ಅಕ್ಕಿ ಮೂಟೆಯನ್ನೆಲ್ಲಾ ದೋಣಿಗೇರಿಸಿ,ಇದಿನಬ್ಬ ನಚ್ಚಬೆಟ್ಟು ಬಳಿಯ ಊರಿಗೆ ಹೊರಡುವ ಮೂತಾಪನ ದೋಣಿಗೆ ಮೂತಮ್ಮನ ಸಹಾಯದಿಂದ ಏರಿದ. ದೋಣಿ ಫಾತಿಮಾರ ಗಂಡ ಇಸ್ಮಾಯಿಲರದ್ದೇ, ಅಂದರೆ ಶಾಮಣ್ಣ ಗೌಡರ ದೋಣಿಗೆ ಅವರೇ ಅಂಬಿಗ. ಆ ಬಳಿಕ ಇವರೆ ನೋಡಿಕೊಳ್ಳುತ್ತಿದ್ದುದರಿಂದ ಇವರದ್ದೇ ದೋಣಿಯಾಗಿ ಬಿಟ್ಟಿತ್ತು. ಸದ್ಯ ಮುಂಗೋಪಿ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದೆನಲ್ಲ ಎಂಬ ಖುಷಿ ಹಲೀಮಾರಿಗೆ. ಆದರೆ ಖುಷಿ ಬಹಳ ದಿನ ಉಳಿಯಲಿಲ್ಲ.
ಮುನವ್ವರ್ ಜೋಗಿಬೆಟ್ಟು  ಬರೆಯುವ ‘ಡರ್ಬನ್ ಇದಿನಬ್ಬ’ ಕಾದಂಬರಿಯ ಎರಡನೆಯ ಕಂತು

 

“ಅಲ್ಲ ಮೋನೆ ಏನಾಯ್ತು?”
ರಕ್ತ ಸಿಕ್ತ ಮಗನನ್ನು ಕಂಡ ಮಾತೃ ಹೃದಯ ಒಮ್ಮೆಲೆ ನೋವಿನಿಂದ ಚೀರಿತು.

“ಅಬ್ಬ ಹೊಡೆದದ್ದು” ಗದ್ಗದಿತನಾಗಿ ಇದಿನಬ್ಬ ಉತ್ತರಿಸಿದ.

“ಯಾಕೆ?” ಕಂಪಿಸಿದ ಸ್ವರದಲ್ಲಿ ಹಲೀಮಾ ಕೇಳಿದರು.

“ಉಮ್ಮಾ, ಗದ್ದೆ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು ನನಗೆ, ನಾನು ಹಕ್ಕಿ ಓಡಿಸಲು ಗದ್ದೆಗಿಳಿದಿದ್ದೆ, ಗದ್ದೆಯಲ್ಲೆಲ್ಲಾ ಕಾಲ್ಗುರುತಾಯಿತೆಂದು ಕೋಪಗೊಂಡು ಹೊಡೆದು ಮುಳ್ಳು ಪೊದೆಗೆ ನನ್ನ ಎಸೆದರು”
ಅರ್ಧಂಬರ್ಧ ಹೇಳಿ ಮುಗಿಸಿದ ಮಗ ಮತ್ತೆ ಅಳಹತ್ತಿದ.

ಎಷ್ಟಾದರೂ ಮಾತೃ ಹೃದಯ ತಾನೇ. ಭಯದಿಂದ ನಡುಗುತ್ತ ಮುಳ್ಳುಗಳ ಗಾಯದಿಂದ ಚಡಪಡಿಸುತ್ತಿದ್ದ ಮಗನನ್ನು ಎಬ್ಬಿಸಿ, ಕಾಯಿಸಿದ ಎಣ್ಣೆಹಚ್ಚಿ ಮುಳ್ಳುನ್ನೆಲ್ಲಾ ಕಿತ್ತು ತೆಗೆದರು. ಸ್ನಾನ ಮಾಡಿಸಿದರು. ಮನೆಗೆ ಮರಳುವ ಗಂಡ ಹುಡುಗನನ್ನು ಮತ್ತೆ ಕಂಡರೆ ಕೋಪ ನೆತ್ತಿಗೇರಿ ಇನ್ನೊಮ್ಮೆ ಬಾರಿಸದೆ ಬಿಡುವುದಿಲ್ಲವೆಂಬುದು ಹಲೀಮಾರಿಗೆ ಚೆನ್ನಾಗಿ ಗೊತ್ತಿತ್ತು.

“ಮಕ್ಕಳೇ, ನೀವು ನಿಜವಾಗಿಯೂ ಭಾಗ್ಯವಂತರು. ಆ ಕಾಲದ ಜನರ ಕೋಪ ಅಸಹನೆ ಬಗ್ಗೆ ಹೇಳಬೇಕಾಗಿಲ್ಲ . ನಮ್ಮ ಕಾಲದಲ್ಲೆಲ್ಲಾ ಕೋಪಾವೇಶಕ್ಕೆ ಬೀಳುತ್ತಿದ್ದ ಹೊಡೆತಕ್ಕೆ ಕಂಬಳದ ಎತ್ತಿಗೂ, ಮನೆಯವರಿಗೂ ಹೆಚ್ಚಿನ ಬದಲಾವಣೆಯಿರುತ್ತಿರಲಿಲ್ಲ ಗೊತ್ತಾ?” ಅಜ್ಜ ಕಥೆ ಹೇಳುವ ದಾಟಿಯಲ್ಲಿ ಪ್ರೀತಿ, ಕನಿಕರ ಉಕ್ಕುತ್ತಿತ್ತು. ಚಿಮಣಿ ದೀಪದಲ್ಲಿ ಹೊತ್ತಿಸಿ ಬಾಯಿಗಿಟ್ಟ ಬೀಡಿಯನ್ನು ಎಳೆಯುತ್ತಾ ಸಣ್ಣ ವಿರಾಮ ತೆಗೆದುಕೊಂಡರು. ಕಥೆ ನೆನಪಾಗಿ ಅಜ್ಜ ಮತ್ತೆ ಮುಂದುವರೆಸಿದರು.

