ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು. ಸ್ವಂತ ಭೂಮಿಯಲ್ಲೇ ಬೇರೆಯವಳಾಗಿಬಿಟ್ಟಳು. ಅಗೋ.. ಆಗಿನಿಂದ ಅವಳು ಮೊದಲಿನ ಅಕ್ಕನಂತಿಲ್ಲ.”
ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್‍ ಕುಮಾರ್ ಅವರ ತೆಲುಗು ಕತೆ “ತಬ್ಬಲಿಗಳು”, ಭಾನುವಾರದ ನಿಮ್ಮ ಓದಿಗೆ

 

“ನೀನು ಯಾವಾಗಾದರೂ ಬಾ, ಇಲ್ಲೇನೂ ನಿಂತುಹೋಗುವುದಿಲ್ಲ,” ಕೋಪದಿಂದ ಹೇಳಿ ತಂಗಿಯ ಫೋನ್ ಕಟ್ ಮಾಡಿ ಪಕ್ಕಕ್ಕಿಡುತ್ತಿದ್ದರೆ ಆ ಜ್ಯೋತಿ ನೆನಪಿಗೆ ಬಂದಳು.

ಅವತ್ತು ನಮ್ಮ ಅಂಗಡಿಗೆ ಬಂದಿದ್ದಾಗ ಬಿಟ್ಟರೆ ಆಕೆಯನ್ನು ಎಲ್ಲೂ ನೋಡಿದಂತಿಲ್ಲ. ತಾನು ಮಾತ್ರ ಆ ದಿನ ಬಹಳ ಪರಿಚಿತಳಂತೆ ನಗುತ್ತಾ, “ಅದೇನಣ್ಣಾ, ಹೊಸದಾಗಿ ನೋಡುತ್ತಿದ್ದೀಯ. ನಮ್ಮದು ಎಮುಡಾಲ ಅಲ್ಲವಾ. ತಿಪ್ಪಾರ ಗಡ್ಡೆಯಲ್ಲೇ ಇರೋದು. ನಿಮ್ಮ ಸಿರಿಸಿಲ್ಲ ಮಾರ್ಕೆಟ್ ನಲ್ಲೇ ಕೊತ್ತಂಬರಿ ಮಾರುತ್ತೇನೆ. ನೀನು ಎಷ್ಟು ಸಲ ನನ್ನ ಬಳಿ ಚೌಕಾಶಿ ಮಾಡಿ ಕೊಂಡುಕೊಂಡಿಲ್ಲ,” ಎಂದಳು.

ನನಗೆ ಅವಳನ್ನು ನೋಡಿದ ನೆನಪು ಬರಲಿಲ್ಲ, “ಹೌದಾ?” ಎಂದು ತಲೆಯಾಡಿಸುತ್ತ ದಿಟ್ಟಿಸಿ ನೋಡಿದೆನು.

ಅವತ್ತು ಎಂಗಿಲಿಪೂಲ ಬತುಕಮ್ಮ ಹಬ್ಬ. ಇಮಿಟೇಷನ್ ರೇಷ್ಮೆಸೀರೆ, ಮ್ಯಾಚಿಂಗ್ ಬ್ಲೌಸ್ ಪೀಸ್ ತೆಗೆದುಕೊಂಡು ನಮ್ಮ ಟೈಲರ್ ಅಂಗಡಿಗೆ ಬಂದಳು. ಡಿಸೈನ್ ಬುಕ್ ಎದುರಿಗಿಟ್ಟೆ. ಸೆಲೆಕ್ಟ್ ಮಾಡಿಕೊಂಡಳು. ಬ್ಲೌಸಿಗೆ ಮಗ್ಗದ ವರ್ಕ್ ಮಾಡಿಸಿ, ಬಾಕ್ಸ್ ನೆಕ್ ಇಟ್ಟು ಅಲ್ಲಲ್ಲಿ ಸಣ್ಣ ಕನ್ನಡಿಗಳಿಟ್ಟು ಹೊಲಿಯಲು ಹೇಳಿದಳು. ಸೀರೆಗೆ ಮಾತ್ರ ಕಂಪ್ಯೂಟರ್ ಎಂಬ್ರಾಯಿಡರ್ ವರ್ಕ್ ಮಾಡಿ ದೊಡ್ಡ ಕನ್ನಡಿಗಳು, ಅಂಚುಗಳಿಗೆ ನಕ್ಕಿಗಳು ಮತ್ತು ಚಂದನ ಫಾಲ್ ಹಾಕುವಂತೆ ಹೇಳಿದಳು.

ದೊಡ್ಡ ಗಿರಾಕಿಯೇ. ಮಾಮೂಲಿ ದಿನಗಳಾಗಿದ್ದರೆ ಕಣ್ಮುಚ್ಚಿಕೊಂಡು ತೆಗೆದುಕೊಳ್ಳುತ್ತಿದ್ದೆ. ಬತುಕಮ್ಮ ಹಬ್ಬದ ಸೀಸನ್, ಈಗಾಗಲೇ ಜಾಸ್ತಿ ಬಟ್ಟೆಗಳಿವೆ. ಸಣ್ಣ ಸಣ್ಣ ಬದಲಾವಣೆಗಳನ್ನು ಹೇಳಿದರೂ ಒಪ್ಪಿಕೊಳ್ಳಲಿಲ್ಲ. ಅದಕ್ಕೇ ಯಾವಾಗ ಬೇಕೆಂದು ಕೇಳಿದೆ.

ಆಕೆ ಹೊಳೆವ ಕಣ್ಣುಗಳಿಂದ ನನ್ನತ್ತ ನೋಡಿ, “ಯಾವಾಗಲೋ ಆದರೆ ಈಗೇಕೆ ಬರುತ್ತಿದ್ದೆ. ಸದ್ದುಲ ಬತುಕಮ್ಮ ಹಬ್ಬದ ದಿನಕ್ಕೇ ಬೇಕು,” ಅಣ್ಣಾ ಎಂದಳು.
ನನಗೆ ಕೋಪಬಂದಿತು. ‘ಊಂ.. ಸದ್ಯ.. ನಾಳೆಯೇ ಬೇಕೆನ್ನುತ್ತಿಲ್ಲ. ಎಲ್ಲರೂ ಹಬ್ಬ ಇಂದು ನಾಳೆ ಎನ್ನುವಾಗ ಬಂದು ಒಳ್ಳೊಳ್ಳೆ ಡಿಸೈನ್ ಬೇಕೆನ್ನುತ್ತಾರೆ. ಹೇಗಾಗುತ್ತದೆ,’ ಎಂದುಕೊಳ್ಳುತ್ತ ಆಕೆಗೆ, “ಹಬ್ಬಕ್ಕಾದರೇ ಕೊಡಲಾಗುವುದಿಲ್ಲ. ಬೇರೆ ಎಲ್ಲಾದರೂ ಹೊಲಿಸಿಕೋ,” ಎಂದೆ.

