ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ. ಆದರೆ ಇಲ್ಲಿ ಕವಿ ಹೇಳುವುದು ಆಕೆ ಇಂದಿಗೂ ಪ್ರಸ್ತುತವಾಗುತ್ತಾಳೆ ಎಂದು. `ತರಾಟೆಗೆ ತಲೆದಂಡ ಕೇಳು’ ಎನ್ನುವ ನುಡಿಗಟ್ಟು ಈ ಕವನಕ್ಕೆ ಸಮಕಾಲೀನ ಧ್ವನಿಯನ್ನು ತಂದುಕೊಡುತ್ತದೆ.
ಡಾ. ಕೆ. ಚಿನ್ನಪ್ಪ ಗೌಡರ ಚೊಚ್ಚಲ ಕವನಸಂಕಲನ “ಕಿತ್ತಳೆ ಹಣ್ಣಲ್ಲ” ಪುಸ್ತಕಕ್ಕೆ ಡಾ. ಬಿ.ಎ. ವಿವೇಕ ರೈ ಮುನ್ನುಡಿ

 

ಡಾ. ಕೆ. ಚಿನ್ನಪ್ಪ ಗೌಡರು ಸಂಶೋಧಕರಾಗಿ ಪ್ರಾಧ್ಯಾಪಕರಾಗಿ ಸಂಘಟಕರಾಗಿ ಆಡಳಿತಗಾರರಾಗಿ ಕನ್ನಡಿಗರಿಗೆ ಚಿರಪರಿಚಿತರು. ಈಗ ಅವರು ಕವಿಗಳಾಗಿ ತಮ್ಮ ಮೊದಲ ಕವನ ಸಂಕಲನ `ಕಿತ್ತಳೆ ಹಣ್ಣಲ್ಲ’ವನ್ನು ಸುಲಿದು ಅದರ ತೊಳೆಗಳನ್ನು ನಮ್ಮ ರುಚಿಕಟ್ಟಿಗೆ ಬಿಡಿಸಿ ಇಟ್ಟಿದ್ದಾರೆ. ಇದು ಇಂದ್ರಜಾಲದಲ್ಲಿ ಸೃಷ್ಟಿಸಿದ ಕಿತ್ತಳೆ ಹಣ್ಣು ಅಲ್ಲ; ಇದರ ಹಿಂದೆ ಅನೇಕ ವರ್ಷಗಳ ಸತತ ಅಭ್ಯಾಸದ ಅನುಭವಗಳ ಸಂವೇದನೆಗಳ ಪರಂಪರೆ ಇದೆ. ನಿಜವಾದ ಒಬ್ಬ ಸಂಶೋಧಕ ಒಬ್ಬ ಒಳ್ಳೆಯ ಕವಿಯೂ ಆಗಿರುತ್ತಾನೆ. ಸಂವೇದನಾಶೀಲತೆ ಇಲ್ಲದ ಯಾರೂ ಸಂಶೋಧಕರು ಆಗಲಾರರು. ಚಿನ್ನಪ್ಪ ಗೌಡರ ಅನೇಕ ಸಂಶೋಧನೆಗಳ ಅನುಭವಗಳ ಉತ್ಪನ್ನಗಳಾಗಿ ಇಲ್ಲಿನ ಅನೇಕ ಕವನಗಳು ರೂಪು ತಾಳಿವೆ.