ಮಗನ ಗಾಯಕ್ಕೆಲ್ಲಾ ಎಣ್ಣೆ ಹಾಕಿ ನೀವುತ್ತಿದ್ದ ಉಮ್ಮನ ಗಲ್ಲಗಳಲ್ಲಿ ಕಣ್ಣ ಹನಿಗಳುದುರತೊಡಗಿದ್ದವು. ಅಷ್ಟರಲ್ಲಿ “ಹಲೀಮಾ, ಹಲೀಮಾ” ಹೊರಗಿನಿಂದ ಹೆಂಗಸಿನ ಸ್ವರವೊಂದು ಕೇಳಿತು.

ಪರಿಚಿತ ಸ್ವರವನ್ನು ಆ ಕೂಡಲೇ ಗುರ್ತಿಸಿ, “ಓ ನೀನಾ ಅಕ್ಕ, ಬಾ ಒಳಗೆ ಬಾ” ಹಲೀಮಾ ಸ್ವಾಗತಿಸಿದರು. ಪುಣ್ಯಕ್ಕೆ ಅದೇ ದಿನ ಹಲೀಮಾರ ಅಕ್ಕ ಕಡೇಶೀವಾಲಯದಿಂದ ತಂಗಿಯನ್ನು ನೋಡಲು ಬಂದಿದ್ದರು. ಇದಿನಬ್ಬನಿಗೆ ‘ಮೂತಮ’ ಅಂದರೆ ದೊಡ್ಡಮ್ಮ.

ಆ ಕಾಲಕ್ಕೆ ಅಜಿಲಮೊಗರಿನಿಂದ ಕಡೇ ಶಿವಾಲಯಕ್ಕೆ ಹೋಗಬೇಕಾದರೆ ಈಗಿನಂತೆ ಮುಖ್ಯ ರಸ್ತೆ ಇಲ್ಲ. ಈಗ ಇರುವಂತೆ ವಾಹನಗಳಿಲ್ಲ, ಹೆಚ್ಚೆಂದರೆ ಎತ್ತಿನಗಾಡಿ. ಸೇತುವೆಯ ಸೌಕರ್ಯವೂ ಇಲ್ಲ. ಕಡೆ ಶಿವಾಲಯವೆಂದರೆ ನೇತ್ರಾವತಿ ನದಿಯ ಆ ಬದಿ, ಅಜಿಲಮೊಗರು ಈ ಬದಿ. ತೆಪ್ಪ ಅಥವಾ ದೋಣಿಯ ಮೂಲಕ ಮಾತ್ರ ಆ ಕಡೆ ಹೋಗಬಹುದಿತ್ತು. ದೊಡ್ಡಪ್ಪ ದೋಣಿಯೊಂದಿಗೆ ಬರುವಾಗ, ಅವರೊಂದಿಗೆ ಮೂತಮ ಬಂದಿದ್ದು ಇದಿನಬ್ಬರಿಗೆ ಆ ನೋವಿನಲ್ಲೂ ಸಂತೋಷದ ವಿಚಾರ. ಅವರಿಗೆ ಮಕ್ಕಳಿಲ್ಲದ್ದರಿಂದಲೋ ಏನೋ, ಯಾರದೇ ಮಕ್ಕಳನ್ನು ಕಂಡರೂ ಸ್ವಲ್ಪ ಹೆಚ್ಚೇ ಪ್ರೀತಿ ಮಾಡುತ್ತಿದ್ದರು. ಹಲೀಮಾ ಅಕ್ಕನನ್ನು ಅಡುಗೆ ಮನೆಗೆ ಕರೆದು ಮೆಲ್ಲಗೆ ಪಿಸುಗುಟ್ಟಿದರು.

“ನನ್ನ ಮಗ ಇದ್ದಿ ಸ್ವಲ್ಪ ದಿನದ ಮಟ್ಟಿಗೆ ನಿನ್ನ ಜೊತೆ ಇರ್ಲಿ, ಈಗ ಕಡೆಶಿವಾಲ್ಯಕ್ಕೆ ಕರ್ಕೊಂಡು ಹೋಗು. ಅವನ ಅಬ್ಬ ಗದ್ದೆ ನೋಡ್ಕೊಂಡಿಲ್ಲ ಅಂತ ಸರಿಯಾಗಿ ಹೊಡೆದು ಮುಳ್ಳಿನ ರಾಶಿಗೆಸೆದಿದ್ರು. ಈಗ ಅವರು ವಿಪರೀತ ಸಿಟ್ಟಲ್ಲಿದ್ದಾರೆ. ಅವರ ಸಿಟ್ಟು ನಿನ್ಗೆ ಗೊತ್ತುಂಟಲ್ವಾ. ಒಂದಷ್ಟು ದಿನ ಕಣ್ಣರಿಯದ ದೂರದಲ್ಲಿರಲಿ. ಮತ್ತೆ ತನ್ನಿಂತಾನೇ ಮರೆತೋಗ್ತದೆ. ಆಮೇಲೆ ಬಂದರಾಯ್ತು”.

“ಹೋ ಹಾಗಾ…ಅದೂ ಹೌದು, ನೀನು ಹೇಳಿದ್ದು ಸರಿ. ಇದ್ದಿ ನಮ್ಮ ಜೊತೆ ಇರ್ಲಿ” ಹಲೀಮಾರ ಅಕ್ಕ ಫಾತಿಮಾ ಕೂಡಾ ಹ್ಞೂಂಗುಟ್ಟಿದರು.

“ಭಾವನಿಗೆ ಗೊತ್ತಾಗ್ಬಾರ್ದು, ಗೊತ್ತಾಗದ ಹಾಗೆ ನಿಮ್ಮ ದೋಣಿಯ ಬದಿಗೆ ಕುಳ್ಳಿರಿಸು” ಮತ್ತೆ ಹಲೀಮಾರಿಂದ ಎಚ್ಚರಿಕೆ ಮಾತು.

“ಆಯ್ತು ಮಾರಾಯ್ತಿ” ಅಕ್ಕನಿಂದ ಆಶ್ವಾಸನೆ ಬಂತು.

