ಜನನಾಯಕಿ

ಆತ್ಮೀಯರೇ ಅಣ್ಣತಮ್ಮಂದಿರೇ
ಪುತ್ರರೇ ಮಿತ್ರರೇ
ಗೆಳೆಯರೇ ಸ್ನೇಹಿತರೇ
ಎಲ್ಲ ಶಬ್ದಗಳೂ
ಗಂಡಂದಿರೇ ಎಂದು
ಕೇಳಿಸಿಕೊಳ್ಳುವ ಮಹಾಮಹಿಮ ಕಾಲವಿದು

ಪುಟ್ಟ ಮಗಳ ಸ್ಕೂಲು ಬ್ಯಾಗು
ರಕ್ತವಾಗಿದೆ
ಎಣ್ಣೆ ಹಚ್ಚಿ ತಲೆ ಬಾಚಿ ಟೇಪು ಕಟ್ಟಿ ಜಡೆ ಹೆಣೆದು
ಮುಡಿಸಿದ ಗುಲಾಬಿ ಹೂವಿನ ಪಕಳೆಗಳು
ಚೆಲ್ಲಾಡಿ ಹೋಗಿವೆ
ಜನಸೇವೆಗೆ ಹೊರಟ ಜನನಾಯಕಿಯ ಸುತ್ತ
ಶಂಕೆಗಳ ಮುಳ್ಳುಗುಂಡನ್ನು
ಬಿಡದೇ ಎಸೆಯಲಾಗುತ್ತಿದೆ
ನವರಾತ್ರಿಯಲಿ ಆದಿಶಕ್ತಿಯ ಆರಾಧನೆ
ವೈಭವದಿಂದ ನಡೆದಿದೆ
ಮೆರವಣಿಗೆಯ ತುಂಬಾ ಕಳಸ ಹೊತ್ತವರ ನಡುವೆ
ನಾಯಕನೆನ್ನುವ ಸೊಲ್ಲು ನಡೆದು ಬರುತ್ತಿದೆ
ಎಗ್ಗಿಲ್ಲದೇ ಮಾತನಾಡುವರ ಮುಖಪುಟದ ತುಂಬಾ
ದೇವಾನುದೇವತೆಗಳು ನಾಯಕ ಮಹಾನಾಯಕರು
ತುಂಬಿ ಹೋಗಿದ್ದಾರೆ

ಜೋಗುಳ ಮರೆತ ಕಿವಿಗಳಿಗೆ
ಪ್ರತೀ ಸದ್ದೂ ಪ್ರಣಯಗೀತೆ
ಚಪ್ಪರಿಸಿಕೊಂಡು ಕುಡಿದ ಎದೆಯಾಲು
ಮದಿರೆಯೆನ್ನುವನಿಗೆ
ಮಡಿಲೂ ಹರಡಿ ಹಾಸಿದ ಹಾಸಿಗೆ
ನಾಲಿಗೆಗೆ ನಂಜು ಏರಿದರೆ
ಮೈಯೆಲ್ಲಾ ಕಕ್ಕುವ ವಿಷ
ಸತ್ಯಕ್ಕೆ ಜಿಡ್ಡು ಇನ್ನೆಷ್ಟು ಸವರುತ್ತೀರಿ
ಕನ್ನಡಿ ತೊಳೆದ ಮೇಲೆ ಫಳಗುಡುತ್ತದೆ
ಹಡೆದವ್ವನ ಮುಖ
ಇನ್ನೂ ಸ್ಪಷ್ಟವಾಗಿ ಕಂಡೇ ಕಾಣುತ್ತದೆ

ದೇಹ ವರವೋ ಶಾಪವೋ
ನಿಮಗೆ ತಿಳಿಯುವ ಕಾಲ
ದೂರವಿಲ್ಲ ಮಿತ್ರರೇ
ಶೀಲ ನಡತೆ ಚಾರಿರ್ತ್ಯಕ್ಕೆ
ಸ್ತ್ರೀಲಿಂಗ ಪುಲ್ಲಿಂಗದ ಚರಿತ್ರೆ ಮೆತ್ತುವ
ನಿಮ್ಮನ್ನು ಕಂಡು ನಗೆಯು ಬರುತಿದೆ

ಫೇಸ್ ಬುಕ್ ವಾಲಿನ ತುಂಬಾ
ಅವಳಿಗೆ ಇಷ್ಟು ಜನ ಗಂಡಂದಿರು
ಇವಳಿಗೆ ಅಷ್ಟು ಜನ ಗಂಡಂದಿರು
ಮತ್ತೊಬ್ಬಳಿಗೆ ಲೆಕ್ಕವಿಲ್ಲದಷ್ಟು ಇದೇ ಸುದ್ದಿ
ಈಗ ಹೆಣ್ಣಿನ ಬಗೆಗಿನ ಗಾಸಿಪ್ಪಿನ ಸುದ್ದಿಗಳು
ಕುಟುಂಬವನ್ನೂ ದಾಟಿದ
ಸಾರ್ವತ್ರಿಕ ಸನ್ನಿ

ಇನ್ನೂ ಎಷ್ಟು ನವರಾತ್ರಿಗಳು ಬರಬೇಕು?
ಇನ್ನೆಷ್ಟು ಸರಿರಾತ್ರಿಗಳೂ ಸದ್ದಿಲ್ಲದೇ
ಚಿತೆಯಲ್ಲಿ ದಹಿಸಿಹೋಗಬೇಕು?
ಮತ್ತೆಷ್ಟು ಚುಣಾವಣೆಗಳು
ಸುಮ್ಮ ಸುಮ್ಮನೇ ನಡೆದುಹೋಗಬೇಕು?

ಆತ್ಮೀಯರೇ
ಅಣ್ಣತಮ್ಮಂದಿರೇ
ಬಂಧುಗಳೇ ಸ್ನೇಹಿತರೇ
ನಿಮ್ಮ ಪ್ರಿಯತಮೆ ಲೋಕದ ಗಂಡಸರ
ಹೆಂಡತಿ ಅಲ್ಲ ಅಲ್ಲವೇ?