ಈ ಸಂಕಲನದ ಶೀರ್ಷಿಕೆಯ ಕವನ `ಕಿತ್ತಳೆ ಹಣ್ಣಲ್ಲ’. ಈ ಕವನವೇ ಇಲ್ಲಿನ ಒಟ್ಟು ಕವನಗಳ ಸಂರಚನೆಯ ಬಗ್ಗೆ ಸೂಚನೆಯನ್ನು ಕೊಡುತ್ತದೆ. `ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ ಕಿತ್ತಳೆ ಬರಿಯ ಹಣ್ಣಲ್ಲ’ ಎಂದು ಆರಂಭವಾಗುವ ಕವನವು ಅಷ್ಟರ ಸಂತ ಹಾಜಬ್ಬನವರ ಬದುಕಿನ ದರ್ಶನವನ್ನು ಕಟ್ಟಿಕೊಡುತ್ತದೆ. ಹಾಗಾಗಿ ಹೊರಗಣ್ಣಿಗೆ ಕಾಣುವ ರೂಪ ಒಂದಾದರೆ, ಅದು ಬದುಕಿನ ರೂಪಕವಾಗುವ ಬಗೆ ಬೇರೆಯೇ ಆಗಿರುತ್ತದೆ. ಆ ರೀತಿಯ ರೂಪಾಂತರ ಮಾಡಬಲ್ಲವರು ಮಾತ್ರ ಸಂತರಾಗುತ್ತಾರೆ ಹಾಜಬ್ಬನವರ ಹಾಗೆ. ಚಿನ್ನಪ್ಪ ಗೌಡರ ಕವನಗಳು ಕೂಡಾ ಹಾಜಬ್ಬನವರ ಕಿತ್ತಳೆಗಳ ಹಾಗೆಯೇ. ಅವುಗಳ ಹೊರನೋಟ ಒಂದಾದರೆ ಒಳ ಅರ್ಥಗಳು ಹತ್ತಾರು. ಕವನಗಳ ಅರ್ಥಗಳು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಅವುಗಳ ತೊಳೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋದ ಹಾಗೆಯೇ ಅವನ್ನು ಸವಿಯುತ್ತಾ ಹೋದಂತೆಯೇ ಅನುಭವಕ್ಕೆ ಬರುವ `ಕಿತ್ತಳೆಪಾಕ’ದಂತೆ.

(ಡಾ. ಕೆ. ಚಿನ್ನಪ್ಪ ಗೌಡ)

ಡಾ. ಚಿನ್ನಪ್ಪ ಗೌಡರು `ಭೂತಾರಾಧನೆ : ಜಾನಪದೀಯ ಅಧ್ಯಯನ’ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಪಿ.ಎಚ್.ಡಿ. ಪಡೆದವರು. ಅವರ ಸಂಶೋಧನೆಯ ಮಾನವೀಯ ಮುಖಗಳು ಕವನಗಳ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಿವೆ. `ಪರವ ನನ್ನಯ-ಕುರುಡು ಹಸಿವು’, `ನಿತ್ಯೋತ್ಸವ ಪರತಿ’, `ಈ ಕುಣಿತ ಯಾಕೆ’, `ಭೂತದಿಂದ ವರ್ತಮಾನಕೆ’ : ಈ ನಾಲ್ಕು ಕವನಗಳು ಭೂತ ಕಟ್ಟುವ ಪರವನಂಥವರು, ಅವರ ಜೊತೆಗಿನ ಪರತಿಯರು ವಾಸ್ತವ ಜಗತ್ತಿನಲ್ಲಿ ಬದುಕುವ ಪರಿಗಳನ್ನು ಅನಾವರಣ ಮಾಡುತ್ತವೆ. `ಭೂತದಿಂದ ವರ್ತಮಾನಕೆ’ ಎನ್ನುವ ಕವನ ಉಳಿದ ಕವನಗಳ ಆಶಯದ ಸಾರರೂಪದಂತಿದೆ. ಈ ದೃಷ್ಟಿಯಿಂದ ಎರಡು ಅವಳಿ ಕವನಗಳ ಹಾಗೆ ಇರುವವು : `ಪರವ ನನ್ನಯ-ಕುರುಡು ಹಸಿವು’ ಮತ್ತು `ನಿತ್ಯೋತ್ಸವ ಪರತಿ’. ಕಿರುಕಥನದ ಮಾದರಿಯ ಈ ಕವನಗಳ ವಿನ್ಯಾಸವನ್ನು ಗಮನಿಸಬೇಕು. ಪರವ ಅಥವಾ ಪರತಿ ಪಾಲುಗೊಳ್ಳುವ ದೈವದ ಆರಾಧನೆಯ ಜನಪದಪುರಾಣದ ಕಥನಕ್ಕಿಂತ ಭಿನ್ನವಾದ ಜನಪದ ಕಲಾವಿದರ ಲೌಕಿಕ ಬದುಕಿನ ಕಥನಗಳು ಇಲ್ಲಿ ಬಿಚ್ಚಿಕೊಳ್ಳುತ್ತಾ ನಮ್ಮನ್ನು ವಿಷಾದದ ಲೋಕಕ್ಕೆ ಕೊಂಡೊಯ್ಯುತ್ತವೆ. ಪರವ ನನ್ನಯನ ಚಿತ್ರಗಳು ಒಂದರ ಬಳಿಕ ಇನ್ನೊಂದು ಕಾಣಿಸುತ್ತಾ ಬೆರಗು ಉಂಟುಮಾಡುತ್ತಾ, ಕೊನೆಗೆ

