ದೆಹಲಿಗೆ ಸಿನಿಮಾ ಪ್ರವೇಶಿಸಿದ್ದು ಸ್ವಲ್ಪ ತಡವಾಗಿ. ಮುಂಬಯಿ, ಬೆಂಗಳೂರಿಗೆಲ್ಲಾ ಸಿನಿಮಾ ಮಂದಿರ ಬಂದ ಕೆಲ ವರ್ಷಗಳ ನಂತರ ದೆಹಲಿಗೂ ಸಿನಿಮಾ ಮಂದಿರಗಳ ಸಾಲು ಸಾಲು ಪ್ರವೇಶವಾಯ್ತು. ಸ್ವಾತಂತ್ರ್ಯ ಬಂದ ದಿನಗಳಲ್ಲಿ ದೆಹಲಿಯೆಂದರೆ ಕೇವಲ ಹಳೆ ದೆಹಲಿ, ಕರೋಲ್ ಭಾಗ್ ಮತ್ತು ಲುಟ್ಯೆನ್ ಕಟ್ಟಿದ ಭವ್ಯ ರಾಜಧಾನಿ ನವದೆಹಲಿ ಮಾತ್ರ. ಈಗಿನ ಪ್ರಗತಿ ಮೈದಾನ್ ಪೂರ್ವದಲ್ಲಿ, ನಿಜಾಮುದ್ದೀನ್ ದರ್ಗಾ ಮತ್ತು ಸಫ್ ದರ್ ಜಂಗ್ ದಕ್ಷಿಣದಲ್ಲಿ ದೆಹಲಿಯ ಗಡಿಗಳು. ಸಿನಿಮಾ ನೋಡಲು, ವ್ಯಾಪಾರ, ವ್ಯವಹಾರ ಮಾಡಲು ಜನ ಹೋಗುತ್ತಿದ್ದುದು ಹಳೆ ದೆಹಲಿ ಅಥವಾ ಕನಾಟ್ ಪ್ಲೇಸ್ ಗೆ.

ಒಂದು ಕಾಲದಲ್ಲಿ ಇಡೀ ದೆಹಲಿಯಲ್ಲೇ ಅತ್ಯಂತ ಎತ್ತರದ ಕಟ್ಟಡ ಎನ್ನುವ ಖ್ಯಾತಿ ಡಿಲೈಟ್ ಸಿನಿಮಾ ಥಿಯೇಟರ್ ನದ್ದು. ಇಲ್ಲಿಗೆ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಜಯಪ್ರಕಾಶ್ ನಾರಾಯಣ್, ವಾಜಪೇಯಿ, ನೂತನ್, ರಾಜ್ ಕಪೂರ್ ಕೂಡಾ ಸಿನಿಮಾ ನೋಡಲು ಬರುತ್ತಿದ್ದರಂತೆ. ಈಗ ದೆಹಲಿಯ ಬಹುಪಾಲು ಜನರಿಗೆ ಡಿಲೈಟ್ ಎಂದರೆ ಎಲ್ಲಿದೆ ಎಂದೂ ಗೊತ್ತಿಲ್ಲ. ಶೀಲಾ ಥಿಯೇಟರ್ ಬಾಗಿಲು ಹಾಕುತ್ತಾರೆ ಎನ್ನುವ ವದಂತಿ ಬಹಳ ದಿನಗಳಿಂದ ಇದೆ. ಹಾಗಾದರೆ ಪಹಾಡ್ ಗಂಜ್ ನ ಹಳೆಯ ಇತಿಹಾಸದ ಸಾಕ್ಷಿಯೊಂದು ಗತಕಾಲ ಸೇರುತ್ತದೆ.

ಮೊಗಲರ ಕಾಲದ ಹಳೆದೆಹಲಿ ಮತ್ತು ಶೇಕಡಾ ನೂರರಷ್ಟು ಬ್ರಿಟೀಷ್ ಕಾಲದ ಹೊಸ ದೆಹಲಿ ನಡುವೆ ಇರುವುದು ನವ ದೆಹಲಿ ರೈಲು ನಿಲ್ದಾಣ, ಪಂಚ್ ಕುಯಿನ್ ರಸ್ತೆ ಮತ್ತು ಮಿಂಟೋ ಬ್ರಿಡ್ಜ್. ಇಲ್ಲಿನ ಭವ್ಯ ಕನಾಟ್ ಪ್ಲೇಸ್ ನಲ್ಲಿ ಆ ಕಾಲದ ನಾಲ್ಕು ಸಿನಿಮಾ ಥಿಯೇಟರ್ ಗಳು ಇನ್ನೂ ಇವೆ. ನಾನು ದೆಹಲಿಗೆ ಬಂದಾಗ ಹಳೆಯ ಆಕಾರದಲ್ಲೇ ಇದ್ದ ಔಟರ್ ಸರ್ಕಲ್ ನ ರಿವೋಲಿ ಚಿತ್ರಮಂದಿರ ಈಗ ರಿವೋಲಿ ಪಿವಿಆರ್ ಆಗಿದೆ. ಒಳಭಾಗದ ಪ್ಲಾಜಾ ಈಗ ಪಿವಿಆರ್ ಪ್ಲಾಜಾ ಮತ್ತು ಓಡಿಯನ್ ಈಗ ಬಿಗ್ ಸಿನೆಮಾ ಆಗಿದೆ. ಆದರೆ ರೀಗಲ್ ಮಾತ್ರ ಹಾಗೆಯೇ ಇದೆ.

