ಗೋವಿಂದಮೂರ್ತಿ ದೇಸಾಯಿಯವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ಸ್ಟೇಟ್‍ ಬ್ಯಾಂಕ್‍ ಆಫ್‍ ಇಂಡಿಯಾದಲ್ಲಿ ಅಧಿಕಾರಿಯಾಗಿದ್ದ  ಅವರು, ಸಾಹಿತ್ಯ ಕೃಷಿ ಮಾಡಿದವರು. ಐತಿಹಾಸಿಕ ವಿಷಯಗಳನ್ನಾಧರಿಸಿದ ಕತೆಗಳನ್ನು  ಬರೆಯುವಲ್ಲಿ ಆಸಕ್ತಿ ತೋರಿದವರು. ಚಾಲುಕ್ಯ ಚಕ್ರೇಶ್ವರ ಅವರು ಬರೆದ ಪ್ರಸಿದ್ಧ ಕಾದಂಬರಿ. ಆಧ್ಯಾತ್ಮ ವಿಷಯಗಳಲ್ಲಿಯೂ ವಾಚನ ಅಧ್ಯಯನದಲ್ಲಿ ನಿರತರಾಗಿದ್ದುಕೊಂಡು, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು.  ‘ಗಾಂಧೀಜಿ ಮತ್ತು ಮಹಿಳೆ’ ಹಾಗೂ ‘ಬಾಪೂಜಿಯ ಬದುಕು’ ಅವರು ಬರೆದ ಕೃತಿಗಳು. ಗಾಂಧೀತತ್ವದಿಂದ ಪ್ರಭಾವಿತರಾದವರು. ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ಅವರು ಬರೆದ ಟಾರು ಬೀದಿಯ ಮೇಲೆ ಕಾರ್ಗಾಲ ಕವನ  ಇಂದಿನ  ಓದಿಗಾಗಿ. 

 

ಟಾರು ಬೀದಿಯ ಮೇಲೆ ಕಾರ್ಗಾಲ

ಒಣಗಿದೆಣ್ಣೆಯ ಮೇಲೆ
ಹನಿಬಿದ್ದು ಉರಿಯೆದ್ದು ಜ್ವಾಲೆ !
ಕಾರ್ಗಾಲ ತನ್ನೊಡನೆ ತಂದಿರುವ ಮಾಯೆ
ಇಂದ್ರಚಾಪವ ಮುರಿದು ಮಾಡಿರುವ
ಲೋಕಗಳೇನೋ ಎನಿಸುವ ಹಲವು ವರ್ಣಛಾಯೆ
ತಾರಕೆಗೆ ಬಣ್ಣಗಳ ತುಂಬಿ ಬಂಗಾರದಲಿ
ಬಿಗಿದು ಬೀದಿಯ ಮೇಲೆ ಬಿಟ್ಟರಾರು ?
ಊಹೆಗೇ ಬಣ್ಣವನು ಬರೆದು ಚಿತ್ರಿಸಿದಂತೆ
ಒಂದೆ ಚಿತ್ರದಿ ವರ್ಣ ನೂರು.

ಟಾರು ಬೀದಿಯ ಮೇಲೆ ಕಾರ್ಗಾಲ
ಕಣ್ತೆರೆದು ರಂಗುರಂಗಿನ  ಎಲೆಯ ಬಿಚ್ಚಿದಂತೆ
ದೇವಲೋಕದ ಸೋಗೆ ಮೈದುಂಬಿ ಕುಣಿಯಿತೆ
ಅಲ್ಲಲ್ಲಿ ನವಿಲುಗರಿ ಉದುರುವಂತೆ ?

ರಾಜವೀಧಿಯ ಸುಪ್ತ ಸ್ವರ್ಣ ಸ್ವಪ್ನಗಳಿಂದು
ಹತ್ತು ಬಣ್ಣವ ಹೊತ್ತು ಅರಳಿದಂತೆ
ಎದೆಯ ಮಸೆತಕೆ ಹರಿದ ಸರದ ಪದಕಗಳೇನು
ಯಕ್ಷನಭಿಸಾರಿಕೆಯು ಇರುಳು ನಡೆದಂತೆ.
ಯಾವ ರಾಸಾಯನಿಕ ನೆಸಕವೇನೋ ಕಾಣೆ ಸ್ವರ್ಣ
ಪರ್ಣಕು ಜೀವ ಪಡೆವ ಚಿಂತೆ.