ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಪ್ರೇಕ್ಷಕರು ಇದನ್ನು ಎಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದರೆ, ನಮ್ಮ ಆಟಗಾರರು ಗೆದ್ದರೆ, ಅವರನ್ನು ಅಟ್ಟಕ್ಕೆ ಏರಿಸುತ್ತೇವೆ; ಹಾಗೆಯೇ ಸೋತರೆ ಅವರನ್ನು ಪಾತಾಳಕ್ಕೆ ಇಳಿಸಿ ಬಿಡುತ್ತೇವೆ! ಇದೊಂದು ದೌರ್ಭಾಗ್ಯವೇ ಸರಿ. ನಾವು ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಬೇಕು. ಯಾರಿಗೂ ಸೋಲುವುದಕ್ಕೆ ಇಷ್ಟವಿರುವುದಿಲ್ಲ. ಪಂದ್ಯದಲ್ಲಿ ಯಾರಾದರೂ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ಇದು ಪಂದ್ಯದ ನಿಯಮಾವಳಿ. ನಾವೇ ಯಾವಾಗಲೂ ಗೆಲ್ಲಬೇಕು ಎಂದರೆ ಹೇಗೆ?
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟಿ20 ವಿಶ್ವ ಕಪ್ ಕುರಿತ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ

2022 ನೆ ಟಿ20 ಕ್ರಿಕೆಟ್ ವಿಶ್ವ ಕಪ್ ಭಾರತಕ್ಕೆ ಬಹಳ ರೋಮಾಂಚಕಾರಿಯಾಗಿ ಶುರುವಾಯಿತು. ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾದ ಪಂದ್ಯಗಳು ದಿನ ದಿನಕ್ಕೆ ಎಲ್ಲರ ಕುತೂಹಲ ಕೆರಳಿಸಿ ಕೊನೆಯ ಬಾಲಿನವರೆಗೆ ಪ್ರೇಕ್ಷಕರಿಗೆ, ಅದರಲ್ಲೂ ಟಿವಿಯಲ್ಲಿ ನೋಡುವವರಿಗೆ, ಎಲ್ಲಿ ಏನಾಗುವುದೋ ಅನ್ನುವ ಕಾಳಜಿಯನ್ನು ಹುಟ್ಟಿಸಿತ್ತು. ಕೆಲವರಿಗಂತೂ ಹೃದಯದ ಬಡಿತ ಏರಿ ಎಲ್ಲಿ ಹೃದಯಸ್ಥಂಬನವಾದೀತೋ ಎಂಬ ಹೆದರಿಕೆಯನ್ನು ಅವರ ಕಾರ್ಡಿಯಾಲಜಿಸ್ಟ್‌ಗಳಿಗೆ ಹುಟ್ಟಿಸಿದ್ದರೂ ಅದು ಆಶ್ಚರ್ಯವೇನಲ್ಲ!

2022ರ ಭಾರತದ ಮೊದಲನೇಯ ಪಂದ್ಯ ನಮ್ಮ ಕಡು ವಿರೋಧಿ ನೆರೆ ರಾಷ್ಟ್ರದ ಪಾಕಿಸ್ತಾನದ ಜೊತೆಗೆ ಶುರುವಾಯಿತು. ಐಸಿಸಿಯ ಒಡಿಐ ಪಂದ್ಯಗಳು 1975ರಲ್ಲಿ ಶುರುವಾಯಿತು. ಆವಾಗಿನಿಂದ ಯಾವ ಪಂದ್ಯದಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಸೋತಿರಲಿಲ್ಲ. ಇದೊಂದು ಅದ್ಭುತ ಸಾಧನೆಯೆಂದೇ ಹೇಳಬಹುದು. ಯಾಕೆಂದರೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಪಿಚ್ಗಳಲ್ಲಿ, ಬದಲಾಯಿಸುತ್ತಿರುವ ಪೀಳಿಗೆಯಲ್ಲಿ ಭಾರತ ತನ್ನದೇ ಆದ ಮೇಲುಗೈಯನ್ನು ಪಡೆದಿತ್ತು. ಪಾಕಿಸ್ತಾನಕ್ಕೆ ಗೆಲುವನ್ನು ಮೂಸುವುದಕ್ಕೂ ಬಿಟ್ಟಿರಲಿಲ್ಲ ಭಾರತ!

ಆದರೆ ಹೋದ ವರ್ಷ ಎರಡು ಬಾರಿ ಪ್ರಪ್ರಥಮವಾಗಿ ಭಾರತ ಪಾಕಿಸ್ತಾನದ ವಿರುದ್ಧ ಸೋತು ತನ್ನ ಅಪೂರ್ವ ದಾಖಲೆಯನ್ನು ಕಳೆದುಕೊಂಡಿತ್ತು. ಹಾಗಿರುವಾಗ ಈ ಸರ್ತಿ ಏನಾಗುವುದೋ ಎಂಬ ಆತಂಕ ಎರಡೂ ಕಡೆಯ ಪ್ರೇಕ್ಷಕರಲ್ಲಿ ಮೂಡಿ ಬರುವುದು ಸಹಜವೇ. ಪಾಕಿಸ್ತಾನಕ್ಕೆ ಇತ್ತೀಚೆಗೆ ಸಿಕ್ಕ ವಿಜಯದಿಂದ ಅವರ ಮನೋಸ್ಥಿತಿ ಉನ್ನತ ಮಟ್ಟದಲ್ಲಿತ್ತು.

