ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ. ಇದರ ತಳಹದಿಯೂ ನಕ್ಷತ್ರಾಕಾರವಾಗಿದ್ದು ಕೆಳಪಟ್ಟಿಕೆಗಳನ್ನು ಒಳಹೊರಗೆ ಚಾಚಿಕೊಂಡಂತೆ ರೂಪಿಸಲಾಗಿದೆ. ಪಟ್ಟಿಕೆಗಳಿಗೆ ಹೊಂದಿಕೊಂಡಂತೆ ಅಲ್ಲಲ್ಲಿ ಸಿಂಹಲಲಾಟವಿರುವ ಕಿರುಕಂಬಗಳು, ಅದಕ್ಕೂ ಮೇಲಿನ ಪಟ್ಟಿಕೆಗಳಲ್ಲಿ ಯಾಳಿ, ಹೂಬಳ್ಳಿಯ ವಿನ್ಯಾಸ ಹಾಗೂ ಆನೆಗಳ ಸಾಲು ಇರುವಂತೆ ಚಿತ್ರಿಸಿದ್ದರೂ ಅನುಕ್ರಮ ಅಲ್ಲಲ್ಲಿ ಭಗ್ನಗೊಂಡಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೆರಡನೆಯ ಕಂತು

 

ಪುರಾತನಕಾಲದಲ್ಲಿ ಧರ್ಮವೊಳಲು ಎಂಬ ಊರು. ಇಲ್ಲಿ ಅಜ್ಜಿಮಯ್ಯನೆಂಬ ಶಿವಭಕ್ತನಿದ್ದನು. ಭಕ್ತಿಪಾರಮ್ಯವನ್ನು ಮೆರೆದ ಈತನು ಕುಲಪರ್ವತವನ್ನೇ ತಂದು ನಂದಿಯ ಆಕಾರದಲ್ಲಿ ನಿರ್ಮಿಸಿದನಂತೆ. ಈ ನಂದಿಯಿದ್ದ ಗುಡಿಯು ಅಜ್ಜೇಶ್ವರನೆಂಬ ಹೆಸರು ಪಡೆಯಿತು. ಆಗಿನ ಧರ್ಮವೊಳಲು ಅಪಭ್ರಂಶವಾಗಿ ಡಂಬಳ ಎಂಬ ಹೆಸರಿನಿಂದ ಇಂದಿನ ಗದಗ ಜಿಲ್ಲೆಯ ಗ್ರಾಮಗಳಲ್ಲೊಂದಾಗಿದೆ. ನಂದಿಯ ಎದುರಿಗೆ ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಶಿವದೇಗುಲವು ದೊಡ್ಡಬಸವೇಶ್ವರ, ದೊಡ್ಡಬಸಪ್ಪನ ಗುಡಿಯೆಂಬ ಹೆಸರಿನಿಂದ ಪರಿಚಿತವಾಗಿದೆ.

ಮುಂಡರಗಿ ತಾಲ್ಲೂಕಿನಲ್ಲಿರುವ ಡಂಬಳ ಗ್ರಾಮವು ಜಿಲ್ಲಾಕೇಂದ್ರವಾದ ಗದಗಿನಿಂದ ಇಪ್ಪತ್ತು ಕಿ.ಮೀ. ದೂರದಲ್ಲಿದೆ. ಡಂಬಳದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಗ್ರಾಮ ತಲುಪುವ ಮುನ್ನವೇ ಎಡಬಲಗಳಲ್ಲಿ ಪುರಾತನ ದೇಗುಲಗಳ ದರ್ಶನವಾಗುತ್ತದೆ. ಅಂದವಾದ ಹುಲ್ಲುಹಾಸಿನ ನಡುವೆ ದೊಡ್ಡಬಸವೇಶ್ವರ ಗುಡಿಯ ನಕ್ಷತ್ರಾಕಾರದ ನಿರ್ಮಿತಿ ಮನಸೂರೆಗೊಳ್ಳುತ್ತದೆ. ಕಲ್ಯಾಣದ ಚಾಲುಕ್ಯ ಚಕ್ರವರ್ತಿ ನಾಲ್ಕನೆಯ ಸೋಮೇಶ್ವರನ ಕಾಲದಲ್ಲಿ (1184) ಕಟ್ಟಲಾದ ದೇವಾಲಯವಿದು. ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಈ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ.

