ಯಾವ ಇರುಳೂ ನಿಟ್ಟುಸಿರಿನ ಗಳಿಗೆಯಾಗಲಿಲ್ಲ

ಸುಳ್ಳಲ್ಲ;
ಉತ್ಪ್ರೇಕ್ಷೆಯ ಮಾತಲ್ಲ;
ಸಪ್ತಪದಿ ತುಳಿದು ಸಪ್ತವರ್ಷಗಳು ಕಳೆದರೂ
ಪ್ರೀತಿ ಸ್ವರ್ಣದ ಕಟ್ಟು ತುಸುವೂ ಮುಕ್ಕಾಗಿಲ್ಲ
ಯಾವ ಇರುಳೂ ನಿಟ್ಟುಸಿರಿನ ಗಳಿಗೆಯಾಗಲಿಲ್ಲ

ಹಗಲಿನ ಹೆಗಲಿನ ಮೇಲೆ
ವಾಯು ವಿಹಾರ, ಸಂತೆ, ಪೇಟೆಗೆ
ನಾವು ಜೋಡಿ ಸವಾರಿ ಮಾಡುವಾಗ
ಎದುರುಗೊಂಡವರು ಕೆಲಸ ಮುಗಿಯಿತೆ?
ಉಪಹಾರ, ಊಟ, ಚಹಾ ಇತ್ಯಾದಿ….
ಆಯ್ತೇ? ಎಂದು ಮನದುಂಬಿ ನಕ್ಕು
ಮುಂದೆ ಕ್ರಮಿಸಿದವರ ಜೀವ ಪ್ರೀತಿಗೆ
ಕೊನೆ ಉಂಟೆ?

ಹಗಲು ಹಾಲ್ಗುಡಿದು
ಇರುಳಿಗೆ ಮೈ ಚಾಚಿದಾಗ
ದಿನದ ಕೆಲಸ, ಕಾರ್ಯ;
ಇಬ್ಬರ ಇರುಸು, ಮುನಿಸು;
ಸೋಲು, ಗೆಲವುಗಳ ಸರ್ವ ಸಮರ್ಪಣೆ
ಮೇಲಾಗಿ ರಾಜಿ ಸೂತ್ರ
ಕ್ಷಣ ಗಳಿಗೆಯಲಿ
ಹಮ್ಮು, ಬಿಮ್ಮುಗಳೆಲ್ಲ ಹಿಮ್ಮುಖವಾಗಿ
ತೆರಳಿ, ಕರಗಿ ಶುದ್ಧ ಪ್ರೀತಿಯ ಹಾಲು
ಗೋವು ಕರುವಿಗೆ ಉಣಿಸಿದಂತೆ
ನಮ್ಮ ಇರುವಿಕೆ

ಮಗ್ಗಲು ಬದಲಿಸಿದಾಗೊಮ್ಮೊಮ್ಮೆ
ಜೇನು ಕನಸಿನ ನಿದ್ರೆ ರುಚಿಯು
ಕೋಳಿ ಕೂಗಿ, ಬೆಳಗಿನ ಸೂಚನೆ ನೀಡಿರಲು
ಇಷ್ಟು ಬೇಗ ಬೆಳಗಾಯಿತೆ?
ಇರುಳು ಇನ್ನೊಂದಿಷ್ಟು ದೊಡ್ಡದಾಗಬಾರದೆ?
ಎಂದು ಅದೆಷ್ಟೋ ಸಲ ಅವಳು, ನಾನು ಅಂದುಕೊಂಡಿಲ್ಲವೆ?

ಚಂದ್ರ ತುರುಬಿನ ತುಂಬಾ
ಅವಳು ಮುಡಿದು ಮಲ್ಲಿಗೆ
ಹೂಗಂಪುಗಳ ಮಳೆ ಹೊಯ್ದು
ಮರೆಸುವುದು ನೋವುಗಳ ಬರವು
ನಡೆಯರಿತು ನುಡಿದು, ನುಡಿಯರೆತು ನಡೆದು
ಬಾಳ ಪಯಣದ ಕೃತಿಗೆ ಮುನ್ನುಡಿ, ಬೆನ್ನುಡಿ
ಆಗಿರುವೆವು ಅವಳು, ನಾನು!!

ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, ‘ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.