`ಒಳಗೆ ಅಳುವಂತಿದ್ದ ಎಲ್ಲವನು ಕಳಚಿ
ನೋಡುತ್ತಿದ್ದಂತೆ ಕಂಡ ಸಂಜೆಯವನಂತಾದ
ಪರವ ನನ್ನಯ ನನ್ನಂತಾದ ನಿಜದ
ಒಂದು ಚಿತ್ರ’

ಎಂದು ಮುಗಿತಾಯ ಆಗುವಾಗ ಮಾಯ ಜೋಗಗಳನ್ನು ಮೀರಿದ ಕಟುವಾಸ್ತವದ ಚಿತ್ರವೊಂದು ವಿಷಾದವ್ಯಂಗ್ಯವಾಗಿ ಉಳಿದುಬಿಡುತ್ತದೆ. `ನಿತ್ಯೋತ್ಸವ ಪರತಿ’ ಕವನವು ಲಿಂಗು ಪರತಿಯ ಪಾಡು ಹಾಡುಗಳ ಸಂಕಥನ. `ನಿತ್ಯೋತ್ಸವ’ ಎನ್ನುವ ಸಂಭ್ರಮದ ನುಡಿಗಟ್ಟು ಪರತಿಯ ಪಾಲಿಗೆ ದಿನದಿನದ ಹೊಟ್ಟೆತುಂಬಿಸುವ ಯಾಚನೆಯ ಬದುಕಿನ ವ್ಯಂಗ್ಯದ ಅಭಿವ್ಯಕ್ತಿ.

“ಇರುವುದೆಲ್ಲವು ಇಂದಿಗೆ ನಾಳೆಗಿಲ್ಲ
ನಾಳೆ ಎಂಬುದೆ ನಮ್ಮಂಥವರಿಗೆ ಇಲ್ಲ ಎಂದು
ಕೊರಗುತ್ತಲೇ ತಲೆಹೊರೆ ಮಾಡಿದ್ದು
ಪರತಿಗೆ ಹಳತಲ್ಲ ನಿತ್ಯ ಹೊಸತು
ನಗುವ ತಾಯಿಗೆ
ನಿತ್ಯೋತ್ಸವ”

ಎಂದು ಕೊನೆಯಾಗುವ ಕವನದ ಸಾಲುಗಳು ಒಂದು ಹೆಣ್ಣಿನ ನಿತ್ಯಬದುಕಿನ ಸೂತ್ರವಾಕ್ಯಗಳಾಗಿವೆ.

`ಈ ಕುಣಿತ ಯಾಕೆ?’ ಕವನದಲ್ಲಿ ಕೇಳುವ ಪ್ರಶ್ನೆಗಳು ಮಾರ್ಮಿಕವಾಗಿವೆ. ಭೂತ ಕಟ್ಟುವ ಕಲಾವಿದರ ನಿಜದ ಬದುಕಿನ ಚಿತ್ರವನ್ನು ತೋರಿಸುತ್ತಾ ಕವಿ ಕೇಳುವ ಪ್ರಶ್ನೆ ಇಡೀ ವ್ಯವಸ್ಥೆಯನ್ನು ಬಯಲುಮಾಡುತ್ತದೆ: “ಭಯದ ನೆರಳಲಿ ಉಸಿರ ಹಿಡಿದು ಮಾಯಬಿಟ್ಟು ನಿತ್ಯ ಸಾವ ಈ ಕುಣಿತ ಯಾಕೆ?”