ಈಗ ಇದಿನಬ್ಬ ನಿಟ್ಟುಸಿರು ಬಿಡುವಂತಾಯ್ತು. ಕುಶಲ ಸಮಾಚಾರ ಮುಗಿದ ಮೇಲೆ, ಮನೆಯಲ್ಲಿದ್ದ ಒಂದಿಷ್ಟು ತೆಂಗಿನ ಕಾಯಿ, ಒಂದಿಷ್ಟು ಅಕ್ಕಿಯನ್ನೂ ಹಲೀಮಾ ಕೊಡಮಾಡಿದ್ದರು. ಹೇಗೂ ಮಾತಾಡುತ್ತಾ ತಡವಾಯಿತೆಂದು ಫಾತಿಮಾರ ಗಂಡ ಇಸ್ಮಾಯಿಲ್ ಹೊರಡಲನುವಾದರು. ಅಷ್ಟರಲ್ಲಿ ನಡೆದ ವೃತ್ತಾಂತವನ್ನೆಲ್ಲಾ ಇಸ್ಮಾಯಿಲರಿಗೆ ಹೇಳಿದ ಫಾತಿಮಾ, ಬಾವನಿಗೆ ಇದಿನಬ್ಬನ ವಿಚಾರ ತಿಳಿಯದಂತೆ ಗುಟ್ಟಾಗಿಡಲು ಸೂಚಿಸಿದರು. ಇಸ್ಮಾಯಿಲ್ ಅವರಲ್ಲಿ, ಸಂಯಮ, ಮನುಷ್ಯತ್ವ ಇತ್ತು. ಆ ಕಾರಣದಿಂದಲೇ ಫಾತಿಮಾ ಮತ್ತು ಇಸ್ಮಾಯಿಲರಿಬ್ಬರಲ್ಲೂ ಅಷ್ಟೊಂದು ಅನ್ಯೋನ್ಯತೆ ಬೆಳೆದಿತ್ತು. ತಾನು ಹೇಳದೆ, ಫಾತಿಮಾ ಹೇಳಬೇಕಾಗಿ ಬಂದದ್ದು ನೆನೆದು ಹಲೀಮಾರಿಗೆ ನಾಚಿಕೆಯೇನೋ ಆಯಿತು, ಆದರೆ ಗಂಡನ ಹೊಡೆತದಿಂದ ಹಣ್ಣುಗಾಯಿ ನೀರುಗಾಯಿ ಆಗಿದ್ದ ಮಗನನ್ನು ಬೀಳ್ಕೊಡುವಾಗ ಹಲೀಮಾರ ಕಣ್ಣುಗಳು ಕಡಲಾದವು.

“ಹೋಗಿ ಬರುತ್ತೇನೆ …” ಎಂದು ಫಾತಿಮ ಹೇಳಿ ಹೊರಟಾಗ ದೂರದ ಕಿಟಕಿಯಿಂದ ಕಣ್ಸನ್ನೆಯಲ್ಲಿ ಬೀಳ್ಕೊಡುವ ಹಲೀಮಾರ ಎದೆಯಲ್ಲಿ ಮಗನನ್ನು ರಕ್ಷಿಸಿದ ಖುಷಿ ಮತ್ತು ಮಗನು ದೂರವಾಗುವ ನೋವು.

ಅಕ್ಕಿ ಮೂಟೆಯನ್ನೆಲ್ಲಾ ದೋಣಿಗೇರಿಸಿ,ಇದಿನಬ್ಬ ನಚ್ಚಬೆಟ್ಟು ( ಕಡೇ ಶಿವಾಲ್ಯದ) ಬಳಿಯ ಊರಿಗೆ ಹೊರಡುವ ಮೂತಾಪನ ದೋಣಿಗೆ ಮೂತಮ್ಮನ ಸಹಾಯದಿಂದ ಏರಿದ. ದೋಣಿ ಫಾತಿಮಾರ ಗಂಡ ಇಸ್ಮಾಯಿಲರದ್ದೇ, ಅಂದರೆ ಶಾಮಣ್ಣ ಗೌಡರ ದೋಣಿಗೆ ಅವರೇ ಅಂಬಿಗ. ಆ ಬಳಿಕ ಇವರೆ ನೋಡಿಕೊಳ್ಳುತ್ತಿದ್ದುದರಿಂದ ಇವರದ್ದೇ ದೋಣಿಯಾಗಿ ಬಿಟ್ಟಿತ್ತು.

ಸದ್ಯ ಮುಂಗೋಪಿ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದೆನಲ್ಲ ಎಂಬ ಖುಷಿ ಹಲೀಮಾರಿಗೆ. ಅಕ್ಕಿಯ ಮೂಟೆ ಹೊತ್ತ ದೋಣಿ ದಡ ಬಿಟ್ಟು ಚಲಿಸಲಾರಂಭಿಸಿತು, ಇದಿನಬ್ಬನ ಬದುಕಿನ ಓಟವೂ ಶುರುವಾಯಿತು. ದೋಣಿ ಚಲಿಸುತ್ತಿದ್ದಂತೆ ಹುಡುಗನ ಮುಖದಲ್ಲಿ ನಿರ್ಲಿಪ್ತ ಭಾವ. ದಡ ದೂರವಾಗುತ್ತಿದ್ದಂತೆ ಅಕ್ಕಿ ಮೂಟೆಯ ಬದಿಗೆ ಮುದುಡಿ ಕುಳಿತಿದ್ದ ಇದಿನಬ್ಬ ಸ್ವಲ್ಪ ಚುರುಕಾದ.

