ಜುಗಲ್ ಕವಿತೆಗಳು ಸಂಕಲನದಲ್ಲಿ ಒಟ್ಟೂ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ತಲಾ ಹತ್ತು ಕವಿತೆಗಳಿವೆ. ಇಲ್ಲಿ ಶರಣು ಹುಲ್ಲೂರು ಕವಿತೆಗಳು ಮೊದಲಿದ್ದು, ಚಂದ್ರಿಕಾರವರ ಕವಿತೆ ನಂತರವಿದೆ. ಎರಡನೇ ಭಾಗದಲ್ಲಿ ಪುನಃ ತಲಾ ಹತ್ತು ಕವಿತೆಗಳಿವೆ. ಇಲ್ಲಿ ಚಂದ್ರಿಕಾ ಕವಿತೆಗಳು ಮೊದಲಿದ್ದರೆ ನಂತರ ಶರಣು ಹುಲ್ಲೂರು ಬರೆದಿದ್ದಾರೆ. ಈ ವಿಭಾಗ ಕ್ರಮವನ್ನು ನೋಡಿದರೆ ಎಲ್ಲಿಯೂ ಲಿಂಗ ತಾರತಮ್ಯವಾಗಲಿ, ಹಿರಿತನದ ಅಧಿಕಾರವಾಗಲಿ ನುಸುಳದಂತೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ ಎಂದೇ ಅನ್ನಿಸುತ್ತದೆ.

ಹೀಗೆ ಪ್ರತಿಯೊಬ್ಬರ ತಲಾ ಇಪ್ಪತ್ತು ಕವಿತೆಗಳಂತೆ ಒಟ್ಟೂ ನಲವತ್ತು ಕವಿತೆಗಳನ್ನು ಹೊಂದಿದ್ದರೆ ಕೊನೆಯದಾದ ಮೂರನೆ ಭಾಗ ಉಳಿದ ಮಾತು. ಇಲ್ಲಿ ಶರಣು ಹುಲ್ಲೂರು ಹಾಗೂ ಪಿ ಚಂದ್ರಿಕಾರವರ ಮಾತುಗಳಿವೆ. ಇದರ ಜೊತೆಗೆ ಬಿ ಸುರೇಶರವರು ಬರೆದ ಮಾತುಗಳಿವೆ.

ಮೊದಲನೇ ಕವಿತೆ ಅರ್ಧ ಉಂಡು ಎದ್ದವಳಿಗೆ… ಕವಿತೆಯಲ್ಲಿ ಶರಣು ಹುಲ್ಲೂರು
ಗಂಗಾಳದ ತುಂಬಾ ಅಡಿಗೆಯಿಟ್ಟ ದಿವಸ
ಅರ್ಧ ತುತ್ತಿನೊಂದಿಗೆ ಎದ್ದೇಳಬಾರದಿತ್ತು
ಎಂದರೆ ಅದಕ್ಕೆ ಸಂವಾದಿಯಾಗಿ ಪಿ ಚಂದ್ರಿಕಾ ಬರೆದಿರುವ ಸಾಲುಗಳು ಮನದ ಆಳದಲ್ಲಿ ಉಳಿಯುತ್ತದೆ.

(ಪಿ. ಚಂದ್ರಿಕಾ)

ನಮ್ಮೊಳಗಿನ ದೇವತೆ
ಸತ್ತು ಮಲಗಿದ್ದಾಳೆ
ಅವಳು ಮುಡಿದ ದೇವಲೋಕದ ಹೂವು
ಪರಿಮಳಿಸುತ್ತಿದೆ
ಎಂತಹ ಸಂವಾದ ಇದು. ಮನಸ್ಸು ಸಣ್ಣಗೆ ನಡುಗುವ ತಣ್ಣನೆಯ ಪ್ರತಿಕ್ರಿಯೆಗೆ ಮಾತು ಮೂಕವಾಗದೆ ಇರದು.

ಇಂತಹುದ್ದೊಂದು ಪ್ರತಿಕವನ ಹುಟ್ಟುವಾಗಿನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಶಬ್ಧದ ಎಳೆಗಳು ಎಲ್ಲಿಯೂ ತುಂಡಾಗಿದೆ ಎಂದು ಓದುಗರಿಗೆ ಅನ್ನಿಸಬಾರದು. ಕವಿತೆ ಬರೆವಾಗ ತುಸು ಎಡವಿದರೂ ಎರಡೂ ಕವಿತೆಗಳು ಓದುಗರ ಕಣ್ಣಲ್ಲಿ ಬಿದ್ದುಹೋಗಿಬಿಡಬಹುದಾದ ಅಪಾಯವಿದೆ. ಹೀಗಾಗಿ ಎರಡೂ ಕವಿತೆಗಳು ಚಲಿಸುವ ಪಾದದ ಗತಿ ಒಂದೇ ಇರಬೇಕಾದದ್ದು ಇಲ್ಲಿ ಅತಿ ಮುಖ್ಯ. ಹಾಗೆ ತುರುಸಿನ ಹೆಜ್ಜೆಯಿಡಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸಿರುವ ಹಲವಾರು ಉದಾಹರಣೆಗಳನ್ನು ಇಬ್ಬರೂ ಒದಗಿಸಿದ್ದಾರೆ.