ಮುಖ್ಯ ಬದಲಾವಣೆಯೆಂದರೆ ಭಾರತದ ತಂಡದ ನಾಯಕ ಈಗ ರೋಹಿತ್ ಶರ್ಮ. ಅದು ವಿರಾಟ್ ಪರ್ವ ಮುಗಿದು ಕೊಹ್ಲಿಯವರಿಂದ ರೋಹಿತ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ಕೊಡಲಾಗಿತ್ತು. ಭಾರತ ತಂಡದ ಕೋಚ್ ರವಿ ಶಾಸ್ತ್ರಿಯಿಂದ ಬದಲಾಗಿ ಹೆಸರಾಂತ ಆಟಗಾರ ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದರು. ರೋಹಿತ್ ಮತ್ತು ದ್ರಾವಿಡ್ ಮೊದಲ ಬಾರಿ ಐಸಿಸಿ ಪಂದ್ಯಾವಳಿಯಲ್ಲಿ ಅವರವರ ಹೊಸ ಹುದ್ದೆಯಲ್ಲಿ ಭಾಗವಹಿಸುತ್ತಿದ್ದರು. ತಂಡದಲ್ಲಿ ಹೊಸ ಹುರುಪು, ಉತ್ಸಾಹ ಕಾಣಿಸಿಕೊಂಡಿದ್ದರೂ ಅದನ್ನು ಮೈದಾನದಲ್ಲಿ ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭವಾದ ಕೆಲಸವಲ್ಲ.

ತೊಂಬತ್ತು ಮೂರು ಸಾವಿರ ಪ್ರೇಕ್ಷಕರ ಮಧ್ಯೆ ಆಸ್ಟ್ರೇಲಿಯಾದ ಮೆಲ್‌ಬೋರ್ನ್‌ ನಗರದ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ಹಣಾಹಣಿ ಪಂದ್ಯ ಶುರುವಾಯಿತು. ಒಂದಂತೂ ನಿಜ. ಪ್ರಪಂಚದಲ್ಲಿ ನೀವು ಯಾವ ದೇಶಕ್ಕೆ ಹೋಗಿ, ಯಾವ ಆಟವಾದರೂ ಸರಿ, ಅದರಲ್ಲಿ ಭಾರತ ಆಡುತ್ತಿದ್ದರೆ ಅಲ್ಲಿ ಕಿಕ್ಕಿರುವ ಪ್ರೇಕ್ಷಕರಲ್ಲಿ ಶೇಖಡ 80 ಭಾರತೀಯರೇ ಆಗಿರುತ್ತಾರೆ! ಎರಡು ವರ್ಷದ ಹಿಂದೆ ಇಂಗ್ಲೆಂಡಿನ ಲಾರ್ಡ್ಸ್‌ ಮೈದಾನದಲ್ಲಿ ಆಡುತ್ತಿದ್ದಾಗ ಅಲ್ಲಿ ನೆರೆದಿದ್ದ ಜನರನ್ನು ನೋಡಿ ಇಂಗ್ಲೆಂಡ್ ಟೀಮಿನ ನಾಯಕ ‘ನಾನು ಈಗ ಕಲ್ಕತ್ತಾದ ಈಡನ್ ಗಾರ್ಡನ್‌ನಲ್ಲೋ ಅಥವ ಮುಂಬಯಿಯ ವಾಂಖೇಡೆಯಲ್ಲಿ ಆಡುತ್ತಿರುವ ಹಾಗೆ ನನಗೆ ಭಾಸವಾಗುತ್ತಿದೆ’ ಎಂದಿದ್ದ! ಆಶ್ಚರ್ಯವೇನಲ್ಲ!

ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ಭಾರತದ ವೇಗವಾಗಿ ಬೊಲಿಂಗ್ ಮಾಡುವ ಅರ್ಷದ್ ಸಿಂಘ್ ತನ್ನ ಮೊದಲ ಬಾಲಿನಲ್ಲೇ ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಅವರ ವಿಕೆಟ್ ಅನ್ನು ಬರೀ ಕಾಲಿಗೆ ಬಿದ್ದಿದ್ದರಿಂದ ಎಲ್ಬಿಯಿಂದ ಔಟ್ ಮಾಡಿದರು. ಈಗ ವಿಶ್ವದಲ್ಲೇ ಅತ್ಯಂತ ರನ್ನು ಗಳಿಸಿ ಹೆಸರುವಾಸಿಯಾದ ಬಾಬರ್ ವಿಕೆಟನ್ನು ಬೀಳಿಸಿ ಭಾರತಕ್ಕೆ ಒಳ್ಳೆ ಶುಭಾರಂಭವಾಯಿತು. ಎರಡನೇ ಆಟಗಾರನಾದ ರಿಝ್ವಾನ್‌ರ ವಿಕೆಟನ್ನೂ ಅರ್ಷದ್ ಅವರೇ ಬೀಳಿಸಿದರು.

ಎರಡು ವಿಕೆಟ್ ಬೇಗ ಬಿದ್ದರೂ ಪಾಕಿಸ್ತಾನ ಮೂರನೇ ವಿಕೆಟ್‌ಗೆ ಒಳ್ಳೆ ಭಾಗ್ಯದಾರಿಕೆ ಹೂಡಿ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ಆದರೆ ಭಾರತದ ಹಾರ್ದಿಕ್ ಪಾಂಡ್ಯ ಬೋಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಪಾಕಿಸ್ತಾನ 158 ರನ್‌ಗೆ ಎಲ್ಲರೂ ಔಟಾದರು. ಭಾರತ ಬ್ಯಾಟಿಂಗ್ ಶುರುವಾದಾಗ ನಿರಾಶಾದಾಯಕ ಆಟವಾಡಿ ಕೇವಲ 30 ರನ್‌ಗಳಿಗೆ ತನ್ನ ನಾಲ್ಕು ವಿಕೆಟ್‌ಗಳು ಕಳೆದುಕೊಂಡಿತು. ಮಾಜಿ ನಾಯಕ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಕುಶಲತೆಯಿಂದ ತಂಡದ ಸ್ಕೋರನ್ನು 100ಕ್ಕೆ ದಾಟಿಸಿದರು. ಅಷ್ಟರಲ್ಲಿ ಸ್ಕೋರಿಂಗ್ ವೇಗ ಬಹಳ ಹಿಂದುಳಿದು ಇನ್ನು ಸೋತ ಹಾಗೆ ಅನ್ನುವ ಪರಿಸ್ಥಿತಿ ಬಂದಾಗ ಇಬ್ಬರೂ ಸ್ಕೋರಿಂಗ್ ವೇಗವನ್ನು ಬೌಂಡರಿ ಮತ್ತೆ ಸಿಕ್ಸರ್‌ಗಳಿಂದ ಹೆಚ್ಚಿಸಿ ಗೆಲುವಿಗೆ ಬಹಳ ಹತ್ತಿರ ತಂದರು.

