ಹೂದೋಟದ ಬೆಂಚು ಮತ್ತು ಗುಲಾಬಿ

ಹೂದೋಟದ ಬೆಂಚಿನ ಮೇಲೆ
ಕುಳಿತಾಗಲೆಲ್ಲ ಸುಳಿದ ಗಾಳಿಗುಂಟ
ಇತ್ತೀಚೆಗೆ ಅವನು ಹೇಳಿದ ಮಾತು
ನೆನಪಾಗಿ ಮೈ ಪುಳಕಗೊಳ್ಳುತ್ತದೆ

ಏ ಗುಲಾಬಿ ನೀನಂದ್ರೆ ನಂಗಿಷ್ಟ
ಅವನು ಪ್ರೀತಿಸುತ್ತಿದ್ದಾನೆ
ನನ್ನನ್ನು ಆ ಗುಲಾಬಿಯನ್ನು
ಮತ್ತೆ ನಾನು ಅವನನ್ನು ಅವನ
ಮೋಹಕ ಕಣ್ಣುಗಳನ್ನು

ಗುಲಾಬಿಯನ್ನೊಮ್ಮೆ ಸಂಭ್ರಮದಿಂದ
ಬೊಗಸೆಯಲ್ಲಿ ಹಿಡಿದು ಕಣ್ಣಿಗೆ ಒತ್ತಿ,
ಬಿಸಿ ಉಸಿರ ತುಟಿಯಿಂದ
ಚುಂಬಿಸಬಹುದೆಂಬ ನಿರೀಕ್ಷೆಯಲ್ಲಿ
ನಿತ್ಯವೂ ಹೂದೋಟದ
ಬೆಂಚಿನ ಮೇಲೆ ಕಾಯುತ್ತಿರುತ್ತೇನೆ.

ಮುಸ್ಸಂಜೆ ಆಗುವ ಮುಂಚೆ
ಬೀಸಿದ ತಂಗಾಳಿಗೆ ಮೈಯೊಡ್ಡಿ
ಬೇಂದ್ರೆ ಅಜ್ಜನ ಸಾಲು ಗುನುಗುನಿಸುತ್ತಿರುತ್ತೇನೆ
ಮುಗಿಲ ಮಾರಿಗೆ ರಾಗರತಿಯ
ನಂಜ ಏರಿತ್ತ ಆಗ ಸಂಜೆಯಾಗಿತ್ತ.

ಪ್ರೀತಿಯಿಂದ ನಾನಿಟ್ಟ ಹೆಸರು
ಕರಡಿ,ಅವನು ಸುಬ್ಬಿ
ದಿನವೂ ಅವನೊಂದಿಗೆ ಕಾಲು ಕೆದರಿ
ಜಗಳವಾಡದಿದ್ದರೆ ನಮ್ಮ ಪ್ರೀತಿಗೆಲ್ಲಿಯ ಅರ್ಥ.

ಅವನದೋ ಮುಗ್ಧ ಮನಸ್ಸು
ಅಂತರಾಳದಲ್ಲಿ ಅಷ್ಟೇ ಅಗಾಧ ಸ್ನೇಹ
ಪ್ರೀತಿ ಬಿಚ್ಚಿ ಹೇಳದ ಜಾಣ ಹುಡುಗ

ಗುಲಾಬಿಯಂತೆ ನಾನು ಕಾಯುತ್ತಿದ್ದೇನೆ.
ಬೆಚ್ಚನೆ ಎದೆಯಲ್ಲಿ ಮುಖ ಹುದುಗಿಸಿ
ಅರಳಿ ಸಾರ್ಥ್ಯಕ್ಯ ಪಡೆಯಬೇಕೆಂಬ ದಿನಕ್ಕಾಗಿ

ಅವನೊಮ್ಮೆ ಹಣೆಗಿತ್ತ
ಮುತ್ತಿನ ಮತ್ತು
ಈವರೆಗೂ ಇಳಿದೆ ಇಲ್ಲ .
ನನ್ನ ಸುತ್ತಲಿರುವ ಮುಳ್ಳುಬೇಲಿಗಾಗಿ
ಮಾತ್ರ ಅವನು ಹೆದರಿಲಿಕ್ಕಿಲ್ಲ
ಮೂಲತಃ ಅವನೋ ಪುಕ್ಕಲು.

ಅವನಿಗೂ ನನ್ನಂತೆ ಬೊಗಸೆ ತುಂಬ
ಅರಳಿದ ಮುಖ ಹಿಡಿದು ಚುಂಬಿಸಿ
ಪ್ರೀತಿ ಹೇಳಿಕೊಳ್ಳುವ ತವಕವಿರಬಹುದು.

ಕಾಯುತ್ತಿರುವೆ ಅದೇ
ಹೂದೋಟದ ಬೆಂಚಿನ ಮೇಲೆ
ಗುಲಾಬಿ ಅರಳಿದ ಗಿಡದ ಪಕ್ಕದಲ್ಲಿ
ಪ್ರೀತಿಗಾಗಿ ಮತ್ತು ಮುತ್ತಿಗಾಗಿ