ಪರ್ ಫ್ಲೋರೋ ಕಾರ್ಬನ್ನುಗಳು…

ಇಲ್ಲೀಗ ಆಷಾಡ
ಸುಯ್ಯೆಂಬ ಗಾಳಿಯೊಡಗೂಡಿ ಎಲೆಗಳಿಗೆ
ನೆಲ ಸೇರುವ ಹುನ್ನಾರ…

ದೂರವಿಲ್ಲವಿನ್ನು ಚಳಿಗಾಲ….
ಕೋಟು, ಹ್ಯಾಟು, ಕೈ ಗ್ಲೋವು, ಬೂಟುಗಳು
ಹೊರಬರುವ ವರ್ಷದ ಪರಿಪಾಟ…

ಗೂಡಿನ ತುಂಬ ನೇತಾಡುವ ಬಟ್ಟೆಗಳು
ಗಾಳಿಯ ಹೊಡೆತಕ್ಕೆ ರಕ್ಷಣೆ
ಮಳೆಯ ಜಡಿತಕ್ಕೆ ಪ್ರತಿರೋಧ
ನೀರಹನಿಗಳನು ಹರಳುಗಟ್ಟಿಸಿ ಜಾರಿಸುವ
ಫ್ಲೋರೋಕಾರ್ಬನ್ನುಗಳ ಹೊರಕವಚಗಳು
ಯಾವುದುಡಲೆಂದು ಕಣ್ಣಾಡಿಸುತ್ತ
ಚರಿತ್ರೆಯ ತುಂತುರಲ್ಲಿ ಮೀಯುತ್ತ ನೆನೆದೆ
ಮನುಷ್ಯ ಮಾಡಿದನೆಂತ ಅಪರಾಧ… !

ಒಂದೊಮ್ಮೆ ಆಫ್ರಿಕಾದಿಂದ ಉತ್ತರಕ್ಕೆ
ಶೀತಲಯುಗ ಕೊರೆದ ಬಿಳಿ ಹಿಮದ ಪಶ್ಚಿಮಕ್ಕೆ
ಸ್ಪರ್ಧೆಗಳಿಗೆ ಸ್ಪರ್ಧೆಯಾಗಿ ಹೋದ
ಬಯಸುತ್ತ ಬದಲಾವಣೆ ನಿರ್ದಯಿ ಅನ್ವೇಷಕ
ಸೀಲು-ತಿಮಿಂಗಲಗಳ ಕೊಂದು
ತೊಗಲು -ಕೊಬ್ಬನ್ನು ಹೊದ್ದು
ದಾರಿಯುದ್ದಕ್ಕೂ ಬರೆಯುತ್ತ ತನ್ನದೇ ವಿಕಾರ

ಆಧುನಿಕತೆಯ ನೆಪದಲ್ಲಿ ಐವತ್ತರ ದಶಕದಲಿ
ಪರ್ ಫ್ಲೋರೋಕಾರ್ಬನ್ನುಗಳ ಉರುಳಲ್ಲಿ ಹೊರಳಿ..

ಇದೀಗ ಪರಿಸರ ಕೆಟ್ಟಾಗ ನರಳಿ
ನೀರು ನಿರೋಧಕ, ಪ್ರಕೃತಿಗೆ ಮಾರಕ
ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ
ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ
ಚುಚ್ಚುವ ಅಪರಾಧಿ ಪ್ರಜ್ಞೆಗಳು
ಪರ್ ಫ್ಲೋರೋ ಆಕ್ಟಾನಿಕ್ ಆಸಿಡ್ ಗಳು
ಒಂದೊಂದು ಧಿರಿಸಿನಲು ಸಾವಿರ ಕ್ಯಾನ್ಸರ್ ಕಣಗಳು
ಸಾಗರದ ನೀರು, ಉಣ್ಣುವನ್ನದಿ ಸೇರಿ
ಉಸಿರೆಳೆದರೂ ಒಳ ಸೇರುವ ವಿಷಕ್ಕೆ
ಪರಿಹಾರ ಹುಡುಕುತ್ತ….

ದಕ್ಕದ ಉತ್ತರ, ಬಿಕ್ಕುವ ಎಚ್ಚರ
ಹೊರಬರಲಾಗದ ಕಂದಕಗಳಲಿ
ಮಳೆ, ಗಾಳಿ, ಚಳಿಗೆ ಮೈ ಮುಚ್ಚದೆ ಇಂದು ವಿಧಿಯಿಲ್ಲ… !