ಸೆರೆಯಾದ ನೆನಪುಗಳು

ಉಕ್ಕಿ ಚೆಲ್ಲದ ಹಾಗೆ, ಬತ್ತಿ ಹೋಗದ ಹಾಗೆ
ಹರಿದು ಖಾಲಿಯಾಗದಿರುವಂತೆ
ಬಿಸಿಲಿಗೆ ಕಾದು ಆವಿಯಾಗದಿರುವಂತೆ
ಸೃಷ್ಟಿಸಿಕೊಂಡಿರುವೆ ಒಂದು ಪುಟ್ಟಕೊಳ

ಇಣುಕಿ ನೋಡಿದರೆ ಅರಳಿದ ನೈದಿಲೆಗಳು
ಸರಸರನೆ ಹರಿವ ಮಿಂಚುಳ್ಳಿ ಮೀನುಗಳು
ಮುಳುಗಿ ಕೂತಿಹ ಭಾರದ ಕಲ್ಲುಗಳು
ದಂಡೆಗಟ್ಟಿದ ಬಾಹುಗಳಲಿ ಸೆರೆಯಾದ ನೆನಪುಗಳು

ಕೈಬಿಟ್ಟು ಸರ ಸರನೆ ಮುನ್ನೆಡೆದು
ಕಳೆದುಹೋದವೆಷ್ಟೋ, ಬೇಕೆಂದೆ ಹಿಂದುಳಿದು
ಮರಳಿ ಕರೆಯಲಾಗದವು ಹಲವು, ಗುಳುಮ್ಮನೆ
ನುಂಗಿ ನೀರು ಕುಡಿಸಿದವು ಇನ್ನೆಷ್ಟೋ

ಹೊರಲಾರೆ ಮಣಭಾರ ಕೆಲವು
ಒಳಹೊಕ್ಕು ಬಳಸಿ ಚೂಪು ಕೊಕ್ಕು
ಕುಟುಕಿ ಶಿಥಿಲಗೊಳಿಸುವ ಮುನ್ನ ಇಳಿಸಿ
ಕಳಚಿಕೊಂಡಿರುವೆ ಎದೆಯ ಭಾರ

ಕಕ್ಕುಲಾತಿಯಿಂದ ಆಯ್ದವು ಕೆಲವೆ
ಮೃದುವಾಗಿ ಮುಚ್ಚಟೆ ಮಾಡಿಟ್ಟಿರುವೆ
ಕೂಡಿಸಿ ಬಿಂದು ಬಿಂದುಗಳನು ಮನಸಿನಲೆ
ಪೋಣಿಸಿದಂತೆ ಹೂವ ಮಾಲೆ

ಎದ್ದಾಗ ತೆರೆಗಳು ಪ್ರತಿ ಬಾರಿ
ಹಿರಿದು- ಕಿರಿದುಗಳಿಲ್ಲ ಅವಕೆ ಅಳತೆಗೋಲೆ?
ಒಲವು, ಉನ್ಮಾದ, ಕನಸು, ಪ್ರೀತಿ, ಹೆಮ್ಮೆ
ಶ್ರೀಮಂತವವು ಒಂದು ಇನ್ನೊಂದರಂತೆ

ಸುಳ್ಳುಗಳೂ ನುಸುಳಿರಬಹುದು
ಕಲ್ಪನೆಗಳು ಕಲೆತಿರಬಹುದು
ಕಾಲದಲಿ ಕೆಲವು ಮಾಗಿರಬಹುದು
ಉತ್ಪ್ರೇಕ್ಷಿತ ಮೇಕಪ್ಪಿನ ಷೋಡಷಿಯರಂತೆ

ಬೇಸರವಿಲ್ಲ, ಸಾಗಿ ಬಂದ ರಹದಾರಿ
ದೊಡ್ಡದಿರುವಾಗ ಅನಿವಾರ್ಯ
ಸೋಸಲೇ ಬೇಕು ಮನದ ನಲಿವಿಗೆಂದು
ಸೆರೆಸಿಕ್ಕವು ನಿಜವೊ- ಸುಳ್ಳೊ ತಿಳಿವ ಆಸೆಯಿಲ್ಲ.