ಕೇವಲ 8 ಬಾಲುಗಳಿಗೆ ಇನ್ನೂ 26 ರನ್ನು ಬೇಕಾದಾಗ, ಪರಿಸ್ಥಿತಿ ಕೈ ಮೀರಿ ಹೋಗಿದೆ ಅನ್ನುವ ಸಮಯದಲ್ಲಿ, ಕೊಹ್ಲಿ ಸತತವಾಗಿ ಎರಡು ಸಿಕ್ಸರ್ ಗಳನ್ನು ಬಾರಿಸಿ ಕೊನೆಯ ಓವರ್‌ನ 6 ಬಾಲುಗಳಲ್ಲಿ 16 ರನ್ ಬೇಕು ಅನ್ನುವ ಸ್ಥಿತಿಗೆ ತಂದಿಟ್ಟರು. ಕೊನೆಯ 6 ಬಾಲುಗಳಲ್ಲಿ ಪಂದ್ಯ ಎಷ್ಟು ರೋಮಾಂಚನಕಾರಿಯಾಯಿತೆಂದರೆ ಈ ಪಂದ್ಯ ಇತಿಹಾಸದಲ್ಲೇ ಒಂದು ಶ್ರೇಷ್ಟ ಮಟ್ಟದ ಪಂದ್ಯವೆಂದು ಪರಿಗಣಿಸಲಾಗಿದೆ. ಅದರಲ್ಲಿ ಒಂದು ಪಂದ್ಯದಲ್ಲಿ ಬರುವ, ಔಟ್, 1, 2, 3, 4, 6 ರನ್ನುಗಳು, ವೈಡ್, ನೋ ಬಾಲ್ ಎಲ್ಲಾ ಸೇರಿಕೊಂಡಿತ್ತು! ಪಾಕಿಸ್ತಾನದ ಗೆಲುವು ಖಚಿತ ಎಂದುಕೊಳ್ಳಲಾಗಿತ್ತು; ಆದರೆ ಕೊಹ್ಲಿಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಹೊಡೆದ ಸಿಕ್ಸರ್, ಬೌಂಡರಿಗಳು, ಕೊನೆಯಲ್ಲಿ ಬಂದ ಅಶ್ವಿನ್‌ರ ಸಮಯಪ್ರಜ್ಞೆಯಿಂದ ಅವರು ಕೊನೆಯ ಬಾಲಿನಲ್ಲಿ ಹೊಡೆದ ಒಂದು ರನ್‌ನಿಂದ ಭಾರತ ಪಾಕಿಸ್ತಾನದ ವಿರುದ್ಧ ಜಯಭೇರಿ ಹೊಡೆಯಿತು. ಮತ್ತೆ ಮೊದಲಿನ ಹಾಗೆ ಪಾಕಿಸ್ತಾನವನ್ನು ಹಿಂದಿಕ್ಕಿತು ಭಾರತ.

ಈ ಪಂದ್ಯದ ವಿಶೇಷವೇನೆಂದರೆ, ವಿರಾಟ್ ಕೊಹ್ಲಿಯವರ ಪುನರ್ಜನ್ಮ. ಕಳೆದ ಒಂದು ವರ್ಷದಿಂದ ಆವರ ಆಟ ತೀರ ಕಳಪೆ ಆಟಕ್ಕೆ ತಿರುಗಿ, ಅವರು ಆಟದಿಂದಲೇ ರಿಟೈರ್ ಆಗುತ್ತಾರೋ ಎನ್ನುವ ಮಟ್ಟಕ್ಕೆ ಕೆಳಗಿಳಿದಿತ್ತು. ಕೊನೆಗೆ ಒಂದು ತಿಂಗಳು ಅವರು ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡು ಆಸ್ಟ್ರೇಲಿಯಾಗೆ ತೆರಳಿದ್ದರು. ಅದು ಫಲಕಾರಿಯಾಗಿ ಈಗ ಚೆನ್ನಾಗಿ ಆಡುತ್ತಿದ್ದಾರೆ.