ಅಲೆ ಅಪ್ಪಳಿಸಿದಾಗೊಮ್ಮೆ
ದಂಡೆಗಳ ಬಿಕ್ಕಳಿಕೆ
ನನಗಷ್ಟೇ ಅರ್ಥವಾಗುತ್ತೆ ಬಿಡು
ನಾವಿಬ್ಬರೂ ಸಮ ದುಃಖಿಗಳು
ಎನ್ನುವ ಶರಣು ಹುಲ್ಲೂರು ಎದೆಯ ನೋವನ್ನು ತೆರೆದಿಟ್ಟರೆ
ಉಪ್ಪು ಕಡಲಿನ ನೀರಿನಲ್ಲಿ ಬೆಳೆ ಬೆಳೆಯುವುದಿಲ್ಲ
ಎದೆಯ ಕಡಲಲಿ ಮಾತ್ರ ನಿರಂತರ ಉಬ್ಬರವಿಳಿತ
ಎಂದು ಹೇಳುತ್ತಾರೆ. ಕಡಲು ಇಬ್ಬರನ್ನೂ ಏಕಕಾಲಕ್ಕೆ ಆವರಿಸಿಕೊಳ್ಳುವುದು ಹೀಗೆ.

ಅಪ್ಪಾ,
ನಿನ್ನ ಮೇಲೆ ಇನ್ನೂ ತಕರಾರಿದೆ
ಕೊಟ್ಟು ಕಸಿದದ್ದಕ್ಕೆ
ಬಿಟ್ಟು ನಡೆದದ್ದಕ್ಕೆ
ಶರಣು ತಮ್ಮ ತಂದೆಯನ್ನು ಆಕ್ಷೇಪಿಸುತ್ತಾರೆ. ಅವ್ವನ ಕಣ್ಣೀರಿಗೆ/ ಯಾವ ಭಾಷೆ ಕಲಿಸಿದ್ದೆ ಎಂದು ಅಗಲಿದ ಅಪ್ಪನನ್ನು ಪ್ರಶ್ನಿಸುತ್ತಾರೆ. ದೂರವಾದ ಅಪ್ಪ ಒಮ್ಮೆಲೆ ಸನಿಹ ಬಂದು ಎದೆಕಲುಕಿದಂತಾಗುತ್ತದೆ. ಆದರೆ ಚಂದ್ರಿಕಾ ಹಾಗಲ್ಲ.

ಇಲ್ಲಿ ಚಂದ್ರಿಕಾ ಕವಿತೆಗಳು ಮೊದಲಿದ್ದರೆ ನಂತರ ಶರಣು ಹುಲ್ಲೂರು ಬರೆದಿದ್ದಾರೆ. ಈ ವಿಭಾಗ ಕ್ರಮವನ್ನು ನೋಡಿದರೆ ಎಲ್ಲಿಯೂ ಲಿಂಗ ತಾರತಮ್ಯವಾಗಲಿ, ಹಿರಿತನದ ಅಧಿಕಾರವಾಗಲಿ ನುಸುಳದಂತೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ ಎಂದೇ ಅನ್ನಿಸುತ್ತದೆ.

ನೀನು ಹೋದಮೇಲೆ
ಮನೆಯ ಮುಂದೆ ಆಲದ ಮರ ಉರುಳಿ
ತಳದಿಂದ ಸಿಹಿನೀರು ಉಕ್ಕುತಿದೆ
ಅದು ಸದಾಕಾಲಕ್ಕೂ ಮನೆಯ ಮುಂದೆ ಹರಿಯುತ್ತದೆ
ಎನ್ನುತ್ತ ಓದುಗರ ದುಗುಡ ತುಂಬಿದ ಮನದೊಳಗೆ ಒಂದು ತಂಗಾಳಿಯ ಅಲೆಯನ್ನು ಎಬ್ಬಿಸಿ ಬಿಡುತ್ತಾರೆ.

ಹಿಂದಿನ ಕವನವನ್ನೋದಿ ಅಪ್ಪನ ಅಗಲುವಿಕೆಗೆ ಹೆಪ್ಪುಗಟ್ಟಿದ್ದ ಮನಸು ಈ ಸಾಲುಗಳಿಂದ ಪುಳಕಗೊಳ್ಳುತ್ತದೆ. ಅಪ್ಪ ಸನಿಹವೇ ಇದ್ದಾನೆ ಎಂಬ ಭಾವ ಹುಟ್ಟುತ್ತದೆ.