ಆಕೆ ಮುಖ ಸಪ್ಪಗೆ ಮಾಡಿ, “ನೀನು ಬಿಟ್ಟರೆ ಈ ಊರಿನಲ್ಲಿ ನನಗೆ ಯಾರೂ ಗೊತಿಲ್ಲ ಅಣ್ಣಾ. ಸದ್ದುಲ ಬತುಕಮ್ಮ ಹಬ್ಬದಂದು ಕಸೂತಿ ಮಾಡಿದ ಬಟ್ಟೆ ತೊಟ್ಟುಕೊಳ್ಳಬೇಕೆಂಬುದು ಎಷ್ಟೋ ವರ್ಷಗಳ ಆಸೆ. ಏನಾದರೂ ಒಂದು ಕಾರಣಕ್ಕೆ ಕೂಡಿಟ್ಟ ಹಣ ಖರ್ಚಾಗುತ್ತಿದೆ. ಹಾಗಾಗಬಾರದೆಂದು ಈ ಬಾರಿ ಸೇಟು ಕಡೆಗೇ ಹಣ ಬಿಟ್ಟಿದ್ದೆ. ಅವನು ಇವತ್ತು ಬಾ, ನಾಳೆ ಬಾ ಎಂದು ಸತಾಯಿಸಿ ಸತಾಯಿಸಿ ಇವತ್ತು ಕೊಟ್ಟಿದ್ದಾನೆ. ನೀನು ಆಗುವುದಿಲ್ಲವೆಂದರೆ, ಹಣ ಕರೆಂಟು ಮೋಟರಿಗೇ ಖರ್ಚಾಗಿಬಿಡುತ್ತದೆ. ಇನ್ನು ನನ್ನ ಜೀವನದಲ್ಲಿ ಇಷ್ಟು ಒಳ್ಳೆ ಸಮಯ ಬರುವುದಿಲ್ಲ,” ನೋವಿನಿಂದ ಹೇಳಿದಳು.

ಅದೆಲ್ಲ ನನಗೆ ಗೊತ್ತಿಲ್ಲ, ಆಗಲ್ಲ ಅಂದ್ರೆ ಆಗಲ್ಲವೆಂದು ಖಚಿತವಾಗಿ ಹೇಳೋಣವೆಂದು ನೋಡಿದಾಗ, ಆಕೆ ದೀನವಾಗಿ ಕೇಳಿಕೊಳ್ಳುವಂತೆ ನನ್ನತ್ತ ನೋಡಿದಳು. ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟು ಬಂದಹಾಗಿದ್ದಳು, ನನಗೂ ಪಾಪವೆನಿಸಿತು.

ಸ್ವಲ್ಪಹೊತ್ತು ಯೋಚಿಸಿ, “ಸದ್ದುಲ ಬತುಕಮ್ಮ ಹಬ್ಬದ ಹಿಂದಿನ ದಿನ ಸಂಜೆ ಐದಾರು ಗಂಟೆಗೆ ಕೊಡುತ್ತೇನೆ. ಅದಕ್ಕೆ ಅರ್ಧ ಗಂಟೆ ಮೊದಲು ಕೇಳಿದರೂ ಆಗುವುದಿಲ್ಲ,” ಎಂದೆ.

ಅದೇ ಮಹಾಭಾಗ್ಯವೆಂಬಂತೆ ನಕ್ಕು, “ಸರಿ ಅಣ್ಣಾ. ಅವತ್ತು ಹೇಗಿದ್ದರೂ ಮಾರ್ಕೆಟ್ಟಿಗೆ ಬರುತ್ತೀನಲ್ಲವಾ. ಸಂಜೆ ಹೋಗುವಾಗ ತೆಗೆದುಕೊಂಡು ಹೋಗುತ್ತೇನೆ, ಆದರೆ ಚೆನ್ನಾಗಿ ಹೊಲಿಯಬೇಕು. ನನ್ನ ಅಕ್ಕ ಅದನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಕು. ನಿನ್ನ ಬದುಕಿಗೆ ಕಸೂತಿ ಬಟ್ಟೆಗಳಾ ಎಂದು ಗೇಲಿ ಮಾಡುತ್ತಾಳೆ” ಎಂದಳು.

ಕೇಳಿದರೆ ಹೇಳುತ್ತಿದ್ದಳೇನೋ, ನನಗೇಕೆ ಆ ರಗಳೆ ಎಂದು, ‘ಅಕ್ಕ ಯಾರು, ಏನು ಎತ್ತ,’ ಎಂದು ನಾನು ಕೇಳಲಿಲ್ಲ.
ಬಿಲ್ ಬುಕ್ ತೆಗೆಯುತ್ತ ಹೆಸರು ಕೇಳಿದೆ.

“ಜ್ಯೋತಿ,” ಎಂದು ಹೇಳಿದಳು.

“ನನ್ನ ತಂಗಿಯ ಹೆಸರೇ. ಅವಳನ್ನೂ ಎಮುಡಾಲಕ್ಕೇ ಕೊಟ್ಟಿದ್ದೇವೆ,” ಎನ್ನುತ್ತ್ತಾ, ಆಕೆ ಕೊಟ್ಟ ಆರು ನೂರು ರೂಪಾಯಿ ತೆಗೆದುಕೊಂಡು ಚೀಟಿ ಹರಿದುಕೊಟ್ಟೆ. ಅದೇ ದಿನ ಸೀರೆಯನ್ನು ಎಂಬ್ರಾಯಿಡರಿಗೆ, ಬ್ಲೌಸ್ ನ್ನು ಮಗ್ಗದ ಕೆಲಸಕ್ಕೆ ನೀಡಿದೆ.

ಸದ್ದುಲ ಬತುಕಮ್ಮ ಹಬ್ಬ ಇನ್ನೂ ಎಂಟುದಿನ ಇದೆ. ನಾನು ಕೆಲಸದವರಿಗೆ ಅರ್ಜೆಂಟ್ ಮಾಡಿ ನಾಲ್ಕು ದಿನಕ್ಕೇ ಕೊಡಲು ಹೇಳಿದೆ. ಹೇಳಿದಂತೆಯೇ ತಂದು ಕೊಟ್ಟರು. ಆ ದಿನವೇ ಬ್ಲೌಸ್ ಹೊಲಿದು ಯಾವಾಗ ಬಂದರೂ ಕೊಡೋಣವೆಂದು ರೆಡಿಯಾಗಿ ಕವರಿನಲ್ಲಿ ಹಾಕಿಟ್ಟೆ.

ಅಮ್ಮನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ನೆನ್ನೆ ಅಂಗಡಿ ತೆಗೆಯಲಿಲ್ಲ. ಇವತ್ತು ಅಂಗಡಿ ತೆಗೆಯುತ್ತಿದ್ದಂತೆ ಆಕೆಯ ಕವರು ಕಾಣಿಸಿತು. ‘ಇವತ್ತು ಏಳನೇ ದಿನ, ನಾಳೆ ಬಂದು ತೆಗೆದುಕೊಂಡು ಹೋಗುವಳೇನೋ,’ ಎಂದುಕೊಂಡೆ.

ಆಗಲೇ ನನ್ನ ತಂಗಿಯ ಫೋನ್. ತೆಗೆಯಬಾರದೆಂದುಕೊಂಡವನು ತೆಗೆದೆ.

“ಅಣ್ಣಾ.. ಅಮ್ಮನಿಗೆ ಹೇಗಿದೆ. ನಿನ್ನೆ ಆಸ್ಪತ್ರೆಗೆ ಹೋಗಿದ್ದಿರಂತೆ,” ಕೇಳಿದಳು.

ನನಗೆ ಕೋಪ ಬಂದಿತು. “ಹೇಗಿದ್ದಾಳೆಂದು ಕೇಳುತ್ತಿದ್ದೀಯ. ಒಮ್ಮೆ ಬಂದು ನೋಡಿಕೊಂಡು ಹೋದರೆ ತಪ್ಪಾ. ಸತ್ತಮೇಲೆ ಅಮ್ಮಾ ಎಂದು ಅಳುತ್ತಾ ಬರುತ್ತೀಯಾ. ಅವಳೇನೋ, ‘ನನ್ನ ಮಗಳು ಮಗಳು..’ ಎಂದು ಕನವರಿಸುತ್ತಾಳೆ,” ವ್ಯಂಗ್ಯಮಾಡುತ್ತ ಹೇಳಿದೆ.