“ಹೋ ಇದ್ದಿ, ಎಂತದಿದು, ಇಷ್ಟೆಲ್ಲಾ ಹೊಡೆದ್ರಾ, ಆ ಅದ್ರಾಮನನ್ನು ಕಟ್ಟಿ ಹಾಕ್ಬೇಕು” ಎಂದು ಪ್ರೀತಿಯ ಮಾತಿನಿಂದ ಮೂತಾಪ ಇದಿನಬ್ಬನ ಪರವಾಗಿ ನಿಂತರು. “ಪಳಕ್ , ಪಳಕ್ ” ಎಂದು ಆಗೊಮ್ಮೆ ಈಗೊಮ್ಮೆ ದೊಡ್ಡಪ್ಪ ದೋಣಿಯನ್ನು ಸರಿದಾರಿಗೆ ತರಲು ಹುಟ್ಟು ಹಾಕುವ ಸದ್ದು, ನದಿಯ ಸುತ್ತ ಆಶ್ರಯ ಪಡೆದ ಮರಗಳಲ್ಲಿ ವಾಸಿಸುವ ಹಕ್ಕಿಗಳ ಚಿಲಿಪಿಲಿ. ನದಿಯಲ್ಲಿ ದೋಣಿಯ ಮೂಲಕ ಸಂಚರಿಸುವ ಆ ಉನ್ಮಾದ ವರ್ಣನಾತೀತ. ದೋಣಿ ಮುಂದೆ ಮುಂದೆ ಸಾಗುತ್ತಿದ್ದಂತೆ ಇದಿನಬ್ಬ ದೊಡ್ಡಮ್ಮನಲ್ಲಿ ನಡೆದ ಕಥೆಯನ್ನೆಲ್ಲಾ ವಿವರಿಸತೊಡಗಿದ.

“ಅಯ್ಯೋ, ಪಾಪ” ಎಂದು ಆಗಾಗ್ಗೆ ತಲೆ ನೇವರಿಸುತ್ತಲೇ ಇದ್ದ ದೊಡ್ಡಮ್ಮನ ಪ್ರೀತಿಯ ಮಾತುಗಳು ಇದಿನಬ್ಬನಿಗೆ ಆನೆಬಲ ತುಂಬುತ್ತಿತ್ತು. ದೋಣಿ ತೀರ ತಲುಪಿತು. ದೋಣಿಯಿಂದಿಳಿದ ಇದಿನಬ್ಬ ಅಕ್ಕಿ ಮೂಟೆಗಳನ್ನು ಒಬ್ಬನೇ ಎತ್ತಿ ದಡಕ್ಕಿಳಿಸಲು ಪ್ರಯತ್ನಿಸಿದ.
“ಹೇ ಇದ್ದಿ ನಿನ್ನ ಕೈಯಿಂದ ಆಗದು” ಮೂತಮ ಎಚ್ಚರಿಸುತ್ತಿದ್ದರೂ ಸ್ವತಂತ್ರ ವಾತಾವರಣದಲ್ಲಿ ಹೊಂದಿಕೊಳ್ಳುವವನ ಆವೇಶ ದೊಡ್ಡ ದೊಡ್ಡ ಮೂಟೆಗಳನ್ನು ಹೊರುವಷ್ಟು ತಾಕತ್ತು ಅವನಿಗೆ ತುಂಬುತ್ತಿತ್ತು. ಸಂಜೆ ಸೂರ್ಯನು ಅರಬ್ಬೀ ಕಡಲಿಗೆ ಸ್ನಾನಕ್ಕೆ ಹೊರಡುವ ಹೊತ್ತು ಇದಿನಬ್ಬನಿಗೆ ಅಮ್ಮನ ನೆನಪಾಗದಿರಲಿಲ್ಲ. ಹಿತ್ತಲಲ್ಲಿ ಓಡಾಡುತ್ತಿದ್ದ ಹುಡುಗನ ಮುಖದಲ್ಲಿ ಬೇಸರದ ಮೋಡ. ದೊಡ್ಡಮ್ಮನಿಗೆ ಇದು ಅರ್ಥವಾಗಿರಬೇಕು.

“ಇದ್ದಿ, ಬಾ ಇಲ್ಲಿ” ಎನ್ನುತ್ತಾ ಹತ್ತಿರ ಕರೆದು ತಲೆ ನೇವರಿಸುತ್ತಿದ್ದಂತೆ ಇದಿನಬ್ಬ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಷ್ಟು ಸುಧಾರಿಸಿಕೊಳ್ಳತೊಡಗಿದ. ಆ ದಿನಗಳಿಂದ ಇದಿನಬ್ಬನಿಗೆ ದೊಡ್ಡಮ್ಮ ಅಂದರೆ ಆಪ್ಯಾಯಮಾನ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ನಮ್ಮ ಕಾಲದಲ್ಲೆಲ್ಲಾ ಕೋಪಾವೇಶಕ್ಕೆ ಬೀಳುತ್ತಿದ್ದ ಹೊಡೆತಕ್ಕೆ ಕಂಬಳದ ಎತ್ತಿಗೂ, ಮನೆಯವರಿಗೂ ಹೆಚ್ಚಿನ ಬದಲಾವಣೆಯಿರುತ್ತಿರಲಿಲ್ಲ ಗೊತ್ತಾ?” ಅಜ್ಜ ಕಥೆ ಹೇಳುವ ದಾಟಿಯಲ್ಲಿ ಪ್ರೀತಿ, ಕನಿಕರ ಉಕ್ಕುತ್ತಿತ್ತು.

ಆ ದಿನ ರಾತ್ರಿ ಮನೆಗೆ ಬಂದಿದ್ದ ಅಬ್ದುರ್ರಹ್ಮಾನ್ ಬಹಳ ಸಿಡಿಮಿಡಿಗೊಂಡಿದ್ದರು. “ಹಲೀಮಾ… ಹಲೀಮಾ” ತಾರಕ ಸ್ವರದಲ್ಲಿ ಯಜಮಾನಿಕೆಯ ಗರ್ವ ವ್ಯಕ್ತವಾಗುತ್ತಿತ್ತು.