ಒಂದೇ ಹನಿಗೆ ಮುತ್ತಾಗುವ ಸ್ವಾತಿ ಮಳೆಯಲ್ಲ ನಾ
ನಿಂತ ನೀರಿನ ಹಾಗೆ ಕೊಳೆತು ಹೋಗುವುದಿಲ್ಲ
ಇದು ಚಂದ್ರಿಕಾರವರ ಸಾಲು. ಹೆಣ್ಣನ್ನು ಹೊಗಳಿ ಅಟ್ಟಕ್ಕೇರಿಸಿ, ಮುತ್ತು ರತ್ನ ಎಂದೆಲ್ಲ ಬಿರುದು ಕೊಟ್ಟು ನಿಂತ ನೀರಾಗಿಸಿ ಪಾಚಿಗಟ್ಟಿಸುವ ಗಂಡು ಮನಸಿಗೆ ಸವಾಲು ಹಾಕುತ್ತಾರೆ.

ನಿನ್ನೊಳಗಿರುವ ಮಾಯೆಯನ್ನೇ ಕೇಳು
ಹನಿ ಸ್ವಾತಿ ಮಳೆಗೂ ಮನಸು ಹೆಣೆಯುವುದು ಗೊತ್ತು
ಎನ್ನುತ್ತ ಶರಣು ಹೆಣ್ಣಿನ ಕೋಪಕ್ಕೆ ಮತ್ತದೇ ಶತಮಾನದ ಉತ್ತರ ಕೊಡುತ್ತಾರೆ. ಹೆಣ್ಣಿನ ಮನಸ್ಸೇ ಮಾಯೆ ಎಂಬುದನ್ನು ಹೇಳುತ್ತಲೇ ಸ್ವಾತಿಯ ಹನಿ ಹನಿಯೂ ಮನಸ್ಸನ್ನು ಒಂದುಗೂಡಿಸುವ ಪ್ರೇಮದ ಭರವಸೆ ದೊರೆಯುತ್ತದೆ.

(ಶರಣು ಹುಲ್ಲೂರು)

ಶರಣು ಹುಲ್ಲೂರುರವರು ಮೊದಲು ಬರೆದು ಅದಕ್ಕೆ ಚಂದ್ರಿಕಾರವರು ಸಾಥ್ ನೀಡಿದ ಕವಿತೆಗಳಿಗೂ, ಚಂದ್ರಿಕಾ ಮೊದಲು ಬರೆದು ನಂತರ ಶರಣು ಹುಲ್ಲೂರುರವರು ಬರೆದ ಜುಗಲ್ ಗಳ ವಿಷಯವನ್ನೊಮ್ಮೆ ಅವಲೋಕಿಸಬೇಕು. ಶರಣುರವರ ಕವನಗಳು ಇಹದ ದನಿಗಳು. ಅರ್ಧ ಉಂಡು ಎದ್ದವಳಿಗೆ, ಕೇಳಬೇಕೆನಿಸಿದ್ದು, ಅರ್ಥವಾಗದ್ದು, ಪ್ರೀತಿ ಎಂಬ ಮಾಯೆ ಎನ್ನುವ ಕವನಗಳನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಚಂದ್ರಿಕಾರವರು ಕೂಡ ಇಹವನ್ನೇ ಹೇಳಿದ್ದಾರೆ. ಆದರೆ ಚಂದ್ರಿಕಾರವರು ಬರೆದ ಕವನಗಳು ಇಹದಿಂದ ಒಂದು ಹೆಜ್ಜೆ ಮುಮದೆ ಹೋಗಿ ನಿಲ್ಲುತ್ತಾರೆ. ಬರಿ ಶ್ವೇತೆಗೆ, ಸರಯೂ ನದಿಯಾಳದಲಿ, ಮಹದೇವಿ ಅಕ್ಕ ಮುಂತಾದವು ಇಲ್ಲಿ ನಿದರ್ಶನವಾಗಿ ನಿಲ್ಲುತ್ತವೆ. ಶರಣು ಕೂಡ ಇಹದ ಮುಂದಕ್ಕೆ ಹೆಜ್ಜೆ ಇಡಲು ಪ್ರಯತ್ನಿಸಿರುವುದೇ ಈ ಜುಗಲ್ ಬಂದಿ ಕವಿತೆಗಳ ಸಾರ್ಥಕತೆ.