“ಏನು ಮಾಡೋದಣ್ಣಾ… ನಿನ್ನೆ ಮಳೆಗೆ ಪೂರ್ತಿ ಹತ್ತಿ ನೆನೆದುಹೋಗಿದೆ. ಈ ಬಾರಿಯಾದರೂ ಸ್ವಲ್ಪ ಸಾಲ ತೀರುತ್ತದೆ ಎಂದುಕೊಂಡೆ. ಎಲ್ಲ ಹಾಳಾಯಿತು. ಜೀವನ ತುಂಬಾ ಕಷ್ಟವಾಗಿದೆ..” ಇನ್ನೂ ಏನೋ ನೋವು ಹೇಳುವವಳಿದ್ದಳು.

ಯಾವಾಗಲೂ ಹೀಗೇ.. ಫೋನ್ ಮಾಡುವುದೇ ತಡ, ಇಷ್ಟುದ್ದ ರಾಮಾಯಣ ತೆಗೀತಾಳೆ.

ಕಿರಿಕಿರಿಯೆನಿಸಿ ನಾನು ಮಧ್ಯಕ್ಕೇ ತಡೆದು, “ಊಂ.. ನಿನಗೆ ಯಾವಾಗ ಬಾಧೆಯಿಲ್ಲ ಹೇಳು. ಒಮ್ಮೆ ಭತ್ತ ನೆನೆಯಿತು ಎನ್ನುತ್ತೀಯ. ಇನ್ನೊಮ್ಮೆ ಪೈರು ಒಣಗಿತು, ಮತ್ತೊಮ್ಮೆ ಮೋಟರ್ ಸುಟ್ಟುಹೋಯಿತು, ಮಗದೊಮ್ಮೆ ಆರೋಗ್ಯ ಸರಿಯಿಲ್ಲ ಎನ್ನುತ್ತೀಯ,” ಎಂದೆ.

ಏನಂದುಕೊಂಡಳೋ ಅಳುವ ಧ್ವನಿಯಲ್ಲಿ, “ಇವತ್ತು ಸದ್ದುಲ ಬತುಕಮ್ಮ ಹಬ್ಬ ಅಲ್ಲವಾ ಅಣ್ಣಾ. ನಾಳೆ ಬರುತ್ತೀನಿ,” ಎಂದಳು.

“ಸರಿ, ನಿನಗಿಷ್ಟ ಬಂದಾಗ ಬಾ,” ಎನ್ನುತ್ತ ಫೋನ್ ಕಟ್ ಮಾಡಿದೆ.

ಅಗೋ.. ಈಗ ನಾನು ಕೋಪದಿಂದ ಫೋನ್ ಕಟ್ ಮಾಡಿ ಪಕ್ಕಕ್ಕೆ ಇಡುತ್ತಿದ್ದಾಗ ತಕ್ಷಣ ಆಕೆ ನೆನಪಾದಳು. ‘ಅರೇ.. ಎಂಥ ಕೆಲಸ ಆಯಿತು ಪಾಪ.. ಎಮುಡಾಲ ಊರಿನಲ್ಲಿ ಹಬ್ಬ ಇವತ್ತೇ,’ ಎಂದುಕೊಂಡು ಟೈಮ್ ನೋಡಿದೆ. ಹನ್ನೆರಡು ದಾಟಿತ್ತು.

ಎಲ್ಲ ಊರಿನಲ್ಲಿ ಸದ್ದುಲ ಬತುಕಮ್ಮ ಒಂಭತ್ತು ದಿನಗಳಾದರೆ ಎಮುಡಾಲದಲ್ಲಿ ಏಳು ದಿನ ಮಾತ್ರ ಮಾಡುತ್ತಾರೆ. ಎಮುಡಾಲಕ್ಕೆ ತನ್ನ ಮಗಳನ್ನು ಕೊಟ್ಟಿದ್ದ ರಾಜನೊಬ್ಬ ಮಗಳು ತನ್ನೂರಿಗೆ ಹಬ್ಬಕ್ಕೆ ಬರಲೇಬೇಕೆಂಬ ಕಾರಣದಿಂದ ಎಮುಡಾಲದಲ್ಲಿ ಏಳನೇ ದಿನವೇ ಸದ್ದುಲು ಮಾಡಬೇಕೆಂದು ಆದೇಶ ಹೊಡಿಸಿದನಂತೆ. ಆಗಿನಿಂದ ಅದೇ ಸಂಪ್ರದಾಯವಾಯಿತು.

ನನ್ನ ಮನಸ್ಸಿಗೆ ಬಹಳ ಬೇಸರವಾಯಿತು. ‘ಪಾಪ. ತನ್ನಿಷ್ಟದಂತೆ ಹೊಲಿಸಿಕೊಂಡಿದ್ದಾಳೆ. ನಿನ್ನೆ ಎಷ್ಟು ಬಾರಿ ತಿರುಗಿಹೋದಳೋ.. ಸದ್ದುಲ ಬತುಕಮ್ಮನಿಗೆ ಅಂದರೆ ನಾನು ಒಂಭತ್ತು ದಿನಗಳಲ್ಲವಾ, ಹಣ ಹೊಂದಿಸಿಕೊಂಡಮೇಲೆ ಬರುತ್ತಾಳೆ ಬಿಡು’ ಎಂದುಕೊಂಡೆ. ಇನ್ನು ಎರಡು ಸಾವಿರದ ನಾಲ್ಕು ನೂರು ಕೊಡಬೇಕು. ಕೆಲವರು ಹಬ್ಬ ಮುಗಿದರೂ ಬಟ್ಟೆ ತೆಗೆದುಕೊಂಡುಹೋಗಲು ಬರುವುದಿಲ್ಲ. ಬಂದರೂ ದುಡ್ಡು ಕೊಡುವಾಗ ಕಿರಿಕಿರಿ ಮಾಡುತ್ತಾರೆ. ನನ್ನದೇ ತಪ್ಪೆನ್ನುತ್ತಾರೆ. ಹಾಗೆ ತೆಗೆದುಕೊಂಡು ಹೋಗದೆ ಬಿಟ್ಟಿರುವ ಬಟ್ಟೆಗಳು ನನ್ನ ಬಳಿ ಸಾಕಷ್ಟಿವೆ.

‘ಅಯ್ಯೋ ದೇವರೇ… ಇವತ್ತು ಕೊಡದಿದ್ದರೆ ನಾನು ಮುಳುಗಿಹೋಗುತ್ತೇನೆ. ಪಟ್ಟ ಕಷ್ಟವೆಲ್ಲ ವ್ಯರ್ಥವಾಗುತ್ತದೆ. ಎಮುಡಾಲ ಎಷ್ಟು ದೂರವಿದೆ, ಅರ್ಧ ಗಂಟೆಗೆಲ್ಲ ಹೋಗಿಬರಬಹುದು. ಹೋದರೆ ಮನೆಗೆ ಬಂದು ಕೊಟ್ಟುಹೋದನೆಂಬ ಹೆಸರಿರುತ್ತದೆ ಮತ್ತು ನನ್ನ ಹಣ ನನಗೆ ಬರುತ್ತದೆ. ಆಕೆ ನೆಂಟರಿಗೋ ಅಕ್ಕಪಕ್ಕದವರಿಗೋ ನನ್ನ ಬಳಿಯೇ ಹೊಲಿಸಿಕೊಳ್ಳುವಂತೆ ಹೇಳುತ್ತಾಳೆ,’ ಎಂದುಕೊಳ್ಳುತ್ತ ಷಟರ್ ಎಳೆದು ಕೆಳಗೆ ಬಂದು ಗಾಡಿಹತ್ತಿದೆ.