“ಅಲ್ಲ ನಿನ್ನ ಮಗ ಎಲ್ಲಿ ಸತ್ತ, ಇರುವ ಗದ್ದೆಯನ್ನೆಲ್ಲಾ ಹಾಳು ಮಾಡಿ ಹಾಕಿದ್ದಾನೆ, ಇನ್ಮುಂದೆ ಈ ಮನೆಯ ಬಾಗಿಲು ಕೂಡಾ ಅವನು ಮೆಟ್ಟ ಕೂಡದು” ಎಂದು ಕೈಯಲ್ಲಿದ್ದ ಕತ್ತಿಯನ್ನೆಸೆದು ‘ಧಡಾಳ್’ ಎಂದು ಬಾಗಿಲು ದೂಡಿದರು. ಹಲೀಮಾ ಹೆದರುತ್ತಾ ಇದಿನಬ್ಬ ಬಂದ ವಿಚಾರವಾಗಲೀ, ಫಾತಿಮಾಳ ಜೊತೆ ಹೋದ ವಿಚಾರವಾಗಲೀ ಹೇಳಲೇ ಇಲ್ಲ. ಕ್ರಮೇಣ ಹೇಳಿದರಾಯಿತೆಂದು ನಡುಗುವ ಕೈಗಳಲ್ಲೇ ಕಾಲ್ತೊಳೆಯಲು ಫಾತಿಮಾ ನೀರು ತಂದು ಕೊಟ್ಟರು. ಅಬ್ಬನ ಕೋಪಕ್ಕೆ ಹೆದರಿ, ಇದಿನಬ್ಬನ ತಂಗಿಯಂದಿರು ನಿದ್ರೆ ಹೋದವರಂತೆ ನಟಿಸತೊಡಗಿದ್ದರು.

ದಿನಗಳು ಕಳೆದವು. ಇತ್ತ ದೊಡ್ಡಮ್ಮನ ಮನೆಯಲ್ಲಿ ಮನೆಗೆಲಸ, ದಿನಸಿಗಳನ್ನು ತರುವ ಕೆಲಸಗಳನ್ನೆಲ್ಲಾ ಇದಿನಬ್ಬನೇ ವಹಿಸಿಕೊಳ್ಳತೊಡಗಿದ. ದೊಡ್ಡಪ್ಪನ ಜೊತೆ ದಿನವೂ ಹೊಲಕ್ಕೆ ಹೋಗತೊಡಗಿದ. ಕೆಲಸ ಕಾರ್ಯಗಳೆಲ್ಲಾ ಸುಲಭವಾಗಿ ಕಲಿತುಕೊಂಡ. ದಿನಕಳೆದಂತೆ ಇದಿನಬ್ಬನಿಗೆ ಮನೆಯವರ ನೆನಪು ಕಾಡಲಾರಂಭಿಸಿತು. ‘ಅಮ್ಮ ಹೇಗಿರಬಹುದು, ತಂಗಿ ತಮ್ಮಂದಿರು ನನ್ನ ನೆನಪಿಸುತ್ತಿರಬಹುದೇ. ಛೇ.. ಅಪ್ಪ ಅಷ್ಟು ಹೊಡೆದರೆಂದು ಆ ಊರು ಬಿಟ್ಟು ಬರಬಾರದಿತ್ತಲ್ವಾ’ ಎಂಬಿತ್ಯಾದಿ ಚಿಂತೆ ಇದಿನಬ್ಬನನ್ನು ಕೊರೆಯಲಾರಂಭಿಸಿತ್ತು.

ಕಥೆಯ ಮಧ್ಯೆ ನನ್ನ ದೊಡ್ಡಕ್ಕ ಒಂದು ಬಿಸಿ ಚಹಾ ತಂದು ಕೊಟ್ಟಳು. ಬಿಸಿ ಬಿಸಿಯಾಗಿದ್ದಾಗಲೇ ಅದನ್ನು ಸೊರ್ರೆಂದು ಹೀರಿದ ಅಜ್ಜ “ಹಾ” ಎಂದು ಆಸ್ವಾದಿಸಿದರು.

“ನೋಡಿ ನಿಮ್ಗೆಲ್ಲಾ ಗೊತ್ತಿಲ್ಲ‌. ಆ ಕಾಲಕ್ಕೆಲ್ಲಾ ತಂದೆಯ ಹೊಡೆತಕ್ಕೆ ಹೆದರಿ ಊರು ಬಿಟ್ಟು ಹೋದ ಆ ಕಾಲದ ಜನರ ಪಡಿಪಾಟಲು ಹೇಳಿ ಸುಖ ಇಲ್ಲ. ಆಗ ತಂದೆಯಂದಿರು ಮಕ್ಕಳನ್ನು ಸರಿದಾರಿಗೆ ತರಲು ಬಳಸುತ್ತಿದ್ದ ಅಸ್ತ್ರವೇ ದಂಡನೆ. ಆ ದಂಡನೆಗೆ ಅಷ್ಟೊಂದು ಖಾರವಿತ್ತು. ಮನೆಯಲ್ಲಿ ಏನಾದರೂ ಕಿತಾಪತಿ ಮಾಡಿ ಅಪ್ಪನ ಹೊಡೆತ ಖಚಿತವಾದಾಗ ಹೆದರಿ ಊರು ಬಿಡಲೇಬೇಕಿತ್ತು. ಆ ಕಾಲದ ಮನೆಯ ಯಜಮಾನರು ಬಡತನದ ಬೇಗೆಯಲ್ಲಿ, ನೂರು ತಲೆನೋವುಗಳಿಂದ ಕಂಗೆಟ್ಟು ಸಾಲಶೂಲದ, ಜೀತದ ಚಿಂತೆಯಲ್ಲಿ ಸಣ್ಣ ಪ್ರಮಾದಕ್ಕೂ ಮಕ್ಕಳು, ಹೆಂಡತಿಯನ್ನೂ ಹಿಗ್ಗಾಮುಗ್ಗಾ ಹೊಡೆದು ಬಡಿದು ಮಾಡುವಷ್ಟು ಕ್ರೂರಿಗಳಾಗಿ ಬಿಟ್ಟಿದ್ದರು.

ಅಷ್ಟರಲ್ಲೇ ಅಬ್ಬ “ತಮಾಷೆಯೆಂದರೆ, ಕೆಲವು ಮಕ್ಕಳು ಅಪ್ಪ ಹೊಡೆಯಲು ಬಂದಾಗಲೇ ಊರು ಬಿಟ್ಟು ಓಡಿ ಹೋಗುತ್ತೇನೆ ಎಂದು ಹೆದರಿಸುವವರಿಗೂ ಕಡಿಮೆ ಇರ್ಲಿಲ್ಲ. ‘ಮಕ್ಕಳು ನಮ್ಮ ಕಣ್ಣ ಮುಂದೆಯೇ ಚೆನ್ನಾಗಿರಲಿ’ ಎಂದು ಭಾವಿಸುವ ಕೆಲವೇ ಕೆಲವು ಅಪ್ಪಂದಿರು ಶಾಂತ ಚಿತ್ತಾರಾಗುತ್ತಿದ್ದರು. ತಂದೆಯ ಹೊಡೆತಕ್ಕೆ ಹೆದರಿ ಊರು ಬಿಟ್ಟು ಹೋದವರ ಬದುಕು ನಿಜಕ್ಕೂ ರೌರವ ನರಕ. ಸಾಕಷ್ಟು ವಿದ್ಯಾಭ್ಯಾಸದ ಕೊರತೆ, ಪಟ್ಟಣಗಳ ವಿಶಿಷ್ಟ ಶೈಲಿ ಇವೆಲ್ಲಾ ಒಗ್ಗಿ ಕೊಳ್ಳಲು ಹರಸಾಹಸ ಪಡಲೇ ಬೇಕು”.