ಜಿಲೇಬಿ ಮತ್ತು ಗುಲಾಬ್ ಜಾಮೂನ್ ಗಳು ದೆಹಲಿಯ ಜನರ ಅತ್ಯಂತ ಪ್ರೀತಿ ಪಾತ್ರ ಸಿಹಿ ತಿಂಡಿಗಳು. ಬೆಳಿಗ್ಗೆ ಆರಕ್ಕೇ ಇವುಗಳ ಸಮಾರಾಧನೆ ಇಲ್ಲಿ ಆರಂಭವಾಗುತ್ತದೆ. ಹಳೆ ದೆಹಲಿಯಲ್ಲಿರುವಷ್ಟು ಹಳೆ ಕಾಲದ ಜಾಮೂನ್ ಮತ್ತು ಜಿಲೇಬಿ ಅಂಗಡಿಗಳು ಮತ್ತೆಲ್ಲೂ ಇಲ್ಲ. ಚಾಂದಿನಿ ಚೌಕದ ಶೀಶ್ ಗಂಜ್ ಗುರುದ್ವಾರದ ಹತ್ತಿರ ಇರುವ ಓಲ್ಡ್ ಫೇಮಸ್ ಜಲೇಬಿವಾಲಾ ಅಂಗಡಿಗೆ ಸುಮಾರು ಮೂರು ನೂರು ವರ್ಷ. ಷಹಜಹಾನ್ ಕಾಲದಿಂದ ಇಲ್ಲಿಯೇ ಜಿಲೇಬಿ ಮಾಡುತ್ತಿದ್ದೇವೆ ಎಂದು ಅಂಗಡಿಯ ಈಗಿನ ಮಾಲೀಕ ಹೇಳುತ್ತಾರೆ. ಈ ಅಂಗಡಿಯ ಜಿಲೇಬಿ ಮಾಡುತ್ತಿದ್ದಂತೆಯೇ ಖಾಲಿಯಾಗುತ್ತದೆ. ದೂರ ದೂರದಿಂದ ಜಿಲೇಬಿಗಾಗಿ ಜನ ಇಲ್ಲಿಗೆ ಬರುತ್ತಾರೆ. ಮಹಾತ್ಮಾ ಗಾಂಧಿ ಕೂಡಾ ಇಲ್ಲಿಯ ಜಿಲೇಬಿ ತಿನ್ನುತ್ತಿದ್ದರಂತೆ. ಇಳಿ ಸಂಜೆಯಲ್ಲಿ ಇಲ್ಲಿ ಜಿಲೇಬಿಯ ವ್ಯಾಪಾರದ ಭರಾಟೆ ಜೋರಾಗುತ್ತದೆ. ಜನ ಕ್ಯೂ ನಿಂತು ಜಿಲೇಬಿ ಕೊಳ್ಳುತ್ತಾರೆ.