ಇದರ ತಳಹದಿಯೂ ನಕ್ಷತ್ರಾಕಾರವಾಗಿದ್ದು ಕೆಳಪಟ್ಟಿಕೆಗಳನ್ನು ಒಳಹೊರಗೆ ಚಾಚಿಕೊಂಡಂತೆ ರೂಪಿಸಲಾಗಿದೆ. ಪಟ್ಟಿಕೆಗಳಿಗೆ ಹೊಂದಿಕೊಂಡಂತೆ ಅಲ್ಲಲ್ಲಿ ಸಿಂಹಲಲಾಟವಿರುವ ಕಿರುಕಂಬಗಳು, ಅದಕ್ಕೂ ಮೇಲಿನ ಪಟ್ಟಿಕೆಗಳಲ್ಲಿ ಯಾಳಿ, ಹೂಬಳ್ಳಿಯ ವಿನ್ಯಾಸ ಹಾಗೂ ಆನೆಗಳ ಸಾಲು ಇರುವಂತೆ ಚಿತ್ರಿಸಿದ್ದರೂ ಈ ಅನುಕ್ರಮ ಅಲ್ಲಲ್ಲಿ ಭಗ್ನಗೊಂಡಿದೆ. ಪಟ್ಟಿಕೆಗಳ ಮೇಲಕ್ಕೆ ಯಥಾಪ್ರಕಾರ ನಕ್ಷತ್ರ ವಿನ್ಯಾಸಕ್ಕೆ ಹೊಂದಿಕೊಂಡ ಸಪಾಟು ಕಂಬಗಳು, ನಡುನಡುವೆ ಸಾಲಂಕೃತ ಗೋಪುರಗಳು, ಹೂಬಳ್ಳಿಗಳ ವಿನ್ಯಾಸವಿದ್ದು ಎಲ್ಲೂ ಏಕತಾನವೆನಿಸದಂತೆ ವೈವಿಧ್ಯವನ್ನು ಮೆರೆಯಲಾಗಿದೆ. ತೆರವುಗಳಲ್ಲಿ ಗಗನದತ್ತ ಹಾರುತ್ತಿರುವ ಗಂಧರ್ವಯುಗಳದ ಶಿಲ್ಪಗಳು ಕಂಡುಬರುತ್ತವೆ. ಶಿಖರದ ಎಲ್ಲ ಸ್ತರಗಳಲ್ಲೂ ಸಿಂಹಮುಖಗಳು, ಯಕ್ಷರು, ಏಕರೂಪದ ಶಿಲಾವಿನ್ಯಾಸಗಳು ತುಂಬಿ ಒಟ್ಟಂದವನ್ನು ಹೆಚ್ಚಿಸಿವೆ.

ಗುಡಿಯನ್ನು ಪ್ರದಕ್ಷಿಣೆಮಾಡುತ್ತ ಹಿಂಬದಿಗೆ ಬಂದರೆ ಮಂಟಪವೊಂದರಲ್ಲಿ ಬೃಹದಾಕಾರದ ನಂದಿ ಎದುರಾಗುತ್ತದೆ. ಗುಡಿಯೊಳಗಿನ ಶಿವಲಿಂಗಕ್ಕೆ ಅಭಿಮುಖವಾಗಿರುವ ಸಾಲಂಕೃತ ನಂದಿಯ ವಿಗ್ರಹವಿದು. ನಂದಿಯ ಎದುರಿಗೆ ದೇವಾಲಯದ ಪ್ರವೇಶ ಮಂಟಪಕ್ಕೆ ಎರಡು ಕಡೆಗಳಿಂದ ಸೋಪಾನಗಳಿವೆ. ಸುಂದರವಾದ ಕೆತ್ತನೆಯಿರುವ ಕಂಬಗಳೂ ಇಬ್ಬದಿಯ ಜಗುಲಿಯ ಅಂಚಿನ ಆನೆಗಳ ಸಾಲೂ ಮನೋಹರವಾಗಿವೆ. ತಲೆಯೆತ್ತಿ ಶಿಖರದ ಕಡೆಗೆ ಕಣ್ಣುಹಾಯಿಸಿದರೆ ಶುಕನಾಸದಲ್ಲೊಂದು ಭವ್ಯವಾದ ಕೀರ್ತಿಮುಖ. ಅದರಿಂದ ಇಕ್ಕಡೆಗೆ ಹೊರಹೊರಟ ವ್ಯಾಳಗಳು.