ಅಷ್ಟರಲ್ಲೇ ಅಜ್ಜ, ಇನ್ನೊಂದು ಗುಟುಕು ಚಹಾ ಹೀರುತ್ತಾ “ಆ ಕಾಲದಲ್ಲಿ ಓಡಿ ಹೋದ ಮಕ್ಕಳು,ಕೆಲವೊಮ್ಮೆ ತಿರುಗಿ ಬರುವ ದಾರಿ ಹುಡುಕುವುದೇ ಅವರಿಂದ ಅಸಾಧ್ಯವಾದಾಗ ನನ್ನ ಮಗ ತೀರಿ ಹೋಗಿದ್ದಾನೆಂದೇ ಪೋಷಕರು ನಂಬಬೇಕಿತ್ತು. ರಸ್ತೆ ಸಂಪರ್ಕ, ಫೋನು ಇಲ್ಲದ ಆ ಕಾಲವನ್ನೊಮ್ಮೆ ಊಹಿಸಿ ನೋಡಿ. ಅವರನ್ನೇ ನೆನೆಯುತ್ತಾ “ಛೇ ಮಗನಿಗೆ ಹೊಡೆಯಬಾರದಿತ್ತಲ್ವಾ?” ಎಂದು ಕೊರಗಿ ಹಾಸಿಗೆ ಹಿಡಿದ ಅದೆಷ್ಟೋ ತಂದೆಯಂದಿರೂ ಅದೇ ಖಾಯಿಲೆಯಾಗಿ ಅಸುನೀಗಿದವರೂ ಇದ್ದರು.

ತಾವು ಮಾಡಿದ ತಪ್ಪಿಗಾಗಿ, ಯಾರೋ ಪರವೂರಿಗೆ ಹೊರಟು ನಿಂತವರಲ್ಲಿ “ನನ್ನ ಮಗ ಕಾಣಸಿಕ್ಕರೆ ಹೇಳಿ ಕರೆದುಕೊಂಡು ಬನ್ನಿ” ಎಂದು ಅಂಗಲಾಚುವ ತಂದೆ-ತಾಯಿಯರು. ತಾಯಂದಿರ ದುಃಖ ನೋವು ಹೇಳಲೇಬೇಕಾಗಿಲ್ಲ. ವ್ಯಾಪಾರಕ್ಕೆಂದು ಹೋಗಿ ಊರೂರು ತಿರುಗಿ ಬರುವ ಪ್ರತಿಯೊಬ್ಬರನ್ನೂ ಜಾತಕ ಪಕ್ಷಿಯಂತೆ ಕಾದು ಮಗನ ಸುಳಿವನ್ನು ನಿರೀಕ್ಷಿಸುತ್ತಾ ಕುಳಿತಿರುವವರು. ಭಾಷಾ ಜ್ಞಾನದ ಕೊರತೆ , ಅನುಭವ ಹೀನತೆ ಅಂತಹ ಹುಡುಗರನ್ನು ಕಾಡುತ್ತಿತ್ತು.

ಅಷ್ಟೊತ್ತಿಗೆ ಉಮ್ಮ “ಅಜ್ಜ, ನೀವು ಮಾತಾಡ್ತಾ ಕಥೆಯೇ ಮರೆತು ಬಿಡ್ತೀರಾಂತ” ಎಂದು ಹೇಳುತ್ತಾ ಜೋರಾಗಿ ನಕ್ಕರು‌. “ಹೂಂ ಕಥೆಗೆ ಬರ್ತೀನಿ” ಎಂದು ಅಜ್ಜ ಚಹಾ ಲೋಟದ ಕೊನೆಯ ಗುಟುಕನ್ನು ಹೀರಿಕೊಂಡರು.

ಅಬ್ದುರ್ರಹ್ಮಾನರಿಗೆ ಮಗನ ನೆನೆಪುಗಳು ಬಾರದಿರಲಿಲ್ಲ. ಅದೊಂದು ದಿನ “ಹಲೀಮಾ, ನಮ್ಮ ಇದ್ದಿ ಎಲ್ಲಿರ್ಬಹುದು” ಎಂದು ಕನಿಕರ ಪೂರ್ವಕವಾಗಿ ಕೇಳಿದ್ದರು. ಎಷ್ಟಾದರೂ ತಂದೆಗೆ ಮಗನ ನೆನಪು ಮಾಸಿ ಹೋಗುವುದೇ. ಹಲೀಮಾರು ಇದಿನಬ್ಬನನ್ನು ಅಕ್ಕನ ಮನೆಗೆ ಕಳುಹಿಸಿ ಕೊಟ್ಟದ್ದನ್ನು ಬಿಡಿಸಿ ಹೇಳಿದರು. ದೊಡ್ಡದಾಗಿ ನಿಟ್ಟುಸಿರು ಬಿಟ್ಟ ಅಬ್ದುರ್ರಹ್ಮಾನ್ “ಸರಿ ಎಲ್ಲಿಯಾದ್ರೂ ಬದುಕಿರಲಿ, ಪಾಪ ತುಂಬಾ ಹೊಡೆದುಬಿಟ್ಟೆ” ಎಂದು ಪಶ್ಚಾತ್ತಾಪದ ನುಡಿಗಳನ್ನು ಉಸುರುತ್ತಾ ಪಂಚೆಯ ಕೊನೆಯಲ್ಲಿ ಕಣ್ಣೊರೆಸಿಕೊಂಡರು.