ಆಗಲೇ ವೀರೇಶಂ ನಿಂದ ಫೋನ್. ಮಗಳ ಮದುವೆಗೆ ಬಟ್ಟೆ ಹೊಲಿಸಿದ್ದಾನೆ. ನಾಳೆಯೇ ಮದುವೆ. ಈ ದಿನವೇ ಮುಖ್ಯ ಶಾಸ್ತ್ರಗಳು ಆರಂಭವಾಗುತ್ತದೆ. ನಿನ್ನೆಯಿಂದ ಫೋನ್ ಮಾಡುತ್ತಿದ್ದಾನೆ. ಮತ್ತೆ ಮೇಲೆ ಹತ್ತುವುದು ಕಷ್ಟವೆನಿಸಿತು.

“ಅಯ್ಯೋ, ಐದು ನಿಮಿಷ ಮೊದಲು ಫೋನ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಕೆಳಗೆ ಬಂದಿದ್ದೇನೆ, ಒಂದು ಅರ್ಧ ಗಂಟೆ ಬಿಟ್ಟು ಬಾ.” ಫೋನ್ ಕಟ್ ಮಾಡಿ ಗೇರ್ ಬದಲಾಯಿಸಿದೆ. ಊರು ಬೇಗ ದಾಟಿದೆನಾದರೂ ಚಂದ್ರಂಪೇಟೆಗೆ ಬಂದಮೇಲೆ ನಿಜವಾದ ಕಥೆ ಆರಂಭವಾಯಿತು.

ಡಬಲ್ ರೋಡ್ ಮಾಡುತ್ತಿದ್ದಾರೆನಿಸುತ್ತದೆ. ರಸ್ತೆ ತುಂಬಾ ಜಲ್ಲಿಕಲ್ಲುಗಳು. ರಸ್ತೆಯೆಲ್ಲಾ ಅಗೆದಿದ್ದಾರೆ. ಬಂದುಹೋಗುವ ಗಾಡಿಗಳು. ಮುಂದೆ ಸಾಗುತ್ತಲೇ ಇಲ್ಲ. ನಿನ್ನೆಯ ಮಳೆಗೆ ಗುಂಡಿಗಳಲ್ಲೆಲ್ಲ ನೀರು ತುಂಬಿ ಕೆಸರುಮಯವಾಗಿದೆ. ಕಾಲುಗಂಟೆ ಎಂದುಕೊಂಡೆ ಹೋಗಲು ಅರ್ಧ ಗಂಟೆಯಾಯಿತು. ಅಷ್ಟರೊಳಗೆ ನಾಲ್ಕು ಬಾರಿ ವೀರೇಶಂ ನಿಂದ ಫೋನ್.

ತಿಪ್ಪಾರಂ ಗಡ್ಡೆ ಮುಂದೆಯೇ ಜ್ಯೋತಿಯ ಮನೆ. ಬೇಗನೆ ಸಿಕ್ಕಿತು. ನಾನು ಹೋಗುವವೇಳೆಗೆ ಮನೆಗೆ ಬೀಗ ಹಾಕುತ್ತಿದ್ದಾಳೆ. ನನ್ನನ್ನು ನೋಡಿ ಹತ್ತಿರ ಬಂದಳು.

“ಬಂದೆಯಾ ಅಣ್ಣಾ.. ಬಾ. ದೇವರ ಹಾಗೆ ಸಮಯಕ್ಕೆ ಸರಿಯಾಗಿ ಬಂದೆ. ಬಟ್ಟೆ ತಂದಿರುವಂತಿದೆ,” ಎಂದಳು ಕೈ ಚಾಚುತ್ತಾ.
ಆಕೆಯನ್ನು ನೋಡಿದರೆ ಮೊನ್ನೆಯಂತಿಲ್ಲ. ಮುಖ ಬಾಡಿದೆ. ಜುಟ್ಟು ಕೆದರಿದೆ. ಆತುರದಲ್ಲಿದ್ದಾಳೆ. ನಾನು, ‘ಅರೆ.. ಹೀಗೇಕಿದ್ದಾಳೆ,’ ಎಂದುಕೊಳ್ಳುತ್ತ ಬಟ್ಟೆಯ ಕವರ್ ನೀಡಿದೆ.

ಕವರ್ ತೆಗೆದುಕೊಳ್ಳುತ್ತ, “ನಾನು ಆ ಕಡೇನೇ ಬರುತ್ತಿದ್ದೇನೆ. ನನ್ನನ್ನು ಚಂದ್ರಂಪೇಟೆ ಬಳಿ ಇಳಿಸಣ್ಣ, ಎಂದಳು. ನಾನು, ‘ಹಣ’, ಎನ್ನುವಂತೆ ನೋಡಿದೆ. “ಅಲ್ಲೇ ಕೊಡುತ್ತೇನೆ,” ಎನ್ನುತ್ತ ಗಾಡಿ ಹತ್ತಿದಳು.

ನಾನು ಆಶ್ಚರ್ಯವಾಗಿ, “ಆ ಕಡೆ ಏಕೆ. ಇವತ್ತು ಹಬ್ಬ ಅಲ್ಲವಾ…” ಎಂದೆ.

“ಹಬ್ಬಾನೇ, ಏನು ಮಾಡೋಣ. ಈ ಬಟ್ಟೆ ನನ್ನ ಅಕ್ಕನ ಮುಖಕ್ಕೆ ಹಾಕಿ ಬರಬೇಕು ಕಳ್ಳಮುಂಡೆ,” ಎಂದಳು ನೋವಿನಿಂದ.

“ಅಲ್ಲ.. ನೀನು ಅಷ್ಟು ಇಷ್ಟಪಟ್ಟು ಹೊಲಿಸಿಕೊಂಡಿದ್ದೀಯಲ್ಲವಾ, ಆಕೆಗೇಕೆ ನೀಡುವುದು,” ಗೇರು ಬದಲಾಯಿಸುತ್ತಾ ಕೇಳಿದೆ.

“ಕರ್ಮ ಅಣ್ಣಾ.. ಎಲ್ಲಾ ನನ್ನ ಕರ್ಮ. ಜಗತ್ತಿನಲ್ಲಿ ಎಲ್ಲರಿಗೂ ಒಂದು ರೀತಿಯಾದರೆ, ನನಗೆ ಬೇರೊಂದು ರೀತಿ. ಸುಪ್ಪನಾತಿಗೆ ನಾನು ಹೊಲಿಸಿಕೊಂಡದ್ದು ತಿಳಿಯಿತಲ್ಲವಾ. ನನ್ನ ಬಟ್ಟೆಗಳೇ ಬೇಕೆಂದು ಪಟ್ಟು ಹಿಡಿದಿದ್ದಾಳೆ,” ನೋವಿನಿಂದ ಹೇಳಿದಳು.

ಆಕೆಯ ನೋವಿಗೆ ಕಾರಣ ಆಗ ಅರ್ಥವಾಯಿತು. ನನಗೂ ಬೇಸರವಾಯಿತು.

“ಊಂ… ನಿಮ್ಮ ಕಥೆ ಚೆನ್ನಾಗಿಯೇ ಇದೆ. ಆಕೆಯ ಹಠ ಸರಿ, ನೀನು ಕೊಡುವುದು ಸರಿ. ಜಗತ್ತಿನಲ್ಲಿ ನೀವಿಬ್ಬರೇನಾ ಅಕ್ಕತಂಗಿಯರು. ಇಷ್ಟಕ್ಕೂ ಆಕೆ ಏನು ಕೆಲಸ ಮಾಡುತ್ತಾಳೆ,” ಕೇಳಿದೆ.

