ಮುಸ್ಸಂಜೆ ಅಲ್ಲದ ಮುಸ್ಸಂಜೆ

ತಬ್ಬಿಕೊಳಲು ಬಂದ ಹಾಗೆ ಇದೆ ತಂಗಾಳಿ
ಆ ಮುಸ್ಸಂಜೆ ನಾನಿರಲು ಹೂದೋಟದಲ್ಲಿ
ಯಾಕೆ ನೆನಪಾಗುತ್ತದೆ ಮೊದಲ ದಿನ ತೊಡೆ ತೆರೆಯುವ ಮೊದಲು
ಇವಳೂ ಇದ್ದಳಲ್ಲ ಹೀಗೆ ನನ್ನ ಹೃದಯದಲ್ಲಿ

ಆಮೇಲೆ ಇವಳು ಹೂವಾದಳು ಮತ್ತೆ ಹೂದೋಟವಾಗಿ
ಬಂದಳು ಬದುಕಿನಲ್ಲಿ ದಿನಾ ಚಿಗುರಲ್ಲಿ ಚಿಗುರಾಗಿ
ಗಿಡಗಿಡದಿಂ ಚೆಲುಗೊಂಚಲು ಮಿಂಚಲು
ಪಂಜೆಯವರ ತೆಂಕಣ ಗಾಳಿಯಂತೆಯೂ ಒಮ್ಮೊಮ್ಮೆ ಸಿಡಿದು

ಗಾಳಿಯನ್ನು ಅಪ್ಪಿಕೊಂಡಂಥಲ್ಲ ನಾನಿವಳನ್ನು
ಒಪ್ಪಿಕೊಂಡುದು ಬಾಳೆಯಲ್ಲಿ ಬಾಳೆಯ ನಾರಿರುವಂತೆ
ಬಿಡಿಸಿದರೆ ಮತ್ತೂ ಸುತ್ತಿ ಸುತ್ತಿಸುತ್ತಲೆ ಇರುವ
ಬಾಳೆಯೊಳಗಿನ ತಿರುಳು ಕೊಡುವ ಸುಖ ಇವಳ

ಸಂಜೆ ಎನ್ನುವುದು ಸಂಜೆಯಾಗುವುದಿಲ್ಲ ನನಗೆ
ಇವಳು ಬಳಿ ಇರುವಾಗ ಅದು ಮುಂಜಾನೆಯಾಗಿ
ಗರಿಕೆ ಹುಲ್ಲಿನ ಮೇಲೆ ಇರುವ ಮಂಜಿನ ಮುತ್ತು
ಇವಳ ಕಣ್ಣಿನ ಒಳಗೆ ಇರುವಷ್ಟು ದಿವಸ