ಇಲ್ಲಿಂದ ಒಂದು ಕಿಲೋ ಮೀಟರ್ ದೂರದ ಚಾವಡಿ ಬಜಾರ್ ನಲ್ಲಿರುವ ಸಸ್ಯಾಹಾರಿ ಹೋಟೆಲ್ ನ ಹೆಸರೇ ಶಾಖಾಹಾರಿ. ಇದೂ ಶತಮಾನ ಹಳೆಯದು. ಜಾಮಾ ಮಸೀದಿ ಹತ್ತಿರ ಇರುವ ಕರೀಮ್ಸ್ ಹೋಟೆಲ್ ದೆಹಲಿಯ ಪ್ರಪಂಚ ಪ್ರಸಿದ್ದ ಹೋಟೆಲ್. ಇಲ್ಲಿನ ಬಿರಿಯಾನಿ, ರೋಟಿ, ಚಿಕನ್ ಮುಂತಾದವುಗಳು ಜಗದ್ವಿಖ್ಯಾತ. ಇದನ್ನು ಹುಡುಕಿಕೊಂಡು ದೂರ ದೂರದಿಂದ ಪ್ರವಾಸಿಗರು, ಸ್ಥಳೀಯರು ಬರುತ್ತಾರೆ. ಕರೀಮ್ಸ್ ಹೊಟೆಲ್ ನ ಪೂರ್ವಜರು ಮೊಗಲರ ಅಡುಗೆಯವರಾಗಿದ್ದರಂತೆ. ಮೊಗಲರ ಅವಸಾನದ ನಂತರ ಕಳೆದ ಶತಮಾನದ ಆರಂಭದಲ್ಲಿ ಸಣ್ಣದಾಗಿ ಆರಂಭಿಸಿದ ಹೋಟೆಲ್ ಈಗ ಬೃಹದಾಕಾರವಾಗಿ ಬೆಳೆದಿದೆ. ಕರೀಮ್ಸ್ ನಿಂದ ಮೇಲಕ್ಕೆ ಹೋದರೆ ಸುಮಾರು ಒಂದು ಕಿಲೋ ಮೀಟರ್ ದೂರದ ರಸ್ತೆಯಲ್ಲಿ ಎರಡೂ ಕಡೆ ಆಹ್ವಾನ ಪತ್ರಿಕೆಗಳನ್ನು ತಯಾರು ಮಾಡುವ ಅಂಗಡಿಗಳಿವೆ. ಇಡೀ ದೇಶದ ಅತಿ ದೊಡ್ಡ ಆಹ್ವಾನ ಪತ್ರಿಕೆಗಳ ಮಾರುಕಟ್ಚೆಯಿದು. ಈ ರಸ್ತೆಯ ಆರಂಭದಲ್ಲಿ ಕಿವಿಯ ಕುಗ್ಗೆ ಕೀಳುವ ಜನ ಕೆಂಪು ಟೋಪಿ ಧರಿಸಿ ಇನ್ನೂ ಗಿರಾಕಿಗಳಿಗಾಗಿ ಕಾಯುತ್ತಿರುತ್ತಾರೆ. ಈ ಪ್ರದೇಶದ ಕೆಲವು ರಸ್ತೆ ಪಕ್ಕದ ಕ್ಷೌರಿಕರು ಗಿರಾಕಿಗಳನ್ನು ಆಕರ್ಷಿಸಲು ತಮ್ಮ ವಂಶಜರು ಮೊಗಲರ ಕ್ಷೌರಿಕರಾಗಿದ್ದರು ಎಂದು ಫುಂಗಿ ಬಿಡುತ್ತಿರುತ್ತಾರೆ. ನಮ್ಮಲ್ಲಿ ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎನ್ನುವ ಗಾದೆ ಇದೆಯಲ್ಲ.

ಹಾಗೆಯೇ ದೆಹಲಿಯಲ್ಲಿ ಮದುವೆಯ ಸಮಯ ಬಂದಾಗ ದೆಹಲಿಯ ಎಲ್ಲರೂ ಚಾಂದಿನಿ ಚೌಕಕ್ಕೆ ಬರಲೇಬೇಕು ಎನ್ನುವ ಗಾದೆ ಇದೆ. ಮದುವೆ ಬಟ್ಟೆ ಮಾರುವ ನೂರಾರು ಪುರಾತನ ಅಂಗಡಿಗಳು ಇಲ್ಲಿವೆ. ವಧುವಿನ ಲೆಹಂಗಾ ಕೊಳ್ಳಲು ಬಹುತೇಕ ಎಲ್ಲರೂ ಇಲ್ಲಿಗೆ ಬಂದೇ ಬರುತ್ತಾರೆ. ಇಲ್ಲಿನ ಬಟ್ಟೆ ಅಂಗಡಿಗಳ ಬಗ್ಗೆ ನೂರಾರು ಪುಟ ಬರೆಯಬಹುದು.

