ಬೀಗಮುದ್ರಾವಧಿ…
ಕೈ ಚಾಚಿ ಕೈ ಹಿಡಿದು ಕುಲುಕಿದರೆ
ಕಲಕಿಬಿಡುತ್ತಿತ್ತು ಅಂದವರ ಘನತೆ
ಹೃದಯವರಳಿಸಿ ಭಾವಬೆರೆಸಿ ತಬ್ಬಿದರೆ
ಜಾರಿ ಬೀಳುತ್ತಿತ್ತವರ ಪ್ರತಿಷ್ಠೆ
ದೀನರೋ, ದಲಿತರೋ, ದುರ್ಬಲರೋ
ಎಲ್ಲರೂ ಅಸ್ಪೃಷ್ಯರೇ
ಬಡವರೋ, ಬಡಪಾಯಿಗಳೋ
ಹಾರುತ್ತಿದ್ದರವರು ಮೂರು ಗೇಣಾಚೆ
ಕರೆದರೂ ಮನೆಗೆ ಬಾರದವರು
ಮನದ ಕದ ತಟ್ಟಲು ಹಿಂತೆಗೆಯುತ್ತಿದ್ದವರು
ಜೊತೆ ಬೆರೆಯಲು ಈಗ ಕನಸ ಹೊಸೆಯುತಿಹರು
ಅಂತವರ ಘನಕ್ಕೂ ಈಗ ಜಿನುಗುವ ಆರ್ದ್ರತೆ
ಬೇಧವೇ ಇಲ್ಲವೀಗ
ಎಲ್ಲರೂ ದೂರ ಮತ್ತು ಬೇರೆ
ತಟ್ಟನೆ ಎಲ್ಲ ಪುಟ್ಟವೂ ದುಬಾರಿ, ದುರ್ಲಭ
ನಾಲಿಗೆಯೊಣಗಿದಾಗ ನೀರ ಬಯಕೆ
ವೈದ್ಯ ದಾದಿಯರು ಅನಗತ್ಯ ಮುಟ್ಟಿದರೆಂಬ
ದೂರಿಲ್ಲ-ಮುಟ್ಟುವುದೇ ಇಲ್ಲ ಎಂಬ ಬೇಸರಿಕೆ
ಮುಖ ಮುಚ್ಚಿ ತಮ್ಮ ಪರಿಚಯ ಬಚ್ಚಿಟ್ಟರೆಂಬ
ಶಂಕೆಯಿಲ್ಲ-ಖಾಲಿ ದೂರು ಪೆಟ್ಟಿಗೆ
ಆ ಒಂದು ಸ್ಪರ್ಷ, ಬೆಚ್ಚಗಿನದೊಂದು ಅಪ್ಪುಗೆ
ಹತ್ತಿರವೆಂಬ ಆತ್ಮೀಯತೆಯ ಸೊಗಡು
ಎಲ್ಲ ಟ್ರಂಕಿನಲಿ ತುಂಬಿ ಹೊತ್ತೊಯ್ದ ಜೀವಗಳು
ಅಣಕಿಸುತ್ತವೆ ಅವರ ಖಾಲಿ ಕೋಣೆಗಳು
ಮುಟ್ಟಿ, ಮಾತಾಡಿಸಿ, ಸೇರಿ ,ಮುದ್ದಾಡಿ
ಸೈರಿಸಿ, ಸಂತೈಸಿ, ಸಂತೋಷಿಸಿ
ಮನುಷ್ಯರಾಗಿದ್ದವರಿಗೂ ಇದೀಗ
ಕೊರೋನಾ ಮಾರಿಯ ಲಕ್ಷ್ಮಣರೇಖೆ
ಬೀಗುತ್ತ ಬದುಕನಾಳಿದ ಸಮಯಕ್ಕು
ಜೀವನದ ಅವಿರತ ತುಡಿತಗಳಿಗೂ
ಕೋವಿಡ್ ಮಾರಿಯ ರುದ್ರ ನರ್ತನದ ನಡುವೆ
ಲಾಕ್ ಡೌನ್ ಎಂಬ ಬೀಗ ಮುದ್ರಿಕೆ.

ಲೇಖಕಿ ಮತ್ತು ದಂತವೈದ್ಯೆ. ಮೂಲತಃ ತುಮಕೂರಿನವರು. ಕಳೆದ ಹದಿನೈದು ವರ್ಷಗಳಿಂದ ಇಂಗ್ಲೆಂಡ್ ನಿವಾಸಿ. ಬಾಲಕಿಯಾಗಿರುವಾಗಲೇ ಬರೆಯಲು ತೊಡಗಿದ್ದವರು ಈಗ ಇಂಗ್ಲೆಂಡಿನ ಕನ್ನಡಕೂಟಗಳ ಒಡನಾಟದಲ್ಲಿ ಮತ್ತೆ ಬರವಣಿಗೆ ಮುಂದುವರೆಸಿದ್ದಾರೆ.
ಚೆನ್ನಾಗಿದೆ
ಧನ್ಯವಾದಗಳು ಅಂಜನಾ ಗಾಂವ್ಕರ್ .
ಚೆನ್ನಾಗಿದೆ.
ಧನ್ಯವಾದಗಳು ರಾಜು.
ಸುಂದರ ಚಿಂತನೆಗೆಳಿಂದ ಮಾತ್ರ ಸುಂದರ ಬರಹ ಸಾಧ್ಯ. ಸಮಯಕ್ಕೆ ತಕ್ಕ ಕವನ. ನನಗೆ ಅರ್ಥವಾಗದಿರುವ ಸಂಗತಿ ಎಂದರೆ ಅನುಬವಿದರಿಗಿಂತಾ ಉತ್ತಮವಾಗಿ ಕಲ್ಪಸಿ ಸತ್ಯವನ್ನೇ ಬರೆಯಲು ಹೇಗೆ ಸಾಧ್ಯವಾಯಿತು ಎಂಬುದು?
ಓದಿ ಅಭಿಮಾನದಿಂದ ಕಮೆಂಟಿಸಿದ್ದಕ್ಕೆ ಮೂರ್ತಿಯವರಿಗೆ ಧನ್ಯವಾದಗಳು.