“ಅವಳ ಬಾಯಿಗೆ ಮಣ್ಣು ಬೀಳಾ. ಏನು ಮಾಡುತ್ತಾಳೆ. ವ್ಯವಸಾಯವೇ. ಆಗಾಗ ಮಾರ್ಕೆಟ್ ನಲ್ಲಿ ನನ್ನ ಮೇಲೆ ಸ್ಪರ್ಧೆಗೆ ತರಕಾರಿ ಮಾರುತ್ತಾಳೆ. ಒಮ್ಮೆ ಹೀಗೇ ನಾನು ಭತ್ತ ಮಾರಿದಾಗ ಆರು ಸಾವಿರ ಬಂದಿತೆಂದು ಹೇಳಿದೆ ಅಷ್ಟೆ.. ಕೊಡುವವರೆಗೂ ಬಿಟ್ಟಿದ್ದರೆ ಸರಿ,” ಅಳುತ್ತಾ ಹೇಳಿದಳು.

ನನಗೂ ನೋವಾಯಿತು. “ಊಂ.. ಕೊಡುವವರಿದ್ದರೆ ಹಾಗೇ ಕೇಳುತ್ತಾರೆ. ಅಕ್ಕನೂ ಇಲ್ಲ, ತಂಗೀನೂ ಇಲ್ಲ. ನಿನ್ನ ಸಂಸಾರ ನಿನ್ನದು. ಕೊಡುವುದಿಲ್ಲ ಎಂದು ಹೇಳಬೇಕು,” ಎಂದೆ.

“ಅಷ್ಟಕ್ಕೂ, ಮೊದಲು ಹೀಗಿರಲಿಲ್ಲ ಅಣ್ಣಾ ಅವಳು. ಒಳ್ಳೆಯ ಗುಣವಿತ್ತು. ನಮಗೆ ಅಪ್ಪ ಇಲ್ಲ, ಅಮ್ಮನೂ ಇಲ್ಲ. ನಾವಿಬ್ಬರೇ. ಅವಳಿಗೆ ನಾನು, ನನಗೆ ಅವಳು. ನನ್ನ ಮದುವೆ ಕೂಡ ಅವಳೇ ಮುಂದೆ ನಿಂತು ಮಾಡಿದಳು. ನಾನೆಂದರೆ ಅವಳಿಗೆ ಪ್ರಾಣ, ಈಗ ಸಾಲಗಾರಳಾಗಿದ್ದಾಳೆ ಹೊರತು ಹಿಂದೆ ತನ್ನದೇ ಜಮೀನಿನಲ್ಲಿ ಸಾಕಷ್ಟು ಬೇಸಾಯ ಮಾಡಿದ್ದಾಳೆ,” ಹೇಳಿದಳು.

“ಏನಾದರೂ ಒಂದು ಕಾರಣಕ್ಕೆ ಕೂಡಿಟ್ಟ ಹಣ ಖರ್ಚಾಗುತ್ತಿದೆ. ಹಾಗಾಗಬಾರದೆಂದು ಈ ಬಾರಿ ಸೇಟು ಕಡೆಗೇ ಹಣ ಬಿಟ್ಟಿದ್ದೆ. ಅವನು ಇವತ್ತು ಬಾ, ನಾಳೆ ಬಾ ಎಂದು ಸತಾಯಿಸಿ ಸತಾಯಿಸಿ ಇವತ್ತು ಕೊಟ್ಟಿದ್ದಾನೆ. ನೀನು ಆಗುವುದಿಲ್ಲವೆಂದರೆ, ಹಣ ಕರೆಂಟು ಮೋಟರಿಗೇ ಖರ್ಚಾಗಿಬಿಡುತ್ತದೆ. ಇನ್ನು ನನ್ನ ಜೀವನದಲ್ಲಿ ಇಷ್ಟು ಒಳ್ಳೆ ಸಮಯ ಬರುವುದಿಲ್ಲ,” ನೋವಿನಿಂದ ಹೇಳಿದಳು.

ಜಲ್ಲಿಕಲ್ಲುಗಳನ್ನು ತಪ್ಪಿಸಿ, ತಪ್ಪಿಸಿ ಗಾಡಿ ಓಡಿಸುತ್ತಾ, “ಪರವಾಗಿಲ್ಲವೆ, ಭೂಮಿ ಜಾಸ್ತೀನೇ ಇದ್ದಹಾಗಿದೆ. ಮತ್ತೆ ಅದೇನು ರೋಗ. ಬೇರೆಯವರ ಸೊತ್ತಿಗೆ ಆಸೆಪಡುವುದು,” ಕೇಳಿದೆ.

ಗಾಡಿಯ ಓಲಾಟಕ್ಕೆ ಅತ್ತಿತ್ತ ಸರಿಪಡಿಸಿಕೊಂಡು ಕೂರುತ್ತ, “ಅವಳಿಗೆ ಇರುವುದಕ್ಕೆ ಮಣ್ಣು ಬೀಳಾ, ಈಗೇನಿದೆ ಎಲ್ಲ ಚಿಪ್ಪೇ. ನಮ್ಮ ಬಾವ ಪಟೇಲನ ಬಳಿ ಜೀತಕ್ಕಿದ್ದರು. ಸಾಲ ಸೋಲ ಮಾಡಿ ಅವರದೇ ನಾಲ್ಕು ಎಕರೆ ಕೊಂಡುಕೊಂಡರು. ಬೆಳೆ ಚೆನ್ನಾಗಿಯೇ ಬಂದಿತು. ನಾಲ್ಕೈದು ವರ್ಷಗಳಲ್ಲಿಯೇ ಸಾಲ ಸೋಲ ತೀರಿ ಕೈಲಿ ಸ್ವಲ್ಪ ಹಣ ಉಳಿಯಿತು. ಕೈಯಲ್ಲಿ ನಾಲ್ಕು ಕಾಸು ಓಡಾಡುವವೇಳೆಗೆ ಹೆಣ್ಣು ಎಲ್ಲೂ ನಿಲ್ಲಲಿಲ್ಲ. ಇದ್ದ ಹಣದ ಜೊತೆಗೆ ಮತ್ತೆ ಸ್ವಲ್ಪ ಸಾಲ ಮಾಡಿ ಮನೆ ಕಟ್ಟಿದಳು. ಅದೃಷ್ಟ ಯಾವಾಗಲೂ ಜೊತೆಗಿರುತ್ತದಾ, ಬರ ಬಂದಿತು. ಬಿಸಿಲಿಗೆ ಬಾವಿ ಒಣಗಿಹೋಯಿತು. ಮೂರು ಬೋರ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ”.

ನಾನು ಮಾತಿನ ವರಸೆಗೆ “ಬೆಳೆ ಬೆಳೆಯಬೇಕೇ ಹೊರತು ಬೇಸಾಯಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದಿದೆ,” ಎಂದೆ.

ನಿಜ ಅಣ್ಣಾ, “ನಾಲ್ಕನೇ ಬೋರ್ ಮಾತ್ರ ಪಾತಾಳಗಂಗೆಯಾದರೂ, ನಾಲ್ಕು ಎಕರೆ ಸಾಗುವಳಿಯಾಯಿತು. ಬೇಸಿಗೆ, ಮಳೆಗಾಲ ಎರಡು ಬೆಳೆ ಬಂದಿತು. ಬೋರ್ ವೆಲ್ ಬಳಿ ವಿವಿಧ ಬೆಳೆ ಬೆಳೆದರು. ಎರಡು ಮೂರು ವರ್ಷಗಳಲ್ಲಿ ಲಕ್ಷ್ಮಿ ತಾಂಡವವಾಡಿದಳು. ಆಗ ನನ್ನಕ್ಕ ನಾಲ್ಕು ತೊಲ ಚಿನ್ನ ಕೊಂಡಳು. ಅವರು ಯಾವಾಗಿನಂತೆ ಕುದುರಿಕೊಂಡರು.” ಒಂದೇ ಸಮನೆ ಮಾತನಾಡುತ್ತ ಎದೆ ಭಾರ ಹೊರಹಾಕುತ್ತಿರುವಂತೆ ನೋವನ್ನು ಹೇಳುತ್ತಿದ್ದಾಳೆ.