ಚಾಂದಿನಿ ಚೌಕದಿಂದ ಒಂದು ಕಿಲೋ ಮೀಟರ್ ದೂರದ ಹಳೆ ದೆಹಲಿ ರೈಲು ನಿಲ್ದಾಣ ಸುಂದರವಾದ ಬ್ರಿಟಿಷ್ ಕಟ್ಟಡ. 1864 ರಲ್ಲಿ ಕಟ್ಟಿದ ಇದು ಇಂದಿಗೂ ತನ್ನ ಸೌಂದರ್ಯ, ಪ್ರಾಮುಖ್ಯತೆ ಉಳಿಸಿಕೊಂಡಿದೆ. ಇದು ದೇಶದ ಅತಿ ದೊಡ್ಡ ಮತ್ತು ಬ್ಯುಸಿಯಾದ ರೈಲು ನಿಲ್ದಾಣಗಳಲ್ಲಿ ಒಂದು. ಜಮ್ಮು, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಾಂಡ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಹೋಗುವ ರೈಲುಗಳು ಇಲ್ಲಿಂದಲೇ ಹೊರಡುತ್ತವೆ. ಪಾಕಿಸ್ತಾನಕ್ಕೆ ಹೋಗುವ ಸಂಮ್ ಝೋತಾ ಎಕ್ಸ್ ಪ್ರೆಸ್ ರೈಲು ಕೂಡಾ ಇಲ್ಲಿಂದಲೇ ಹೊರಡುವುದು. 2001 ರ ಡಿಸೆಂಬರ್ 13 ರ ಸಂಸತ್ ಕಟ್ಟಡದ ಮೇಲೆ ಭಯೋತ್ಪಾದಕ ಧಾಳಿ ನಂತರ ಈ ರೈಲಿನ ಸಂಚಾರ ಕೆಲ ವರ್ಷ ರದ್ದಾಗಿತ್ತು. ಈ ರೈಲಿನ ಕೊನೆಯ ಪ್ರಯಾಣ ವರದಿ ಮಾಡಲು 2001 ರ ಡಿಸೆಂಬರ್ ನ ಕೊರೆಯುವ ಚಳಿಯಲ್ಲಿ ನಾನು ರಾತ್ರಿ ಹನ್ನೊಂದರ ಸುಮಾರಿಗೆ ಇಲ್ಲಿಯೇ ಇದ್ದೆ. ಆ ರಾತ್ರಿ ತಮ್ಮ ಬಂಧು, ಬಾಂಧವರನ್ನು ಬೀಳ್ಕೊಡಲು ಬಂದ ಜನ ರೋದಿಸುತ್ತಿದ್ದ ದೃಶ್ಯ ನನ್ನನ್ನು ಇಂದಿಗೂ ಕಾಡುತ್ತಿದೆ. ದೇಶ ವಿಭಜನೆಯಾದಾಗ ಈ ಜನ ಅದೆಂತಹಾ ಸಂಕಟ ಅನುಭವಿಸಿರಬಹುದು?

ನಾನು ಈ ಕಡೆ ಬಂದಾಗಲೆಲ್ಲಾ ರೈಲು ನಿಲ್ದಾಣ ಹೊಕ್ಕು ಸ್ವಲ್ಪ ಹೊತ್ತು ಜನರ ಜೊತೆ ಬೆರೆತು ವಾಪಸಾಗುತ್ತೇನೆ. ಇಲ್ಲಿಂದ ಮುಂದೆ ಕಾಶ್ಮೀರಿ ಗೇಟ್ ದಾಟಿದ ನಂತರ ಸಿವಿಲ್ ಲೈನ್ಸ್ ನಲ್ಲಿರುವ ಒಬೆರಾಯ್ ಮೈಡನ್ಸ್ ದೆಹಲಿಯ ಮೊಟ್ಟ ಮೊದಲ ಪಂಚತಾರಾ ಹೊಟೆಲ್. 1903 ರಲ್ಲಿ ಕಟ್ಟಿದ ಈ ಭವ್ಯ ಹೊಟೇಲ್ ಇಂದಿಗೂ ತನ್ನ ಗಾಂಭೀರ್ಯ, ಸೌಂದರ್ಯ ಉಳಿಸಿಕೊಂಡಿದೆ. ಚಳಿಗಾಲದಲ್ಲಿ ಇದರ ಲಾನ್ ನಲ್ಲಿ ಕನಿಷ್ಟ ಐದು ನೂರು ವರ್ಷ ಹಳೆಯದಾದ ಆಲದ ಮರದ ಹತ್ತಿರ ಕುಳಿತು ಚಹಾ, ಕಾಫಿ ಹೀರುವುದು ನನ್ನ ಅಚ್ಚು ಮೆಚ್ಚಿನ ಕೆಲಸಗಳಲ್ಲೊಂದು. ಪ್ರತಿ ವರ್ಷ ನಾನು ಚಳಿಗಾಲಕ್ಕಾಗಿ ಎದುರು ನೋಡುತ್ತಿರುತ್ತೇನೆ. ಇದರ ಎದುರಿನ ಲಡ್ಲೋ ಕ್ಯಾಸಲ್, ಪಕ್ಕದ ಮೇಸೋನಿಕ್ ಕ್ಲಬ್ ಗಳೂ ಭವ್ಯ ಬ್ರಿಟಿಷ್ ಇತಿಹಾಸ ಹೊಂದಿವೆ.