ಏಳುಪಟ್ಟಿಕೆಗಳುಳ್ಳ ಬಾಗಿಲ ಚೌಕಟ್ಟು ನಿಮ್ಮನ್ನು ಸ್ವಾಗತಿಸುತ್ತದೆ. ಕೆಳಭಾಗದಲ್ಲಿ ಎರಡೂಕಡೆ ಚಾಮರಧಾರಿಣಿಯರಿದ್ದು ಪಟ್ಟಿಕೆಗಳಲ್ಲಿ ವಜ್ರಾಕೃತಿ, ಸ್ತಂಭಗಳಲ್ಲದೆ ನಾಲ್ಕುಸಾಲುಗಳ ಹೂಬಳ್ಳಿಗಳೊಳಗೆ ನೃತ್ಯಗಾರರ ಉಬ್ಬುಶಿಲ್ಪಗಳನ್ನು ರಚಿಸಲಾಗಿದೆ. ದಾರವಂದದ ಮೇಲುಭಾಗದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ನವರಂಗದಲ್ಲಿ ತಿರುಗಣೆಯ ಕಂಬಗಳೂ ಮಕರತೋರಣವೂ ಸೊಗಸಾದ ಕೆತ್ತನೆಗಳಿಂದ ಶೋಭಿಸುತ್ತವೆ. ಗರ್ಭಗುಡಿಯ ಬಾಗಿಲವಾಡವೂ ಮೊದಲಿನ ಚೌಕಟ್ಟಿನಂತೆಯೇ ಸುಂದರವಾಗಿದ್ದು ಬೆರಗುಮೂಡಿಸುವಂಥದ್ದು. ಗರ್ಭಗೃಹದೊಳಗಿನ ಶಿವಲಿಂಗವೂ ನಕ್ಷತ್ರಾಕಾರದ ಪಾಣಿಪೀಠದ ಮೇಲಿರುವುದೊಂದು ವೈಶಿಷ್ಟ್ಯ.

ದೊಡ್ಡಬಸಪ್ಪ ಗುಡಿಯ ಹೊರಗೆ ರಸ್ತೆಯ ಇನ್ನೊಂದು ಬದಿಯಲ್ಲಿ ಸೋಮೇಶ್ವರ ಗುಡಿಯಿದೆ. ಡಬ್ಬುಗಲ್ಲುಗುಡಿಯೆಂದು ಸ್ಥಳೀಯರಿಂದ ಹೆಸರುಪಡೆದ ಈ ದೇಗುಲಕ್ಕೆ ಶಾಸನಗಳಲ್ಲಿ ಮಾಧವೇಶ್ವರನೆಂಬ ಹೆಸರು. ದೇಗುಲದ ಮುಂಭಾಗದ ಮಂಟಪದ ಸೂರನ್ನು ಇಳಿಜಾರಾಗಿ ಇರಿಸಿದ ದೊಡ್ಡ ಕಲ್ಲುಚಪ್ಪಡಿಗಳಿಂದ ಸಜ್ಜುಗೊಳಿಸಿದೆ. ತೆರೆದ ಮಂಟಪದ ಕಂಬಗಳ ಕೆತ್ತನೆಯ ವಿನ್ಯಾಸ ಒಂದಕ್ಕಿಂತ ಒಂದು ವಿಶಿಷ್ಟ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಇನ್ನು ಡಂಬಳ ಗ್ರಾಮದತ್ತ ಬಂದರೆ ಹಳೆಯ ಕೋಟೆಯ ಅವಶೇಷಗಳಿದ್ದು ಕೊಠಡಿಯೊಂದರಲ್ಲಿ ದೊಡ್ಡಗಣಪತಿಯ ವಿಗ್ರಹವೊಂದಿದೆ. ದೊಡ್ಡಬಸಪ್ಪ ದೇಗುಲವನ್ನು ಕಟ್ಟಿದ ಕಾಲದಲ್ಲೇ ಚಾಲುಕ್ಯ ಸೇನಾಧಿಪತಿ ತೇಜಿಮಯ್ಯನೆಂಬಾತನು ಕಟ್ಟಿಸಿದ ದೊಡ್ಡ ಕೆರೆಗೆ ಆಗ ಗೋಣ ಸಮುದ್ರವೆಂಬ ಹೆಸರಿತ್ತು. ವಿಶಾಲವಾದ ಈ ಕೆರೆಯನ್ನು ವಿಕ್ಟೋರಿಯಾ ರಾಣಿಯ ಆಳ್ವಿಕೆಯ ಕಾಲದಲ್ಲಿ (1886) ಅಭಿವೃದ್ಧಿಪಡಿಸಲಾಯಿತು. ಇದರ ಸನಿಹದಲ್ಲೇ ಇರುವ ಜಪದ ಬಾವಿ ಎಂಬ ಹೆಸರಿನ ಕೊಳ ಸೊಬಗಿನ ನಿರ್ಮಾಣವೇ ಸರಿ. ಕೊಳದ ಸುತ್ತ ಚಿಕ್ಕ ಕೋಷ್ಠಗಳಂತಹ ಮಂಟಪಗಳಿದ್ದು ಹನ್ನೆರಡನೆಯ ಶತಮಾನದ ಈ ಕೊಳವನ್ನು ಉತ್ತಮಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮೇಲ್ವಿಚಾರಣೆಗೊಳಪಟ್ಟಿರುವ ದೊಡ್ಡಬಸಪ್ಪ ದೇವಾಲಯಸಂಕೀರ್ಣವನ್ನೂ ಪರಿಸರವನ್ನೂ ಸಿಬ್ಬಂದಿಯವರು ಅಚ್ಚುಕಟ್ಟಾಗಿ ನಿರ್ವಹಿಸಿರುವ ಪರಿ ಶ್ಲಾಘನೀಯ.