ನನ್ನ ಮೊಬೈಲ್ ರಿಂಗ್ ಆಯಿತು. ನೋಡಿದರೆ ವೀರೇಶಂ ನಿಂದಲೇ, ಭಯವಾಯಿತು. ಫೋನ್ ತೆಗೆಯಲಿಲ್ಲ. ‘ಪಾಪ.. ಎಷ್ಟು ಆತಂಕವಾಗಿರುತ್ತದೋ. ಅವನಿಗೆ ಬಟ್ಟೆ ಕೊಟ್ಟಾದರೂ ಬರಲಿಲ್ಲ. ರಸ್ತೆ ಹೀಗಿದೆಯೆಂದು ಗೊತ್ತಿದ್ದರೆ ಬರುತ್ತಲೇ ಇರಲಿಲ್ಲ,’ ಎಂದೆ.

ಕೂಡಲೇ, “ಅಯ್ಯೋ ಅಣ್ಣಾ, ಈ ಮೊದಲಿದ್ದ ಕಲ್ಲು ರಸ್ತೆ ಹೋಗಿ ಟಾರ್ ರಸ್ತೆಗಳಾಗುವ ಹೊತ್ತಿಗೆ ಟ್ರ್ಯಾಕ್ಟರ್ ಗಳ ಓಡಾಟ ಹೆಚ್ಚಾಗಿ ಮನೆಯಲ್ಲಿಟ್ಟಿದ್ದ ಬೀಜಗಳು ಮೊಳಕೆ ಒಡೆಯುತ್ತಿಲ್ಲ. ಸಾವಯವ ಗೊಬ್ಬರ ಕೆಲಸಕ್ಕೆ ಬರುತ್ತಿಲ್ಲ. ಬೆಳೆಗಳಿಗೆ ಇಲ್ಲಸಲ್ಲದ ರೋಗಗಳು ಅಂಟಿಕೊಂಡವು. ಕೈತುಂಬ ಹಣವಿದ್ದರೆ ಮಾತ್ರ ಕೃಷಿ ಎಂಬಂತಾಯಿತು. ನನ್ನಕ್ಕ ಸೇಟು ಹತ್ತಿರ ಖಾತೆ ತೆರೆದಳು. ಗೊಬ್ಬರ, ಬೀಜ, ಕ್ರಿಮಿನಾಶಕಗಳನ್ನು ಲೆಕ್ಕವಿಲ್ಲದಷ್ಟು ಕೊಂಡುಕೊಂಡಳು. ಬೆಳೆದ ಬೆಳೆ ಅವನಿಗೇ ಕೊಟ್ಟಳು. ಬಾಕಿ ಬೆಳೆಯಿತು, ಅವನೂ ಬೆಳೆದ. ಇವಳು ಮಾತ್ರ ನೆಲಕಚ್ಚಿದಳು,” ಹೇಳುತ್ತಲೇ ಇದ್ದಾಳೆ.

“ಎಲ್ಲಿ ತಗಲಿಕೊಂಡಳಪ್ಪಾ ದೇವರೇ ಇವಳು, ಮನೆ ಸೇರುವವರೆಗೂ ಹೀಗೆ ಅರಳು ಹುರಿದಂತೆ ಪಟಪಟ ಎಂದು ಮಾತು ಸಿಡಿಸುತ್ತೀಯಾ ಹೇಗೆ..?” ಕೇಳಿಸಿಕೊಳ್ಳಲಿ ಎಂದೇ ಜೋರಾಗಿ ಹೇಳಿದೆ.

ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು. ಸ್ವಂತ ಭೂಮಿಯಲ್ಲೇ ಬೇರೆಯವಳಾಗಿಬಿಟ್ಟಳು. ಅಗೋ.. ಆಗಿನಿಂದ ಅವಳು ಮೊದಲಿನ ಅಕ್ಕನಂತಿಲ್ಲ.”

ನನಗೆ ಕೋಪ ತಡೆಯಲಾಗಲಿಲ್ಲ. “ನೀನು ಬಡಬಡ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾನು ಕೂಡ ಮೊದಲಿನ ಮನುಷ್ಯನಲ್ಲ?” ಎಂದೆನು ಜೋರಾಗಿ.
ನನ್ನ ಮಾತು ಕೇಳಿಸಿಕೊಂಡರೆ ಅಲ್ಲವಾ, ನಿಲ್ಲಿಸದೆ ಮಾತನಾಡುತ್ತಲೇ ಇದ್ದಾಳೆ.

“.. ಅವಳ ಬಾಯಿಗೆ ಹೆದರಿ ಯಾರೂ ಕೇಳುತ್ತಿಲ್ಲ ಅಣ್ಣಾ.. ಸ್ವಲ್ಪ ನೀನಾದರೂ ಜೋರಾಗಿ ಕೇಳಬೇಕು.. ಕೂಳಿಗೆ ಗತಿಯಿಲ್ಲದಿದ್ದರೂ ದೊಡ್ಡ ರೋಷಗಾರ್ತಿ. ಯಾರಿಂದಲೂ ಮಾತು ಬರಬಾರದೆಂಬ ಹಠ. ಎರಡು ವರ್ಷದಲ್ಲಿ ದೊಡ್ಡ ಮಗಳ ಮಗುವಿನ ನಾಮಕರಣ, ಹೋದ ವರ್ಷ ಚಿಕ್ಕ ಮಗಳು ಮೈನೆರೆದಾಗ ಆರತಿ ಎರಡನ್ನೂ ಯಾವ ಕೊರತೆಯಿಲ್ಲದಂತೆ ಊರೆಲ್ಲರನ್ನೂ ಕರೆದು ಅದ್ಧೂರಿಯಾಗಿ ಮಾಡಿದಳು. ಮತ್ತೆ ಈಗ ನನ್ನನ್ನು ಹೀಗೆ ಮಾಡಿದಳೆಂದು ಗೊತ್ತಾದರೆ ನಾಲ್ಕಾರು ಜನರು ನಗುವುದಿಲ್ಲವಾ.” ಎದುರಿಗೆ ಅವಳ ಅಕ್ಕನ ಜೊತೆ ಜಗಳ ಮಾಡುತ್ತಿರುವಂತೆ ಹೇಳುತ್ತಿದ್ದಾಳೆ.

ನನಗೆ ತಾಳ್ಮೆ ಸತ್ತುಹೋಯಿತು. ಸುಮ್ಮನಿದ್ದರೆ ಲಾಭವಿಲ್ಲವೆಂದುಕೊಂಡೆ. ಕೂಡಲೇ ಗಾಡಿ ನಿಲ್ಲಿಸಿ ಹಿಂದೆ ತಿರುಗಿ ದುರುಗುಟ್ಟಿಕೊಂಡು ನೋಡಿದೆ. ಆಕೆ ಭಯದಿಂದ ನನ್ನ ಕಡೆ ನೋಡಿದಳು.

ಗಟ್ಟಿಯಾಗಿ, “ಮೊದಲು ನೀನು ಗಾಡಿಯಿಂದ ಇಳಿ. ಬಾಯಿಮುಚ್ಚದೆ ಒಂದೇ ಸಮನೆ ಬಡಿದುಕೊಳ್ಳುತ್ತಿದ್ದೀಯ,” ಎಂದೆ.