ಹಳೆ ದೆಹಲಿಯಲ್ಲಿ ಅಲೆದಾಡಿ ಡಿ.ಪಿ.ಸತೀಶ್ ಬರೆದದ್ದು

ಬೆಳಿಗ್ಗೆ ಎದ್ದಾಗ ಏಳು ಗಂಟೆ. ನನ್ನ ಫ್ಲಾಟ್ ನ ಬಾಲ್ಕನಿಗೆ ಹೋದಾಗ ಎಲ್ಲೆಲ್ಲೂ ಮಬ್ಬು ಕವಿದಿತ್ತು. ಸೂರ್ಯನ ಸುಳಿವಿಲ್ಲ. ಮನೆಯಿಂದ ಕೇವಲ ಒಂದೇ ಕಿಲೋ ಮೀಟರ್ ದೂರದಲ್ಲಿ ಹರಿಯುವ ಯಮುನಾ ನದಿಯತ್ತ ಕಣ್ಣಾಡಿಸಿದೆ. ದೆಹಲಿಯ ಶತಮಾನದ ಮಳೆಯಲ್ಲಿ ಕೇವಲ ತಿಂಗಳ ಹಿಂದೆ ಮನೆ ಹತ್ತಿರದ ರಸ್ತೆ ತನಕ ಬಂದಿದ್ದ ನೀರು ಬಹುತೇಕ ಇಳಿದರೂ, ನದಿಯ ನೀರಿನಲ್ಲಿ ಸೆಳೆತ ಇದ್ದೇ ಇತ್ತು. ಇನ್ನೇನು ಚಳಿಗಾಲ ಬಂತಲ್ಲ, ಹಿಮಾಲಯದಲ್ಲಿ ಹಿಮ ಸುರಿದಾಗ ನದಿ ನೀರು ಪಾತಾಳ ಸೇರುತ್ತದೆ ಎಂದು ಮನಸ್ಸಲ್ಲೇ ಅಂದುಕೊಂಡೆ.

ಈ ವರ್ಷ ಚಳಿಗಾಲ ಬೇಗ ಬಂದಂತಿದೆ ಎನ್ನುತ್ತಾ, ಬಿಸಿ ಬಿಸಿ ಕಾಫಿಯ ಮಗ್ ಎತ್ತಿಕೊಂಡೆ. ಎಷ್ಟು ಬೇಗ ಕಾಲ ಸರಿಯುತ್ತದೆ. ದೆಹಲಿಗೆ ನಾನು ಕಾಲಿಟ್ಟ ಹತ್ತನೇ ವರ್ಷವಿದು. ಬಂದಾಗ ನಾಲ್ಕಕ್ಷರ ಹಿಂದಿಯೂ ಬಾರದ ನನಗೀಗ, ಪಂಜಾಬಿ, ಉರ್ದು ಭಾಷೆಗಳೂ ಪರಕೀಯವಲ್ಲ. ದೆಹಲಿಯ ಇಂಚಿಂಚೂ ನನಗೆ ನನ್ನೂರಿನಷ್ಟೇ ಪರಿಚಿತ. ದೆಹಲಿಯಲ್ಲೇ ಹುಟ್ಟಿ ಬೆಳೆದ ಕೆಲವರು ನನ್ನ ಬಳಿಯೇ ಇಲ್ಲಿನ ಜಾಗಗಳ ವಿಳಾಸ ಕೇಳುವುದರಿಂದ, ನನಗೋ ದಿಲ್ಲಿವಾಲಾನಾದ ಸಂತಸ.

ಭಾನುವಾರವಾದ್ದರಿಂದ 10-12 ಇಂಗ್ಲೀಷ್ ದಿನ ಪತ್ರಿಕೆಗಳನ್ನು ಓದಿ, ಒಂದಿಷ್ಟು ಹೊತ್ತು ಟೀವಿ ನೋಡಿ ಹಳೆ ದೆಹಲಿಯತ್ತ ಹೊರಟೆ. ನಾನು ದೆಹಲಿಗೆ ಬಂದಾಗಿನಿಂದ ಪ್ರತಿ ಭಾನುವಾರ ಇಲ್ಲಿಗೆ ಹೋಗಿ ಅಡ್ಡಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಐದಾರು ಶತಮಾನದ ಹಳೆಯದಾದ ಪುರಾನೀ ದಿಲ್ಲಿ ಮತ್ತು ಈ ಡಿಸೆಂಬರ್ ನಲ್ಲಿ ಶತಕ ಬಾರಿಸುವ ಹೊಸ ದಿಲ್ಲಿಗಳೆರಡೂ ನನಗೆ ಪ್ರಿಯವಾದ ತಾಣಗಳು.