*****

ಇಷ್ಟು ಮನೋರಂಜಕ ಟಿ20 ಪಂದ್ಯವನ್ನು ಒಂದು ಕಾಲದಲ್ಲಿ ಭಾರತ ಸಂಪೂರ್ಣವಾಗಿ ತಿರಸ್ಕರಿಸಿತ್ತು ಎಂದರೆ ಆಶ್ಚರ್ಯವಾಗಲ್ವೇ, ಅದರಲ್ಲೂ ತಂಡದಲ್ಲಿ ರಾಹುಲ್ ಡ್ರಾವಿಡ್, ಸಚಿನ್ ತೆಂಡೂಲ್ಕರ್, ಲಕ್ಷ್ಮಣ್ ಮುಂತಾದ ಘಟಾನುಘಟಿಗಳು ಆಡುತ್ತಿರುವ 2007ರಲ್ಲಿ! ಆಗ ಐಸಿಸಿ ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಿಯೋಜಿಸಿತ್ತು. ಭಾರತ ವೆಸ್ಟ್ ಇಂಡೀಸ್‌ಗೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಹೋಗಿತ್ತು. ಆಗ ಟೀಮಿನ ನಾಯಕನಾಗಿದ್ದ ಡ್ರಾವಿಡ್ ‘ಟಿ 20 ಕಪ್ ಚಿಕ್ಕವರು ಆಡುವ ಆಟ, ನಾವು ಸೀನಿಯರ್ಸ್‌ ಇದರಲ್ಲಿ ಪಾಲ್ಗೊಳ್ಳುವುದಿಲ್ಲ..’ ಎಂದು ಬಿಸಿಸಿಐ ಗೆ ಕಾಗದ ಬರೆದು ಹಾಕಿದರು! ನಮ್ಮ ಕ್ರಿಕೆಟ್ ಬೋರ್ಡಿಗೂ ಭಾರತ ಟಿ 20 ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಇಷ್ಟವಿರಲಿಲ್ಲ. ಆದರೆ ಐಸಿಸಿ ವಿಶ್ವ ಕಪ್‌ ಅನ್ನು ನಿಯೋಜಿಸಿರುವುದರಿಂದ ಒಂದು ತಂಡವನ್ನು ಹ್ಯಾಗೋ ಆಯ್ಕೆ ಮಾಡಿದರು. ವೆಸ್ಟ್ ಇಂಡೀಸ್‌ಗೆ ಹೋಗಿದ್ದ ಕೆಲವು ಆಟಗಾರರಾದ, ಹರ್ಭಜನ್ ಸಿಂಘ್, ಇರ‍್ಫಾನ್ ಪಠಾನ್, ಆರ್. ಪಿ. ಸಿಂಘ್, ವಿರೇಂದ್ರ ಸೆಹವಾಗ್ ಮುಂತಾದವರನ್ನು ನೇರವಾಗಿ ದಕ್ಷಿಣ ಆಫ್ರಿಕಾಗೆ ಕಳುಹಿಸಿ, ಭಾರತದಿಂದ ರಾಬಿನ್ ಉತಪ್ಪ, ರೋಹಿತ್ ಶರ್ಮ, ಯೂಸಫ್ ಪಠಾನ್ ಅವರನ್ನ ದಕ್ಷಿಣ ಆಫ್ರಿಕಾಗೆ ತೆರಳಲು ಆಯ್ಕೆ ಮಾಡಿದರು. ಇವರ ನಾಯಕತ್ವ ಮಹೇಂದ್ರ ಸಿಂಘ್ ಧೋನಿಗೆ ವಹಿಸಿತು.

ಧೋನಿ ಭರತದ ನಾಯಕತ್ವವನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರೆಂದರೆ, ಅವರ ನಾಯಕತ್ವದಿಂದಲೇ ಐಸಿಸಿ ಟೂರ್ನಮೆಂಟನ್ನು ಗೆಲ್ಲಲು ಶುರುಮಾಡಿದೆವು. ಕೊನೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನೇ ಆಡದ ದಿಢೀರ್ ಎಂದು ರಚಿಸಲ್ಪಟ್ಟ ತಂಡ ದಕ್ಷಿಣ ಆಫ್ರಿಕದಲ್ಲಿ ಒಟ್ಟಾಗಿ ಸೇರಿದರು. ಅದೂ ಚೊಚ್ಚಲ ಟಿ20 ವಿಶ್ವ ಕಪ್ ಪಂದ್ಯವನ್ನು ಆಡಲು ಬಂದಿಳಿದರು!

ನಮ್ಮ ಮೊದಲ ಪಂದ್ಯ ನಮ್ಮ ನೆರ ರಾಷ್ಟ್ರದ ಪಾಕಿಸ್ತಾನ ವಿರುದ್ಧ ಆಡುವುದರಿಂದ ಶುರುವಾಯಿತು. ಅವರ ಜೊತೆ ಯಾವುದೇ ಪಂದ್ಯವಾಗಲಿ, ಅದು ಹಣಾಹಣಿಯಿಂದಲೇ ಶುರುವಾಗುತ್ತೆ. ಆ ಪಂದ್ಯಗಳಲ್ಲಿ ಆಟಗಾರರಲ್ಲಿ ಮೂಡಿ ಬರುವ ಛಲ, ಆತ್ಮ ವಿಶ್ವಾಸ, ಧೈರ್ಯ, ಸ್ಥೈರ್ಯ, ಕೆಚ್ಚೆದೆ, ಪ್ರೇಕ್ಷಕರಲ್ಲಿಯೂ ಬಹಳ ಸಲ ಹರಿಯುತ್ತೆ. ಮೈದಾನದಲ್ಲಿ ಎರಡು ಪಕ್ಷದ ಪ್ರೇಕ್ಷಕರ ಉತ್ಸಾಹ ಎಲ್ಲೆ ಮೀರಿ ಎಲ್ಲಿ ಹೊಡೆದಾಟಕ್ಕೆ ಶುರುವಾಗುತ್ತೋ ಎಂಬ ಭಯ ಎಲ್ಲೆಲ್ಲೂ ಆವರಿಸುತ್ತೆ, ಕೆಲವು ಸಲ.

ಮೊದಲನೆಯ ಪಂದ್ಯವೇ ಎಷ್ಟು ರೋಮಾಂಚನಕಾರಿಯಾಗಿತ್ತೆಂದರೆ, ಎರಡು ತಂಡಗಳೂ ಕೊನೆಯ ಬಾಲಿಗೆ ಒಂದೇ ಸ್ಕೋರ್ ಹೊಡೆದಿದ್ದವು! ಟೈ ಆಗಿತ್ತು.

