ಬ್ರಿಟೀಷರ ಭೂಕಂದಾಯವನ್ನು ವಿರೋಧಿಸಿ ನಡೆದ ಹೋರಾಟಗಳು ಅಸಂಖ್ಯ. ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದ ಕತೆ ಮೈನವಿರೇಳಿಸುವಂತಹುದು. ರೈತರ ಕೆಚ್ಚು, ವಿಶ್ವಾಸ, ಹೇಗಾದರೂ ಮಾಡಿ ಬ್ರಿಟೀಷರ ಕಂದಾಯ ಹೊರೆಯಿಂದ ಮುಕ್ತವಾಗಬೇಕು ಎಂಬ ಅವರ ಪ್ರಯತ್ನವನ್ನು ಸಾರುವ  ಘಟನೆಯ  ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಡಾ. ಪುರುಷೋತ್ತಮ ಬಿಳಿಮಲೆ ಮಾಡಿದ್ದಾರೆ.
‘ಅಮರ ಸುಳ್ಯದ ರೈತ ಹೋರಾಟ ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ ಇಲ್ಲಿದೆ.

 

ದೇಶದ ರಾಜಧಾನಿಯಲ್ಲಿ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಮೂರು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಬೀಡುಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಇದಕ್ಕಿಂತ ಸುಮಾರು ಎರಡು ಶತಮಾನ ಮೊದಲು ನಡೆದ ಹೋರಾಟವೇ ಅಮರ ಸುಳ್ಯದ ರೈತ ಹೋರಾಟ. ಟಿಪ್ಪು ಪತನಾನಂತರ ತಮ್ಮ ಅಧಿಕಾರ ವ್ಯಾಪ್ತಿಯಡಿ ಬಂದ ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟವದು. ಆ ಕುರಿತು ಡಾ. ಪುರುಷೋತ್ತಮ ಬಿಳಿಮಲೆಯವರ ಈ ಪುಸ್ತಕ ಪ್ರಕಟವಾಗುತ್ತಿದೆ.

(ಡಾ. ಪುರುಷೋತ್ತಮ ಬಿಳಿಮಲೆ)

ಒಂದು ನೆಲೆಯಲ್ಲಿ ಬ್ರಿಟೀಷ್ ಪರಿಭಾಷೆಯಲ್ಲಿ, ಇನ್ನೊಂದು ನೆಲೆಯಲ್ಲಿ ಜಾತಿ-ಮತಗಳ ಪರಿಗಣನೆಗಳ ನೆಲೆಯಲ್ಲಿ ಇನ್ನೂ ಗ್ರಹಿಸಲ್ಪಡುತ್ತಿರುವ ನಮ್ಮ ಐತಿಹಾಸಿಕ ಹೋರಾಟಗಳನ್ನು ಆ ಮಿತಿಗಳಿಂದ ಮೇಲೆತ್ತಿ ಅವುಗಳಿಗೆ ಕಾರಣವಾದ ಭೂ ಸಂಬಂಧಗಳು, ಅವುಗಳ ಸಾಮಾಜಿಕ-ಚಾರಿತ್ರಿಕ ಹಿನ್ನೆಲೆ, ಬ್ರಿಟೀಷ್ ಆಡಳಿತ ನೀತಿಗಳು, ಅವು ಉಂಟು ಮಾಡಿದ ಪರಿಣಾಮಗಳ ವಾಸ್ತವಿಕ ಚೌಕಟ್ಟಿನಲ್ಲಿ ಮೌಲ್ಯೀಕರಿಸುವ ಅಗತ್ಯವಿದೆ.

ಅಮರ ಸುಳ್ಯ ಹೋರಾಟದ ಆಕರಗಳ ಸಮಗ್ರ ಶೋಧ, ಕೂಲಂಕಷ ಅಧ್ಯಯನ ಮತ್ತು ವಸಾಹತು ಸಂದರ್ಭದಲ್ಲಿ ಭಾರತದ ಪ್ರಬಲ ವರ್ಗಗಳು ಮತ್ತು ಬ್ರಿಟೀಷರ ನಡುವಿನ ಸಖ್ಯದಂಥ ಹಲವು ವಾಸ್ತವಗಳ ಸಂಕೀರ್ಣ ಸಂಬಂಧಗಳ ಕುರಿತು ಇತಿಹಾಸಕಾರರಿಂದ ನಿರ್ಣಾಯಕ ಮೌಲ್ಯೀಕರಣಗಳು ನಡೆಯುತ್ತಿರುವ ಸಂದರ್ಭದಲ್ಲಿ ಬಿಳಿಮಲೆಯವರ ಈ ಪ್ರಯತ್ನ ಸ್ವಾಗತಾರ್ಹವಾಗಿದೆ.


