ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ-ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.
ಡಾ. ಗಜಾನನ ಶರ್ಮ ಬರೆದ ‘ಚೆನ್ನಭೈರಾದೇವಿʼ ಕಾದಂಬರಿಗೆ ಜೋಗಿ ಬರೆದ ಮಾತುಗಳು

 

ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡುಗಿಸುವ ಚೆನ್ನಭೈರಾದೇವಿ, ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು, ಪೋರ್ಚುಗೀಸರ ಪಾಲಿಗೆ ರೈನಾ ದ ಪಿಮೆಂಟಾ.

(ಡಾ. ಗಜಾನನ ಶರ್ಮ)

ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಐವತ್ನಾಲ್ಕು ವರ್ಷಗಳ ಕಾಲ ಆಳಿದ ಚೆನ್ನಾಭೈರಾದೇವಿಯ ಕಥೆಯನ್ನು ಎಷ್ಟು ವಸ್ತುನಿಷ್ಟವಾಗಿ ಹೇಳಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಹೇಳಿದ್ದಾರೆ ಡಾ. ಗಜಾನನ ಶರ್ಮ. ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ-ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.

ಚಾರಿತ್ರಿಕ ಕಾದಂಬರಿಗಳನ್ನು ಬರೆಯುವುದು ಸುಲಭವಲ್ಲ. ಏಕಕಾಲಕ್ಕೆ ಇತಿಹಾಸಕ್ಕೂ ನಿಷ್ಠರಾಗಿದ್ದುಕೊಂಡು ರೋಚಕತೆಗೂ ಮೋಸವಾಗದಂತೆ ಬರೆಯಲಿಕ್ಕೆ ಅಗಾಧವಾದ ಪರಿಶ್ರಮ, ಪ್ರತಿಭೆ ಮತ್ತು ಅಧ್ಯಯನ ಬೇಕು. ಡಾ. ಗಜಾನನ ಶರ್ಮರಿಗೆ ಅದು ಸಿದ್ಧಿಸಿದೆ.

(ಜೋಗಿ)

ಈ ಹಿಂದೆ ಪುನರ್ವಸು ಕಾದಂಬರಿಯ ಮೂಲಕ ಶರಾವತಿಯ ಕಥನವನ್ನು ಕಟ್ಟಿಕೊಟ್ಟ ಗಜಾನನ ಶರ್ಮರು, ಇಲ್ಲಿ ಚರಿತ್ರೆಯ ಬೆನ್ನುಹತ್ತಿದ್ದಾರೆ. ಚೆನ್ನಭೈರಾದೇವಿಯ ಬದುಕಿನ ಅಪರೂಪದ ಘಟನೆಗಳನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ.

ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲ.

 

(ಕೃತಿ: ಚೆನ್ನಭೈರಾದೇವಿ, ಲೇಖಕರು: ಡಾ. ಗಜಾನನ ಶರ್ಮ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 395/-)