ಈಗ ವಿಶ್ವದಲ್ಲೇ ಅತ್ಯಂತ ರನ್ನು ಗಳಿಸಿ ಹೆಸರುವಾಸಿಯಾದ ಬಾಬರ್ ವಿಕೆಟನ್ನು ಬೀಳಿಸಿ ಭಾರತಕ್ಕೆ ಒಳ್ಳೆ ಶುಭಾರಂಭವಾಯಿತು. ಎರಡನೇ ಆಟಗಾರನಾದ ರಿಝ್ವಾನ್‌ರ ವಿಕೆಟನ್ನೂ ಅರ್ಷದ್ ಅವರೇ ಬೀಳಿಸಿದರು.

ಆಗಿನ ದಿನಗಳಲ್ಲಿ ‘ಸೂಪರ್ ಓವರ್’ ಬೇರೆ ರೀತಿಯಲ್ಲಿ ಆಡಿ ಯಾರು ಗೆದ್ದರೆಂದು ತೀರ್ಮಾನ ಮಾಡುತ್ತಿದ್ದರು. ಪ್ರತಿ ತಂಡದಿಂದ ಕೆಲವು ಆಟಗಾರರು ಚೆಂಡನ್ನು ಬೋಲಿಂಗ್ ಮಾಡಿ ವಿಕೆಟನ್ನು ಉರುಳಿಸಲು ಪ್ರಯತ್ನ ಮಾಡಬೇಕು. ಯಾವ ತಂಡ ಅಧಿಕ ವಿಕೆಟನ್ನು ಉರುಳಿಸುವುದೋ ಅದನ್ನು ವಿಜಯಿಯೆಂದು ಘೋಷಿಸುತ್ತಿದ್ದರು. ಪಾಕೀಸ್ತಾನದ ಬೋಲರ್‌ಗಳು ಮಾಡಲಾಗದ ಕೆಲಸವನ್ನು ನಮ್ಮ ಕೆಲವು ಬ್ಯಾಟ್ಸ್‌ಮನ್ನುಗಳು ಮಾಡಿ ಭಾರತಕ್ಕೆ ವಿಜಯವನ್ನು ತಂದರು!

ಇದಾದ ಬಳಿಕ ಪಂದ್ಯಾವಳಿಗಳು ವಿವಿಧ ರೂಪ ತಾಳಿ 15 ದಿನವಾದಮೇಲೆ ಮತ್ತೆ ಭಾರತ ಮತ್ತು ಪಾಕಿಸ್ತಾನ ಫೈನಲ್ ಆಡಲು ಜೊಬರ್ಗಗೆ ಬಂದವು. ನಮಗೂ ನಮ್ಮ ಪಕ್ಕದ ರಾಷ್ಟ್ರಕ್ಕೆ ಜನುಮಜನುಮದ ಬಾಂಧವ್ಯ ಇದೆ, ಇದ್ದೇ ಇರುತ್ತೆ ಅಂತ ಎಷ್ಟೋಸಲ ಅನ್ನಿಸುತ್ತೆ.

ಜೋಬರ್ಗ್‌ನಲ್ಲಿ ಆಡಿದ ಫೈನಲ್ ಪಂದ್ಯದ ಆಟದ ಪ್ರಭಾವ ಎಷ್ಟರಮಟ್ಟಿಗೆ ಹರಡಿತೆಂದರೆ ಮುಂದೆ ಕ್ರಿಕೆಟ್ಟಿನ ಆಟವನ್ನೇ ತಲೆ ಬುರುಡೆ ತಳಕಪಳಕವಾಗಿ ಮಾಡಿತು. ಕ್ರಿಕೆಟ್ ಆಟದ ಎಲ್ಲಾ ವಿಧದಲ್ಲೂ ಅದರಲ್ಲೂ ಆರ್ಥಿಕ ಸ್ಥಿತಿಯಲ್ಲಿ ಬಹಳ ಬದಲಾವಣೆಯನ್ನು ತಂದಿತು.

ಮೊದಲು ಆ ಪಂದ್ಯ ಹೇಗಾಯಿತೆಂದು ನೋಡೋಣ.

ಮೊದಲು ಬ್ಯಾಟಿಂಗ್ ಆಡಿದ ಭಾರತ 20 ಓವರ್‌ಗಳಲ್ಲಿ 158 ರನ್ ಗಳಿಸಿತು. ಗೌತಮ್ ಗಂಭೀರ್ 75 ರನ್ ಗಳಿಸಿ ಭಾರತದ ತಂಡದ ಸ್ಕೋರನ್ನು ಮಧ್ಯಮ ಸ್ಥಿತಿಗೆ ತಂದರು. ಈಗಿನ ತಂಡದ ನಾಯಕ ರೋಹಿತ್ ಶರ್ಮ 30 ರನ್ ಗಳಿಸಿದರು. ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್ ಬಹಳ ಚೆನ್ನಾಗಿ ಆಡಿ ಪಾಕಿಸ್ತಾನವನ್ನು ಗೆಲುವಿನ ಹತ್ತಿರಕ್ಕೆ ತಂದರು. ಅವರ ಬಿರಿಸಿನ ಹೊಡೆತಕ್ಕೆ ಭಾರತದ ಬೋಲರ್‌ಗಳು ತತ್ತರಿಸಿ ಹೋದರು. ಆದರೂ ಮಧ್ಯೆ ಮಧ್ಯೆ ವಿಕೆಟ್‌ಗಳನ್ನು ಬೀಳಿಸುತ್ತಾ ಹೋಯಿತು ಭಾರತ. ಕೊನೆಗೆ ಪಾಕಿಸ್ತಾನದ ಸ್ಕೋರ್ 152ಕ್ಕೆ ಬಂತು, ಅದರ 9 ವಿಕೆಟ್‌ಗಳನ್ನು ಭಾರತ ಬೀಳಿಸಿತ್ತು. ನಾಯಕ ಧೋಣಿ ಕೊನೆಯ ಓವರ್ ಅನ್ನು ಬೋಲ್ ಮಾಡುವುದಕ್ಕೆ ಜೊಗಿಂದರ್ ಸಿಂಘ್‌ಗೆ ಕೊಟ್ಟರು.