ಒಮ್ಮೆಗೇ ಬೆದರಿಹೋದಳು, ಪಟಪಟನೆ ಕಣ್ಣೀರು ಸುರಿಯಿತು. ಗಾಡಿ ಇಳಿಯದೆ ಒರೆಸಿಕೊಳ್ಳುತ್ತ, “ಸರಿ ಅಣ್ಣಾ.. ತಪ್ಪಾಯಿತು. ಮಾತನಾಡುವುದಿಲ್ಲ, ಹೋಗೋಣ ನಡಿ..” ಎಂದಳು ದೀನವಾಗಿ ಕೇಳಿಕೊಳ್ಳುತ್ತ.

ಚಂದ್ರಂಪೇಟೆ ಬರುವವರೆಗೂ ಅವಳು ತುಟಿಕ್ ಪಿಟಿಕ್ ಎನ್ನಲಿಲ್ಲ. ನನಗೆ ಮನಸ್ಸು ನಿರಾಳವಾಯಿತು. ‘ಅಬ್ಬಾ… ಮಳೆ ಬಂದು ನಿಂತಹಾಗಾಯಿತು, ಈ ಕೆಲಸ ಮೊದಲೇ ಮಾಡದೆಹೋದೆ. ಹಣ ಕೊಡದೆ ಸತಾಯಿಸುತ್ತಿದ್ದಾಳೆ. ನನ್ನ ಪಾಡಿಗೆ ಎಲ್ಲಾದರೂ ದಬ್ಬಾಕಿ ಹೋಗುತ್ತಿದ್ದೆ,’ ಎಂದುಕೊಳ್ಳುತ್ತ ಚಂದ್ರಂಪೇಟೆ ಆಂಜನೇಯನ ಗುಡಿಯ ಬಳಿ ಗಾಡಿ ನಿಲ್ಲಿಸಿದೆ.

ಆಕೆ ಇಳಿದಳು. ಮುಂದೆ ನಡೆಯಹೋದಾಗ, “ಏನಮ್ಮ, ದುಡ್ಡು ಕೊಡಲ್ಲವಾ.. ಸುಮ್ಮನೆ ಹೋಗುತ್ತಿದ್ದೀಯ,” ವ್ಯಂಗ್ಯವಾಗಿ ಹೇಳಿದೆ.
ಆಗಿನಿಂದಲೂ ಅಳುತ್ತಲೇ ಇರುವಂತಿದೆ. ನೀರು ತುಂಬಿಕೊಂಡಿತ್ತು. ಕಣ್ಣು ಒರೆಸಿಕೊಂಡು ನನ್ನತ್ತ ಬೇಡಿಕೊಳ್ಳುವಂತೆ ನೋಡಿ, “ಮನೆವರೆಗೂ ಬಾ ಅಣ್ಣಾ.. ಈ ಗುಡಿಯ ಹಿಂದೆಯೇ ಮನೆ,” ಎಂದಳು.

ನನಗೆ ಅನುಮಾನ ಬಂದಿತು. ‘ಇಬ್ಬರ ಜಗಳದಲ್ಲಿ ನನಗೆ ನಾಮ ಹಾಕುತ್ತಾರಾ ಹೇಗೆ?’ ನಾಳೆ ನಾಳಿದ್ದು ಅಂದರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದುಕೊಳ್ಳುತ್ತ, ಯಾವುದಕ್ಕೂ ಇರಲಿ ಎಂದು ಆಕೆಯ ಕೈಯಿಂದ ಬಟ್ಟೆಯ ಕವರನ್ನು ಕಿತ್ತುಕೊಂಡು ಗಾಡಿಯಲ್ಲಿಟ್ಟೆ. ಅದನ್ನು ಊಹಿಸಿದಂತಿರಲಿಲ್ಲ. ಪೆಟ್ಟು ತಿಂದವಳಂತೆ ನನ್ನ ಕಡೆ ಪೆಚ್ಚಾಗಿ ನೋಡಿದಳು.

ಮೆತ್ತಗೆ ಮಾತನಾಡಿದರೆ ಏನಾದರೂ ಕತೆ ಹೇಳುತ್ತಾಳೆಂದು ಕೋಪದಿಂದ, “ಊಂ.. ರೋಷಕ್ಕೇನೂ ಕಡಿಮೆಯಿಲ್ಲ. ಅಯ್ಯೋ ಪಾಪ ಅಂದರೆ ಆರು ವರ್ಷ ಆಯಸ್ಸು ಕಮ್ಮಿ ಎನ್ನುವುದು ಇದಕ್ಕೇ. ಅಲ್ಲಿಗೆ ಹೋದಮೇಲೆ ಅಕ್ಕತಂಗಿಯರಿಬ್ಬರು ಡ್ರಾಮಾಗಳಾಡುವಿರಾ ಹೇಗೆ. ನಿಮ್ಮಂತಹವರನ್ನು ತುಂಬಾ ಜನರನ್ನು ನೋಡಿದ್ದೀನಿ ಹತ್ತು,” ಎಂದು ಕಿರುಚಿದೆ.

ಗಾಡಿ ಸ್ಟಾರ್ಟ್ ಆಗುತ್ತಲೇ ಮತ್ತೆ ವೀರೇಶಂ ನಿಂದ ಫೋನ್. ನೋಡಿದರೆ ಹನ್ನೆರಡು ಮಿಸ್ಡ್ ಕಾಲ್ಸ್. ಮೈಯೆಲ್ಲ ಬೆವರಿತು. ‘ಆ ಮದುವೆಯಲ್ಲ. ಇವತ್ತು ನನಗೆ ಮದುವೆಯಾಗುತ್ತದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ..’ ಎಂದುಕೊಳ್ಳುತ್ತ ಗಾಡಿ ತಿರುಗಿಸಿದೆ.

ಸಂದಿಯಿಂದ ನೇರವಾಗಿ ಹೋದರೆ ಎದುರುಗಡೆಯೇ ಮನೆ. ಗಾಡಿ ನಿಲ್ಲಿಸಿ ಇಳಿದೆ. ಮನೆಯ ಮುಂದೆ ಷಾಮಿಯಾನ ಕಾಣಿಸಿತು.

ನಮ್ಮನ್ನು ನೋಡುತ್ತಿದ್ದಂತೆಯೇ ಯಾರೋ, “ಆಂ.. ಇನ್ನೇನು. ತಾಯಿ ಮನೆಯವರು ಬಂದರು. ಹೊಸ ಬಟ್ಟೆ ಕೂಡ ತಂದಿದ್ದಾರೆ. ಬೇಗಬೇಗನೆ ಮುಗಿಸಿ..” ಎಂದರು.

ಒಳಗಿನಿಂದ ಸಣ್ಣದಾಗಿ ಅಳು. ನನಗೆ ಬಾಯಿ ಒಣಗಿತು. ತಲೆ ಧಿಮ್ಮೆನ್ನತೊಡಗಿತು. ಏನಾಯಿತೆಂದು ಅರ್ಥವಾಗಲಿಲ್ಲ. ಹುಚ್ಚು ಹಿಡಿದಂತೆ ಸುತ್ತಲೂ ನೋಡಿದೆ.
“ಬೇಸಾಯದ ಮನೆ ಹಾಳಾಗ. ಆರು ತಿಂಗಳು ಮಾಡಿದರೂ ಏನೂ ಉಳಿಯಲಿಲ್ಲ. ಪಾಪ ಮಗುವಿಗೆ ಕಷ್ಟಗಳೇ ಆಗಿಹೋಯಿತು. ಮಳೆ ಮನೆ ಹಾಳಾಗ. ನಿನ್ನೆ ಮಳೆ ಬೀಳದಿದ್ದರೆ ಇಷ್ಟು ಕೆಲಸ ಆಗುತ್ತಿರಲಿಲ್ಲ. ಹತ್ತಿ ಇಟ್ಟು, ಇಟ್ಟೂ ಹತ್ತಿಯ ಔಷಧವೇ ಕುಡಿದು ಸತ್ತಳು. ನಮ್ಮಗತಿ ಎಲ್ಲಿಗೆ ತೇಲುತ್ತದೆಯೋ..” ಯಾರೋ ದೊಡ್ಡ ವ್ಯಕ್ತಿ ಬಾಧೆ ಪಡುತ್ತಿದ್ದನು.