ತಿಂಗಳುಗಳು ಕಳೆದವು. ಇದಿನಬ್ಬ ಹೊಸ ಹಳ್ಳಿ ವ್ಯವಹಾರ ಮತ್ತು ಪರಿಸರಕ್ಕೆ ಒಗ್ಗಿ ಕೊಳ್ಳತೊಡಗಿದ್ದಾನೆ. ಇನ್ನೇನು ಕೆಲವೇ ದಿನಗಳು ಇಲ್ಲಿದ್ದು ಬೇಗನೆ ಮನೆಗೆ ಮರಳಬೇಕು, ಮತ್ತದೇ ತಂದೆ- ತಾಯಿಯರ ಜೊತೆ ಬಾಳಬೇಕು ಎಂಬ ಕನಸುಗಳು ಅಂಬರದಲ್ಲೆಲ್ಲಾ ರೆಕ್ಕೆ ಬಿಚ್ಚುತ್ತಾ ಹಾರಾಡತೊಡಗಿದ್ದವು. ಒಂದು ದಿನ ಇದ್ದಕ್ಕಿದ್ದಂತೆ

“ಮೂತಮ್ಮ, ನಾವ್ಯಾವಾಗ ಅಜಿಲಮೊಗರಿಗೆ ಹೋಗೋದು” ಎಂದು ಕೇಳಿದ. ಹುಡುಗನ ಅನಿರೀಕ್ಷಿತ ಪ್ರಶ್ನೆ ದೊಡ್ಡಮ್ಮನ ಹೃದಯಕ್ಕೆ ನಾಟದಿರಲಿಲ್ಲ.

“ಹಾ, ಹೊಗೋಣ ಇದ್ದಿ, ಇನ್ನೊಮ್ಮೆ ಹೋಗುವಾಗ ಮೂತಪನ ಜೊತೆ ದೋಣಿಯಲ್ಲಿ ಹೋಗೋಣ” ಎಂದು ಸಮಾಧಾನಪಡಿಸಿದರು. ಈಗ ಫಾತಿಮಾರಿಗೆ ಸ್ವಂತ ಮಗನಂತಹ ಇದಿನಬ್ಬನನ್ನು ಕಳುಹಿಸಬೇಕಲ್ವಾ ಅನ್ನುವ ನೋವು ಕಾಡಿತು.

ಆ ದಿನ ಇದಿನಬ್ಬ ಮೂತಮನ ಮನೆಯ ಅಂಗಳದಲ್ಲಿ ಸುಮ್ಮನೆ ನಿಂತಿದ್ದ, ಹಳ್ಳಿ ದಾರಿಯಲ್ಲಿ “ಬಸಳೆ ಬೋಡಾ ಬಸಳೆ” ಎಂಬ ಶಬ್ದ ಬಹು ದೂರದಿಂದ ಕೇಳತೊಡಗಿತು. ನಡೆದು ಬರುತ್ತಿದ್ದವನ ಸದ್ದು ಹತ್ತಿರವಾಗುತ್ತಿತ್ತು. ಬಸಳೆ ಎನ್ನುವಾಗಲೇ ನೀರೂರದವರಾರಿಲ್ಲ. “ಒಂದು ಕಟ್ಟು ನಮಗೂ ತಂದು ಕೊಡು ಇದ್ದಿ” ಎನ್ನುತ್ತಾ ಹಣ ಹುಡುಕ ತೊಡಗಿದರು ಮೂತಮ್ಮ. ಹಣ ಹುಡುಕಿ ಸಿಗುವಷ್ಟರ ಹೊತ್ತಿಗೆ ಬಸಳೆಯವನು ಮನೆ ದಾಟಿ ಸಾಕಷ್ಟು ದೂರ ಹೋಗಿ ಬಿಟ್ಟಿದ್ದ. ಆಗ ಒಂದೊಂದಾಣೆಯೂ ಬಹಳ ಬೆಲೆ ಬಾಳುವವು. ಕೊಟ್ಟ ಒಂದಾಣೆಯನ್ನು ಹಿಡಿದು, ಮನೆಯಿಂದಿಳಿದು ಹುಡುಗ ಬಸಳೆ ಮಾರುವವನ ಹಿಂದೆ ಓಡತೊಡಗಿದ.

“ಅಣ್ಣಾ….” ಇದಿನಬ್ಬನ ಧ್ವನಿ ಹಳ್ಳಿ ತುಂಬಾ ಪ್ರತಿಧ್ವನಿಸಿತು.

“ಕೂ….. ಬಸಳೆ ಬೇಕೂssssss…..”

ಇದಿನಬ್ಬ ಹಿಂದೆಯೇ ಓಡಿದ. ಬಾಗಿಲ ಬಳಿ ನಿಂತು ಇದ್ದಿಯನ್ನು ಮೂತಮ್ಮ ವೀಕ್ಷಿಸುತ್ತಿದ್ದಾರೆ. ಒಂದು ತಿರುವು ಕಳೆದ ಬಳಿಕ ಓಡುತ್ತಿದ್ದ ಇದಿನಬ್ಬ ಮಾಯವಾದ. ಸ್ವಲ್ಪ ಹೊತ್ತಿಗೆ ಬಸಳೆ ಮಾರುವ ಕೂಗುವ ಶಬ್ದವೂ ಕೇಳುತ್ತಿತ್ತು. ಬೇರೆ ಗುಡ್ಡ ದಾಟಿದನೋ ಏನೋ, ಹೋದ ದಾರಿ ಸಂಪೂರ್ಣ ನಿಶ್ಯಬ್ದವಾಯಿತು. ಗಂಟೆಗಳುರುಳಿದವು. ಇದಿನಬ್ಬ ಹೋದ ಸುಳಿವೇ ಇಲ್ಲ. ಸ್ವಲ್ಪ ಸಮಯದ ನಂತರ ಒಂದು ಕಟ್ಟು ಬಸಳೆ ಹಿಡಿದುಕೊಂಡು ಮಹಿಳೆಯೊಬ್ಬರು ಬಂದರು.