ನುರಿತ ಆಟಗಾರ ಹರ್ಭಜನ್ ಸಿಂಘ್ ಇದ್ದರೂ ಧೋನಿ ಬಾಲನ್ನು ಹೊಚ್ಚಹೊಸಬ ಜೊಗಿಂದರ್ ಸಿಂಘ್ ಅವರಿಗೆ ಕೊಟ್ಟಿದ್ದು ಒಂದು ಆಶ್ಚರ್ಯಕರ ನಿಲುವು. ಕೊನೆಗೆ ಭಾರತವನ್ನು ಸೋಲಿಸಲು ಕೇವಲ ಒಂದು ಸಿಕ್ಸರ್ ಸಾಕಾಗಿತ್ತು. ಇನ್ನೂ ನಾಲ್ಕು ಬಾಲ್ ಗಳಿದ್ದವು. ಮೂರನೇ ಬಾಲನ್ನು ಮಿಸ್ಭ ಅದನ್ನು ವಿಕೆಟ್ಟಿನ ಹಿಂದೆ ‘ಸ್ಕೂಪ್’ ಮಾಡಿದರು. ಅದು ಬೌಂಡರಿ ತಲುಪುವುದು ಖಡಾಖಂಡಿತವಾಗಿತ್ತು. ಅದರಲ್ಲಿ ಸಂದೇಹವೇ ಇರಲಿಲ್ಲ. ಅಷ್ಟರಲ್ಲಿ ಎಲ್ಲಿಂದಲೋ ಓಡಿಬಂದ ಶ್ರೀಶಾಂತ್ ಆ ಕ್ಯಾಚನ್ನು ಹಿಡಿದು ಭಾರತಕ್ಕೆ ಜಯಭೇರಿಯನ್ನು ತಂದರು!

ಹೀಗೆ ಭಾರತ ಮೊಟ್ಟ ಮೊದಲ ಟಿ20 ವಿಶ್ವ ಕಪ್ ಗೆದ್ದು ದಾಖಲೆ ಮಾಡಿತು.

*****

ಈಗ ಮೊಹಾಲಿಯಲ್ಲಿ ನಡೆಯುತ್ತಿರುವ ವಿಶ್ವ ಕಪ್ಪಿನಿಂದ ಪಾಕಿಸ್ಥಾನ ಹೊರಬೀಳುವ ಸಾಧ್ಯತೆ ಬಂದಿತ್ತು. ಆದರೆ ದಕ್ಷಿಣ ಆಫ್ರಿಕ ತನ್ನ ಕೊನೆಯ ಪಂದ್ಯದಲ್ಲಿ ನೆದರ‍್ಲೆಂಡ್ಸ್ ವಿರುದ್ಧ ಅನೀರಿಕ್ಷಿತವಾಗಿ ಸೋತು ಪಾಕಿಸ್ತಾನಕ್ಕೆ ಪುನರ್ಜನ್ಮ ಸಿಕ್ಕಿ ಸೆಮಿ -ಫೈನಲ್ಸ್ ಗೆ ಬರಲು ಸಾಧ್ಯವಾಯಿತು. ಭಾರತ ಆಗಲೇ ಸೆಮಿ-ಫೈನಲ್ಸ್‌ಗೆ ಬಂದಿತ್ತು.

ಮೊದಲ ಸೆಮಿ-ಫೈನಲ್ಸ್‌ನಲ್ಲಿ ಪಾಕಿಸ್ತಾನ ಒಳ್ಳೆ ಪ್ರದರ್ಶನ ನೀಡಿ ನ್ಯೂಜಿಲೆಂಡನ್ನು ಸೋಲಿಸಿ ಫೈನಲ್ಸನ್ನು ಪ್ರವೇಶಿಸಿತು. ಭಾರತ-ಇಂಗ್ಲೆಂಡ್ ಸೆಮಿಫೈನಲ್‌ನ ಪಂದ್ಯದಲ್ಲಿ ಭಾರತದ ಆಟ ಇದ್ದಕ್ಕಿದ್ದಂತೆ ಅನೀರಿಕ್ಷಿತವಾಗಿ ಕಳಪೆ ಮಟ್ಟದಲ್ಲಿ ಆಡಿ, ಭಾರತ ಸೋತು, ಇಂಗ್ಲೆಂಡ್ ಫೈನಲ್ಸ್ ತಲುಪಿತು. ಅಂದು ಬ್ಯಾಟಿಂಗ್ ಮತ್ತು ಬೋಲಿಂಗ್‌ನಲ್ಲಿ ತೀರಾ ಸಾಮಾನ್ಯವಾಗಿ ಆಡಿದ ಭಾರತ ಕೇವಲ 168 ರನ್‌ಗೆ ಔಟಾಗಿ, ಇಂಗ್ಲೆಂಡ್ ಯಾರೂ ಔಟಾಗದೆ ಆ ರನ್ನುಗಳನ್ನು ಹೇಲ್ಸ್ ಮತ್ತು ನಾಯಕ ಬಟ್ಲರ್ ಅವರ ಬಿರುಸಿನ ಬ್ಯಾಟಿಂಗ್‌ನಿಂದ 16 ನೇ ಓವರ್‌ನಲ್ಲೇ 170 ರನ್ ಹೊಡೆದು ಫೈನಲ್ಸನ್ನು ಪ್ರವೇಶಿಸಿದರು. ಭಾರತದ ತಂಡಕ್ಕೆ ಯಾರನ್ನೂ ಔಟ್ ಮಾಡುವುದಕ್ಕೆ ಆಗಲಿಲ್ಲ. ಇದೊಂದು ದೊಡ್ಡ ಆಘಾತವೇ ಸರಿ.