ಈ ಹೋರಾಟವನ್ನು ಕೆಲವರು ಮೊದಲ ಸ್ವಾತಂತ್ರ್ಯ ಹೋರಾಟವೆಂದು ಕರೆಯುವುದಿದೆ. ಅದಕ್ಕಿಂತ ಮೊದಲು 1820ರ ದಶಕದಲ್ಲಿ ನಡೆದ ಕಿತ್ತೂರಿನ ಸಂಗ್ರಾಮವನ್ನೂ ಕೆಲವರು ಹಾಗೆಯೇ ಗುರುತಿಸುವುದಿದೆ. ಒಂದೆರಡು ಅಪವಾದಗಳನ್ನು ಹೊರತು ಪಡಿಸಿ ಸೀಮಿತ ಭೌಗೋಳಿಕ ಘಟಕಗಳಲ್ಲಿ, ಪ್ರತ್ಯೇಕಿತ ರೀತಿಯಲ್ಲಿ ನಡೆದ ಇಂಥ ಬಂಡಾಯಗಳಿಗೆ ಆಲ್ ಇಂಡಿಯಾ ಮಹತ್ವ ಒದಗಿಸಿ ಉಜ್ವಲಗೊಳಿಸುವ ಉತ್ಸಾಹ ಆ ಹೋರಾಟಗಳ ಕಾರಣ-ಪರಿಣಾಮಗಳ, ಅವುಗಳಲ್ಲಿ ಅಡಕವಾದ ಸಮಸ್ಯೆ-ಶಕ್ತಿಗಳ ಸಂಕೀರ್ಣತೆ ಹಿನ್ನೆಲೆಗೆ ಸರಿದು ನಮ್ಮ ಚರಿತ್ರೆ ಹೆಚ್ಚು ಗುಣಗ್ರಾಹಿಯಾದ ಬುನಾದಿಯ ಮೇಲೆ ನಿಲ್ಲುವಲ್ಲಿ ಅಡೆ-ತಡೆಯಾಗಬಾರದು.

(ಪ್ರೊ.ಅಶೋಕ ಶೆಟ್ಟರ್)

ತಮ್ಮ ಅಧ್ಯಯನ-ಅಧ್ಯಾಪನ ವಿಷಯಗಳ ಜೊತೆಗೇ ಇತಿಹಾಸದ ಕುರಿತ ತಮ್ಮ ಆಸಕ್ತಿಯನ್ನೂ ಪೋಷಿಸಿಕೊಂಡು ಬಂದಿರುವ ಡಾ. ಬಿಳಿಮಲೆ, 1980ರ ದಶಕದಲ್ಲಿ ತಮ್ಮದೊಂದು ಅಧ್ಯಯನದ ಕ್ಷೇತ್ರಕಾರ್ಯದ ಅವಧಿಯಲ್ಲಿ ಸುಳ್ಯ ದಂಗೆಯ ಕುರಿತು ತಮ್ಮ ಗಮನಕ್ಕೆ ಬಂದ ಸಂಗತಿಗಳು, ಮೌಖಿಕ ವಿವರಣೆಗಳ ಕುರಿತು ತಾವು ಮಾಡಿಕೊಂಡ ಟಿಪ್ಪಣಿಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ.

ಅಂತಿಮವಾಗಿ ಸೈದ್ಧಾಂತಿಕ ಬುನಾದಿಯ ಮೇಲೆ ಸಂಘಟಿತವಾಗಿ ನಡೆದ ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಜನಶಕ್ತಿ ತೊಡಗಿಕೊಳ್ಳಲು ಪೂರಕವಾಗಿ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಪರಂಪರೆಯನ್ನು ಪೂರ್ವಭಾವಿಯಾಗಿ ನಡೆದ ಇಂಥ ದಂಗೆ – ಹೋರಾಟಗಳು ನಿರ್ಮಿಸಿದ ಮಹತ್ವವನ್ನು ಗುರುತಿಸುತ್ತಲೇ ಅವುಗಳ ಮಿತಿಗಳನ್ನೂ ಅವರು ಗಮನಿಸಿರುವದು ಅವರ ಈ ಪ್ರಯತ್ನವನ್ನು ವಸ್ತುನಿಷ್ಠವಾಗಿಸಿದೆ.