ದೆಹಲಿಯ ಆತ್ಮ ಹಳೆ ದೆಹಲಿಯಲ್ಲಿದೆ. ಇಲ್ಲಿನ ಗಲ್ಲಿ ಗಲ್ಲಿಗಳೂ, ಹಳೆಯ ಕಟ್ಟಡಗಳು, ಕೋಟೆ, ಕೊತ್ತಲಗಳು, ಅಂಗಡಿ, ಮುಂಗಟ್ಟುಗಳು ಗತಕಾಲಕ್ಕೆ ನಮ್ಮನ್ನು ಮರಳಿ ಒಯ್ಯುತ್ತವೆ.

ಯಾರು ಏನೇ ಹೇಳಲಿ. ಕಾಮನ್ ವೆಲ್ತ್ ಗೇಮ್ಸ್ ನಿಂದ ದೆಹಲಿಯ ರಸ್ತೆ, ಸೇತುವೆಗಳಿಗಂತೂ ತುಂಬಾ ಪ್ರಯೋಜನವಾಗಿದೆ. ಕೇವಲ ಹತ್ತು ವರ್ಷದ ಹಿಂದೆ ಕಿಷ್ಕಿಂದೆಯಂತಿದ್ದ ಜಾಗಗಳೂ ಈಗ ಥಳ ಥಳ ಹೊಳೆಯುತ್ತಾ ವಿಶಾಲವಾಗಿವೆ. ನಾನು ಬಂದಾಗ ದೆಹಲಿಯನ್ನು ಪೂರ್ವ – ಪಶ್ಚಿಮವಾಗಿ ಇಬ್ಬಾಗಿಸಿ ಸುಮಾರು 40 ಕಿಲೋ ಮೀಟರ್ ಈ ಮಹಾ ನಗರದೊಳಗೆ ಹರಿಯುವ ಯಮುನಾ ನದಿಗಿದ್ದದ್ದು ಕೇವಲ ನಾಲ್ಕು ಸೇತುವೆಗಳು. ಅದೀಗ 9 ಕ್ಕೇ ಏರಿದೆ.

ನಾನು ಪ್ರತಿ ಭಾನುವಾರ ಹೋಗುವುದು ಹಳೆ ದೆಹಲಿಯ ದರಿಯಾ ಗಂಜ್ ನ ಹಳೆ ಪುಸ್ತಕ ಮಾರುಕಟ್ಟೆಗೆ. ದೆಹಲಿ ಗೇಟ್ ನಿಂದ ಜಾಮಾ ಮಸೀದಿಯ ತನಕ ಸುಮಾರು ಮೂರು ಕಿಲೋ ಮೀಟರ್ ದೂರ ಪ್ರತೀ ಭಾನುವಾರ ಮುಚ್ಚಿದ ಅಂಗಡಿ, ಕಚೇರಿಗಳ ಎದುರು ನೂರಾರು ಪುಸ್ತಕ ವ್ಯಾಪಾರಿಗಳು ಹಳೇ ಪುಸ್ತಕದ ರಾಶಿ ಹಾಕಿ ಮಾರುತ್ತಾರೆ. ನನಗೆ ಇಲ್ಲಿ ಸಿಗದ ಪುಸ್ತಕವೇ ಇಲ್ಲ. ಇಲ್ಲಿಗ ಬರುವ ತರಹೇವಾರಿ ಜನರನ್ನು ನೋಡುವುದು, ಅವರ ಪುಸ್ತಕಗಳ ಹುಡುಕಾಟ ಕಣ್ಣಲ್ಲಿ ತುಂಬಿಕೊಳ್ಳುವುದೇ ದಿವ್ಯಾನುಭವ.

ಇಲ್ಲಿಗೆ ಹೋದಾಗಲೆಲ್ಲಾ ರಾಶಿ ರಾಶಿ ಪುಸ್ತಕ ತಂದು ಮನೆಯಲ್ಲಿ ಸುರಿಯುತ್ತೇನೆ. ಕಳೆದ ಎರಡು ಮೂರು ವರ್ಷದಲ್ಲಿ ಮೊದಲಿನಂತೆ ಪುಸ್ತಕಗಳ ವ್ಯಾಪಾರದ ಭರಾಟೆ ಇಲ್ಲದಿರುವುದು ಗಮನಕ್ಕೆ ಬರುತ್ತಿದೆ. ಹದವಾದ ಹವೆಯಲ್ಲಿ, ಸಣ್ಣ ಬಿಸಿಲಿನಲ್ಲಿ ಪುಸ್ತಕಗಳತ್ತ ಕಣ್ಣು ನೆಟ್ಟು ಜಾಮಾ ಮಸೀದಿಯಿಂದ ಪಹಾಡ್ ಗಂಜ್ ನತ್ತ ಹೊರಟೆ.