ಹೆಣ್ತನದ ನವಿರತೆ, ಖಚಿತತೆ ಹಾಗೂ ಹೇಳಬೇಕಾದುದನ್ನು ತಣ್ಣಗೆ ಹೇಳಿಬಿಡುವ ಚಂದ್ರಿಕಾರವರ ಗುಣದಂತೆ ಅವರ ಕಾವ್ಯ ಕೂಡ ನಿಖರತೆಯಿಂದ ಕೂಡಿದೆ.

ಚಂದ್ರಿಕಾ ಒಂದು ಸಾಗರ. ಅವರ ಸಾಹಿತ್ಯದ ಜ್ಞಾನವನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಜೀವಪ್ರೀತಿಯ ಹೆಣ್ಣು ಅವರು. ಕವನಗಳಲ್ಲಿ ಅವರ ತಾನ್ ಅದ್ಭುತವಾಗಿದೆ. ಶಬ್ಧಗಳ ಬಳಸುವಿಕೆ ಮತ್ತು ಶಬ್ಧಗಳ ಚಮತ್ಕಾರ ಕೂಡ ಇಲ್ಲಿ ಒಂದು ಪರಿಪೂರ್ಣತೆಯನ್ನು ನೀಡಿದೆ. ಇನ್ನು ಶರಣು ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯವಿಲ್ಲದವರು. ಖಂಡಿತವಾಗಿಯೂ ಇವು ಚಂದ್ರಿಕಾ ಕವನಗಳೊಂದಿಗೆ ಪೈಪೋಟಿ ನೀಡಲು ಪ್ರಯತ್ನಿಸಿವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಈ ಕವನಗಳಿಗೆ ಸುಮಾರು ಹದಿನಾಲ್ಕು ವರ್ಷಗಳ ಹಿಂದಿನ ಮಾತಿದೆ. ಇಬ್ಬರು ಕವಿಗಳ ಜುಗಲ್ಬಂದಿ ಹೊರಬರುವಾಗ ಅಲ್ಲಿ ಎಂತಹ ಸಾಹಸ ಇದ್ದಿರಬಹುದು ಎಂದು ನಾನು ಯಾವತ್ತೂ ಯೋಚಿಸುತ್ತೇನೆ. ಸಾಧಾರಣವಾದ ಮಾತಲ್ಲ ಇದು. ಹದಿನಾಲ್ಕು ವರ್ಷಗಳ ನಂತರ ನಾನು ‘ನನ್ನ ದನಿಗೆ ನಿನ್ನ ದನಿಯು’ ಗಜಲ್ ಜುಗಲ್ ಹೊರತರುವಾಗಲೂ ಅದೆಷ್ಟೋ ಅಳುಕಿದ್ದೆ ಎಂಬುದನ್ನು ಮರೆಯುವಂತಿಲ್ಲ. ಗಂಡು ಮತ್ತು ಹೆಣ್ಣಿನ ಸಹಚರ್ಯವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಸಮಾಜದ ಎದುರು ಇಂತಹುದ್ದೊಂದು ಜುಗಲ್ ಬರೆದರೆ ಆಡುವವರ ಎದುರಿಗೆ ಮಕಾಡೆ ಕವುಚಿ ಬಿದ್ದಂತಾಗುತ್ತದೇನೋ ಎನ್ನುವ ಆತಂಕ.

ಇನ್ನು ಹದಿನಾಲ್ಕು ವರ್ಷಗಳ ಹಿಂದಿನ ಆ ಸ್ಥಿತಿ ಏನಿರಬಹುದು ಎಂದುಕೊಂಡೇ ಚಂದ್ರಿಕಾರವರಿಗೆ ಫೋನಾಯಿಸಿದೆ. ಆಡುವವರು ಆಡ್ಕೋತಾರೆ. ಆಗೋ ಕಾಲಕ್ಕೆ ಆಗಿ ಬಿಡಬೇಕು. ಸುಮ್ನೆ ಪುಸ್ತಕ ಮಾಡು. ಎಂದು ಅವರು ಧೈರ್ಯಕೊಟ್ಟು ನಮ್ಮ ಗಜಲ್ ಜುಗಲ್ ಹೊರಬರಲು ಕಾರಣವಾದ ಇವರಿಬ್ಬರಿಗೂ ಧನ್ಯವಾದಗಳು. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನವದು. ಅದಕ್ಕಿಂತ ಮೊದಲು ಎಲ್ಲಿಯೂ ಜುಗಲ್ ಬಂದ ಉದಾಹರಣೆಗಳಿಲ್ಲ. ಹೀಗೆ ಹೊಸದೊಂದು ಮಾರ್ಗವನ್ನು ಹಾಕಿಕೊಟ್ಟ ಇವರಿಬ್ಬರ ದಿಟ್ಟ ಹೆಜ್ಜೆಗೊಂದು ಸಲಾಂ.