ಈ ಆಶಯವನ್ನು ಹೆಚ್ಚು ಗಂಭೀರವಾಗಿ ವೈಚಾರಿಕವಾಗಿ ಮಂಡಿಸುವ ಕವನ `ಭೂತದಿಂದ ವರ್ತಮಾನಕೆ’. ಜಾತಿ ಭೇದ, ಲಿಂಗ ಭೇದ, ವರ್ಣಭೇದಗಳನ್ನು ಇನ್ನೂ ಪಾಲಿಸಿಕೊಂಡು ಬರುವ ಸಮಾಜದಲ್ಲಿ ಭೂತಗಳು ನುಡಿಕೊಡುವ ಸತ್ಯದ ಮದಿಪು ಹೇಗೆ ಅಸಂಗತವಾಗುತ್ತದೆ ಎನ್ನುವ ಎಚ್ಚರವನ್ನು ಹೇಳುವ ಈ ಕವನ ಸಾಮಾಜಿಕ ವಿಮರ್ಶೆಯ ಒಳ್ಳೆಯ ನಿದರ್ಶನ.
“ಸತ್ಯಕ್ಕೆ ಗೋರಿ ಕಟ್ಟಬಾರದು ಬಾರದು ಬಾರದು
ಆಗಬಾರದು ನನ್ನಿಂದ
ನಿಮ್ಮಿಂದಲೂ”
ಎಂದು ಕೊನೆಯಾಗುವಾಗ ಸಂಪ್ರದಾಯದ ಬೇಲಿಗಳನ್ನು ಮುರಿಯುವ ಛಲ ಇದೆ.

ತುಳುನಾಡಿನ ಆರಾಧನಾ ಸಂಸ್ಕೃತಿಯಲ್ಲಿ ಹೆಣ್ಣುಗಳು ಅತಿಮಾನುಷ ಪಾತ್ರಗಳಾಗಿ ಪಾಡ್ದನಗಳಲ್ಲಿ ಮತ್ತು ಆರಾಧನೆಗಳಲ್ಲಿ ಕಾಣಿಸಿಕೊಳ್ಳುವ ಎರಡು ಮಾದರಿಗಳು : ಸಿರಿ ಮತ್ತು ಕಲ್ಲುರ್ಟಿ. ಸಿರಿ ಕಾವ್ಯ ಮತ್ತು ಸಿರಿಜಾತ್ರೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ಚಿನ್ನಪ್ಪ ಗೌಡರು ತಮ್ಮ `ಹತ್ತು ಮಕ್ಕಳ ತಾಯಿ’ ಕವನದಲ್ಲಿ ಸಿರಿಯ ಕತೆಯನ್ನು ಕಥನವಾಗಿಸಿದ್ದಾರೆ. ಪಾಡ್ದನದ ನುಡಿಗಟ್ಟುಗಳನ್ನು ಬಳಸಿಕೊಂಡು ಅವುಗಳ ಮೂಲಕ ಸಿರಿಯಂತಹ ಹೆಣ್ಣೊಬ್ಬಳ ಬದುಕಿನ ಯಾತನೆ ಮತ್ತು ಯೋಚನೆಗಳಿಗೆ ಹೊಸ ಧ್ವನಿಗಳನ್ನು ಜೋಡಿಸಿದ್ದಾರೆ. ತಾಯಿ ಆಗುವ ಸಂತಸ ಮತ್ತು ಸಂಕಟಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಅದಕ್ಕೆ ಮುಕ್ತಾಯ ಇಲ್ಲ. ಆದ್ದರಿಂದಲೇ ಕವನ ಕೊನೆಯಾಗುವುದು: “ಹತ್ತು ಮಕ್ಕಳ ತಾಯಿ ನೀನು, ತಾಯ ದಾರಿ ಇನ್ನೂ ಕಾಣಲಿಲ್ಲ…”

ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ. ಆದರೆ ಇಲ್ಲಿ ಕವಿ ಹೇಳುವುದು ಆಕೆ ಇಂದಿಗೂ ಪ್ರಸ್ತುತವಾಗುತ್ತಾಳೆ ಎಂದು. `ತರಾಟೆಗೆ ತಲೆದಂಡ ಕೇಳು’ ಎನ್ನುವ ನುಡಿಗಟ್ಟು ಈ ಕವನಕ್ಕೆ ಸಮಕಾಲೀನ ಧ್ವನಿಯನ್ನು ತಂದುಕೊಡುತ್ತದೆ. ಕಲ್ಲುರ್ಟಿ ಕಲ್ಲಿನಲ್ಲಿ ಉರಿದ ಬೆಂಕಿ ಆದಕಾರಣವೇ ಕಲ್ಲುಹೃದಯದ ಮಂದಿಗೆ ಆಕೆ ಈಗಲೂ ಬೆಂಕಿಯಾಗಿ ಸುಡಬೇಕು ಎನ್ನುವ ಆಶಯ ಇಲ್ಲಿ ಪ್ರಕಟವಾಗಿದೆ.

`ಪರವ ನನ್ನಯ-ಕುರುಡು ಹಸಿವು’ ಮತ್ತು `ನಿತ್ಯೋತ್ಸವ ಪರತಿ’. ಕಿರುಕಥನದ ಮಾದರಿಯ ಈ ಕವನಗಳ ವಿನ್ಯಾಸವನ್ನು ಗಮನಿಸಬೇಕು. ಪರವ ಅಥವಾ ಪರತಿ ಪಾಲುಗೊಳ್ಳುವ ದೈವದ ಆರಾಧನೆಯ ಜನಪದಪುರಾಣದ ಕಥನಕ್ಕಿಂತ ಭಿನ್ನವಾದ ಜನಪದ ಕಲಾವಿದರ ಲೌಕಿಕ ಬದುಕಿನ ಕಥನಗಳು ಇಲ್ಲಿ ಬಿಚ್ಚಿಕೊಳ್ಳುತ್ತಾ ನಮ್ಮನ್ನು ವಿಷಾದದ ಲೋಕಕ್ಕೆ ಕೊಂಡೊಯ್ಯುತ್ತವೆ.

ತುಳುನಾಡಿನ ಜನಪದ ಕ್ರೀಡೆಗಳು ಎಂಬ ಖ್ಯಾತಿ ಪಡೆದ ಕೋಳಿ ಅಂಕ ಮತ್ತು ಕಂಬಳದ ಬಗ್ಗೆ ಎರಡು ಕವನಗಳಿವೆ : ಅಂಕ ಮತ್ತು ಕರೆ ಕರೆ ಕಂಬಳ. ಈ ಕವನಗಳಲ್ಲಿ ಕೂಡ ಚಿನ್ನಪ್ಪ ಗೌಡರ ಒಳನೋಟ ಇರುವುದು ತೋರಿಕೆಯ ಈ ವೈನೋದಿಕ ಕ್ರೀಡೆಗಳ ಒಳಗೆ ಹುದುಗಿರುವ ಸಾವುನೋವುಗಳ ಕಡೆಗೆ, ಕೋಳಿ-ಕೋಣಗಳ ದುರಂತದ ವಿಷಾದದ ಕಡೆಗೆ. ಎಂದಿನಂತೆ ಇಲ್ಲಿ ಕೂಡಾ ಕವಿ ಒಂದು ವಿಷಯವನ್ನು ಕಥನದ ಮಾದರಿಯಲ್ಲಿ ವರ್ಣನೆಗಳ ಮೂಲಕ ಮಂಡಿಸುತ್ತಾ ಹೋಗಿ ಕವನದ ಕೊನೆಯಲ್ಲಿ ವಿಷಾದದ ವ್ಯಂಗ್ಯದಲ್ಲಿ ತಮ್ಮ ನಿಲುವನ್ನು ಧ್ವನಿಸುತ್ತಾರೆ. ಹಣದ ಜೂಜು ಮತ್ತು ಪ್ರಾಣಿಪಕ್ಷಿಗಳ ಪಣದ ಜೂಜು ಉಳ್ಳವರ ಲೋಕದಲ್ಲಿ ಸಾವುಗೆಲುವಿನ ಆಟ. `ಅಂಕ’ ಕವನ ಹೇಳುವುದು:

“ಬಾಳು ಕಟ್ಟಿದ ಕಾಲಿಗೆ ಏನು ಬೇಡಿಕೆ
ಸಾವಲ್ಲ ವೀರಮರಣ
ಭೋಜನ”

`ಕರೆ ಕರೆ ಕಂಬಳ’ ಕವನ ಕೂಡ ಕೋಣಗಳ ಓಟದ ಕಂಬಳದ ದೀರ್ಘ ಕಥನವನ್ನು ಬಿತ್ತರಿಸುತ್ತಾ ಅದರ ಚಾಕ್ಷುಷ ಚಿತ್ರಗಳನ್ನು ಕಟ್ಟಿಕೊಡುತ್ತಾ ಅದರ ಜೊತೆಗಿನ ಐತಿಹ್ಯಗಳ ಆಶಯವನ್ನು ಒಡೆಯುತ್ತಾ ಹೋಗುತ್ತದೆ. ಕೊನೆಗೂ “ಕಂಬಳ ಆಳುಗಳ ಕೈ ಕೆಸರು, ಆಳುವವರ ಬಾಯಿ ಮೊಸರು”. ಆಳುವವರ ಪ್ರತಿಷ್ಠೆಯ ಸ್ಪರ್ಧೆಯಲ್ಲಿ ಕೋಣಗಳು ಮತ್ತು ಅವುಗಳನ್ನು ಓಡಿಸುವವರು ಪ್ರದರ್ಶನದ ವಸ್ತುಗಳಾಗುವ ವ್ಯಂಗ್ಯ ಇಲ್ಲಿ ಅಭಿವ್ಯಕ್ತವಾಗಿದೆ.

(ಡಾ. ಬಿ.ಎ. ವಿವೇಕ ರೈ)

ಚಿನ್ನಪ್ಪ ಗೌಡರ ಈ ಸಂಕಲನದ ಕವನಗಳಲ್ಲಿ ಇನ್ನೊಂದು ಬಗೆಯೆಂದರೆ ಸುಕುಮಾರತೆಯನ್ನು ದ್ರವ್ಯವಾಗಿ ಉಳ್ಳ ಅಕ್ಕರೆಯ ಕವನಗಳು. ಇವು ಕವನವನ್ನು ಕಟ್ಟುವ ಬಗೆಯ ಸುಂದರ ರೂಪಕಗಳು. ಲಯಬದ್ಧವಾದ ಪದಪುಂಜಗಳ ಜೋಡಣೆಯ ಒಳಗೆ ಬದುಕಿನ ಚಂದವನ್ನು ಹೂರಣವಾಗಿ ತುಂಬಿಸಿ ಮೆಲುಬಗೆಯಲ್ಲಿ ಆಸ್ವಾದಿಸಲು ದೊರಕುವ ನೇಯ್ಗೆಗಳು. ಆರಂಭದ ಕವನ `ಕಾಡು ಹಕ್ಕಿ’ ಇದಕ್ಕೆ ಉತ್ತಮ ನಿದರ್ಶನ.:

“ನಿಮ್ಮ ಮನೆ ಮೂಲೆಯಲಿ ಗೂಡು ಕಟ್ಟಿಹೆ ನಾನು
ಎಸೆಯದಿರಿ ಚಿಂದಿಚಿಂದಿ ಮಾಡಿ
ನಿಮ್ಮ ಮನದೊಳಗೊಂದು ಕನಸ ತಂದಿಹೆ ನಾನು
ಹಕ್ಕಿಯಂದದಿ ಇರಲದುವೆ ಹಾಡಿ”

