ಮುತ್ತು

ಮನೆಮುಂದಿನ ದಾಸವಾಳದ ಗಿಡದಲ್ಲಿ
ದಿನಾ ಇರುತ್ತದೆ ಹತ್ತಾರು ಮೊಗ್ಗು
ಬೆಳಿಗ್ಗೆ ತನ್ನನ್ನು ಒಪ್ಪಿಸಿಕೊಳ್ಳುವ ಹಾಗೆ
ನನಗೆ ಕಾಣುವುದು ಒಂದು ಹೂವು

ಇವಳು ಕೊಯ್ಯುತ್ತಾಳೆನೋ ಪ್ರತಿದಿನ ಸಂಜೆ
ಮೊಗ್ಗುಗಳ ಮರುದಿನದ ಪೂಜೆಗೆ
ಇರಲಿ ಬಿಡಿ ಎಂಬಂತೆ ಸುಮ್ಮನಿದ್ದೆನು, ಒಮ್ಮೆ
ಕೇಳಬೇಕೆನಿಸಿತು ಇವಳ, ಕೇಳಿದೆ.

‘ಇಲ್ಲ! ನಾನು ಎಲ್ಲವನ್ನೂ ಕೊಯ್ಯುತ್ತೇನೆ
ಹೇಗೆ ಉಳಿದೀತು ಹೇಳಿ ಒಂದು ಮೊಗ್ಗು?’
ಎನ್ನುತ್ತ ನಕ್ಕು ಹೋದಳು ಒಳಗೆ, ನನ್ನಲ್ಲಿ
ಬಂತು ಸಂಶಯ: ಯಾಕೆ ಹೀಗೆ ಇವಳು?

ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು!

ರಾತ್ರೆ ಬರಸೆಳೆದು ಕೇಳಿದೆ ‘ಯಾಕೆ ಸುಳ್ಳು
ಹೇಳುತ್ತಿ ಈ ವಯಸ್ಸಿನಲಿ ನನಗೆ?
ಆಕೆ ಹೂವೇ ಆಗಿ ಹೇಳಿದಳು: ‘ಬೆಳಗ್ಗೆದ್ದು
ಕೊಡಲಾಗುತ್ತಿದೆಯೆ ಮುತ್ತು ನಿಮಗೆ?’