ಯಾಕೋ ಏನೋ ಯಾವುದೇ ಪುಸ್ತಕ ಕೊಳ್ಳುವ ಮನಸ್ಸಾಗಲಿಲ್ಲ. ಪುಸ್ತಕಗಳ ನಡುವೆ ಬಟ್ಟೆ ಮಾರುವ ಕೆಲವು ಅಂಗಡಿಗಳೂ ತಲೆ ಎತ್ತಿದ್ದವು.

ಗೋಲ್ಚಾ ಸಿನೆಮಾ ಥಿಯೇಟರ್ ಬಳಿ ಭಾರಿ ಜನ ಸಂತೆಯೇ ನೆರೆದಿತ್ತು. ಮಾಲ್, ಮಲ್ಟಿಫ್ಲೆಕ್ಸ್ ಗಳ ಹಾವಳಿ ಇಲ್ಲದ ಏಕೈಕ ಜಾಗ ಹಳೆ ದೆಹಲಿ. ಈ ಗೋಲ್ಚಾ ಥಿಯೇಟರ್ ಸ್ವಾತಂತ್ರ್ಯ ಬರುವ ಹಿಂದಿನ ಕಾಲದ್ದು. ಇಂದಿಗೂ ಹಾಗೆಯೇ ಇದೆ. ಇತ್ತೀಚೆಗೆ ಬಿಡುಗಡೆಯಾದ ಗೋಲ್ ಮಾಲ್ ಸಿನಿಮಾ ಹೌಸ್ ಫುಲ್ ಆಗಿ ಓಡುತ್ತಿತ್ತು. ಎಷ್ಟೋ ವರ್ಷಗಳ ನಂತರ ಥಿಯೇಟರ್ ನ ಬಾಗಿಲಿಗೆ ಸಿಕ್ಕಿಸಿದ್ದ ಹೌಸ್ ಫುಲ್ ಬೋರ್ಡ್ ನೋಡಿ ಏನೋ ಒಂಥರಾ ಪುಳಕವಾಯಿತು.

ಥಿಯೇಟರ್ ಎದುರಿನ ಬೀಡಾ ಅಂಗಡಿ ಮಾಲೀಕ ಜಗತ್ತು ಎಂದೂ ಬದಲಾಗದಂತೆ ತಣ್ಣಗೆ ಕುಳಿತ್ತಿದ್ದ. ಬಹುಷ ಅವನು ಮೂವತ್ತು ವರ್ಷದ ಹಿಂದೆಯೂ ಹಾಗೆಯೇ ಕುಳಿತಿದ್ದಿರಬೇಕು.

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ದೆಹಲಿಯಲ್ಲೇ ಇದ್ದಿದ್ದರಿಂದ ಪೊಲೀಸ್ ಕಟ್ಟೆಚ್ಚರ ಜಾಸ್ತಿಯಾಗಿತ್ತು. ಹಳೆ ದೆಹಲಿಯ ಬೀದಿಗಳ ಮೇಲೆ ಅವರು ಕಣ್ಣಿಟ್ಟು ಕಾಯುತ್ತಿದ್ದರು.

ಪುರಾತನ ದೆಹಲಿ ಗೇಟ್ ಬಳಿ ರಸ್ತೆ ಬದಿಯ ಚಹಾ ಅಂಗಡಿ ಎದುರು ಸೈಕಲ್ ರಿಕ್ಷಾದವರು, ಹಮಾಲರು, ಪೋಲೀಸರು, ಕ್ಷೌರಿಕರು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಕೆಲವು ವಿದೇಶೀ ಪ್ರವಾಸಿಗರು ಚಳಿ ಕಾಯಿಸುತ್ತಾ ಚಹಾ ಹೀರುತ್ತಿದ್ದರು. ಅವರ ಲೋಕದಲ್ಲಿ ಒಬಾಮ, ಅಮೆರಿಕ, ಉದಾರೀಕರಣ ಮುಂತಾದವುಗಳಿಗೆ ಜಾಗವಿದ್ದಂತೆ ಕಾಣಲಿಲ್ಲ. ಅವರಲ್ಲಿ ಕೆಲವರು ಹಳೆ ದೆಹಲಿಯಲ್ಲಿ ಇನ್ನೂ ಗುಟ್ಟಾಗಿ ನಡೆಯುವ ಮುಜ್ರಾಗಳ ಬಗ್ಗೆ ಮಾತಾಡುತ್ತಿದ್ದರು.