ನೋಡುತ್ತಿದ್ದ ಸಹಸ್ರಾರು ಪ್ರೇಕ್ಷಕರಿಗೆ ಮತ್ತು ಲಕ್ಷಾಂತರ ಟಿವಿ ದಕ್ಷಕರಿಗೆ ಇದೊಂದು ದಿಗ್ಭ್ರಮೆಯಾಗಿರಬಹುದು. ಅದರಲ್ಲಿ ಆಶ್ಚರ್ಯವೇನಿಲ್ಲ. ಲೀಗ್ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ ಭಾರತ, ಭಾರತ ಹೀಗೆ ವಿಶ್ವ ಕಪ್‌ನಿಂದ ಹೊರಗಾಗುತ್ತಾರೆ ಎಂದು ಯಾರಿಗೂ ಅನ್ನಿಸಿರಲಿಲ್ಲ. ಒಂದೆರೆಡು ವಿಷಯಗಳು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಪ್ರೇಕ್ಷಕರು ಇದನ್ನು ಎಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದರೆ, ನಮ್ಮ ಆಟಗಾರರು ಗೆದ್ದರೆ, ಅವರನ್ನು ಅಟ್ಟಕ್ಕೆ ಏರಿಸುತ್ತೇವೆ; ಹಾಗೆಯೇ ಸೋತರೆ ಅವರನ್ನು ಪಾತಾಳಕ್ಕೆ ಇಳಿಸಿ ಬಿಡುತ್ತೇವೆ! ಇದೊಂದು ದೌರ್ಭಾಗ್ಯವೇ ಸರಿ. ನಾವು ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಬೇಕು. ಯಾರಿಗೂ ಸೋಲುವುದಕ್ಕೆ ಇಷ್ಟವಿರುವುದಿಲ್ಲ. ಪಂದ್ಯದಲ್ಲಿ ಯಾರಾದರೂ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ಇದು ಪಂದ್ಯದ ನಿಯಮಾವಳಿ. ನಾವೇ ಯಾವಾಗಲೂ ಗೆಲ್ಲಬೇಕು ಎಂದರೆ ಹೇಗೆ?

ಕೆಲವೇ ದಿನಗಳ ಹಿಂದೆ ಭಾರತ ಪಾಕಿಸ್ತಾನವನ್ನು ಹಣಾಹಣಿ ಪಂದ್ಯದಲ್ಲಿ ಸೋಲಿಸಿದಾಗ ದೇಶದಲ್ಲಿ ಎಲ್ಲೆಲ್ಲೂ ಸಂತೋಷದ ಲಹರಿ ಹರಡಿತು. ನಮ್ಮ ಆಟಗಾರರ ಮೇಲೆ ಅಭಿಮಾನ ಉಕ್ಕಿ ಬಂತು. ಈಗ ಸೋತಾಗ ಅವರನ್ನು ಇದ್ದಕ್ಕಿದ್ದಂತೆ ಹೀರೊ ಪದವಿಯಿಂದ ವಿಲನ್‌ಗೆ ಇಳಿಸುತ್ತೇವೆ! ಸೋಲು ಗೆಲುವು ಎರಡನ್ನೂ ಸಮಭಾವದಿಂದ ನೋಡುವುದನ್ನು ನಾವು ಕಲಿಯಬೇಕು. ಇದು ಬಹಳ ಮುಖ್ಯ.

ಮತ್ತೊಂದು ವಿಷಯ. ಇದು ಆಟಕ್ಕೆ ಸಂಬಂಧ ಪಟ್ಟಿದ್ದು. ಭಾರತ ಯಾವಾಗ ಲೀಗ್ ಪಂದ್ಯವಾಡುತ್ತೋ ಅಲ್ಲಿಯವರೆಗೆ ಎಲ್ಲಾ ಪಂದ್ಯಗಳಲ್ಲಿ ಚೆನ್ನಾಗಿ ಆಡಿ, ಬಹಳ ಸರ್ತಿ ಪಟ್ಟಿಯಲ್ಲಿ ನಾವೇ ಮೊದಲಿಗರಾಗಿ ಬರ್ತಿವಿ. ಇಲ್ಲಿಯ ತನಕ ಆಡಿದ ಬಿಳಿಯ ಬಾಲ್ (ಒಡಿಐ ಮತ್ತು ಟಿ20) ಪಂದ್ಯಗಳಲ್ಲಿ ಶೇಕಡ 90 ಸರ್ತಿ ನಾವೆ ಮೊದಲನೇಯವರಾಗಿದ್ದೇವೆ. ಅಲ್ಲಿಯ ತನಕ ಬ್ಯಾಟಿಂಗ್ ಮತ್ತು ಬೋಲಿಂಗಿನಲ್ಲಿ ಶ್ರೇಷ್ಟ ಪ್ರದರ್ಶನ ನೀಡ್ತಿವಿ. ಆದರೆ ಯಾವಾಗ ಸೆಮಿ-ಫೈನಲ್ಸ್ ಬರುತ್ತೋ ಆವಾಗ, ನಮ್ಮ ಆಟ ಕುಸಿದು ಬೀಳುತ್ತೆ. ನಾವು ಧೈರ್ಯವನ್ನು ಕಳೆದುಕೊಂಡು ಹೆದರಿ ಆಡುವುದಕ್ಕೆ ಶುರು ಮಾಡ್ತೀವಿ. 1983, 2007 ಮತ್ತು 2011 ಗಳನ್ನು ಬಿಟ್ಟರೆ ಸುಮಾರು ಎಲ್ಲಾ ಟೂರ್ನಮೆಂಟಿನಲ್ಲಿ ನಾವು ಸೋಲುವುದಕ್ಕೆ ಇದು ಪ್ರಮುಖ ಕಾರಣವೆಂದು ಹೇಳಬಹುದು. ಇದು ಹೇಗೆಂದರೆ ಒಬ್ಬ ವಿದ್ಯಾರ್ಥಿ ವಾರದ ಟೆಸ್ಟ್‌ಗಳು, ಕ್ಲಾಸ್ ಪರಿಕ್ಷೆಗಳಲ್ಲಿ ರ‍್ಯಾಂಕ್ ಪಡೆದು, ಫೈನಲ್ ಪರೀಕ್ಷೆಯಲ್ಲಿ, ಹಾಲ್ ಟಿಕೆಟ್ ಇಟ್ಟುಕೊಂಡು, ಗಾಬರಿಯಿಂದ ಹೆದರಿ ಫೈಲಾದಂಗೆ ಆಗುತ್ತೆ!

ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಕೋಚ್ ಮತ್ತು ನಾಯಕರು ಮುಂದಿನ ದಿನಗಳಲ್ಲಿ ಇದಕ್ಕೆ ಏನು ಪರಿಹಾರವೆಂದು ಹುಡುಕಿ, ಅದನ್ನು ಕಾರ್ಯ ರೂಪಕ್ಕೆ ತರಬೇಕು. ಇದು ಒಂದು ಮನೋವೈಜ್ಞಾನಿಕ ಸಮಸ್ಯೆ ಇರಬಹುದು. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡರೆ ಭಾರತ ಮುಂದೆ ಟೂರ್ನಮೆಂಟುಗಳನ್ನು ಗೆಲ್ಲಬಹುದು. ಆಗ ನಮ್ಮ ನಿಜವಾದ ಶೌರ್ಯ ಹೊರಗೆ ಬರಲು ಸಾಧ್ಯವಾಗುತ್ತೆ ಎಂದು ಆಶಿಸೋಣ.

ಭಾನುವಾರ ಆಡಿದ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೆವಲ 137 ರನ್ ಗಳಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಮಾಡಲು ಆಯ್ಕೆ ಮಾಡಿ ಬಹಳ ಚೆನ್ನಾಗಿ ಬೋಲ್ ಮಾಡಿ ಪಾಕಿಸ್ತಾನಕ್ಕೆ 20 ಓವರ್‌ಗಳಲ್ಲಿ ಕೇವಲ 137 ರನ್ ಮಾಡಲಾಯಿತು. ರನ್ ಕಡಿಮೆ ಹೊಡೆದಿದ್ದರೂ ಪಾಕಿಸ್ತಾನ ಒಳ್ಳೆಯ ಬೊಲಿಂಗ್ ಮಾಡಿ ಇಂಗ್ಲೆಂಡಿಗೆ ಅಷ್ಟು ಸುಲಭವಾಗಿ ರನ್ ಹೊಡೆಯಲು ಬಿಡಲಿಲ್ಲ. ಬೆನ್ ಸ್ಟೋಕ್ಸ್ 50 ರನ್ ಹೊಡೆದು ಹುಶಾರಾಗಿ ಆಡಿ ಇಂಗ್ಲೆಂಡ್ ತಂಡಕ್ಕೆ ಜಯಭೇರಿ ತಂದುಕೊಟ್ಟರು. ಇಂಗ್ಲೆಂಡು ಇದು ಎರಡನೇ ಬಾರಿ ವಿಶ್ವ ಕಪ್ ಗೆದ್ದಿರುವುದು. ಪಾಕಿಸ್ತಾನ ಒಂದು ಬಾರಿ ಟ 20 ಕಪ್ ಗೆದ್ದಿದೆ.

ಒಟ್ಟಿನಲ್ಲಿ ಈ ವರ್ಷದ ವಿಶ್ವ ಕಪ್‌ನಲ್ಲಿ ಹಲವು ದಾಖಲೆಗಳಾಗಿವೆ. ಜಿಂಬಾಬ್ವೆ ಪಾಕಿಸ್ತಾನದ ವಿರುಧ್ದ ಗೆದ್ದಿತು. ಐರ್ಲೆಂಡ್‌ ಇಂಗ್ಲೆಂಡಿನ ಮೇಲೆ ಗೆದ್ದರೆ, ನೆದರ‍್ಲೆಂಡ್ಸ್ ದಕ್ಷಿಣ ಆಫ್ರಿಕಾದ ಮೇಲೆ ಗೆದ್ದು ಅವರನ್ನು ಟೂರ್ನಮೆಂಟಿನಿಂದ ಹೊರಕ್ಕೆ ಹಾಕಿತು! ಆದ್ದರಿಂದಲೇ ಪಾಕಿಸ್ತಾನಕ್ಕೆ ಪುನರ್ಜನ್ಮ ಸಿಕ್ಕು ಸೆಮಿಫೈನಲ್ಸ್‌ಗೆ ಬರಲು ಸಹಾಯವಾಯಿತು.

ಭಾರತ ತನ್ನ ಸೋಲನ್ನು ಮರೆತು ಮುಂದೆ ಬರುವ ಐಸಿಸಿ ಟೂರ್ನಮೆಂಟಿಗೆ ಸಿದ್ಧರಾಗಬೇಕು. ಗೆದ್ದು ಬರುವುದಕ್ಕೆ ಎಲ್ಲಾ ರೀತಿಯ ಪ್ರಯತ್ನ ಈಗಿನಿಂದಲೇ ಶುರುಮಾಡಬೇಕು.