ಕವನವನ್ನು ಪುಟ್ಟಮರಿ / ಮಗುವಿಗೆ ಹೋಲಿಸುವ ಕವಿ ಹಸುಳೆಯ ಎಲ್ಲ ಲೀಲೆಗಳಲ್ಲಿ ಕವನವನ್ನು ಅರಸುತ್ತಾರೆ. `ಕವನ ಅಡಗಿ … ಜೀವ ಬೆಳಗಿ’ ಕವನ ಇದೇ ಆಶಯವನ್ನು ಸುಕುಮಾರ ರೂಪಕಗಳ ಮೂಲಕ ಚಿತ್ರಿಸುತ್ತಾ ಹೋಗುತ್ತದೆ :

“ಗುಬ್ಬಿ ಹಕ್ಕಿಯ ಪುಟಿವ ರೆಕ್ಕೆಯ
ಪುಳಕ ಗರಿಗಳ ಕಣ್ಣ ಮಾತಿನ
ಪದದ ಸೆರಗಲಿ ಕವನ ಅಡಗಿತ್ತ
ಅದರಲ್ಲಿ ಜೀವ ಬೆಳಗಿತ್ತ”…
“ತಾಯ ಬಳ್ಳಿಯ ಮೊಗ್ಗು ಮಗುವಿನ
ಜೊಲ್ಲು ಹಾಲಲಿ ಕವನ ಅಡಗಿತ್ತ
ಅದರಲ್ಲಿ ಜೀವ ಬೆಳಗಿತ್ತ”

`ಸರ್ಪಗಾವಲಿನೊಳಗೆ’ ಕವನದಲ್ಲಿ ಪುಟ್ಟ ಹೆಣ್ಣುಮಗುವಿನ ಸುತ್ತ ಕಟ್ಟಿದ ನವುರಾದ ಪ್ರೀತಿಯ ಪಕಳೆಗಳಿವೆ :

“ಹೀಗೆ ತೊಟ್ಟಿಲು ತಾವರೆಗೊಳ ಕೋಗಿಲೆ
ಗಂಧವೀಳ್ಯ ರಾಜಕುವರಿ ಮಲ್ಲಿಗೆ
ಸುತ್ತ ಕಟ್ಟಿರುವೆ
ನಾನು
ಸರ್ಪಗಾವಲು”

ಇಲ್ಲಿ ಬಳಸಿರುವ ಒಂದೊಂದು ಪದವೂ ಸುಕುಮಾರತೆಯ ಅಕ್ಕರೆಯ ಅನುಭವವನ್ನು ಸಾಧಾರಣೀಕರಣಗೊಳಿಸುತ್ತವೆ.

`ಗುಟ್ಟು’, `ಎನ್ನದಿರು’ ಮುಂತಾದ ಕವನಗಳಲ್ಲೂ ಒಂದು ಶಬ್ದಚಿತ್ರವನ್ನು ಕಟ್ಟಿ ಆಮೂಲಕ ಒಂದು ಆಪ್ತಭಾವವನ್ನು ಸಂವಹನ ಮಾಡುವ ಕಲೆಗಾರಿಕೆ ಇದೆ.`ಹಾದಿಗೆ ಬಿದ್ದ ಹಾಡು’ ಕವನವು ಉಳ್ಳವರ ಮತ್ತು ಬಡವರ ವೈರುಧ್ಯವನ್ನು ಅವರವರ ಬದುಕಿನ ನೆಲೆಗಳಲ್ಲಿ ಕಟ್ಟಿಕೊಡುತ್ತಾ ದುಡಿಯುವವರ ಹಾಡಿನ ಪರವಾಗಿ ನಿಲ್ಲುತ್ತದೆ. ಇದೇ ಬಗೆಯ ತಾತ್ವಿಕತೆ ಉಳ್ಳ ಇನ್ನೊಂದು ಕವನ `ಅವರು ಮತ್ತು ನಾವು’. ಇಲ್ಲಿ ವೈರುಧ್ಯದ ರೂಪಕಗಳ ಮೂಲಕ ಎರಡು ವರ್ಗಗಳ ಅಂತರವನ್ನು ಕಾವ್ಯವಾಗಿಸಲಾಗಿದೆ:

“ಅವರು ದೀಪ ಹಚ್ಚುವ ಮಂದಿ
ನಾವು ಉರಿದು ಸುಡುವ ದೊಂದಿ”

`ಹಾಡಿ ಭಾಗವತರೇ ಹಾಡಿ’ ಯಕ್ಷಗಾನದ ಚಾಕ್ಷುಷ ವರ್ಣನೆಯನ್ನು, `ಗುಟ್ಟು’ ಸೌಂದರ್ಯಾನುಭೂತಿಯ ಒಳಮರ್ಮವನ್ನು, `ಜಾತ್ರೆ’ ಊರಿನ ತೇರಿನ ಸಂಭ್ರಮವನ್ನು, ‘ಪ್ರೀತಿಗೆ’ ನಿಸರ್ಗದ ಸೊಬಗಿನ ಆಸ್ವಾದವನ್ನು, `ಎನ್ನದಿರು’ ವೈರುಧ್ಯಗಳ ಅರ್ಥವಂತಿಕೆಯನ್ನು, `ನೆಂಟರು ಬರುತ್ತಾರೆ’ ನಂಟಿನ ಅಂಟನ್ನು, `ನಿಜ’ ಒಳಗಿನ ಸತ್ಯಗಳನ್ನು, `ದಿನದಾಟ’ ಮಕ್ಕಳ ಆಟದ ದಾರ್ಶನಿಕತೆಯನ್ನು, `ಪೀಠಿಕೆಯ ಬಂಧುಗಳು’ ಪ್ರೀತಿಸಿದ ಹುಡುಗಿಯ ದುರಂತವನ್ನು, `ಬರಿಯ ಪಗರಣ’ ಹಗಲುವೇಷದ ಆತ್ಮವಂಚನೆಯನ್ನು, ‘ನೆಲಸಮ ಸಲ್ಲ’ ಆಧುನಿಕತೆ ಸಹಜ ಬದುಕನ್ನು ನೆಲಸಮ ಮಾಡುವುದನ್ನು, `ಕೆಡಹು ಕಟ್ಟು’ ಬದುಕಿನ ಹೊಸತನದ ಹಂಬಲವನ್ನು ಬಗೆಬಗೆಯಲ್ಲಿ ಕವನಗಳಾಗಿ ಚಿತ್ರಿಸುತ್ತವೆ.

ಚಿನ್ನಪ್ಪ ಗೌಡರ ಈ ಕವನಸಂಕಲನ ಅವರ ಮೊದಲನೆಯದಾದರೂ ಅದು ಒಂದು ಪರಂಪರೆಯ ಎಲ್ಲ ಮಜಲುಗಳನ್ನು ದಾಟಿಕೊಂಡು ಬಂದದ್ದು. ಹಾಗಾಗಿಯೇ ಅದು ಚಿರಂತನ. ಕವಿತ್ವದ ಮನಸ್ಸನ್ನು ಸದಾ ಜೀವಂತವಾಗಿ ಇಟ್ಟುಕೊಂಡಿರುವ ಅವರು ತಮ್ಮ ಸಂಶೋಧನೆ, ಅನುವಾದದಂತಹ ಶ್ರಮದ ಕೆಲಸಗಳ ನಡುವೆ ತಮ್ಮ ಕವನದ ಕಾಯಕವನ್ನು ಮುಂದುವರಿಸುವುದು ಅವರಿಗೆ ಮತ್ತು ಕನ್ನಡ ಕಾವ್ಯಲೋಕಕ್ಕೆ ಹಿತಕರ ಎಂದು ಭಾವಿಸುತ್ತೇನೆ. ಕವಿಯಲ್ಲದ ನನ್ನಿಂದ ಅವರ ಕವನಸಂಕಲನಕ್ಕೆ ಮುನ್ನುಡಿ ಬರೆಸಿದ ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಾ, ಅವರ ಮುಂದಿನ ಕವನಸಂಕಲನಕ್ಕಾಗಿ ಕುತೂಹಲದಿಂದ ಕಾಯುತ್ತೇನೆ.