“ನಿನ್ನೆಯ ಮಳೆಯೊಂದೇನಾ ಅಯ್ಯಾ… ಇಪ್ಪತ್ತು ವರ್ಷದಿಂದ ಎಷ್ಟು ಹೊಡೆತಗಳು. ಒಂದಾ ಎರಡಾ. ಮನುಷ್ಯ ಎಷ್ಟೂಂತ ಸಹಿಸುತ್ತಾನೆ, ಹೀಗೆಯೇ ಬಾಯಿ ತೆರೆಯುತ್ತಾನೆ.” ಇನ್ಯಾರೋ ನೋವಿನಿಂದ ಹೇಳಿದರು.

“ಆಂ.. ಏಕಾದಶಿ ಮರಣವೆಂದು ಬಾವಿಗೆ ಬೀಳ್ತೀವಾ.. ನಾವಿದ್ದು ಸಾಧಿಸಬೇಕು. ಯಾವಾಗಲೂ ಹೀಗೇ ಇರುತ್ತದಾ. ಕತ್ತಲು ಸ್ವಲ್ಪ ದಿನ, ಬೆಳಕು ಸ್ವಲ್ಪ ದಿನ. ಸಹಿಸಿಕೊಳ್ಳಬೇಕು.” ಇನ್ನಾರೋ.

“ನನ್ನ ಬಾಯಿಗೆ ಮಣ್ಣು ಹಾಕ, ನಿನ್ನೆ ಮಧ್ಯಾಹ್ನ ಆತುರಾತುರವಾಗಿ ನಮ್ಮ ಮನೆಗೆ ಬಂದಿದ್ದಳು ಮಗು. ನಾನೇ ಕೆಲಸದಲ್ಲಿದ್ದವಳು ಕೂರಿಸಿ ಸಮಾಧಾನ ಮಾಡಲಿಲ್ಲ. ನೋವು ಹೇಳಿಕೊಂಡಿದ್ದರಾದರೂ ಭಾರ ಇಳಿದು ಬದುಕುತ್ತಿದ್ದಳೇನೋ,” ಅಳುತ್ತಾ ಹೇಳಿದಳು ಒಬ್ಬ ಮುದುಕಿ.

ಜ್ಯೋತಿ ನನ್ನ ಮುಂದೆ ಬಂದಳು. ಅಳುವುದಕ್ಕೆ ಕೂಡ ಇಲ್ಲದಂತೆ ಕಣ್ಣೀರು ಬತ್ತಿ, ಅಸಹಾಯಕಳಾಗಿ ಮುಖ ನೋಡಿದಳು.

“ಅಣ್ಣಾ.. ಹೇಳಿಕೊಳ್ಳುವ ದಿಕ್ಕಿಲ್ಲದೆ ನಿನ್ನೆಯಿಂದ ಒದ್ದಾಡುತ್ತಿದ್ದೇನೆ. ಒಡಹುಟ್ಟಿದವನಂತೆ ಸಮಯಕ್ಕೆ ಬಂದೆ. ಅವಳಲ್ಲದೆ ಈ ಲೋಕದಲ್ಲಿ ನನಗ್ಯಾರೂ ಇಲ್ಲ ಅಣ್ಣಾ. ಹೀಗೆ ನನ್ನನ್ನು ಒಂಟಿ ಮಾಡಿ ಹೋಗುತ್ತಾಳಾ. ಕೇಳಣ್ಣಾ, ಅವಳನ್ನು ಕೇಳು,” ಜ್ಯೋತಿಯ ಅದುಮಿಟ್ಟ ದುಃಖವೆಲ್ಲ ಒಮ್ಮೆಗೇ ಕಟ್ಟೆಯೊಡೆಯಿತು.

ಏಕೋ ನನ್ನ ತಂಗಿ ನೆನಪಿಗೆ ಬಂದಳು. ನನಗೆ ಕಾಲ ಕೆಳಗಿನ ಭೂಮಿ ಅಲುಗಾಡುತ್ತಿದೆ.

**********************

(ಸದ್ದುಲ ಬದುಕಮ್ಮ ಮುಖ್ಯವಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಆಚರಣೆಯಲ್ಲಿರುವ ಹಬ್ಬ. ಮಹಾಗೌರಿ ದೇವಿಯು ಬತುಕಮ್ಮನಾಗಿ ಪೂಜಿಸಲ್ಪಡುವ ಈ ಹಬ್ಬ ವಿವಿಧ ಹೂಗಳಿಂದ ಪೂಜಾ ಗೋಪುರವನ್ನು ಅಲಂಕರಿಸಿ ದೇವಿಯನ್ನು ಪೂಜಿಸುವ ವಿಶೇಷ ಹಬ್ಬವಾಗಿದೆ.)

 

ಪೆದ್ದಿಂಟಿ ಅಶೋಕ್ ಕುಮಾರ್

ವೃತ್ತಿಯಲ್ಲಿ ಗಣಿತ ಶಿಕ್ಷಕರಾಗಿರುವ ಪೆದ್ದಿಂಟಿ ಅಶೋಕ್ ಕುಮಾರ್ ತೆಲುಗು ಕಥಾ ಸಾಹಿತ್ಯದಲ್ಲಿ ಚಿರಪರಿಚಿತರು. ಇವರು ಇನ್ನೂರು ಕಥೆಗಳು, ಆರು ಕಾದಂಬರಿಗಳು, ನಾಲ್ಕು ನಾಟಕಗಳು, ನೂರಕ್ಕೂ ಹೆಚ್ಚು ಸಾಮಾಜಿಕ ಕಳಕಳಿಯ ಕವನಗಳನ್ನು ಬರೆದಿದ್ದಾರೆ. ಇವರು ಬರೆದಿರುವ ‘ಜಿಗಿರಿ’ ಕಾದಂಬರಿ ಒಂಭತ್ತು ಭಾಷೆಗಳಿಗೆ ಅನುವಾದಗೊಂಡಿದೆ. ಊಟಬಾಯಿ, ಮಾಯಿಮುಂತ, ವಲಸ ಬದುಕುಲು, ಮಾಊರಿ ಬಾಗೋತಂ, ಭೂಮುಡು, ಜುಮ್ಮೇಕಿ ರಾತ್ ಮೇ, ಪೊರುಗಡ್ಡ ಕಥಾಸಂಕಲನಗಳು ಪ್ರಕಟವಾಗಿವೆ. ಇವರ ಅನೇಕ ಕಥೆಗಳು ಹಿಂದಿ, ಮರಾಥಿ, ಇಂಗ್ಲಿಷಿಗೆ ಅನುವಾದಗೊಂಡಿವೆ.. ಇವರು ಸಿನಿಮಾ ಗೀತ ರಚನೆಕಾರರು, ಸಂಭಾಷಣೆಕಾರರಾಗಿಯೂ ಖ್ಯಾತಿ ಪಡೆದಿದ್ದಾರೆ. ಇವರು ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ನಂದಿ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.