ಉಳಿದವರು ಇಲ್ಲಿನ ಜಗತ್ ಪ್ರಸಿದ್ಧ ಕರೀಮ್ ಹೋಟೆಲ್ ನಿಂದ ಇನ್ನೂ ಬಾರದ ಬಿರಿಯಾನಿಗೆ ಅಸಹನೆಯಿಂದ ಕಾಯುತ್ತಿದ್ದರು.

ಇನ್ನೂ ಸ್ವಲ್ಪ ದೂರ ಬಂದಾಗ ಓರಿಯೆಂಟಲ್ ಇನ್ ಶೂರೆನ್ಸ್ ಕಟ್ಟಡದ ಎದುರಿನ ಸಂಡೇ ಬಜಾರ್ ಸತ್ವ ಕಳೆದುಕೊಂಡು ಪೇಲವವಾಗಿತ್ತು. ಮಾರುವವರು ಮತ್ತು ಕೊಳ್ಳುವವರಿಬ್ಬರೂ ಜಾಸ್ತಿ ಕಾಣಲಿಲ್ಲ.

ಇಲ್ಲಿನ ಮತ್ತೊಂದು ಹಳೇ ಸಿನಿಮಾ ಥಿಯೇಟರ್ ಡಿಲೈಟ್ ಕೂಡಾ ಹೌಸ್ ಫುಲ್ ಆಗಿತ್ತು. ಅದೇ ಗೋಲ್ ಮಾಲ್ ಸಿನಿಮಾ ಭರ್ಜರಿ ಓಡುತ್ತಿತ್ತು. ವಿಶಾಲವಾದ ಈ ಕಟ್ಟಡ ಇಂದಿಗೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಇದೇ ಪ್ರದೇಶದಲ್ಲಿರುವ ದೆಹಲಿಯ ಮೂರು ಅತಿ ಪ್ರಸಿದ್ಧ ಸಿನಿಮಾ ಥಿಯೇಟರ್ ಗಳು ಗೋಲ್ಚಾ, ಡಿಲೈಟ್ ಮತ್ತು ಶೀಲಾ.

ಈ ಮೂರಕ್ಕೂ ಜೀವನದಲ್ಲಿ ಒಮ್ಮೆಯೂ ಭೇಟಿ ನೀಡದ ಹಳೆಯ ಜನ ಇಡೀ ದೆಹಲಿಯಲ್ಲಿ ಎಲ್ಲೂ ಇಲ್ಲ. ಜಾಗಕ್ಕೆ ಬಂಗಾರದ ಬೆಲೆ ಬಂದರೂ, ಬಹುಪಾಲು ಜನ ಮಲ್ಟಿಫ್ಲೆಕ್ಸ್ ಗಳತ್ತ ಮುಖ ಮಾಡಿದರೂ ಈ ಥಿಯೇಟರ್ ಮಾಲೀಕರು ಮಾತ್ರ ಅದರಾಸೆಗೆ ಹೋಗಿಲ್ಲ. ಸಿನಿಮಾ ಥಿಯೇಟರ್ ಕೆಡವಿ ಮಾಲ್ ಕಟ್ಟಿಲ್ಲ.

ಹಳೆ ದೆಹಲಿಯ ಲ್ಯಾಂಡ್ ಮಾರ್ಕ್ ಗಳಾದ ಇವುಗಳನ್ನು ಓರಣವಾಗಿ ಇನ್ನೂ ನಡೆಸುತ್ತಿದ್ದಾರೆ. ಇತಿಹಾಸದ ತುಣುಕೊಂದು ಮಾಯವಾಗದಂತೆ ಜೋಪಾನ ಮಾಡಿದ್ದಾರೆ.

ಅದೇ ರೀತಿ ಇಲ್ಲಿಂದ ಮೂರು ಕಿಲೋ ಮೀಟರ್ ದೂರದ ಸದರ್ ಬಜಾರ್ ನಲ್ಲಿರುವ ಫಿಲ್ಮಿಸ್ತಾನ್ ಕೂಡಾ ತನ್ನ ಹಳೆಯ ಚಾರ್ಮ್ ಉಳಿಸಿಕೊಂಡಿದೆ. ಹಳೆ ದೆಹಲಿಯ ಜನ ಕೈಬಿಡುವ ತನಕ ಈ ಸಿನಿಮಾ ಥಿಯೇಟರ್ ಗಳು ಹೀಗೆಯೇ ಉಳಿಯಬಹುದು