“ಬ್ಯಾರ್ದಿ…ಬ್ಯಾರ್ದಿ” ಎಂದು ಯಾರೋ ಮನೆಯ ಹಿತ್ತಲಿನಲ್ಲಿ ನಿಂತು ಕರೆದರು. ಯಾರದು ಎಂದು ಗಾಬರಿಯಿಂದ ಫಾತಿಮಾ ಅಡುಗೆ ಕೋಣೆಯಿಂದ ಓಡಿ ಬಂದರು. ಸಣ್ಣ ಬಸಳೆ ಕಟ್ಟು ಹಿಡಿದು ಆ ಮಹಿಳೆ ವರಾಂಡದಲ್ಲಿ ನಿಂತಿದ್ದಳು. ಆದರೆ ಬಸಳೆಗೆ ಹೋದ ಇದಿನಬ್ಬನ ಪತ್ತೆಯಿರಲಿಲ್ಲ. ” ಏನು?” ಎಂದು ಫಾತಿಮಾ ಪ್ರಶ್ನಾರ್ಥಕವಾಗಿ ಬಾಗಿಲ ಬಳಿ ನಿಂತರು.

“ತಗೊಳ್ಳಿ ಬ್ಯಾರ್ದಿ” ದಾರಿಯಲ್ಲಿ ಬಸಳೆ ಮಾರುವವ ಕೊಟ್ಟಿದ್ದ, ನಿಮಗಂತೆ” ಎಂದು ಮಾತು ಮುಗಿಯುವಷ್ಟರಲ್ಲೇ “ಜೊತೆಗೆ ಹುಡುಗ ಇದ್ನಲ್ವಾ? ಅವನೆಲ್ಲಿ ಹೋದ”

“ಇಲ್ಲ, ಯಾವ ಹುಡ್ಗನೂ ಅರ್ಲಿಲ್ಲ” ಎಂದು ಮಹಿಳೆ ಉತ್ತರಿಸಿದಳು.

“ಅಲ್ಲಾ ನೀನು ಸರೀ ನೋಡಿರ್ಲಿಕ್ಕಿಲ್ಲ ಮಾರಾಯ್ತಿ” ಮೂತಾಮ ತನಗೆ ತಾನೇ ಹುಸಿ ಧೈರ್ಯ ತುಂಬುತ್ತಿದ್ದರು.

“ಇಲ್ಲಾ ಬ್ಯಾರ್ದಿ, ನಾನು ಸರಿಯಾಗಿ ನೋಡಿದ್ದೆ. ಅಂತವರ್ಯಾರೂ ಇರ್ಲಿಲ್ಲ” ಎಂದಳು. ಈ ಬಾರಿ ಬರ ಸಿಡಿಲೆರಗಿದಂತೆ ಮೂತಾಮ ನಿಶ್ಯಕ್ತರಾದರು.

“ಸರಿ, ನೀ ಹೋಗು” ಬಸಳೆ ಕಟ್ಟು ತೆಗೆದುಕೊಳ್ಳುತ್ತಾ ದೊಡ್ಡಮ್ಮ ಅಲ್ಲೇ ಕುಳಿತುಕೊಂಡರು. ಮತ್ತೂ ಅವರಿಗೆ ಧೈರ್ಯ, “ಹುಡುಗ ಅಲ್ವಾ, ಸಾಯಂಕಾಲ ಬರ್ಬಹುದು” ಎಂಬ ಸುಳ್ಳು ನಂಬಿಕೆಯನ್ನೇ ಗಟ್ಟಿ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿ ಗಂಡ ಮನೆಗೆ ಬರುತ್ತಿದ್ದಂತೆ;
“ಇದ್ದಿ, ಏನಾದ್ರೂ ಹೊಲದ ಕಡೆ ಬಂದ್ನಾ?” ಎಂದು ತಟ್ಟನೆ ಪ್ರಶ್ನಿಸಿದ್ದರು. “ಇಲ್ಲಲ್ವಾ” ಎಂಬ ಉತ್ತರ ಕೇಳುತ್ತಿದ್ದಂತೆ ಫಾತಿಮಾರ ಅಳು ಜೋರಾಯಿತು. ಒಂದೇ ಸಮನೆ ಇದಿನಬ್ಬ ಹೋದ ದಾರಿಯಲ್ಲಿ ಓಡತೊಡಗಿದರು. ಮೈಲಿ ದೂರ ಓಡಿದರೂ ಇದ್ದಿಯ ಸುಳಿವಿಲ್ಲವೆಂದು ಸೋತು ಸುಸ್ತಾಗಿ ಅಳುತ್ತಲೇ ಅಲ್ಲೇ ಕುಳಿತರು. ಫಾತಿಮಾರ ಅಪರಿಚಿತ ಓಟ ನೋಡಿ ಗಂಡನೂ ಹಿಂಬಾಲಿಸಿದ್ದರು. ಎದೆಯೊಡೆದು
ಅಳುವುದನ್ನು ನೋಡಿದಾಗಲೇ ಇಸ್ಮಾಯಿಲರಿಗೆ ವಿಷಯ ಅರ್ಥವಾಗಿತ್ತು.

“ಅವನು ಬರ್ಬಹುದು, ನೀ ಮನೆಗೆ ಬಾ, ಅವನು ಮನೆಗೆ ಹೋಗಿರ್ಬಹುದು ಮಾರಾಯ್ತಿ” ಎಂದು ಒತ್ತಾಯಪೂರ್ವಕ ಹೆಂಡತಿಯನ್ನು ಮನೆಗೆ ಎಳೆದು ತಂದಿದ್ದರು.

ಮನೆಗೆ ಹಿಂದಿರುಗಿದ ಮೇಲೂ ಫಾತಿಮಾ ಒಂದೇ ಸಮನೆ ಅಳುತ್ತಿದ್ದರು. ಅಂದು ರಾತ್ರಿ ಸ್ವಲ್ಪ ಸದ್ದಾದರೆ ಸಾಕು, “ಇದ್ದೀ ಇದ್ದೀ” ಎಂದು ಕನವರಿಸುತ್ತಿದ್ದರು. ಫಾತಿಮಾ ಅನ್ನ ನೀರು ಬಿಟ್ಟು ರೋಧಿಸತೊಡಗಿದರು‌.

(ಮುಂದುವರೆಯುವುದು)